ಭಾನುವಾರ, ನವೆಂಬರ್ 27, 2011

ಅಮೇದಿಕಲ್ಲು ಮತ್ತು ಕರಡಿ


ಗೆಳೆಯ ದಿನೇಶ್ ಹೊಳ್ಳ ಬರೆಯುತ್ತಾರೆ...

ಆ ಬೆಟ್ಟವನ್ನೇರುವುದು ಹವ್ಯಾಸಿ ಚಾರಣಿಗರಿಗೊಂದು ಸವಾಲೇ ಹೌದು. ಅದರ ಎತ್ತರವೇ ಅಂತದ್ದು! ಕಡಿದಾದ ಪ್ರಪಾತವನ್ನೇರಿ ಶೃಂಗ ಭಾಗವನ್ನು ತಲುಪುವಾಗ ಎಂತವನಿಗೂ ಒಮ್ಮೆಗೆ ಚಾರಣದ ಸಹವಾಸವೇ ಬೇಡವಿತ್ತೆಂದು ಅನಿಸಿದರೆ ಅದು ಆ ಬೆಟ್ಟದ ತಪ್ಪಂತೂ ಅಲ್ಲವೇ ಅಲ್ಲ. ಶಿಶಿಲ ಸಮೀಪದ ಅಮೇದಿಕಲ್ಲು ಪರ್ವತವೇ ಅಂತದ್ದು. ಹಿಂದೆ ೩ ಬಾರಿ ಈ ಪರ್ವತವನ್ನೇರಿದ್ದರೂ ಒಮ್ಮೆ ’ಆರೋಹಣ’ದ ಅಶೋಕವರ್ಧನರ ಜತೆ ಅದನ್ನೇರುವ ಸುಯೋಗ ನನ್ನ ಪಾಲಿಗೆ ಲಭಿಸಿತ್ತು. ಎಂತಹ ಚಾರಣಿಗರಿಗೂ ಸಾಹಸಿಗ ಅಶೋಕವರ್ಧನರ ಜತೆಗೆ ಚಾರಣ ಮಾಡುವುದೆಂದರೆ ಖುಷಿ ಮತ್ತು ಕುತೂಹಲ. ಯಾಕೆಂದರೆ ಕರಾವಳಿ ಜಿಲ್ಲೆಗಳಲ್ಲಿ ಚಾರಣ ಎಂಬುದಕ್ಕೆ ಅರ್ಥ ಕೊಟ್ಟವರೇ ಅಶೋಕವರ್ಧನರು. ಅಂದು ಅಶೋಕವರ್ಧನರ ಜತೆ ಇದ್ದವರು ಸಾಮಾನ್ಯರೇನಲ್ಲ. ನಾನು ಅತೀವ ಅಭಿಮಾನ ಇಟ್ಟ ದೇವು ಹನೇಹಳ್ಳಿ , ನೀರೇನ್ ಜೈನ್, ಅಭಯಸಿಂಹ (’ಗುಬ್ಬಚ್ಚಿಗಳು’) ಮುಂತಾದ ಸಮಾನ ಮನಸ್ಕರು ಒಟ್ಟು ಸೇರಿದಾಗ ಆ ಚಾರಣದ ಸಂಭ್ರಮವನ್ನು ಹೇಗೆ ಹೇಳಲಿ? ಎಷ್ಟೋ ಚಾರಣ ಮಾಡಿಯೂ, ಚಾರಣ ಸಂಘಟಿಸಿಯೂ ಅಂದಿನ ಅಮೇದಿಕಲ್ಲು ಚಾರಣವು ನನ್ನ ನೆನಪಿನ ಚಾರಣಪುಟದಲ್ಲಿ ಅಚ್ಚಳಿಯದೇ ಉಳಿದಿದೆ.

ಬೆಳಿಗ್ಗೆ ಐದು ಗಂಟೆಗೇ ಹೊರಟ ನಮ್ಮ ತಂಡ ನೆರಿಯಕ್ಕೆ ಹೋಗಿ ಅಲ್ಲಿನ ಖಾಸಗಿ ಎಸ್ಟೇಟಿನವರ ಅನುಮತಿ ಪಡೆದು ಅವರ ತೋಟದೊಳಗಿನಿಂದ ಕಾನನವ ನುಗ್ಗಿ ಅಮೇದಿಕಲ್ಲು ಶಿಖರವನ್ನೇರಿದೆವು. ಕುದುರೆಮುಖ ವನ್ಯಜೀವಿ ಪ್ರತಿಷ್ಠಾನದ ನೀರೇನ್ ಜೈನಿಗೆ ನೀರು ನಾಯಿಯನ್ನು ನೋಡಬೇಕೆಂಬ ಕುತೂಹಲ. ದಾರಿಯುದ್ದಕ್ಕೂ ನೀರು ನಾಯಿಗಳ ಇರುವಿನ ಕುರುಹು ಲಭಿಸಿತೇ ಹೊರತು ನೀರು ನಾಯಿಗಳು ಕಾಣಿಸಲೇ ಇಲ್ಲ. ಪಶ್ಚಿಮ ಘಟ್ಟದ ಬಗ್ಗೆ ಅಪಾರ ಜ್ಞಾನ  ಭಂಡಾರವೇ ಆಗಿರುವ ದೇವು ಹನೇಹಳ್ಳಿಯವರಿಂದ ನೀರು ನಾಯಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಅಮೇದಿಕಲ್ಲಿನ ಶೃಂಗ ಭಾಗದಿಂದ ಸ್ವಲ್ಪ ಕೆಳಗೆ ಇರುವ ದಟ್ಟ ಅರಣ್ಯದಲ್ಲಿ ನಮ್ಮ ರಾತ್ರಿಯ ವಿಶ್ರಾಂತಿ. ರಾತ್ರಿಯೂಟಕ್ಕೆ ಬೆಂಕಿ ಎಬ್ಬಿಸಿ ನೀರು ಇಟ್ಟು ಇನ್ನೇನು ಅಕ್ಕಿ ಹಾಕಬೇಕೆಂದಿರುವಾಗ ಎಲ್ಲಿತ್ತೋ ಏನೋ? ಅನಿರೀಕ್ಷಿತ ಮಳೆ ಧಾರಾಕಾರವಾಗಿ ಸುರಿಯಬೇಕೇ? ಊಟವಿಲ್ಲದಿದ್ರೂ ಪರ್ವಾಗಿಲ್ಲ, ಮಲಗೋದಾದರೆ ಹೇಗೆ? ನಮ್ಮ ಜತೆಗಿದ್ದ ಐತಾಳರು ಬಂಡೆಯೊಂದರ ಅಡಿಯಲ್ಲಿ ಒಲೆ ನಿರ್ಮಿಸಿ ಗಂಜಿ ಬೇಯಿಸಿ ನಮ್ಮ ಪಾಲಿಗೆ ಅಪರಂಜಿಯಾದರು. ಹೊಟ್ಟೆ ತುಂಬ ಗಂಜಿ ಉಂಡರೂ ಮಲಗಲಾಗದೆ ಮಳೆಯ ಅಭಿಷೇಕದಿಂದ ಪಟ್ಟಾಂಗ ಹೊಡೆಯುತ್ತಾ ಕುಳಿತಿದ್ದೆವು. ನಾವು ಗಂಜಿಯನ್ನು ಕುಡಿದಂತೆ ಜಿಗಣೆಗಳು ನಮ್ಮ ರಕ್ತವನ್ನು ಕುಡಿದದ್ದು ಗೊತ್ತೇ ಆಗಲಿಲ್ಲ.

ಬೆಳಿಗ್ಗೆ ಐದು ಗಂಟೆಗೇ ಎದ್ದು ಅಮೇದಿಕಲ್ಲಿನ ತುದಿಭಾಗಕ್ಕೆ ಕತ್ತಲಲ್ಲೇ ಹೊರಟಿದ್ದೆವು. ಅಮೇದಿಕಲ್ಲಿನ ಶಿರಭಾಗವೆಂದರೆ ಅದೊಂದು ಬೃಹದಾಕಾರದ ಬಂಡೆ. ಸ್ವಲ್ಪ ನಿಧಾನಕ್ಕೆ ಜಾಗರೂಕರಾಗಿ ಏರಬೇಕಾಗುತ್ತದೆ. ಸ್ವಲ್ಪ ಜಾರಿದರೂ ಆಳಾವಾದ ಪ್ರಪಾತ. ನಾನು ಕತ್ತಲೆಯಲ್ಲೇ ಉಳಿದವರಿಗಿಂತ ಮೊದಲೇ ಬಂಡೆಯ ತುದಿ ಏರಿ ಹಾಯಾಗಿ ಮಲಗಿಕೊಂಡೆ. ನಾನು ಮೇಲೇರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಅವರೆಲ್ಲ ನಿಧಾನವಾಗಿ ಬಂಡೆ ಏರಿ ಬರುತ್ತಿದ್ದಾಗ ನಾನು ಮಲಗಿ ಒಂದು ಕಾಲಿನ ಮೇಲೆ ಇನ್ನೊಂದು ಕಾಲನ್ನು ಮಡಿಚಿ ಅವರು ಬರುತ್ತಿರುವುದನ್ನೇ ನೋಡುತ್ತಿದ್ದೆ. ಅವರೆಲ್ಲರೂ ಮೇಲ್ಭಾಗದ ಬಂಡೆಯ ಒಂದು ಮಗ್ಗುಲಲ್ಲಿ ನನ್ನಿಂದ ೨೦ ಅಡಿ ಅಂತರದಲ್ಲಿ ಸಾಲಾಗಿ ನಿಂತು ಏನನ್ನೋ ತದೇಕಚಿತ್ತದಿಂದ, ಗಂಭೀರದಿಂದ ನೋಡುತ್ತಿದ್ದರು. ಜತೆಗೆ ಏನೋ ಪಿಸುಪಿಸು ಮಾತನಾಡುತ್ತಿದ್ದರು. ಅವರು ಗುಟ್ಟುಗುಟ್ಟಾಗಿ ಏನು ಮಾತನಾಡುತ್ತಿದ್ದಾರೆ ಎಂದು ನಾನು ಸೂಕ್ಷ್ಮವಾಗಿ ಕೇಳಿಸಿಕೊಂಡೆ.

ಆಗ ಒಬ್ಬರು ’ಕಡವೆ, ಕಡವೆ!’ ಎಂದೂ ಇನ್ನೊಬ್ಬರು ’ಇಲ್ಲಾ ಕರಡಿ, ಕರಡಿ’ ಎಂದೂ ಮತ್ತೊಬ್ಬರು ’ಎರಡು ಕರಡಿಗಳು ಹತ್ತಿರ ಹತ್ತಿರ ಇವೆ’ ಎಂದೂ ಹೇಳುತ್ತಿದ್ದರು. ಆ ಕತ್ತಲೆಯಲ್ಲಿ ಅವರಿಗೆ ಯಾವ ಕರಡಿ, ಯಾವ ಕಡವೆಯಾದರೂ ಹೇಗೆ ಕಾಣಲು ಸಾಧ್ಯ ಎಂದು ನಾನು ಕುತೂಹಲದಿಂದ ಮಲಗಿದ್ದಲಿಂದಲೇ ಸ್ವಲ್ಪ ಮಗ್ಗಲು ಬದಲಿಸಿ ಕಳಗೆ ನೋಡಲಾರಂಭಿಸಿದೆ. ಕರಡಿ, ಕಡವೆ ಬಿಡಿ, ಕತ್ತಲೆ ಬಿಟ್ಟು ಬೇರೆ ಏನೂ ಕಾಣಿಸಲಿಲ್ಲ. ನಾನು ಅಲುಗಾಡಿದ ತಕ್ಷಣವೇ ಅವರು ’ಶ್... ಹೊರಟಿತು... ಹೊರಟಿತು...!’ ಅನ್ನುತ್ತಿದ್ದರು. ಮತ್ತೆ ಮಾತೇ ಇಲ್ಲ. ನಾನು ಅವರನ್ನು ನೋಡುತ್ತಲೇ ಇದ್ದೆ. ಅವರು ಸ್ತಬ್ಧವಾದಾಗ ನಾನು ಎದ್ದು ಕುಳಿತೆ. ಆಗ ದೇವು ಹನೇಹಳ್ಳಿಯವರು ’ಹೊಳ್ಳಾ... ಹೊಳ್ಳಾ...’ ಎಂದು ಕರೆಯುತ್ತಿದ್ದಾಗ ನಾನು ’ಓ’ ಅಂದಾಗ ಅವರು ’ಕೈಯೆತ್ತಿ... ಕಾಲೆತ್ತಿ’ ಎನ್ನುತ್ತಿದ್ದರು. ಅರೆ... ಇವರೇನು ಬೆಳಗ್ಗಿನ ವ್ಯಾಯಾಮ ಹೇಳಿಕೊಡುತ್ತಿದ್ದಾರೋ? ಎಂದು ನಾನು ಎದ್ದು ನಿಂತಾಗ ಅವರೆಲ್ಲರೂ ಒಮ್ಮೆಲೇ ’ಹೋ... ಹೋ...’ ಎಂದು ನಗಲಾರಾಂಭಿಸಿದರು.

ಅಷ್ಟು ಹೊತ್ತು ಅವರು ಕುತೂಹಲದಿಂದ ಯಾವ ಕರಡಿಯನ್ನು ನೋಡುತ್ತಿದ್ದರೋ ಅದು ನಾನೇ ಆಗಿದ್ದೆ. ನನ್ನನ್ನೇ ಕರಡಿಯೆಂದು ಭಾವಿಸಿ ಅವರು ಮೌನವಾಗಿ ವೀಕ್ಷಿಸುತ್ತಿದ್ದರು. ಕತ್ತಲೆಯಿದ್ದರೂ ಕಲ್ಲಿನ ಮೇಲೆ ನಾನು ಮಲಗಿ ಕಾಲಿನ ಮೇಲೆ ಕಾಲಿಟ್ಟು ಆಗಾಗ ಕಾಲನ್ನು ಸ್ವಲ್ಪ ಅಲುಗಾಡಿಸುತ್ತಿದ್ದುದು ಅವರಿಗೆ ಏನೋ ಅಸ್ಪಷ್ಟವಾಗಿ ಒಂದು ಜೀವಂತ ವಸ್ತುವಿನಂತೆ ಕಾಣಿಸುತ್ತಿತ್ತು. ಅಂದು ಚಾರಣದ ಕೊನೆಯವರೆಗೂ ನನ್ನನ್ನು ಎಲ್ಲರೂ ’ಕರಡಿ ಹೊಳ್ಳ’ ಎಂದು ತಮಾಷೆ ಮಾಡುತ್ತಿದ್ದರು. ಇಂದಿಗೂ ಅಮೇದಿಕಲ್ಲು ಎಂದಾಕ್ಷಣ ಮತ್ತೆ ಮತ್ತೆ ಅದೇ ’ಕರಡಿ’ ನೆನಪುಗಳು.

ಭಾನುವಾರ, ನವೆಂಬರ್ 20, 2011

ವಿರೂಪಾಕ್ಷ ದೇವಾಲಯ - ಬಿಳಗಿ


ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆಯುಳ್ಳ ಸ್ಥಳ ಬಿಳಗಿ. ಇಲ್ಲಿ ದೊರಕಿರುವ ೧೫೭೧ರ ಶಿಲಾಶಾಸನವೊಂದರ ಪ್ರಕಾರ ವಿರೂಪಾಕ್ಷ ದೇವಾಲಯವನ್ನು ೧೫ನೇ ಶತಮಾನದಲ್ಲಿ ನಿರ್ಮಿಸಲಾಗಿರಬಹುದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.


ವಿರಳವಾಗಿ ಕಾಣಬರುವ ಸ್ವಾಗತ ಮಂಟಪವನ್ನು ಇಲ್ಲಿ ಕಾಣಬಹುದು. ದೇವಾಲಯದ ಹೊರಗೂ ಮತ್ತು ಒಳಗೂ ವಿಶ್ರಮಿಸಲು ಅವಕಾಶವಿರುವಂತೆ ನಿರ್ಮಿಸಲಾಗಿರುವ ಸ್ವಾಗತ ಮಂಟಪದ ದ್ವಾರದಲ್ಲಿ ದ್ವಾರಪಾಲಕರನ್ನು ಕೆತ್ತಲಾಗಿದೆ. ಇಬ್ಬರೂ ದ್ವಾರಪಾಲಕರು ಭಿನ್ನವಾಗಿದ್ದಾರೆ. ಮುಖರೂಪ, ಪೋಷಾಕು, ನಿಂತಿರುವ ರೀತಿ ಎಲ್ಲವೂ ಭಿನ್ನವಾಗಿವೆ. ದ್ವಾರಪಾಲಕರು ಒಂದೇ ರೀತಿಯಲ್ಲಿರುವುದನ್ನು ನೋಡಿ ನೋಡಿ ಇಲ್ಲಿ ಭಿನ್ನವಾಗಿರುವುದನ್ನು ಗಮನಿಸಿದಾಗ ವಿಚಿತ್ರವೆನಿಸಿತು. ಇಬ್ಬರು ದ್ವಾರಪಾಲಕರೆಂದರೆ ಇಬ್ಬರು ಪ್ರತ್ಯೇಕ ವ್ಯಕ್ತಿಗಳು ತಾನೆ? ಮುಖದ ರೂಪದಲ್ಲಿ ಬದಲಾವಣೆ ಸಹಜವಿರಬಹುದು ಆದರೆ ಪೋಷಾಕು, ಆಯುಧ, ಇತ್ಯಾದಿಗಳಲ್ಲಿ ಭಿನ್ನತೆ?


ನಂದಿಮಂಟಪದ ನಾಲ್ಕೂ ಕಂಬಗಳಲ್ಲಿ ಹಲವಾರು ಕೆತ್ತನೆಗಳನ್ನು ಕಾಣಬಹುದು. ಶಂಖ ಊದುತ್ತಿರುವ ವ್ಯಕ್ತಿಯೊಬ್ಬನ ಕೆತ್ತನೆ ಸ್ವಾಗತ ಮಂಟಪ ದಾಟಿದ ಕೂಡಲೇ ಕಾಣಬರುತ್ತದೆ. ದೇವಾಲಯಕ್ಕೆ ಬರುವವರಿಗೆ ಶಂಖ ಊದುವ ಮೂಲಕ ಸ್ವಾಗತ ಕೋರುವ ಸಂಕೇತವಿರಬಹುದು.


ಶಿವಲಿಂಗಕ್ಕೆ ತನ್ನ ಕೆಚ್ಚೆಲುಗಳ ಮೂಲಕ ಹಾಲಿನ ಪ್ರೋಕ್ಷಣೆ ಮಾಡುತ್ತಿರುವ ಗೋವಿನ ಕೆತ್ತನೆ ಸೊಗಸಾಗಿದೆ. ಮಕರತೋರಣದಿಂದ ಅಲಂಕೃತಗೊಂಡ ಸುಂದರ ತರುಣಿಯೊಬ್ಬಳು ಕೇಶಾಲಂಕಾರ ಮಾಡಿಕೊಳ್ಳುತ್ತಿರುವ ಕೆತ್ತನೆಯೂ ಇದೆ. ಗಣೇಶನ ಕೆತ್ತನೆ ನಶಿಸಿದೆ.


ನಂದಿಯ ಮೂರ್ತಿ ನುಣುಪಾಗಿ ಸುಂದರವಾಗಿದೆ. ಕೆಲವೆಡೆ ನಂದಿಯು ರೌದ್ರಾವತಾರ ತಾಳಿದಂತೆ ಅಥವಾ ಕೋಪಿಷ್ಠನಂತೆ ಕಾಣಬರುತ್ತದೆ. ಆದರೆ ಇಲ್ಲಿ ಸೌಮ್ಯಮುಖಭಾವವನ್ನು ಹೊಂದಿರುವ ನಂದಿಯನ್ನು ಕಾಣಬಹುದು.


ಮುಖಮಂಟಪದ ಪ್ರವೇಶಿಸುವಲ್ಲಿ ಉದ್ದಂಡ ನಮಸ್ಕಾರ ಮಾಡುವ ಶೈಲಿಯಲ್ಲಿ ಮಹಿಳೆಯೊಬ್ಬಳ ಚಿತ್ರವನ್ನು ನೆಲದಲ್ಲಿ ಕಾಣಬಹುದು. ಕೆಳದಿ ಅರಸರ ಎಲ್ಲಾ ದೇವಾಲಯಗಳಲ್ಲಿ ಮತ್ತು ಕದಂಬರ ಕೆಲವು ದೇವಾಲಯಗಳಲ್ಲಿ ಈ ತರಹದ ಚಿತ್ರಗಳನ್ನು ಕಾಣಬಹುದು. ತಾವು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತವಾಗಲೆಂದು ಅರಸರು, ರಾಣಿಯರು, ದಾಸಿಯರು, ರಾಜನರ್ತಕಿಯರು ತಮ್ಮ ಚಿತ್ರವನ್ನು ಬಿಡಿಸುವಂತೆ ದೇವಾಲಯ ನಿರ್ಮಾಣಗೊಳ್ಳುವಾಗ ಕೋರಿಕೊಳ್ಳುತ್ತಾರೆ. ಇಲ್ಲಿ ’ದಾಸಿ’ ಎಂದು ಬರೆದಿರುವುದನ್ನು ಗಮನಿಸಬಹುದು. ದೇವಾಲಯದೊಳಗೆ ಬರುವವರು ಇವನ್ನು ತುಳಿದೇ ಬರಬೇಕಾಗುವುದರಿಂದ ಆ ರೀತಿಯಲ್ಲಿ ಪ್ರಾಯಶ್ಚಿತ್ತ ದೊರಕಿದಂತಾಗುವುದು ಎಂಬ ನಂಬಿಕೆ.


ಕಕ್ಷಾಸನ ಹೊಂದಿರುವ ಮುಖಮಂಟಪದಲ್ಲಿ ೮ ಕಂಬಗಳಿವೆ. ನಡುವೆ ಇರುವ ನಾಲ್ಕು ಕಂಬಗಳಲ್ಲಿ ಅಲ್ಪ ಸ್ವಲ್ಪ ಕೆತ್ತನೆಗಳನ್ನು ಕಾಣಬಹುದು. ಅಂಕಣದಲ್ಲಿ ತಾವರೆಯ ಕೆತ್ತನೆಯಿದೆ. ಅಂತರಾಳದ ದ್ವಾರಕ್ಕೂ ದ್ವಾರಪಾಲಕರಿದ್ದಾರೆ. ಇಲ್ಲೂ ಪೋಷಾಕಿನಲ್ಲಿ ವ್ಯತ್ಯಾಸ ಕಾಣಬಹುದು.


ಅಂತರಾಳದ ದ್ವಾರಕ್ಕೆ ಯಾವಾಗಲೂ ಬೀಗ ಹಾಕಿರುತ್ತದೆ. ಅಂತರಾಳದಲ್ಲಿ ಗಣೇಶನ ಮೂರ್ತಿಯೊಂದು ಕಂಡುಬಂದಿತು. ಇಲ್ಲಿಂದಲೇ ಪ್ರದಕ್ಷಿಣಾ ಪಥವೂ ಆರಂಭಗೊಳ್ಳುತ್ತದೆ. ಚತುರ್ಶಾಖಾ ದ್ವಾರವುಳ್ಳ ಗರ್ಭಗುಡಿಯಲ್ಲಿ ಎತ್ತರವಾದ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಗರ್ಭಗುಡಿಯ ಮೇಲೆ ಕದಂಬ ನಗರ ಶೈಲಿಯ ಸಣ್ಣ ಶಿಖರವಿದೆ.


ದೇವಾಲಯದ ಹೊರಗೋಡೆಯಲ್ಲಿ ಮೂರು ಪಾರ್ಶ್ವಗಳಲ್ಲಿ ಮೂರು ಸುಂದರ ಕೆತ್ತನೆಗಳನ್ನು ಜಾಲಂಧ್ರಗಳ ರೂಪದಲ್ಲಿ ಕೆತ್ತಲಾಗಿದೆ. ಒಂದನೇಯದರಲ್ಲಿ ನರ್ತಕಿಯೊಬ್ಬಳು ನೃತ್ಯ ಮಾಡುತ್ತಿದ್ದು ವಾದ್ಯಗಾರರಿಂದ ಸುತ್ತುವರಿದಿರುವಂತೆ ತೋರಿಸಲಾಗಿದೆ. ನರ್ತಕಿಯ ಮೇಲೆ ಗಣೇಶನನ್ನು ಕೆತ್ತಲಾಗಿದೆ. ಎರಡನೇ ಕೆತ್ತನೆಯಲ್ಲಿರುವವರು ಶಿವ ಪಾರ್ವತಿಯರಾಗಿರಬಹುದು ಎಂದು ನನ್ನ ಊಹೆ. ಮೂರನೆಯದು ಏನೆಂದು ನನಗೆ ತಿಳಿಯಲಿಲ್ಲ. ಪ್ರದಕ್ಷಿಣಾ ಪಥಕ್ಕೆ ಬೆಳಕು ಹರಿಯಲು ಸಹಕಾರಿಯಾಗುವಂತೆ ಈ ಕೆತ್ತನೆಗಳನ್ನು ಜಾಲಂಧ್ರಗಳ ರೂಪದಲ್ಲಿ ನಿರ್ಮಿಸಲಾಗಿದೆ.


ಆಗಿನ ಕಾಲದಲ್ಲಿ ಬಿಳಗಿಯನ್ನು ’ಶ್ವೇತಪುರ’ವೆಂದು ಕರೆಯಲಾಗುತ್ತಿತ್ತು. ಇಲ್ಲಿ ಕೋಟೆ ಮತ್ತು ಅರಮನೆಗಳು ಇದ್ದವು. ಈಗ ಅವುಗಳ ಕುರುಹು ಕೂಡಾ ಇಲ್ಲ. ಪ್ರಮುಖ ಜೈನ ಧಾರ್ಮಿಕ ಕೇಂದ್ರವಾಗಿದ್ದ ಬಿಳಗಿಯನ್ನು ಆಳಿದವರು ಜೈನರು. ಇಲ್ಲಿರುವ ಅಗಾಧ ಗಾತ್ರದ ಪಾರ್ಶ್ವನಾಥ ಬಸದಿಯನ್ನು ಇಸವಿ ೧೫೯೩ರಲ್ಲಿ ಜೈನ ದೊರೆ ’ನರಸಿಂಹ’ ಎಂಬವನು ನಿರ್ಮಿಸಿದನು. ಈತ ಬಿಳಗಿಯ ಸ್ಥಾಪಕನೂ ಹೌದು. ತದನಂತರ ಇಸವಿ ೧೬೫೦ರಲ್ಲಿ ಜೈನ ದೊರೆ ’ರಾಜಪ್ಪರಾಜ’ನ ಯುವರಾಜ ’ಘಾಟೆಒಡೆಯ’ ಎಂಬವನು ಈ ಬಸದಿಯನ್ನು ಈಗಿರುವ ಅಗಾಧ ಗಾತ್ರಕ್ಕೆ ವಿಸ್ತರಿಸಿ ಅಭಿವೃದ್ಧಿಪಡಿಸಿದನು.

ಬಿಳಗಿಯಲ್ಲೊಂದು ಪ್ರಾಚೀನ ಬಾವಿಯಿದೆ. ಇದನ್ನು ’ಗೋಲಬಾವಿ’ ಎಂದು ಕರೆಯುತ್ತಾರೆ. ಸಂಪೂರ್ಣವಾಗಿ ಮುಚ್ಚಿಹೋಗಿದ್ದ ಈ ಬಾವಿಯನ್ನು ಊರವರ ಸಹಕಾರದಿಂದ ಪ್ರಾಚ್ಯ ವಸ್ತು ಇಲಾಖೆ ಮತ್ತೆ ಅಗೆದು ತೆಗೆದು ತನ್ನ ಮೂಲ ರೂಪಕ್ಕೆ ಬರುವಂತೆ ಮಾಡಿದೆ. ಈಗ ಈ ಗೋಲಬಾವಿ ಬಿಳಗಿಯ ಪ್ರಮುಖ ಆಕರ್ಷಣೆ.

ಅಂದು - ಇಂದು


ಮೇಲಿರುವುದು ವಿರೂಪಾಕ್ಷ ದೇವಾಲಯದ ೧೮೯೦ರಲ್ಲಿ ತೆಗೆದ ಚಿತ್ರ. ದೇವಾಲಯದ ಪಾರ್ಶ್ವಗಳಲ್ಲಿ ಜಾಲಂಧ್ರಗಳ ರೂಪದಲ್ಲಿ ಈಗಿರುವ ಮೂರಕ್ಕಿಂತ ಹೆಚ್ಚಿನ ಕಿಂಡಿಗಳಿದ್ದವು ಎಂಬುವುದನ್ನು ನಿಖರವಾಗಿ ಹೇಳಬಹುದು. ಚಿತ್ರದಲ್ಲಿ ಕಾಣುವ ಒಂದೇ ಪಾರ್ಶ್ವದಲ್ಲಿ ನಾಲ್ಕು ಕಿಂಡಿಗಳನ್ನು ಕಾಣಬಹುದು. ಈಗ ಉಳಿದಿರುವುದು ಒಂದು ಮಾತ್ರ. ಚಿತ್ರದಲ್ಲಿ ಕಾಣುವ ಮುಖಮಂಟಪಕ್ಕೆ ಇದ್ದ ಹೆಚ್ಚುವರಿ ಪ್ರವೇಶವನ್ನು ಈಗ ಮುಚ್ಚಲಾಗಿದೆ.


ಕಪ್ಪು ಬಿಳುಪಿನಲ್ಲಿರುವುದು ಪಾರ್ಶ್ವನಾಥ ಬಸದಿಯ ೧೮೮೫ರ ಚಿತ್ರ. ವರ್ಣ ಚಿತ್ರ ೨೦೧೧ರದ್ದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ