ಶುಕ್ರವಾರ, ಜುಲೈ 20, 2012

ಕಣಿವೆಯ ಚೆಲುವೆ


ಡಾ!ಗುತ್ತಲ್, ತನ್ನದೇ ವಾಹನವಾದರೂ ಸ್ವಲ್ಪವೂ ಕಾಳಜಿ ತೋರದೆ ಹಳ್ಳಿ, ಗುಡ್ಡಗಾಡು, ಕಾಡು ರಸ್ತೆಗಳಲ್ಲಿ ಸಿಕ್ಕಾಪಟ್ಟೆ ಓಡಿಸಿಬಿಡುತ್ತಾರೆ. ಸಣ್ಣ ಮರಗಳೇನಾದರೂ ದಾರಿಗಡ್ಡವಾಗಿ ಬಿದ್ದಿದ್ದರೆ ಅವುಗಳ ಮೇಲೆಯೇ ಚಲಾಯಿಸಿಬಿಡುತ್ತಾರೆ. ಅದೆಷ್ಟೋ ಸಲ ವಾಹನ ಜಖಂಗೊಂಡರೂ ಅವರಿನ್ನೂ ಪಾಠ ಕಲಿತಿಲ್ಲ. ಈ ಬಾರಿಯೂ ಮತ್ತೆ ಅದೇ ಪುನರಾವರ್ತನೆಯಾಯಿತು.


ಆದಿನ ಎರಡು ಜಲಧಾರೆಗಳನ್ನು ನೋಡುವ ಪ್ಲ್ಯಾನ್ ಮಾಡಿದ್ದೆವು. ಮೊದಲನೇದ್ದು ಮುಗಿಸಿ ಈಗ ಎರಡನೇದರೆಡೆಗೆ ತೆರಳುತ್ತಿದ್ದೆವು. ಸಮಯ ಅದಾಗಲೇ ಅಪರಾಹ್ನ ಮೂರು ದಾಟಿತ್ತು. ತರೆಗೆಲೆಗಳಿಂದ ಮುಚ್ಚಿದ್ದು ಅಂಕುಡೊಂಕಾಗಿ ಸಾಗುವ ರಸ್ತೆ. ದಾರಿಗಡ್ಡವಾಗಿ ಉರುಳಿದ್ದ ಮರವನ್ನು ಹಳ್ಳಿಗರು ಬದಿಗೆ ಸರಿಸಿದ್ದರೂ ನಮ್ಮ ವಾಹನ ಸಲೀಸಾಗಿ ಸಾಗುವಷ್ಟು ಜಾಗವಿರಲಿಲ್ಲ. ವಿವೇಕ್ ಕೆಳಗಿಳಿದು, ’ಸ್ವಲ್ಪ ಬಲಕ್ಕೆ .. ಎಡಕ್ಕೆ ... ಈಗ ಹಿಂದೆ ಹೋಗಿ... ಈಗ ಬಲಕ್ಕೆ... ಈಗ ಮತ್ತೆ ಹಿಂದೆ ಹೋಗಿ... ಈಗ ಎಡಕ್ಕೆ...’ ಎನ್ನುತ್ತಾ ಡೈರೆಕ್ಷನ್ ಕೊಡುತ್ತಿದ್ದರು. ಗೇರ್ ಬದಲು ಮಾಡಿ ಮಾಡಿ ತಾಳ್ಮೆ ಕಳಕೊಂಡ ಡಾ!ಗುತ್ತಲ್, ’ಏ... ಸರಿ..’ ಎನ್ನುತ್ತಾ ’ಭರ್ರ್..’ ಎಂದು ಮುಂದೆ ಬಂದೇಬಿಟ್ಟರು. ವಾಹನದ ಮುಂಭಾಗಕ್ಕೆ ದೊಡ್ಡ ಹಾನಿಯೇ ಆಯಿತು. ಆದರೂ ಮತ್ತೆ ತನ್ನದೇ ಧಾಟಿಯಲ್ಲಿ ’ನಡೀರಿ... ಸರಿ ಮಾಡಿದ್ರಾತು....’ ಎಂದು ಇನ್ನಷ್ಟು ವೇಗವಾಗಿ ದೌಡಾಯಿಸಿದರು.


ದಾರಿಯಲ್ಲಿ ಒಂದೆಡೆ ರಸ್ತೆ ಬಹಳ ಹಾಳಾಗಿತ್ತು. ಅಲ್ಲಿಯೇ ವಾಹನ ನಿಲ್ಲಿಸಿ ನಡೆಯಲು ಆರಂಭಿಸಿದೆವು. ಸ್ವಲ್ಪ ಮುಂದೆ ಸಿಕ್ಕ ಹಿರಿಯರೊಬ್ಬರಲ್ಲಿ ಜಲಧಾರೆಗೆ ದಾರಿಯ ಬಗ್ಗೆ ವಿಚಾರಿಸಿದೆವು. ಸಮೀಪದಲ್ಲೇ ಇದ್ದ ಅವರ ಮನೆಗೆ ತೆರಳಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಆ ಹಿರಿಯರ ಮಗ ನಮ್ಮೊಂದಿಗೆ ಬರಲು ಅಣಿಯಾದ. ಜಲಧಾರೆ ಧುಮುಕುವ ಕಣಿವೆಯು ಈ ಹಳ್ಳಿಯಿಂದಲೇ ಆರಂಭವಾಗುವುದರಿಂದ ಜಲಧಾರೆಯ ಮೇಲ್ಭಾಗಕ್ಕೂ ಮತ್ತು ತಳಭಾಗಕ್ಕೂ ಚಾರಣ ಕೈಗೊಳ್ಳಬಹುದು.


ಜಲಧಾರೆ ಸುಮಾರು ದೊಡ್ಡದಿದೆ ಎಂಬ ಮಾಹಿತಿಯಿದ್ದರೂ ಈ ಪರಿ ದೊಡ್ಡದಿರಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ. ಜಲಧಾರೆಗೆ ವಿರುದ್ಧವಾಗಿರುವ ಗುಡ್ಡದಿಂದ ವೀಕ್ಷಿಸಿದರೆ ಅದೊಂದು ಮನಸೂರೆಗೊಳ್ಳುವ ನೋಟ. ಎರಡು ಹಂತಗಳಲ್ಲಿ ಸುಮಾರು ೨೭೦-೩೦೦ ಅಡಿ ಆಳಕ್ಕೆ ಧುಮುಕುವ ಜಲಧಾರೆಯ ಬುಡಕ್ಕೆ ಹೋಗುವ ಇರಾದೆ ನನಗಂತೂ ಆ ದಿನ ಇರಲಿಲ್ಲ. ನಮ್ಮೊಂದಿಗಿದ್ದ ಮಾರ್ಗದರ್ಶಿ ಯುವಕ ನೇರವಾಗಿ ಕೆಳಗಿಳಿಯುವ ದಾರಿಯ ಬಗ್ಗೆ ಮಾತನಾಡುತ್ತಿದ್ದ. ಮುಂಜಾನೆಯಷ್ಟೇ ತುಂತುರು ಮಳೆಯಾಗಿದ್ದರಿಂದ ಮತ್ತು ಈ ದಾರಿಯಲ್ಲಿ ಕಲ್ಲುಬಂಡೆಗಳನ್ನು ಆಧರಿಸಿ ನೇರವಾಗಿ ಕೆಳಗಿಳಿಯಬೇಕಾಗುವುದರಿಂದ ತುಸು ಹೆಚ್ಚೇ ಅಪಾಯವಿರುವುದನ್ನು ಅರಿತು ನಾವು ಆತನಿಗೆ ಸುತ್ತು ಬಳಸಿ ಮತ್ತೊಂದು ದಾರಿಯಲ್ಲಿ ಕರಕೊಂಡು ಹೋಗುವಂತೆ ವಿನಂತಿಸಿದೆವು.


ಈ ಮತ್ತೊಂದು ದಾರಿಯಲ್ಲಿ ನಮಗೆ ಜಲಧಾರೆಯ ಬಳಿ ತಲುಪಲು ಕನಿಷ್ಟ ೧೦೦ ನಿಮಿಷಗಳಾದರೂ ಬೇಕು. ಅಂದರೆ ಜಲಧಾರೆಯ ಬುಡ ತಲುಪುವಷ್ಟರಲ್ಲಿ ಸಮಯ ಆರು ದಾಟಿಬಿಡುತ್ತದೆ. ಅಷ್ಟು ಗಡಿಬಿಡಿ ಮಾಡುವ ಬದಲು ಇನ್ನೊಂದು ದಿನ ಮುಂಜಾನೆಯೇ ಇಲ್ಲಿಗೆ ಬಂದು ಆರಾಮವಾಗಿ ಚಾರಣ ಮಾಡಿ ಕೆಳಗಿಳಿದು ಹೋಗಿ, ಜಲಧಾರೆಯ ಬುಡದಲ್ಲೂ ಬೇಕಾದಷ್ಟು ಸಮಯ ಕಳೆದು ಬರೋಣವೆನ್ನುವುದು ನನ್ನ ಸಲಹೆಯಾಗಿತ್ತು. ಆದರೂ ಎಲ್ಲರೂ ಕೆಳಗಿಳಿಯುವ ನಿರ್ಧಾರ ಮಾಡಿದ್ದರಿಂದ ನಾನೂ ಹೆಜ್ಜೆ ಹಾಕಿದೆ. ಇಲ್ಲಿ ಜಲಧಾರೆಯ ೩೦೦ ಅಡಿ ಉದ್ದ ನೋಡಿಯೇ ಕೆಳಗಿಳಿಯುವುದು ಬೇಡ ಎನ್ನುವುದು ನನ್ನ ಸಲಹೆಯಾಗಿತ್ತು.


ಗುಡ್ಡದ ಅಂಚಿನಲ್ಲೇ ಸುಮಾರು ದೂರ ನಡೆದು ಕಣಿವೆಯ ಅತಿ ಕಡಿದಾದ ಭಾಗ ಕೊನೆಗೊಂಡ ಬಳಿಕ, ಕಣಿವೆಯನ್ನು ಇಳಿಯುವ ಕೆಲಸಕ್ಕೆ ’ಕಾಲು’ಹಾಕಿದೆವು. ಇಳಿಜಾರು ಕಡಿದಾಗಿದ್ದರಿಂದ ಮತ್ತು ಕಾಡು ದಟ್ಟವಾಗಿದ್ದರಿಂದ ವೇಗವಾಗಿ ನಡೆಯುವುದು ಅಸಾಧ್ಯವಾಗಿತ್ತು. ಮುಂಜಾನೆಯ ಮಳೆಯ ಕಾರಣ ಕಾಡಿನ ನೆಲ ಜಾರುತ್ತಿತ್ತು ಕೂಡಾ. ಎಷ್ಟೇ ಹೊತ್ತಾದರೂ ಹಳ್ಳದ ಶಬ್ದ ಕೂಡಾ ಕೇಳಿಸುತ್ತಿರಲಿಲ್ಲ. ಆದರೆ ನಮ್ಮ ಗುರಿ ಹಳ್ಳವಾಗಿರಲಿಲ್ಲ. ನಮ್ಮ ಗುರಿಯಾಗಿತ್ತು ಜಲಧಾರೆ. ಆದರೆ ಜಲಧಾರೆ ತಲುಪಲು ಹಳ್ಳ ಸಿಕ್ಕ ಬಳಿಕ ಹಳ್ಳಗುಂಟ ವಿರುದ್ಧ ದಿಕ್ಕಿನಲ್ಲಿ ಇನ್ನೊಂದಷ್ಟು ಹೊತ್ತು ನಡೆಯಬೇಕೆನ್ನುವುದು ಎಲ್ಲರನ್ನು ಇನ್ನಷ್ಟು ಚಿಂತೆಗೊಳಪಡಿಸಿತು.


ಇನ್ನು ಮುಂದೆ ಸಾಗುವುದು ಅನಾವಶ್ಯಕವೆಂದು ನನಗರಿವಾದಾಗ ಉಳಿದವರಿಗೆ ಮುಂದೆ ಸಾಗಲು ಹೇಳಿ ನಾನು ಅಲ್ಲೇ ಒಂದೆಡೆ ಆರಾಮವಾಗಿ ಕುಳಿತುಬಿಟ್ಟೆ. ಸುಮಾರು ಸಮಯದ ಬಳಿಕ ’ರಾಜೇಶ್, ಕೆಳಗೆ ಬರ್ರಿ... ಹಳ್ಳ ಸಿಕ್ತು. ಫ್ರೆಷ್ ಆಗಿ ವಾಪಾಸ್ ಹೋಗೋಣ..’ ಎಂದು ದೂರದಿಂದ ವಿವೇಕ್ ಜೋರಾಗಿ ಒದರಿದಾಗ, ’ಮುಖವನ್ನಾದರೂ ತೊಳೆದುಕೊಂಡು ಬರೋಣ’ ಎಂದು ’ಬೇಕೋ ಬೇಡವೋ’ ಎಂಬಂತೆ ಎದ್ದು ಮತ್ತೆ ನಿಧಾನವಾಗಿ ಮುಂದೆ ಸಾಗಿದೆ.


ನಾನು ಕೆಳಗೆ ತಲುಪುವಷ್ಟರಲ್ಲಿ ಉಳಿದವರದ್ದು ಜಲಕ್ರೀಡೆ ಆರಂಭವಾಗಿತ್ತು. ನಮ್ಮ ಮಾರ್ಗದರ್ಶಿಯ ಪ್ರಕಾರ ಜಲಧಾರೆ ಇನ್ನೂ ಒಂದು ತಾಸು ದೂರವಿತ್ತು ಮತ್ತು ನೇರವಾಗಿ ಇಳಿದುಬಿಟ್ಟಿದ್ರೆ ಇಷ್ಟು ಹೊತ್ತಿಗೆ ನಾವು ಹಿಂತಿರುಗಿ ಕೂಡಾ ಆಗ್ತಿತ್ತು! ಆದರೆ ಆ ದಾರಿಯಲ್ಲಿ ಅಂದು ಇಳಿಯಬಾರದು ಎಂಬ ನಮ್ಮ ನಿರ್ಧಾರ ಸರಿಯಾಗಿತ್ತು. ಮುಂಜಾನೆ ಮಳೆಯಾಗದಿದ್ದರೆ ನಾವು ಇಳಿಯುವ ಧೈರ್ಯ ಮಾಡುತ್ತಿದ್ದೆವು. ಈಗ ಇಲ್ಲಿ ಎಲ್ಲರೂ ಸುಮಾರು ಅರ್ಧ ಗಂಟೆ ಹಳ್ಳದಲ್ಲೇ ಬಿದ್ದು, ಹೊರಳಾಡಿದರು. ದಣಿವಾರಿಸಿಕೊಂಡರು. ಚಾರಣದ ಸಂಪೂರ್ಣ ಆನಂದ ಸಿಗುವುದೇ ಸ್ನಾನದಲ್ಲಿ ಎಂಬ ಭಾಷಣ ಅವರಿಂದ ನನಗೆ. ಅವರಿಗೆಲ್ಲಾ ಪರಮಾನಂದ. ಚಾರಣದ ಸಮಯದಲ್ಲಿ ಹರಿಯುವ ನೀರಿನಲ್ಲಿ ಸ್ನಾನದ ಮಜಾನೇ ಬೇರೆಯಂತೆ. ಸ್ನಾನದ ಬಳಿಕ ’ಲೈಟ್ ರಿಫ್ರೆಷ್‍ಮೆಂಟ್ ಸೆಷನ್’.


ನಂತರ ಮತ್ತೆ ಆ ದಟ್ಟ ಕಾಡನ್ನು ದಾಟಿ ಮೇಲೆ ತಲುಪುವಷ್ಟರಲ್ಲಿ ಸಾಕುಸಾಕಾಯಿತು. ಜಲಧಾರೆಯ ಸಮೀಪ ಬಂದಾಗ ಮುಸ್ಸಂಜೆಯ ಸೂರ್ಯನ ಕಿರಣಗಳು ಜಲಧಾರೆಯ ಇನ್ನೊಂದು ರೂಪವನ್ನು ಅನಾವರಣಗೊಳಿಸಿದ್ದವು.


ಈ ಚಾರಣ ಕೈಗೊಂಡು ಮೂರು ಮಳೆಗಾಲಗಳು ಉರುಳಿಹೋದವು. ಮತ್ತೆ ಆ ಕಡೆ ಸುಳಿಯಲು ನಮ್ಮಿಂದಾಗಲಿಲ್ಲ. ಪ್ರತಿ ಸಲ ವಿವೇಕ್ ಭೇಟಿಯಾದಾಗ, ’ಅದೊಂದ್ ಬಾಕಿಐತಲ್ರೀ..’ ಎನ್ನುತ್ತಾರೆ. ಈ ಮಳೆಗಾಲದ ಬಳಿಕವಾದರೂ ಈ ಜಲಧಾರೆಯ ಪಾದ ಮುಟ್ಟಿ ಆಶೀರ್ವಾದ ಪಡೆದು ಬರಬೇಕು.

9 ಕಾಮೆಂಟ್‌ಗಳು:

Shruthikumar TD ಹೇಳಿದರು...

Rajesh,

Thumba chennagide, prakruthi vadalolage estondu sobagu ede...

thanks very much

Aravind GJ ಹೇಳಿದರು...

ವಾವ್!! ತುಂಬ ಸೊಗಸಾಗಿ ಇದೆಯಲ್ರಿ ಈ ಜಲಪಾತ!!

siddeshwar ಹೇಳಿದರು...

Beautiful spot and nice pictures. This two stage waterfall is similar to Magod waterfall.

Srik ಹೇಳಿದರು...

ಓಹ್! ಎಂಥಹ ಅದ್ಭುತ ಜಲಪಾತ! ಅಶ್ಟೇ ಸೊಗಸಾದ ಲೇಖನ.

- ಶ್ರಿಕ್.

Lakshmipati ಹೇಳಿದರು...

ವಾವ್ ...... ನಮಗೆ ಮತ್ತೊಂದು ಜಲಧಾರೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು

ಲಕ್ಷ್ಮೀಪತಿ

Ashok ಹೇಳಿದರು...

I think un polluted place... So very nice...

Wanderer ಹೇಳಿದರು...

Bahala sogasada taaNa. Mai manassu mareyuvantha prakruthi sobagu. Jothege geLeyara baLaga. CharaNakke innenu beku heLi. Chendaada lekhana.

prasca ಹೇಳಿದರು...

ಮನೋಹರ

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರೆಲ್ಲರಿಗೂ ಧನ್ಯವಾದ.