ಭಾನುವಾರ, ಏಪ್ರಿಲ್ 20, 2014

ಬ್ರಹ್ಮೇಶ್ವರ ದೇವಾಲಯ - ಸವಡಿ


ಶಾಸನಗಳಲ್ಲಿ ಸವಡಿಯನ್ನು ’ಸಯ್ಯಡಿ’ ಹಾಗೂ ’ಸೈವಿಡಿ’ ಎಂದು ಕರೆಯಲಾಗಿದೆ. ಪಂಚತಂತ್ರದ ಲೇಖಕ ’ದುರ್ಗಸಿಂಹ’ ಇದೇ ಊರಿನವನಾಗಿದ್ದನು. ಸವಡಿಯಲ್ಲಿ ಎರಡು ಪುರಾತನ ದೇಗುಲಗಳಿವೆ - ಬ್ರಹ್ಮೇಶ್ವರ ಮತ್ತು ನಾರಾಯಣ.


೧೧ನೇ ಶತಮಾನದಲ್ಲಿ ರಾಷ್ಟ್ರಕೂಟ ಅರಸರಿಂದ ನಿರ್ಮಿತ ಈ ದೇವಾಲಯವನ್ನು ೧೫ನೇ ಶತಮಾನದಲ್ಲಿ ವಿಜಯನಗರ ಅರಸರು ನವೀಕರಣಗೊಳಿಸಿದ್ದಾರೆ ಎಂದು ಶಾಸನಗಳಿಂದ ತಿಳಿದುಬಂದಿದೆ. ಇಂದು ಬ್ರಹ್ಮೇಶ್ವರ ಎಂದು ಕರೆಯಲ್ಪಡುವ ಈ ದೇವಾಲಯನ್ನು ಅಂದು ’ತ್ರೈಪುರುಷ ದೇವಾಲಯ’ವೆಂದು ಕರೆಯಲಾಗುತ್ತಿತ್ತು. ದೇವಾಲಯದ ಮುಂಭಾಗ ಎಂದೋ ಬಿದ್ದುಹೋಗಿದೆ. ದೇವಾಲಯದ ಒಳಗಡೆ ಎಲ್ಲೆಡೆ ಸುಣ್ಣ ಬಳಿಯಲಾಗಿದೆ. ಸಭಾಮಂಟಪದಲ್ಲಿ ೬೦ಕ್ಕೂ ಮಿಕ್ಕಿ ಕಂಬಗಳಿದ್ದು ಇವುಗಳಿಗೂ ಸುಣ್ಣ ಬಳಿದು ವಿರೂಪಗೊಳಿಸಲಾಗಿದೆ. ಸಭಾಮಂಟಪದಲ್ಲಿ ಸಪ್ತಮಾತೃಕೆಯರು, ಗಣೇಶ ಮತ್ತು ಜೈನ ತೀರ್ಥಂಕರರೊಬ್ಬರ ಮೂರ್ತಿಗಳನ್ನು ಕಾಣಬಹುದು.


ಸಭಾಮಂಟಪದ ನಡುವೆ ೧೨ ಕಂಬಗಳ ಆಯತಾಕಾರದ ನವರಂಗವಿದೆ. ನಂದಿ ಇಲ್ಲೇ ಆಸೀನನಾಗಿದ್ದಾನೆ. ನವರಂಗದ ೨ ಕಂಬಗಳಲ್ಲಿ ಶಾಸನಗಳಿದ್ದು, ಅವಕ್ಕೂ ಸುಣ್ಣ ಬಳಿಯಲಾಗಿದೆ! ಅಂತರಾಳವು ಅಲಂಕಾರರಹಿತ ತ್ರಿಶಾಖ ದ್ವಾರವನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಗರ್ಭಗುಡಿಯಲ್ಲಿರುವ ತ್ರಿಮೂರ್ತಿಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಒಂದೇ ಪೀಠದ ಮೇಲೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ(ಶಿವಲಿಂಗ)ನ್ನು ಇರಿಸಲಾಗಿದೆ. ಹಂಸಪೀಠದ ಮೇಲೆ ಬ್ರಹ್ಮ, ನಂದಿಪೀಠದ ಮೇಲೆ ಶಿವಲಿಂಗ ಮತ್ತು ಗರುಡಪೀಠದ ಮೇಲೆ ವಿಷ್ಣುವಿರುವಂತೆ ತೋರಿಸಲೋಸುಗ ಹಂಸ, ನಂದಿ ಮತ್ತು ಗರುಡರನ್ನು ಕ್ರಮವಾಗಿ ಬ್ರಹ್ಮ, ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿಗಳ ಕೆಳಗೆ ಕೆತ್ತಲಾಗಿದೆ.


ಈ ಹಳ್ಳಿಗಳಲ್ಲಿ ವಿದ್ಯುತ್ತಿನದ್ದೇ ದೊಡ್ಡ ಸಮಸ್ಯೆ. ಎಲ್ಲಿ ಹೋದರೂ ’ಕರೆಂಟ್ ಇಲ್ಲದೇ ೨ ದಿನ ಆಯ್ತು, ಒಂದು ವಾರ ಆಯ್ತು...’ ಎಂಬ ಮಾತುಗಳು. ಈ ಊರಿನಲ್ಲೂ ಅದೇ ಸಮಸ್ಯೆ. ಕತ್ತಲಲ್ಲಿ ಸರಿಯಾದ ಚಿತ್ರ ತೆಗೆಯಬೇಕಾದರೆ ಸುಸ್ತಾಯಿತು. ಆದರೂ ತೆಗೆದ ಚಿತ್ರವೆಲ್ಲಾ ಅಂಕುಡೊಂಕು ಮತ್ತು ಅಷ್ಟಕ್ಕಷ್ಟೆ!


ಸುಂದರವಾಗಿ ಕೆತ್ತಲ್ಪಟ್ಟಿರುವ ಚರ್ತುರ್ಮುಖ ಬ್ರಹ್ಮನ ಮೂರ್ತಿಯು ಮಕರತೋರಣ ಮತ್ತು ಪ್ರಭಾವಳಿಯನ್ನು ಹೊಂದಿದೆ. ಬ್ರಹ್ಮನ ಇಕ್ಕೆಲಗಳಲ್ಲಿ ಸಾವಿತ್ರಿ ಮತ್ತು ಸರಸ್ವತಿಯರಿದ್ದಾರೆ. ವಿಷ್ಣುವಿನ ಮೂರ್ತಿಯೂ ಆಕರ್ಷಕವಾಗಿದ್ದು, ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರಗಳನ್ನು ಮಾತ್ರ ತೋರಿಸಲಾಗಿದೆ. ಉಳಿದೆರಡು ಕೈಗಳು ಖಾಲಿಯಿವೆ. ವಿಷ್ಣುವಿನ ಮೂರ್ತಿಯೂ ಮಕರತೋರಣ ಮತ್ತು ಪ್ರಭಾವಳಿಯನ್ನು ಹೊಂದಿದ್ದು ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ.

 

ದೇವಾಲಯದ ಹೊರಗೋಡೆಯಲ್ಲಿ ಹಲವಾರು ಸಣ್ಣ ಭಿತ್ತಿಚಿತ್ರಗಳಿವೆ. ತಳಭಾಗದಲ್ಲಿ ಗೋಪುರಗಳನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಭಿತ್ತಿಗಳಿವೆ. ದೇವಾಲಯದ ಹೊರಗೋಡೆಯ ಅಗಾಧತೆಗೆ ಈ ಭಿತ್ತಿಗಳು ಬಹಳ ಸಣ್ಣದಾಗಿ ಗೋಚರಿಸುತ್ತವೆ. ದೇವಾಲಯದ ಶಿಖರ ೧೯ನೇ ಶತಮಾನದ ಆರಂಭದ ಸಮಯದಲ್ಲಿ ಬಿದ್ದುಹೋಗಿದೆ.


ಭಿತ್ತಿಚಿತ್ರಗಳು ಸಣ್ಣದಾಗಿದ್ದರೂ ನೋಡಲು ಸುಂದರವಾಗಿವೆ. ನಿಧಾನವಾಗಿ ನಶಿಸುತ್ತಿರುವ ಈ ಕೆತ್ತನೆಗಳು ಪೌರಾಣಿಕ ಕಥಗಳನ್ನು ಬಿಂಬಿಸುತ್ತಿವೆ ಎಂದು ನನ್ನ ಊಹೆ.


ದೇವಾಲಯದ ಹೊರಗೋಡೆ ಇನ್ನೂ ಸುಸ್ಥಿತಿಯಲ್ಲಿದೆ. ಆದರೆ ಈ ದೇವಾಲಯವನ್ನು ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ಮುಂಭಾಗದಲ್ಲಿ ಮತ್ತು ಒಂದು ಪಾರ್ಶ್ವದಲ್ಲಿ ಅತಿ ಸಮೀಪದಿಂದ ರಸ್ತೆ ಹಾದುಹೋಗಿದೆ. ಹಿಂಭಾಗದಲ್ಲಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಮನೆಗಳಿವೆ. ನಾನು ಚಿತ್ರಗಳನ್ನು ತೆಗೆಯಬೇಕಾದರೆ ’ಸರ, ತಾವು ಸರ್ವೇ ಆಫೀಸಿನಿಂದ ಬಂದ್ರೇನು?’ ಎಂಬ ಪ್ರಶ್ನೆ.


ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದೇವಾಲಯವನ್ನು ಉಳಿಸಿ, ಮೂಲರೂಪಕ್ಕೆ ತರಲು ಊರವರ ಸಹಕಾರ ಕೋರಿದ್ದಾರೆ. ಸರ್ವೇ ಆಫೀಸಿನ ಪ್ರಕಾರ ಹಳ್ಳಿಗರು ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಳ್ಳಿಗರ ಪ್ರಕಾರ ಯಾವುದೇ ಒತ್ತುವರಿ ನಡೆದಿಲ್ಲ. ’ಜಾಗ ನಮ್ಮದೇ’ ಎಂದು ಸಾಬೀತುಪಡಿಸಲು ಕಾಗದಪತ್ರಗಳೆಲ್ಲಾ ಇವೆ ಎಂದು ಅವರ ವಾದ.


ದೇವಾಲಯದ ಹಿಂದೆ ಪ್ರಾಂಗಣ ರಚಿಸಲು ಕೂಡಾ ಸ್ಥಳಾವಕಾಶವಿಲ್ಲ. ಮುಂಭಾಗ ಮತ್ತು ಪಾರ್ಶ್ವಗಳಲ್ಲೂ ಅದೇ ಪರಿಸ್ಥಿತಿ. ಊರವರು ರಸ್ತೆ ಮತ್ತು ತಮ್ಮ ಜಾಗ ಬಿಟ್ಟುಕೊಡರು. ಅವರ ಸಹಕಾರವಿಲ್ಲದೆ ಪ್ರಾಚ್ಯ ವಸ್ತು ಇಲಾಖೆ ಏನೂ ಮಾಡದು. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ ಅವನತಿಯತ್ತ ದಾಪುಗಾಲು ಹಾಕುತ್ತಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

2 ಕಾಮೆಂಟ್‌ಗಳು:

sunaath ಹೇಳಿದರು...

ದುರ್ಗಸಿಂಹನು ಸವಡಿ ಊರಿನವನೆಂದು ತಿಳಿದು ಸಂತೋಷವಾಯಿತು. ದೇವಾಲಯದ ಅಲ್ಪ ಸ್ವಲ್ಪ ದುರುಸ್ತಿಗೂ ಸಹ ಸಾಧ್ಯವಿಲ್ಲವೆನ್ನುವುದು ಖೇದದ ಸಂಗತಿ.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ.