ಭಾನುವಾರ, ಜನವರಿ 12, 2014

ತಾರಕೇಶ್ವರ ದೇವಾಲಯ - ಹೂಲಿ


ದಿಬ್ಬವೊಂದರ ಮೇಲೆ ನೆಲೆಗೊಂಡಿದ್ದಾನೆ ತಾರಕೇಶ್ವರ. ದಿಬ್ಬದ ಮೇಲೆ ತಲುಪಲು ಹೂಲಿ ಗ್ರಾಮಸ್ಥರು ಚೆನ್ನಾದ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಆಕರ್ಷಕವಾಗಿ ಕಾಣಬೇಕಾಗಿದ್ದ ದೇವಾಲಯ ಪಾಳು ಬಿದ್ದ ಮನೆಯಂತೆ ತೋರುತ್ತಿದೆ.


ಮುಖಮಂಟಪದಲ್ಲಿ ನಾಲ್ಕು ತರಹದ ವಿನ್ಯಾಸಗಳಿರುವ ಕಂಬಗಳಿವೆ ಮತ್ತು ಕಂಬಗಳು ಮಾತ್ರ ಇವೆ. ಸುತ್ತಲೂ ಇದ್ದ ಕಲ್ಲಿನ ಆಸನಗಳು ಇತಿಹಾಸವಾಗಿವೆ. ಮುಖಮಂಟಪಕ್ಕೆ ಮೂರು ದಿಕ್ಕಿನಿಂದ ದ್ವಾರಗಳಿದ್ದ ಕುರುಹುಗಳನ್ನು ಸ್ಪಷ್ಟವಾಗಿ ಕಾಣಬಹುದು. ಈಗ ಎಲ್ಲಾ ದಿಕ್ಕುಗಳಿಂದಲೂ ಪ್ರವೇಶಿಸಬಹುದು!


ಮುಖಮಂಟಪದ ಎರಡು ಕಂಬಗಳಲ್ಲಿ ಮಾತ್ರ ಆನೆ ಮತ್ತು ಮಕರಗಳ ಅಲಂಕಾರಿಕ ಕೆತ್ತನೆಗಳಿವೆ. ಅಂತೆಯೇ ಇನ್ನೆರಡು ಕಂಬಗಳಲ್ಲಿ ಕಲಶಗಳನ್ನು ಕಾಣಬಹುದು.


ಈ ದೇವಾಲಯದ ರಚನೆ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ನವರಂಗ ಪ್ರತ್ಯೇಕವಾಗಿರದೆ ಮುಖಮಂಟಪದ ನಟ್ಟನಡುವೆಯೇ ನಾಲ್ಕು ಸುಂದರ ಕಂಬಗಳ ನಡುವೆ ಇದೆ.


ಗರ್ಭಗುಡಿಯು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಹೊಂದಿದ್ದು ಪಂಚಶಾಖ ದ್ವಾರವನ್ನು ಹೊಂದಿದೆ. ಪ್ರತಿ ತೋಳಿನಲ್ಲೂ ಪ್ರತ್ಯೇಕ ಕೆತ್ತನೆಗಳಿವೆ. ಎಂದೋ ಬಳಿದಿದ್ದ ಸುಣ್ಣವನ್ನು ಶ್ರಮವಹಿಸಿ ತಕ್ಕಮಟ್ಟಿಗೆ ಈಗ ತೆಗೆಯಲಾಗಿದ್ದರೂ ಐದನೇ ತೋಳಿನ ಸುಣ್ಣ ಹಾಗೇ ಉಳಿದುಕೊಂಡಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಇಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಗಜಲಕ್ಷ್ಮೀಯ ಇಕ್ಕೆಲಗಳಲ್ಲಿ ಅಷ್ಟದಿಕ್ಪಾಲಕರಿದ್ದಾರೆ. ದಿಕ್ಪಾಲಕರ ಕೊನೆಯಲ್ಲಿ ವಾದ್ಯ ನುಡಿಸುವವರ ಜೊತೆಗೆ ದೇವರಿಗೆ ಏನೋ ಕಾಣಿಕೆ ತರುವ ಚಿತ್ರಣವಿದೆ.


ಶಾಖೆಗಳ ತಳಭಾಗದಲ್ಲಿ ಐದು ಮಾನವರೂಪದ ಕೆತ್ತನೆಗಳಿವೆ. ಶಾಖೆಗಳ ಪ್ರಮುಖ ಕೆತ್ತನೆಯೆಂದರೆ ನಾಟ್ಯಜೋಡಿಗಳದ್ದು. ಗಂಡು ಯಾವುದಾದರೂ ಸಂಗೀತ/ವಾದ್ಯ ಉಪಕರಣವನ್ನು ನುಡಿಸುತ್ತಿದ್ದರೆ ಅದಕ್ಕನುಗುಣವಾಗಿ ಹೆಣ್ಣು ನೃತ್ಯ ಮಾಡುತ್ತಿರುವುದನ್ನು ಉತ್ತಮವಾಗಿ ಕೆತ್ತಲಾಗಿದೆ. ಇನ್ನೊಂದು ಶಾಖೆಯಲ್ಲಿ ಸಂಗೀತಗಾರರನ್ನು ಮಾತ್ರ ತೋರಿಸಲಾಗಿದೆ.


ಈ ಏಕಕೂಟ ದೇವಾಲಯದ ಗೋಪುರವನ್ನು ನೋಡಿದರೆ ವ್ಯಥೆಯಾಗುತ್ತದೆ. ಒಂದಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿ ’ಗೋಪುರ’ದ ಹಾಗೆ ಕಾಣುವಂತೆ ಪೇರಿಸಿ ಇಡಲಾಗಿದೆ. ಅತ್ಯಾಕರ್ಷವಾಗಿದ್ದ ಕದಂಬನಗರ ಶೈಲಿಯ ಗೋಪುರ ಧರಾಶಾಹಿಯಾಗಿದೆ. ಗೋಪುರದ ಮತ್ತು ಗರ್ಭಗುಡಿಯ ಹೊರಗೋಡೆಯ ಕಲ್ಲುಗಳು ಒಂದೊಂದಾಗಿ ಕಳಚಿಕೊಳ್ಳುತ್ತಿವೆ. ಗಿಡಗಂಟಿಗಳು ಬೆಳೆಯಲಾರಂಭಿಸಿವೆ. ಮೆಲ್ಛಾವಣಿಯ ಸುತ್ತಲೂ ಇದ್ದ ಕೈಪಿಡಿಯೂ ನಾಶವಾಗಿದ್ದು ಒಂದೆರಡು ಕಡೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ಉಳಿದುಕೊಂಡಿದ್ದು ಅವುಗಳಲ್ಲಿ ಸುಂದರ ಕೆತ್ತನೆ ಕೆಲಸಗಳನ್ನು ಕಾಣಬಹುದು.


ಹೂಲಿಯಲ್ಲಿ ಈ ದೇವಾಲಯದಲ್ಲಿ ಮಾತ್ರ ಯಜ್ಞಕುಂಡವನ್ನು ಕಾಣಬಹುದು. ಮೂರು ಬಿಲ್ವಮರಗಳು ದೇವಾಲಯದ ಮುಂದೆನೇ ಇದ್ದು ಪರಿಸರದ ಅಂದಕ್ಕೆ ಇಂಬು ನೀಡುತ್ತದೆ. ಪಾರ್ಶ್ವದಲ್ಲೇ ಇರುವ ಬೆಟ್ಟವನ್ನು ತುಸು ಏರಿದರೆ ಯಜ್ಞಕುಂಡ ಮತ್ತು ಬಿಲ್ವಮರಗಳು ತಾರಕೇಶ್ವರ ದೇವಾಲಯವು ಸುಂದರವಾಗಿ ಕಾಣುವುದರಲ್ಲಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸುವುದನ್ನು ಕಾಣಬಹುದು.


ದೇವಾಲಯದ ಎಡಕ್ಕೆ ೩೦-೪೦ರಷ್ಟು ಕಂಬಗಳಿರುವ ಬಹಳ ತಗ್ಗು ಛಾವಣಿಯನ್ನು ಹೊಂದಿರುವ ಕಟ್ಟಡದ ರಚನೆಯಿದೆ. ಇದೇನೆಂದು ತಿಳಿಯಲಿಲ್ಲ. ದೂರದಿಂದ ನೋಡಿದರೆ ಬೆಟ್ಟದ ಬುಡದಲ್ಲೇ ದಿಬ್ಬವೊಂದರ ಮೇಲಿರುವ ತಾರಕೇಶ್ವರ ದೇವಾಲಯ ಅತ್ಯಾಕರ್ಷವಾಗಿ ಕಾಣುತ್ತದೆ. ಸಮೀಪ ತೆರಳಿದರೆ ಮಾತ್ರ ಅದರ ದುರವಸ್ಥೆ ಮನದಟ್ಟಾಗುವುದು.

ಅಂದು - ಇಂದು:


ಕಪ್ಪುಬಿಳುಪಿನಲ್ಲಿರುವುದು ತಾರಕೇಶ್ವರ ದೇವಾಲಯದ ೧೮೭೪ರಲ್ಲಿ ತೆಗೆದ ಚಿತ್ರ ಹಾಗೂ ವರ್ಣಚಿತ್ರ ೨೦೧೧ರದ್ದು. ದೇವಾಲಯ ಅಂದು ಯಾವ ಶಿಥಿಲ ಸ್ಥಿತಿಯಲ್ಲಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಕಪ್ಪುಬಿಳುಪು ಚಿತ್ರದಲ್ಲಿ ಕಾಣುವ ಸಣ್ಣ ಬಿಲ್ವಗಿಡ ಇಂದು ಮರವಾಗಿ ಬೆಳೆದಿದೆ (ಇದು ನನ್ನ ಊಹೆ ಮಾತ್ರ).

3 ಕಾಮೆಂಟ್‌ಗಳು:

siddeshwar ಹೇಳಿದರು...

Beautiful pictures, well framed and detailed. I simply love the location and ambiance of this temple is peaceful.

Ashok ಹೇಳಿದರು...

Hoolia kereya echeyinda nodidde, pratyakshavagi nodiralilla.. Chennagide..

ರಾಜೇಶ್ ನಾಯ್ಕ ಹೇಳಿದರು...

ಸಿದ್ಧೇಶ್ವರ,
ಹೌದು. ಅದೊಂದು ಸುಂದರ ಪ್ರಶಾಂತ ಸ್ಥಳ.

ಅಶೋಕ್,
ಧನ್ಯವಾದ.