ಗುರುವಾರ, ಅಕ್ಟೋಬರ್ 03, 2013

ಮಲ್ಲೇಶ್ವರ ದೇವಾಲಯ - ಹುಲಿಕಲ್


ಹುಲಿಕಲ್‍ನಲ್ಲಿರುವ ಕಾಲುವೆಯ ಬದಿಯಲ್ಲೇ ಸ್ವಲ್ಪ ದೂರ ಸಾಗಿದಾಗ ಸುಂದರ ಕೆರೆಯೊಂದರ ತಟದಲ್ಲಿ ಮಲ್ಲೇಶ್ವರ ದೇವಾಲಯ ಕಾಣಿಸಿತು. ದೇವಾಲಯ ಸ್ವಲ್ಪ ಕೆಳಮಟ್ಟದಲ್ಲಿರುವಂತೆ ತೋರುತ್ತಿತ್ತು. ಅಲ್ಲೇ ಕಾರು ನಿಲ್ಲಿಸಿ ಕೆರೆಯ ಅಂದವನ್ನು ಆಸ್ವಾದಿಸಿ ದೇವಾಲಯದತ್ತ ಹೆಜ್ಜೆ ಹಾಕಿದಾಗ ಆಶ್ಚರ್ಯ!


ಸಣ್ಣ ಹೊಂಡವೊಂದರಲ್ಲಿ ಈ ದೇವಾಲಯವಿದೆ. ಹಿಂದಿನ ದಿನ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿತ್ತು. ನೀರ ನಡುವೆ ಮಲ್ಲೇಶ್ವರ! ಇಲ್ಲಿ ಪ್ರಾಚ್ಯ ವಸ್ತು ಇಲಾಖೆ ಪ್ರಶಂಸನೀಯ ಕೆಲಸ ಮಾಡಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಅಲ್ಲಲ್ಲಿ ತೇಪೆ ಹಾಕಿ ಮೂಲ ರೂಪಕ್ಕೆ ತರುವ ಸಫಲ ಪ್ರಯತ್ನವನ್ನು ಮಾಡಿದೆ.


ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನೊಳಗೊಂಡಿರುವ ಈ ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ದೇವಾಲಯದ ಒಳಗೆಲ್ಲಾ ನೀರು. ಆ ನೀರಿನಲ್ಲಿ ಅರ್ಚಕರು ಹೇಗೆ ಪೂಜೆ ಸಲ್ಲಿಸುತ್ತಾರೋ...


ಗೋಪುರವನ್ನು ಎರಡು ತಾಳಗಳಲ್ಲಿ ನಿರ್ಮಿಸಲಾಗಿದ್ದು, ಮೇಲಿರುವ ಪದ್ಮದ ಮೇಲೆ ಸುಂದರ ಕಲಶವಿದೆ. ಹೊಯ್ಸಳ ಲಾಂಛನ (ಸಳ ಸಿಂಹದೊಡನೆ ಕಾದಾಡುವ ಕೆತ್ತನೆ) ಕಣ್ಮರೆಯಾಗಿದೆ. ಶಿಖರ ಲಾಂಛನ ಫಲಕದಲ್ಲಿನ ಕೆತ್ತನೆ ಅಳಿಸಿಹೋಗಿದೆ.


ದೊರಕಿರುವ ಶಿಲಾಶಾಸನವೊಂದನ್ನು ಮುಖಮಂಟಪದ ಪಾರ್ಶ್ವದಲ್ಲಿರಿಸಲಾಗಿದೆ. ಪ್ರಸ್ತುತ ನೀರು ತುಂಬಿದ ಸ್ಥಿತಿಯಲ್ಲಿ ಈ ಶಿಲಾಶಾಸನ, ನೀರಿನ ಮಟ್ಟ ಅಳೆಯುವ ಮಾಪನದಂತೆ ತೋರುತ್ತಿತ್ತು!


ದೇವಾಲಯದ ಸಮೀಪದ ಪರಿಸರ ತುಂಬಾನೇ ಚೆನ್ನಾಗಿದೆ. ಅಲ್ಲೊಂದಷ್ಟು ಸಮಯ ವಿರಮಿಸಿದರೂ ಅಲ್ಲಿಂದ ಕದಲಲು ಮನಸ್ಸೊಪ್ಪುತ್ತಿರಲಿಲ್ಲ. ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ (ನಿರ್ಮಾತೃ ಮತ್ತು ನಿರ್ಮಾಣದ ವರ್ಷ) ನನಗೆ ದೊರಕಲಿಲ್ಲ. ಬಲ್ಲವರು ತಿಳಿಸಿದರೆ ಉಪಕಾರವಾಗುವುದು.

3 ಕಾಮೆಂಟ್‌ಗಳು:

sunaath ಹೇಳಿದರು...

ನೀವು ತೋರಿಸುತ್ತಿರುವ ಪ್ರಾಚೀನ ದೇವಾಲಯಗಳನ್ನು ಸ್ವತಃ ನೋಡದೇ ಇದ್ದರೂ, ನಿಮ್ಮ ಚಿತ್ರಗಳಲ್ಲಿ ನೋಡಿ ಸಂತೋಷ ಪಡುತ್ತಿರುವೆ! ಈ ದೇವಾಲಯವೂ ಸಹ ತುಂಬ ಸುಂದರವಾಗಿ ಕಾಣುತ್ತಿದೆ.

Ashok ಹೇಳಿದರು...

Tumba chendada hagu aparoopada devastana...

ರಾಜೇಶ್ ನಾಯ್ಕ ಹೇಳಿದರು...

ಸುನಾಥ್, ಅಶೋಕ್
ಧನ್ಯವಾದ.