ಭಾನುವಾರ, ಮಾರ್ಚ್ 09, 2014

ಮಂಜುಮಣಿ


ಗಣೇಶ ಚತುರ್ಥಿಗೆ ಒಂದೇ ವಾರ ಉಳಿದಿತ್ತು. ಮುಖ್ಯ ರಸ್ತೆಯಿಂದ ೧೫ ಕಿಮಿ ದೂರವಿರುವ ಈ ಹಳ್ಳಿಯಲ್ಲಿ ಚೌತಿ ಹಬ್ಬ ಜೋರು. ಈ ೧೫ಕಿಮಿ ದೂರ ಮಣ್ಣಿನ ರಸ್ತೆಯಾಗಿದ್ದು, ಕೆಲವೆಡೆ ದಾರಿ ದುರ್ಗಮವಾಗಿದ್ದು, ಮಳೆಗೆ ಸಂಪೂರ್ಣ ಹಾನಿಗೊಂಡಿತ್ತು. ರಸ್ತೆ ಸರಿಯಾಗದಿದ್ದರೆ ಗಣೇಶನ ಮೂರ್ತಿ ತರಲು ಅನಾನುಕೂಲವಾಗುವುದರಿಂದ, ಹಳ್ಳಿಗರು ಮಳೆ ಸ್ವಲ್ಪ ಬಿಡುವು ನೀಡಿದ ಕೂಡಲೇ ಮೂರ್ನಾಲ್ಕು ಕಡೆ ರಸ್ತೆ ದುರಸ್ತಿ ಮಾಡುವುದರಲ್ಲಿ ನಿರತರಾಗಿದ್ದರು. ರಸ್ತೆ ದುರಸ್ತಿ ಕಾರ್ಯ ಇನ್ನೂ ಮುಗಿಯದಿದ್ದರೂ, ನಮ್ಮ ಕ್ರೂಸರ್ ವಾಹನ ಕಸರತ್ತು ಮಾಡಿ ಹಳ್ಳಿ ತಲುಪಿತು.


ಈ ಜಲಧಾರೆಗೆ ಕೇವಲ ಒಂದು ತಾಸಿನ ಚಾರಣವಾಗಿರುವುದರಿಂದ, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಿದೆ. ಆಸುಪಾಸಿನ ಊರುಗಳ ಚಾರಣಿಗರ ನೆಚ್ಚಿನ ತಾಣ ಎಂದೂ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಈ ಸ್ಥಳಕ್ಕೆ ಪ್ರವಾಸಿಗರು ಬರುವುದು ತುಂಬಾನೇ ವಿರಳವಾಗಿರುವುದರಿಂದ, ಜಲಧಾರೆಯ ಪರಿಸರ ಸ್ವಚ್ಛವಾಗಿದೆ.


ಹಳ್ಳಿಯಲ್ಲೊಂದು ಪುರಾತನ ಬಾವಿಯಿದ್ದು, ಈಗಲೂ ಬಳಸಲ್ಪಡುತ್ತಿದೆ. ಕವಾಟಗಳು, ಮೆಟ್ಟಿಲುಗಳನ್ನು ಹಾಗೂ ಸ್ತರಗಳನ್ನು ಹೊಂದಿರುವ ಈ ಬಾವಿ ಸುಂದರವಾಗಿದೆ.


ಹಳ್ಳಿಯ ಪರಿಧಿಯನ್ನು ದಾಟಿದ ಬಳಿಕ ಬೆಟ್ಟದ ಅಂಚಿನಲ್ಲಿ ಸುಮಾರು ದೂರ ಸಾಗಬೇಕು. ಹೀಗೆ ಹೋಗುವಾಗ ದೂರದಲ್ಲಿ ಜಲಾಶಯವೊಂದರ ನೋಟ ಕಾಣಸಿಗುತ್ತದೆ. ಎಲ್ಲಾ ದಿಕ್ಕುಗಳಿಂದಲೂ ಬೆಟ್ಟಗಳಿಂದ ಸುತ್ತುವರಿದ ವಿಶಾಲ ಕೆರೆಯಂತೆ ಕಾಣುತ್ತಿತ್ತು ಈ ಜಲಾಶಯ.


ಸ್ವಲ್ಪ ಮುಂದೆ ಸಾಗಿದ ನಂತರ ದಾರಿ ಕಣಿವೆಗೆ ಇಳಿಯಲು ಆರಂಭಿಸಿತು. ಮೋಡ ಕವಿದ ತಂಪಾದ ಆಹ್ಲಾದಕರ ವಾತಾವರಣವಾಗಿತ್ತು. ಎಲ್ಲೆಡೆ ಬೆಟ್ಟಗಳು ಹಸಿರಿನಿಂದ ತುಂಬಿತುಳುಕುತ್ತಿದ್ದವು. ಈ ನೋಟವನ್ನು ಆನಂದಿಸುತ್ತ ನಾವು ಕೆಳಗಿಳಿಯುತ್ತಿದ್ದೆವು.


ನಮ್ಮ ಎಡಬದಿಯಲ್ಲಿ ನಾವು ಇಳಿಯುತ್ತಿದ್ದ ಕಣಿವೆಯು, ಉದ್ದನೆಯ ಹಾವಿನಂತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ದೂರದಲ್ಲಿ ಎರಡು ಜಲಧಾರೆಗಳು ಕಾಣುತ್ತಿದ್ದವು. ಇವೆರಡರಲ್ಲಿ, ದಟ್ಟ ಕಾನನದ ನಡುವೆ ಇರುವ ಜಲಧಾರೆಗೆ ಹೋಗಲು ಅಸಾಧ್ಯವೆಂದು ನಮ್ಮ ಮಾರ್ಗದರ್ಶಿ ತಿಳಿಸಿದ. ಕಣಿವೆಯ ಮೇಲ್ಭಾಗದಲ್ಲಿದ್ದು, ನೀರಿನ ಹರಿವು ಹೆಚ್ಚಿದ್ದ ಇನ್ನೊಂದು ಜಲಧಾರೆಗೆ ಹೋಗಲು ಕಷ್ಟವಾದರೂ ಅಸಾಧ್ಯವಲ್ಲವೆಂದೂ, ಅಲ್ಲಿಗೆ ಮಳೆಗಾಲದ ನಂತರ ಕರೆದೊಯ್ಯುವೆನೆಂದು ತಿಳಿಸಿದ. ಅಲ್ಲಿಗೆ ತೆರಳಲು ನಮಗಿನ್ನೂ ಟೈಮ್ ಬಂದಿಲ್ಲ.


ಕಣಿವೆಯ ತಳ ತಲುಪಿದ ಬಳಿಕ ಒಂದೈದು ನಿಮಿಷ ಮರಗಳ ನಡುವೆ ದಟ್ಟವಾಗಿ ಬೆಳೆದಿದ್ದ ಸಸ್ಯಗಳ ನಡುವೆ ಸಾಗಿದ ಕಾಲುದಾರಿ ಜಲಧಾರೆಯ ಮುಂದೆ ಕೊನೆಗೊಂಡಿತು. ಮರಗಳೆಡೆಯಿಂದ ಜಲಧಾರೆಯ ಮೊದಲ ನೋಟ ಮನಸೂರೆಗೊಂಡಿತು. ಸುಮಾರು ೧೫೦ ಅಡಿ ಎತ್ತರದಿಂದ ಗಂಭೀರತೆಯಿಂದ ಜಿಗಿಯುವ ಜಲಧಾರೆ, ಎಲ್ಲೂ ಅಡೆತಡೆಯಿಲ್ಲದೆ ನೇರವಾಗಿ ಬೀಳುತ್ತದೆ.


ವಿಶಾಲ ಕೋನ ಮಸೂರ ಇರುವ ಕ್ಯಾಮರಾ ಇದ್ದರೆ ಸಲೀಸಾಗಿ ಜಲಧಾರೆಯನ್ನು ಸಂಪೂರ್ಣ ಚಿತ್ರವನ್ನು ತೆಗೆಯಬಹುದು. ಆದರೆ ನನ್ನ ಕ್ಯಾಮರಾದಿಂದ ಹರಸಾಹಸಪಟ್ಟು, ಹಲವು ಕಡೆಗಳಿಂದ ಪ್ರಯತ್ನಿಸಿ, ಅಂತೂ ಕಡೆಗೆ ಮರಗಳೆಡೆಯಿಂದ ಸಂಪೂರ್ಣವಾಗಿ ಕಾಣುವ ಚಿತ್ರ ತೆಗೆಯಲು ಮಾತ್ರ ಸಫಲನಾದೆ.


ಕಣಿವೆಯಲ್ಲಿ ಹೆಚ್ಚಾಗಿ ಮಂಜು ಆವರಿಸಿರುತ್ತದೆ. ನಾವು ಜಲಧಾರೆಯ ತಳ ತಲುಪಿದಾಗ ಜಲಧಾರೆಯ ಶುಭ್ರ ನೋಟ ಲಭ್ಯವಿತ್ತು. ನೀರಿನ ರಭಸಕ್ಕೆ ಅಂಜಿ, ನಾಲ್ಕಾರು ಮಂದಿಯನ್ನು ಹೊರತುಪಡಿಸಿ, ಉಳಿದವರು ಜಲಧಾರೆಯ ಬುಡದಲ್ಲಿ ಸ್ನಾನ ಮಾಡಲಿಲ್ಲ.


ಅರ್ಧಚಂದ್ರಾಕೃತಿಯ ಆಕಾರವಿರುವ ಕಮರಿಯ ತುದಿಯಿಂದ ಕೆಳಗೆ ಜಿಗಿಯುವ ಜಲಧಾರೆಯ ಸಮೀಪ ನಿಂತರೆ, ಆ ರಭಸಕ್ಕೆ, ಆ ಸದ್ದಿಗೆ ಸಣ್ಣ ನಡುಕ ಬರದೇ ಇರಲಾರದು. ಅದೊಂದು ಅಪೂರ್ವ ನೋಟ. ವಿಶಾಲವಾದ ತುದಿಯ ನಟ್ಟನಡುವಿನಿಂದ ಮೇಲಿನಿಂದ ಕೆಳಗಿನವರೆಗೆ ಒಂದೇ ಆಕಾರದಲ್ಲಿ ಬೀಳುವ ವಿಭಿನ್ನ ದೃಶ್ಯ.


ಅಲ್ಲಿ ಗಾಳಿಯಿರದಿದ್ದರೂ, ಬಹಳ ಎತ್ತರದಿಂದ ರಭಸವಾಗಿ ಜಲಧಾರೆ ಬೀಳುವುದರಿಂದ ನೀರಿನ ಹನಿಗಳು ಎಲ್ಲೆಂದರಲ್ಲಿ ಸಿಂಚನಗೊಳ್ಳುತ್ತಿದ್ದವು. ಅಲ್ಲಿರುವ ಎಲ್ಲಾ ಮರಗಳು ಸಂಪೂರ್ಣವಾಗಿ ತೊಯ್ದುಹೋಗಿದ್ದವು. ಆ ಕಣಿವೆ ಸ್ವಲ್ಪ ವಿಚಿತ್ರವಾಗಿತ್ತು. ನೀರು ಬೀಳುವಲ್ಲಿ ಮಾತ್ರ ಕಣಿವೆ ಸ್ವಲ್ಪ ವಿಶಾಲವಾಗಿದ್ದು ತೆರೆದ ಸ್ಥಳವಿದೆ. ನಂತರ ಕಿರಿದಾಗುವ ಕಣಿವೆಯನ್ನು ಸ್ವಲ್ಪವೂ ಸ್ಥಳ ಬಿಡದೆ ಕಾಡು ಆವರಿಸಿಕೊಂಡಿದೆ.


ಎಷ್ಟೇ ಚಿತ್ರಗಳನ್ನು ತೆಗೆದರೂ ತೃಪ್ತಿಯಾಗುತ್ತಿರಲಿಲ್ಲ. ಹಳ್ಳದ ಇನ್ನೊಂದು ಬದಿಗೆ ತೆರಳಿ ಚಿತ್ರಗಳನ್ನು ತೆಗೆಯಬೇಕೆನ್ನುವಷ್ಟರಲ್ಲಿ ಮಂಜು ಮತ್ತೆ ಮರಳಿ ಬರಲು ಆರಂಭಿಸಿತು. ಎರಡೇ ನಿಮಿಷಗಳಲ್ಲಿ ಮಂಜು ಕಣಿವೆಯನ್ನು ಆವರಿಸಿ, ಜಲಧಾರೆಯನ್ನು ಮರೆ ಮಾಡಿತ್ತು. ಅಲ್ಲೇ ಇನ್ನೊಂದು ಅರ್ಧ ಗಂಟೆ ಊಟ ಮಾಡುತ್ತ ಕಳೆದೆವು. ಆದರೂ ಮಂಜು ಸರಿಯಲೇ ಇಲ್ಲ. ಕೇಳುತ್ತಿತ್ತು ಜಲಧಾರೆಯ ಸದ್ದು ಮಾತ್ರ.

11 ಕಾಮೆಂಟ್‌ಗಳು:

ಶ್ರೀನಿಧಿ.ಡಿ.ಎಸ್ ಹೇಳಿದರು...

swami, shreenidhids at gmail dot com ge ee jaga yavdu anta heLi mail madi punya kaTkoLi:)

Ashok ಹೇಳಿದರು...

Tumba Chennagide..

Prashant H V ಹೇಳಿದರು...

Awesome Rajesh... Great job!

ರಾಜೇಶ್ ನಾಯ್ಕ ಹೇಳಿದರು...

ಶ್ರೀನಿಧಿ, ಅಶೋಕ್, ಪ್ರಶಾಂತ್,
ಧನ್ಯವಾದ.

ಅನಾಮಧೇಯ ಹೇಳಿದರು...

Photo's and Description is too good.. hage jaga yavudu anthanu helidre chenagi iruthe.

Yav post alli kooda jaga yavudu antha helilla? Reveal madoke ista ilwa?

ಚಿತ್ರಸಾಲು ಹೇಳಿದರು...

ರಾಜೇಶ್, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ ಈ ಜಾಗ. ದಯವಿಟ್ಟು ಈ ಸ್ಥಳದ ಮಾಹಿತಿಯನ್ನು ಕೊಡಲು ಸಾಧ್ಯವೇ? ನಿಮ್ಮ ನಂಬಿಕೆ ನನ್ನದೂ ಆಗಿದೆ, ಮತ್ತದನ್ನು ಗೌರವಿಸುವೆ.
ಶ್ವೇತಾ (atshwetha@gmail.com)

shantharaju ಹೇಳಿದರು...

ಸುಂದರವಾದ ಚಿತ್ರಗಳು ರಾಜೇಶ್

Srik ಹೇಳಿದರು...

Rajesh, pictures have made me impatient for the monsoons, and a trip to here!

Hope monsoons do not disappoint this time.

Srik

ರಾಜೇಶ್ ನಾಯ್ಕ ಹೇಳಿದರು...

ಅನಾಮಧೇಯ,
ಸ್ಥಳದ ಬಗ್ಗೆ ಮಾಹಿತಿ ಎಂದೂ ಇಲ್ಲಿ ಇರುವುದಿಲ್ಲ. ಪ್ರಕೃತಿ ಬಗ್ಗೆ ಗೌರವ ಇರದವರಿಗೆ ಮಾಹಿತಿ ಸಿಗಬಾರದು ಎಂಬ ಉದ್ದೇಶ. ಧನ್ಯವಾದ.

ಶ್ವೇತಾ,
ದಯವಿಟ್ಟು ಮಾಹಿತಿ ಮಾತ್ರ ಕೇಳಬೇಡಿ. ನೀಡಲಾರೆ. ನಾನು ಎಂದಿಗೂ ಮಾಹಿತಿ ನೀಡುವುದಿಲ್ಲ ಹಾಗೂ ಮಾಹಿತಿ ಕೇಳುವುದಿಲ್ಲ ಕೂಡಾ. ಕ್ಷಮೆಯಿರಲಿ. ಧನ್ಯವಾದ.

ಶಾಂತರಾಜು, ಶ್ರೀಕಾಂತ್,
ಧನ್ಯವಾದ.

ಅನಾಮಧೇಯ ಹೇಳಿದರು...

ಮಾಹಿತಿ ಹಾಕದಿದ್ದರೆ ಏನು ಪ್ರಯೋಜನ? ಚಾರಣ ಹುಚ್ಚು ಇರುವವರು ಮಾಹಿತಿ ಹಾಕಿದರೆ ಆ ಜಾಗವನ್ನು ನೋಡಿ ಆನಂದಿಸಬಹುದು.
ಮಾಲಾ

ರಾಜೇಶ್ ನಾಯ್ಕ ಹೇಳಿದರು...

ಮಾಲಾ,
ನನಗೂ ಯಾರೂ ಮಾಹಿತಿ ನೀಡಿರಲಿಲ್ಲ! ಏನೂ ಪ್ರಯತ್ನ ಪಡದೆ, ಸಲೀಸಾಗಿ ಮಾಹಿತಿ ಸಿಗಬೇಕೆನ್ನುವವರು ಚಾರಣಕ್ಕೆ ಅರ್ಹರಲ್ಲ.