ಶುಕ್ರವಾರ, ಫೆಬ್ರವರಿ 24, 2012

ಹೂಲಿ


ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಹೂಲಿಯನ್ನು ದೇವಸ್ಥಾನಗಳ ತೊಟ್ಟಿಲು ಎಂದೂ ಕರೆಯುತ್ತಾರೆ. ಹೂಲಿಯಲ್ಲಿ ೧೦೧ ದೇಗುಲಗಳಿದ್ದವು ಎಂದು ಹೇಳಲಾಗುತ್ತದೆ. ರಾಜ್ಯದ ಅತ್ಯಂತ ಪುರಾತನ ಸ್ಥಳಗಳಲ್ಲಿ ಹೂಲಿಯೂ ಒಂದು ಎಂದು ನಂಬಲಾಗಿದೆ. ಇಲ್ಲಿ ಇಸವಿ ೧೦೮೪ ಮತ್ತು ೧೧೮೧ರ ಶಾಸನಗಳು ದೊರೆತಿವೆ. ೧೦೮೪ರ ಶಾಸನದಲ್ಲಿ ಕಳಚೂರಿ ದೊರೆ ಬಿಜ್ಜಳ ಮತ್ತು ಆತನ ಮಗ ಅಹಮಲ್ಲದೇವನ ಹೆಸರುಗಳಿದ್ದರೆ ೧೧೮೧ರ ಶಾಸನದಲ್ಲಿ ತ್ರಿಭುವನಮಲ್ಲದೀವನ ಹೆಸರುಗಳಿವೆ. ಈ ಶಾಸನಗಳಲ್ಲಿ ಹೂಲಿಯನ್ನು ’ಪೂವಲ್ಲಿ’ ಎಂದು ಕರೆಯಲಾಗಿದ್ದು ವಿದ್ವಾಂಸರು ಮತ್ತು ಋಷಿ ಮುನಿಗಳು ವಾಸವಿದ್ದ ಸಂಪನ್ನ ಸ್ಥಳವಾಗಿತ್ತೆಂದು ಬರೆಯಲಾಗಿದೆ. ಹೂಲಿಯನ್ನು ಪೂಲಿ, ಪೂಲಿಗ್ರಾಮ, ಪೂಲಿಪುರ, ಪೂಲಿ ಅಗ್ರಹಾರ, ಮಹಾಗ್ರಹಾರ ಪೂಲಿ, ಚೂಡಾಮಣಿ ಪೂಲಿ ಎಂಬಿತ್ಯಾದಿ ಹೆಸರುಗಳಿಂದಲೂ ಕರೆಯಲಾಗಿದೆ.


ಒಂದೆಡೆ ವಿಶಾಲವಾದ ಕೆರೆ ಮತ್ತು ಮಗದೊಂದೆಡೆ ಬೆಟ್ಟಗಳ ಶ್ರೇಣಿಯ ನಡುವೆ ಭವ್ಯ ಪ್ರಾಚೀನ ದೇವಾಲಯಗಳನ್ನು ತನ್ನ ಒಡಲೊಳಗೆ ತುಂಬಿಸಿಕೊಂಡು ತಣ್ಣಗೆ ಕುಳಿತಿರುವ ಸಣ್ಣ ಹಳ್ಳಿ ಹೂಲಿ. ಎರಡು ಬೆಟ್ಟಗಳು ಸಂಧಿಸುವಲ್ಲಿ ಮಳೆಗಾಲದಲ್ಲಿ ಹಳ್ಳವೊಂದು ಹುಟ್ಟಿ ಜಲಧಾರೆಯೊಂದನ್ನು ನಿರ್ಮಿಸಿ ಕಣಿವೆಯಲ್ಲಿಳಿದು ಬಂದು ಹೂಲಿಯಲ್ಲಿರುವ ಕೆರೆಯನ್ನು ಸೇರುತ್ತದೆ. ಈ ಹಳ್ಳಕ್ಕೆ ಶಿವಕಾಶಿ ಹಳ್ಳ ಎನ್ನುತ್ತಾರೆ. ಕಣಿವೆಗೂ ಅದೇ ಹೆಸರು.


ಹೂಲಿಯಲ್ಲಿ ಎಲ್ಲೆಡೆ ಪಾಳುಬೀಳುತ್ತಿರುವ ದೇವಾಲಯಗಳು, ದೇವಾಲಯಕ್ಕೆ ಬಳಸಲಾಗಿದ್ದ ಕಲ್ಲುಗಳು ಮನೆಯ ಗೋಡೆಗಳನ್ನು ಅಲಂಕರಿಸಿರುವುದು, ವಿಶಾಲ ಕೆರೆಯಲ್ಲಿ ಅರ್ಧ ಮುಳುಗಿರುವ ಐತಿಹಾಸಿಕ ಕತೆ ಹೇಳುತ್ತಿರುವ ಕಲ್ಲಿನ ಕಂಬಗಳು, ಇದೇ ಕೆರೆಯಲ್ಲಿ ಬಟ್ಟೆ ಒಗೆಯಲು ಮಹಿಳೆಯರು ಬಳಸುವ ಕಲ್ಲುಗಳು ಎಲ್ಲವೂ ಹೂಲಿಯಲ್ಲಿ ಕಳೆದುಹೋದ ಭವ್ಯ ಇತಿಹಾಸದ ಕುರುಹುಗಳನ್ನು ನೀಡುತ್ತವೆ.


ವಿದ್ವಾಂಸರಿಂದ ಮತ್ತು ಪಂಡಿತರಿಂದ ತುಂಬಿ ತುಳುಕುತ್ತಿದ್ದ ಊರಾಗಿತ್ತು ಈ ಸ್ಥಳ. ಆಗಿನ ’ಮಹಾಗ್ರಹಾರ ಪೂಲಿ’ಯಲ್ಲಿ ಒಟ್ಟು ೧೦೦೦ಕ್ಕೂ ಅಧಿಕ ವಿದ್ವಾಂಸರು ಇದ್ದರು ಎಂದು ತಿಳಿದುಬಂದಿದೆ. ಭಾಷಾ ಪ್ರಯೋಗ, ವ್ಯಾಕರಣ ಮತ್ತು ತರ್ಕಗಳಲ್ಲಿ ಪರಿಣಿತರಾಗಿದ್ದ ಇವರೆಲ್ಲರು ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಕೂಡಾ ಹೊಂದಿದ್ದರು. ಹೂಲಿಯ ದೇವಾಲಯವೊಂದರಲ್ಲಿ ದೊರಕಿರುವ ಶಾಸನದಲ್ಲಿ ಗುರು-ಶಿಷ್ಯ ಪರಂಪರೆಯ ಬಗ್ಗೆ ವಿವರವಾದ ಉಲ್ಲೇಖವಿದೆ. ವಿದ್ಯಾಕೇಂದ್ರವಾಗಿ ಪ್ರಸಿದ್ಧಿ ಪಡೆದಿದ್ದ ಹೂಲಿಯಲ್ಲಿ ಅಂದಿನ ಕಾಲದ ಉನ್ನತ ವಿದ್ವಾಂಸರು ನೆಲೆಸಿದ್ದರು.


ಇಸವಿ ೧೬೫೦ರಲ್ಲಿ ರಾಘವಾಂಕ ಚರಿತವನ್ನು ಬರೆದ ಚಿಕ್ಕನಂಜೇಶನು ಇದೇ ಊರಿನವನಾಗಿದ್ದು, ಹೂಲಿಯನ್ನು ’ಪೂವಲಿ’ ಎಂದು ಬರೆದಿದ್ದಾನೆ. ಆಗಿನ ಕಾಲದಲ್ಲಿದ್ದ ಅಗ್ರಹಾರಗಳಲ್ಲಿ ಅಗ್ರಹಾರಗಳ ಮುಕುಟದಂತೆ ಹೂಲಿ ಇತ್ತು ಎಂದು ಚಿಕ್ಕನಂಜೇಶ ಹೇಳಿದ್ದಾನೆ.


ಹೂಲಿಯಲ್ಲಿ ಬೆಟ್ಟದ ಮೇಲೆ ೧೬೭೪ರಲ್ಲಿ ಶಿವಾಜಿಯಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುವ ಕೋಟೆಯೊಂದಿದೆ. ಪ್ರತಿ ದಿನ ಕೋಟೆಯ ಗೋಡೆಯ ಕಲ್ಲುಗಳು ವ್ಯವಸ್ಥಿತ ರೀತಿಯಲ್ಲಿ ಕಣ್ಮರೆಯಾಗುತ್ತಿವೆ. ಕೋಟೆಯ ಸಮೀಪದವರೆಗೆ ಟ್ರಾಕ್ಟರ್ ತೆರಳುವಂತೆ ಊರವರೇ ರಸ್ತೆ ಮಾಡಿಕೊಂಡಿದ್ದು ಕೋಟೆಯ ವಿನಾಶಕ್ಕೆ ತಾವೇ ಮುಂದಾಗಿದ್ದಾರೆ.


ಇಲ್ಲಿರುವ ಒಟ್ಟು ೧೫ (ಸಣ್ಣವು ದೊಡ್ಡವು ಎಲ್ಲಾ ಸೇರಿ - ಎರಡಂತೂ ತೀರಾ ಸಣ್ಣದಿವೆ) ದೇವಾಲಯಗಳಲ್ಲಿ ಕೇವಲ ಒಂದು ಮಾತ್ರ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಉಳಿದ ದೇವಾಲಯಗಳು ನಿರ್ಲಕ್ಷ್ಯಕ್ಕೊಳಪಟ್ಟು ಧೂಳಿನ ಕಣಜಗಳಾಗಿ ಮಾರ್ಪಟ್ಟಿವೆ. ಒಂದೆರಡು ದೇವಾಲಯಗಳ ಒಳಗೆ ನಿಧಿಶೋಧನೆಗಾಗಿ ಅಗೆದು ಹಾಕಲಾಗಿದೆ. ಮುಳ್ಳಿನ ಗಿಡಗಳು, ಪೊದೆಗಳು ಈ ದೇವಾಲಯಗಳನ್ನು ಆವರಿಸಿಕೊಳ್ಳುತ್ತಿವೆ.


ನನ್ನ ಮೊದಲ ಭೇಟಿಯಲ್ಲಿ ಎಲ್ಲಾ ದೇವಾಲಯಗಳನ್ನು ಸಂದರ್ಶಿಸಲು ಸಾಧ್ಯವಾಗಲಿಲ್ಲ. ಸಂಸಾರ ಸಮೇತನಾಗಿ ತೆರಳಿದ್ದ ಕಾರಣ ನಾಲ್ಕು ದೇವಾಲಯಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಲೀನಾ ಮತ್ತು ಆಕೆಯ ತಂಡವನ್ನು ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲೇ ಬಿಟ್ಟು ಉಳಿದ ದೇವಾಲಯಗಳನ್ನು ನೋಡಲು ತೆರಳಿದ್ದೆ. ಒಂದೊಂದೇ ದೇವಾಲಯಗಳನ್ನು ನೋಡುತ್ತಾ ಮೈಮರೆಯುತ್ತಾ ಮುಂದೆ ಮುಂದೆ ಹೋಗುತ್ತಾ ಇದ್ದೆ. ಲೀನಾಳ ಫೋನ್ ಬಂದು, ’ಎಲ್ಲಿ ಇದ್ದೀರಿ.. ಇನ್ನೆಷ್ಟು ಹೊತ್ತು..’ ಎಂದು ಆಕೆ ಗೊಣಗಿದಾಗಲೇ ನಾನು ಅವರನ್ನೆಲ್ಲಾ ಬಿಟ್ಟು ಬಂದು ಒಂದು ತಾಸಿಗೂ ಮಿಕ್ಕಿ ಸಮಯವಾಗಿತ್ತು ಎಂದು ಅರಿವಾಗಿದ್ದು!


ನಂತರ ಎರಡನೇ ಭೇಟಿಗೆ ಸಮಯಾವಕಾಶ ಆಗಿದ್ದು ೨೦ ತಿಂಗಳುಗಳ ಬಳಿಕ. ಮೊದಲನೇ ಸಲ ತೆರಳಿದಾಗ ನನಗೆ ದೇವಾಲಯಗಳನ್ನು ತೋರಿಸಿದ್ದ ವ್ಯಕ್ತಿಯೇ ಎರಡನೇ ಬಾರಿಯೂ ಜೊತೆಯಾದರು. ಪ್ರಾಚ್ಯ ವಸ್ತು ಇಲಾಖೆ ಹೂಲಿಯ ಎಲ್ಲಾ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸಲುವಾಗಿ ಎಲ್ಲಾ ದೇವಾಲಯಗಳನ್ನು ಒಂದು ತಿಂಗಳ ಹಿಂದೆಯಷ್ಟೇ ಸ್ವಚ್ಛ ಮಾಡಿದೆ ಎಂದು ಅವರು ತಿಳಿಸಿದರು. ಅಂತೂ ಹೂಲಿಯ ದೇವಾಲಯಗಳು ಮುಂದಿನ ಪೀಳಿಗೆಯವರೆಗೆ ಉಳಿದುಕೊಳ್ಳಲಿವೆ ಎಂದಾಯಿತು. ಹೂಲಿಯಲ್ಲೇ ಇರುವ ಸಂಗ್ರಹಾಲಯದಲ್ಲಿ ದೊರೆತಿರುವ ಕೆಲವು ವಿಗ್ರಹಗಳನ್ನು ಮತ್ತು ಶಾಸನಗಳನ್ನು ಸಂರಕ್ಷಿಸಿ ಇಡಲಾಗಿದೆ.


ಇಲ್ಲಿನ ಕೆಲವು ದೇವಾಲಯಗಳ ಹೆಸರುಗಳ ಬಗ್ಗೆ ಗೊಂದಲವಿದ್ದವು. ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯ ವಸ್ತು ಇಲಾಖೆಗಳಿಗೆ ದೇವಾಲಯಗಳ ಹೆಸರುಗಳು ಗೊತ್ತಿದ್ದರೂ ನಿಖರವಾಗಿ ’ಈ ದೇವಾಲಯದ ಹೆಸರು ಇದು’ ಎಂದು ಹೇಳಲು ಅಸಾಧ್ಯವಾಗಿತ್ತು. ಈ ಗೊಂದಲ ತೀರಾ ಇತ್ತೀಚಿನವರೆಗೆ ಅಂದರೆ ಎಪ್ರಿಲ್ ೨೦೧೧ರವರೆಗೂ ಇತ್ತು. ಹಳ್ಳಿಗರ ಮಾತುಗಳಲ್ಲಿ ತೇಲಾಡುತ್ತಿದ್ದ ಹೆಸರುಗಳ ಆಧಾರದ ಮೇಲೆ ದೇವಾಲಯಗಳನ್ನು ನಿರ್ದಿಷ್ಟ ಹೆಸರಿನಲ್ಲಿ ಕರೆಯಲಾಗುತ್ತಿತ್ತಾದರೂ ಮೂಲ ಹೆಸರು ಬೇರೇನೆ ಇದೆ ಎಂಬ ಅರಿವಿದ್ದ ಪ್ರಾಚ್ಯ ವಸ್ತು ಇಲಾಖೆ, ಧಾರವಾಡದ ತಜ್ಞರೊಬ್ಬರಿಗೆ (ಇವರ ಹೆಸರು ನನಗೆ ನೆನಪಿಲ್ಲ) ಇಲ್ಲಿನ ದೇವಾಲಯಗಳ ಕೂಲಂಕೂಷ ಅಧ್ಯಯನ ಮಾಡಿ ಮೂಲ ಹೆಸರುಗಳನ್ನು ಪತ್ತೆ ಹಚ್ಚುವ ಕಾರ್ಯ ವಹಿಸಿತು. ಈ ತಜ್ಞರ ಅಧ್ಯಯನದಿಂದಾಗಿ ಇಂದು ಹೂಲಿಯ ದೇವಾಲಯಗಳ ಮೂಲ ಹೆಸರು ನಮಗೆಲ್ಲರಿಗೂ ತಿಳಿಯುವಂತಾಗಿದೆ.


ತಾರಕೇಶ್ವರ, ಹರಕೇಶ್ವರ ಎಂದು ಕರೆಯಲಾಗುತ್ತಿದ್ದ ದೇವಾಲಯದ ಮೂಲ ಹೆಸರು ನೀಲಕಂಠೇಶ್ವರ.
ಮದನೇಶ್ವರ, ನಂದಿಕೇಶ್ವರ, ಕರಿಗುಡಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ದೇವಾಲಯದ ಮೂಲ ಹೆಸರು ತಾರಕೇಶ್ವರ.
ದಕ್ಷಿಣ ಕಾಶಿ ವಿಶ್ವೇಶ್ವರ ದೇವಾಲಯದ ಮೂಲ ಹೆಸರು ವಿಶ್ವನಾಥ ದೇವಾಲಯ.
ಕಲ್ಮೇಶ್ವರ ದೇವಾಲಯದ ಮೂಲ ಹೆಸರು ಭೀಮೇಶ್ವರ ದೇವಾಲಯ.
ರಾಮೇಶ್ವರ ಎಂದು ಕರೆಯಲ್ಪಡುವ ದೇವಾಲಯದ ಮೂಲ ಹೆಸರು ಅಗಸ್ತ್ಯೇಶ್ವರ.
ಅಗಸ್ತ್ಯೇಶ್ವರ ದೇವಾಲಯದ ಮೂಲ ಹೆಸರು ರಾಮೇಶ್ವರ.
ಈಗ ಎಲ್ಲಾ ದೇವಾಲಯಗಳ ಹೆಸರನ್ನು ಅವುಗಳ ಮೂಲ ಹೆಸರುಗಳಿಗೆ ಬದಲಾಯಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಹೂಲಿ ಗ್ರಾಮ ಪಂಚಾಯತ್ ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದೆ.


ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿಯುಳ್ಳವರು ಭೇಟಿ ನೀಡಲೇಬೇಕಾದ ಸ್ಥಳ ಹೂಲಿ. ಅಂದಾಜು ಬದಾಮಿ ಚಾಲುಕ್ಯರ ಸಮಯದಲ್ಲಿ ನಿರ್ಮಿತಗೊಂಡ ಈ ದೇವಾಲಯಗಳಲ್ಲಿ ಹೊರಗೋಡೆಯಲ್ಲಿ ಶಿಲ್ಪಕಲೆಗೆ ಆದ್ಯತೆಯಿಲ್ಲ. ಆದರೆ ದ್ವಾರಗಳು, ಶಾಖೆಗಳು, ಕಲ್ಲಿನ ಕಂಬಗಳು, ಇತ್ಯಾದಿಗಳ ಕೆತ್ತನೆ ಮನಸೆಳೆಯುತ್ತದೆ. ಒಂದೇ ಹಳ್ಳಿಯಲ್ಲಿ ಏಕಕೂಟ, ದ್ವಿಕೂಟ, ತ್ರಿಕೂಟ ಮತ್ತು ಪಂಚಕೂಟ ಶೈಲಿಯ ದೇವಾಲಯಗಳನ್ನು ಕಾಣುವ ಭಾಗ್ಯ ಬೇರೆಲ್ಲಾದರೂ ಲಭ್ಯವಾದಿತೇ?

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಬುಧವಾರ, ಫೆಬ್ರವರಿ 15, 2012

ಜಲಧಾರೆ ಮತ್ತು ಆದರಾತಿಥ್ಯ


ಮಳೆ ಶುರುವಾದೊಡನೆ ವಿವೇಕ್, ’ಎಲ್ಲಾದರು ಪ್ಲ್ಯಾನ್ ಮಾಡ್ರಿ...’ ಎಂದು ದುಂಬಾಲು ಬೀಳುತ್ತಾರೆ.  ಅಂದು ಈ ಜಲಧಾರೆಗೆ ತೆರಳುವ ಸಲುವಾಗಿ ದೇವರು ಹೆಗಡೆಯವರ ಮನೆ ತಲುಪಿದೆವು. ಬಿರುಸಾಗಿ ಮಳೆ ಸುರಿಯುತ್ತಿತ್ತು. ಅಗಂತುಕರಾಗಿದ್ದ ನಮ್ಮನ್ನು ದೇವರು ಹೆಗಡೆ ಮತ್ತು ಅವರ ಮಗ ಪ್ರಸನ್ನ ಹೆಗಡೆ ಆದರದಿಂದ ಬರಮಾಡಿಕೊಂಡರು. ಜಲಧಾರೆಗೆ ತೆರಳಬೇಕೆಂಬ ಇರಾದೆಯನ್ನು ನಾನು ಅರುಹಿದಾಗ ಅವರಿಬ್ಬರು ಅವಾಕ್ಕಾಗಿ ಒಂದು ಕ್ಷಣ ಮಾತನಾಡಲೇ ಇಲ್ಲ.


ಆಘಾತಗೊಂಡವರಂತೆ ಕಂಡ ಅವರ ಮುಖಭಾವ ಕಂಡು ಏನಾದರೂ ತಪ್ಪು ಹೇಳಿದೆನೇ ಎಂದು ನಾನು, ವಿವೇಕ್ ಮತ್ತು ಮುರಳಿ ಮುಖ ಮುಖ ನೋಡಿಕೊಂಡೆವು. ಕೂಡಲೇ ಸಾವರಿಸಿಕೊಂಡ ಅಪ್ಪ ಮಗ ಗೊಳ್ಳನೆ ನಕ್ಕುಬಿಟ್ಟರು. ’ನಿಮ್ಗೆ ಅಲ್ಲಿಗೆ ಹೋಗುವ ದಾರಿ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ.... ಹಳ್ಳದಲ್ಲೇ ಹೋಗ್ಬೇಕು....ಮಳೆಗಾಲದಲ್ಲಿ ಅಷ್ಟೆಲ್ಲಾ ನೀರಿರುವಾಗ.... ಸಾಧ್ಯಾನೇ ಇಲ್ಲಾ.... ದೀಪಾವಳಿ ನಂತರ ಬನ್ನಿ....’ ಎಂದರು ಪ್ರಸನ್ನ. ಆದರೂ ನಾನು ಉಡುಪಿಯಿಂದ ಆಷ್ಟು ದೂರ ಬಂದದ್ದು ಮತ್ತು ಅವರಿಬ್ಬರು ಧಾರವಾಡದಿಂದ ಅಷ್ಟು ದೂರ ಬಂದದ್ದು ’ಬಂದ ದಾರಿಗೆ ಸುಂಕ ಇಲ್ಲ’ ಎಂಬಂತಾಗಬಾರದು ಎಂದು ’ಆದರೂ... ನೋಡಿಬರೋಣ’ ಎಂದು ಮತ್ತೆ ಅಪ್ಪ ಮಗನನ್ನು ಪೀಡಿಸತೊಡಗಿದೆವು.


ಆಗ ’ಆಸರೆ’ ಸರಬರಾಜು ಆಯಿತು. ಅದು ಹೊಟ್ಟೆಗಿಳಿದ ಬಳಿಕ ಮಾತು ಮುಂದುವರಿಸಿದ ದೇವರು ಹೆಗಡೆಯವರು, ’ನೋಡಿ... ಈಗ ಹೋಗ್ಲಿಕ್ಕೆ ಸಾಧ್ಯನೇ ಇಲ್ಲ. ನೀವು ಎಷ್ಟೇ ಒತ್ತಾಯ ಮಾಡಿದರೂ ನಾವು ನಿಮ್ಮನ್ನು ಇಲ್ಲಿಂದ ಮುಂದೆ ಹೋಗ್ಲಿಕ್ಕೆ ಬಿಡೋದಿಲ್ಲ. ದೀಪಾವಳಿ ಆದ್ಕೂಡಲೇ ಬನ್ನಿ. ನನ್ನ ಮಗನೇ ನಿಮ್ಮೊಟ್ಟಿಗೆ ಬರ್ತಾನೆ’ ಎಂದು ಖಡಾಖಂಡಿತವಾಗಿ ಹೇಳಿದಾಗ ನಾವು ಸುಮ್ಮನಾದೆವು.


ದೀಪಾವಳಿ ಆದ ಕೂಡಲೇ ನಾವಲ್ಲಿ ಹಾಜರು. ನಮ್ಮನ್ನು ಕಂಡು ಆ ಮನೆಯವರಿಗೆ ಎಲ್ಲಿಲ್ಲದ ಸಂತೋಷ! ಭರ್ಜರಿ ಉಪಚಾರ ಮಾಡಿದರೆನ್ನಿ. ’ಜೋನ್ಸ್’ ತರಹ ಟೊಪ್ಪಿಯನ್ನೇರಿಸಿ, ಸೊಂಟಕ್ಕೊಂದು ಟವೆಲ್ ಸುತ್ತಿ ಪ್ರಸನ್ನ ನಮ್ಮ ಮಾರ್ಗದರ್ಶಕರಾಗಿ ಹೊರಟೇಬಿಟ್ಟರು. ನಮಗೆ ಜಲಧಾರೆ ನೋಡುವುದಕ್ಕಿಂತಲೂ, ನಮಗೆ ಜಲಧಾರೆ ತೋರಿಸಲು ಅವರು ಹೆಚ್ಚು ಉತ್ಸುಕರಾಗಿದ್ದರು.


ಹಳ್ಳಗುಂಟ ಸುಮಾರು ದೂರ ಸಾಗಿದ ಕೂಡಲೇ ನಾಲ್ಕಾರು ಹಂತಗಳಲ್ಲಿ ಜಲಧಾರೆ ಕೆಳಗೆ ಬೀಳುವುದನ್ನು ಕಾಣಬಹುದು. ಮೊದಲ ಹಂತ ನೋಡಲು ಅಷ್ಟು ಆಕರ್ಷಕವಾಗಿಲ್ಲ. ಆದರೆ ಇಲ್ಲಿ ಪ್ರಕೃತಿಯ ರಚನೆ ಬಹಳ ಚೆನ್ನಾಗಿದೆ. ಕಣಿವೆ ಆರಂಭವಾಗುವುದೇ ಇಲ್ಲಿಂದ. ಸಾವಕಾಶವಾಗಿ ಕೆಳಗಿಳಿದ ಬಳಿಕ ಮುಂದಿನ ಹಂತಗಳತ್ತ ಪ್ರಸನ್ನ ಕರೆದೊಯ್ದರು.


ಸುಮಾರು ಒಂದು ಕಿಮಿ ಉದ್ದವಿರುವ ಈ ಕಣಿವೆಯಲ್ಲಿ ಮೊದಲ ಹಂತದ ಬಳಿಕ ಹಳ್ಳ ಕಣಿವೆಯ ಆಳಕ್ಕೆ ಇಳಿಯಲು ಆರಂಭಿಸುತ್ತದೆ. ಮುಂದೆ ಸಾಗಿದಂತೆ ಇಳಿಜಾರು ಕಡಿದಾಗುತ್ತಾ ಸಾಗುತ್ತದೆ. ನೋಡಲು ಯೋಗ್ಯವಾಗಿರುವಷ್ಟು ದೂರ ಪ್ರಸನ್ನ ನಮ್ಮನ್ನು ಕರೆದೊಯ್ದರು.


ಬಹಳ ಜಾಗರೂಕರಾಗಿ ಮುಂದೆ ಸಾಗಬೇಕಾಗುತ್ತದೆ. ಕಲ್ಲುಬಂಡೆಗಳ ರಾಶಿಯ ನಡುವೆ ನೀರು ಹರಿಯುವ, ಧುಮುಕುವ ಸುಂದರ ಸದ್ದನ್ನು ಕಿವಿ ತುಂಬಾ ತುಂಬಿಸಿಕೊಳ್ಳುತ್ತಾ ಇತರರನ್ನು ನಿಧಾನವಾಗಿ ಹಿಂಬಾಲಿಸಿದೆ. ನಾನಿನ್ನು ಸುಮಾರು ಹಿಂದೆ ಇರುವಾಗಲೇ ಪ್ರಸನ್ನ ಉಳಿದವರನ್ನು ’ಲಾಸ್ಟ್ ಪಾಯಿಂಟ್’ಗೆ ತಲುಪಿಸಿಯಾಗಿತ್ತು. ಅದಾಗಲೇ ಅವರೆಲ್ಲಾ ಬಟ್ಟೆ ಬಿಚ್ಚಲಾರಂಭಿಸಿದ್ದರು, ಸ್ನಾನ ಮಾಡಲು.


ನೀರಿನ ಹರಿವು ಜಲಧಾರೆಗೆ ಬಹಳ ಅಂದದ ರೂಪವನ್ನು ನೀಡಿತ್ತು. ಎಲ್ಲರೂ ಬಹಳ ಹೊತ್ತು ನೀರಿನಲ್ಲೇ ಕಳೆದರು. ನಾನು ಚಿತ್ರಗಳನ್ನು ತೆಗೆಯುವುದರಲ್ಲೇ ಮಗ್ನನಾಗಿದ್ದೆ.


ಇಲ್ಲಿಂದ ಮುಂದೆ ಹಳ್ಳ ಇನ್ನಷ್ಟು ಕಡಿದಾದ ಪ್ರಪಾತಕ್ಕೆ ಇಳಿದು ಮುಖ್ಯ ನದಿಯೊಂದನ್ನು ಸೇರುತ್ತದೆ. ’ಇನ್ನು ಮುಂದೆ ನೋಡಲು ಯೋಗ್ಯವಾದದ್ದೇನೂ ಇಲ್ಲ, ಹೋಗಬೇಕೆಂದಿದ್ದರೆ ಮುಂದಕ್ಕೆ ಸಾಗುವ’ ಎಂದು ಪ್ರಸನ್ನ ಹೇಳಿದರೂ ನಾವು ಆಸಕ್ತಿ ತೋರಲಿಲ್ಲ. ನಮಗಿಷ್ಟೇ ಸಾಕು. ಸ್ವರ್ಗ ದರ್ಶನ ಪ್ರಾಪ್ತಿಯಾಗಿತ್ತು. ಅದಕ್ಕಿಂತ ಹೆಚ್ಚು ಬೇಕಾಗಿರಲಿಲ್ಲ.


ಜಲಧಾರೆಯಿಂದ ಹಿಂತಿರುಗುವಾಗ ಮೊದಲ ಹಂತದ ಸಮೀಪ ಮುರಳಿ ಸ್ವಲ್ಪನೇ ಜಾರಿ ಬಲಗೈಯ ಮಣಿಗಂಟನ್ನು ಮುರಿದುಕೊಂಡರು. ಅದೇನು ಅತಿ ಸಣ್ಣ ಗಾಯ ಮಾಡಿಕೊಳ್ಳುವ ಪ್ರಮಾಣದ ಅನಾಹುತವೂ ಅಲ್ಲ. ಆದರೆ ಮುರಳಿಯ ಗ್ರಹಾಚಾರ, ಪೆಟ್ಟು ದೊಡ್ಡದೇ ಆಯಿತು. ಅಲ್ಲಿಗೆ ಮುಂದಿನ ಆರು ತಿಂಗಳವರೆಗೆ ಮುರಳಿಯವರ ಚಾರಣ ಬಂದ್. ಆರು ತಿಂಗಳ ಬಳಿಕ ಮಣಿಗಂಟನ್ನು ಎಲ್ಲಾ ಕೋನಗಳಲ್ಲಿ ತಿರುಗಿಸುತ್ತಾ, ’ನೋಡ್ರಿ... ಈಗ ಪರ್‌ಫೆಕ್ಟ್’ ಎನ್ನುತ್ತಾ ಮತ್ತೆ ಚಾರಣ ಮುಂದುವರಿಸಿದ್ದಾರೆ.


ನಂತರ ದೇವರು ಹೆಗಡೆಯವರ ಮನೆಯಲ್ಲಿ ನಾವು ಊಟ ತಂದಿದ್ದನ್ನು ತಿಳಿದು ಅವರು ಬೇಜಾರು ಮಾಡಿಕೊಂಡರು! ಆದರೂ ಮಜ್ಜಿಗೆ ಮೊಸರಿನ ಅಭಿಷೇಕವೇ ನಡೆಯಿತು ಎನ್ನಬಹುದು. ನಾವು ಸ್ವಲ್ಪನೂ ದಾಕ್ಷಿಣ್ಯ ಇಲ್ಲದೇ ತಂದಿಟ್ಟ ಅಷ್ಟೂ ಮಜ್ಜಿಗೆ ಮತ್ತು ಮೊಸರು ಖಾಲಿ ಮಾಡಿದ್ದನ್ನು ಕಂಡು ಸಂತೋಷಗೊಂಡ ಆ ಮನೆಯವರು ಇನ್ನಷ್ಟು ತಂದಿರಿಸಿದರು. ಅದೂ ಖಾಲಿ ಮಾಡಿ, ಇನ್ನು ಸಾಕು ಎಂದೆವು. ಮನೆಯಲ್ಲೆ ಮಾಡಿದ ಹಳ್ಳಿ ಸೊಗಡಿನ ತಾಜಾ ತುಪ್ಪ ತಂದಿರಿಸಿದರು. ಅದನ್ನೂ ಅಷ್ಟು ಖಾಲಿ ಮಾಡಿದೆವು. ಇಂದಿನ ದಿನಗಳಲ್ಲಿ ಇಷ್ಟು ಉತ್ತಮವಾಗಿ ಆತಿಥ್ಯ ಯಾರು ಮಾಡುತ್ತಾರೆ ಅದೂ ಆಗಂತುಕರನ್ನು? ನಮಗಂತೂ ಈ ಜಿಲ್ಲೆಯ ಎಲ್ಲೆಡೆ ಇಂತಹದೇ ಅನುಭವ. ಇತ್ತೀಚೆಗಂತೂ ಚಾರಣಕ್ಕಿಂತ ಹೆಚ್ಚಾಗಿ ಚೆನ್ನಾದ ಅತಿಥ್ಯ ಸಿಗಬಹುದಾ ಎಂಬ ಬಗ್ಗೆಯೇ ಮಾತನಾಡಿಕೊಳ್ಳುತ್ತಿರುತ್ತೇವೆ!

ಭಾನುವಾರ, ಫೆಬ್ರವರಿ 05, 2012

ಶಂಭುಲಿಂಗೇಶ್ವರ ದೇವಾಲಯ - ಇಟಗಿ


ಕೆರೆಯ ದಂಡೆಯ ಮೇಲಿರುವ ಶಂಭುಲಿಂಗೇಶ್ವರ ದೇವಾಲಯವನ್ನು ಇಸವಿ ೧೦೫೪ರಲ್ಲಿ ’ಶ್ರೀಧರ ದಂಡನಾಯಕ’ ಎಂಬವನು ನಿರ್ಮಿಸಿದನು. ಆಗಿನ ಸಮಯದಲ್ಲಿ ಇಟಗಿ ಒಂದು ಅಗ್ರಹಾರವಾಗಿತ್ತು. ಇಲ್ಲಿ ದೊರಕಿರುವ ಶಾಸನಗಳ ಪ್ರಕಾರ ಮೊದಲು ಈ ಊರನ್ನು ’ಯಿಟ್ಟಿಗೆ’ ಮತ್ತು ’ಇಟ್ಟಿಗೆ’ ಎಂದೂ, ದೇವಾಲಯವನ್ನು ಸ್ವಯಂಭೂ ಸಿದ್ದೇಶ್ವರ ದೇವಾಲಯವೆಂದೂ ಕರೆಯಲಾಗುತ್ತಿತ್ತು. ಇಲ್ಲಿ ದೊರಕಿರುವ ಇಸವಿ ೧೦೫೪ರ ಶಾಸನದಲ್ಲಿ ತಿಳಿಸಲಾಗಿರುವ ರಾಜೇಶ್ವರ ದೇವಾಲಯ ಈಗ ಎಲ್ಲೂ ಕಾಣಬರುವುದಿಲ್ಲ.


ಪಶ್ಚಿಮ ಚಾಲುಕ್ಯ ಶೈಲಿಯಲ್ಲಿ ನಿರ್ಮಿತ ಈ ದೇವಾಲಯದ ಶಿಖರ ೧೯ನೇ ಶತಮಾನದಲ್ಲಿ ಬಿದ್ದುಹೋಗಿದೆ. ಇಳಿಜಾರಿನ ಮಾಡು ಮತ್ತು ಕಕ್ಷಾಸನ ಹೊಂದಿರುವ ನಕ್ಷತ್ರಾಕಾರದ ಮುಖಮಂಟಪದಲ್ಲಿ ೨೪ ಕಂಬಗಳಿವೆ. ನಾವು ತೆರಳಿದಾಗ ಕಕ್ಷಾಸನ ತುಂಬಾ ಹಳ್ಳಿಯ ಜನರು ಗಾಳಿಗೆ ಮೈಯೊಡ್ಡಿ ಮಲಗಿ ವಿಶ್ರಾಮ ತೆಗೆದುಕೊಳ್ಳುತ್ತಾ ಹರಟುತ್ತಿದ್ದರು!


ಇಲ್ಲಿ ಮುಖಮಂಟಪದ ರಚನೆ ಭಿನ್ನವಾಗಿದೆ. ಹೆಚ್ಚಿನೆಡೆ ಮುಖಮಂಟಪಕ್ಕೆ ತಾಗಿಯೇ ನವರಂಗದ ದ್ವಾರವಿರುತ್ತದೆ. ಇಲ್ಲಿ ಮುಖಮಂಟಪ ಮತ್ತು ನವರಂಗದ ದ್ವಾರದ ನಡುವೆ ಸ್ವಲ್ಪ ಅಂತರವಿದ್ದು, ಈ ಅಂತರದ ಎರಡೂ ಪಾರ್ಶ್ವಗಳಿಂದಲೂ ದೇವಾಲಯವನ್ನು ಪ್ರವೇಶಿಸಬಹುದು! ಇದೇ ಕಾರಣದಿಂದ ಮುಖಮಂಟಪಕ್ಕೆ ನಾಲ್ಕೂ ದಿಕ್ಕುಗಳಿಂದ ಪ್ರವೇಶವಿರುವಂತಾಗಿದೆ.


ನವರಂಗದ ದ್ವಾರ ಪಂಚಶಾಖ ಅಲಂಕಾರವನ್ನು ಹೊಂದಿದ್ದು ಲಲಾಟದಲ್ಲಿದ್ದ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ನವರಂಗದಲ್ಲಿ ನಾಲ್ಕು ಕಂಬಗಳು ಮತ್ತು ನಾಲ್ಕು ದೇವಕೋಷ್ಠಗಳಿವೆ. ಎರಡು ದೇವಕೋಷ್ಠಗಳು ಖಾಲಿಯಾಗಿದ್ದರೆ ಉಳೆದೆರಡರಲ್ಲಿರುವ ಮೂರ್ತಿಗಳು ಯಾವುವೆಂದು ನನಗೆ ತಿಳಿಯಲಿಲ್ಲ. ನವರಂಗದ ಕಂಬವೊಂದಕ್ಕೆ ಆನಿಸಿ ಶಿವ ಪಾರ್ವತಿಯರ ಪ್ರತಿಮೆಯನ್ನಿರಿಸಲಾಗಿದೆ.


ಅಂತರಾಳವು ತ್ರಿಶಾಖಾ ದ್ವಾರದೊಂದಿಗೆ ಆಕರ್ಷಕ ಜಾಲಂಧ್ರಗಳನ್ನು ಹೊಂದಿದೆ. ಗರ್ಭಗುಡಿಯು ಅಲಂಕಾರಿಕ ಪಂಚಶಾಖಾ ದ್ವಾರವನ್ನು ಹೊಂದಿದೆ. ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಒಳಗಡೆ ೨ ಶಿವಲಿಂಗಗಳಿವೆ. ಇವುಗಳಲ್ಲಿ ಸಣ್ಣದಾಗಿರುವುದು ಮೂಲ ಶಿವಲಿಂಗ. ಸ್ವಯಂಭೂವಾಗಿರುವುದರಿಂದ ಈ ಶಿವಲಿಂಗ ಸಣ್ಣದಾಗಿದೆ. ದೊಡ್ಡ ಶಿವಲಿಂಗವನ್ನು ನಂತರದ ದಿನಗಳಲ್ಲಿ ಪ್ರತಿಷ್ಥಾಪಿಸಲಾಗಿದೆ.


ಈ ಊರು ಪ್ರಸಿದ್ಧಿ ಪಡೆದಿರುವುದು ಭೀಮಾಂಬಿಕೆಯ ದೇವಾಲಯದಿಂದಾಗಿ. ಇಟಗಿ ಭೀಮವ್ವ ಎಂದೇ ಕರೆಯಲ್ಪಡುವ ಈ ದೇವಾಲಯವನ್ನು ೧೯ನೇ ಶತಮಾನದಲ್ಲಿ ಜೀವಿಸಿದ್ದ ’ಭೀಮಮ್ಮ’ ಎಂಬ ವೀರಶೈವ ಭಕ್ತೆಯ ನೆನಪಿಗಾಗಿ ನಿರ್ಮಿಸಲಾಗಿದೆ.


ಪ್ರತಿ ಅಮವಾಸ್ಯೆಯ ದಿನ ಭೀಮಮ್ಮನ ಸಾವಿರಾರು ಭಕ್ತರು ಇಟಗಿಗೆ ಬರುತ್ತಾರಾದರೂ ಅವರಲ್ಲಿ ಒಬ್ಬನೂ ತಪ್ಪಿಯೂ ಶಂಭುಲಿಂಗೇಶ್ವರ ದೇವಾಲಯದೆಡೆ ಸುಳಿಯುವುದಿಲ್ಲ!

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಶುಕ್ರವಾರ, ಫೆಬ್ರವರಿ 03, 2012

ಚಾರಣ ಚಿತ್ರ - ೧೬

ಪ್ರಕೃತಿ ಮತ್ತು ಅಂಬರದ ನಡುವೆ ಮೇಘ ನರ್ತನ...