ಮಂಗಳವಾರ, ಜುಲೈ 17, 2012

ನರಸಿಂಹ ದೇವಾಲಯ - ಹಲಸಿ


ಕದಂಬರ ದೇವಾಲಯಗಳಲ್ಲಿ ಶಿಲ್ಪಕಲೆಗೆ ಹೆಚ್ಚಿನ ಆದ್ಯತೆ ಇರುವುದಿಲ್ಲ ಮತ್ತು ಗೋಪುರ ನಿರ್ಮಾಣ ತುಂಬಾ ಸರಳವಾಗಿರುತ್ತದೆ. ಹಲಸಿಯ ನರಸಿಂಹ ದೇವಾಲಯವೂ ಇದಕ್ಕೆ ಹೊರತಾಗಿಲ್ಲ. ಸುಂದರ ಪ್ರಾಂಗಣದಲ್ಲಿರುವ ಸರಳ ರಚನೆಯ ದೇವಾಲಯವಿದು. ಶಿಲ್ಪಕಲೆ ರಸಿಕರಿಗೆ ಈ ದೇವಾಲಯ ನಿರಾಸೆ ಉಂಟುಮಾಡುವುದು ಖಾತ್ರಿ. ಪಲಸಿಕಾ, ಪಲಶಿ ಹಾಗೂ ಹಲಸಿಗೆ ಎಂಬಿತ್ಯಾದಿ ಹೆಸರುಗಳಿಂದಲೂ ಈ ಊರನ್ನು ಶಾಸನಗಳಲ್ಲಿ ಕರೆಯಲಾಗಿದೆ. ಬನವಾಸಿಯ ಬಳಿಕ ಹಲಸಿ ಕದಂಬರ ಎರಡನೇ ರಾಜಧಾನಿಯಾಗಿತ್ತು ಎನ್ನಲಾಗುತ್ತದೆ. ತದನಂತರ ಗೋವಾ ಕದಂಬರ ಕಾಲದಲ್ಲೂ ಪ್ರಮುಖ ಸ್ಥಳವಾಗಿ ಮೆರೆದಿದ್ದ ಊರಿದು.


ನರಸಿಂಹ ದೇವಾಲಯದ ಗೋಪುರ ಬನವಾಸಿಯ ಮಧುಕೇಶ್ವರ ದೇವಾಲಯದ ಗೋಪುರವನ್ನು ಹೋಲುತ್ತದೆ. ಹಲಸಿಯಲ್ಲಿ ಗೋಪುರ ಸ್ವಲ್ಪ ಅಗಲವಾಗಿದ್ದರೂ ಎರಡೂ ದೇವಾಲಯಗಳ ಗೋಪುರಗಳ ಮೂಲ ರಚನೆ ಸಮಾನವಾಗಿದೆ. ಹಲಸಿಯಲ್ಲಿರುವ ಇತರ ದೇವಾಲಯಗಳೆಂದರೆ ಸುವರ್ಣೇಶ್ವರ, ಕಪಿಲೇಶ್ವರ, ಕಲ್ಮೇಶ್ವರ, ಹತಕೇಶ್ವರ ಮತ್ತು ಗೋಕರ್ಣೇಶ್ವರ.


ಈ ದೇವಾಲಯದಲ್ಲಿ ಒಂದಕ್ಕೊಂದು ಮುಖ ಮಾಡಿಕೊಂಡು ಎರಡು ಗರ್ಭಗುಡಿಗಳಿವೆ. ಒಂದು ಗರ್ಭಗುಡಿಯಲ್ಲಿ ವಿಷ್ಣುವಿನ ಮೂರ್ತಿಯಿದ್ದರೆ ಇನ್ನೊಂದರಲ್ಲಿ ಭೂವರಾಹನ ಮೂರ್ತಿಯಿದೆ. ಈ ಗರ್ಭಗುಡಿಗಳ ನಡುವೆ ನಾಲ್ಕು ಕಂಬಗಳ ನವರಂಗವಿದೆ. ದೇವಾಲಯಕ್ಕಿರುವ ಎರಡು ದ್ವಾರಗಳು ನವರಂಗಕ್ಕೆ ತೆರೆದುಕೊಳ್ಳುತ್ತವೆ. ಒಂದು ದ್ವಾರದ ಮೆಟ್ಟಿಲೊಂದರಲ್ಲಿ ಕದಂಬರ ಇತರ ದೇವಾಲಯಗಳಲ್ಲಿರುವಂತೆ ಕನ್ಯೆಯೊಬ್ಬಳು ನಮಸ್ಕರಿಸುವ ಚಿತ್ರವನ್ನು ಬಿಡಿಸಲಾಗಿದೆ. ಕೆಳದಿ, ಇಕ್ಕೇರಿ, ಬೆಡಸಗಾವಿ ಮತ್ತು ಕವಲೇದುರ್ಗದ ದೇವಾಲಯಗಳಲ್ಲಿ ಈ ತರಹದ ಚಿತ್ರಗಳನ್ನು ಕಾಣಬಹುದು.


ಮೂಲತ: ಒಂದೇ ಗರ್ಭಗುಡಿಯಿದ್ದ ಈ ದೇವಾಲಯದ ಹೆಸರು ’ನರಸಿಂಹ ದೇವಾಲಯ’ವಾದರೂ ಇಲ್ಲಿ ನರಸಿಂಹನಿಗೆ ಪ್ರಮುಖ ಸ್ಥಾನವಿಲ್ಲ! ನರಸಿಂಹನ ಮೂಲವಿಗ್ರಹವನ್ನು ಬಹಳ ಹಿಂದೆನೇ ಮೂಲಸ್ಥಾನದಿಂದ ತೆಗೆಯಲಾಗಿದ್ದು ಅಲ್ಲಿ ನಾರಾಯಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನರಸಿಂಹನ ಮೂರ್ತಿಯನ್ನು ಗರ್ಭಗುಡಿಯ ಒಳಗೆನೇ ಎಡಭಾಗದಲ್ಲಿರಿಸಲಾಗಿದ್ದು ಸರಿಯಾಗಿ ಕಾಣಿಸುವುದೂ ಇಲ್ಲ.


ದೇವಾಲಯದ ನವರಂಗದಲ್ಲಿ ಶಾಸನವೊಂದನ್ನು ಕಾಣಬಹುದು. ಈ ಶಾಸನದ ಪ್ರಕಾರ ದೇವಾಲಯವನ್ನು ಇಸವಿ ೧೧೬೯ರಲ್ಲಿ ರಾಜಾ ಶಿವಚಿತ್ತನಿಂದ ನಿರ್ಮಿಸಲ್ಪಟ್ಟಿದ್ದು, ಮಹಾರಾಜನ ಮಾತೋಶ್ರೀಯವರ ಇಚ್ಛೆಯಂತೆ ’ಅನಂತ ವೀರವಿಕ್ರಮ ನರಸಿಂಹ’ ದೇವರ ವಿಗ್ರಹವನ್ನು ಮಾತಾಯೋಗಿ ಎಂಬವರಿಂದ ಪ್ರತಿಷ್ಠಾಪನೆಗೊಳಿಸಲಾಯಿತು. ಇಸವಿ ೧೧೭೨ರಲ್ಲಿ ರಾಜಾ ವಿಷ್ಣುಚಿತ್ತ ವಿಜಯಾದಿತ್ಯನು ಹಳ್ಳಿಯೊಂದನ್ನು ನರಸಿಂಹ ದೇವರಿಗೆ ನೀಡಿದ್ದನ್ನೂ ಇದೇ ಶಾಸನದಲ್ಲಿ ತಿಳಿಸಲಾಗಿದೆ. ಭೂವರಾಹನ ವಿಗ್ರಹವಿರುವ ಗರ್ಭಗುಡಿಯನ್ನು ದೇವಾಲಯ ನಿರ್ಮಾಣಗೊಂಡ ೧೭ ವರ್ಷಗಳ ಬಳಿಕ (ಇಸವಿ ೧೧೮೬ರಲ್ಲಿ) ಕದಂಬ ದೊರೆ ಮೂರನೇ ವಿಜಯಾದಿತ್ಯನ ಕಾಲದಲ್ಲಿ ನಿರ್ಮಿಸಲಾಯಿತು. ಸುಮಾರು ೬ ಅಡಿ ಎತ್ತರವಿರುವ ಭೂ ವರಾಹನ ವಿಗ್ರಹವೇ ಈ ದೇವಾಲಯದ ಆಕರ್ಷಣೆ.


ದೇವಾಲಯದ ಪ್ರಾಂಗಣದೊಳಗೆ ಗಣೇಶ ಮತ್ತು ಶಿವನ ಸಣ್ಣ ಗುಡಿಗಳಿವೆ. ಅಲ್ಲೇ ಸಮೀಪದಲ್ಲಿ ಪುಷ್ಕರಿಣಿಯೊಂದಿದೆ. ಪುರಾತತ್ವ ಇಲಾಖೆ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಸುಂದರ ಉದ್ಯಾನವನ್ನು ದೇವಾಲಯದ ಸುತ್ತಲೂ ನಿರ್ಮಿಸಲಾಗಿದ್ದು ವಿಶ್ರಮಿಸಲು ಸೂಕ್ತ ಸ್ಥಳ. ಈ ದೇವಾಲಯದಲ್ಲಿ ತಿನ್ನಲು ಪ್ರಸಾದ ಏನು ಗೊತ್ತೇ? ಪೇಡಾ! ನನಗೆ ಪ್ರಸಾದ ರೂಪದಲ್ಲಿ ಪೇಡಾ ದೊರಕಿದ್ದು ತಿಳಿದ ಲೀನಾ ಓಡೋಡಿ ತಾನೂ ಪ್ರಸಾದ ಪಡೆಯಲು ಹೋದರೆ, ಆಕೆಗೆ ಸಿಕ್ಕಿದ್ದು ತೀರ್ಥ ಮತ್ತು ಗಂಧ ಮಾತ್ರ.

ಮಾಹಿತಿ: ಸೌಮ್ಯ ನಾರಾಯಣ ಆಚಾರಿ ಮತ್ತು ಪ್ರಾಚ್ಯ ವಸ್ತು ಇಲಾಖೆ

3 ಕಾಮೆಂಟ್‌ಗಳು:

Ashok ಹೇಳಿದರು...

Nice Pond...thanks for information...

Chetana ಹೇಳಿದರು...

yes...even I liked that pond very much :)

ರಾಜೇಶ್ ನಾಯ್ಕ ಹೇಳಿದರು...

ಅಶೋಕ್, ಚೇತನಾ,
ಧನ್ಯವಾದ.