ಭಾನುವಾರ, ಮಾರ್ಚ್ 10, 2013

ಶಾಂತೇಶ ದೇವಾಲಯ ಮತ್ತು ರಾಮಲಿಂಗೇಶ್ವರ ದೇವಾಲಯ - ಸಾತೇನಹಳ್ಳಿ


ಸಾತೇನಹಳ್ಳಿಯಲ್ಲಿ ೧೨ ಶಾಸನಗಳು ದೊರಕಿವೆ. ಇಲ್ಲಿರುವ ದೇವಾಲಯಗಳಿಗೆ ನೀಡಿರುವ ದಾನ, ಮಾಡಿರುವ ಅಭಿವೃದ್ಧಿ ಕಾರ್ಯ, ವೀರಮರಣ ಹೊಂದಿದವರ ವಿವರ ಇತ್ಯಾದಿಗಳನ್ನು ಈ ಶಾಸನಗಳಲ್ಲಿ ತಿಳಿಸಲಾಗಿದೆ. ಪ್ರಸಕ್ತ ಕಾಲದಲ್ಲಿ ಸಾತೇನಹಳ್ಳಿ ಪ್ರಸಿದ್ಧಿ ಪಡೆದಿರುವುದು ಶಾಂತೇಶ ದೇವಾಲಯದಿಂದಾಗಿ. ಇದು ಹನುಮಂತನ ದೇವಸ್ಥಾನ ಮತ್ತು ಹನುಮನನ್ನೇ ಎಲ್ಲರೂ ಶಾಂತೇಶ ಎಂದು ಪೂಜಿಸುತ್ತಾರೆ. ಸಾತೇನಹಳ್ಳಿಗೆ ಜನರು ಆಗಮಿಸುವುದಾದರೆ ಅದು ಶಾಂತೇಶನ ದರ್ಶನಕ್ಕಾಗಿ.


ಶಾಂತೇಶ ಆ ಪರಿ ಪ್ರಸಿದ್ಧಿ ಪಡೆದಿದ್ದಾನೆಂದರೆ ಆತನ ಸನ್ನಿಧಿಯನ್ನು ಕಾಲಕ್ಕೆ ತಕ್ಕಂತೆ ನವೀಕರಣಗೊಳಿಸದಿದ್ದರೆ ಹೇಗೆ? ಗುಲಾಬಿ ಬಣ್ಣ ಹೊಡೆದು ದೇವಾಲಯವನ್ನು ವೈಭವೀಕರಣಗೊಳಿಸಲಾಗಿದೆ. ಸಾತೇನಹಳ್ಳಿಗೆ ಬರುವ ಬಸ್ಸಿಗೆ ಶಾಂತೇಶ ದೇವಸ್ಥಾನವೇ ನಿಲುಗಡೆ. ಸುತ್ತಮುತ್ತಲಿನ ಜಿಲ್ಲೆಗಳ ಜನರು ಸಾಮಾನ್ಯವಾಗಿ ಒಂದು ದಿನದಲ್ಲಿ ಸಾತೇನಹಳ್ಳಿ ಶಾಂತೇಶ, ಕದರಮಂಡಲಗಿ ಕಾಂತೇಶ ಮತ್ತು ಶಿಕಾರಿಪುರ ಹನುಮಂತ, ಹೀಗೆ ಈ ಮೂರು ಹನುಮಂತನ ದೇವಾಲಯಗಳನ್ನು ಸಂದರ್ಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.


ಮೂಲ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಮಾತ್ರ ಹೊಂದಿತ್ತು. ಈಗ ಭರ್ಜರಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲಿರುವ ಕದಂಬ ಶೈಲಿಯ ಗೋಪುರಕ್ಕೂ ಬಣ್ಣ ಬಳಿಯಲಾಗಿದೆ. ಇತಿಹಾಸಕಾರರ ಪ್ರಕಾರ ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಾಗಿದ್ದು, ಗರ್ಭಗುಡಿಯಲ್ಲಿರುವ ಹನುಮಂತನ ವಿಗ್ರಹ ವಿಜಯನಗರ ಅರಸರ ಕಾಲದ್ದಾಗಿದೆ.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಈ ಕಂಬಗಳ ಮೊದಲು ನೆಲದಲ್ಲಿ ಇಬ್ಬರು ವ್ಯಕ್ತಿಗಳು ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಕೆತ್ತನೆಯಿದೆ. ನವರಂಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣಪತಿ ಮತ್ತು ಮೈಲಾರಲಿಂಗ ದೇವರ ಮೂರ್ತಿಗಳಿವೆ.


ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹೊಂದಿದ್ದು ಲಲಾಟದಲ್ಲಿದ್ದ ಕೆತ್ತನೆ ನಶಿಸಿಹೋಗಿದೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಗಣೇಶ, ಬ್ರಹ್ಮ, ಶಿವ(ನಟರಾಜ), ಸೂರ್ಯ ಮತ್ತು ಮಹಿಷಮರ್ದಿನಿಯ ಕೆತ್ತನೆಯಿದೆ. ಶಿವನ ಪಾದದ ಬಳಿ ಒಂದು ಪಾರ್ಶ್ವದಲ್ಲಿ ನಂದಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ವಾದ್ಯಗಾರನೊಬ್ಬನಿದ್ದಾನೆ. ಶಿವನ ಇಕ್ಕೆಲಗಳಲ್ಲಿ ಇರುವ ದೇವಿಗಳ ಬಗ್ಗೆ ಮಾಹಿತಿ ಸಿಗಲಿಲ್ಲ. ಈ ಸಂಪೂರ್ಣ ಶಿಲ್ಪವು ಮಕರತೋರಣದಿಂದ ಅಲಂಕೃತಗೊಂಡಿದೆ. ಒಂದು ಮಕರದ ಮೆಲೆ ಯಕ್ಷಿ ಮತ್ತು ಇನ್ನೊಂದು ಮಕರದ ಮೇಲೆ ಯಕ್ಷ ಆಸೀನರಾಗಿದ್ದಾರೆ.


ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಹನುಮಂತನ ಕೆತ್ತನೆಯಿದೆ. ಅಂತರಾಳದ ದ್ವಾರದ ಮೇಲಿರುವ ಕೆತ್ತನೆಯನ್ನೇ ಇಲ್ಲಿ ಪುನರಾವರ್ತಿಸಲಾಗಿದೆ.


ರಾಮಲಿಂಗೇಶ್ವರ ದೇವಾಲಯವು ನಂದಿಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಗುಂಡೇಶ್ವರ ದೇವಾಲಯವೆಂದು ಕರೆಯಲಾಗಿದೆ. ದೇವಾಲಯದ ದ್ವಾರಕ್ಕೆ, ಗರ್ಭಗುಡಿಯ ಹೊರಗೋಡೆಗೆ ಮತ್ತು ಗೋಪುರಕ್ಕೆ ಸುಣ್ಣ ಬಳಿಯಲಾಗಿದೆ. ಊರಲ್ಲಿ ದೊರೆತ ಇಸವಿ ೧೧೧೪ರ ಶಿಲಾಶಾಸನವೊಂದರಲ್ಲಿ ಈ ದೇವಾಲಯದ ಶಿಖರದ ಮೇಲೆ ಕಲಶವನ್ನು ಪ್ರತಿಷ್ಠಾಪಿಸಿದ ಬಗ್ಗೆ ಉಲ್ಲೇಖವಿದೆ.


ನವರಂಗದಲ್ಲಿ ಚಾಲುಕ್ಯ ಕಾಲದ ನಾಲ್ಕು ಕಂಬಗಳಿವೆ. ಎರಡು ದೇವಕೋಷ್ಠಗಳಲ್ಲಿ ಭಗ್ನಗೊಂಡಿರುವ ಮೂರ್ತಿಗಳಿವೆ. ಅಂತರಾಳದ ದ್ವಾರವು ಕೆತ್ತನೆರಹಿತ ಮೂರು ಶಾಖೆಗಳನ್ನು (ತ್ರಿಶಾಖ) ಮತ್ತು ಜಾಲಂಧ್ರಗಳನ್ನು ಹೊಂದಿದೆ. ಗರ್ಭಗುಡಿಯ ದ್ವಾರವು ಪಂಚಶಾಖ ತರಹದಾಗಿದ್ದರೂ ಯಾವುದೇ ಕೆತ್ತನೆಗಳನ್ನು ಹೊಂದಿಲ್ಲ. ಲಲಾಟದಲ್ಲಿ ಗಜಲಕ್ಷ್ಮೀಯ ಅಸ್ಪಷ್ಟ ಕೆತ್ತನೆಯಿದೆ.


ದೇವಾಲಯದ ಗರ್ಭಗುಡಿಯನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಉಳಿದ ಭಾಗಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿ ಮತ್ತು ಶಿವಲಿಂಗವನ್ನು ರಾಷ್ಟ್ರಕೂಟರ ಕಾಲದ್ದು ಎಂದು ಅಭಿಪ್ರಾಯಪಡಲಾಗಿದೆ.


ಈ ದೇವಾಲಯದ ಬಳಿ ೩ ವೀರಗಲ್ಲುಗಳನ್ನು ಇಡಲಾಗಿದೆ. ರಾಮಲಿಂಗೇಶ್ವರನಿಗೆ ದಿನಾಲೂ ಪೂಜೆ ನಡೆಯುತ್ತದೆ. ದೇವಾಲಯದ ಒಳಗಡೆ ಸ್ವಚ್ಛವಾಗಿರಿಸಲಾಗಿದೆ. ಸಮೀಪದವರೆಗೂ ಮನೆಗಳು ಇರುವ ಕಾರಣ ಪ್ರಾಂಗಣ ರಚಿಸುವುದಕ್ಕೆ ಪ್ರಾಚ್ಯ ವಸ್ತು ಇಲಾಖೆಗೆ ಸಾಧ್ಯವಾಗಿಲ್ಲ.ಊರ ಹೊರವಲಯದಲ್ಲಿರುವ ಬಸವಣ್ಣ ದೇವಾಲಯದಲ್ಲಿ ನಂದಿಯ ಎರಡು ಕುಬ್ಜ ಮೂರ್ತಿಗಳನ್ನು ಇಡಲಾಗಿದೆ. ನಂದಿಗಳ ಹಿಂದೆ ಇರುವ ಕಲ್ಲಿನ ಗೋಡೆ ಮಾತ್ರ ಉಳಿದುಕೊಂಡಿದೆ. ದೇವಾಲಯಕ್ಕಿಂತ ಮಿಗಿಲಾಗಿ ಇದೊಂದು ದಾಸ್ತಾನುಕೇಂದ್ರದಂತೆ ಕಾಣುತ್ತದೆ! ಬಸವಣ್ಣನನ್ನು ದಿನಾಲೂ ಪೂಜಿಸಲಾಗುತ್ತದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

4 ಕಾಮೆಂಟ್‌ಗಳು:

Team G Square ಹೇಳಿದರು...

Nice to know about this place .

ರಾಜೇಶ್ ನಾಯ್ಕ ಹೇಳಿದರು...

ಧೀರಜ್ ಅಮೃತಾ,
ಧನ್ಯವಾದ.

ಅನಾಮಧೇಯ ಹೇಳಿದರು...

Rajesh,

Tumbaa dinagala nantara nim page nodide. Nimma baraha, suttaata ella hasiraagiruvudu kandu sikkapatte khushi aaytu. keep going!

-Alaka

ರಾಜೇಶ್ ನಾಯ್ಕ ಹೇಳಿದರು...

ಅಲಕಾ,
ಈ ಬ್ಲಾಗನ್ನು ನೆನಪಿನಲ್ಲಿಟ್ಟುಕೊಂಡಿದ್ದಕ್ಕೆ ಮತ್ತು ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದ.