ಭಾನುವಾರ, ಮಾರ್ಚ್ 25, 2012

ಹೀಗೊಂದು ಊರು - ೩


ಮಹಾನ್ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅಲೆದಾಡಿದ ಓಡಾಡಿದ ಊರು. ಹೆಸರು ಮಾತ್ರ ’ಬೀಡಿ’. ಕಿತ್ತೂರು - ಖಾನಾಪುರ ರಸ್ತೆಯಲ್ಲಿ ಈ ಊರು ಸಿಗುತ್ತದೆ.

ಭಾನುವಾರ, ಮಾರ್ಚ್ 18, 2012

ಬ್ರಹ್ಮೇಶ್ವರ ದೇವಾಲಯ ಮತ್ತು ರಾಮೇಶ್ವರ ದೇವಾಲಯ - ಬಾಳಂಬೀಡ


ಬಾಳಂಬೀಡನ್ನು ಶಾಸನಗಳಲ್ಲಿ ’ಬಳ್ಳಾರೆಯ ಬೀಡು’ ಎಂದು ಕರೆಯಲಾಗಿದೆ. ಕದಂಬರ ಮತ್ತು ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಚಟುವಟಿಕೆಯಿಂದ ಕೂಡಿದ ಊರಾಗಿತ್ತೆಂದು ಶಾಸನಗಳ ಮೂಲಕ ತಿಳಿದುಬರುತ್ತದೆ. ಇಲ್ಲಿ ಬ್ರಹ್ಮೇಶ್ವರ ಮತ್ತು ರಾಮೇಶ್ವರ ಎಂಬ ಎರಡು ಪ್ರಮುಖ ಚಾಲುಕ್ಯ ಶೈಲಿಯ ದೇವಾಲಯಗಳಿದ್ದು, ೩ ಶಿಲಾಶಾಸನಗಳು ಮತ್ತು ಒಂದು ವೀರಗಲ್ಲು ದೊರೆತಿವೆ.


ಬ್ರಹ್ಮೇಶ್ವರ ದೇವಾಲಯವನ್ನು ಬೋಳುದೇವರ ದೇವಾಲಯವೆಂದೂ ಕರೆಯುತ್ತಾರೆ. ಗೋಪುರರಹಿತ ದೇವಾಲಯವು ಬೋಳುಬೋಳಾಗಿ ಕಾಣುವುದರಿಂದ ಊರಿನವರೇ ’ಬೋಳುದೇವರು’ ಎಂದು ಕರೆಯುತ್ತಿರಬೇಕು! ಈ ದೇವಾಲಯ ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನವರಂಗದಲ್ಲಿ ೧೨ ಕಂಬಗಳಿವೆ. ನಡುವೆ ಇರುವ ನಾಲ್ಕು ಸುಂದರ ಕಂಬಗಳ ನಡುವೆ ನಂದಿ ಇದೆ. ಈಗ ಇದು ’ಓಪನ್’ ನವರಂಗದಂತೆ ಕಾಣಿಸಿದರೂ, ೩ ದಿಕ್ಕುಗಳಿಂದ ದ್ವಾರಗಳಿದ್ದ ಕುರುಹುಗಳನ್ನು ಸ್ಪಷ್ಟವಾಗಿ ಕಾಣಬಹುದು.


ಅಂತರಾಳದ ದ್ವಾರದ ಒಂದು ಬದಿಯಲ್ಲಿರುವ ಜಾಲಂಧ್ರ ಮಾತ್ರ ಉಳಿದುಕೊಂಡಿದೆ. ಮೇಲ್ಗಡೆ ಮಕರ  ತೋರಣದಿಂದ ಅಲಂಕೃತ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಕೆತ್ತನೆಯಿದೆ. ಬ್ರಹ್ಮನ ಪಾದದ ಬಳಿ ಬಲಭಾಗದಲ್ಲಿ ಹಂಸದ ಕೆತ್ತನೆಯಿದೆ. ಮಹೇಶ್ವರನ ಪಾದದ ಒಂದು ಬದಿಯಲ್ಲಿ ಬಸವನಿದ್ದರೆ ಇನ್ನೊಂದು ಬದಿಯಲ್ಲಿ ಗಣೇಶನ ಕೆತ್ತನೆಯಿದೆ. ವಿಷ್ಣುವಿನ ಪಾದದ ಎಡಬದಿಯಲ್ಲಿ ಗರುಡನಿದ್ದಾನೆ. ಮಕರಗಳ ಮೇಲೆ ಯಕ್ಷರು ಆಸೀನರಾಗಿರುವುದನ್ನು ತೋರಿಸಲಾಗಿದೆ.


ಗರ್ಭಗುಡಿಯಲ್ಲಿ ಚಾಲುಕ್ಯ ಶೈಲಿಯ ಪೀಠದ ಮೆಲೆ ಸುಮಾರು ಒಂದು ಅಡಿ ಎತ್ತರದ ಶಿವಲಿಂಗವಿದೆ. ದೇವಾಲಯದ ಹೊರಗೋಡೆಯಲ್ಲಿ ಚೆನ್ನಾಗಿ ಕೆತ್ತಲಾಗಿರುವ ಗೋಪುರಗಳು ಮತ್ತು ಮಂಟಪಗಳಿವೆ.


ದೇವಾಲಯದ ಬಳಿಯಲ್ಲೇ ಒಂದು ಶಿಲಾಶಾಸನ ಮತ್ತು ವೀರಗಲ್ಲನ್ನು ಇಡಲಾಗಿದೆ. ಈ ಶಿಲಾಶಾಸನದಲ್ಲಿ ಇಸವಿ ೧೧೨೩ರಲ್ಲಿ ಕಲ್ಯಾಣ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಸಮಯದಲ್ಲಿ ಆತನ ಪಾಳೇಗಾರನಾಗಿದ್ದ ’ಮಹಾಪ್ರಭು ಬಮ್ಮಗಾವುಂದ’ ಎಂಬವನು ಬ್ರಹ್ಮೇಶ್ವರ ದೇವಾಲಯವನ್ನು ನಿರ್ಮಿಸಿದನೆಂದು ತಿಳಿಸಲಾಗಿದೆ.


ಅನತಿ ದೂರದಲ್ಲಿರುವ ರಾಮೇಶ್ವರ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ ಮತ್ತು ’ವೇಸರ’ ಶೈಲಿಯ ಗೋಪುರವನ್ನು ಹೊಂದಿದೆ. ಈ ದೇವಾಲಯವನ್ನು ಕಲ್ಲುದೇವರ ಗುಡಿ ಎಂದೂ ಕರೆಯುತ್ತಾರೆ.


ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಬ್ರಹ್ಮೇಶ್ವರ ದೇವಾಲಯದಲ್ಲಿರುವಂತೆ ಇಲ್ಲೂ ಅಂತರಾಳದ ದ್ವಾರದ ಮೇಲ್ಗಡೆ ಮಕರ ತೋರಣದಿಂದ ಅಲಂಕೃತಗೊಂಡಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಯಿದೆ. ಒಂದೇ ವ್ಯತ್ಯಾಸವೆಂದರೆ ಶಿವನ ಪಾದದ ಬಳಿಯಿರುವ ನಂದಿ ಮತ್ತು ಗಣೇಶ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡಿರುವುದು.


ಅಂತರಾಳದ ದ್ವಾರದ ಇಕ್ಕೆಲಗಳಲ್ಲಿರುವ ಕವಾಟಗಳಲ್ಲಿ ಕಾರ್ತಿಕೇಯ ಮತ್ತು ಗಣೇಶನ ವಿಗ್ರಹಗಳಿವೆ. ಇವೆರಡೂ ಹಾನಿಗೊಂಡಿವೆ. ನವರಂಗದಲ್ಲಿರುವ ನಾಲ್ಕು ಕಂಬಗಳೂ ಆಕರ್ಷಕವಾಗಿದ್ದು ಹೂವು, ಬಳ್ಳಿಗಳ ಸುಂದರ ಕೆತ್ತನೆಗಳನ್ನು ಹೊಂದಿವೆ. ಈ ನಾಲ್ಕು ಕಂಬಗಳ ನಡುವೆಯೇ ನಂದಿಯ ಮೂರ್ತಿ ಇದೆ. ಗರ್ಭಗುಡಿಯಲ್ಲಿ ಸಣ್ಣ ಶಿವಲಿಂಗವಿದೆ. ಸಪ್ತಮಾತೃಕೆಯ ಕೆತ್ತನೆಯಿರುವ ಕಲ್ಲೊಂದನ್ನು ನವರಂಗದಲ್ಲಿರಿಸಲಾಗಿದೆ.


ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಗಳಿಲ್ಲ. ಐದು ತೋಳುಗಳ ಪ್ರಮುಖ ದ್ವಾರದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಮೇಲಿರುವ ಅಡ್ಡಪಟ್ಟಿಯಲ್ಲಿ ೨ ತಾವರೆಗಳನ್ನು ಕಾಣಬಹುದು.


ಈ ದೇವಾಲಯದಲ್ಲಿ ೧೧ನೇ ಶತಮಾನದ ೨ ಶಾಸನಗಳಿವೆ. ಇವುಗಳ ಪ್ರಕಾರ ಇಸವಿ ೧೧೨೩ರಲ್ಲಿ ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಸ್ಥಳೀಯ ಪಾಳೇಗಾರನಾಗಿದ್ದ ’ಬಮ್ಮಗಾವುಂದ’ (ಬ್ರಹ್ಮೇಶ್ವರ ದೇವಾಲಯ ನಿರ್ಮಿಸಿದವನೂ ಈತನೇ) ಎಂಬವನು ರಾಮೇಶ್ವರ ದೇವಾಲಯಕ್ಕೆ ಸ್ಥಳವನ್ನು ದಾನವನ್ನಾಗಿ ನೀಡಿದ್ದನು ಎಂದು ತಿಳಿದುಬರುತ್ತದೆ.


ಎರಡೂ ದೇವಾಲಯಗಳು ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದ್ದು, ಪ್ರಾಂಗಣದೊಳಗೆ ಸುರಕ್ಷಿತವಾಗಿಯೂ ಸ್ವಚ್ಛವಾಗಿಯೂ ಇವೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಮಂಗಳವಾರ, ಮಾರ್ಚ್ 13, 2012

ಕಲ್ಲೇಶ್ವರ ದೇವಾಲಯ - ಅರಳಗುಪ್ಪೆ


ಅರಳಗುಪ್ಪೆಯಲ್ಲಿ ಕೆರೆಯ ತಟದಲ್ಲಿ ನೆಲೆಗೊಂಡಿದ್ದಾನೆ ಕಲ್ಲೇಶ್ವರ. ಶಾಸನಗಳಲ್ಲಿ ಈ ಊರನ್ನು ’ಅಳರಿಗುಪ್ಪೆ’ ಎಂದು ಕರೆಯಲಾಗಿದೆ. ಅಷ್ಟ ದೇವಾಲಯಗಳ ಸಮುಚ್ಚಯವಿರುವ ವಿಶಾಲ ಪ್ರಾಂಗಣ ಮೊದಲ ನೋಟಕ್ಕೆ ಅಷ್ಟೇನು ಆಕರ್ಷಕವಾಗಿ ಕಾಣಬರುವುದಿಲ್ಲ. ಇರುವ ಎಲ್ಲಾ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರನ ಮತ್ತು ಉಮಾಮಹೇಶ್ವರ ಗುಡಿಗಳಿಗೆ ಪ್ರಾಮುಖ್ಯತೆ ನೀಡಿ ಹಳದಿ ಬಣ್ಣ ಬಳಿದರೆ ಉಳಿದವುಗಳಿಗೆ ಬಿಳಿ.


ಕಲ್ಲೇಶ್ವರ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ಅಲ್ಲೇ ಇದ್ದ ಅಜ್ಜಿಯೊಬ್ಬಳನ್ನು ಬೀಗದ ಬಗ್ಗೆ ವಿಚಾರಿಸಿದಾಗ ಆಕೆ ಏನನ್ನೂ ಮಾತನಾಡದೆ ಎತ್ತಲೋ ಹೋದಳು. ’ಏನಪ್ಪಾ ಸೊಕ್ಕು ಈ ಮುದುಕಿಗೆ’ ಎಂದು ಮನದಲ್ಲೇ ಆಕೆಗೆ ಹಿಡಿಶಾಪ ಹಾಕುತ್ತಾ ದೇವಾಲಯದ ದ್ವಾರದ ಚಿತ್ರಗಳನ್ನು ತೆಗೆಯುತ್ತಿರಬೇಕಾದರೆ ಆ ಅಜ್ಜಿ ಒಬ್ಬರನ್ನು ಕರಕೊಂಡು ಬಂದಳು! ಇವರು ದೇವಾಲಯದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಯಾಗಿದ್ದು, ದೇವಾಲಯದ ಬಾಗಿಲಿನ ಬೀಗ ತೆಗೆದರು. ಅಜ್ಜಿಗೆ ಧನ್ಯವಾದ ಹೇಳಿ, ಮನದಲ್ಲೇ ಕ್ಷಮೆಯನ್ನೂ ಯಾಚಿಸಿದೆ.


ನೊಳಂಬ ರಾಜರಿಂದ ಒಂಬತ್ತನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಏಕಕೂಟವಾಗಿದ್ದು ನವರಂಗ, ದ್ವಾರರಹಿತ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ಒಳಗೆ ಕರಿಕಲ್ಲಿನ ಆಕರ್ಷಕ ಶಿವಲಿಂಗವಿದೆ. ಈ ದೇವಾಲಯದಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ದೇವಾಲಯವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗಿದೆ. ದೇವಾಲಯದ ಎರಡು ಪ್ರಮುಖ ಆಕರ್ಷಣೆಗಳೆಂದರೆ ನವರಂಗದ ಛಾವಣಿಯಲ್ಲಿರುವ ಅದ್ಭುತ ಕೆತ್ತನೆಗಳು ಮತ್ತು ದೇವಾಲಯದ ದ್ವಾರದಲ್ಲಿರುವ ಕೆತ್ತನೆಗಳು.


ದೇವಾಲಯದ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ವಾದ್ಯಗಾರರು, ನರ್ತಕಿಯರು ಮತ್ತು ದ್ವಾರಪಾಲಕರನ್ನು ಹೊಂದಿದೆ. ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಗಜಲಕ್ಷ್ಮೀಯ ಕೆತ್ತನೆಯ ಮೇಲಿನ ಸಾಲಿನಲ್ಲಿ ೫ ಕುಬ್ಜರು ಕುಳಿತಿರುವಂತೆ ಕೆತ್ತಲಾಗಿದೆ. ಅವರು ಯಾರು, ಯಾಕೆ ಹಾಗೆ ಕೆತ್ತಲಾಗಿದೆ, ಮಹತ್ವ ಏನು ಎಂದು ತಿಳಿಯಲಿಲ್ಲ. ಗಂಧರ್ವರು ಆಗಿರಬಹುದು.


ನವರಂಗದ ಛಾವಣಿಯಲ್ಲಿ ಸುತ್ತಲೂ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳಲ್ಲಿ ಆಸೀನರಾಗಿರುವಂತೆ ಕೆತ್ತಲಾಗಿದ್ದು, ನಟ್ಟನಡುವೆ ತಾಂಡವೇಶ್ವರನ ಮೂರ್ತಿಯನ್ನು ಕೆತ್ತಲಾಗಿದೆ. ಸಂಪೂರ್ಣ ಆಭರಣಧಾರಿಯಾಗಿ ತಾಂಡವ ನೃತ್ಯದಲ್ಲಿ ತಲ್ಲೀನನಾಗಿರುವ ಶಿವನ ಸುತ್ತಲೂ ತಾಳ, ಕೊಳಲು ಮತ್ತು ಮೂರು ಮಡಕೆಗಳಂತಹ ವಾದ್ಯವೊಂದನ್ನು ನುಡಿಸುತ್ತಿರುವವರ ಕೆತ್ತನೆಯಿದೆ. 


ಇವೆಲ್ಲಕ್ಕಿಂತಲೂ ನನ್ನನ್ನು ಆಕರ್ಷಿಸಿದ್ದು ಹಾರಾಡುವ ಗಂಧರ್ವರ ಕೆತ್ತನೆಗಳು. ತಾಂಡವೇಶ್ವರನ ಕೆತ್ತನೆಯಿರುವ ಚೌಕದ ನಾಲ್ಕು ಮೂಲೆಗಳಲ್ಲೂ ಹಾರವನ್ನು ಹಿಡಿದು ಶಿವನತ್ತ ಮುಖ ಮಾಡಿರುವ ಗಂಧರ್ವರನ್ನು ಕೆತ್ತಿರುವ ರೀತಿ ಅದ್ಭುತ. ನೋಡಿದಷ್ಟು ವಿಸ್ಮಯಗೊಳಿಸುವ ಕೆತ್ತನೆ.


ದೇವಾಲಯದ ಹೊರಗೆ ನಂದಿಯ ಸುಂದರ ಮೂರ್ತಿಯಿದೆ. ಕಲ್ಲೇಶ್ವರನ ಸನ್ನಿಧಿಯ ಅಕ್ಕಪಕ್ಕದಲ್ಲಿ ಗಣೇಶ ಮತ್ತು ಸುಬ್ರಹ್ಮಣ್ಯರ ದೇವಾಲಯಗಳಿವೆ.


ನೇರ ಎದುರಿಗೆ ಉಮಾಮಹೇಶ್ವರನ ದೇವಾಲಯವಿದೆ. ಎತ್ತರದ ಪೀಠದ ಮೇಲಿರುವ ಉಮಾಮಹೇಶ್ವರನ ವಿಗ್ರಹ ಆಕರ್ಷಕವಾಗಿದ್ದು ಇಬ್ಬರು ಹಾರುವ ಗಂಧರ್ವರನ್ನೊಳಗೊಂಡ ಪ್ರಭಾವಳಿ ಕೆತ್ತನೆಯನ್ನು ಹೊಂದಿದೆ. ಪೀಠದ ತಳಭಾಗದಲ್ಲಿ ನಂದಿಯ ಕೆತ್ತನೆಯಿದೆ.


ಗಂಗರ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲ್ಪಡುವ ಇನ್ನೂ ನಾಲ್ಕು ಸಣ್ಣ ಶಿವ ದೇವಾಲಯಗಳು ಪ್ರಾಂಗಣದೊಳಗೇ ಇವೆ. ಕೆರೆಯ ತಟದಲ್ಲೇ ಸುಂದರ ಮಂಟಪವೊಂದಿದೆ.

ಭಾನುವಾರ, ಮಾರ್ಚ್ 11, 2012

ಅಕ್ಷರ ಅವಾಂತರ ೧೦ - ಗುಡಾವುನ್ನ...!


’ಗುಡಾವುನ್ನ’!... ಇಲ್ಲಿ ಏನು ಬರೆಯಲು ಹೊರಟಿದ್ದಾರೆ ಎಂದು ಹೇಳಬಲ್ಲಿರಾ?

ಗುರುವಾರ, ಮಾರ್ಚ್ 08, 2012

ರಾಹುಲ್ ದ್ರಾವಿಡ್ ನಿವೃತ್ತಿ


ನಿರೀಕ್ಷಿಸಿದಂತೆ ರಾಹುಲ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳುತ್ತಿದ್ದಾರೆ. ಇನ್ನು ಅವರು ಭಾರತಕ್ಕೆ ಆಡುವುದನ್ನು ನಾವೆಂದೂ ಕಾಣಲಾರೆವು. ಇನ್ನು ನನ್ನ ರಜೆಗಳೆಲ್ಲವೂ ಉಳಿಯಲಿವೆ (೨೦೧೧ರಲ್ಲಂತೂ ಸಿಕ್ಕಾಪಟ್ಟೆ ’ಲಾಸ್ ಆಫ್ ಪೇ ’ಆಗಿತ್ತು). ಕ್ರಿಕೆಟ್ ನೋಡುವುದು ಬಹಳಷ್ಟು ಕಡಿಮೆಯಾಗಲಿದೆ.

ಆದಿತ್ಯವಾರದಂದು ರಾಹುಲ್ ಬ್ಯಾಟ್ ಮಾಡುವ ಅವಕಾಶವಿದ್ದರೆ ಅಂದು ಚಾರಣ ರದ್ದು ಮಾಡಿದ್ದೂ ಇದೆ. ಶುಭಕಾರ್ಯಗಳಿಗೆ ಒಂದು ನಿಮಿಷದ ಭೇಟಿ ನೀಡಿ ಮತ್ತೆ ಓಡಿ ಬಂದು ಟಿವಿ ಮುಂದೆ ಕೂತದ್ದೂ ಇದೆ.ರಜೆ ಹಾಕಿದ್ದಂತೂ ಅದೆಷ್ಟೋ ಸಲ.


ಕ್ರಿಕೆಟ್ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದೋ ಅದೆಲ್ಲವನ್ನೂ ರಾಹುಲ್ ದ್ರಾವಿಡ್ ಸಾಧಿಸಿಯಾಗಿದೆ. ೩೬ ಶತಕಗಳು. ೧೩ ಸಾವಿರಕ್ಕೂ ಅಧಿಕ ರನ್ನುಗಳು. ಟೆಸ್ಟ್ ಮಾನ್ಯತೆ ಪಡೆದಿರುವ ಎಲ್ಲಾ ರಾಷ್ಟ್ರಗಳಲ್ಲೂ ಶತಕ ಬಾರಿಸಿರುವ ಸಾಧನೆ ಮಾಡಿರುವ ಏಕೈಕ ಆಟಗಾರ. ತನ್ನ ಸಾಧನೆ ಮತ್ತು ನಡತೆಗಾಗಿ ಎಲ್ಲಾ ಕ್ರಿಕೆಟಿಗರಿಂದಲೂ ಗೌರವಿಸಲ್ಪಡುವ ಆಟಗಾರ. ಕ್ರಿಕೆಟ್ ಬಗ್ಗೆ ಉತ್ತಮ ಚಿಂತನೆಯುಳ್ಳ ಆಟಗಾರನೆಂಬ ಮನ್ನಣೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಏನಾದರೂ ಮಾರ್ಪಾಡು ಮಾಡುವ ಅಗತ್ಯವಿದ್ದಾಗ ಐಸಿಸಿ ಮೊದಲು ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳುವುದೂ ರಾಹುಲ್ ದ್ರಾವಿಡ್‍ನಿಂದ. ಸಾಧಿಸುವುದು ಬಾಕಿ ಇದ್ದರೆ ಅದು ಆಸ್ಟ್ರೇಲಿಯಾದಲ್ಲಿ ಜಯ ಗಳಿಸುವುದು ಮತ್ತು ರನ್ನು ಗಳಿಸುವುದು. ಅದನ್ನೊಂದು ಕೊನೆಯ ಬಾರಿ ಪ್ರಯತ್ನಿಸಿ, ವೈಫಲ್ಯವನ್ನು ಒಪ್ಪಿ ವಿದಾಯದೆಡೆ ಹೆಜ್ಜೆ ಹಾಕಿದ್ದಾರೆ ದ್ರಾವಿಡ್.


ಆಸ್ಟ್ರೇಲಿಯಾದಲ್ಲಿ ವೈಫಲ್ಯಗೊಂಡಿದ್ದು ರಾಹುಲ್ ನಿವೃತ್ತಿಗೆ ಕಾರಣವಲ್ಲ. ಅಲ್ಲಿ ಗೆಲುವು ಕಾಣುವ ತಂಡದ ಸದಸ್ಯನಾಗಬೇಕೆಂಬ ಕನಸನ್ನು ಹೊತ್ತು ತೆರಳಿದ್ದ ದ್ರಾವಿಡ್, ಅಕಸ್ಮಾತ್ ಭಾರತ ಆ ಸರಣಿ ಗೆದ್ದಿದ್ದರೂ ಅಥವಾ ತಾನು ಸಫಲನಾಗಿದ್ದರೂ ನಿವೃತ್ತಿ ಘೋಷಿಸುತ್ತಿದ್ದರು. ರಾಹುಲ್‍ನಂತಹ ಶ್ರೇಷ್ಠ ಆಟಗಾರರು ತಮ್ಮ ವಿದಾಯವನ್ನು ಸರಿಯಾಗಿ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ.

ಹೆಚ್ಚಿನ ಆಟಗಾರರು ನಿವೃತ್ತಿಯನ್ನು ಮೊದಲೇ ಘೋಷಿಸಿ ಕೊನೆಯ ಪಂದ್ಯವನ್ನು ಆಡುತ್ತಾರೆ. ಆದರೆ ರಾಹುಲ್ ಅದಕ್ಕಾಗಿ ಕಾಯದೇ ನಿವೃತ್ತಿ ಘೋಷಿಸಿರುವುದು ಅವರ ವೃತ್ತಿಪರತೆಗೆ ಸಾಕ್ಷಿ. ನಿವೃತ್ತಿ ಘೋಷಿಸಿ ಇನ್ನೊಂದು ಪಂದ್ಯವನ್ನಾಡುವುದು ರಾಹುಲ್‍ಗೆ ದೊಡ್ಡ ವಿಷಯವೇನಲ್ಲ. ಬಿಸಿಸಿಐ ಕೂಡಾ ಕೊನೆಯ ಪಂದ್ಯವನ್ನಾಡಲು ರಾಹುಲ್‍ಗೆ ಖಂಡಿತ ಅವಕಾಶ ನೀಡುತ್ತದೆ. ಆದರೆ ಅದಕ್ಕಾಗಿ ಕಾಯದೆ ನಿವೃತ್ತಿ ಹೊಂದುತ್ತಿರುವ ರಾಹುಲ್ ನಿಜವಾಗಿಯೂ ಅಭಿನಂದನಾರ್ಹರು. ಬಿಸಿಸಿಐ ದ್ರಾವಿಡ್‍ಗೆ ಅಂತಿಮ ಪಂದ್ಯ ಆಡುವಂತೆ ಕೇಳಿಕೊಳ್ಳಬಹುದು ಮತ್ತು ದ್ರಾವಿಡ್, ಒತ್ತಾಯಕ್ಕೆ ಮಣಿದು ಒಪ್ಪಲೂಬಹುದು. ಹಾಗೆಲ್ಲಾದರೂ ಆದರೆ ಕೊನೆಯ ಬಾರಿ ದ್ರಾವಿಡ್ ಆಟ ಸವಿಯುವ ಅವಕಾಶ ನಮಗೆಲ್ಲಾ ಸಿಗಬಹುದು.


ರಾಹುಲ್ ದ್ರಾವಿಡ್ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ಸಂತೋಷ ಒಂದೆಡೆಯಾದರೆ, ಇನ್ನು ಅವರ ಟೆಸ್ಟ್ ಮ್ಯಾಚ್ ಆಟ ನೋಡುವ ಅವಕಾಶ ಸಿಗಲಾರದು ಎಂಬ ಬೇಜಾರು ಇನ್ನೊಂದೆಡೆ.

೧೬ ವರ್ಷ ಅದ್ಭುತ ಆಟದ ಪ್ರದರ್ಶನ ನೀಡಿ, ಆನಂದಿಸಲು ಅವಕಾಶ ನೀಡಿದ ರಾಹುಲ್‍ಗೆ ಧನ್ಯವಾದಗಳು.

ಭಾನುವಾರ, ಮಾರ್ಚ್ 04, 2012

ಕಾಗಿನೆಲೆ


ಕನಕದಾಸರ ಕರ್ಮಭೂಮಿಯಾಗಿರುವ ಕಾಗಿನೆಲೆಗೆ ಭೇಟಿ ನೀಡಬೇಕೆನ್ನುವ ಮಹಾದಾಸೆ ಬಹಳ ದಿನಗಳಿಂದ ಇತ್ತು. ಕನಕದಾಸರ ಹುಟ್ಟೂರು ಬಾಡ. ಅಲ್ಲಿಂದ ಕಾಗಿನೆಲೆಗೆ ತನ್ನ ಆರಾಧ್ಯದೈವ ಚನ್ನಕೇಶವನೊಂದಿಗೆ ಬಂದ ಕನಕದಾಸರು ಕಾಗಿನೆಲೆಯಲ್ಲೇ ವಾಸಿಸತೊಡಗಿದರು.


ಕನಕದಾಸರ ಹಾಡುಗಳಲ್ಲಿ ’ಆದಿಕೇಶವ’ನ ಗುಣಗಾನವನ್ನು ಕೇಳಿ ಆ ಸನ್ನಿಧಾನವನ್ನು ನೋಡೋಣವೆಂದು ತೆರಳಿದರೆ ನನಗೊಂದು ’ಶಾಕ್’ ಕಾದಿತ್ತು. ಆದಿಕೇಶವನ ದೇವಾಲಯವೇ ನಾಪತ್ತೆ! ತಳಪಾಯ ಸಮೇತ ದೇವಾಲಯವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಬಿಚ್ಚಿ ಇಟ್ಟಿತ್ತು. ದೇವಾಲಯವನ್ನು ಹೊಸದಾಗಿ ನಿರ್ಮಿಸುವ ಕಾರ್ಯ ನಡೆಯುತ್ತಿತ್ತು.


ಆದಿಕೇಶವನ ವಿಗ್ರಹವನ್ನು ಮತ್ತು ಕನಕನ ವಿಗ್ರಹವನ್ನು ಬದಿಯಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಇಡಲಾಗಿದೆ. ಆದಿಕೇಶವನಿಗೆ ದೈನಂದಿನ ಪೂಜೆಯನ್ನು ಇಲ್ಲೇ ಸಲ್ಲಿಸಲಾಗುತ್ತಿದೆ. ಕನಕದಾಸರು ತಮ್ಮ ಹೆಚ್ಚಿನ ಸಮಯವನ್ನು ಲಕ್ಷ್ಮೀನರಸಿಂಹ ಮತ್ತು ಆದಿಕೇಶವ ದೇವಾಲಯಗಳಲ್ಲಿ ಕಳೆಯುತ್ತಿದ್ದರು.


ಲಕ್ಷ್ಮೀನರಸಿಂಹ ದೇವಾಲಯವು ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಮುಖಮಂಟಪ ವಿಶಾಲವಾಗಿದ್ದು ನವರಂಗದಲ್ಲಿ ನಾಲ್ಕು ಕಂಬಗಳಿವೆ. ಗರ್ಭಗುಡಿಯಲ್ಲಿರುವ ನರಸಿಂಹನಿಗೆ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಕನಕದಾಸರು ಬಳಸುತ್ತಿದ್ದರೆನ್ನಲಾಗುವ ಬಟ್ಟಲು ಮತ್ತು ಶಂಖವನ್ನು ಲಕ್ಷ್ಮೀನರಸಿಂಹ ದೇವಾಲಯದಲ್ಲಿಡಲಾಗಿದೆ. ಕೇಳಿದರೆ ಮಾತ್ರ ದೇವಾಲಯದ ಯುವ ಅರ್ಚಕ ಅವನ್ನು ಪ್ರವಾಸಿಗರ ಕೈಗೆ ನೋಡಲು ಕೊಡುತ್ತಾನೆ. ಹೀಗೆ ಪ್ರವಾಸಿಗರಿಗೆ ಕನಕದಾಸರ ಬಟ್ಟಲು ಮತ್ತು ಶಂಖವನ್ನು ಮುಟ್ಟಲು ಇನ್ನು ಕೆಲವು ದಿನಗಳ ಬಳಿಕ ಸಾಧ್ಯವಿಲ್ಲ. ಆದಿಕೇಶವ ದೇವಾಲಯದ ಮರುನಿರ್ಮಾಣದ ಬಳಿಕ ಕಾ.ಅ.ಪ್ರಾ ಅವುಗಳನ್ನು ಗಾಜಿನ ಪೆಟ್ಟಿಗೆಯೊಳಗೆ ಸಾರ್ವಜನಿಕರು ನೋಡಲು ಅನುಕೂಲವಾಗುವ ರೀತಿಯಲ್ಲಿ ಇಡುವ ನಿರ್ಧಾರ ಮಾಡಿದೆ.


ಕಾ.ಅ.ಪ್ರಾ ಕಾಗಿನೆಲೆಯನ್ನು ಪ್ರಮುಖ ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳಲ್ಲಿ ಬಹಳ ಮುಖ್ಯವಾದದ್ದು ಕಾಗಿನೆಲೆಯಲ್ಲಿನ ದೇವಾಲಯಗಳ ಸಂರಕ್ಷಣೆ. ಕಾಲನ ದಾಳಿಗಿಂತಲೂ ಊರಿನಲ್ಲಿ ಬೀಡು ಬಿಟ್ಟಿರುವ ಬಹುಸಂಖ್ಯಾತ ಸಾಬರಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದ್ದು, ಸರಕಾರ ಕಾ.ಅ.ಪ್ರಾ ರಚಿಸಿ ಬಹಳ ಒಳ್ಳೆಯ ಕೆಲಸ ಮಾಡಿದೆ. ಕಾ.ಅ.ಪ್ರಾ ಬಂದ ಬಳಿಕ ಈ ನಮ್ಮ ’ಬಂಧಗಳು’ ನೀಡುತ್ತಿದ್ದ ಕಿರುಕುಳ ಕ್ರಮೇಣ ಕಡಿಮೆಯಾಗಿದೆ ಎಂದು ಊರವರು ತಿಳಿಸಿದರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಹೆಚ್ಚಿನ ವಿವರಗಳನ್ನು ಅವರ ಅಂತರ್ಜಾಲ ತಾಣದಿಂದ ಪಡೆಯಬಹುದು.


ಸಂಗಮೇಶ್ವರ ದೇವಾಲಯದಲ್ಲಿ ಅನಾದಿ ಕಾಲದಿಂದಲೂ ಹಿಂದೂಗಳೇ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಸಿದ್ಧ ಶರಣರಾಗಿದ್ದ ಸಂಗಮೇಶ್ವರರ ಗದ್ದಿಗೆ ಎನ್ನುವುದಕ್ಕೆ ಅವಶ್ಯವಿರುವ ಎಲ್ಲಾ ಸಾಕ್ಷಿ ಪುರಾವೆಗಳು ಲಭ್ಯವಿವೆ. ಆದರೆ ದೇವಾಲಯದ ಮೇಲ್ಭಾಗದಲ್ಲಿ ಮಸೀದಿಗಳಿಗಿರುವಂತೆ ಒಂದೆರಡು ಕಂಬಗಳಿದ್ದು ಅದನ್ನೇ ಇಲ್ಲಿನ ಮುಸಲ್ಮಾನರು ’ತಮ್ಮ ದರ್ಗಾ’ ಎನ್ನಲು ಬಲವಾದ ಸಾಕ್ಷಿಯ ರೂಪದಲ್ಲಿ ಹಿಡಿದುಕೊಂಡು ನ್ಯಾಯಾಲಯಕ್ಕೆ ಹೋಗಿಬಿಟ್ಟಿದ್ದಾರೆ.


ಸಂಗಮೇಶ್ವರರು ಸೇರಿದ ಪಂಥ ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿದ್ದು ಎಲ್ಲೆಡೆ ಮುಸಲ್ಮಾನ ಶೈಲಿಯ ಕಂಬಗಳನ್ನು ಉಪಯೋಗಿಸಿರುವುದು ಕಂಡಬರುತ್ತದೆ. ಸಂಗಮೇಶ್ವರನ ವಾರ್ಷಿಕ ಜಾತ್ರೆಗೆ ಬೀದರ್, ಗುಲ್ಬರ್ಗಾ, ಬಿಜಾಪುರ ಮತ್ತು ಮಹಾರಾಷ್ಟ್ರದ ಲಾತೂರ್, ಕೊಲ್ಲಾಪುರ, ಸಾಂಗ್ಲಿ ತಾಲೂಕುಗಳಿಂದ ಜನಸಾಗರವೇ ಇಲ್ಲಿ ನೆರೆದಿರುತ್ತದೆ. ಇಷ್ಟೇ ಅಲ್ಲದೆ ದಿನಾಲೂ ಬರುವ ಭಕ್ತರು ತುಂಬಾ ಸಂಖ್ಯೆಯಲ್ಲಿದ್ದಾರೆ. ಹೀಗೆ ಬರುವವರ ಅನುಕೂಲಕ್ಕೆ ಛತ್ರದ ನಿರ್ಮಾಣಕ್ಕೆ ಕಾ.ಅ.ಪ್ರಾ ಮುಂದಾದರೂ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥಗೊಳ್ಳದೆ ಏನೂ ಮಾಡುವಂತಿಲ್ಲ.


ಸೋಮೇಶ್ವರ ದೇವಾಲಯದಲ್ಲಿ ಗರ್ಭಗುಡಿ ಮಾತ್ತು ಅಂತರಾಳ ಮಾತ್ರ ಉಳಿದುಕೊಂಡಿದೆ. ಶಾಸನಗಳಲ್ಲಿ ಈ ದೇವಾಲಯವನ್ನು ’ಸೋಮನಾಥೇಶ್ವರ’ ಎಂದು ಕರೆಯಲಾಗಿದೆ.


ರಾಷ್ಟ್ರಕೂಟರ ಕಾಲದ ವೀರಭದ್ರ ದೇವಾಲಯ ಬದಲಾವಣೆಗಳನ್ನು ಕಂಡು ಆಧುನಿಕ ದೇವಾಲಯದಂತೆ ಕಾಣುತ್ತದೆ. ಗರ್ಭಗುಡಿ, ನವರಂಗ ಮತ್ತು ಮುಖಮಂಟಪ ಹೊಂದಿರುವ ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ಒಳಗೆ ತೆರಳಲು ಸಾಧ್ಯವಾಗಲಿಲ್ಲ.


ಕಾಳಹಸ್ತೇಶ್ವರ ದೇವಾಲಯವು ರಾಷ್ಟ್ರಕೂಟರ ಸಮಯದಲ್ಲಿ ನಿರ್ಮಾಣಗೊಂಡಿದ್ದು, ಗರ್ಭಗುಡಿ, ತೆರೆದ ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ದೇವಾಲಯ ಪಾಳುಬಿದ್ದಿದ್ದರೂ ಗರ್ಭಗುಡಿಯ ಮೇಲಿರುವ ಗೋಪುರ ಆಕರ್ಷಕವಾಗಿದ್ದು ಕಲಶವನ್ನೂ ಹೊಂದಿದೆ. ಪ್ರಮುಖ ದ್ವಾರ ಪಂಚಶಾಖ ತರಹದ್ದಾಗಿದ್ದು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ.


ಊರಿನ ವಿಶಾಲ ಕೆರೆಯ ತಟದಲ್ಲಿ ಕನಕ ಸಮಾಧಿ (ಗದ್ದುಗೆ) ಇದೆ. ಮೊದಲು ಇದ್ದ ಗದ್ದುಗೆಯನ್ನು ತೆಗೆದು ಈಗ ಕಾ.ಅ.ಪ್ರಾ ಭವ್ಯ ಮತ್ತು ಅತ್ಯಾಕರ್ಷಕವಾದ ಗದ್ದುಗೆಯನ್ನು ರಚಿಸಿದೆ. ಕಾಗಿನೆಲೆಯಲ್ಲೇ ಐತಿಹ್ಯಗೊಂಡ ಕನಕದಾಸರನ್ನು ಇಲ್ಲಿಯೇ ಹೂಳಲಾಗಿದ್ದು ಆ ಸ್ಥಳದಲ್ಲಿ ಅಗಾಧ ಗಾತ್ರದ ಗದ್ದುಗೆ ರಚಿಸಿ ಕಾ.ಅ.ಪ್ರಾ ಸ್ಥಳದ ಅಂದವನ್ನು ಇಮ್ಮಡಿಗೊಳಿಸಿದೆ.


ಊರಿನಲ್ಲಿರುವ ಮೂಲ ಆದಿಕೇಶವ ದೇವಾಲಯವನ್ನು ಬಿಚ್ಚಿರುವುದರಿಂದ ಮತ್ತು ಕೆರೆಯ ತಟದಲ್ಲೀಗ ಭವ್ಯ ಗದ್ದುಗೆ ರಚಿಸಿರುವುದರಿಂದ ಹೆಚ್ಚಿನವರು ಈ ಗದ್ದುಗೆಯನ್ನೇ ನೂತನ ಆದಿಕೇಶವ ದೇವಾಲಯವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ! ಈ ಭವ್ಯ ರಚನೆ ಗದ್ದುಗೆಯಾಗಿಯೇ ಇರಲಿದ್ದು ನೂತನ ಆದಿಕೇಶವ ದೇವಾಲಯ, ಮೂಲ ಸ್ಥಾನದಲ್ಲೇ ಮೂಲ ರೂಪದಲ್ಲೇ ಬರಲಿದೆ.