ಭಾನುವಾರ, ನವೆಂಬರ್ 11, 2012

ತಿರುಪತೇಶ್ವರ ದೇವಾಲಯ - ಹಾನಗಲ್


ತೋಟಗಾರಿಕಾ ಇಲಾಖೆಯ ಪ್ರಾಂಗಣದೊಳಗೆ ಇರುವ ತಿರುಪತೇಶ್ವರ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರಗೊಳಿಸಿ ಮೂಲ ರೂಪಕ್ಕೆ ತಂದಿದೆ. ಮೊದಲು ಹಾನಗಲ್‍ನಲ್ಲಿದ್ದ ಕೋಟೆಯ ಪ್ರದೇಶವಾಗಿರುವ ಸ್ಥಳದಲ್ಲೇ ಈಗ ತೋಟಗಾರಿಕಾ ಇಲಾಖೆಯಿದೆ.


ಈ ಏಕಕೂಟ ದೇವಾಲಯದ ಮುಖಮಂಟಪಕ್ಕೆ ೩ ದಿಕ್ಕುಗಳಿಂದ ಪ್ರವೇಶವಿದೆ. ಮುಖಮಂಟಪದ ಸುತ್ತಲೂ ಕಕ್ಷಾಸನವಿದ್ದು, ನಟ್ಟನಡುವೆ ನಾಲ್ಕು ಸುಂದರ ಕಂಬಗಳ ನವರಂಗವಿದೆ. ಕಕ್ಷಾಸನದ ಮೇಲೆ ೧೨ ಕಂಬಗಳಿವೆ. ಅಂತರಾಳದ ಮತ್ತು ಗರ್ಭಗುಡಿಯ ದ್ವಾರಗಳಲ್ಲಿರುವ ಕೆತ್ತನೆಗಳು ನಶಿಸಿಹೋಗಿವೆ. ಅಂತರಾಳದ ದ್ವಾರದಲ್ಲಿದ್ದ ಜಾಲಂಧ್ರಗಳು ಕಣ್ಮರೆಯಾಗಿವೆ. ನಂದಿಯ ಮೂರ್ತಿಯೊಂದು ಅಂತರಾಳದಲ್ಲಿದೆ ಮತ್ತು ಗರ್ಭಗುಡಿಯಲ್ಲೊಂದು ಶಿವಲಿಂಗವಿದೆ.


ನವರಂಗದಲ್ಲಿ ೯ ಅಂಕಣಗಳಿವೆ. ಆದರೆ ಎಲ್ಲಾ ಅಂಕಣಗಳು ಸಮಾನ ಅಕಾರದಲ್ಲಿಲ್ಲ! ನಟ್ಟನಡುವೆ ಇರುವ ಅಂಕಣ ಚೌಕಾಕಾರದಲ್ಲಿದ್ದರೆ, ಇದರ ಸುತ್ತಲೂ ಇರುವ ಉಳಿದ ೮ ಅಂಕಣಗಳು ಆಯತಾಕಾರದಲ್ಲಿವೆ. ನಡುವೆ ಇರುವ ಅಂಕಣದಲ್ಲಿ ೯ ಸುಂದರ ತಾವರೆಗಳನ್ನು ಕೆತ್ತಲಾಗಿದ್ದು, ೩ ತರಹದ ತಾವರೆಗಳನ್ನು ಕಾಣಬಹುದು. ಉಳಿದ ಅಂಕಣಗಳಲ್ಲಿ ೬ ತಾವರೆಗಳನ್ನು ಕೆತ್ತಲಾಗಿದ್ದು, ೨ ರೀತಿಯ ತಾವರೆಗಳನ್ನು ಕಾಣಬಹುದು.


ಮುಖಮಂಟಪಗಳ ಛಾವಣಿಯಲ್ಲೂ ತಲಾ ೬ ತಾವರೆಗಳನ್ನು ಕೆತ್ತಲಾಗಿದೆ. ಇವುಗಳನ್ನೂ ಅಂಕಣಗಳೆಂದು ಪರಿಗಣಿಸಿದರೆ ಒಟ್ಟು ಅಂಕಣಗಳ ಸಂಖ್ಯೆ ೧೨ ಆಗುತ್ತದೆ.


ಹೊಯ್ಸಳ ಶೈಲಿಯ ಈ ದೇವಾಲಯದ ಮೂಲ ಗೋಪುರ ಶಿಥಿಲಗೊಂಡು ಬಿದ್ದುಹೋಗಿದ್ದು, ಈಗ ಅದರ ಸ್ಥಾನದಲ್ಲಿ ವಿಕಾರವಾಗಿ ಕಾಣುವ ಗೋಪುರವೊಂದಿದೆ. ದೇವಾಲಯದ ಹೊರಗೋಡೆಯಲ್ಲಿ ಕೆಲವೆಡೆ ಮಂಟಪಗಳು, ಬಳ್ಳಿಗಳು, ತಾವರೆಗಳು ಮತ್ತು ಯಕ್ಷ ಯಕ್ಷಿಯರ ಕೆತ್ತನೆಗಳನ್ನು ಕಾಣಬಹುದು. ಇಸವಿ ೧೧೫೦ರ ಬಳಿಕ ಈ ದೇವಾಲಯ ನಿರ್ಮಾಣವಾಗಿರಬಹುದೆಂದು ಇತಿಹಾಸಕಾರರ ಅಭಿಪ್ರಾಯ.


ತೋಟಗಾರಿಕೆ ಇಲಾಖೆಯ ಪ್ರಾಂಗಣಕ್ಕಿರುವ ಮುಳ್ಳುಬೇಲಿಯ ಸುತ್ತ ಪೊದೆಗಳು ಬೆಳೆದಿರುವುದರಿಂದ ಅಲ್ಲಿ ನುಸುಳಲು ಪ್ರಯತ್ನಿಸುವುದು ವ್ಯರ್ಥ. ಗೇಟಿಗೆ ಬೀಗ ಹಾಕಿ ಇದ್ದರೆ ಸುಮಾರು ೧೦ ಅಡಿ ಎತ್ತರದ ಗೇಟನ್ನು ಸ್ವಲ್ಪ ನಿಗಾವಹಿಸಿ ದಾಟಬೇಕಾಗುತ್ತದೆ. ಗೇಟಿನ ಮೇಲ್ಭಾಗದಲ್ಲಿ ಸರಳುಗಳ ಚೂಪಾದ ಈಟಿಯಂತಹ ಭಾಗವಿರುವುದರಿಂದ ಸ್ವಲ್ಪ ಕಾಲು ಜಾರಿದರೂ ಅಪಾಯ. ರಜಾದಿನಗಳಂದು ತೆರಳಿದರೆ ಗೇಟಿಗೆ ಬೀಗ ಹಾಕಿಯೇ ಇರುತ್ತದೆ.

ಅಂದು - ಇಂದು:


ಇದು ೧೮೮೫ರಲ್ಲಿ ತೆಗೆದ ತಿರುಪತೇಶ್ವರ ದೇವಾಲಯದ ಚಿತ್ರ. ದೇವಾಲಯದ ಮುಖಮಂಟಪ ಮತ್ತು ಗೋಪುರದ ಮೇಲೆ ಬೆಳೆದಿರುವ ಗಿಡ, ಪೊದೆ  ಇತ್ಯಾದಿಗಳನ್ನು ಗಮನಿಸಿ. ಮುಖಮಂಟಪವೂ ಶಿಥಿಲಗೊಂಡಿರುವುದನ್ನು ಕಾಣಬಹುದು.


ಗೋಪುರವನ್ನೇ ಆವರಿಸಿರುವ ಗಿಡ ಮತ್ತು ಬಳ್ಳಿಗಳು ಅದನ್ನೇ ಬಲಿ ತೆಗೆದುಕೊಂಡವು ಎನ್ನಬಹುದು. ಏಕೆಂದರೆ ಈಗ ಮೂಲ ಗೋಪುರವೇ ಇಲ್ಲ. ಈಗ ದೇವಾಲಯದ ಪರಿಸರ ಆಗಿನಂತಿಲ್ಲ. ಸುತ್ತಲೂ ಸ್ವಚ್ಛವಾಗಿದ್ದು, ನಿರ್ಮಲವಾಗಿದೆ.

ಕಾಮೆಂಟ್‌ಗಳಿಲ್ಲ: