ಮಂಗಳವಾರ, ಸೆಪ್ಟೆಂಬರ್ 04, 2012

ಸೋಮೇಶ್ವರ ದೇವಾಲಯ - ಕೋಟುಮಚಗಿ


ಶಾಸನಗಳಲ್ಲಿ ಈ ಊರನ್ನು ’ಉಮಚಗಿ’ ಎಂದು ಕರೆಯಲಾಗಿದೆ. ನಂತರದ ದಿನಗಳಲ್ಲಿ ಇಲ್ಲೊಂದು ಕೋಟೆ ಅಸ್ತಿತ್ವಕ್ಕೆ ಬಂದಿದ್ದರಿಂದ ಊರಿನ ಹೆಸರು ’ಕೋಟುಮಚಗಿ’ ಆಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ. ಇಲ್ಲಿರುವ ಸೋಮೆಶ್ವರ ದೇವಾಲಯವನ್ನು ೧೧ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ.


ದೇವಾಲಯದ ಮುಖಮಂಟಪ ಮತ್ತು ನವರಂಗವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಗರ್ಭಗುಡಿಯ ಹೊರಗೋಡೆ ಮಾತ್ರ ತನ್ನ ಮೂಲರೂಪದಲ್ಲಿ ಉಳಿದುಕೊಂಡಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ಸ್ವಯಂಭೂ ಸೋಮೇಶ್ವರ ದೇವಾಲಯವೆಂದು ಕರೆಯಲಾಗಿದೆ.


ನವರಂಗದಲ್ಲಿ ಸ್ಠಳಾವಕಾಶವೇ ಇಲ್ಲ! ಮೊದಲೇ ಸಣ್ಣದಾಗಿರುವ ನವರಂಗದಲ್ಲಿ ಆಷ್ಟು ಒತ್ತೊತ್ತಾಗಿ ಕಂಬಗಳನ್ನು ರಚಿಸಿ, ಕಂಬದಿಂದ ಕಂಬಕ್ಕೆ ಕಮಾನುಗಳನ್ನು ರಚಿಸಲಾಗಿದೆ. ಮಸೀದಿಗಳಲ್ಲಿ ಮತ್ತು ಇತರ ಇಸ್ಲಾಮಿಕ್ ಕಟ್ಟಡಗಳಲ್ಲಿರುವ ಕಮಾನುಗಳ ರಚನೆಯನ್ನು ಇಲ್ಲಿ ಕಂಡು ಬಹಳ ಆಶ್ಚರ್ಯವಾಯಿತು. ಊರಿನವರ ಪ್ರಕಾರ ಭಾಗಶ: ಹಾನಿಗೊಳಗಾಗಿದ್ದ ದೇವಾಲಯವನ್ನು ಬಿಜಾಪುರ ಸುಲ್ತಾನರ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿರುವುದರಿಂದ ಈ ಕಮಾನುಗಳ ರಚನೆಯಾಗಿರಬಹುದು.


ಗರ್ಭಗುಡಿ ಸಂಪೂರ್ಣವಾಗಿ ಮಾರ್ಬಲೀಕರಣಗೊಂಡಿದೆ. ಅಂತರಾಳದಲ್ಲಿ ನಂದಿಯ ಮೂರ್ತಿಯಿದೆ. ಶಾಸನಗಳಿಂದ ಈ ಊರು ಅಗ್ರಹಾರವಾಗಿತ್ತು ಎಂದು ತಿಳಿದುಬರುತ್ತದೆ. ಮಹಾಪಾಂಡಿತ್ಯ ಹೊಂದಿದ್ದ ವಿದ್ವಾಂಸರು ಮತ್ತು ಉನ್ನತ ವರ್ಗದ ಬ್ರಾಹ್ಮಣರು ನೆಲೆಸಿದ್ದ ಈ ಊರು ಒಂದು ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.


ಊರಿನ ಎರಡು ಕೆರೆಗಳ ಮಧ್ಯೆ ಎತ್ತರದ ಸ್ಥಳದಲ್ಲಿ ಆಕರ್ಷಕ ಪ್ರವೇಶದ್ವಾರವಿರುವ ಪ್ರಾಂಗಣದಲ್ಲಿ ಸೋಮೇಶ್ವರ ದೇವಾಲಯವಿದೆ. ದೇವಾಲಯದ ಸುತ್ತಲೂ ತಿಳಿಯಾದ ಹುಲ್ಲುಹಾಸು ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ ಇಲ್ಲಿ ಬಹಳ ಸಮಯ ಕಳೆಯಲು ನನಗೆ ಪ್ರೇರಣೆ ನೀಡಿತು. ಸೂರ್ಯ ಮುಳುಗುವವರೆಗೂ ಇಲ್ಲೇ ಇದ್ದು ನಂತರ ಮನೆಯೆಡೆ ಹೊರಟೆವು.


ಐತಿಹಾಸಿಕವಾಗಿ ಕೋಟುಮಚಗಿ ಬಹಳ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳ. ಇಲ್ಲಿ ಕಲ್ಮೇಶ್ವರ ಎಂಬ ಪ್ರಾಚೀನ ದೇವಾಲಯವೂ ಇದೆ. ಆದರೆ ಅದೀಗ ಸಂಪೂರ್ಣವಾಗಿ ನವೀಕರಣಗೊಂಡಿದೆ. ಸೋಮೇಶ್ವರ ದೇವಾಲಯ ನಿರ್ಮಾಣಗೊಂಡ ಬಗ್ಗೆ ಇರುವ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹೇಶ ಸಂಕನಗೌಡರ ಇವರ ಬ್ಲಾಗಿನಲ್ಲಿ ಓದಬಹುದು. ಕೋಟುಮಚಗಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

2 ಕಾಮೆಂಟ್‌ಗಳು:

Srik ಹೇಳಿದರು...

Brilliant!!

Sometimes faith acts against history; and in the name of safeguarding a religious place, its history is erased! Do you think we could do better?

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,

ನಂಬಿಕೆ ಮತ್ತು ಇತಿಹಾಸ ಎರಡು ಪ್ರತ್ಯೇಕ ವಿಷಯಗಳಾದರೂ ಪ್ರಾಚೀನ ದೇವಾಲಯಗಳ ಬಗ್ಗೆ ಹೇಳುವುದಾದರೆ ಇವೆರಡೂ ಬಹಳ ಆಪ್ತ ವಿಷಯಗಳಾಗಿಬಿಡುತ್ತವೆ. ಕೆಲವೆಡೆ ನಂಬಿಕೆ ಮೇಲ್ಗೈ ಸಾಧಿಸಿದರೆ ಇನ್ನು ಕೆಲವೆಡೆ ತಿರುಚಿದ ಇತಿಹಾಸ ಮೇಲ್ಗೈ ಪಡೆದುಕೊಳ್ಳುತ್ತದೆ. ಈ ದೇವಾಲಯದ ಬಗ್ಗೆ ಹೇಳುವುದಾದರೆ, ಊರ ಜನರ ಬಲವಾದ ನಂಬಿಕೆ ಮತ್ತು ಒಗ್ಗಟ್ಟು ಈ ದೇವಾಲಯವನ್ನು ಉಳಿಸಿದೆ ಎನ್ನಬಹುದು.