ಭಾನುವಾರ, ಡಿಸೆಂಬರ್ 11, 2011

ಕುಂಭಕಲ್ಲು


ಜನವರಿ ೨೦೦೪ರ ಅದೊಂದು ದಿನ ದಿನೇಶ್ ಹೊಳ್ಳ ಕರೆ ಮಾಡಿ ಕುಂಭಕಲ್ಲು ನೋಡಿ ಬರೋಣವೇ ಎಂದಾಗ ಒಪ್ಪಿಕೊಂಡೆ. ಯಮಾಹದಲ್ಲಿ ಉಡುಪಿಯಿಂದ ಹೊರಟು ಬೆಳ್ತಂಗಡಿ ತಲುಪಿದಾಗ ಹೊಳ್ಳ ಅಲ್ಲಿ ಅದಾಗಲೇ ಬಂದುಬಿಟ್ಟಿದ್ದರು. ಅಲ್ಲಿಂದ ಮುಂದೆ ಚಾರ್ಮಾಡಿಗೆ ತೆರಳಿದೆವು. ಇಲ್ಲಿಯ ಫೇಮಸ್ (?) ಗೈಡ್ ಇಸುಬು ಸ್ವಲ್ಪ ಬ್ಯುಸಿ ಇದ್ದಂತೆ ನಾಟಕವಾಡುತ್ತಿದ್ದ. ಸ್ವಲ್ಪ ಹೆಚ್ಚು ಹಣ ಕೊಡುತ್ತೇನೆಂದು ಹೊಳ್ಳರು ಹೇಳಿದಾಗ ಆಸಾಮಿ ನಮ್ಮೊಂದಿಗೆ ಬರಲು ಕೂಡಲೇ ರೆಡಿಯಾದ! ಆದರೆ ೩ ಮಂದಿ ನನ್ನ ಯಮಾಹದಲ್ಲಿ ಹೇಗೆ ತೆರಳುವುದು? ಮೊದಲು ಇಸುಬುವನ್ನು ಚಾರಣ ಆರಂಭವಾಗುವೆಡೆ (ಚಾರ್ಮಾಡಿಯಿಂದ ೧೭ ಕಿ.ಮಿ) ಇಳಿಸಿ ಹೊಳ್ಳರನ್ನು ಪಿಕ್ ಮಾಡಲು ಚಾರ್ಮಾಡಿಗೆ ಹಿಂತಿರುಗಿ ಬರುವಾಗ, ದಿನೇಶ್ ಹೊಳ್ಳ ಅದಾಗಲೇ ೭ಕಿ.ಮಿ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಯಾಗಿತ್ತು. ಅಸಾಧಾರಣ ಮನುಷ್ಯ!


ಚಾರಣ ಆರಂಭವಾಗುವಲ್ಲಿರುವ ಮನೆಯಲ್ಲಿ ಬೈಕನ್ನಿರಿಸಿ ಕುಂಭಕಲ್ಲಿನೆಡೆ ನಡೆಯಲಾರಂಭಿಸಿದೆವು. ಸುಮಾರು ಒಂದು ತಾಸು ಎಸ್ಟೇಟಿನ ಜೀಪ್ ರಸ್ತೆಯಲ್ಲೇ ನಡೆಯಬೇಕು. ನನಗಂತೂ ಇದು ತುಂಬಾ ಕಷ್ಟ. ಸಿಕ್ಕಾಪಟ್ಟೆ ಏರು. ಜೀಪ್ ದಾರಿ ಬಿಟ್ಟು ಕಾಡಿಗೆ ಎಂಟ್ರಿ ಮಾಡುವ ಸ್ಥಳ ಬಂದಾಗ ನಾನಂತೂ ಸುಸ್ತು. ಹೊಳ್ಳ ಮತ್ತು ಇಸುಬುರಿಗೆ ನಾನು ಇನ್ನು ಮುಂದಕ್ಕೆ ಬರುವುದಿಲ್ಲವೆಂದು ತಿಳಿಸಿ, ಬೀಸುತ್ತಿದ್ದ ತಂಪು ಗಾಳಿಗೆ ಮೈಯೊಡ್ಡಿ, ನೆರಳಲ್ಲಿ ಎರಡು ಸಣ್ಣ ಬಂಡೆಗಳ ನಡುವೆ ಮಲಗಿಬಿಟ್ಟೆ. ಸರಿಯಾಗಿ ಒಂದು ತಾಸಿನ ನಂತರ ಎಚ್ಚರವಾಯಿತು. ನಂತರ ಟೈಮ್ ಪಾಸ್ ಮಾಡುವುದು ಕಷ್ಟವಾದಾಗ, ಹಾಗೇ ಕೆಳಗಿಳಿದು ಬೈಕ್ ಇಟ್ಟಲ್ಲಿ ಬಂದು ಅವರಿಬ್ಬರಿಗಾಗಿ ಕಾದುಕುಳಿತೆ.


ಈ ಪೈಲಟ್ ಟ್ರೆಕ್‍ನ ಸುಮಾರು ಎರಡು ವರ್ಷದ ಬಳಿಕ ಡಿಸೆಂಬರ್ ೨೫, ೨೦೦೫ರಂದು ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮವನ್ನು ದಿನೇಶ್ ಹೊಳ್ಳರು ಇದೇ ಕುಂಭಕಲ್ಲಿಗೆ ಆಯೋಜಿಸಿದರು. ಮತ್ತದೇ ದಾರಿ. ಹಿಂದಿನ ಬಾರಿ ನಿದ್ರೆ ಮಾಡಿದ್ದ ಸ್ಥಳ ತಲುಪಿದಾಗ ಮತ್ತೆ ಸುಸ್ತು. ಮತ್ತೆ ಇಲ್ಲೇ ಮಲಗೋಣವೇ ಎಂಬ ವಿಚಾರ ಬಂದರೂ ಹೇಗೋ ಮಾಡಿ ಅಲ್ಲಿಂದ ಮುನ್ನಡೆದೆ. ಕಾಡಿನ ನಡುವೆ ಕಾಲುದಾರಿ. ಮುಂದೆ ಒಂದು ಹಳ್ಳ. ಇಲ್ಲಿ ದಣಿವಾರಿಸಿದ ನಂತರ ದಾರಿಯೇ ಇಲ್ಲದಲ್ಲಿ ಎಲ್ಲೋ ಮೇಲೇರಬೇಕು. ಸ್ವಲ್ಪ ಸಮಯದ ಬಳಿಕ ಕಾಡು ಅಂತ್ಯ ಕಂಡು ಓಪನ್ ಜಾಗ. ಆದರೂ ಕುಂಭಕಲ್ಲಿನ ತುದಿ ಮೆಟ್ಟಬೇಕಾದರೆ ಇನ್ನೆರಡು ಸಣ್ಣ ಬೆಟ್ಟಗಳನ್ನು ದಾಟಬೇಕಾಗಿತ್ತು. ಅದಾಗಲೇ ನಮ್ಮ ಗುಂಪಿನ ಒಂದಿಬ್ಬರು ಕುಂಭಕಲ್ಲಿನ ತುದಿ ತಲುಪಿ ಅಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು!


ಆಳೆತ್ತರ ಬೆಳೆದ ಹುಲ್ಲುಗಳ ನಡುವೆ ದಾರಿ ಮಾಡಿಕೊಂಡು, ಭಾರವೆನಿಸತೊಡಗಿದ್ದ ಜೀವವನ್ನು ಎಳೆಯುತ್ತಾ ಹೇಗೋ ಮುನ್ನಡೆದೆ. ಬೆಟ್ಟವನ್ನೇರುವುದು ನನಗೆಂದು ಇಷ್ಟ ಇಲ್ಲ. ಆದರೆ ಬೆಟ್ಟದ ತುದಿಯಿಂದ ಕಾಣುವ ದೃಶ್ಯಕ್ಕಾಗಿ ಮನಸು ಹಾತೊರೆಯುತ್ತಿರುತ್ತದೆ. ಆದ್ದರಿಂದ ಮನಸ್ಸಿನ ಸುಖಕ್ಕಾಗಿ ದೇಹವನ್ನು ದಂಡಿಸುವುದು. ಯಾವಾಗಲೂ ಜೋಕ್ಸ್ ಮಾಡುವ ರಮೇಶ್ ಕಾಮತ್ ಇಂದು ಮಂಕಾಗಿದ್ದರು. ಇನ್ನೇನು ಕುಂಭಕಲ್ಲಿನ ತುದಿ ಸ್ವಲ್ಪವೇ ದೂರದಲ್ಲಿರುವಾಗ ’ಅಬ್ಬಾ, ಏನೋ ಆಗ್ತಿದೆ, ಎದೆ ನೋಯುತ್ತಿದೆ, ಡಾಕ್ಟ್ರೇ (ಚಾರಣಿಗ ವಿಜೇಶ್) ಇಲ್ಲಿ ಬನ್ನಿ, ಏನೋ ಸರಿಯಿಲ್ಲ’ ಎನ್ನುತ್ತಾ ಅಲ್ಲಿದ್ದ ಬಂಡೆಗೆ ಒರಗಿ ಕೂತುಬಿಟ್ಟರು. ವಿಜೇಶ್ ಏನೋ ಮಾಡಿ ಒಂದೆರಡು ಮಾತ್ರೆ ನೀಡಿದ ಬಳಿಕ ಕಾಮತರಿಗೆ ಸ್ವಲ್ಪ ನಿರಾಳವೆನಿಸಿತು.


ಚಾರ್ಮಾಡಿ ಶ್ರೇಣಿಯ ಸೂಪರ್ ಸ್ಟಾರುಗಳಾದ ಎತ್ತಿನಭುಜ, ಅಮೇದಿಕಲ್ಲು ಮತ್ತು ಮಿಂಚುಕಲ್ಲುಗಳ ಮುಂದೆ ಕುಂಭಕಲ್ಲು ಕುಬ್ಜನಾದರೂ ಇವೆಲ್ಲದರ ನಡುವೆ ಇರುವುದರಿಂದ ಸುತ್ತಲೂ ಅಮೋಘ ದೃಶ್ಯಾವಳಿ. ಆದರೆ ಕುಂಭಕಲ್ಲಿನ ಕೆಳಗೆನೇ ಎಸ್ಟೇಟುಗಳ ಅವ್ಯಾಹತ ಹಾವಳಿ. ಕಾಡು ಮರೆಯಾಗಿದೆ. ಮರೆಯಾಗುತ್ತಿದೆ.

5 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಲೇಖನ ಹಾಗೂ ಚಿತ್ರಗಳು.

ಆದರೆ ಕೊನೆಯ ವಾಕ್ಯಗಳು ಬೇಸರ ಮೂಡಿಸುತ್ತದೆ. ಇಂತಹ ಒಳ್ಳೆಯ ಜಾಗ ಹಾಳಾಗದಿದ್ದರೆ ಸಾಕು.

Arun ಹೇಳಿದರು...

ಅಂತು ಇಂತೂ ಗುರಿ ತಲುಪಿದಿರಿ .. ಲೇಖನ ಚೆನ್ನಾಗಿದೆ ..

Team G Square ಹೇಳಿದರು...

Man's greed is destroying valuable resource of the Nature, without even giving a thinking about it . There was recent article on the Forest wealth being looted in north Karnataka to be to the tune of 20,000 Cr/yr . Sad but someday for sure we will never get a chance to regenerate what we have lost .

Ashok Uchangi ಹೇಳಿದರು...

pics and text are nice...

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಅರುಣ್, ಧೀರಜ್ ಅಮೃತಾ, ಅಶೋಕ್
ಧನ್ಯವಾದ.