ಸೋಮವಾರ, ಜುಲೈ 26, 2010

ಸಣ್ಣ ಸುಂದರ ಜಲಧಾರೆ

ನಿನ್ನೆ ಆದಿತ್ಯವಾರ ಸಣ್ಣದೊಂದು ಜಲಧಾರೆಗೆ ಹೋಗಿಬಂದೆ. ಜಲಧಾರೆ ಸಣ್ಣದಾದರೂ ಮನಸ್ಸಿಗೆ ಬಹಳ ಮುದ ನೀಡಿತು. ಅಡಿಕೆ, ತೆಂಗು ಮತ್ತು ಬಾಳೆತೋಟಗಳ ನಟ್ಟನಡುವೆ ಇರುವ ಈ ಜಲಧಾರೆ ನಾಲ್ಕು ಕವಲುಗಳಲ್ಲಿ ೩೦ ಅಡಿ ಎತ್ತರದಿಂದ ಬೀಳುತ್ತದೆ.


ಹತ್ತಿರದ ಪಟ್ಟಣದ ಜನರನ್ನು ಬಿಟ್ಟರೆ ಬೇರೆ ಯಾರೂ ಬರುವುದಿಲ್ಲ. ಈ ಜನರೇ ಅಲ್ಪ ಸ್ವಲ್ಪ ಗಲೀಜು ಮಾಡಿದ್ದಾರೆ ಎನ್ನಬಹುದು.

ಪಟ್ಟಣವೊಂದರ ಅತಿ ಸಮೀಪದಲ್ಲಿದ್ದರೂ ಇನ್ನೂ ಅಜ್ಞಾತವಾಗಿ ಉಳಿದಿರುವುದೇ ಈ ಜಲಧಾರೆಯ ಅದ್ಭುತ ಸಾಧನೆ. ಅದು ಹಾಗೇ ಅಜ್ಞಾತವಾಗಿಯೇ ಇರಲಿ ಎಂದು ಆಶಿಸುತ್ತೇನೆ.

ಶನಿವಾರ, ಜುಲೈ 03, 2010

ಚನ್ನಕೇಶವ ದೇವಾಲಯ - ಹೊನ್ನಾವರ


ಸುಂದರ ಪರಿಸರದಲ್ಲಿ ಹೊನ್ನಾವರದ ಚೆನ್ನಕೇಶವ ನೆಲೆಸಿದ್ದಾನದರೂ ಆತನ ಮನೆ ಮಾತ್ರ ಪಾಳು ಬೀಳುತ್ತಿದೆ. ಅದಾಗಲೇ ಗೋಪುರ ಕುಸಿದಿದ್ದು ಗಿಡಗಂಟಿಗಳು ನಿಧಾನಕ್ಕೆ ಅಲ್ಲಲ್ಲಿ ಬೆಳೆದು ಗುಡಿಯನ್ನು ಮರೆಮಾಚುವ ಕಾಯಕದಲ್ಲಿ ತೊಡಗಿಕೊಂಡಿವೆ.


ಸುಂದರ ಮುಖಮಂಟಪವುಳ್ಳ ದೇವಾಲಯದಲ್ಲಿರುವುದು ನವರಂಗ ಮತ್ತು ಗರ್ಭಗುಡಿ ಮಾತ್ರ. ದೇವಾಲಯದ ದ್ವಾರ ೪ ತೋಳಿನದ್ದಾಗಿದ್ದು ಮೇಲ್ಗಡೆ ಗಜಲಕ್ಷ್ಮಿಯ ಕೆತ್ತನೆಯಿದೆ. ಹೆಚ್ಚಿನೆಡೆ ಗಜಲಕ್ಷ್ಮಿಯ ಇಕ್ಕೆಲಗಳಲ್ಲಿರುವ ಆನೆಗಳು ತಮ್ಮ ಸೊಂಡಿಲನ್ನು ಮೇಲಕ್ಕೆತ್ತಿ ನಿಂತಿರುವ ಕೆತ್ತನೆಯಿರುತ್ತದೆ. ಆದರೆ ಇಲ್ಲಿ ಎರಡೂ ಆನೆಗಳು ಲಕ್ಷ್ಮಿಯ ಪಾದಕ್ಕೆ ನಮಸ್ಕರಿಸುವ ಕೆತ್ತನೆಯಿದೆ.


ಗರ್ಭಗುಡಿಯ ದ್ವಾರವೂ ನಾಲ್ಕು ತೋಳಿನದ್ದಾಗಿದ್ದು ದ್ವಾರಪಾಲಕರನ್ನು ಹೊಂದಿದೆ. ಚನ್ನಕೇಶವನ ವಿಗ್ರಹ ಬಲೂ ಸುಂದರವಾಗಿದ್ದು ಸಣ್ಣ ಪೀಠದ ಮೇಲೆ ಪ್ರತಿಷ್ಥಾಪನೆಗೊಂಡಿದೆ. ಪೀಠವನ್ನೂ ಸೇರಿಸಿದರೆ ಚನ್ನಕೇಶವನ ಎತ್ತರ ಸುಮಾರು ೭ ಅಡಿ ಆಗಬಹುದು. ಚನ್ನಕೇಶವನ ಕಾಲ ಕೆಳಗೆ ಪೀಠದ ಮುಂಭಾಗದಲ್ಲಿ ಹನುಮಂತನ ಸಣ್ಣ ಮೂರ್ತಿಯಿದೆ. ನವರಂಗದಲ್ಲಿರುವ ನಾಲ್ಕೂ ಕಂಬಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಗಳಿವೆ. ಒಂದೆಡೆ ಅಷ್ಟದಿಕ್ಪಾಲಕರನ್ನೂ ಚೌಕಾಕಾರದ ಪರಿಧಿಯೊಳಗಡೆ ಕೆತ್ತಲಾಗಿದೆ.


ಊರವರಿಗೆ ದೇವಾಲಯದ ಬಗ್ಗೆ ಅಷ್ಟು ಕಾಳಜಿಯಿಲ್ಲ ಎಂಬುವುದೇ ವಿಷಾದ. ಮುಖಮಂಟಪದ ಎಡಕ್ಕಿರುವ ಭಿತ್ತಿಚಿತ್ರಗಳಿಗೆ ತಾಗಿಯೇ ಸಾರಾಯಿ ಬಾಟ್ಲಿಯೊಂದು ಕೂತಿತ್ತು. ಕಣ್ಣ ಮುಂದೆನೇ ವಿರಾಜಮಾನವಾಗಿ ಕೂತಿದ್ದರೂ ಈ ಸಾರಾಯಿ ಬಾಟಲಿ ಒಂದೆರಡು ಚಿತ್ರಗಳನ್ನು ತೆಗೆದ ಬಳಿಕವೇ ನನ್ನ ಗಮನಕ್ಕೆ ಬಂತು! ಹೊರಗೋಡೆಗಳ ಮತ್ತು ಮಾಡಿನ ಮೇಲ್ಮೈಗಳಲ್ಲಿ ಗಿಡಗಂಟಿಗಳು ಅಲ್ಲಲ್ಲಿ ಬೆಳೆದುಕೊಂಡಿವೆ.


ಯಾವ ದಿಕ್ಕಿನಿಂದ ನೋಡಿದರೂ ದೇವಾಲಯ ಅಂಕುಡೊಂಕಾಗಿ ಕಾಣುತ್ತದೆ. ಛಾವಣಿಯಂತೂ ವಿಕಾರವಾಗಿ ಎಲ್ಲಾ ಬದಿಗಳಲ್ಲೂ ವಾಲಿಕೊಂಡಂತೆ ಕಾಣುತ್ತದೆ. ದೇವಾಲಯಕ್ಕೆ ತಾಗಿಕೊಂಡೇ ಮಣ್ಣಿನ ರಸ್ತೆಯೊಂದು ಹಾದುಹೋಗಿರುವುದರಿಂದ ಹಾರುವ ಧೂಳು ಅಳಿದುಳಿದ ಕೆತ್ತನೆಗಳ ಮೇಲೆ ಕುಳಿತು ಅವುಗಳು ತಮ್ಮ ಹೊಳಪು ಮತ್ತು ನೈಜತೆ ಕಳೆದುಕೊಳ್ಳುತ್ತಿವೆ.


ಮುಖಮಂಟಪದ ಮೇಲೆ ಇಟ್ಟಿಗೆಗಳನ್ನು ಸಾಲಾಗಿ ಇಟ್ಟು ಏನನ್ನೋ ಕಟ್ಟಲು ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದಂತಿದೆ. ಈ ಏಕಕೂಟ ದೇವಾಲಯದ ಗೋಪುರವಂತೂ ಧರಾಶಾಹಿಯಾಗಿದೆ. ಗೋಪುರದ ಕಲ್ಲುಗಳು ನಿಧಾನವಾಗಿ ಕಣ್ಮರೆಯಾಗಿ ಯಾರ್ಯಾರದೋ ಮನೆಗಳನ್ನು ಸೇರುತ್ತಿವೆ. ಇವುಗಳಲ್ಲಿ ಕೆತ್ತನೆಯ ಅಂಶವಿರುವ ಒಂದೆರಡು ಕಲ್ಲುಗಳು ಗೋಪುರದಿಂದ ಕಳಚಿಬಿದ್ದು ಸ್ವಲ್ಪ ದೂರ ಉರುಳಿ ಹೋಗಿ ಅಲ್ಲೇ ಅನಾಥವಾಗಿ ಬಿದ್ದುಕೊಂಡಿವೆ.


ಇಷ್ಟೆಲ್ಲಾ ಮೈನಸ್ ಪಾಯಿಂಟ್-ಗಳಿದ್ದರೂ ದೇವಾಲಯದ ಹೊರಗೋಡೆಗಳಲ್ಲಿ ಸುಂದರವಾಗಿ ಕೆತ್ತಲಾಗಿರುವ ಭಿತ್ತಿಚಿತ್ರಗಳು ಒಂದಕ್ಕಿಂತ ಒಂದು ಅಂದ. ದೇವಾಲಯದ ಪರಿಸ್ಥಿತಿ ನೋಡಿ ಮರುಗಿದ ಮನಸುಗಳಿಗೆ ಈ ಕೆತ್ತನೆಗಳು ಸ್ವಲ್ಪವಾದರೂ ಮುದ ನೀಡುತ್ತವೆ ಎನ್ನಬಹುದು. ಭಿತ್ತಿಚಿತ್ರಗಳು ಈ ಮಟ್ಟಕ್ಕೆ ಇನ್ನೂ ಉಳಿದುಕೊಂಡಿರುವುದು ವಿಸ್ಮಯ. ಇಲ್ಲಿ ಕೂಡಾ ಈ ಕೆತ್ತನೆಗಳ ಕೈ ಕಾಲು ಮುಖ ಹೀಗೆ ಎಲ್ಲೆಂದರಲ್ಲಿ ಜಜ್ಜಿ ಹಾಕಲಾಗಿದೆ. ಮತಾಂಧರ ಹಾವಳಿಯ ಪರಿಣಾಮ.


ಈ ಕೆತ್ತನೆಗಳು ಏನನ್ನು ಹೇಳುತ್ತಿವೆ ಅಥವಾ ಯಾವ ಘಟನೆಯನ್ನು ಬಿಂಬಿಸುತ್ತಿವೆ ಎಂದು ಗೊತ್ತಾಗುವಷ್ಟು ಅರಿವು ನನಗಿಲ್ಲ. ಪುರಾತತ್ವ ಇಲಾಖೆಯ ಸುಪರ್ದಿಗೆ ಹೊನ್ನಾವರದ ಚೆನ್ನಕೇಶವ ಒಳಪಟ್ಟಿದ್ದಾನೋ ಇಲ್ಲವೋ ತಿಳಿಯದು. ಅಲ್ಲೆಲ್ಲೂ ನೀಲಿ ಫಲಕ ಕಾಣಬರಲಿಲ್ಲ. ನಾವು ಚಿತ್ರಗಳನ್ನು ತೆಗೆಯುವುದರಲ್ಲಿ ತಲ್ಲೀನರಾಗಿದ್ದಾಗ ಬೈಕೊಂದರಲ್ಲಿ ಹಾದು ಹೋಗುತ್ತಿದ್ದ ಇಬ್ಬರು ಹಳ್ಳಿಗರು ’ಸರಕಾರದಿಂದ ಅನುದಾನ ತೆಗೆಸಿಕೊಡುತ್ತೀರಾ’ ಎಂದು ಕೇಳಿ ನಮಗೆ ಮುಜುಗರ ಉಂಟುಮಾಡಿದರು.


ರಸ್ತೆಯ ಮತ್ತೊಂದು ಮಗ್ಗುಲಲ್ಲಿ ಮೆಕ್ಕೆಜೋಳವನ್ನು ಒಣಹಾಕಿದ್ದರು. ನೇಹಲ್ ಆ ಮೆಕ್ಕೆಜೋಳ ರಾಶಿಯನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ಅಲ್ಲಿಂದ ಹೊರಟ ಸ್ವಲ್ಪ ಸಮಯದ ಬಳಿಕ ಆಕೆ ಏನನ್ನೋ ಜಗಿಯುತ್ತಿರುವುದನ್ನು ಕಂಡು ಏನೆಂದು ನೋಡಿದರೆ ಏಳೆಂಟು ಮೆಕ್ಕೆ ಜೋಳದ ಕಾಳುಗಳು!