ಭಾನುವಾರ, ಮಾರ್ಚ್ 31, 2013

ಚನ್ನಕೇಶವ ದೇವಾಲಯ - ಹುಲ್ಲೇಕೆರೆ


ಹೊಯ್ಸಳ ದೇವಾಲಯಗಳ ಪೈಕಿ ಹುಲ್ಲೇಕೆರೆ ದೇವಾಲಯದ ’ಹೊಯ್ಸಳ ಲಾಂಛನ’ದ ಕೆತ್ತನೆ ಬಹಳ ವಿಶಿಷ್ಟವಾದುದು ಎಂದು ಇತಿಹಾಸ ತಜ್ಞರ ಅಭಿಪ್ರಾಯ. ಎಲ್ಲೆಡೆ ಹೊಯ್ಸಳ ದೇವಾಲಯಗಳಲ್ಲಿ ಗಮನಿಸಿದರೆ ಸಿಂಹದ ಬಾಲ ವೃತ್ತಾಕಾರವಾಗಿ ಸುರುಳಿ ಸುತ್ತುವಲ್ಲಿ ಒಂದು ಪದ್ಮವನ್ನು ಕೆತ್ತಲಾಗಿರುತ್ತದೆ. ಆದರೆ ಇಲ್ಲಿ ಮಹಿಷಾಸುರಮರ್ದಿನಿಯ ಕೆತ್ತನೆಯಿದೆ. ಸಳ ಸಿಂಹದೊಂದಿಗೆ ಹೋರಾಡುವ ಘಟನೆಗೆ ಉಪಮೆಯಾಗಿ ಈ ಮಹಿಷಾಸುರಮರ್ದಿನಿ ಕೆತ್ತನೆಯನ್ನು (ದುಷ್ಟ ಸಂಹಾರ) ಕೆತ್ತಲಾಗಿದೆ ಎಂಬ ಅಭಿಪ್ರಾಯವಿದೆ. ದುಷ್ಟರನ್ನು ಸದೆಬಡಿದು ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ನೆಲೆಮಾಡುವುದು ಹೊಯ್ಸಳ ಆಡಳಿತದ ಗುರಿಯಾಗಿತ್ತು ಎಂಬುವುದನ್ನು ಈ ರೀತಿಯಾಗಿ ತೋರಿಸಲಾಗಿದೆ.


ಬೇರೆಲ್ಲೂ ಇಷ್ಟು ನೈಜ ಅನುಭವ ನೀಡುವ ರೀತಿಯಲ್ಲಿ ಸಳನು ಸಿಂಹವನ್ನು ಕೊಲ್ಲುವ ಕೆತ್ತನೆಯನ್ನು ಮಾಡಲಾಗಿಲ್ಲ ಎಂದು ಹೇಳಲಾಗುತ್ತದೆ. ಸಳನ ಬಲಗೈ ತುಂಡಾಗಿದ್ದರೂ, ತನ್ನ ವಿರೂಪ ರೂಪದಲ್ಲೇ ಆಭರಣಧಾರಿ ಸಳ ಅದೆಷ್ಟು ಆಕರ್ಷಕನಾಗಿ ಕಾಣುತ್ತಿದ್ದಾನೆಂದರೆ, ಆತನ ಕಲ್ಲಿನ ರೂಪವನ್ನು ನೋಡುತ್ತಲೇ ಸುಮಾರು ಸಮಯ ಕಳೆದೆ. ಸಳನ ಗಡ್ಡವನ್ನು ಈ ಕೆತ್ತನೆಯಲ್ಲಿ ಚೆನ್ನಾಗಿ ’ಟ್ರಿಮ್’ ಮಾಡಿರುವಂತೆ ಬಿಂಬಿಸಲಾಗಿದೆ.


ದಿಬ್ಬದ ಮೇಲೆ ಇರುವ ಹುಲ್ಲೇಕೆರೆಯ ಚನ್ನಕೇಶವ ದೇವಾಲಯದ ಸುತ್ತಲೂ ೧೨ ಅಡಿ ಎತ್ತರದ ಗೋಡೆ ಇದೆ. ಹೊರಗಿನಿಂದ ಪ್ರಾಂಗಣದಂತೆ ತೋರುವ ಗೋಡೆ, ಒಳಗಡೆ ದೇವಾಲಯದ ಸುತ್ತಲೂ ಇರುವ ಪೌಳಿ(ಕೈಸಾಲೆ)ಯಾಗಿದೆ. ಹೊರಗೆ ಅತಿ ಸಮೀಪದವರೆಗೂ ಮನೆಗಳಿದ್ದರೆ, ಒಳಗಡೆ ಎಲ್ಲವೂ ಸ್ವಚ್ಛ ಮತ್ತು ನಿರ್ಮಲ. ಯಾರ ಉಪದ್ರವ ಮತ್ತು ಕಿರುಕುಳವಿಲ್ಲದೆ, ಚನ್ನಕೇಶವ ತನ್ನ ಸಾಮ್ರಾಜ್ಯದಲ್ಲಿ ನಿರುಮ್ಮಳನಾಗಿದ್ದಾನೆ ಎಂದೆನಿಸಿತು. ಎಲ್ಲೆಡೆ ಈ ರೀತಿಯ ಸೌಭಾಗ್ಯ ಚನ್ನಕೇಶವನಿಗೆ ದೊರಕುವುದಿಲ್ಲ. ಹುಲ್ಲೇಕೆರೆಯ ಚನ್ನಕೇಶವ ಪುಣ್ಯವಂತ!


ಮುಖಮಂಟಪದ ಪಾರ್ಶ್ವದಲ್ಲಿರಿಸಲಾಗಿರುವ ಶಾಸನದ ಪ್ರಕಾರ, ಈ ದೇವಾಲಯವನ್ನು ಇಸವಿ ೧೧೬೩ರಲ್ಲಿ ಹೊಯ್ಸಳ ದೊರೆ ಒಂದನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಆತನ ದಂಡನಾಯಕನಾಗಿದ್ದ ಹೆಗ್ಗಡೆ ಬೂಚಿರಾಜನು ನಿರ್ಮಿಸಿದನು. ಹೆಚ್ಚಿನ ಹೊಯ್ಸಳ ದೇವಾಲಯಗಳನ್ನು ಭೂಮಟ್ಟದಿಂದ ಸುಮಾರು ೨-೩ ಅಡಿ ಎತ್ತರವಿರುವ ಜಗಲಿಯ ಮೇಲೆ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ದೇವಾಲಯ ದಿಬ್ಬವೊಂದರ ಮೇಲೆ ಸ್ಥಿತಗೊಂಡಿರುವುದರಿಂದ, ಜಗಲಿಯ ನಿರ್ಮಾಣ ಕಾಣಬರುವುದಿಲ್ಲ. ಜಗಲಿಯೇ ಇಲ್ಲವಾದ ಕಾರಣ ದೇವಾಲಯದ ಸುತ್ತಲೂ ಪ್ರದಕ್ಷಿಣಾ ಪಥವೂ ಇಲ್ಲ. ದೇವಾಲಯ ಮತ್ತು ಪ್ರಾಂಗಣದ ಗೋಡೆಯ (ಕೈಸಾಲೆಯ) ನಡುವಿನ ಅಂತರವೇ ಪ್ರದಕ್ಷಿಣಾ ಪಥ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನೊಳಗೊಂಡಿದ್ದು ಪೂರ್ವಾಭಿಮುಖವಾಗಿರುವ ಏಕಕೂಟ ದೇವಾಲಯವಿದು. ಮುಖಮಂಟಪದ ಆರಂಭದಲ್ಲೇ ಎರಡು ಮುದ್ದಾದ ಆನೆಗಳಿವೆ. ಈ ಆನೆಗಳ ಸೊಂಡಿಲುಗಳನ್ನು ಕೇಸರೀಕರಣಗೊಳಿಸಲಾಗಿದೆ! ಮುಖಮಂಟಪದಲ್ಲಿ ದ್ವಾರಪಾಲಕರು, ವಾದ್ಯಗಾರರು ಮತ್ತು ನರ್ತಕಿಯರ ಕೆತ್ತನೆಗಳೂ ಇವೆ. ನವರಂಗದಲ್ಲಿ ೪ ಕಂಬಗಳಿದ್ದು, ಮೇಲ್ಗಡೆ ಸುಂದರ ಕೆತ್ತನೆಗಳಿವೆ. ಈ ಕೆತ್ತನೆಗಳಿಗೆ ’ಭುವನೇಶ್ವರಿಗಳು’ ಎನ್ನಲಾಗುತ್ತದೆ. ಒಟ್ಟು ೯ ಭುವನೇಶ್ವರಿಗಳಿದ್ದು, ನಡುವೆ ಇರುವ ಭುವನೇಶ್ವರಿ ಕಮಲಾಕಾರವಾಗಿದೆ.


ಗರ್ಭಗುಡಿಯ ದ್ವಾರವು ೫ ತೋಳುಗಳು, ದ್ವಾರಪಾಲಕರು ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯನ್ನು ಹೊಂದಿದೆ. ಗರ್ಭಗುಡಿಯೊಳಗೆ ಗರುಡ ಪೀಠದ ಮೇಲೆ ಶಂಖ ಚಕ್ರ ಗದಾ ಪದ್ಮಧಾರಿಯಾಗಿರುವ ೬ ಅಡಿ ಎತ್ತರದ ಚನ್ನಕೇಶವನ ವಿಗ್ರಹವಿದೆ. ವಿಗ್ರಹದ ಎರಡು ಮಗ್ಗಲುಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ ಹಾಗೂ ಪ್ರಭಾವಳಿ ಕೆತ್ತನೆಯಲ್ಲಿ ವಿಷ್ಣುವಿನ ೧೦ ಅವತಾರಗಳನ್ನು ತೋರಿಸಲಾಗಿದೆ. ಪೀಠದ ಮುಂಭಾಗದಲ್ಲಿ ಗರುಡನ ಸಣ್ಣ ಮೂರ್ತಿಯಿದೆ. ಕಾಲನ ದಾಳಿಗೆ ಚನ್ನಕೇಶವನ ನೈಜರೂಪ ಬಲಿಯಾದಂತೆ ತೋರಿದರೂ ಆಕರ್ಷಕವಾಗಿಯೇ ಕಾಣುತ್ತದೆ.


ದೇವಾಲಯದ ಹೊರಗೋಡೆಯಲ್ಲಿ ಒಟ್ಟು ೨೫ ಶಿಲ್ಪಗಳಿವೆ. ಇವೆಲ್ಲವೂ ವಿಷ್ಣುವಿನ ವಿವಿಧ ರೂಪಗಳು. ಶಂಖಚಕ್ರಗದಾಪದ್ಮಗಳು ಎಲ್ಲಾ ಮೂರ್ತಿಗಳಲ್ಲಿ ಬೇರೆ ಬೇರೆ ಕೈಗಳಲ್ಲಿರುವುದನ್ನು ಗಮನಿಸಬಹುದು. ಈ ಕೆತ್ತನೆಗಳ ಕೆಳಗೆ ಅವುಗಳ ಹೆಸರನ್ನು (ವಿಷ್ಣುವಿನ ಹಲವು ಹೆಸರುಗಳು) ಬರೆಯಲಾಗಿದೆ.


ದೇವಾಲಯದ ಕೈಪಿಡಿಯಲ್ಲೂ (ಮೇಲ್ಛಾವಣಿಯ ಸುತ್ತಲೂ ಇರುವ ಕೆತ್ತನೆಗಳು) ಉತ್ಕೃಷ್ಟ ಕೆತ್ತನೆಗಳಿವೆ. ಕೈಪಿಡಿಯನ್ನು ದೇವಾಲಯದ ಕಿರೀಟವೆನ್ನಲಾಗುತ್ತದೆ. ದೇವಾಲಯದ ಮುಂಭಾಗದಲ್ಲಿರುವ ಕೈಪಿಡಿಯಲ್ಲಿ ಕಾಳಿಂಗಮರ್ದನದ ಸುಂದರ ಕೆತ್ತನೆ ಮತ್ತು ಬಲಪಾರ್ಶ್ವದಲ್ಲಿರುವ ಕೈಪಿಡಿಯಲ್ಲಿ ಹಿರಣ್ಯಕಷಿಪುವಿನ ಕೆತ್ತನೆಯಿದೆ. ಎಡಪಾರ್ಶ್ವದಲ್ಲಿರುವ ಕೈಪಿಡಿಯಲ್ಲಿನ ಕೆತ್ತನೆ ಅದೇನೆಂದು ತಿಳಿಯಲಿಲ್ಲ.


ದೇವಾಲಯದ ಗೋಪುರವನ್ನು ಮೂರು ತಾಳಗಳಲ್ಲಿ ನಿರ್ಮಿಸಲಾಗಿದ್ದು, ಮೇಲೊಂದು ಪದ್ಮವನ್ನಿರಿಸಿ ಅದರ ಮೇಲೆ ಸುಂದರ ಕಲಶವನ್ನು ಸ್ಥಾಪಿಸಲಾಗಿದೆ. ಕಲಶದ ಸೌಂದರ್ಯವಂತೂ ಮನಸೂರೆಗೊಂಡಿತು. ಗೋಪುರದ ನಾಲ್ಕೂ ಪಾರ್ಶ್ವಗಳಲ್ಲಿಯೂ ಕೆತ್ತನೆಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ವೇಣುಗೋಪಾಲ, ಲಕ್ಷ್ಮೀನರಸಿಂಹ, ಗೊಲ್ಲ ಕೃಷ್ಣ, ನರಸಿಂಹ, ಶಂಖಚಕ್ರಗದಾಪದ್ಮಧಾರಿಯಾಗಿರುವ ವಿಷ್ಣುವಿನ ಹಲವು ರೂಪದ ಮೂರ್ತಿಗಳು, ಇತ್ಯಾದಿ ಕೆತ್ತನೆಗಳಿಂದ ಗೋಪುರವು ಅಲಂಕೃತಗೊಂಡಿದೆ.


ಈಗ ಅತಿ ವಿರಳವಾಗಿ ಕಾಣಸಿಗುವ ಶಿಖರ ಲಾಂಛನ ಫಲಕವೂ ಈ ದೇವಾಲಯದಲ್ಲಿ ಉಳಿದುಕೊಂಡಿದೆ. ಸಳನ ಕೆತ್ತನೆಯ ಮುಂದೆ ಇರುವ ಈ ಫಲಕದಲ್ಲಿ ಚಾಮರಧಾರಿಯರು, ಗರುಡ ಮತ್ತು ಪ್ರಭಾವಳಿ ಕೆತ್ತನೆಗಳಿಂದ ಸುತ್ತುವರಿದ ಚನ್ನಕೇಶವನ ಸುಂದರ ಕೆತ್ತನೆಯಿದೆ.


ಈ ದೇವಾಲಯದ ಗೋಪುರವನ್ನು ಇವತ್ತಿನವರೆಗೂ ಹಾನಿಯಾಗದೆ ಉಳಿದುರುವ ಪರಿಪೂರ್ಣ ಗೋಪುರ ಎನ್ನಬಹುದು. ಹೊಯ್ಸಳ ಲಾಂಛನದ ಅದ್ಭುತ ಕೆತ್ತನೆ, ಮೂರು ತಾಳಗಳು ಮತ್ತು ತೆಲೆಕೆಳಗಾಗಿರುವ ಪದ್ಮಗಳ ಇರುವಿಕೆ, ಇವುಗಳ ತುಂಬಾ ಇರುವ ಅದ್ಭುತ ಕೆತ್ತನೆ ಕೆಲಸ, ಸುಂದರ ಕಲಶ ಮತ್ತು ಶಿಖರ ಲಾಂಛನ ಫಲಕ ಇವೆಲ್ಲವೂ ಒಂದೇ ದೇವಸ್ಥಾನದಲ್ಲಿ ಕಾಲನ ಮತ್ತು ಮತಾಂಧರ ದಾಳಿಯನ್ನು ಎದುರಿಸಿ ಇನ್ನೂ ಉಳಿದುರುವುದೇ ಒಂದು ಸೋಜಿಗ. ನಿಜವಾಗಿಯೂ ಈ ದೇವಾಲಯ ವೈಶಿಷ್ಟ್ಯಗಳ ಆಗರ.

ಭಾನುವಾರ, ಮಾರ್ಚ್ 10, 2013

ಶಾಂತೇಶ ದೇವಾಲಯ ಮತ್ತು ರಾಮಲಿಂಗೇಶ್ವರ ದೇವಾಲಯ - ಸಾತೇನಹಳ್ಳಿ


ಸಾತೇನಹಳ್ಳಿಯಲ್ಲಿ ೧೨ ಶಾಸನಗಳು ದೊರಕಿವೆ. ಇಲ್ಲಿರುವ ದೇವಾಲಯಗಳಿಗೆ ನೀಡಿರುವ ದಾನ, ಮಾಡಿರುವ ಅಭಿವೃದ್ಧಿ ಕಾರ್ಯ, ವೀರಮರಣ ಹೊಂದಿದವರ ವಿವರ ಇತ್ಯಾದಿಗಳನ್ನು ಈ ಶಾಸನಗಳಲ್ಲಿ ತಿಳಿಸಲಾಗಿದೆ. ಪ್ರಸಕ್ತ ಕಾಲದಲ್ಲಿ ಸಾತೇನಹಳ್ಳಿ ಪ್ರಸಿದ್ಧಿ ಪಡೆದಿರುವುದು ಶಾಂತೇಶ ದೇವಾಲಯದಿಂದಾಗಿ. ಇದು ಹನುಮಂತನ ದೇವಸ್ಥಾನ ಮತ್ತು ಹನುಮನನ್ನೇ ಎಲ್ಲರೂ ಶಾಂತೇಶ ಎಂದು ಪೂಜಿಸುತ್ತಾರೆ. ಸಾತೇನಹಳ್ಳಿಗೆ ಜನರು ಆಗಮಿಸುವುದಾದರೆ ಅದು ಶಾಂತೇಶನ ದರ್ಶನಕ್ಕಾಗಿ.


ಶಾಂತೇಶ ಆ ಪರಿ ಪ್ರಸಿದ್ಧಿ ಪಡೆದಿದ್ದಾನೆಂದರೆ ಆತನ ಸನ್ನಿಧಿಯನ್ನು ಕಾಲಕ್ಕೆ ತಕ್ಕಂತೆ ನವೀಕರಣಗೊಳಿಸದಿದ್ದರೆ ಹೇಗೆ? ಗುಲಾಬಿ ಬಣ್ಣ ಹೊಡೆದು ದೇವಾಲಯವನ್ನು ವೈಭವೀಕರಣಗೊಳಿಸಲಾಗಿದೆ. ಸಾತೇನಹಳ್ಳಿಗೆ ಬರುವ ಬಸ್ಸಿಗೆ ಶಾಂತೇಶ ದೇವಸ್ಥಾನವೇ ನಿಲುಗಡೆ. ಸುತ್ತಮುತ್ತಲಿನ ಜಿಲ್ಲೆಗಳ ಜನರು ಸಾಮಾನ್ಯವಾಗಿ ಒಂದು ದಿನದಲ್ಲಿ ಸಾತೇನಹಳ್ಳಿ ಶಾಂತೇಶ, ಕದರಮಂಡಲಗಿ ಕಾಂತೇಶ ಮತ್ತು ಶಿಕಾರಿಪುರ ಹನುಮಂತ, ಹೀಗೆ ಈ ಮೂರು ಹನುಮಂತನ ದೇವಾಲಯಗಳನ್ನು ಸಂದರ್ಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.


ಮೂಲ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಮಾತ್ರ ಹೊಂದಿತ್ತು. ಈಗ ಭರ್ಜರಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲಿರುವ ಕದಂಬ ಶೈಲಿಯ ಗೋಪುರಕ್ಕೂ ಬಣ್ಣ ಬಳಿಯಲಾಗಿದೆ. ಇತಿಹಾಸಕಾರರ ಪ್ರಕಾರ ಇದು ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವಾಗಿದ್ದು, ಗರ್ಭಗುಡಿಯಲ್ಲಿರುವ ಹನುಮಂತನ ವಿಗ್ರಹ ವಿಜಯನಗರ ಅರಸರ ಕಾಲದ್ದಾಗಿದೆ.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಈ ಕಂಬಗಳ ಮೊದಲು ನೆಲದಲ್ಲಿ ಇಬ್ಬರು ವ್ಯಕ್ತಿಗಳು ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಕೆತ್ತನೆಯಿದೆ. ನವರಂಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣಪತಿ ಮತ್ತು ಮೈಲಾರಲಿಂಗ ದೇವರ ಮೂರ್ತಿಗಳಿವೆ.


ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹೊಂದಿದ್ದು ಲಲಾಟದಲ್ಲಿದ್ದ ಕೆತ್ತನೆ ನಶಿಸಿಹೋಗಿದೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ಗಣೇಶ, ಬ್ರಹ್ಮ, ಶಿವ(ನಟರಾಜ), ಸೂರ್ಯ ಮತ್ತು ಮಹಿಷಮರ್ದಿನಿಯ ಕೆತ್ತನೆಯಿದೆ. ಶಿವನ ಪಾದದ ಬಳಿ ಒಂದು ಪಾರ್ಶ್ವದಲ್ಲಿ ನಂದಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ವಾದ್ಯಗಾರನೊಬ್ಬನಿದ್ದಾನೆ. ಶಿವನ ಇಕ್ಕೆಲಗಳಲ್ಲಿ ಇರುವ ದೇವಿಗಳ ಬಗ್ಗೆ ಮಾಹಿತಿ ಸಿಗಲಿಲ್ಲ. ಈ ಸಂಪೂರ್ಣ ಶಿಲ್ಪವು ಮಕರತೋರಣದಿಂದ ಅಲಂಕೃತಗೊಂಡಿದೆ. ಒಂದು ಮಕರದ ಮೆಲೆ ಯಕ್ಷಿ ಮತ್ತು ಇನ್ನೊಂದು ಮಕರದ ಮೇಲೆ ಯಕ್ಷ ಆಸೀನರಾಗಿದ್ದಾರೆ.


ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಹನುಮಂತನ ಕೆತ್ತನೆಯಿದೆ. ಅಂತರಾಳದ ದ್ವಾರದ ಮೇಲಿರುವ ಕೆತ್ತನೆಯನ್ನೇ ಇಲ್ಲಿ ಪುನರಾವರ್ತಿಸಲಾಗಿದೆ.


ರಾಮಲಿಂಗೇಶ್ವರ ದೇವಾಲಯವು ನಂದಿಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಗುಂಡೇಶ್ವರ ದೇವಾಲಯವೆಂದು ಕರೆಯಲಾಗಿದೆ. ದೇವಾಲಯದ ದ್ವಾರಕ್ಕೆ, ಗರ್ಭಗುಡಿಯ ಹೊರಗೋಡೆಗೆ ಮತ್ತು ಗೋಪುರಕ್ಕೆ ಸುಣ್ಣ ಬಳಿಯಲಾಗಿದೆ. ಊರಲ್ಲಿ ದೊರೆತ ಇಸವಿ ೧೧೧೪ರ ಶಿಲಾಶಾಸನವೊಂದರಲ್ಲಿ ಈ ದೇವಾಲಯದ ಶಿಖರದ ಮೇಲೆ ಕಲಶವನ್ನು ಪ್ರತಿಷ್ಠಾಪಿಸಿದ ಬಗ್ಗೆ ಉಲ್ಲೇಖವಿದೆ.


ನವರಂಗದಲ್ಲಿ ಚಾಲುಕ್ಯ ಕಾಲದ ನಾಲ್ಕು ಕಂಬಗಳಿವೆ. ಎರಡು ದೇವಕೋಷ್ಠಗಳಲ್ಲಿ ಭಗ್ನಗೊಂಡಿರುವ ಮೂರ್ತಿಗಳಿವೆ. ಅಂತರಾಳದ ದ್ವಾರವು ಕೆತ್ತನೆರಹಿತ ಮೂರು ಶಾಖೆಗಳನ್ನು (ತ್ರಿಶಾಖ) ಮತ್ತು ಜಾಲಂಧ್ರಗಳನ್ನು ಹೊಂದಿದೆ. ಗರ್ಭಗುಡಿಯ ದ್ವಾರವು ಪಂಚಶಾಖ ತರಹದಾಗಿದ್ದರೂ ಯಾವುದೇ ಕೆತ್ತನೆಗಳನ್ನು ಹೊಂದಿಲ್ಲ. ಲಲಾಟದಲ್ಲಿ ಗಜಲಕ್ಷ್ಮೀಯ ಅಸ್ಪಷ್ಟ ಕೆತ್ತನೆಯಿದೆ.


ದೇವಾಲಯದ ಗರ್ಭಗುಡಿಯನ್ನು ಇಟ್ಟಿಗೆಯಿಂದ ನಿರ್ಮಿಸಲಾಗಿದ್ದು, ಉಳಿದ ಭಾಗಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಗರ್ಭಗುಡಿ ಮತ್ತು ಶಿವಲಿಂಗವನ್ನು ರಾಷ್ಟ್ರಕೂಟರ ಕಾಲದ್ದು ಎಂದು ಅಭಿಪ್ರಾಯಪಡಲಾಗಿದೆ.


ಈ ದೇವಾಲಯದ ಬಳಿ ೩ ವೀರಗಲ್ಲುಗಳನ್ನು ಇಡಲಾಗಿದೆ. ರಾಮಲಿಂಗೇಶ್ವರನಿಗೆ ದಿನಾಲೂ ಪೂಜೆ ನಡೆಯುತ್ತದೆ. ದೇವಾಲಯದ ಒಳಗಡೆ ಸ್ವಚ್ಛವಾಗಿರಿಸಲಾಗಿದೆ. ಸಮೀಪದವರೆಗೂ ಮನೆಗಳು ಇರುವ ಕಾರಣ ಪ್ರಾಂಗಣ ರಚಿಸುವುದಕ್ಕೆ ಪ್ರಾಚ್ಯ ವಸ್ತು ಇಲಾಖೆಗೆ ಸಾಧ್ಯವಾಗಿಲ್ಲ.



ಊರ ಹೊರವಲಯದಲ್ಲಿರುವ ಬಸವಣ್ಣ ದೇವಾಲಯದಲ್ಲಿ ನಂದಿಯ ಎರಡು ಕುಬ್ಜ ಮೂರ್ತಿಗಳನ್ನು ಇಡಲಾಗಿದೆ. ನಂದಿಗಳ ಹಿಂದೆ ಇರುವ ಕಲ್ಲಿನ ಗೋಡೆ ಮಾತ್ರ ಉಳಿದುಕೊಂಡಿದೆ. ದೇವಾಲಯಕ್ಕಿಂತ ಮಿಗಿಲಾಗಿ ಇದೊಂದು ದಾಸ್ತಾನುಕೇಂದ್ರದಂತೆ ಕಾಣುತ್ತದೆ! ಬಸವಣ್ಣನನ್ನು ದಿನಾಲೂ ಪೂಜಿಸಲಾಗುತ್ತದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ