ಭಾನುವಾರ, ಜುಲೈ 03, 2011

ಧೊಂಗರವಾಡಿ ಜಲಧಾರೆಗಳತ್ತ...


ವಿವೇಕ್, ಡಾ.ಗುತ್ತಲ್, ಮುರಳಿ ಕಿಣಿ ಮತ್ತು ನಾನು ಹೊರಟದ್ದು ಒಂದೇ ದಿನದಲ್ಲಿ ೪ ಜಲಧಾರೆಗಳನ್ನು ನೋಡಿ ಬರೋಣವೆಂದು. ಆದರೆ ಒಂದೆಡೆ ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ೮ ಕಿ.ಮಿ ಪ್ರಯಾಣಿಸಲು ನಮಗೆ ಸುಮಾರು ೫೦ ನಿಮಿಷಗಳು ತಗುಲಿದಾಗ ವಿಶ್ರಮಿಸಲು ನಿಂತೆವು. ಅಲ್ಲೇ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಯೊಂದು ನಿಂತಿತ್ತು. ಇನ್ನು ಮುಂದೆ ೨೫ ಕಿ.ಮಿ.ವರೆಗೆ ರಸ್ತೆ ಹೀಗೇ ಇದೆ ಎಂದು ಆ ಲಾರಿಯ ಡ್ರೈವರ್ ತಿಳಿಸಿದ ಕೂಡಲೇ ಯು-ಟರ್ನ್ ಮಾಡುವ ನಿರ್ಧಾರ ಮಾಡಿಬಿಟ್ಟೆವು. ಮುಂದಿನ ದಾರಿ ಇನ್ನಷ್ಟು ಕುಲಗೆಟ್ಟು ಹೋಗಿದೆ ಎಂದು ಅರಿವಾಗುತ್ತಲೇ ಆ ೪ ಜಲಧಾರೆಗಳಿಗೆ ಭೇಟಿ ಸದ್ಯಕ್ಕೆ ಮುಂದೂಡೋಣವೆಂದು ನಿರ್ಧರಿಸಿ ’ಪ್ಲ್ಯಾನ್-ಬಿ’ ಬಗ್ಗೆ ಸಮಾಲೋಚಿಸಿದೆವು. ನಂತರ ಧೊಂಗರವಾಡಿ ಜಲಧಾರೆಗಳಿಗೆ ತೆರಳುವ ನಿರ್ಧಾರ ಮಾಡಲಾಯಿತು. ನಾವು ನಾಲ್ವರಲ್ಲಿ ವಿವೇಕ್ ಮಾತ್ರ ಧೊಂಗರವಾಡಿ ಜಲಧಾರೆಗಳನ್ನು ನೋಡಿದ್ದರು.


೯೦ ನಿಮಿಷದ ಚಾರಣದ ಬಳಿಕ ಜಲಧಾರೆಗಳನ್ನು ನಿರ್ಮಿಸುವ ಹಳ್ಳ ತಲುಪಿದೆವು. ಕಣಿವೆಯ ಆಳ ಆರಂಭವಾಗುವಲ್ಲೇ ಧೊಂಗರವಾಡಿ ಹಳ್ಳ ಸುಮಾರು ೬೦ ಅಡಿ ಆಳಕ್ಕೆ ನೆಗೆದು ಮೊದಲ ಜಲಧಾರೆಯನ್ನು ನಿರ್ಮಿಸುತ್ತದೆ. ಆದರೆ ಅಲ್ಲಿ ಕೆಳಗಿಳಿಯಲು ಅಸಾಧ್ಯ. ಸ್ವಲ್ಪ ಮುಂದೆ ಇನ್ನೊಂದು ಹಳ್ಳ ಕಣಿವೆಯಾಳಕ್ಕೆ ಇಳಿಯುತ್ತದೆ. ಈ ಹಳ್ಳಗುಂಟ ಕೆಳಗಿಳಿದು ಅದು ಧೊಂಗರವಾಡಿ ಹಳ್ಳವನ್ನು ಸೇರುವ ಸ್ಥಳ ತಲುಪಿ ನಂತರ ಧೊಂಗರವಾಡಿ ಹಳ್ಳಗುಂಟ ಮೇಲಕ್ಕೇರುವ ಪ್ಲ್ಯಾನ್ ಹಾಕಿ ಕೆಳಗಿಳಿಯಲು ಆರಂಭಿಸಿದೆವು.


ಕಣಿವೆಯ ಆಳಕ್ಕೆ ಇಳಿಯುವಾಗ ಬಸವಳಿದುಬಿಟ್ಟಿದ್ದೆ. ಈ ಇನ್ನೊಂದು ತೊರೆಗುಂಟ ಕೆಳಗಿಳಿಯುವುದು ಬಹಳ ಕಷ್ಟಕರವಾಗಿತ್ತು. ಜಲಧಾರೆ ನಿರ್ಮಿಸುವ ತೊರೆ ಹರಿದು ಬಂದು ಈ ಇನ್ನೊಂದು ತೊರೆಯನ್ನು ಸೇರುವ ಜಾಗ ಸಿಗುವವರೆಗೂ ಇಳಿಯುತ್ತಲೇ ಇರಬೇಕು. ಅಬ್ಬಾ! ಎಷ್ಟು ಇಳಿದರೂ ಆ ಸ್ಥಳ ಬರುತ್ತಿರಲಿಲ್ಲ. ಯಾರೂ ತೆರಳದ ಜಾಗವಾಗಿದ್ದರಿಂದ ಅಲ್ಲಿ ದಾರಿಯೇ ಇರಲಿಲ್ಲ. ಮುರಳಿ ದಾರಿಮಾಡಿಕೊಂಡು ಮುಂದೆ ಸಾಗುತ್ತಿದ್ದರು. ಅವರ ಹಿಂದೆ ವಿವೇಕ್ ಮತ್ತು ಡಾಕ್ಟರ್ ಗುತ್ತಲ್. ನಾನು ಎಂದಿನಂತೆ ಕೊನೆಗೆ.


ಕಾಡು ಮಾತ್ರ ಅದ್ಭುತವಾಗಿತ್ತು. ನೀರಿನ ಹರಿವಿನ ಶಬ್ದ ಬಿಟ್ಟರೆ ಎಲ್ಲಾ ಸ್ತಬ್ಧ. ಕಡಿದಾದ ದಾರಿ, ಜಾರುವ ಸಡಿಲ ಮಣ್ಣು, ಜಾರುವ ಕಲ್ಲು ಬಂಡೆಗಳು ಮತ್ತು ನೀರಿನ ರಭಸದ ಹರಿವು ಎಲ್ಲವೂ ಚಾರಣದ ಈ ಕೊನೆಯ ಭಾಗವನ್ನು ಬಹಳ ಕಷ್ಟಕರವನ್ನಾಗಿ ಮಾಡುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದವು.


ಕಣಿವೆಯಲ್ಲಿಳಿಯಲು ಆರಂಭಿಸಿದ ಸುಮಾರು ೭೫ ನಿಮಿಷಗಳ ಬಳಿಕ ಎರಡೂ ತೊರೆಗಳು ಸಂಧಿಸುವ ಸ್ಥಳ ಸಿಕ್ಕಿತು! ಕೂಡಲೇ ಧೊಂಗರವಾಡಿ ತೊರೆಗುಂಟ ಮೇಲೇರತೊಡಗಿದೆವು. ಎರಡೇ ನಿಮಿಷ. ಧೊಂಗರವಾಡಿ ೨ನೇ ಜಲಧಾರೆ ನಮ್ಮ ಕಣ್ಮುಂದೆ. ವ್ಹಾ! ಅದೇನು ಚಂದ. ದಟ್ಟ ಕಾಡಿನ ನಡುವೆ ಸ್ವಲ್ಪ ಖುಲ್ಲಾ ಜಾಗದಲ್ಲಿ ತಣ್ಣನೆ ಧುಮುಕುತ್ತಿರುವ ಈ ಜಲಧಾರೆ. ಜಲಧಾರೆಯ ನೆತ್ತಿಯ ಮೇಲೆ ಮಾತ್ರ ಸೂರ್ಯನ ಕಿರಣಗಳು ಬೀಳುತ್ತವೆ. ಬೇರೆಲ್ಲೂ ಸೂರ್ಯನ ಕಿರಣಗಳಿಗೆ ಒಳ ಪ್ರವೇಶಿಸಲು ಕಾಡಿನ ಅನುಮತಿಯೇ ಇಲ್ಲ. ಅಂತಹ ಸುಂದರ ಮೌನ ಅದ್ಭುತ ಸ್ಥಳ. ಜಲಧಾರೆಯ ಮುಂದೆನೇ ಸಣ್ಣ ಕೊಳ. ಅಲ್ಲಿ ನೀರಲ್ಲಿ ಕುಳಿತೇ ಸ್ನಾನ ಮಾಡುತ್ತಾ ನಮ್ಮ ಹರಟೆ.


ಹಾಗೇ ತೊರೆಗುಂಟ ಮೇಲಕ್ಕೇರಿದರೆ ಒಂದನೇ ಜಲಧಾರೆಯನ್ನು ತಲುಪಬಹುದು. ಮುಂದಕ್ಕೆ ತೆರಳಲು ಸರಿಯಾದ ದಾರಿ ಸಿಗದ ಕಾರಣ ನಾವು ಆ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ.


ಕಣಿವೆಯ ಮೇಲಿನಿಂದಲೇ ಧೊಂಗರವಾಡಿ ಒಂದನೇ ಜಲಧಾರೆಯನ್ನು ಸನಿಹದಿಂದ ಕಾಣಬಹುದು. ಇಲ್ಲೆಲ್ಲಾದರು ಕೆಳಗಿಳಿಯಲು ಆಗಬಹುದೇ ಎಂದು ಪ್ರಯತ್ನಿಸಿ ಸೋತೆವು. ೪ ಜಲಧಾರೆ ನೋಡಲು ಹೊರಟವರು ಮತ್ತೆಲ್ಲೋ ಹೋಗಿ ೨ ಜಲಧಾರೆಗಳನ್ನು ನೋಡಿ ಹಿಂತಿರುಗಿದೆವು.

5 ಕಾಮೆಂಟ್‌ಗಳು:

Team G Square ಹೇಳಿದರು...

Thumba chanagide !

Srik ಹೇಳಿದರು...

Nijavaada Alemari jeevana! Heegeye saagali nimma payaNa!

Srik

ಬಸವ ರಾಜು ಎಲ್. ಹೇಳಿದರು...

gud fotos

prasca ಹೇಳಿದರು...

ನಿಮ್ಮ ಬಗ್ಗೆ ಹೊಟ್ಟೆಕಿಚ್ಚಿದೆ ಸಾರ್. :(

ರಾಜೇಶ್ ನಾಯ್ಕ ಹೇಳಿದರು...

ಗೆಳೆಯರಿಗೆಲ್ಲರಿಗೂ ಧನ್ಯವಾದಗಳು.