ಭಾನುವಾರ, ಏಪ್ರಿಲ್ 01, 2012

ಯೋಗನರಸಿಂಹ ದೇವಾಲಯ - ಬಗ್ಗವಳ್ಳಿ


ಅದೊಂದು ರಾತ್ರಿ ಬೆಂಗಳೂರಿನಲ್ಲಿ ವಾಸವಾಗಿರುವ ವೈದ್ಯರೊಬ್ಬರು ಗಾಢವಾದ ನಿದ್ರೆಯಲ್ಲಿದ್ದರು. ಮುಂಜಾನೆ ಎರಡರ ಸಮಯವಾಗಿರಬಹುದು. ತಡಬಡಿಸಿದವರಂತೆ ನಿದ್ರೆಯಿಂದ ಎದ್ದು ಕುಳಿತರು. ಆಗಷ್ಟೇ ಕಂಡ ಕನಸು ಅವರನ್ನು ಚಕಿತರನ್ನಾಗಿಯೂ ಮೂಕವಿಸ್ಮಿತರನ್ನಾಗಿಯೂ ಮಾಡಿತ್ತು. ಇಂತಹ ಕನಸೂ ಬೀಳಬಹುದೇ ಎಂದು ವಿಚಾರಕ್ಕೆ ಬಿದ್ದರು.


ಸಂಸಾರ ಸಮೇತ ಹಲವಾರು ವರ್ಷಗಳಿಂದ ಈ ವೈದ್ಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಸ್ತಿಕರಾಗಿರುವ ಇವರು ತಮ್ಮ ಕುಟುಂಬದ ಮೂಲ ದೇವರು ಎಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಯಿಲ್ಲದೆ ಚಡಪಡಿಸುತ್ತಿದ್ದರು. ಕುಟುಂಬದ ಸದಸ್ಯರ ಎಲ್ಲಾ ಕೊಂಡಿಗಳನ್ನು ಹುಡುಕಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ವಿಚಾರಿಸಿದರೂ ತಮ್ಮ ಮೂಲ ದೇವರು ನೆಲೆಯಾಗಿರುವ ಸ್ಥಳದ ಮಾಹಿತಿ ಇವರಿಗೆ ದೊರಕಿರಲಿಲ್ಲ. ಕಡೆಗೂ ಯೋಗನರಸಿಂಹನಿಗೂ ಇವರ ಮೇಲೆ ಕರುಣೆ ಬಂದಿರಬೇಕು. ಆ ರಾತ್ರಿ ಈ ವೈದ್ಯರ ಕನಸಿನಲ್ಲಿ ಈ ದೇವಾಲಯದ ಚಿತ್ರ, ಊರಿನ ಹೆಸರು ಸಮೇತ ಮೂಡಿಬರುವಂತೆ ಮಾಡಿದ ಯೋಗನರಸಿಂಹ ತಕ್ಷಣ ಅಲ್ಲಿಗೆ ತೆರಳುವಂತೆ ಅಶರೀರವಾಣಿಯ ಮೂಲಕ ಆಜ್ಞೆ ಮಾಡಿದನು. ಇದು ದೇವಾಲಯದ ಆರ್ಚಕರು ನನಗೆ ವಿವರಿಸಿದ ಘಟನೆ. ಆ ವೈದ್ಯರ ಹೆಸರು ಕೇಳಲು ಮರೆತೆ ನೋಡಿ.


ಕನಸು ಕಂಡು ಗರಬಡಿದವರಂತೆ ಎದ್ದು ಕುಳಿತ ವೈದ್ಯರು ಮರುದಿನವೇ ಬಗ್ಗವಳ್ಳಿ ಎಲ್ಲಿದೆ ಎಂದು ಕಂಡುಹುಡುಕಿ ಅಲ್ಲಿಗೆ ಹೊರಟೇಬಿಟ್ಟರು. ಆಗ ದೇವಾಲಯದ ಪರಿಸ್ಥಿತಿ ಹದಗೆಟ್ಟಿತ್ತು. ಎಲ್ಲೆಡೆ ಮುಳ್ಳುಗಿಡಗಳು ಬೆಳೆದುಬಿಟ್ಟಿದ್ದವು. ಮುಖಮಂಟಪ ಸಂಪೂರ್ಣವಾಗಿ ಕುಸಿದುಬಿದ್ದಿತ್ತು. ದೇವಾಲಯದ ಒಳಗೆ ಬಾವಲಿಗಳು ವಾಸವಾಗಿದ್ದವು. ದೇವಾಲಯವಿದ್ದ ಪರಿಸರ ತುಂಬಾ ಮುಳ್ಳುಗಿಡ ಮತ್ತು ಪೊದೆಗಳಿಂದ ಆವೃತವಾಗಿತ್ತು. ತಮ್ಮ ಮೂಲ ದೇವರ ಪರಿಸ್ಥಿತಿ ಕಂಡು ಮರುಗಿದ ವೈದ್ಯರು ತಮ್ಮದೇ ಖರ್ಚಿನಲ್ಲಿ ದೇವಾಲಯವನ್ನೂ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಯೋಗನರಸಿಂಹನ ಅದೃಷ್ಟ ಚೆನ್ನಾಗಿತ್ತು. ದೇವಾಲಯವಿರುವ ವಿಶಾಲ ಸ್ಥಳದ ಒತ್ತುವರಿ ಆಗಿರಲಿಲ್ಲ.


ನಂತರ ಪ್ರಾಚ್ಯ ವಸ್ತು ಇಲಾಖೆಯನ್ನು ಸಂಪರ್ಕಿಸಿದ ವೈದ್ಯರು ದೇವಾಲಯನ್ನು ಜೀರ್ಣೊದ್ಧಾರಗೊಳಿಸಿ ರಕ್ಷಿಸುವಂತೆ ಕೋರಿಕೊಂಡರು. ಇಲಾಖೆ ದೇವಾಲಯವನ್ನು ಸರಿಪಡಿಸುವ ಕಾರ್ಯ ಆರಂಭಿಸಿತು. ಮೊದಲು ವಿಶಾಲವಾದ ಜಾಗಕ್ಕೆ ಪ್ರಾಂಗಣ ರಚಿಸಲಾಯಿತು. ಮುಖಮಂಟಪವನ್ನು ಮೂಲ ರೂಪಕ್ಕೆ ತಕ್ಕಂತೆ ಮರುನಿರ್ಮಿಸಲಾಯಿತು. ಗೋಪುರದ ಮೇಲೆಲ್ಲಾ ಬೆಳೆದಿದ್ದ ಗಿಡಗಳನ್ನು ತೆಗೆಯಲಾಯಿತು. ದೇವಾಲಯದ ಬಲಪಾರ್ಶ್ವದಲ್ಲಿ ಹೊರಗೋಡೆಯನ್ನು ಆವರಿಸಿದ್ದ ಪಾಚಿಯನ್ನು ತೆಗೆಯುವ ಪ್ರಯತ್ನವನ್ನೂ ಮಾಡಲಾಯಿತು. ಇದೆಲ್ಲದರ ಫಲವಾಗಿ ಇಂದು ಬಗ್ಗವಳ್ಳಿಯ ಯೋಗನರಸಿಂಹ ವಿಶಾಲ ಸ್ಥಳದಲ್ಲಿ ರಾರಾಜಿಸುತ್ತಿದ್ದಾನೆ.


ಇದೊಂದು ತ್ರಿಕೂಟ ದೇವಾಲಯ. ಮೂರೂ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ನವರಂಗದ ದ್ವಾರವು ಅಷ್ಟಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಆಕರ್ಷಕ ಕೆತ್ತನೆಯಿದೆ. ದ್ವಾರದ ಛಾವಣಿಯ ಸುತ್ತಲೂ ಶಾಸನವನ್ನು ಕಾಣಬಹುದು. ಈ ಶಾಸನದ ಪ್ರಕಾರ ಹೊಯ್ಸಳ ದೊರೆ ಒಂದನೇ ನರಸಿಂಹನು ಇಸವಿ ೧೧೫೭ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಆರಂಭಿಸಿದನು ಎಂದು ತಿಳಿದುಬರುತ್ತದೆ. ಇಲ್ಲೇ ಇರುವ ಇನ್ನೊಂದು ಶಾಸನವು ೩ನೇ ಬಲ್ಲಾಳನ ಕಾಲದಲ್ಲಿ ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ನೀಡುತ್ತದೆ.


ಯೋಗನರಸಿಂಹ ದೇವಾಲಯವೆನ್ನಲಾಗುತ್ತದೆಯಾದರೂ ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹವಿದೆ. ಗರುಡ ಪೀಠದ ಮೇಲೆ ಶಂಖಚಕ್ರಪದ್ಮಗದಾಧಾರಿಯಾಗಿರುವ ಸುಮಾರು ನಾಲ್ಕಡಿ ಎತ್ತರದ ವಿಗ್ರಹವಿದು.


ಎಡಕ್ಕಿರುವ ಗರ್ಭಗುಡಿಯಲ್ಲಿ ಶಾರದಾಂಬೆಯ ವಿಗ್ರಹವಿದೆ. ಮೊದಲಿನಿಂದಲೂ ಶಾರದಾಂಬೆ ಎಂದು ಈ ವಿಗ್ರಹವನ್ನು ಪೂಜಿಸಲಾಗುತ್ತಿದೆಯಾದರೂ, ಇಲ್ಲಿನ ಅರ್ಚಕರ ಪ್ರಕಾರ ಇತ್ತೀಚೆಗೆ ಇಡಲಾದ ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಇದು ’ತ್ರಿಪುರ ಸುಂದರಿ’ಯ ವಿಗ್ರಹವೆಂದು ತಿಳಿದುಬಂದಿದೆ.


ಬಲಭಾಗದ ಗರ್ಭಗುಡಿಯಲ್ಲಿ ಯೋಗನರಸಿಂಹ ಆಸೀನನಾಗಿದ್ದಾನೆ. ಹಿರಣ್ಯಕಶಿಪುನನ್ನು ಸಂಹರಿಸಲು ಉಗ್ರನರಸಿಂಹನಾಗಿ ಅವತಾರವೆತ್ತಿದ ಬಳಿಕ, ಆ ಕೋಪದ ಶಮನಕ್ಕಾಗಿ ನರಸಿಂಹನು ಯೋಗಕ್ಕೆ ಕುಳಿತಾಗ ಯೋಗನರಸಿಂಹನಾದನು ಎಂಬ ನಂಬಿಕೆ.


ನವರಂಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣೇಶ ಮತ್ತು ಲಕ್ಷ್ಮೀನರಸಿಂಹನ ಸುಂದರ ಮೂರ್ತಿಗಳಿವೆ. ನವರಂಗದ ಇನ್ನೊಂದು ಬದಿಯಲ್ಲಿ ಬ್ರಹ್ಮನ ಮೂರ್ತಿಯನ್ನು ಕಾಣಬಹುದು.


ಎಲ್ಲಾ ಗರ್ಭಗುಡಿಗಳ ದ್ವಾರಗಳಿಗೆ ಜಾಲಂಧ್ರಗಳಿವೆ ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಶಾರದಾಂಬೆಯ ಗರ್ಭಗುಡಿಯ ದ್ವಾರದ ಮೇಲ್ಭಾಗದಲ್ಲಿ ಮಕರತೋರಣದಿಂದ ಅಲಂಕೃತ ಮತ್ತು ಇಕ್ಕೆಲಗಳಲ್ಲಿ ಚಾಮರಧಾರಿಯರಿರುವ ದೇವಿಯೊಬ್ಬಳ ಕೆತ್ತನೆಯಿದೆ. ಯೋಗನರಸಿಂಹನ ಗರ್ಭಗುಡಿಯ ದ್ವಾರದ ಮೇಲ್ಭಾಗದಲ್ಲಿ ವೇಣುಗೋಪಾಲನ ಕೆತ್ತನೆಯಿದೆ. ಚನ್ನಕೇಶವನ ಅಂತರಾಳದ ಮೇಲ್ಭಾಗದಲ್ಲಿರುವ ಕೆತ್ತನೆ ಏನೆಂದು ತಿಳಿಯಲಿಲ್ಲ.


ಮುಖಮಂಟಪದ ಹೊರಭಾಗದಲ್ಲಿ ತಳದಿಂದ ಐದು ಪಟ್ಟಿಕೆಗಳಿದ್ದು ಇವುಗಳಲ್ಲಿ ಮೊದಲ ಮೂರು ಪಟ್ಟಿಕೆಗಳಲ್ಲಿ ಆನೆ, ಸಿಂಹ ಮತ್ತು ಬಳ್ಳಿಸುರುಳಿ ಕೆತ್ತನೆಗಳನ್ನು ಕಾಣಬಹುದು. ಉಳಿದೆರಡು ಪಟ್ಟಿಕೆಗಳು ಕೆತ್ತನೆರಹಿತವಾಗಿವೆ. ಈ ಪಟ್ಟಿಕೆಗಳ ರಚನೆ ಮುಖಮಂಟಪದ ಸುತ್ತಲೂ ಏಕಪ್ರಕಾರವಾಗಿದ್ದು ನಂತರ (ನವರಂಗ ಮತ್ತು ಗರ್ಭಗುಡಿಗಳ ಹೊರಭಾಗದಲ್ಲಿ) ಬೇರೆ ರೂಪವನ್ನು ಪಡೆದುಕೊಳ್ಳುತ್ತವೆಯಲ್ಲದೆ ಮೊದಲ ನಾಲ್ಕು ಪಟ್ಟಿಕೆಗಳಲ್ಲಿ ಯಾವ ಕೆತ್ತನೆಗಳೂ ಕಾಣಬರುವುದಿಲ್ಲ. ಮೇಲಿನ (ಅಂದರೆ ಐದನೇ) ಪಟ್ಟಿಕೆಯಲ್ಲಿ ಮಾತ್ರ ದೇವದೇವಿಯರ ಸಣ್ಣ ಸಣ್ಣ ಮೂರ್ತಿಗಳನ್ನು ಕೆತ್ತಲಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಎರಡು ಸ್ತರಗಳಿವೆ. ಮೇಲಿನಸ್ತರದಲ್ಲಿ ಯಾವುದೇ ಕೆತ್ತನೆಗಳಿಲ್ಲ. ಆದರೆ ಕೆಳಗಿನ ಸ್ತರದ ತುಂಬಾ ಭಿತ್ತಿಗಳಿವೆ. ಹೆಚ್ಚಿನ ಭಿತ್ತಿಗಳು ಕಾಲನ ದಾಳಿಗೆ ತಮ್ಮ ಮೂಲರೂಪವನ್ನು ಕಳೆದುಕೊಂಡರೂ ಚೆನ್ನಾಗಿಯೇ ಕಾಣುತ್ತವೆ ಎನ್ನಬಹುದು. ದೇವಾಲಯದ ಮೇಲ್ಛಾವಣಿಯ ಸುತ್ತಲೂ ಕೈಪಿಡಿಯ ರಚನೆಯಿದೆ.


ಗಣೇಶ, ಉಗ್ರನರಸಿಂಹ, ಅರ್ಜುನ, ಲಕ್ಷ್ಮೀನರಸಿಂಹ, ಕಾಳಿಂಗಮರ್ದನ, ವೇಣುಗೋಪಾಲ, ತಾಂಡವೇಶ್ವರ, ವಿಷ್ಣುವಿನ ಹಲವಾರು ರೂಪಗಳು, ಸರಸ್ವತಿ, ವಾದ್ಯಗಾರರು, ನೃತ್ಯಗಾರ್ತಿಯರು, ನಾಲ್ಕು ಕೈಗಳುಳ್ಳ ವಾದ್ಯಗಾರರು, ಇತ್ಯಾದಿ ಸುಂದರ ಕೆತ್ತನೆಗಳನ್ನು ಕಾಣಬಹುದು.


ಮುಖಮಂಟಪದ ಕಂಬವೊಂದರಲ್ಲಿ ಕೆತ್ತಲಾಗಿರುವ ಗಣೇಶನ ವಿಗ್ರಹ ದೊಡ್ಡದಾಗುತ್ತಿರುವುದು ಇಲ್ಲಿನ ಅರ್ಚಕರ ಸ್ವಂತ ಅನುಭವವಂತೆ. ಅವರು ಇಲ್ಲಿ ಬಂದ ದಿನದಿಂದ ಗಮನಿಸುತ್ತಾ ಇದ್ದಾರಂತೆ. ಗಣೇಶ ಬೆಳೆಯುತ್ತಿದ್ದಾನಂತೆ!


ಈ ಕೆತ್ತನೆಗಳನ್ನು ನೋಡಲು ಕಲಾಸಕ್ತರಿಗೆ ಬಹಳ ಸಮಯ ಬೇಕಾಗುವುದು. ಮೂಲೆಗುಂಪಾಗಿದ್ದ ದೇವಾಲಯದಲ್ಲಿ ಈ ಅದ್ಭುತ ಕೆತ್ತನೆಗಳು ಇನ್ನೂ ಉಳಿದಿರುವುದು ಸೋಜಿಗವೇ ಸರಿ. ಪ್ರಾಚ್ಯ ವಸ್ತು ಇಲಾಖೆ ಎಲ್ಲಾ ಕೆತ್ತನೆಗಳನ್ನು ಸ್ವಚ್ಛಗೊಳಿಸಿರುವುದರಿಂದ ಅವುಗಳ ಅಂದವನ್ನು ಆಸ್ವಾದಿಸಲು ನಮಗೆ ಇಂದು ಸಾಧ್ಯವಾಗಿದೆ.


ತೆರೆಮರೆಯಲ್ಲೇ ಉಳಿದಿರುವ ದೇವಾಲಯಕ್ಕೆ ಸಂದರ್ಶಕರು ಬರುವುದು ಬಹಳ ಕಡಿಮೆ. ಆಗಾಗ ಪೂಜೆ ಸಲ್ಲಿಸಲು ಬರುವುದನ್ನು ಬಿಟ್ಟರೆ ಸ್ಥಳೀಯರಂತೂ ಯಾರೂ ಬರುವುದೇ ಇಲ್ಲ. ಅಪರೂಪಕ್ಕೊಮ್ಮೆ ಅಕ್ಕ ಪಕ್ಕದ ಹಳ್ಳಿಗಳ ಕೆಲವು ಹಿರಿಯ ಆಸಕ್ತರು ತಮ್ಮ ಕುಟುಂಬ ಸಮೇತ ಬಂದು ದೇವಾಲಯದ ನೆರಳಿನಲ್ಲಿ ತಾವು ತಂದ ಊಟ ಮಾಡಿ ವಿಶ್ರಮಿಸಿ ಹೋಗುತ್ತಾರೆ.


ಸ್ಥಳೀಯರಿಗೆ ದೇವಾಲಯದ ಮಹತ್ವದ ಅರಿವಿಲ್ಲ. ಪ್ರಾಚ್ಯ ವಸ್ತು ಇಲಾಖೆ ಸಿಬ್ಬಂದಿಗಳು ವರ್ಷಕ್ಕೊಂದು ಸಲ ಬಂದು ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾಗಿರುವುದನ್ನು ಬಾಚಿಕೊಂಡು ಹೋದರೆ ಮತ್ತೆ ಅವರು ಬರುವುದು ಮುಂದಿನ ವರ್ಷವೇ. ಇಲಾಖೆ ಈ ಸುಂದರ ದೇವಾಲಯದ ಸುತ್ತಲೂ ಉದ್ಯಾನ ನಿರ್ಮಿಸಿದರೆ ಸ್ಥಳದ ಅಂದ ಇಮ್ಮಡಿಗೊಳ್ಳುವುದರಲ್ಲಿ ಸಂದೇಹವಿಲ್ಲ.

ಮಾಹಿತಿ: ಸಂಪತ್ ಕುಮಾರ್ ಡಿ

6 ಕಾಮೆಂಟ್‌ಗಳು:

Aravind GJ ಹೇಳಿದರು...

ಸುಂದರವಾದ ದೇವಾಲಯ!! ಸೊಗಸಾದ ಲೇಖನ. ಈ ಊರಿನ ಹತ್ತಿರ ಎಷ್ಟೊಂದು ಸಾರಿ ಹೋಗಿದ್ದೇನೆ. ಆದರೆ ಈ ದೇವಾಲಯದ ವಿಚಾರ ಗೊತ್ತಿರಲಿಲ್ಲ!! ಇನ್ನೊಂದು ಸಲ ಆ ಕಡೆ ಹೋದರೆ ಈ ದೇವಾಲಯಕ್ಕೊಂದು ಭೇಟಿ ಖಚಿತ!!

Teamgsquare ಹೇಳಿದರು...

Wonderful temple . nice to know about this temple . One more Hoysala temple added to visit list ...Thanks for sharing

sunaath ಹೇಳಿದರು...

ತುಂಬ ಉತ್ತಮವಾದ ಚಿತ್ರಗಳೊಂದಿಗೆ, ತುಂಬ ಉತ್ತಮ ವಿವರಣೆ ಕೊಟ್ಟಿದ್ದೀರಿ.

Ashok ಹೇಳಿದರು...

Nice story. Nice article with good photos

Srik ಹೇಳಿದರು...

Hats off! Rajesh. No more comments about the experience of reading thru this.

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲಾ ಗೆಳೆಯರಿಗೂ ಧನ್ಯವಾದ.