ಭಾನುವಾರ, ಮಾರ್ಚ್ 04, 2012

ಕಾಗಿನೆಲೆ


ಕನಕದಾಸರ ಕರ್ಮಭೂಮಿಯಾಗಿರುವ ಕಾಗಿನೆಲೆಗೆ ಭೇಟಿ ನೀಡಬೇಕೆನ್ನುವ ಮಹಾದಾಸೆ ಬಹಳ ದಿನಗಳಿಂದ ಇತ್ತು. ಕನಕದಾಸರ ಹುಟ್ಟೂರು ಬಾಡ. ಅಲ್ಲಿಂದ ಕಾಗಿನೆಲೆಗೆ ತನ್ನ ಆರಾಧ್ಯದೈವ ಚನ್ನಕೇಶವನೊಂದಿಗೆ ಬಂದ ಕನಕದಾಸರು ಕಾಗಿನೆಲೆಯಲ್ಲೇ ವಾಸಿಸತೊಡಗಿದರು.


ಕನಕದಾಸರ ಹಾಡುಗಳಲ್ಲಿ ’ಆದಿಕೇಶವ’ನ ಗುಣಗಾನವನ್ನು ಕೇಳಿ ಆ ಸನ್ನಿಧಾನವನ್ನು ನೋಡೋಣವೆಂದು ತೆರಳಿದರೆ ನನಗೊಂದು ’ಶಾಕ್’ ಕಾದಿತ್ತು. ಆದಿಕೇಶವನ ದೇವಾಲಯವೇ ನಾಪತ್ತೆ! ತಳಪಾಯ ಸಮೇತ ದೇವಾಲಯವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಬಿಚ್ಚಿ ಇಟ್ಟಿತ್ತು. ದೇವಾಲಯವನ್ನು ಹೊಸದಾಗಿ ನಿರ್ಮಿಸುವ ಕಾರ್ಯ ನಡೆಯುತ್ತಿತ್ತು.


ಆದಿಕೇಶವನ ವಿಗ್ರಹವನ್ನು ಮತ್ತು ಕನಕನ ವಿಗ್ರಹವನ್ನು ಬದಿಯಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಇಡಲಾಗಿದೆ. ಆದಿಕೇಶವನಿಗೆ ದೈನಂದಿನ ಪೂಜೆಯನ್ನು ಇಲ್ಲೇ ಸಲ್ಲಿಸಲಾಗುತ್ತಿದೆ. ಕನಕದಾಸರು ತಮ್ಮ ಹೆಚ್ಚಿನ ಸಮಯವನ್ನು ಲಕ್ಷ್ಮೀನರಸಿಂಹ ಮತ್ತು ಆದಿಕೇಶವ ದೇವಾಲಯಗಳಲ್ಲಿ ಕಳೆಯುತ್ತಿದ್ದರು.


ಲಕ್ಷ್ಮೀನರಸಿಂಹ ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಮುಖಮಂಟಪ ವಿಶಾಲವಾಗಿದ್ದು ನವರಂಗದಲ್ಲಿ ನಾಲ್ಕು ಕಂಬಗಳಿವೆ. ಗರ್ಭಗುಡಿಯಲ್ಲಿರುವ ನರಸಿಂಹನಿಗೆ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಕನಕದಾಸರು ಬಳಸುತ್ತಿದ್ದರೆನ್ನಲಾಗುವ ಬಟ್ಟಲು ಮತ್ತು ಶಂಖವನ್ನು ಲಕ್ಷ್ಮೀನರಸಿಂಹ ದೇವಾಲಯದಲ್ಲಿಡಲಾಗಿದೆ. ಕೇಳಿದರೆ ಮಾತ್ರ ದೇವಾಲಯದ ಯುವ ಅರ್ಚಕ ಅವನ್ನು ಪ್ರವಾಸಿಗರ ಕೈಗೆ ನೋಡಲು ಕೊಡುತ್ತಾನೆ. ಹೀಗೆ ಪ್ರವಾಸಿಗರಿಗೆ ಕನಕದಾಸರ ಬಟ್ಟಲು ಮತ್ತು ಶಂಖವನ್ನು ಮುಟ್ಟಲು ಇನ್ನು ಕೆಲವು ದಿನಗಳ ಬಳಿಕ ಸಾಧ್ಯವಿಲ್ಲ. ಆದಿಕೇಶವ ದೇವಾಲಯದ ಮರುನಿರ್ಮಾಣದ ಬಳಿಕ ಕಾ.ಅ.ಪ್ರಾ ಅವುಗಳನ್ನು ಗಾಜಿನ ಪೆಟ್ಟಿಗೆಯೊಳಗೆ ಸಾರ್ವಜನಿಕರು ನೋಡಲು ಅನುಕೂಲವಾಗುವ ರೀತಿಯಲ್ಲಿ ಇಡುವ ನಿರ್ಧಾರ ಮಾಡಿದೆ.


ಕಾ.ಅ.ಪ್ರಾ ಕಾಗಿನೆಲೆಯನ್ನು ಪ್ರಮುಖ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಬಹಳ ಮುಖ್ಯವಾದದ್ದು ಕಾಗಿನೆಲೆಯಲ್ಲಿನ ದೇವಾಲಯಗಳ ಸಂರಕ್ಷಣೆ. ಕಾಲನ ದಾಳಿಗಿಂತಲೂ ಊರಿನಲ್ಲಿ ಬೀಡು ಬಿಟ್ಟಿರುವ ಬಹುಸಂಖ್ಯಾತ ಸಾಬರಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದ್ದು, ಸರಕಾರ ಕಾ.ಅ.ಪ್ರಾ ರಚಿಸಿ ಬಹಳ ಒಳ್ಳೆಯ ಕೆಲಸ ಮಾಡಿದೆ. ಕಾ.ಅ.ಪ್ರಾ ಬಂದ ಬಳಿಕ ಈ ನಮ್ಮ ’ಬಂಧಗಳು’ ನೀಡುತ್ತಿದ್ದ ಕಿರುಕುಳ ಕ್ರಮೇಣ ಕಡಿಮೆಯಾಗಿದೆ ಎಂದು ಊರವರು ತಿಳಿಸಿದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಹೆಚ್ಚಿನ ವಿವರಗಳನ್ನು ಅವರ ಅಂತರ್ಜಾಲ ತಾಣದಿಂದ ಪಡೆಯಬಹುದು.


ಸಂಗಮೇಶ್ವರ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ಹಿಂದೂಗಳೇ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಶರಣರಾಗಿದ್ದ ಸಂಗಮೇಶ್ವರರ ಗದ್ದಿಗೆ ಎನ್ನುವುದಕ್ಕೆ ಅವಶ್ಯವಿರುವ ಎಲ್ಲಾ ಸಾಕ್ಷಿ ಪುರಾವೆಗಳು ಲಭ್ಯವಿವೆ. ಆದರೆ ದೇವಾಲಯದ ಮೇಲ್ಭಾಗದಲ್ಲಿ ಮಸೀದಿಗಳಿಗಿರುವಂತೆ ಒಂದೆರಡು ಕಂಬಗಳಿದ್ದು ಅದನ್ನೇ ಇಲ್ಲಿನ ಮುಸಲ್ಮಾನರು ’ತಮ್ಮ ದರ್ಗಾ’ ಎನ್ನಲು ಬಲವಾದ ಸಾಕ್ಷಿಯ ರೂಪದಲ್ಲಿ ಹಿಡಿದುಕೊಂಡು ನ್ಯಾಯಾಲಯಕ್ಕೆ ಹೋಗಿಬಿಟ್ಟಿದ್ದಾರೆ.


ಸಂಗಮೇಶ್ವರರು ಸೇರಿದ ಪಂಥ ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದ್ದು ಎಲ್ಲೆಡೆ ಮುಸಲ್ಮಾನ ಶೈಲಿಯ ಕಂಬಗಳನ್ನು ಉಪಯೋಗಿಸಿರುವುದು ಕಂಡಬರುತ್ತದೆ. ಸಂಗಮೇಶ್ವರನ ವಾರ್ಷಿಕ ಜಾತ್ರೆಗೆ ಬೀದರ್, ಗುಲ್ಬರ್ಗಾ, ಬಿಜಾಪುರ ಮತ್ತು ಮಹಾರಾಷ್ಟ್ರದ ಲಾತೂರ್, ಕೊಲ್ಲಾಪುರ, ಸಾಂಗ್ಲಿ ತಾಲೂಕುಗಳಿಂದ ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಇಷ್ಟೇ ಅಲ್ಲದೆ ದಿನಾಲೂ ಬರುವ ಭಕ್ತರು ತುಂಬಾ ಸಂಖ್ಯೆಯಲ್ಲಿದ್ದಾರೆ. ಹೀಗೆ ಬರುವವರ ಅನುಕೂಲಕ್ಕೆ ಛತ್ರದ ನಿರ್ಮಾಣಕ್ಕೆ ಕಾ.ಅ.ಪ್ರಾ ಮುಂದಾದರೂ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥಗೊಳ್ಳದೆ ಏನೂ ಮಾಡುವಂತಿಲ್ಲ.


ಸೋಮೇಶ್ವರ ದೇವಾಲಯದಲ್ಲಿ ಗರ್ಭಗುಡಿ ಮಾತ್ತು ಅಂತರಾಳ ಮಾತ್ರ ಉಳಿದುಕೊಂಡಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ’ಸೋಮನಾಥೇಶ್ವರ’ ಎಂದು ಕರೆಯಲಾಗಿದೆ.


ರಾಷ್ಟ್ರಕೂಟರ ಕಾಲದ ವೀರಭದ್ರ ದೇವಾಲಯ ಬದಲಾವಣೆಗಳನ್ನು ಕಂಡು ಆಧುನಿಕ ದೇವಾಲಯದಂತೆ ಕಾಣುತ್ತದೆ. ಗರ್ಭಗುಡಿ, ನವರಂಗ ಮತ್ತು ಮುಖಮಂಟಪ ಹೊಂದಿರುವ ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ಒಳಗೆ ತೆರಳಲು ಸಾಧ್ಯವಾಗಲಿಲ್ಲ.


ಕಾಳಹಸ್ತೇಶ್ವರ ದೇವಾಲಯವು ರಾಷ್ಟ್ರಕೂಟರ ಸಮಯದಲ್ಲಿ ನಿರ್ಮಾಣಗೊಂಡಿದ್ದು, ಗರ್ಭಗುಡಿ, ತೆರೆದ ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ದೇವಾಲಯ ಪಾಳುಬಿದ್ದಿದ್ದರೂ ಗರ್ಭಗುಡಿಯ ಮೇಲಿರುವ ಗೋಪುರ ಆಕರ್ಷಕವಾಗಿದ್ದು ಕಲಶವನ್ನೂ ಹೊಂದಿದೆ. ಪ್ರಮುಖ ದ್ವಾರ ಪಂಚಶಾಖ ತರಹದ್ದಾಗಿದ್ದು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ.


ಊರಿನ ವಿಶಾಲ ಕೆರೆಯ ತಟದಲ್ಲಿ ಕನಕ ಸಮಾಧಿ (ಗದ್ದುಗೆ) ಇದೆ. ಮೊದಲು ಇದ್ದ ಗದ್ದುಗೆಯನ್ನು ತೆಗೆದು ಈಗ ಕಾ.ಅ.ಪ್ರಾ ಭವ್ಯ ಮತ್ತು ಅತ್ಯಾಕರ್ಷಕವಾದ ಗದ್ದುಗೆಯನ್ನು ರಚಿಸಿದೆ. ಕಾಗಿನೆಲೆಯಲ್ಲೇ ಐತಿಹ್ಯಗೊಂಡ ಕನಕದಾಸರನ್ನು ಇಲ್ಲಿಯೇ ಹೂಳಲಾಗಿದ್ದು ಆ ಸ್ಥಳದಲ್ಲಿ ಅಗಾಧ ಗಾತ್ರದ ಗದ್ದುಗೆ ರಚಿಸಿ ಕಾ.ಅ.ಪ್ರಾ ಸ್ಥಳದ ಅಂದವನ್ನು ಇಮ್ಮಡಿಗೊಳಿಸಿದೆ.


ಊರಿನಲ್ಲಿರುವ ಮೂಲ ಆದಿಕೇಶವ ದೇವಾಲಯವನ್ನು ಬಿಚ್ಚಿರುವುದರಿಂದ ಮತ್ತು ಕೆರೆಯ ತಟದಲ್ಲೀಗ ಭವ್ಯ ಗದ್ದುಗೆ ರಚಿಸಿರುವುದರಿಂದ ಹೆಚ್ಚಿನವರು ಈ ಗದ್ದುಗೆಯನ್ನೇ ನೂತನ ಆದಿಕೇಶವ ದೇವಾಲಯವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ! ಈ ಭವ್ಯ ರಚನೆ ಗದ್ದುಗೆಯಾಗಿಯೇ ಇರಲಿದ್ದು ನೂತನ ಆದಿಕೇಶವ ದೇವಾಲಯ, ಮೂಲ ಸ್ಥಾನದಲ್ಲೇ ಮೂಲ ರೂಪದಲ್ಲೇ ಬರಲಿದೆ.

8 ಕಾಮೆಂಟ್‌ಗಳು:

ಮೌನರಾಗ ಹೇಳಿದರು...

ಉತ್ತಮ ಮಾಹಿತಿ, ಚಿತ್ರಗಳುಳ್ಳ ಪೋಸ್ಟ್........ಚೆನ್ನಾಗಿದೆ..

Arun ಹೇಳಿದರು...

Brilliant narration.. Central Karnataka has wonderful hidden treasures.. Thanks to you that many people come to know about these places.. I have myself visited many hidden destinations after reading your blogs..

ಸಿಂಧು Sindhu ಹೇಳಿದರು...

ಪ್ರೀತಿಯ ರಾಜೇಶ್,
ಮಾಹಿತಿ ಪೂರ್ಣ ಲೇಖನ. ಫೋಟೋಗಳು ಒಂದಕ್ಕಿಂತ ಒಂದು ಸೊಗಸಾಗಿ ಬಂದಿವೆ.
ಸೋಮನಾಥೆಶ್ವರನ ದೇಗುಲದ ಅವಸ್ಥೆ ನೋಡಿ ಬೇಸರವಾಯಿತು. ಆದರೂ ಆಧುನಿಕವಾಗಿ ಮಾಡ್ ಆಗಿ ಬೆಳಗುವ ವೀರಭದ್ರನ ದೇಗುಲಕ್ಕಿಂತ ಹೆಚ್ಚು ಮನೋಹರವಾಗಿ ಕಾಣುತ್ತೆ ಈ ಹೆಚ್ಚುಕಮ್ಮಿ ಹಾಳಾದ ಹಾಗಿರೋ ದೇಗುಲ.
ಕನಕದಾಸರ ಗದ್ದುಗೆ ಭಾರಿ ಜೋರಾಗಿದೆ. ಪ್ರಾಧಿಕಾರಗಳ ಹೆಸರಲ್ಲಿ ನಡೆದ ಒಂದಾದರು ಒಳ್ಳೆ ಕೆಲಸ ನೋಡಿ ಖುಷಿಯಾಯ್ತು.
ಪ್ರೀತಿಯಿಂದ,
ಸಿಂಧು

Ashok ಹೇಳಿದರು...

Nice article with good photos..

Team G Square ಹೇಳಿದರು...

Wonderful .......

ರಾಜೇಶ್ ನಾಯ್ಕ ಹೇಳಿದರು...

ಅನಂತ್, ಸುಷ್ಮಾ,
ಧನ್ಯವಾದ.

ಅರುಣ್,
ಧನ್ಯವಾದ. ಈ ಬ್ಲಾಗಿನ ಲೇಖನಗಳು ನಿಮಗೆ ಸಹಕಾರಿಯಾಗಿವೆ ಎಂದರೆ ಅದಕ್ಕಿಂತ ಸಂತೋಷ ನನಗೆ ಬೇರೇನಿಲ್ಲ.

ಸಿಂಧು,
ಧನ್ಯವಾದ. ಪ್ರಾಚೀನ ದೇವಾಲಯಗಳ ಆಕರ್ಷಣೆಯೇ ಹಾಗಿದೆ. ಎಷ್ಟೇ ಪಾಳುಬಿದ್ದ ಪ್ರಾಚೀನ ದೇವಾಲಯವಿರಲಿ, ಅದು ಆಧುನಿಕ ದೇವಾಲಯಕ್ಕಿಂತ ಅಂದವಾಗಿಯೇ ಕಾಣುತ್ತದೆ. ಅದಕ್ಕೆ ಅಲ್ಲವೇ ನಾನು ಅವುಗಳ ಬೆನ್ನು ಹತ್ತಿರುವುದು!

ಅಶೋಕ್, ಧೀರಜ್ ಅಮೃತಾ,
ಧನ್ಯವಾದ.

ಶಿವ ಕುಮಾರ್ ಎಸ್ ಹೇಳಿದರು...

ತುಂಬಾ ಉತ್ತಮವಾದ ಮತ್ತು ಉಪಯುಕ್ತ ಮಾಹಿತಿಯನ್ನು ಹಾಗೂ ಐತಿಹಾಸಿಕ ವಿಷಯಗಳನ್ನು ತಿಳಿಯುವಂತಾಯಿತು.
ಈ ವಿಷಯವು ಓದುಗರಿಗೆ ಬಹಳ ಉಪಯುಕ್ತವಾಗಿದೆ.

ರಾಜೇಶ್ ನಾಯ್ಕ ಹೇಳಿದರು...

ಶಿವಕಮಾರ್,
ಧನ್ಯವಾದ.