ಭಾನುವಾರ, ಮೇ 06, 2012

ಬೆಟ್ಟೇಶ್ವರ ದೇವಾಲಯ - ಅಗ್ರಹಾರ ಬೆಳಗುಳಿ


ಅಗ್ರಹಾರ ಬೆಳಗುಳಿಯ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಬೆಟ್ಟೇಶ್ವರ ದೇವಾಲಯದ ಬಗ್ಗೆ ವಿಚಾರಿಸಿದಾಗ ಆ ಮನೆಯ ಯುವಕ, ’ಹೊಯ್ಸಳ ಕಾಲದ ದೇವಾಲಯನಾ, ನಮ್ಮೂರಲ್ಲಾ.... ಇಲ್ವಲ್ಲಾ’ ಎಂದಾಗ ನಾನು ಕಕ್ಕಾಬಿಕ್ಕಿ. ಇನ್ನು ಈತನಲ್ಲಿ ದಾರಿ ಕೇಳುವುದು ವ್ಯರ್ಥ ಎಂದು ಅಲ್ಲಿಂದ ೨ ಕಿಮಿ ದೂರವಿರುವ ಆಗ್ರಹಾರ ಬೆಳಗುಳಿಯತ್ತ ಹೊರಳಿದೆವು.


ಊರಿನ ಪ್ರಮುಖ ರಸ್ತೆಯ ಸ್ವಲ್ಪ ಮೊದಲೇ ಎದುರಾದ ಹುಡುಗನೊಬ್ಬನಲ್ಲಿ ವಿಚಾರಿಸಿದಾಗ ಆತ ಭಾಷಣವನ್ನೇ ಬಿಗಿದ. ’ಓ ಅದಾಆಆಅ...... ಅದ್ಕೆ ಬೆಟ್ಟೇಶ್ವರ ಅನ್ನೋದಿಲ್ಲ. ಬಸವಣ್ಣನ ದೇವಸ್ಥಾನ ಅಂತಾರೆ... ದೊಡ್ಡ ನಂದಿ ಇದೆಯಲ್ಲಾ, ಅದ್ಕೆ. ನೀವು ಹಿಂಗೆ ಹಾಯ್ಸಿ ಬಂದ್ರಾ?.. ಹಂಗೆ ಹಾಯ್ಸಿ ಬರ್ಬೇಕಿತ್ತು.. ದೇವಸ್ಥಾನ ಅಲ್ಲೇ ಸಿಕ್ಬುಡ್ತಿತ್ತು. ಈಗ ನೀವು ಹಿಂಗೆ ಹಾಯ್ಸಿ ಹೋಗ್ಬಿಟ್ಟು ಮತ್ತೆ ಹಂಗೆ ಹಾಯ್ಸಿ ಹೋದ್ರೆ ಅಲ್ಲೇ ಇದೆ’ ಎಂದಾಗ, ನನಗೆ ಈತ ವಿವರಿಸುತ್ತಿರುವುದು ಬೆಟ್ಟೇಶ್ವರ ದೇವಾಲಯವಿರಲಾರದು ಎಂಬ ಸಂಶಯ ಬರಲಾರಂಭಿಸಿತು. ಮತ್ತೆ ವಿಚಾರಿಸಿದಾಗ, ’ಓ ಅದಾ.... ಅದ್ಕೆ ಬೆಟ್ಟೇಶ್ವರ ಅನ್ನೋದಿಲ್ಲ! ಈಶ್ವರನ ಗುಡಿ ಅಂತಾರೆ..ಹೀಗೆ ಮುಂದೆ ಹೋಗಿ’ ಎನ್ನಬೇಕೆ!


ಮಹಾದ್ವಾರವಿರುವ ವಿಶಾಲ ಪ್ರಾಂಗಣದೊಳಗೆ ಬೆಟ್ಟೇಶ್ವರ ದೇವಾಲಯಿದೆ. ಈ ದೇವಾಲಯವನ್ನು ಕೇಶವೇಶ್ವರ ದೇವಾಲಯವೆಂದೂ ಕರೆಯಲಾಗುತ್ತದೆ. ಹೊಯ್ಸಳ ದೊರೆ ಎರಡನೇ ಬಲ್ಲಾಳನ ದಂಡನಾಯಕನಾಗಿದ್ದ ಕೇಶವ ದಂಡನಾಯಕ (ಕೆಲವೆಡೆ ಕೇಸಿರಾಜ ಎಂದೂ ಹೇಳಲಾಗಿದೆ) ಎಂಬವನು ಇಸವಿ ೧೨೧೦ರಲ್ಲಿ ಈ ದೇವಾಲಯವನ್ನು ನಿರ್ಮಿಸಿದನು ಎಂದು ದೇವಾಲಯದಲ್ಲೇ ಇರುವ ಶಾಸನದ ಮೂಲಕ ತಿಳಿದುಬಂದಿದೆ.


ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಈ ಊರೊಂದು ಪ್ರಸಿದ್ಧ ಅಗ್ರಹಾರವಾಗಿದ್ದು (ತೆರಿಗೆಯಿಂದ ಮುಕ್ತವಾದ ಊರು. ಬಳುವಳಿಯಾಗಿ ಸಮುದಾಯವೊಂದಕ್ಕೆ ನೀಡಿದ ಊರು) ವಿದ್ಯಾವಂತ ಬ್ರಾಹ್ಮಣರು ನೆಲೆಸಿದ್ದ ಸಮೃದ್ಧ ಸ್ಥಳವಾಗಿತ್ತು. ಆಗ ಈ ಊರನ್ನು ’ಕೇಶವಾಪುರ’ ಎಂದು ಕರೆಯಲಾಗುತ್ತಿತ್ತು ಮತ್ತು ಇಲ್ಲಿ ’ಕೇಶವಸಮುದ್ರ’ ಹಾಗೂ ’ಲಕ್ಷ್ಮೀಸಮುದ್ರ’ ಎಂಬ ಹೆಸರಿನ ಎರಡು ಕೆರೆಗಳನ್ನೂ ನಿರ್ಮಿಸಲಾಗಿತ್ತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ವಿಪರ್ಯಾಸವೆಂದರೆ ಅಗ್ರಹಾರ ಎಂಬ ಹೆಸರು ಮಾತ್ರ ಇನ್ನೂ ಬೆಳಗುಳಿಗೆ ಅಂಟಿಕೊಂಡೇ ಇದೆ. ಆದರೆ ಪ್ರಾಚೀನ ಅಗ್ರಹಾರಕ್ಕೆ ಇದ್ದಿರಬಹುದಾದ ಎಳ್ಳಷ್ಟೂ ಪ್ರಾಮುಖ್ಯತೆ ಈಗಿನ ಬೆಳಗುಳಿಗೆ ಇಲ್ಲ.


ದೇವಾಲಯದಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಸುತ್ತಲೂ ಕಕ್ಷಾಸನವಿರುವ ಮುಖಮಂಟಪವು ನಕ್ಷತ್ರಾಕಾರವಾಗಿದೆ. ಈಗ ದಕ್ಷಿಣದಿಂದ ಮಾತ್ರ ಪ್ರವೇಶಿಸಬಹುದಾದ ಮುಖಮಂಟಪಕ್ಕೆ ಮೊದಲು ೩ ದಿಕ್ಕುಗಳಿಂದ ದ್ವಾರಗಳಿತ್ತು ಎಂಬ ಸಂದೇಹ ಬರುತ್ತದೆ. ಈಗ ಉಳಿದೆರಡು ದಿಕ್ಕುಗಳಲ್ಲಿ ಸಣ್ಣ ಗರ್ಭಗುಡಿಗಳಿದ್ದು ಇವುಗಳನ್ನು ನಂತರದ ದಿನಗಳಲ್ಲಿ ನಿರ್ಮಿಸಿರಬಹುದು. ಪೂರ್ವದ ದ್ವಾರದ ಸಮೀಪವಿದ್ದ ನಂದಿಗೆ ಗರ್ಭಗುಡಿಯನ್ನು ನಿರ್ಮಿಸಿರುವುದು ಕಾಣಬರುತ್ತದೆ. ಅಂತೆಯೇ ಉತ್ತರದಲ್ಲಿದ್ದ ದ್ವಾರದ ಸ್ಥಳದಲ್ಲಿ ಇನ್ನೊಂದು ಗರ್ಭಗುಡಿಯನ್ನು ರಚಿಸಲಾಗಿದ್ದು, ಇದು ಖಾಲಿಯಿದೆ.


ನವರಂಗಕ್ಕೆ ಎರಡು ದ್ವಾರಗಳಿವೆ. ಪ್ರಮುಖ ದ್ವಾರ ಪೂರ್ವದಲ್ಲಿದ್ದು ಮುಖಮಂಟಪಕ್ಕೆ ತೆರೆದುಕೊಳ್ಳುತ್ತದೆ. ಎರಡನೇ ದ್ವಾರ ದಕ್ಷಿಣದಲ್ಲಿದ್ದು ದೇವಾಲಯದ ಹೊರಗೆ ತೆರೆದುಕೊಳ್ಳುತ್ತದೆಯಲ್ಲದೆ ಪ್ರತ್ಯೇಕ ಮುಖಮಂಟಪವನ್ನೂ ಹೊಂದಿದೆ. ಒಟ್ಟಾರೆ ಶಿವನಿಗೊಂದು ದ್ವಾರ ಮತ್ತು ಕೇಶವನಿಗೊಂದು ದ್ವಾರ ಎಂಬಂತಾಗಿದೆ. ಈ ಎರಡೂ ದ್ವಾರಗಳು ಅಲಂಕಾರರಹಿತ ಪಂಚಶಾಖೆಗಳನ್ನು, ಆಕರ್ಷಕ ದ್ವಾರಪಾಲಕರನ್ನು ಮತ್ತು ಹೊರಚಾಚು ಶೈಲಿಯ ಲಲಾಟವನ್ನು ಹೊಂದಿವೆ.


ಪೂರ್ವದ ದ್ವಾರದ ಲಲಾಟದಲ್ಲಿರುವ ಕೆತ್ತನೆ ಸಂಪೂರ್ಣವಾಗಿ ನಶಿಸಿಹೋಗಿದೆ. ದಕ್ಷಿಣದ ದ್ವಾರದ ಲಲಾಟದಲ್ಲಿ ಶಿವನ ತಾಂಡವನೃತ್ಯದ ಕೆತ್ತನೆಯಿದೆ. ದೇವಾಲಯದಲ್ಲಿ ದೊರಕಿರುವ ಎರಡು ಶಾಸನಗಳನ್ನು ಒಂದೊಂದರಂತೆ ನವರಂಗದ ಎರಡು ದ್ವಾರಗಳ ಬಳಿಯಲ್ಲಿ ಇರಿಸಲಾಗಿದೆ. ಒಂದು ಶಾಸನದಲ್ಲಿ ಶಿವಲಿಂಗ, ಬ್ರಾಹ್ಮಣರು ಮತ್ತು ಆಕಳು ಹಾಗೂ ಕರುವಿನ ಕೆತ್ತನೆಯಿದ್ದರೆ ಇನ್ನೊಂದರಲ್ಲಿ ವಿಷ್ಣು ಮತ್ತು ಗರುಡನ ಕೆತ್ತನೆಯಿದೆ.


ಬೃಹತ್ ಗಾತ್ರದ ನಾಲ್ಕು ಕಂಬಗಳಿರುವ ನವರಂಗದಲ್ಲಿ ಗಣೇಶ, ಕಾರ್ತಿಕೇಯ, ಪಾರ್ವತಿ, ಸರಸ್ವತಿ ಮತ್ತು ಸಪ್ತಮಾತೃಕೆಯರ ಸುಂದರ ವಿಗ್ರಹಗಳನ್ನು ಕಾಣಬಹುದು. ನವರಂಗದಲ್ಲಿ ಒಂಬತ್ತು ಭುವನೇಶ್ವರಿಗಳಿವೆ. ಇವುಗಳಲ್ಲಿ ನಟ್ಟನಡುವೆಯಿರುವ ಭುವನೇಶ್ವರಿ ಆಕರ್ಷಕವಾಗಿದ್ದು ಅಷ್ಟದಿಕ್ಪಾಲಕರ ಕೆತ್ತನೆಯನ್ನು ಹೊಂದಿದೆ.


ಇದೊಂದು ದ್ವಿಕೂಟ ದೇವಾಲಯವಾಗಿದ್ದು ಪಶ್ಚಿಮದಲ್ಲಿರುವ ಪ್ರಮುಖ ಗರ್ಭಗುಡಿಯಲ್ಲಿ ಬೆಟ್ಟೇಶ್ವರ ಲಿಂಗವಿದೆ. ಉತ್ತರದಲ್ಲಿರುವ ಗರ್ಭಗುಡಿಯಲ್ಲಿ ಚನ್ನಕೇಶವನಿದ್ದಾನೆ. ಬೆಟ್ಟೇಶ್ವರ ಮತ್ತು ಚನ್ನಕೇಶವನಿಗೆ ದಿನಾಲೂ ಪೂಜೆ ಮಾಡಲಾಗುತ್ತದೆ. ಎರಡೂ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ.


ಸುಮಾರು ೫ ಅಡಿ ಎತ್ತರವಿರುವ ಚನ್ನಕೇಶವನ ಅದ್ಭುತ ಮೂರ್ತಿಯೇ ಈ ದೇವಾಲಯದ ಪ್ರಮುಖ ಆಕರ್ಷಣೆ. ಗರುಡಪೀಠದ ಮೇಲೆ ಶಂಕಚಕ್ರಪದ್ಮಗದಾಧಾರಿಯಾಗಿರುವ ಚನ್ನಕೇಶವನ ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ. ಪ್ರಭಾವಳಿಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ತೋರಿಸಲಾಗಿದೆ. ಮತ್ಸ್ಯಾವತಾರ ಮತ್ತು ಕೂರ್ಮಾವತಾರಗಳನ್ನು ಮೀನು ಮತ್ತು ಆಮೆಯ ಕೆತ್ತನೆಗಳ ಮೂಲಕ ತೋರಿಸಲಾಗಿದೆ. ಬುದ್ಧನನ್ನೂ ವಿಷ್ಣುವಿನ ಅವತಾರವೆಂದು ತೋರಿಸಿರುವುದು ವಿಶೇಷ.


ಚನ್ನಕೇಶವನ ಗರ್ಭಗುಡಿಯ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಆನೆಗಳ ಜೊತೆಗೆ ಚಾಮರಧಾರಿಯರನ್ನೂ ತೋರಿಸಲಾಗಿರುವುದು ಗಮನಾರ್ಹ. ಬೆಟ್ಟೇಶ್ವರನ ಗರ್ಭಗುಡಿಯ ಲಲಾಟದಲ್ಲೂ ಗಜಲಕ್ಷ್ಮೀಯಿದ್ದರೂ ಇಲ್ಲಿ ಗಮನ ಸೆಳೆಯುವುದು ಅಂತರಾಳದ ಲಲಾಟದಲ್ಲಿರುವ ಅತ್ಯಾಕರ್ಷಕ ಕೆತ್ತನೆ.


ಇಲ್ಲಿ ಶಿವನನ್ನು ಪೀಠದ ಮೇಲೆ ಮತ್ತು ಪಾರ್ವತಿಯನ್ನು ಶಿವನ ತೊಡೆಯ ಮೇಲೆ ಕುಳಿತಿರುವಂತೆ ತೋರಿಸಲಾಗಿದ್ದು, ಪೀಠದ ಮುಂಭಾಗದಲ್ಲಿ ನಂದಿಯಿದೆ. ಬಲಭಾಗದಲ್ಲಿ ಮೂಷಿಕದ ಮೇಲೆ ಸವಾರಿ ಹೊರಟಿರುವಂತೆ ಗಣೇಶನಿದ್ದರೆ, ಎಡಭಾಗದಲ್ಲಿ ನವಿಲಿನ ಮೇಲೆ ಆಸೀನನಾಗಿರುವ ಕಾರ್ತಿಕೇಯನಿದ್ದಾನೆ. ಶಿವನ ಬಲಗಾಲು ನಂದಿಯ ಬೆನ್ನ ಮೇಲೆ ಮತ್ತು ಪಾರ್ವತಿಯ ಬಲಗಾಲು ನಂದಿಯ ತಲೆಯ ಮೇಲೆ ಇರುವಂತೆಯೂ ತೋರಿಸಲಾಗಿದೆ. ಇಕ್ಕೆಲಗಳಲ್ಲಿ ಚಾಮರಧಾರಿಯರನ್ನೂ ಮತ್ತು ಶಿವನ ಗಣನೊಬ್ಬನನ್ನು ತೋರಿಸಲಾಗಿದೆ. ಗಣೇಶನ ಸಮೀಪ ಬ್ರಹ್ಮನನ್ನೂ ಮತ್ತು ಕಾರ್ತಿಕೇಯನ ಸಮೀಪ ಶಂಖಚಕ್ರಪದ್ಮಗದಾಧಾರಿಯಾಗಿರುವ ವಿಷ್ಣುವನ್ನೂ ತೋರಿಸಲಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಗಳಿಲ್ಲ. ಎರಡೂ ಗರ್ಭಗುಡಿಗಳಿಗೆ ಗೋಪುರಗಳಿದ್ದರೂ ಅವು ಹೊಯ್ಸಳ ಶೈಲಿಯ ಗೋಪುರಗಳಲ್ಲ. ಮೂಲ ಗೋಪುರಗಳು ಎಂದೋ ಬಿದ್ದುಹೋಗಿವೆ. ಈ ಗೋಪುರಗಳನ್ನು ನಂತರ ಕಟ್ಟಲಾಗಿದ್ದು ಸಹಜವಾಗಿಯೇ ಅವು ವಿಚಿತ್ರವಾಗಿ ಕಾಣುತ್ತಿವೆ. ದೇವಾಲಯದ ಛಾವಣಿಯ ಸುತ್ತಲೂ ಕೆತ್ತನೆರಹಿತ ಕೈಪಿಡಿಯ ರಚನೆಯನ್ನೂ ಕಾಣಬಹುದು.


ಬಹಳ ವೈಶಿಷ್ಟ್ಯಗಳನ್ನು ಹೊಂದಿರುವ ದೇವಾಲಯವಿದು. ವಿಶಾಲ ಸ್ಥಳದಲ್ಲಿ ದೇವಾಲಯ ಸುರಕ್ಷಿತವಾಗಿದೆ ಎನ್ನುವುದೇ ಸಮಾಧಾನ ಪಡುವ ವಿಷಯ. ಹೆಚ್ಚಿನವರಿಗೆ ದೇವಾಲಯದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಪ್ರಾಚ್ಯ ವಸ್ತು ಇಲಾಖೆ ದೇವಾಲಯವನ್ನು ಸಾಧಾರಣ ಮಟ್ಟಿಗೆ ಕಾಪಾಡಿಕೊಂಡು ಬಂದಿದೆ. ಪ್ರವಾಸಿಗರು ಯಾರೂ ಇಲ್ಲಿಗೆ ಸುಳಿಯುವುದಿಲ್ಲ. ಮುಖಮಂಟಪದ ವೈಶಿಷ್ಟ್ಯ, ಚನ್ನಕೇಶವನ ವಿಗ್ರಹ ಮತ್ತು ಲಲಾಟದಲ್ಲಿರುವ ಕೆತ್ತನೆಗಳು ನನ್ನನ್ನು ಬಹಳ ಆಕರ್ಷಿಸಿದವು.

ಮಾಹಿತಿ: ಮನೋಜ್ ಜಿ ಹಾಗೂ ಸತ್ಯನಾರಾಯಣ ಬಿ ಆರ್

4 ಕಾಮೆಂಟ್‌ಗಳು:

Suresh ಹೇಳಿದರು...

Vigrahagal kettane adhbuta....

Arun ಹೇಳಿದರು...

Devalaya tumba chennagide.. thanks for sharing.. nice photos

Mamata ಹೇಳಿದರು...

wonderful pics n superb articles..u made my day..soon i wil visit this place..thanks rajesh..

ರಾಜೇಶ್ ನಾಯ್ಕ ಹೇಳಿದರು...

ಸುರೇಶ್, ಅರುಣ್, ಮಮತಾ
ಧನ್ಯವಾದ.