ಭಾನುವಾರ, ಜುಲೈ 01, 2012

ಪುರದೇಶ್ವರ ದೇವಾಲಯ - ಸವದತ್ತಿ


ಸವದತ್ತಿಯ ಮುಖ್ಯ ರಸ್ತೆಯಲ್ಲಿ ಸಿಕ್ಕ ಮಧ್ಯ ವಯಸ್ಕರೊಬ್ಬರಲ್ಲಿ ಪುರದೇಶ್ವರ ದೇವಾಲಯದ ದಾರಿ ಕೇಳಿದೆ. ಅವರು ದಾರಿ ತಿಳಿಸಿ, ’ನಾ ಹೇಳ್ದಂಗ ಹೋಗ್ರಿ, ಎರಡೇ ನಿಮಿಷ್ದೊಳಗ ನೀವ್ ಗುಡಿ ಮುಂದ...’ ಎಂದರು. ಅವರು ನೀಡಿದ ಕರಾರುವಕ್ಕಾದ ಮಾಹಿತಿಯ ಪ್ರಕಾರ ಸಂದಿಗೊಂದಿಗಳಲ್ಲಿ ಬೈಕು ಓಡಿಸಿ ಎರಡೇ ನಿಮಿಷಗಳಲ್ಲಿ ಪುರದೇಶ್ವರ ದೇವಾಲಯವಿರಬೇಕಾದ ಸ್ಥಳ (ಮೂರು ಓಣಿಗಳು ಸಂಧಿಸುವಲ್ಲಿ) ತಲುಪಿದೆ. ಆದರೆ ದೇವಾಲಯ ಕಾಣಲಿಲ್ಲ. ಅವರು ನಾನು ದೇವಾಲಯದ ಮುಂದೆ ಇರುತ್ತೇನೆ ಎಂದಿದ್ದರೇ ಹೊರತು, ದೇವಾಲಯ ನನ್ನ ಮುಂದೆ ಇರುತ್ತದೆ ಎಂದಿರಲಿಲ್ಲ!


ದೇವಾಲಯ ನನ್ನ ಹಿಂದೆ ಇರುವುದನ್ನು ನಾನು ಗಮನಿಸಿರಲಿಲ್ಲ. ಅಲ್ಲಿ ಹರಟೆ ಹೊಡೆಯುತ್ತಿದ್ದ ಹೆಂಗಸರಲ್ಲಿ ದೇವಾಲಯದ ಬಗ್ಗೆ ಕೇಳಿದಾಗ ಕಕ್ಕಾಬಿಕ್ಕಿಯಾದ ಅವರು, ’ಏ... ಇಲ್ಲೇ ಐತಲ್ರೀ, ಯಾರ್ ಬೇಕು ನಿಮಗ....’ ಎಂದು ಕೇಳಿದರು. ಮುಜುಗರ ಉಂಟಾಗಿ, ’ಪುರದೇಶ್ವರನೇ ಬೇಕು..’ ಎಂದೆ. ಅವರು ನಗುತ್ತಾ ’ಒಳಗ್ ಹೋಗ್ರಿ, ಗುಡಿಯೊಳಗ ಕುಂತಾನ...’ ಎಂದರು!
 

ದೇವಾಲಯ ಈಗಿರುವುದು ಖಾಸಗಿ ಸ್ಥಳವೊಂದರಲ್ಲಿ. ಅವರು ಸಹಜವಾಗಿಯೇ ತಮ್ಮ ಸ್ಥಳಕ್ಕೆ ಪ್ರಾಂಗಣ ರಚಿಸಿ ತೆಂಗು, ಬಾಳೆ ಇತ್ಯಾದಿ ಬೆಳೆದಿದ್ದಾರೆ. ಪುರದೇಶ್ವರನ ಮುಂಭಾಗದಲ್ಲಿ ವಿಶಾಲ ಸ್ಥಳಾವಕಾಶ ಇದ್ದರೂ ಉಳಿದ ಮೂರು ಪಾರ್ಶ್ವಗಳಲ್ಲಿ ಈ ಸ್ಥಳದ ಮಾಲೀಕರು ಬೆಳೆಸಿರುವ ಗಿಡಮರಗಳಿವೆ. ಬಲಭಾಗದಲ್ಲಿರುವ ಮನೆಯಲ್ಲಿ ಈ ಸ್ಥಳದ ಯುವ ಮಾಲೀಕ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ದೇವಾಲಯದ ದೈನಂದಿನ ಪೂಜೆ ಮತ್ತಿತರ ಕೆಲಸಗಳ ಜವಾಬ್ದಾರಿಯನ್ನು ಈ ಕುಟುಂಬವೇ ವಹಿಸಿಕೊಂಡಿದೆ.
 

ಖಾಸಗಿ ಜಾಗ ಎಂಬ ಮಾಹಿತಿ ಇಲ್ಲದ ಕಾರಣ ಮನೆಯ ಬಳಿಯಿಂದಲೇ ಹಾದು ದೇವಾಲಯದ ಹಿಂಭಾಗಕ್ಕೆ ತೆರಳಿದೆ. ತಮ್ಮ ಜಾಗದೊಳಗೆ ಗೂಳಿಯಂತೆ ನುಗ್ಗಿದ ನನ್ನನ್ನು ಕಂಡು ಗಾಬರಿಗೊಂಡ ಮನೆಯ ಯುವ ಗೃಹಿಣಿ ಹೊಸ್ತಿಲು ದಾಟದೆ ಅಳುಕುತ್ತಾ ನನ್ನ ಚಟುವಟಿಕೆಯನ್ನು ಗಮನಿಸತೊಡಗಿದಳು. ’ಏನಾದ್ರೂ ಆಗ್ಬೇಕಿತ್ತಾ...?’ ಎಂದು ನಾನು ಕೇಳಿದಾಗ ಗಲಿಬಿಲಿಗೊಂಡ ಆಕೆ, ’ಇಲ್ರೀ ಇಲ್ರೀ ಏನಿಲ್ರೀ ಸರ..., ಗುಡಿ ನೋಡಾಕ ಬಂದ್ರೇನೂ...’ ಎಂದು ಕೇಳಿ ಉಗಳು ನುಂಗಿದಳು. ಆಕೆ ಇನ್ನಷ್ಟು ಹೆದರಿದ್ದನ್ನು ಕಂಡು ’ಹೌದು’ ಎನ್ನುತ್ತಾ ದೇವಾಲಯದ ಹಿಂಭಾಗಕ್ಕೆ ತೆರಳಿದೆ. ದೇವಾಲಯ ಖಾಸಗಿ ಜಾಗದಲ್ಲಿದೆ ಎಂದು ಅರಿವಾದ ಬಳಿಕ, ಅವರದೇ ಜಾಗದಲ್ಲಿ ನಿಂತು ಅವರಿಗೆ ’ಏನಾಗ್ಬೇಕಾಗಿತ್ತು?’ ಎಂದು ಕೇಳಿದ್ದು ನಗು ಬರಿಸಿತು.


ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ತ್ರಿಕೂಟ ದೇವಾಲಯವಿದು. ದೇವಾಲಯದ ಕಲ್ಲಿನ ಹೊರಗೋಡೆ ಅಲ್ಪಸ್ವಲ್ಪ ಮಾತ್ರ ಉಳಿದುಕೊಂಡಿದೆ. ಅಳಿದುಳಿದಿರುವ ಭಿತ್ತಿಚಿತ್ರಗಳನ್ನು ಕಂಡರೆ ದೇವಾಲಯ ತುಂಬಾ ಇಂತಹದೇ ಕೆತ್ತನೆಗಳು ತುಂಬಿದ್ದವು ಎಂದು ತಿಳಿದುಬರುತ್ತದೆ. ಮಕರತೋರಣಗಳು, ದೇವಕೋಷ್ಠಗಳು, ಸಣ್ಣ ಗೋಪುರಗಳು, ಸ್ತಂಭಗಳು ಮತ್ತು ಅಲಂಕಾರಿಕಾ ಕೆತ್ತನೆಗಳನ್ನು ದೇವಾಲಯದ ಹೊರಗೋಡೆಯಲ್ಲಿ ಕಾಣಬಹುದು. ಪ್ರಮುಖ ಗರ್ಭಗುಡಿಯ ಶಿಖರದ ಅವಶೇಷಗಳನ್ನು ಮಾತ್ರ ಈಗ ಕಾಣಬಹುದಾಗಿದೆ.


ಅಷ್ಟರಲ್ಲಿ ಯಾರೋ ಬಂದಂತೆ ಭಾಸವಾಯಿತು. ಒಬ್ಬ ಯುವಕ ನಿಧಾನವಾಗಿ ನನ್ನ ಬಳಿಗೆ ಬಂದು ಪರಿಚಯ ಮಾಡಿಕೊಂಡ. ಈತನೇ ಜಾಗದ ಮಾಲೀಕ. ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ದೇವಾಲಯವನ್ನು ನೋಡಿ ಹೋಗಿರುವರಾದರೂ ಯಾವುದೇ ರೀತಿಯ ಪ್ರತಿಕ್ರಿಯೆ ಅವರಿಂದ ಬಂದಿಲ್ಲ ಎಂದು ಆತ ತಿಳಿಸಿದ.


ಸುಮಾರು ಇಪ್ಪತ್ತು ಕಂಬಗಳಿರುವ ಸಂಭಾಮಂಟಪ ವಿಶಾಲವಾಗಿದ್ದು ಕೆಲವರಿಗೆ ಮಧ್ಯಾಹ್ನದ ನಿದ್ರೆ ಹೊಡೆಯುವ ತಾಣವೂ ಹೌದು. ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ನಂದಿಯನ್ನೂ ಇಲ್ಲೇ ಕಾಣಬಹುದು. ನವರಂಗದಲ್ಲಿ ಎರಡು ದೇವಕೋಷ್ಠಗಳಲ್ಲಿ ಒಂದು ಖಾಲಿಯಿದ್ದು ಇನ್ನೊಂದರಲ್ಲಿ ಇರುವ ಮೂರ್ತಿ ಯಾವುದೆಂದು ನನಗೆ ತಿಳಿಯಲಿಲ್ಲ.


ಮೂರೂ ಗರ್ಭಗುಡಿಗಳಲ್ಲಿ ಶಿವಲಿಂಗವಿದ್ದು ಪ್ರಮುಖ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಮಾತ್ರ ನಿತ್ಯಪೂಜೆ ಸಲ್ಲಿಸಲಾಗುತ್ತದೆ. ಎಲ್ಲಾ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿದ್ದು, ಇವುಗಳ ದ್ವಾರಗಳು ಜಾಲಂಧ್ರವನ್ನು ಹೊಂದಿವೆ. ದೇವಾಲಯ ನೋಡಿಕೊಳ್ಳಲು ಒಂದು ಸಮಿತಿ ಅಥವಾ ಒಂದು ಕೂಟ ಯಾವುದೂ ಅಸ್ತಿತ್ವದಲ್ಲಿಲ್ಲ. ಊರಿನ ಭಕ್ತರನ್ನು ಹೊರತುಪಡಿಸಿದರೆ ಬೇರೆ ಯಾರೂ ಇಲ್ಲಿಗೆ ಬರುವುದಿಲ್ಲ. ಪ್ರವಾಸಿಗರಂತೂ ಇತ್ತ ಸುಳಿಯುವುದೇ ಇಲ್ಲ. ಖಾಸಗಿ ಜಾಗದಲ್ಲಿದೆ ಎಂಬ ಮಾತ್ರಕ್ಕೆ ದೇವಾಲಯ ಇಷ್ಟಾದರೂ ಉಳಿದುಕೊಂಡಿದೆ.


ದೇವಾಲಯದ ಒಳಗೆಲ್ಲಾ ಬಣ್ಣ ಹಚ್ಚಿದವರು ಆ ಯುವಕನ ಅಜ್ಜ. ಆಗ ಈ ಸ್ಥಳದ ಮಾಲೀಕರಾಗಿದ್ದ ಅವರು ದೇವಾಲಯ ಅಂದವಾಗಿ ಕಾಣಬಹುದು ಎಂದು ಭಾವಿಸಿ ಬಣ್ಣ ಹಚ್ಚಿ ಅಂದವನ್ನೆಲ್ಲಾ ಹಾಳುಗೆಡವಿದರು ಎಂದು ಈ ಯುವಕನ ಅಭಿಪ್ರಾಯ. ಈ ಯುವಕನ ಪೂರ್ವಜರೇ ಶಿಥಿಲಗೊಂಡು ಪಾಳುಬಿದ್ದಿದ್ದ ದೇವಾಲಯವನ್ನು ದುರಸ್ತಿಪಡಿಸಿದ್ದಾರೆ.


ನಂತರ ಸವದತ್ತಿ ಪೇಟೆಯಲ್ಲಿ ಹಿರಿಯರೊಬ್ಬರ ಭೇಟಿಯಾಗಿ ಅವರೊಡನೆ ಪುರದೇಶ್ವರ ದೇವಾಲಯದ ಕುರಿತು ಮಾತನಾಡಬೇಕಾದರೆ ದೇವಾಲಯದ ಉಸ್ತುವಾರಿ ನೋಡಲು ಒಂದು ಸಮಿತಿ ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂಬ ವಿಷಯ ತಿಳಿದುಬಂತು. ಊರಿನವರಿಂದ ಮತ್ತು ಹೊರಗಿನ ಊರುಗಳಿಂದಲೂ ದೇವಾಲಯದ ಅಭಿವೃದ್ಧಿಗೆ ಮತ್ತು ಮರುನಿರ್ಮಾಣಕ್ಕೆಂದು ದೊಡ್ಡ ಪ್ರಮಾಣದಲ್ಲಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಒಟ್ಟುಗೂಡಿದ ಹಣವೆಲ್ಲಾ ಎಲ್ಲಿ ಮಾಯವಾಯಿತೆಂದು ಇದುವರೆಗೂ ನಿಗೂಢವಾಗಿದೆ. ಸಮಿತಿ ಎಂದೋ ವಿಸರ್ಜಿತಗೊಂಡಿದ್ದು ಅದರೊಂದಿಗೆ ಸಂಗ್ರಹಗೊಂಡ ಹಣವೂ ಮಾಯವಾಯಿತು. ನನ್ನ ಪ್ರಶ್ನೆಗಳು ಹೆಚ್ಚಾಗುತ್ತಿದ್ದಂತೆ ನಾನ್ನೊಬ್ಬ ಪತ್ರಕರ್ತ ಎಂಬ ಸಂಶಯವುಂಟಾಗಿ ಹೆಚ್ಚಿನ ವಿಷಯವನ್ನು ಅವರು ಬಹಿರಂಗಪಡಿಸಲಿಲ್ಲ.


ಹಣ ಎಲ್ಲಿಹೋಯಿತೋ ಮತ್ತು ಸಮಿತಿಯ ಸದಸ್ಯರು ಎಲ್ಲಿಹೋದರೋ.. ಆದರೆ ದೇವಾಲಯದ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಪ್ರತಿ ಮಳೆಗಾಲದ ಬಳಿಕ ದುರಸ್ತಿಕಾರ್ಯ ಮಾಡಲೇಬೇಕಾಗುತ್ತದೆ ಎಂದು ಯುವ ಮಾಲೀಕನ ಅಳಲು. ದೇವಾಲಯದ ದಕ್ಷಿಣದ ಗರ್ಭಗುಡಿಯ ಛಾವಣಿ ಕುಸಿಯುತ್ತಿರುವುದನ್ನು ಆತ ನನಗೆ ತೋರಿಸಿದ. ಶೀಘ್ರ ದುರಸ್ತಿಪಡಿಸಬೇಕೆಂದು ಪ್ರಾಚ್ಯ ವಸ್ತು ಅಧಿಕಾರಿಗಳಿಗೆ ಪತ್ರ ಬರೆದಿರುವೆನೆಂದೂ, ಬೆಳಗಾವಿಗೆ ತೆರಳಿ ಅವರನ್ನು ಭೇಟಿಯೂ ಮಾಡಿರುವೆನೆಂದು ಆತ ತಿಳಿಸಿದ.


ಸವದತ್ತಿಯಲ್ಲಿರುವ ಇನ್ನೊಂದು ಪ್ರಾಚೀನ ದೇವಾಲಯವಾದ ಅಂಕೇಶ್ವರ ದೇವಾಲಯನ್ನು ಊರವರು ’ಕುಮಾರರಾಮ’ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯಕ್ಕೆ ತೆರಳುವುದೆಂದರೆ ಸವದತ್ತಿಯ ಎಲ್ಲಾ ಓಣಿಗಳ ಪರಿಚಯ ಮಾಡಿಕೊಂಡಂತೆ. ಒಂದು ಓಣಿಯಿಂದ ಇನ್ನೊಂದು ನಂತರ ಮತ್ತೊಂದು ನಂತರ ಮಗದೊಂದು ಹೀಗೆ ದಾರಿ ಕೇಳುತ್ತಾ ಕುಮಾರರಾಮನ ಸನ್ನಿಧಿ ತಲುಪಿದಾಗ, ಇದೇ ರಟ್ಟ ವಂಶದ ರಾಜರಿಂದ ಇಸವಿ ೯೭೦ ರಲ್ಲಿ ನಿರ್ಮಿತ ಅಂಕೇಶ್ವರ ದೇವಾಲಯವೇ ಎಂಬ ಸಂಶಯ ಬರಲಾರಂಭಿಸಿತು.


ದೇವಾಲಯದ ಗರ್ಭಗುಡಿಯ ಹೊರಗೋಡೆಯಲ್ಲಿ ಮಾತ್ರ ಮೂಲ ದೇವಾಲಯದ ರಚನೆಯನ್ನು ಕಾಣಬಹುದು. ಉಳಿದೆಲ್ಲೆಡೆ ಹೊಸತನ, ಆಧುನೀಕರಣ, ಬಣ್ಣ ಇತ್ಯಾದಿ. ಗರ್ಭಗುಡಿಯ ದ್ವಾರದ ಕೆತ್ತನೆಯಲ್ಲಿ ಎರಡು ವೈಶಿಷ್ಟ್ಯಗಳಿವೆ. ಮೊದಲನೇಯದಾಗಿ ಲಲಾಟದಲ್ಲಿ ಗೌತಮ ಬುದ್ಧನ ಕೆತ್ತನೆಯಿದೆ!


ಎರಡನೇಯದಾಗಿ ದ್ವಾರದ ಶಾಖೆಗಳ ತಳಭಾಗದಲ್ಲಿ ಐದು ಸ್ತ್ರೀಯರ ಕೆತ್ತೆನೆಗಳಿವೆ. ಇವಕ್ಕೆಲ್ಲಾ ಬಣ್ಣ ನೀಡಿ ಅಸಹ್ಯಗೊಳಿಸಲಾಗಿದೆ. ದ್ವಾರದ ತಳಭಾಗದಲ್ಲಿರುವ ಎಲ್ಲಾ  ಕೆತ್ತನೆಗಳು ಸ್ತ್ರೀ ರೂಪದ್ದೇ ಆಗಿರುವುದು ಅಪರೂಪ.


ಹಿಂತಿರುಗುವಾಗ ಮತ್ತೆ ಎಲ್ಲಾ ಓಣಿಗಳನ್ನು ದಾಟಿ ಸಂತೆ ನಡೆಯುತ್ತಿದ್ದ ಕೊನೆಯ ಓಣಿ ತಲುಪಿದೆ. ಹದಿನೈದು ಅಡಿ ಅಗಲದ ಓಣಿಯ ಇಕ್ಕೆಲಗಳಲ್ಲಿ ಕುಳಿತಿರುವ ಸಂತೆಯ ಮಾರಾಟಗಾರರು, ಖರೀದಿ ಮಾಡುವ ಭರಾಟೆಯಲ್ಲಿ ಗ್ರಾಹಕರು ಮತ್ತು ಆಚೀಚೆ ಓಡಾಡುವ ಜನರು. ಇವೆಲ್ಲದರೆ ನಡುವೆ ಕಸರತ್ತು ಮಾಡಿ ಬೈಕು ಚಲಾಯಿಸಿ ಇನ್ನೇನು ಮುಖ್ಯರಸ್ತೆ ಸಮೀಪಿಸುತ್ತಿದ್ದಂತೆ ’ಸಿಗ್ಲಿಲ್ಲೇನ್ರಿ ಗುಡಿ...?’ ಎಂಬ ಪ್ರಶ್ನೆ ಎಲ್ಲೋ ಬದಿಯಿಂದ ತೂರಿಬಂತು. ಹಿಂದೆ ತಿರುಗಿ ನೋಡಿದರೆ ಅದೇ ಮಹಿಳೆ! ದೇವಾಲಯಕ್ಕೆ ತೆರಳುವಾಗ ತರಕಾರಿ ಖರೀದಿಸುವುದರಲ್ಲಿ ಮಗ್ನಳಾಗಿದ್ದ ಆಕೆಯ ಬಳಿ ದಾರಿ ಕೇಳಿದ್ದೆ. ಆಕೆಯ ಖರೀದಿ ಇನ್ನೂ ನಡೆದಿತ್ತು.

ಬೈಕು ನಿಲ್ಲಿಸದೇ, ’ಏ... ಸಿಗ್ತ್ರಿ ಮೇಡಮ ಅ ಅ ಅ ಅ....’ ಎಂದೆ.
’ಮತ್ತ.... ಲಗೂನೆ ಬಂದ್ಬಿಟ್ರಲ್ಲ... ಪೂಜಿ ಕೊಟ್ಟಿಲ್ಲೇನ....’!!!!!!!!!!! ಎಂಬ ಅನಿರೀಕ್ಷಿತ ಪ್ರಶ್ನೆ ಬಂದಾಗ ನನ್ನಲ್ಲಿ ಉತ್ತರವಿರಲಿಲ್ಲ.

ಆಗಲೇ ಹೊಳೆದದ್ದು- ಹೌದಲ್ವೇ. ಭೇಟಿ ನೀಡಿದ ಪ್ರಾಚೀನ ದೇವಾಲಯಗಳಲ್ಲಿ ಒಂದು ಕಡೆಯೂ ನಾನು ಪೂಜೆ ಸಲ್ಲಿಸಿದ ನಿದರ್ಶನವಿಲ್ಲ! ನಾಚಿಕೆಗೇಡು. ಆಗಲೇ ನಾನು ಭೇಟಿ ನೀಡುವ ಇನ್ನು ಮುಂದಿನ ದೇವಾಲಯದಲ್ಲಿ ಪೂಜೆ ನೀಡುವ ಅವಕಾಶವಿದ್ದರೆ ನೀಡಬೇಕೆಂಬ ಸಂಕಲ್ಪ ಮಾಡಿಕೊಂಡೆ. ಅಮೃತಾಪುರದ ಅಮೃತೇಶ್ವರ ದೇವಾಲಯದಲ್ಲಿ ಅದು ಈಡೇರಿತು. ತದನಂತರ ಭೇಟಿ ನೀಡಿದ ದೇವಾಲಯಗಳಲ್ಲೂ ಪೂಜೆ ಸಲ್ಲಿಸುವುದನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದೇನೆ.

5 ಕಾಮೆಂಟ್‌ಗಳು:

ನಂಜುಂಡ ರಾಜು ಹೇಳಿದರು...

ಮಾನ್ಯ ರಾಜೇಶ್ ನಾಯ್ಕರವರೇ, ಸವದತ್ತಿಯ ಪುರದೆಶ್ವರ ಮತ್ತು ಅಂಕೆಶ್ವರ ದೇವಾಲಯಗಳ ಬಗ್ಗೆ ಮಾಹಿತಿ ನೀಡಿದ್ದಿರಿ. ಅ ದೇವಾಲಯಗಳು ನಿರ್ವಹಣೆ ಇಲ್ಲದೆ. ಹಾಗೂ ಅರಿವಿಲ್ಲದೆ ಬಣ್ಣಗಳನ್ನು ಬಳಿದು ವಿರೂಪಗೊಳಿಸಿ ಅದರ ಕಲೆಯನ್ನೇ ಹಾಳುಮಾಡಿದ್ದಾರೆ.ಈ ಬಗ್ಗೆ ಸ್ಥಳೀಯರೂ ಸಹ ನಮ್ಮ ಹಳೆಯ ದೇವಸ್ತಾನಗಳನ್ನು ಉಳಿಸಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಆಡಳಿತವಾದ ಜಿಲ್ಲಾ ಪಂಚಾಯತ ಸಹ ಗಮಹರಿಸಬೇಕು. ಇದೇ ರೀತಿ ನಮ್ಮ ರಾಜ್ಯದ ಅನೇಕ ದೇವಾಲಯಗಳು ಹಾಳಾಗುತ್ತಿವೆ ನಿಮ್ಮ ಲೇಖನದಿಂದಾದ್ರೂ ಸರಕಾರ ಕಣ್ಣು ತೆರೆಯಲೆಂದು ಕೋರುತ್ತೇನೆ.

Ashok ಹೇಳಿದರು...

Nice article... An adventurous temple finding trip....

Team G Square ಹೇಳಿದರು...

Wow , nice to know about this temple ...

Rakesh Holla ಹೇಳಿದರು...

Good Exploration Rajesh Sir...:-)
The white washed walls and pillars sure that none of the intricate carvings were made to be seen. Very amateurish behavior from the villagers...

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರಿಗೆಲ್ಲರಿಗೂ ಧನ್ಯವಾದಗಳು.