ಭಾನುವಾರ, ಜೂನ್ 30, 2013

ಮದುವೆಮನೆ!


ಈ ಜಲಧಾರೆ ನೋಡಿ ಹಿಂತಿರುಗುವಾಗ, ನಾನು ಉಳಿದ ಚಾರಣಿಗರಿಂದ ಸ್ವಲ್ಪ ಮುಂದೆ ಬಂದಿದ್ದರಿಂದ ಅವರಿಗಾಗಿ ಒಂದೆಡೆ ಕಾದು ನಿಂತೆ. ಅಲ್ಲಿ ಮನೆಯೊಂದರ ಬಚ್ಚಲುಮನೆ ರಸ್ತೆಗೆ ತಾಗಿಕೊಂಡೇ ಇತ್ತು. ಒಳಗಿನಿಂದ ನೀರು ನೆಲಕ್ಕಪ್ಪಳಿಸುವ ರಪರಪ ಶಬ್ದ ಕೇಳುತ್ತಿತ್ತು. ಆಚೀಚೆ ನೋಡುತ್ತಾ ನಿಂತಿರುವಾಗ, ’ನೋಡಿ ಬಂದ್ರಾ’ ಎಂಬ ಪ್ರಶ್ನೆ ಒಳಗಿನಿಂದ ತೂರಿಬಂತು. ಕುಶಲೋಪರಿಯ ನಂತರ ಬಚ್ಚಲುಮನೆಯೊಳಗಿನಿಂದಲೇ ಆ ವ್ಯಕ್ತಿ ಮಾತು ಮುಂದುವರೆಸಿ, ’ಇದೆಲ್ಲಾ ಏನೂ ಇಲ್ರೀ.. ಇನ್ನೂ ದೊಡ್‍ದೊಡ್ದು ಶಿರ್ಲು ಇವೆ. ಅವನ್ನೆಲ್ಲಾ ನೋಡ್ಬೇಕ್ ನೀವು...’ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು!


ಆ ವ್ಯಕ್ತಿ ತಿಳಿಸಿದ ಎರಡು ಜಲಧಾರೆಗಳಲ್ಲಿ ಒಂದನ್ನು ಅದಾಗಲೇ ನಾನು ನೋಡಿಯಾಗಿತ್ತು. ಇನ್ನೊಂದು ಜಲಧಾರೆಯೇ ಈ ಮದುವೆಮನೆ ಜಲಧಾರೆ. ಅಷ್ಟರಲ್ಲಿ ಉಳಿದ ಚಾರಣಿಗರು ಸಮೀಪಿಸಿದರು. ಆ ವ್ಯಕ್ತಿಯ ಸ್ನಾನ ಇನ್ನೂ ಮುಗಿದಿರಲಿಲ್ಲ. ಉಳಿದೆಲ್ಲಾ ಚಾರಣಿಗರೊಂದಿಗೆ ಒಳಗಿನಿಂದಲೇ ಮಾತನಾಡಿದ ಆತ, ಮದುವೆಮನೆ ಜಲಧಾರೆಗೆ ನೀರಿನ ಹರಿವು ಹೆಚ್ಚಿರುವಾಗ ತೆರಳಲು ಅಸಾಧ್ಯವೆಂದು ತಿಳಿಸಿದರು. ಆದರೂ ನಾವು ಪಟ್ಟು ಬಿಡದಿದ್ದಾಗ, ನಾವು ನಮ್ಮ ವಾಹನ ನಿಲ್ಲಿಸಿದ್ದಲ್ಲಿ ತನ್ನ ಅಣ್ಣನ ಮನೆಯಿರುವುದಾಗಿಯೂ, ಅವರಲ್ಲಿ ತಾನು ಹೇಳಿದೆನೆಂದು ಹೇಳಿದರೆ ಕರೆದೊಯ್ಯುವರೆಂದು ತಿಳಿಸಿದರು. ಅದಾಗಲೇ ’ನೋಡಿ ಬಂದ್ರಾ’ ಎಂಬ ಎರಡು ಶಬ್ದಗಳು ಹೊರಗೆ ಬಂದು ೧೫ ನಿಮಿಷಗಳು ಕಳೆದಿದ್ದವು. ಆ ವ್ಯಕ್ತಿಯ ಗಜಸ್ನಾನ ಮುಂದುವರೆದಿತ್ತು. ಇನ್ನೊಂದೆರಡು ನಿಮಿಷ ಕಾದರೂ, ಅವರ ಮಹಾಸ್ನಾನ ಮುಗಿಯುವ ಲಕ್ಷಣಗಳು ಗೋಚರಿಸದಿದ್ದರಿಂದ ಅವರಿಗೆ ಧನ್ಯವಾದ ಹೇಳಿ ಮುನ್ನಡೆದೆವು.


ಮುಂದೆ ಅವರ ಅಣ್ಣನ ಭೇಟಿಯಾಯಿತು. ನೀರಿನ ಹರಿವು ವಿಪರೀತವಿರುವುದರಿಂದ ಹೋಗಲು ಸಾಧ್ಯವಿಲ್ಲ ಎಂದು ಅವರು ನಮಗೆ ಹೇಳಿದರೂ, ನಮ್ಮ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಹೊರಟರು. ಅರ್ಧ ಗಂಟೆಯ ನಡಿಗೆಯ ಬಳಿಕ ಎದುರಾದ ಹಳ್ಳದೆಡೆ ಒಂದೇ ನೋಟ ಬೀರಿದ ಕೂಡಲೇ ಮುಂದೆ ಹೋಗಲು ಅಸಾಧ್ಯ ಎಂದು ನಮಗೆ ಮನದಟ್ಟಾಯಿತು. ನಮ್ಮ ಮಾರ್ಗದರ್ಶಿ ಮುಗುಳ್ನಗುತ್ತಿದ್ದರು. ’ಹಳ್ಳಗುಂಟ ಕಲ್ಲು ಬಂಡೆ ಹತ್ತಿ ಇಳಿದೇ ಹೊಗಬೇಕಾಗುವುದರಿಂದ ನೀರು ಕಡಿಮೆ ಇರುವಾಗ ಮಾತ್ರ ಈ ಶಿರ್ಲು ನೋಡಲು ಸಾಧ್ಯ. ನೀವು ಮಳೆಗಾಲದ ಆರಂಭದಲ್ಲಿ ಅಥವಾ ನವೆಂಬರ್ ತಿಂಗಳಲ್ಲಿ ಬನ್ನಿ’ ಎಂದು ಅವರು ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆವು.


ಮುಂದಿನ ವರ್ಷ ಜೂನ್ ತಿಂಗಳ ಕೊನೆಯಲ್ಲೇ ಅವರಿಗೆ ಕರೆ ಮಾಡಿ ನಿಗದಿತ ದಿನದಂದು ಅವರ ಮನೆ ಮುಂದೆ ನಾವು ಹಾಜರು. ಅವರು ಕೆಲಸದಲ್ಲಿ ವ್ಯಸ್ತವಿದ್ದುದರಿಂದ ತಮ್ಮ ನೆರೆಮನೆಯ ಹುಡುಗ ಭಾಸ್ಕರ ಸಿದ್ಧಿಯನ್ನು ನಮ್ಮೊಂದಿಗೆ ಕಳುಹಿಸಿದರು. ಈ ಭಾಸ್ಕರ, ಇನ್ನೊಬ್ಬ ಮಾಮೂಲಿ ಸಿದ್ಧಿ ಹುಡುಗ ಎಂದುಕೊಂಡೆವು. ಒಂದು ವರ್ಷದ ಮೊದಲು ಮಾರ್ಗದಶಿಯಾಗಿ ಬಂದಿದ್ದ ’ಗಣಪತಿ ಸಿದ್ಧಿ’ಯ ನೆನಪಾಗಿ, ಈತ ಅವನಂತೆ ಆಗಿರದಿದ್ದರೆ ಸಾಕು ಎಂದು ಮಾತನಾಡಿಕೊಂಡೆವು.


ಸ್ವಲ್ಪ ಮುಂದೆ ಸಾಗಿ ಒಂದೆಡೆ ಎಲ್ಲರೂ ವೃತ್ತಾಕಾರದಲ್ಲಿ ನಿಂತು ಸ್ವ-ಪರಿಚಯ ಮಾಡಿಕೊಂಡೆವು. ಕನ್ನಡ - ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ಹೆಚ್ಚಿನವರ ಸ್ವ-ಪರಿಚಯ ನಡೆಯಿತು. ನಂತರ ಭಾಸ್ಕರನಿಗೆ ತನ್ನ ಪರಿಚಯ ಮಾಡುವಂತೆ ಕೇಳಿಕೊಂಡೆವು. ಈ ಸಿದ್ಧಿ ಹುಡುಗರನ್ನು ಕಳೆದ ೨೫ ವರ್ಷಗಳಿಂದ ಗಮನಿಸುತ್ತಿದ್ದೇನೆ. ಪ್ರೋತ್ಸಾಹ ನೀಡಿದರೂ ಉದ್ಧಾರ ಆಗುವವರಲ್ಲ! ಇವರ ಬಗ್ಗೆ ಪ್ರತ್ಯೇಕ ಲೇಖನವನ್ನೇ ಯಾವಗಲಾದರೂ ಬರೆಯುವೆ. ಈ ಭಾಸ್ಕರ, ಹೆಚ್ಚೆಂದರೆ ಏಳನೇ ತರಗತಿಯವರೆಗೆ ಓದಿರಬಹುದು. ಮನೆಯಲ್ಲೇ ಇದ್ದು, ಕೃಷಿ-ಕೂಲಿ ಮಾಡುತ್ತಾ ಇದ್ದಾನೆ ಎಂಬ ಮಾಮೂಲಿ ಪರಿಚಯ ಹೊರಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ನಮಗೆ ಆಶ್ಚರ್ಯವೊಂದು ಕಾದಿತ್ತು. ’ನನ್ನ ಹೆಸರು ಭಾಸ್ಕರ ಗಜಾನನ ಸಿದ್ಧಿ. ಐ ಹ್ಯಾವ್ ಡನ್ ಬ್ಯಾಚಲರ್ಸ್ ಡಿಗ್ರೀ ಇನ್ ಫಾರ್ಮಸಿ. ಕಳೆದ ಎರಡು ವರ್ಷಗಳಿಂದ ಭಟ್ಕಳದಲ್ಲಿ ಔಷಧಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದೇನೆ. ಈಗ ರಜೆಗೆ ಮನೆಗೆ ಬಂದಿದ್ದೇನೆ’, ಎಂದು ಕನ್ನಡ - ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ನಿರರ್ಗಳವಾಗಿ, ನಿಖರವಾಗಿ, ಆತ್ಮವಿಶ್ವಾಸಭರಿತ ಧ್ವನಿಯಲ್ಲಿ ಹೇಳಿದಾಗ, ಆದ ಶಾಕ್‍ನಿಂದ ಚೇತರಿಸಿಕೊಳ್ಳಲು ನಮಗೆಲ್ಲಾ ಐದಾರು ಕ್ಷಣಗಳು ಬೇಕಾದವು. ಅದೇ ಕ್ಷಣದಿಂದ ಎಲ್ಲರೂ ಭಾಸ್ಕರನನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಟ್ಟಿತ್ತು! ಭಾಸ್ಕರ್ ಹ್ಯಾಡ್ ಮೇಡ್ ಹೀಸ್ ಪಾಯಿಂಟ್!!!


ಹಳ್ಳದಲ್ಲಿ ಒಂದು ಸಲ ಕಾಲಿಟ್ಟ ಬಳಿಕ ನಂತರ ಮೇಲೆ ಬರುವ ಪ್ರಮೇಯವೇ ಇಲ್ಲ. ಹಳ್ಳಗುಂಟ, ಜಾರುವ ಬಂಡೆಗಳನ್ನು ಸಾವಕಾಶವಾಗಿ ಸಂಭಾಳಿಸುತ್ತಾ, ನಿಧಾನವಾಗಿ ಮುಂದೆ ಸಾಗಿದೆವು. ಮಳೆ ಆರಂಭವಾಗಿ ಇಪ್ಪತ್ತು ದಿನಗಳಷ್ಟೇ ಆಗಿದ್ದರಿಂದ ಹಳ್ಳವಿನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ. ಕೆಲವೆಡೆ ಹಳ್ಳ ಬಹಳ ಕಿರಿದಾದ ಆಕಾರವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ನೀರಿನ ಪ್ರಮಾಣ ಸಹಜವಾಗಿ ಹೆಚ್ಚಿದ್ದರಿಂದ ದಾಟಲು ಪ್ರಯಾಸಪಡಬೇಕಾಯಿತು. ಇಕ್ಕೆಲಗಳಲ್ಲಿ ದಟ್ಟವಾದ ಕಾಡು ಮತ್ತು ಇಳಿಜಾರಿನ ಕಣಿವೆಯಿರುವುದರಿಂದ ಹಳ್ಳದಿಂದ ಮೇಲೆ ಬಂದು ನಡೆಯುವುದು ಅಸಾಧ್ಯವಾಗಿತ್ತು.


ಚಾರಣ ಶುರು ಮಾಡಿ ೧೦೦ ನಿಮಿಷಗಳು ಕಳೆದವು. ಹಳ್ಳ ಹೊಕ್ಕಿ ಒಂದು ತಾಸು ದಾಟಿಹೋಯಿತು. ’ಇಲ್ಲೇ.. ಇಲ್ಲೇ.. ಬಂತು..’ ಎನ್ನುತ್ತಾ, ಭಾಸ್ಕರ ಜಿಗಿಜಿಗಿಯುತ್ತಾ ಅನಾಯಾಸವಾಗಿ ಮುಂದೆ ಸಾಗುತ್ತಿದ್ದ. ’ಜಾರುವುದು’ ಎಂಬ ಶಬ್ದವೇ ಆತನ ನಿಘಂಟಿನಲ್ಲಿಲ್ಲವೇನೋ ಎಂಬ ಯೋಚನೆ ನನಗೆ ಬರಲಾರಂಭಿಸಿತು. ಚಾರಣದುದ್ದಕ್ಕೂ ಹನಿಹನಿ ಮಳೆ ಜಿನುಗುತ್ತಿತ್ತು. ಇಲ್ಲಿ ನಡೆದಷ್ಟು ಎಚ್ಚರಿಕೆಯಿಂದ ನಾನೆಲ್ಲೂ ನಡೆದಿಲ್ಲ. ಜಾರುವ ಬಂಡೆಗಳಿಗಿಂತ ನೀರಿನಲ್ಲೇ ಸಾಗುವುದು ಸುಲಭವೆನಿಸುತ್ತಿತ್ತು. ಆದರೆ ಅದು ಅಸಾಧ್ಯದ ಮಾತಾಗಿತ್ತು. ’ನಮ್ಮನ್ನು ಬಿಟ್ಟು ಬೇರೆ ಯಾರು ಗತಿಯಯ್ಯಾ..,’ ಎಂದು ಎಲ್ಲಾ ದಿಕ್ಕಿನಿಂದ ಆ ಬಂಡೆಗಳು, ಹಿಂದೆ ಒಬ್ಬನೇ ಬರುತ್ತಿದ್ದ ನನ್ನನ್ನು ಸುತ್ತುವರಿದು ಪಿಸುಗುಡುತ್ತಿರುವಂತೆ ಭಾಸವಾಗತೊಡಗಿತು.


ಎರಡೂ ಕಡೆಗಳಿಂದ ಕಣಿವೆಯ ಅಗಾಧ ವೃಕ್ಷಗಳು, ಹಳ್ಳದ ಉದ್ದಗಲಕ್ಕೂ ಹರಿದಾಡಿರುವ ಅವುಗಳ ಬೇರುಗಳು ಹಾಗೂ ಎಲ್ಲಾ ಗಾತ್ರಗಳ ಬಂಡೆಗಳು ಹಳ್ಳಗುಂಟದ ಈ ಚಾರಣ ಹಾದಿಗೆ ಸುಂದರ ರೂಪ ಮತ್ತು ವೈಶಿಷ್ಟ್ಯತೆಯನ್ನು ನೀಡಿದ್ದವು. ಚಾರಣದ ಹಾದಿ ಬಹಳ ಚೆನ್ನಾಗಿದ್ದರೂ, ನಿರಂತರವಾಗಿ ಬೀಳುತ್ತಿದ್ದ ಮಳೆ ಮತ್ತು ಜಾರುವ ಹಾದಿ ನನಗೆ ಕ್ಯಾಮರಾಗಳನ್ನು ಹೆಚ್ಚು ಬಳಸಲು ಅವಕಾಶ ನೀಡಲಿಲ್ಲ. ಸುಮಾರು ೨ ತಾಸುಗಳ ಬಳಿಕ, ತಿರುವೊಂದರಲ್ಲಿ ಮದುವೆಮನೆ ಜಲಧಾರೆಯ ದರ್ಶನವಾಯಿತು.


ವಿಶಾಲ ಪ್ರದೇಶದಲ್ಲಿ ಬಹಳ ಎತ್ತರಕ್ಕೆ ಹಬ್ಬಿ ನಿಂತಿರುವ ಕಲ್ಲಿನ ಮೇಲ್ಮೈಯಿಂದ ಎರಡು ದೊಡ್ಡ ಹಂತಗಳಲ್ಲಿ ಹಳ್ಳ ಧುಮುಕುತ್ತದೆ. ಮೊದಲ ಹಂತ ಸುಮಾರು ೮೦ ಅಡಿಗಳಷ್ಟು ಎತ್ತರವಿದ್ದು ಸುಮಾರು ಅಗಲವಾಗಿಯೂ ಇದೆ. ಮದುವೆಮನೆ ಜಲಧಾರೆಯ ಆಕರ್ಷಣೆಯೇ ಈ ಮೊದಲ ಹಂತ. ನೇರವಾಗಿ ಮೇಲೇರಿದ ಭಾಸ್ಕರ ಅದಾಗಲೇ ಈ ಹಂತವನ್ನು ಸಮೀಪಿಸಿದ್ದ. ವಿಶಾಲ ಬಂಡೆಯ ಮೇಲ್ಮೈಯಲ್ಲಿ ಈತನನ್ನು ಹುಡುಕುವುದೇ ದೊಡ್ಡ ಸವಾಲಾಗಿತ್ತು. ಆತ ಮೇಲೇರಿದ ವೇಗ ಮತ್ತು ರೀತಿಯನ್ನು ಕಂಡು ದಂಗಾದೆವು. ನಾವು ಯಾರೂ ಒಂದನೇ ಹಂತದೆಡೆ ತೆರಳುವ ಸಾಹಸಕ್ಕೆ ಮುಂದಾಗಲಿಲ್ಲ.


ಎರಡನೇ ಹಂತದ ಬಳಿಯಲ್ಲೇ ಕುಳಿತು ಸುಮಾರು ಹೊತ್ತು ಆನಂದಿಸಿದೆವು. ಅದೊಂದು ವಿಹಂಗಮ ದೃಶ್ಯ. ಎತ್ತರೆತ್ತರಕ್ಕೆ ಬೆಳೆದು ನಿಂತಿರುವ ವೃಕ್ಷಗಳಿಂದ ಸುತ್ತುವರಿದಿರುವ ವಿಶಾಲ ಕಲ್ಲಿನ ಮೇಲ್ಮೈ. ಇದರ ಬಲ ಪಾರ್ಶ್ವದ ತುದಿಯಿಂದ ಬೀಳುತ್ತಿರುವ ಮೊದಲ ಹಂತ, ನಂತರ ಸ್ವಲ್ಪ ದೂರ ಎಡಕ್ಕೆ ಕ್ರಮಿಸಿ ಎರಡನೇ ಹಂತವಾಗಿ ಎಡ ಪಾರ್ಶ್ವದಿಂದ ಬೀಳುತ್ತದೆ. ಒಟ್ಟಾರೆ ಸುಮಾರು ೧೩೦ ಅಡಿ ಆಗಬಹುದು.


ಹಳ್ಳ ಉಕ್ಕಿ ಹರಿಯುವಾಗ ಮದುವೆಮನೆ, ’ಮದುವೆಯ ಮನೆ’ಯಷ್ಟೇ ಸಿಂಗಾರಗೊಂಡು, ಎಲ್ಲಾ ಪಾರ್ಶ್ವಗಳಿಂದಲೂ ಮೈದುಂಬಿ, ಧುಮ್ಮಿಕ್ಕಿ ಭೋರ್ಗರೆಯುವ ಚಿತ್ರಣವನ್ನು ಕಲ್ಪಿಸಿಕೊಂಡೆವು. ಆದರೆ, ಹಳ್ಳ ಬಿಟ್ಟು ಬೇರೆ ದಾರಿಯಿರದ ಕಾರಣ ಮದುವೆಮನೆಯ ಆ ಸೊಗಸು ನೋಡಲು ಮಾನವರಿಗೆ ಅಸಾಧ್ಯ. ಮದುವೆಮನೆಯ ಆ ಕಲರವ, ಸಂಭ್ರಮದಲ್ಲಿ ಪಾಲ್ಗೊಳ್ಳಲು, ಕಾಡಿಗೆ ಹಾಗೂ ಕಾಡಿನ ಪ್ರಾಣಿಗಳಿಗೆ ಮಾತ್ರ ಆಮಂತ್ರಣ!

4 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ವರ್ಣನೆ!! ಒಂದು ರೋಚಕ ಅನುಭವ.

ಈ ಜಲಪಾತಕ್ಕೆ "ಮದುವೆಮನೆ" ಹೆಸರು ಹೇಗೆ ಬಂತು ಎಂಬುದೇ ಕುತೂಹಲ!!

Srik ಹೇಳಿದರು...

Monsoons have started on this blog!! Wow!!!

Ashok ಹೇಳಿದರು...

super place and nice photos..

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಧನ್ಯವಾದ. ಹೆಸರಿನ ಬಗ್ಗೆ ಊರವರಿಗೂ ಗೊತ್ತಿಲ್ಲ!

ಶ್ರೀಕಾಂತ್, ಅಶೋಕ್
ಧನ್ಯವಾದ.