ಭಾನುವಾರ, ಜನವರಿ 19, 2014

ಶಿರಸಿಯ ಪುಢಾರಿ ಹಾಗೂ ಜಲಧಾರೆ


’ಶಿರಸಿಯಲ್ಲಿ ಒಬ್ಬರ ಪರಿಚಯ ಆಗಿದೆ. ಅವರಿಗೆ ೧೨ ಫಾಲ್ಸ್ ಗೊತ್ತಿದೆಯಂತೆ. ಯಾವಾಗ ಬೇಕಾದರೂ ಬನ್ನಿ ಎಲ್ಲಾ ಮಾಹಿತಿ ಕೊಡ್ತೇನೆ ಎಂದು ಹೇಳಿದ್ದಾರೆ. ಅಲ್ಲಿ ಎಲ್ಲಾ ಫಾಲ್ಸ್ ನೋಡಿ ಮುಗಿಸಿದ್ದಾರಂತೆ’, ಎಂದು ಒಂದೇ ಉಸಿರಿಗೆ ವಿವೇಕ್ ಉಸುರಿದಾಗ ನನಗೆ ಅಚ್ಚರಿ. ’೧೨ರಲ್ಲಿ ನಾವು ನೋಡದೇ ಇರುವುದೆಷ್ಟು?’ ಎಂಬ ಪ್ರಶ್ನೆಗೆ ವಿವೇಕ್ ನೀಡಿದ ಉತ್ತರ - ’ಒಂದಾದ್ರೂ ಇರಬಹುದಲ್ವೇ’ - ಅಶಾವಾದಿಯೊಬ್ಬನದ್ದಾಗಿತ್ತು. ರಾಜಕೀಯ ಪುಢಾರಿಯಾಗಿದ್ದ ಶಿರಸಿಯ ಈ ವ್ಯಕ್ತಿಯ ಬಗ್ಗೆ ನನಗೆ ಅದೇಕೋ ಸಂಶಯ ಬರಲಾರಂಭಿಸಿತ್ತು. ನಿಗದಿತ ದಿನದಂದು ಮುಂಜಾನೆ ೭ಕ್ಕೆ ಶಿರಸಿಯ ’ನಮ್ಮೂರ ಊಟ’ದಲ್ಲಿ, ಉಡುಪಿಯಿಂದ ನಾನು ಮತ್ತು ಅತ್ತ ಧಾರವಾಡದಿಂದ ವಿವೇಕ್ ಹಾಗೂ ಇತರರು ಭೇಟಿಯಾದೆವು.


ನಾಲ್ಕಾರು ಫೋನ್ ಕಾಲ್‍ಗಳ ಬಳಿಕ, ಅಂತೂ ೮.೩೦ರ ಸಮಯಕ್ಕೆ ಆ ವ್ಯಕ್ತಿ ಆಗಮಿಸಿದರು. ಈ ರಾಜಕೀಯ ವ್ಯಕ್ತಿಗಳೆಂದರೆ ನನಗೆ ಮೊದಲೇ ಅಲರ್ಜಿ. ನಾವು ೯೦ ನಿಮಿಷಗಳಿಂದ ಅವರಿಗಾಗಿಯೇ ಕಾಯ್ತಾ ಇದ್ದೇವೆ ಎಂಬ ಅರಿವಿದ್ದರೂ, ಆ ವ್ಯಕ್ತಿ ಒಳ ಹೊಕ್ಕ ಕೂಡಲೇ ಹೋಟೇಲ್ ಮಾಲೀಕ ಕೃಷ್ಣ ಕಮಲಾಕರ ಹೆಗಡೆಯವರ (ಇವರೀಗ ಗತಿಸಿದ್ದಾರೆ) ಬಳಿ ಕೊರೆತ ಶುರುವಿಟ್ಟುಕೊಂಡರು. ಹೆಗಡೆಯವರೇ ಅವರಿಗೆ ನಮ್ಮನ್ನು ತೋರಿಸಿ, ’ಅವರು ೭ ಗಂಟೆಯಿಂದ ನಿಮಗೆ ಕಾಯ್ತಾ ಇದ್ದಾರೆ. ನಾವು ನಂತರ ಮಾತನಾಡೋಣ..’ ಎಂದು ಅವರನ್ನು ನಮ್ಮತ್ತ ಕಳಿಸಿದರು.


ನಮ್ಮ ಬಳಿ ಬಂದ ಕೂಡಲೇ ಸಂಪೂರ್ಣ ರಾಜಕೀಯ ಧಾಟಿಯಲ್ಲೇ ಶಿರಸಿಯ ಗುಣಗಾನ ಮಾಡತೊಡಗಿದರು. ಐದಾರು ನಿಮಿಷಗಳು ಮುಗಿದರೂ ಫಾಲ್ಸ್ ವಿಷಯಕ್ಕೆ ಆತ ಬರದಿದ್ದಾಗ ನಾವಾಗಿಯೇ ನಮ್ರವಾಗಿ ಜಲಪಾತಗಳ ಬಗ್ಗೆ ಕೇಳಬೇಕಾಯಿತು. ಆತ ಉಂಚಳ್ಳಿಯಿಂದ ಶುರುಮಾಡಿ, ಶಿವಗಂಗಾ ಹೆಸರು ಹೇಳಿ, ಬೆಣ್ಣೆ ಉಸುರಿ, ಬಹಳ ಕಷ್ಟದಲ್ಲಿ ವಾಟೆಹೊಳೆ ಹೆಸರು ನೆನಪು ಮಾಡಿಕೊಂಡು ಹೇಳುವಷ್ಟರಲ್ಲಿ, ’ಅವೆಲ್ಲಾ ನೋಡಿ ಆಗಿದೆ’ ಎಂಬ ನಮ್ಮ ಉತ್ತರದಿಂದ ಸುಸ್ತು ಹೊಡೆದಿದ್ದ. ನಮಗೂ ಈತನ ಬೊಕ್ಕಸ ಬರೀ ಬೊಗಳೆ ಎಂದು ಅರಿವಾಗತೊಡಗಿತ್ತು. ನಂತರ ಯಾರಿಗೋ ಕರೆ ಮಾಡಿ ಇನ್ನೆರಡು ಹೆಸರು ಹೇಳಿದ. ’ಅವನ್ನೂ ನೋಡಿ ಆಗಿದೆ’ ಎಂದಾಗ ಮತ್ತೊಂದು ಕರೆ ಮಾಡಿ ಮಗದೊಂದು ಹೆಸರು ಹೇಳಿದ. ’ಅದನ್ನೂ ನೋಡಿ ಆಗಿದೆ’ ಎಂದು ನಾವು ಹೇಳಿದಾಗ ಆತನಿಗೆ ಮಾತೇ ಹೊರಡದಂತಾಗಿತ್ತು.


ನಾವು ಎಂಟು ಮಂದಿ ಆತನನ್ನು ಎಲ್ಲಾ ದಿಕ್ಕುಗಳಿಂದ ಸುತ್ತುವರಿದು ಹೊಸ ಜಲಧಾರೆಯ ಮಾಹಿತಿ ಸಿಗಬಹುದೆಂದು ಕಣ್ಣರಳಿಸಿ ನೋಡುತ್ತಿದ್ದರೆ, ಆತ ನಮ್ಮಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಸ್ಕೆಚ್ ಹಾಕತೊಡಗಿದ್ದ. ’ನನ್ನ ಮನೆಯಲ್ಲಿ ಒಂದು ಪುಸ್ತಕದಲ್ಲಿ ಶಿರಸಿ ತಾಲೂಕಿನ ಎಲ್ಲಾ ಫಾಲ್ಸ್‌ಗಳ ಲಿಸ್ಟ್ ಮಾಡಿದ್ದೇನೆ. ಅದನ್ನ ಈಗ ತಗೊಂಡು ಬರ್ತೇನೆ’ ಎಂದು ಹೊರಡಲು ಅಣಿಯಾದ. ’ವಾಪಾಸ್ ಬರ್ತೀರಾ ತಾನೆ..?’ ಎಂದು ವಿವೇಕ ಮಾರ್ಮಿಕವಾಗಿ ಕೇಳಿದಾಗ, ’ಹೀಂಗ್ ಹೋದೆ. ಹೀಂಗ್ ಬಂದೆ’ ಎಂದ ಆ ವ್ಯಕ್ತಿ ಸರಸರನೆ ಹೊರಗೆ ಹೆಜ್ಜೆ ಹಾಕಿದರು. ಒಂದೆರಡು ನಿಮಿಷಗಳ ನಂತರ ಆ ವ್ಯಕ್ತಿಯ ಮೊಬೈಲ್ ಸ್ವಿಚ್‍ಡ್ ಆಫ್!!!


ಈ ವ್ಯಕ್ತಿಯ ಬಗ್ಗೆ ನನಗೆ ಸಂಶಯವಿದ್ದುದರಿಂದ ನನ್ನ ಬಳಿ ’ಪ್ಲ್ಯಾನ್ ಬಿ’ ತಯಾರಾಗಿತ್ತು. ’ಏನ್ರೀ ಮಾಡೋದು ಈಗ..’ ಎಂದು ವಿವೇಕ್ ಚಡಪಡಿಸುತ್ತಿರುವಾಗ, ’ಪ್ಲ್ಯಾನ್ ಬಿ’ ಮಂಡಿಸಿದೆ. ಮಂಡಿಸಿದ ಕೂಡಲೇ ಕಾರ್ಯಗತಗೊಳಿಸಲು ಮುಂದಾದೆವು. ಈಗ ಪ್ರಯಾಣ, ಚಾರಣದ ಸ್ಥಾನವನ್ನು ಆಕ್ರಮಿಸಿತ್ತು. ಆ ದಿನ ಎರಡು ಜಲಧಾರೆಗಳನ್ನು ನೋಡಿದೆವು. ಎರಡಕ್ಕೂ ಚಾರಣವಿರಲಿಲ್ಲ.


ಜಲಧಾರೆಯಿರುವ ಹಳ್ಳಿಯಲ್ಲಿ ಹಿರಿಯರೊಬ್ಬರ ಭೇಟಿಯಾಯಿತು. ಅವರಲ್ಲಿ ದಾರಿ ಕೇಳಿದಾಗ ’ಅನೀಶ’ ಎಂಬ ಪೋರನನ್ನು ಮಾರ್ಗದರ್ಶಿಯಾಗಿ ಕಳುಹಿಸಿದರು. ವಯಸ್ಸು ಆರೇ ಆದರೂ ಮಾತಿನಲ್ಲಿ ತುಂಬಾ ಮುಂದೆ. ನಮ್ಮ ಬಗ್ಗೆ ಎಲ್ಲಾ ಮಾಹಿತಿ ಕೇಳಿ ಪಡಕೊಂಡ! ನಾವೆಲ್ಲರೂ ಆತನನ್ನು ಹಿಂಬಾಲಿಸಿದೆವು.


ತೋಟದ ನಡುವೆ ಅಡಗಿರುವ ಸಣ್ಣ ಜಲಧಾರೆ ಭೋರ್ಗರೆಯುತ್ತಿತ್ತು. ಸುಮಾರು ೪೦ ಅಡಿ ಎತ್ತರದಿಂದ ಧುಮುಕುವ ಈ ಹಳ್ಳ ನಂತರ ಹಾಗೇ ಮುಂದುವರೆದು ರಾಜ್ಯದ ಅತಿ ಸುಂದರ ಹಾಗೂ ಪ್ರಸಿದ್ಧ ಜಲಪಾತವೊಂದನ್ನು ನಿರ್ಮಿಸುತ್ತದೆ.


ಜಲಧಾರೆಯ ನೇರ ಮುಂದೆ ನಿಂತು ಚಿತ್ರ ತೆಗೆಯುವುದು ಅಸಾಧ್ಯವಾಗಿತ್ತು. ಬದಿಯಿಂದ ಸಮೀಪ ನುಸುಳಿ ಒಂದಷ್ಟು ಚಿತ್ರಗಳನ್ನು ತೆಗೆದೆವು.


ಜಲಧಾರೆಯ ರೌದ್ರಾವತಾರದ ಅಂದವೇ ಬೇರೆ. ಧುಮ್ಮಿಕ್ಕಿ ಹರಿಯುವಾಗ ಜಲಧಾರೆಯ ನಿಜವಾದ ಎತ್ತರದ ಅರಿವಾಗುವುದಿಲ್ಲ. ನೀರಿನ ಹರಿವು ಎತ್ತರವನ್ನು ಮರೆಮಾಚುತ್ತದೆ.


ಅಂದು ಜಲಧಾರೆಯ ಸೊಬಗನ್ನು ನಾವೆಲ್ಲಾ ಆನಂದಿಸಿದೆವು. ಶಿರಸಿಯ ’ಕಾಮೆಡಿ ಕ್ಲೋನ್’ನಿಂದ ನಿರಾಶದಾಯಕವಾಗಿ ಆರಂಭವಾದ ದಿನ ಈ ಜಲಧಾರೆ ಹಾಗೂ ಇನ್ನೊಂದು ಸಣ್ಣ ಜಲಧಾರೆಯ ಭೇಟಿಯ ಬಳಿಕ ಸಂತೋಷವಾಗಿಯೇ ಕೊನೆಗೊಂಡಿತು.

ಮಾಹಿತಿ: ರವಿ ಹೆಗಡೆ

2 ಕಾಮೆಂಟ್‌ಗಳು:

Ashok ಹೇಳಿದರು...

Nirashadayakavagabekidda payana nivu plan B madiddarinda success aytu. So plan B is always required..

ರಾಜೇಶ್ ನಾಯ್ಕ ಹೇಳಿದರು...

ಅಶೋಕ್,
ಪ್ಲ್ಯಾನ್ ಬಿ ಇದ್ದರೆ ಎಂದಿಗೂ ಒಳ್ಳೆಯದು ತಾನೆ? ಧನ್ಯವಾದ.