ಭಾನುವಾರ, ಅಕ್ಟೋಬರ್ 21, 2012

ಸಾತಖಂಡಾ!


೨೦೦೭ ಸೆಪ್ಟೆಂಬರ್ ೭. ಧಾರವಾಡದಲ್ಲಿ ವಿವೇಕ್ ಎಲ್ಲಾದರೂ ಹೊರಟಿದ್ದಾರೋ ನೋಡೋಣವೆಂದು ಫೋನಾಯಿಸಿದರೆ, ’ನಾಗಝರಿ ಫಾಲ್ಸ್ ಕಡೆ ಹೋಗೋಣ ಅಂತಿದ್ದೀವಿ..’ ಎಂಬ ಉತ್ತರ. ಅತ್ತ ಧಾರವಾಡದಿಂದ ವಿವೇಕ್ ಮತ್ತು ಗಂಗಾಧರ್ ಕಲ್ಲೂರ್ ಮತ್ತು ಇತ್ತ ಉಡುಪಿಯಿಂದ ನಾನು, ಜಲಧಾರೆ ಇದ್ದ ಊರಿನಲ್ಲಿ ಮುಂಜಾನೆ ಭೇಟಿಯಾಗೋಣವೆಂದು ನಿರ್ಧರಿಸಿದೆವು.


ಮುಂಜಾನೆ ಹಳ್ಳಿಯಲ್ಲೊಂದೆಡೆ ಕಾರನ್ನಿರಿಸಿ ಜಲಧಾರೆಯತ್ತ ಹೊರಟೆವು. ಸುಮಾರು ೨ ಕಿಮಿ ಟಾರು ರಸ್ತೆಯಲ್ಲಿ ನಡೆದು ನಂತರ ಮಣ್ಣಿನ ರಸ್ತೆಗೆ ಹೊರಳಿದೆವು. ನವೆಂಬರ್ ಬಳಿಕ ಪ್ರವಾಸಿಗರನ್ನು ನಾಗಝರಿ ಜಲಧಾರೆಗೆ ಕರೆದೊಯ್ಯುವ ಸಲುವಾಗಿ ಅರಣ್ಯ ಇಲಾಖೆ ನಿರ್ಮಿಸಿದ ರಸ್ತೆ ಇದು. ಎಪ್ರಿಲ್ ನಿಂದ ಅಕ್ಟೋಬರ್ ವರೆಗೆ ಇಲ್ಲಿ ಯಾರನ್ನೂ ಅರಣ್ಯ ಇಲಾಖೆಯವರು ಕರೆದುಕೊಂಡು ಬರುವುದಿಲ್ಲ. ಆದ್ದರಿಂದ ರಸ್ತೆಯಲ್ಲೆಲ್ಲಾ ಗಿಡಗಂಟಿಗಳು ಬೆಳೆದು ನಿಂತಿದ್ದವು.


ಪಕ್ಷಿಪ್ರಿಯರಿಗಂತೂ ಈ ಕಾಡುಗಳು ಸ್ವರ್ಗ. ಪಕ್ಷಿ ವೀಕ್ಷಣೆಯಲ್ಲಿ ನನಗೆ ಅಷ್ಟು ಆಸಕ್ತಿಯಿಲ್ಲ. ಆದರೆ ಕಲ್ಲೂರ್ ಅವರೊಂದಿಗೆ ಎಲ್ಲಾದರು ತೆರಳಿದರೆ, ಪಕ್ಷಿಗಳನ್ನು ಗುರುತಿಸಿ ಅವುಗಳ ಶಬ್ದವನ್ನು ಅನುಕರಣೆ ಮಾಡಿ ಅವುಗಳ ವರ್ತನೆಯನ್ನು ಗಮನಿಸಿ ವಿವರಣೆ ಮತ್ತು ಮಾಹಿತಿ ನೀಡುವಾಗ ಆಸಕ್ತಿ ಕೆರಳದೆ ಇರಲು ಅಸಾಧ್ಯ. ಎಂದೂ ನೋಡದ, ಗೊತ್ತಿರದ ಸುಮಾರು ೧೫ ಬಗೆಯ ಪಕ್ಷಿಗಳನ್ನು ಅಂದು ನೋಡಿದೆ. ೩ ಬೇರೆ ಬೇರೆ ಜಾತಿಯ ಮರಕುಟಕ ಪಕ್ಷಿಗಳನ್ನು ತನ್ನ ಬೈನಾಕುಲರ್ ನಲ್ಲಿ ಕಲ್ಲೂರ್ ತೋರಿಸಿದರು. ಕಾಡಿನ ಹಾದಿಯಲ್ಲಿ ಸಾಗುವಾಗ ಯಾರಿಗೂ ಕೇಳಿಸದ ಶಬ್ದಗಳು ಈ ಕಲ್ಲೂರ್ ಗೆ ಕೇಳಿಸುತ್ತವೆ. ಹಕ್ಕಿಯೊಂದರ ಶಬ್ದ ಕೇಳಿಸಿದೊಡನೆ ಅಲ್ಲೇ ನಿಂತು, ನಮ್ಮನ್ನೂ ನಿಲ್ಲಿಸಿ, ’ನೋಡ್ರಿ ಅದು ಈ ಪಕ್ಷಿ, ಇದು ಆ ಪಕ್ಷಿ...’ ಎನ್ನುತ್ತಾ ಚಾರಣದ ಸಂಪೂರ್ಣ ಅನುಭವವನ್ನು ನೀಡುತ್ತಾರೆ. ಪಕ್ಷಿಗಳಲ್ಲದೆ, ಕೀಟಗಳು, ಗಿಡಗಳ ಬಗ್ಗೆಯೂ ಅಪಾರ ಮಾಹಿತಿಯನ್ನು ಕಲ್ಲೂರ್ ನಮಗೆ ದೊರಕಿಸುತ್ತಾ ಸಾಗುತ್ತಾರೆ. ಇವರೊಂದಿಗೆ ಚಾರಣಕ್ಕೆ ತೆರಳಿದರೆ ಅದೊಂದು ’ನೇಚರ್ ಟ್ಯೂಷನ್’.


ಜೀಪ್ ರಸ್ತೆ ಒಮ್ಮೆಲೇ ಕೊನೆಗೊಂಡು ಇಳಿಜಾರಿನ ಕಾಲುದಾರಿ ಆರಂಭಗೊಳ್ಳುತ್ತದೆ. ಇಳಿಜಾರು ಆರಂಭವಾಗುವಲ್ಲೇ ದೂರದಲ್ಲಿ ನಾಗಝರಿ ಜಲಧಾರೆಯ ದರ್ಶನವಾಗುತ್ತದೆ. ಇಲ್ಲಿ ಕಾಣಿಸುವುದು ಜಲಧಾರೆಯ ಮೇಲಿನ ೩ ಹಂತಗಳು. ಇಲ್ಲಿಂದ ನಾಗಝರಿ ಕಣಿವೆಗೆ ಇಳಿದು, ಎದುರಾಗುವ ನಾಗಝರಿ ಹಳ್ಳವನ್ನು ದಾಟಿ, ಹಳ್ಳಗುಂಟ ಸ್ವಲ್ಪ ಹೊತ್ತು ನಡೆದರೆ ನಾಗಝರಿ ಜಲಧಾರೆ.


ಇಲ್ಲಿಂದ ಕಾಣಿಸುವುದು ಜಲಧಾರೆಯ ೬ ಮತ್ತು ೭ನೇ ಹಂತಗಳು ಮಾತ್ರ. ಮೇಲಿನ ೫ ಹಂತಗಳನ್ನು ನೋಡಬೇಕಿದ್ದಲ್ಲಿ ಜಲಧಾರೆಯ ಪಾರ್ಶ್ವದಲ್ಲೇ ಬಂಡೆಯ ಮೇಲ್ಮೈಯನ್ನು ಏರಬೇಕು. ನಾನು ಕೆಳಗೆ ಇರಲು ನಿರ್ಧರಿಸಿದರೆ ಉಳಿದವರು ಮೇಲೇರತೊಡಗಿದರು. ಆರನೇ ಹಂತದ ಮೇಲ್ಭಾಗದವರೆಗೂ ಅವರುಗಳು ಕಾಣಿಸುತ್ತಿದ್ದರು. ನಂತರ ಮಾಯವಾದವರು ಕಡೆಗೆ ಒಬ್ಬೊಬ್ಬರಾಗಿ ಕೆಳಗಿಳಿದು ಬರುವುದು ೧೫ ನಿಮಿಷದ ಬಳಿಕ ಕಾಣಿಸಿತು.


ನಾಗಝರಿ ಜಲಧಾರೆಯಲ್ಲಿ ಅರಣ್ಯ ಇಲಾಖೆಯವರು ’ರಾಕ್ ಕ್ಲೈಂಬಿಂಗ್’ ಇತ್ಯಾದಿ ಸಾಹಸ ಕ್ರೀಡೆಗಳನ್ನು ಏರ್ಪಡಿಸುತ್ತಾರೆ. ಖಾಸಗಿಯವರು ಕೂಡಾ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಂತಹ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ನಾಗಝರಿ ಜಲಪಾತ ಸಂದರ್ಶಿಸಲು ಪ್ರಕೃತಿ ಪ್ರಿಯರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಮಾತ್ರ ಪ್ರಶಸ್ತ ಸಮಯ. ಗೌಜಿ, ಗಲಾಟೆ, ಕೇಕೇ ಹಾಕುವ ಗುಂಪು ಬರುವುದು ನವೆಂಬರ್-ನಿಂದ. ಜಲಧಾರೆಗೆ ಸಾತಖಂಡಾ ಜಲಪಾತ ಎಂಬ ಹೆಸರೂ ಇದೆ. ಇದು ಮರಾಠಿ ಭಾಷೆಯಿಂದ ಬಂದ ಹೆಸರು. ಏಳು ಹಂತಗಳಿರುವುದರಿಂದ ’ಸಾತ’ಖಂಡಾ ಎಂಬ ಹೆಸರು.

ಕಾಮೆಂಟ್‌ಗಳಿಲ್ಲ: