ಮಂಗಳವಾರ, ಜುಲೈ 10, 2012

ಕುಂಬ್ಳೆ ಹಾಗೂ ಕೆಪಿಎಲ್

ಅನಿಲ್ ಕುಂಬ್ಳೆ ಕೆ‍ಎಸ್‍ಸಿಎ ಚುಕ್ಕಾಣಿ ಹಿಡಿದು ಒಂದು ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. ಆದರೆ ಈ ಅವಧಿಯಲ್ಲಿ ಆಡಳಿತದಲ್ಲಿ ಅವರು ಏನು ಸುಧಾರಣೆಗಳನ್ನು ತಂದಿದ್ದಾರೆ ಎನ್ನುವುದರ ಬದಲು ಏನು ಪ್ರಮಾದಗಳನ್ನು ಮಾಡಿದ್ದಾರೆ ಎಂಬುವುದೇ ಕಣ್ಣಿಗೆ ರಾಚಿತ್ತಿರುವುದು ದುರಾದೃಷ್ಟ. ಯಾವುದೇ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದು ಸುದ್ದಿಯಾಗುವುದಿಲ್ಲ. ಸುದ್ದಿ ಆಗಬೇಕಾಗೂ ಇಲ್ಲ, ಆಗಲೂಬಾರದು. ಯಾಕೆಂದರೆ ಒಳ್ಳೆಯ ಕೆಲಸ ಮಾಡುವುದು ಆ ವ್ಯಕ್ತಿಯ ಜವಾಬ್ದಾರಿ. ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅದು ಸುದ್ದಿಯಾಗುವ ಅವಶ್ಯಕತೆಯೂ ಇಲ್ಲ. ಆದರೆ ಜವಾಬ್ದಾರಿ ನಿರ್ವಹಣೆಯಲ್ಲಿ ಸ್ವಂತ ಅಭಿಪ್ರಾಯಗಳು ಪಾತ್ರ ವಹಿಸಿದರೆ ಆಗ ಎಡವಟ್ಟುಗಳು ಆಗುವುದು ಸಹಜ. ಆ ಎಡವಟ್ಟುಗಳು ಸುದ್ದಿಯಾಗುವುದೂ ಅಷ್ಟೇ ಸಹಜ.

ಎಷ್ಟೋ ವರ್ಷಗಳಿಂದ ಕೆ‍ಎಸ್‍ಸಿಎಯಲ್ಲಿ ಮನೆಮಾಡಿರುವ ಲಂಚಗುಳಿತನ, ಸೋಮಾರಿತನ, ಭ್ರಷ್ಟಾಚಾರ, ಪಟ್ಟಭದ್ರಹಿತಾಸಕ್ತಿತನ ಇತ್ಯಾದಿಗಳನ್ನು ಹೋಗಲಾಡಿಸುವುದು ಯಾರಿಂದಲೂ ಅಸಾಧ್ಯ. ಅದಕ್ಕೆ ಹಲವಾರು ವರ್ಷಗಳೇ ಬೇಕು. ಈ ಹಲವಾರು ವರ್ಷಗಳ ಕಾಲ ಕುಂಬ್ಳೆಯಂತಹ ಪ್ರಾಮಾಣಿಕ ವ್ಯಕ್ತಿಗಳೇ ಚುಕ್ಕಾಣಿ ಹಿಡಿದರೆ ಸಾಧ್ಯವಾಗಬಹುದಾದ ಕೆಲಸವದು. ಆದರೆ ಇದ್ದಷ್ಟು ಕಾಲ ಅಸಮಾಧಾನಗಳಿಗೆ ಅನುವು ಮಾಡಿಕೊಡದೆ ಕಾರ್ಯನಿರ್ವಹಿಸುವತ್ತ ಕುಂಬ್ಳೆ ಎಡವುತ್ತಿದ್ದಾರೆ ಎಂದು ಅನಿಸುತ್ತಿದೆ. ಎಲ್ಲರನ್ನೂ ಸಂತುಷ್ಟರನ್ನಾಗಿರಿಸಿ ಕಾರ್ಯನಿರ್ವಹಿಸುವುದು ಅಸಾಧ್ಯ. ಆದರೆ ಕುಂಬ್ಳೆಯ ಸ್ವಂತ ಅಭಿಪ್ರಾಯಗಳು ಕೆಲವು ವಿಷಯಗಳಲ್ಲಿ ತೊಂದರೆಗಳನ್ನು ಹುಟ್ಟುಹಾಕಿರುವುದು ಕಾಣಬರುತ್ತದೆ.

ನಾಲ್ಕು ವರ್ಷಗಳ ಹಿಂದೆ ಕೆಪಿಎಲ್ ಜನ್ಮತಾಳಿದಾಗ ಅಪಸ್ವರ ಹಾಡಿದ್ದು ಮೂವ್ವರು ಕ್ರಿಕೆಟಿಗರು ಮಾತ್ರ - ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ರಾಹುಲ್ ದ್ರಾವಿಡ್. ಶ್ರೀನಾಥ್ ಅದಾಗಲೇ ನಿವೃತ್ತಿ ಹೊಂದಿದ್ದು, ಉಳಿದಿಬ್ಬರು ಐಪಿಎಲ್‍ನಲ್ಲಿ ಆಡಿದವರು ಮತ್ತು ಈಗಲೂ ಐಪಿಎಲ್‍ನೊಂದಿಗೆ ಸಂಬಂಧವನ್ನು ಒಂದಲ್ಲಾ ಒಂದು ರೀತಿಯಲ್ಲಿ ಇಟ್ಟುಕೊಂಡವರು. ಶ್ರೀನಾಥ್ ಕೂಡಾ ಐಪಿಎಲ್ ವಿರುದ್ಧ ಮಾತನಾಡಿದವರಲ್ಲ ಎಂಬುವುದು ಗಮನಾರ್ಹ. ಆದರೆ ಈ ಮೂವ್ವರು ಕೆಪಿಎಲ್‍ನ್ನು ಮಾತ್ರ ಬಹಿರಂಗವಾಗಿಯೇ ವಿರೋಧಿಸಿದರು. ಯುವಕ್ರಿಕೆಟಿಗರ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಇದು ಸರಿಯಾದ ದಾರಿಯಲ್ಲ ಎನ್ನುವುದು ಇವರ ಒಟ್ಟಾರೆ ಅಭಿಪ್ರಾಯ.

ಹಾಗಿದ್ದಲ್ಲಿ ಐಪಿಎಲ್ ಯುವಕ್ರಿಕೆಟಿಗರಿಗೆ ಉತ್ತಮ ಮಾದರಿಯೇ? ಹಣ ಗಳಿಸಲು ಇರಬಹುದು. ಆದರೆ ವೈಯುಕ್ತಿಕ ಬೆಳವಣಿಗೆಗೆ? ಖಂಡಿತವಾಗಿಯೂ ಅಲ್ಲ. ಐಪಿಎಲ್ ದ್ವೇಷಿಸದ ಅನಿಲ್, ಕೆಪಿಎಲ್‍ನ್ನು ಮಾತ್ರ ಯಾಕೆ ದ್ವೇಷಿಸುತ್ತಿದ್ದಾರೆ ಎಂದೇ ತಿಳಿಯದಾಗಿದೆ. ವೈಯುಕ್ತಿಕವಾಗಿ ಅವರು ಎಂದೂ ಕೆಪಿಎಲ್‍ನ್ನು ಇಷ್ಟಪಟ್ಟವರಲ್ಲ. ಆದರೆ ಅವರು ಈಗ ಇರುವ ಹುದ್ದೆ ವೈಯುಕ್ತಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಿಲ್ಲ. ನದಿಯ ಹರಿವಿನೊಂದಿಗೆ ಹೋಗುವುದು ಎಂದೂ ಕುಂಬ್ಳೆ ಇಷ್ಟಪಟ್ಟವರಲ್ಲ. ಆದರೆ ಕೆಪಿಎಲ್ ವಿಷಯದಲ್ಲಿ ನದಿಯ ಹರಿವು ಸಹಜವಾಗಿಯೂ ರಭಸವಾಗಿಯೂ ಇರುವಾಗ ಕುಂಬ್ಳೆ ಯಾಕೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆನ್ನುವುದು ತಿಳಿದುಬರುತ್ತಿಲ್ಲ. ಐಪಿಎಲ್ ಎಂಬ ಗಂಗೆಯೊಂದಿಗೆ ಸಾಗಲು ಸಾಧ್ಯವಾಗುವಾಗ ಕೆಪಿಎಲ್ ಎಂಬ ಶರಾವತಿಯೊಂದಿಗೆ ಸಾಗಲು ಯಾಕೆ ಹಿಂದೇಟು?

ಕುಂಬ್ಳೆ ಮತ್ತು ಟೀಮ್‍ನ ನಿರಾಸಕ್ತಿಯ ಕಾರಣ ಕೆಪಿಎಲ್-೩ ನಡೆಯಲೇ ಇಲ್ಲ. ಈಗಾಗಲೇ ತಂಡದ ಮಾಲಕರ ಮತ್ತು ಕೆ‍ಎಸ್‍ಸಿಎ ನಡುವೆ ಎರಡು ಸುತ್ತಿನ ಮಾತುಕತೆಗಳು ನಡೆದಿವೆ. ಮೊದಲ ಸುತ್ತಿನಲ್ಲಿ ಬರೀ ಗೌಜಿ ಗಲಾಟೆ ಮತ್ತು ಕುಂಬ್ಳೆ ತಂಡದ ವಿರುದ್ಧ ಮಾಲಕರ ದೂರುಗಳು. ಎರಡನೇ ಸುತ್ತಿನಲ್ಲಿ ಸ್ವಲ್ಪ ಸೌಮ್ಯ ಧೋರಣೆ ತಾಳಿದ ಕೆ‍ಎಸ್‍ಸಿಎ ಸೆಪ್ಟೆಂಬರ್‌‍ನಲ್ಲಿ ಕೆಪಿಎಲ್ ನಡೆಸುವ ಮಾತುಕೊಟ್ಟಿದೆ. ಕೆ‍ಎಸ್‍ಸಿಎಯ ಈ ನಡತೆಯಿಂದ ಬೇಸತ್ತು ಈಗಾಗಲೇ ೩ ತಂಡಗಳ ಮಾಲೀಕರು ತಮ್ಮ ತಂಡಗಳನ್ನು ವಿಸರ್ಜನೆಗೊಳಿಸಿದ್ದಾರೆ.

ವಿಪರ್ಯಾಸವೆಂದರೆ ಕೆಪಿಎಲ್ ವಿರೋಧಿ ಕೆ‍ಎಸ್‍ಸಿಎ ಅಧ್ಯಕ್ಷರು, ಐಪಿಎಲ್ ತಂಡದೊಂದಿಗೆ ಫುಲ್‍ಟೈಮ್ ಜವಾಬ್ದಾರಿ ಹೊತ್ತಿದ್ದಾರೆ. ಈ ಜವಾಬ್ದಾರಿಯ ಕಾರಣ ವರ್ಷಕ್ಕೆ ೨ ತಿಂಗಳು ಕುಂಬ್ಳೆ, ಕೆ‍ಎಸ್‍ಸಿಎ ಕಚೇರಿಯತ್ತ ಸುಳಿಯುವುದೇ ಇಲ್ಲ. ಅಲ್ಲಿ ಐಪಿಎಲ್ ನಡೆಯುತ್ತಿದ್ದರೆ ಇಲ್ಲಿ ಕೆ‍ಎಸ್‍ಸಿಎ ಅಧ್ಯಕ್ಷರೇ ಇಲ್ಲ. ಹಾಗಿರುವಾಗ ಕೆ‍ಎಸ್‍ಸಿಎ ದೈನಂದಿನ ಕಾರ್ಯಗಳು ನಡೆಯುವುದಾದರೂ ಹೇಗೆ? ಅದು ಸಾಧ್ಯವಾಗುವುದು ಕುಂಬ್ಳೆಯ ಎರಡು ಸಮರ್ಥ ಸೇನಾನಿಗಳಾಗಿರುವ ಜಾವಗಲ್ ಶ್ರೀನಾಥ್ ಮತ್ತು ವಿಜಯ್ ಭಾರದ್ವಾಜ್ ಇವರುಗಳಿಂದ. ಬೆಂಗಳೂರು ಸಮೀಪದ ಆಲೂರಿನಲ್ಲಿ ಒಂದೇ ನಿವೇಶನದಲ್ಲಿ ೩ ಸುಂದರ ಹಸಿರುಹುಲ್ಲು ಮೈದಾನಗಳನ್ನು ನಿರ್ಮಿಸಿರುವ ಕೀರ್ತಿ ವಿಜಯ್ ಭಾರದ್ವಾಜ್‍ಗೆ ಸಲ್ಲುತ್ತದೆ.

ಯುವಕ್ರಿಕೆಟಿಗರ ಬೆಳವಣಿಗೆಗೆ ಕೆಪಿಎಲ್ ಸರಿಯಾದ ಮಾದರಿಯಲ್ಲ ಎನ್ನುವ ಅನಿಲ್, ಪಂದ್ಯವೊಂದರಲ್ಲಿ ಅಜೇಯ ೪೫೧ ಓಟಗಳನ್ನು ಗಳಿಸಿದ ಮಹಾರಾಷ್ಟದ ಹದಿನೇಳರ ಹರೆಯದ ವಿಜಯ್ ಝೋಲ್‍ನನ್ನು (ಹೆಸರು ಝೋಲೆ ಅಥವಾ ಝೋಳೆ ಎಂದೂ ಇರಬಹುದು) ತಾನೇ ಖುದ್ದಾಗಿ ಆರ್‌ಸಿಬಿಗೆ ಸೇರಿಸಿದ್ದು ಯಾಕೆ? ಕೆಪಿಎಲ್ ಮತ್ತು ಐಪಿಎಲ್ ನಡುವಿನ ವ್ಯತ್ಯಾಸವೇನೆಂದು ಕುಂಬ್ಳೆನೇ ವಿವರಿಸಬೇಕು. ಝೋಲ್‍ಗೆ ಐಪಿಎಲ್ ಒಳ್ಳೆಯ ಮಾದರಿಯಾದರೆ, ಮಂಗಳೂರಿನ ಹದಿನೇಳರ ಹರೆಯದ ಯುವ ಕ್ರಿಕೆಟಿಗ ಲಿನ್ ಡಿಸೋಜಾನಿಗೆ ಕೆಪಿಎಲ್ ಯಾಕೆ ಒಳ್ಳೆಯ ಮಾದರಿಯಲ್ಲ? ಕೆಪಿಎಲ್‍ನಿಂದ ತಾನೆ ಜೊನಾಥನ್ ರಾಂಗ್ಸೆನ್ ರಾಜ್ಯ ತಂಡವನ್ನು ಪ್ರತಿನಿಧಿಸಲು ಸಾದ್ಯವಾದದ್ದು? ಕೆಪಿಎಲ್‍ನಿಂದ ತಾನೆ ಮಿಥುನ್ ಬೀರಾಲ ತನ್ನ ಸ್ವಂತ ಸಾಮರ್ಥ್ಯದಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು? ಕೆಪಿಎಲ್‍ನಿಂದ ತಾನೆ ಅರುಣ್ ಕುಮಾರ್, ಆನಂದ್ ಕಟ್ಟಿ, ಡೇವಿಡ್ ಜಾನ್ಸನ್ ಮತ್ತು ಮನ್ಸೂರ್ ಅಲಿ ಖಾನ್ ’ಓಲ್ಡ್ ಈಸ್ ಗೋಲ್ಡ್’ ಎಂದು ಮತ್ತೆ ಸಾಬೀತುಪಡಿಸಿದ್ದು?

ಕೆಪಿಎಲ್ ಬಗ್ಗೆ ಅಷ್ಟೆಲ್ಲಾ ಹಗೆಯಿದ್ದರೆ ಆಯಾ ತಂಡದ ಮಾಲೀಕರಿಗೆ ಅವರು ಖರ್ಚು ಮಾಡಿದ ಹಣವನ್ನು ವಾಪಸ್ಸು ನೀಡಿ ಕೆಪಿಎಲ್ ಎಂಬ ಪಂದ್ಯಾವಳಿಯನ್ನೇ ಕೊಂದುಬಿಡಬಹುದಲ್ಲವೇ? ಮಾಲೀಕರಿಗೆ ತಮ್ಮ ತಮ್ಮ ಹಣ ವಾಪಾಸು ಸಿಕ್ಕರೆ ಅವರೂ ಖುಷ್, ’ಯುವಕರಿಗೆ ಸರಿಯಾದ ಮಾದರಿಯಲ್ಲದ’ ಪಂದ್ಯಾವಳಿ ಇನ್ನೂ ಪ್ರಸಿದ್ಧಿ ಪಡೆಯುವ ಮೊದಲೇ ಅದನ್ನು ಹೊಸಕಿಹಾಕಿದ ಸಾಧನೆ ಮಾಡಿದ ಕೆ‍ಎಸ್‍ಸಿಎಯೂ ಖುಷ್. ಹಾಗೆ ಮಾಡುವ ಧೈರ್ಯವನ್ನೂ ಕೆ‍ಎಸ್‍ಸಿಎ ತೋರುತ್ತಿಲ್ಲ.

ಸುಮಾರು ವರ್ಷಗಳ ಮೊದಲು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ದೇಶೀಯ ಕ್ರಿಕೆಟ್ ಪಂದ್ಯಗಳ ವಿವರವನ್ನು ಜೋಸೆಫ್ ಹೂವರ್ ಎಂಬ ಕ್ರೀಡಾ ಪತ್ರಕರ್ತರು ನೀಡುತ್ತಿದ್ದರು. ಅವರ ವಿವರಗಳು ಮತ್ತು ವಿಶ್ಲೇಷಣೆಗಳು ಅದ್ಭುತವಾಗಿರುತ್ತಿದ್ದವು. ಕನಿಷ್ಟ ಎರಡು ಸಲ ಓದದಿದ್ದರೆ ನನಗೆ ಸಮಾಧಾನವಿರುತ್ತಿರಲಿಲ್ಲ. ಹಿಂದೂ ಪತ್ರಿಕೆಯಲ್ಲಿ ಆರ್.ಮೋಹನ್‍ರ ಅಂತರಾಷ್ಟ್ರೀಯ ಪಂದ್ಯಗಳ ವಿವರ ಮತ್ತು ಡೆಕ್ಕನ್ ಹೆರಾಲ್ಡ್‌ನಲ್ಲಿ ಜೋಸೆಫ್ ಹೂವರ್ ಅವರ ದೇಶೀಯ ಪಂದ್ಯಗಳ ವಿವರ ಓದುವುದರಲ್ಲೇ ತುಂಬಾ ಆನಂದ ಸಿಗುತ್ತಿತ್ತು. ಜೋಸೆಫ್ ಹೂವರ್ ಈಗ ಕೆಪಿಎಲ್‍ನಲ್ಲಿ ಬೆಳಗಾವಿ ತಂಡದ ಜೊತೆಗಿದ್ದಾರೆ.

ವಿಜಯವಾಣಿ ಪತ್ರಿಕೆಯಲ್ಲಿ ಈಗ ಹೂವರ್ ’ದಿಟ್ಟ ಆಟ’ ಎಂಬ ಅಂಕಣ ಬರೆಯುತ್ತಿದ್ದಾರೆ. ಇವರ ಅಂಕಣಗಳನ್ನು ಗಮನಿಸಿದರೆ ಈಗ ಅಧಿಕಾರದಲ್ಲಿರುವ ಕೆ‍ಎಸ್‍ಸಿಎ ಪದಾಧಿಕಾರಿಗಳ ವಿರುದ್ಧ ಇವರ ಸಮರ ಈ ಅಂಕಣದ ಮೂಲಕ ಸಾಗಿದೆ. ಇಷ್ಟು ವರ್ಷಗಳ ಕಾಲ ಹೇಳಲಾಗದ್ದನ್ನು ’ದಿಟ್ಟ ಆಟ’ದ ಮೂಲಕ ಹೂವರ್ ಹೇಳಿಕೊಳ್ಳುತ್ತಿದ್ದಾರೋ ಅಥವಾ ನಿಜವಾಗಿಯೂ ’ದಿಟ್ಟ ಆಟ’ವನ್ನೇ ಆಡುತ್ತಿದ್ದಾರೋ ಅಥವಾ ಕೆಪಿಎಲ್ ಬಗ್ಗೆ ಕೀಳು ಅಭಿಪ್ರಾಯ ಮತ್ತು ಧೋರಣೆಯನ್ನು ಹೊಂದಿರುವ ಕೆ‍ಎಸ್‍ಸಿಎ ವಿರುದ್ಧ ’ದಿಟ್ಟ ಆಟ’ದ ಮೂಲಕ ಹುಳುಕುಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿ ಸೇಡು ತೀರಿಸುತ್ತಿದ್ದಾರೋ ನನಗಂತೂ ಗೊತ್ತಾಗುತ್ತಿಲ್ಲ.

ಕೆ‍ಎಸ್‍ಸಿಎಯ ಕೆಳಹಂತದ ನೌಕರರಿಗೆ ಇರುವ ಕಡಿಮೆ ಸಂಬಳದ ಕುರಿತಾಗಿ ಮತ್ತು ಅವರಿಗೆ ಬೋನಸ್ ಸಿಗದೆ ಎಷ್ಟೋ ವರ್ಷಗಳು ಉರುಳಿರುವುದರ ಬಗ್ಗೆಯಿಂದ ಶುರುವಾಗಿ ಅಶೋಕಾನಂದ್ ಆಯ್ಕೆ ಸಮಿತಿಯ ಸದಸ್ಯರಾಗಿ ಅರ್ಧ ಶತಕ ಸಾಧಿಸಿದ್ದರ ತನಕ ಹೂವರ್ ದಿಟ್ಟ ಆಟ ಸಾಗಿದೆ. ಈ ಎರಡು ಲೇಖನಗಳ ನಡುವೆ ಇನ್ನೂ ಒಂದೆರಡು ಲೇಖನಗಳೂ ಬಂದಿದ್ದು ಈಗ ನೆನಪಾಗುತ್ತಿಲ್ಲ. ಆದರೆ ಒಂದಂತೂ ನಿಜ. ಹಲವಾರು ವರ್ಷಗಳಿಂದ ಕೆ‍ಎಸ್‍ಸಿಎ ಬಗ್ಗೆ ನನ್ನನ್ನು ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಹೂವರ್ ’ದಿಟ್ಟ ಆಟ’ದ ಮೂಲಕ ಉತ್ತರ ದೊರಕಿತು.

ತೂಮಕೂರಿನ ಪಾಲ್ ರಾಮಚಂದ್ರರಾವ್ ಅಶೋಕಾನಂದ್, ಕರ್ನಾಟಕ (ಆಗ ಮೈಸೂರು) ಅಲ್ಲದೆ ಹೈದರಾಬಾದ್ ಮತ್ತು ತಮಿಳುನಾಡು (ಆಗ ಮದ್ರಾಸ್) ತಂಡವನ್ನೂ ಪ್ರತಿನಿಧಿಸಿದವರು. ೧೯೫೭ರಿಂದ ಆರಂಭಿಸಿ ೧೯೭೨ರವರೆಗೆ ದೇಶೀಯ ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಕರ್ನಾಟಕದ ಪರವಾಗಿ ಆರಂಭಿಕ ಆಟಗಾರನಾಗಿ ಆಡಿದ್ದಾರೆ. ಆಯ್ಕೆಗಾರನಾಗಿ ಯಾವುದೇ ತಾರತಮ್ಯ ಇವರು ಮಾಡದೇ ಇದ್ದರೂ, ಇವರು ಯಾಕೆ ಯಾವಾಗಲೂ ಆಯ್ಕೆ ಸಮಿತಿಯಲ್ಲಿರುತ್ತಾರೆ ಎಂಬ ಪ್ರಶ್ನೆ ಕಳೆದ ಹಲವಾರು ವರ್ಷಗಳಿಂದ ನನ್ನನ್ನು ಕಾಡುತ್ತಿತ್ತು. ಆಯ್ಕೆ ಸಮಿತಿಯ ಸದಸ್ಯ ಎಂಬ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಂತರಾಷ್ಟ್ರೀಯ, ದೇಶೀಯ ಮತ್ತು ಐಪಿಎಲ್ ಪಂದ್ಯಗಳ ನಂತರ ನಡೆಯುವ ಬಹುಮಾನ ವಿತರಣೆ ಸಂದರ್ಭದಲ್ಲೂ ಸೂಟುಬೂಟುಧಾರಿಯಾಗಿ ಅಶೋಕಾನಂದ್ ಹಾಜರಿರುತ್ತಿದ್ದರು. ಆದರೆ ಒಂದು ಬಾರಿಯೂ ತಪ್ಪಿಯೂ ಆಯ್ಕೆ ಸಮಿತಿಯ ಉಳಿದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದುದು ನಾನಂತೂ ಗಮನಿಸಿಲ್ಲ. ಇಷ್ಟೇ ಅಲ್ಲದೆ ಆಯ್ಕೆ ಸಮಿತಿಯ ಉಳಿದ ಸದಸ್ಯರು ಬದಲಾದರೂ ಅಶೋಕಾನಂದ್ ಬದಲಾಗುತ್ತಿರಲಿಲ್ಲ! ಅವರು ಒಂಥರಾ ’ಅಜರಾಮರ ಆಯ್ಕೆಗಾರ’. ಇದಕ್ಕೆ ಕಾರಣ ಅವರಲ್ಲಿರುವ ಅಪಾರ ವೋಟ್ ಬ್ಯಾಂಕ್ ಎನ್ನುವುದು ಹೂವರ್ ಅಂಕಣದ ಮೂಲಕವೇ ತಿಳಿದುಬಂತು. ಕುಂಬ್ಳೆ ಮತ್ತು ತಂಡ ಕೂಡಾ ವೋಟುಗಳಿಗಾಗಿ ಅಶೋಕಾನಂದ್ ಅವರನ್ನು ಆಯ್ಕೆ ಸಮಿತಿಗೆ ನೇಮಿಸಿದ್ದು ದು:ಖದ ವಿಷಯ.

ಹೂವರ್ ಕೇಳುವ ಪ್ರಶ್ನೆಯೇನೆಂದರೆ ಆಯ್ಕೆ ಸಮಿತಿಯನ್ನು ಬೆಂಗಳೂರು ಲೀಗಿನ ಪಂದ್ಯಗಳು ಆರಂಭವಾಗುವ ಮೊದಲೇ ನೇಮಿಸಬೇಕಲ್ಲವೇ ಎಂದು. ಆದರೆ ಕುಂಬ್ಳೆ ಮತ್ತು ಟೀಮ್, ಆಯ್ಕೆಗಾರರು ಯಾರು ಎನ್ನುವುದನ್ನು ಲೀಗಿನ ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿರುವಾಗ ಅಂತಿಮಗೊಳಿಸಿರುವುದು ಏನನ್ನು ಸೂಚಿಸುತ್ತದೆ? ಲೀಗ್ ಪಂದ್ಯಗಳ ಸರಾಸರಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಆಟಗಾರರ ಅರ್ಹತೆಯನ್ನು ಅಳೆಯಲಾಗುತ್ತದೆ ಎನ್ನುವುದು ಇದರ ಅರ್ಥ. ರನ್ನು/ವಿಕೆಟ್ ಗಳಿಸಿದ ಸನ್ನಿವೇಶ, ರನ್ನು/ವಿಕೆಟ್ ಗಳಿಸಿದ ರೀತಿ, ಯಾವ ಪಿಚ್‍ನಲ್ಲಿ ಆಡಿದ್ದು, ಬಲಿಷ್ಟ ತಂಡಗಳ ವಿರುದ್ಧ ಗಳಿಸಿದ ರನ್ನು/ವಿಕೆಟ್ ಎಷ್ಟು ಎಂಬಿತ್ಯಾದಿ ಪ್ರಮುಖ ಮಾನದಂಡನೆಗಳಿಲ್ಲದೆ ರಾಜ್ಯ ತಂಡದ ಆಯ್ಕೆ ಮಾಡಲಾಗುತ್ತದೆ. ಚುಕ್ಕಾಣಿ ಹಿಡಿದವರು ಬದಲಾದರೂ ’ಸಿಸ್ಟಮ್’ ಬದಲಾಗಿಲ್ಲ ಎನ್ನುವುದೇ ಖೇದಕರ.

ತಂಡದ ಆಯ್ಕೆಯ ವಿಷಯ ಬಂದಾಗ ಸ್ಟುವರ್ಟ್ ಬಿನ್ನಿಯ ಬಗ್ಗೆ ಬರೆಯದಿದ್ದರೆ ಹೇಗೆ? ೨೦೦೩ರಲ್ಲಿ ತನ್ನ ೧೯ನೇ ವಯಸ್ಸಿನಲ್ಲೇ ರಾಜ್ಯಕ್ಕೆ ಆಡುವ ಭಾಗ್ಯ ಈತನದ್ದು. ದೌರ್ಭಾಗ್ಯ ಕರ್ನಾಟಕದ್ದು. ಬರೋಬ್ಬರಿ ಎಂಟು ಋತುಗಳಲ್ಲಿ ಬೇಜವಾಬ್ದಾರಿ ಆಟ ಪ್ರದರ್ಶಿಸಿದರೂ ಮತ್ತೆ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲನಾಗಿದ್ದು ಒಂದು ದೊಡ್ಡ ’ಕೇಸ್ ಸ್ಟಡಿ’ ಆಗಬಹುದೇನೋ! ೨೦೧೦ರ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ರಣಜಿ ಫೈನಲ್ ಪಂದ್ಯ ನೆನಪಿದೆ ತಾನೆ? ಆ ಪಂದ್ಯಕ್ಕೆ ಬಾಲಚಂದ್ರ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು ’ದೊಡ್ಡ ವಿಷಯ’ವಾಗಿತ್ತು. ಆದರೂ ಜವಾಬ್ದಾರಿ ತೋರದ ಸ್ಟುವರ್ಟ್ ಪಂದ್ಯದ ಎಲ್ಲಾ ದಿನ ತಡರಾತ್ರಿ ತನಕ ಮೈಸೂರು ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಗುಂಡು ಏರಿಸುತ್ತಾ ಪಾರ್ಟಿ ಮಾಡಿದ್ದು ಎಲ್ಲೂ ಸುದ್ದಿಯಾಗದಂತೆ ನೋಡಿಕೊಳ್ಳಲಾಯಿತು. ಈಗ ಒಮ್ಮೆಲೇ ಜ್ಞಾನೋದಯವಾದಂತೆ ಉತ್ತಮ ನಿರ್ವಹಣೆ ತೋರಿದ ಹಿಂದಿನ ರಹಸ್ಯವೇನು? ಕಳೆದ ಎಂಟು ಋತುಗಳಲ್ಲಿ ಆದಂತೆ ಇನ್ನು ಮುಂದೆ ಅನಾಯಾಸವಾಗಿ ಆಯ್ಕೆಯಾಗುವುದು ಅಸಾಧ್ಯವಾದ ಮಾತು ಎಂಬ ಕಿವಿಮಾತು ಕುಂಬ್ಳೆ ತಂಡದಿಂದ ರೋಜರ್‌ಗೆ ಹೋಗಿರುವ ಸಾಧ್ಯತೆಯಿದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಅದೆಷ್ಟು ಪ್ರತಿಭಾವಂತ ಆಟಗಾರರಿಗೆ ಈ ಕಾರಣದಿಂದ ಅವಕಾಶ ತಪ್ಪಿರಬಹುದು? ಸ್ಟುವರ್ಟ್‍ನನ್ನು ದಾರಿಗೆ ತಂದದಕ್ಕಾದರೂ ಕುಂಬ್ಳೆಗೆ ಧನ್ಯವಾದ ಹೇಳಬಹುದೇನೋ.

ಐಪಿಎಲ್ ಪಂದ್ಯದ ಸಮಯದಲ್ಲಿ ಟಿಕೇಟು ಹಂಚುವ ವಿಷಯದಲ್ಲಿ ಆದ ಗೊಂದಲ, ಕಸ ವಿಲೇವಾರಿ ಮಾಡದ ಬೆಂಗಳೂರು ಮಹಾನಗರಪಾಲಿಕೆಯ ಸೇಡಿನ ವರ್ತನೆ, ವೆಂಕಟೇಶ್ ಪ್ರಸಾದ್ ಪೋಲೀಸ್ ಅಧಿಕಾರಿಯೊಡನೆ ಉದ್ಧಟತನದಿಂದ ವರ್ತಿಸಿದ ಘಟನೆ, ತನ್ನ ಸ್ವಂತ ಸಾಮರ್ಥ್ಯದಿಂದ ರಾಷ್ಟ್ರ ತಂಡಕ್ಕೆ ವಿನಯ್ ಕುಮಾರ್ ಆಯ್ಕೆಯಾದರೂ ಅಲ್ಲಿ ಅನಿಲ್ ಕೈವಾಡ ಇರುವ ಶಂಕೆ, ಇವನ್ನೆಲ್ಲಾ ಸರಿಯಾದ ’ಪಬ್ಲಿಕ್ ರಿಲೇಷನ್ಸ್’ ಇದ್ದರೆ ಅಲ್ಲೇ ಮ್ಯಾನೇಜ್ ಮಾಡಿಕೊಳ್ಳಬಹುದಾದ ವಿಷಯಗಳಾಗಿದ್ದವು.

ಎಷ್ಟೇ ಸ್ವಾಭಿಮಾನಿಯಾದ, ಪ್ರಾಮಾಣಿಕವಾದ ಹಾಗೂ ಸಮರ್ಥನಾದ ವ್ಯಕ್ತಿ ಬಂದರೂ ಕೆ‍ಎಸ್‍ಸಿಎಯಲ್ಲಿ ಕೆಲವೊಂದು ವಿಷಯಗಳಲ್ಲಿ ಏನೂ ಬದಲಾವಣೆ ಆಗದು ಎಂದೆನಿಸುತ್ತಿದೆ.

ಅಂದ ಹಾಗೆ ಕೆಲವು ಪ್ರತಿಭಾವಂತ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟಕರ ಎಂದು ಮನಗಂಡು ಬೇರೆ ರಾಜ್ಯಗಳಿಗೆ ಆಡುವ ಪರಿಪಾಠ ಈಗಲೂ ಮುಂದುವರಿದಿದೆ. ಹುಬ್ಬಳ್ಳಿಯ ೨೩ರ ಹರೆಯದ ನಿತಿನ್ ಬಿಲ್ಲೆ ಈಗ ರೈಲ್ವೇಸ್ ಪರವಾಗಿ ಆಡುತ್ತ ತನ್ನ ಚೊಚ್ಚಲ ಋತುವಿನಲ್ಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನ ೨೦ರ ಹರೆಯದ ಯುವ ಆರಂಭಿಕ ಬ್ಯಾಟ್ಸ್‌ಮನ್ ವಿ.ಚೆಲುವರಾಜ್ ಕೂಡಾ ಕಳೆದೆರಡು ಋತುಗಳಿಂದ ರೈಲ್ವೇಸ್ ಪರವಾಗಿ ಆಡುತ್ತಾ ಸಾಧಾರಣ ಪ್ರದರ್ಶನ ತೋರಿದ್ದಾರೆ. ಹಾಗೇನೆ ’ಎರಡನೇ ರಾಹುಲ್ ದ್ರಾವಿಡ್’ ಎಂದೇ ಬಿಂಬಿಸಲಾಗಿದ್ದ ಬೆಳಗಾವಿಯ ದೀಪಕ್ ಚೌಗುಲೆ ರಾಜ್ಯ ತಂಡದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದೆ ತಂಡದಿಂದ ಹೊರಬಿದ್ದ ಬಳಿಕ ಕಳೆದೆರಡು ಋತುಗಳಿಂದ ಝಾರ್‌ಖಂಡ್ ಪರವಾಗಿ ಆಡುತ್ತಿದ್ದಾರೆ. ಮೊದಲ ಋತುವಿನಲ್ಲಿ ಆಡಿಸಲಾದ ಕೆಲವು ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದರೆ, ಎರಡನೇ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

3 ಕಾಮೆಂಟ್‌ಗಳು:

ಮಿಥುನ ಕೊಡೆತ್ತೂರು ಹೇಳಿದರು...

chennagide

sunaath ಹೇಳಿದರು...

ಉತ್ತಮ ವಿಶ್ಲೇಷಣೆ. ಒಳ್ಳೇ ಬೌಲಿಂಗ್ ಮಾಡಿದ್ದೀರಿ!

ರಾಜೇಶ್ ನಾಯ್ಕ ಹೇಳಿದರು...

ಮಿಥುನ್, ಸುನಾಥ
ಧನ್ಯವಾದ.