ಭಾನುವಾರ, ಜೂನ್ 02, 2013

ಜಲಧಾರೆಗೆ ವಿಹಾರ


ಈ ಜಲಧಾರೆ ನೋಡಲು ಪ್ರಯಾಸ ಪಡಬೇಕಾಗಿಲ್ಲ. ಸದಾ ಮಂಜಿನಲ್ಲಿ ಅವಿತಿರುವ ದಾರಿಯಲ್ಲಿ ಹಳ್ಳಿಯಿಂದ ಅರ್ಧ ಗಂಟೆಯ ಆಹ್ಲಾದಕರ ನಡಿಗೆಯ ಬಳಿಕ ದಾರಿ ಜಲಧಾರೆಯ ಮೇಲ್ಭಾಗದಲ್ಲಿ ಕೊನೆಗೊಳ್ಳುತ್ತದೆ. ದಾರಿ ತೋರಿಸಲು ಹಳ್ಳಿಯ ಮೂವ್ವರು ಹದಿಹರೆಯದ ಹುಡುಗರು ನಮಗೆ ಜೊತೆಯಾದರು.


ಟಾರು ರಸ್ತೆ ಹಳ್ಳಿಯ ಸರಹದ್ದಿನಲ್ಲೇ ಕೊನೆಗೊಳ್ಳುತ್ತದೆ. ನಂತರದ ಮಣ್ಣು ರಸ್ತೆಯಲ್ಲಿ ವಾಹನ ಸಲೀಸಾಗಿ ಸಾಗಬಹುದು. ಆದರೆ ನಾವು ನಡೆಯುವುದನ್ನೇ ಆಯ್ದುಕೊಂಡೆವು. ಆಂತಹ ಸುಂದರ ಮಂಜು ಕವಿದ ವಾತಾವರಣವನ್ನು ನಡೆದು ಅನುಭವಿಸುವುದರಲ್ಲೇ ನೈಜ ಆನಂದ ಅಡಗಿರುತ್ತದೆ.


ಸ್ವಲ್ಪ ಮುಂದೆ ಸಾಗಿದಾಗ ಅಲ್ಲಿ ಕೊಳವೆಗಳನ್ನು ಬಳಸಿ ನಿರ್ಮಿಸಲಾಗಿದ್ದ ಸೇತುವೆಯೊಂದು ನೀರಿನ ರಭಸಕ್ಕೆ ಕೊಚ್ಚಿ ಹೋದ ದೃಶ್ಯ. ಹಾಗೇ ಮುಂದೆ ಸಾಗಿದಾಗ ದಾರಿಯ ಎರಡೂ ಬದಿಗಳಲ್ಲಿ ಹರಿಯುವ ನೀರಿನ ಜುಳುಜುಳು ನಿನಾದ. ಮುಖಕ್ಕೆ ರಾಚುವ ಹಿತವಾಗಿ ಬೀಸುತ್ತಿರುವ ತಣ್ಣನೆ ಗಾಳಿಯ ಸದ್ದು. ೨೦ ಅಡಿ ಮುಂದಿರುವವರನ್ನು ಮರೆಮಾಚುತ್ತಿದ್ದ ದಟ್ಟ ಮಂಜಿನ ಪರದೆ ದಾರಿಯ ವೈಭವವನ್ನು ಇಮ್ಮಡಿಗೊಳಿಸಿತ್ತು.


ಸಮೀಪದ ಕಾಡಿನಿಂದ ಹರಿದು ಬರುವ ತೊರೆಯೇ ರಸ್ತೆಯ ಮೇಲೆ ಹರಿದು ನಂತರ ಕಣಿವೆಗೆ ಧುಮುಕುತ್ತದೆ. ಸುಮಾರು ೫೦ ಅಡಿ ಎತ್ತರದಿಂದ ನೇರವಾಗಿ ಬೀಳುವ ಜಲಧಾರೆ ನಂತರ ಕಣಿವೆಯ ಆಳಕ್ಕೆ ಹಂತಹಂತವಾಗಿ ಬೀಳುತ್ತಾ ಸಾಗುತ್ತದೆ. ಜಲಧಾರೆಯ ತಳಕ್ಕೆ ತಲುಪಲು ದಾರಿಯಿಲ್ಲ. ಎರಡೂ ಪಾರ್ಶ್ವಗಳಿಂದ ಲಭ್ಯವಿರುವ ನೋಟಗಳೇ ಮನಸೂರೆಗೊಳ್ಳುತ್ತವೆ.


ಕಣಿವೆಯ ನೋಟವೂ ಅದ್ಭುತವಾಗಿದ್ದು, ಹಳ್ಳ ಕಣಿವೆಯಲ್ಲಿ ದಾರಿ ಮಾಡಿಕೊಂಡು ಮುಂದಕ್ಕೆ ಸಾಗುವ ಮತ್ತು ಕಣಿವೆಯ ಇಕ್ಕೆಲಗಳಲ್ಲಿ ರಾರಾಜಿಸುವ ಕಾಡಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿತ್ತು. ಎಲ್ಲೆಡೆ ಕ್ಯಾಮರಾಗಳು ಬ್ಯುಸಿಯಾಗಿದ್ದವು.


ಕಳೆದೆರಡು ವರ್ಷಗಳಿಂದ ದಿನಪತ್ರಿಕೆಗಳಲ್ಲಿ ಈ ಸ್ಥಳದ ಬಗ್ಗೆ ಲೇಖನಗಳು ಪ್ರಕಟಗೊಂಡ ಬಳಿಕ ಇಲ್ಲಿಗೆ ಬರುವವರ ಸಂಖ್ಯೆ ಗಣನೀಯವಾಗಿ ಏರಿದೆ. ಮೋಜು ಮಾಡಲು ಕೋಳಿ-ಸಾರಾಯಿ ಪಾರ್ಸೆಲ್ ಕಟ್ಟಿಸಿಕೊಂಡು ಬರುವವರ ದಂಡೇ ಹೆಚ್ಚಾಗಿದೆ. ಒಂದು ಅನಧಿಕೃತ ’ಪಿಕ್ನಿಕ್ ಸ್ಪಾಟ್’ ಆಗಿ ಈ ಸ್ಥಳ ವೇಗವಾಗಿ ಮಾರ್ಪಾಡುಗೊಳ್ಳುತ್ತಿದೆ. ನಮ್ಮ ಮಾರ್ಗದರ್ಶಿಗಳಾಗಿ ಬಂದಿದ್ದ ಹುಡುಗರು ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಹಳ್ಳಿಯ ಶಾಂತ ಪರಿಸರ ಇಂತಹ ಜನರ ಅಸಹನೀಯ ವರ್ತನೆಯಿಂದ ಕೆಡುತ್ತಿದೆ ಎಂಬ ಪ್ರೌಢ ಅಭಿಪ್ರಾಯ ಅವರದ್ದಾಗಿತ್ತು. ನಾವೂ ಅಂಥವರೇ ಎಂದು ಅವರು ತಿಳಿದುಕೊಂಡಿದ್ದು, ಜಲಧಾರೆ ನೋಡಿ ಹಿಂತಿರುಗುತ್ತಿದ್ದರೂ ಸಾರಾಯಿ ಬಾಟ್ಲಿ ಯಾಕೆ ಇನ್ನೂ ಹೊರಬಂದಿಲ್ಲ ಎಂದು ಅಚ್ಚರಿಪಡುತ್ತಿದ್ದರು!


ನಮ್ಮ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಆ ಹುಡುಗರು, ಈ ಗುಂಪು ಸ್ವಲ್ಪ ಭಿನ್ನ ಎಂದು ಅರಿವಾದ ಬಳಿಕ ಮನ ಬಿಚ್ಚಿ ಮಾತನಾಡಲಾರಂಭಿಸಿದ್ದರು. ಸಮೀಪದಲ್ಲೇ ಇರುವ ಇನ್ನೂ ನಾಲ್ಕು ಜಲಧಾರೆಗಳ ಮಾಹಿತಿ ಲಭ್ಯವಾಯಿತು! ಇವುಗಳಲ್ಲಿ ಎರಡನ್ನು ಸುಲಭದಲ್ಲಿ ವೀಕ್ಷಿಸಬಹುದಾದರೆ ಉಳಿದೆರಡಕ್ಕೆ ಕಾಡಿನಲ್ಲಿ ಎರಡು - ಮೂರು ತಾಸುಗಳ ಚಾರಣ ಕೈಗೊಳ್ಳಬೇಕಾಗುತ್ತದೆ. ಈ ನಾಲ್ಕೂ ಜಲಧಾರೆಗಳು ಈ ವರ್ಷದ ’ಅಜೆಂಡಾ’ದಲ್ಲಿವೆ.

5 ಕಾಮೆಂಟ್‌ಗಳು:

Santosh Bs ಹೇಳಿದರು...

Adbutha vaagide..., Rajesh avare, ee jaagada bagge nanage maahithi kalisuvira...?

Teamgsquare ಹೇಳಿದರು...

Wonderful, its always pleasure to watch the waterfalls edge of the cliff .

Aravind GJ ಹೇಳಿದರು...

ವಾವ್!! ಸೊಗಸಾದ ಜಲಧಾರೆ!!

ರಾಜೇಶ್ ನಾಯ್ಕ ಹೇಳಿದರು...

ಸಂತೋಷ್,
ಧನ್ಯವಾದ. ದಯವಿಟ್ಟು ಮಾಹಿತಿ ಕೇಳಬೇಡಿ. ನೀಡಲಾರೆ. ಕ್ಷಮೆಯಿರಲಿ.

ಧೀರಜ್, ಅರವಿಂದ್
ಧನ್ಯವಾದ.

harish ಹೇಳಿದರು...

nivu yavdu heli barthe antha ondu Place gu baridilla Yake