ಶನಿವಾರ, ಆಗಸ್ಟ್ 21, 2010

ಹಸಿರಿನ ದೊರೆ ಈ ಜಲಧಾರೆ


ಈ ಹಳ್ಳಿಯ ದಾರಿಯಾಗಿ ಪ್ರಯಾಣಿಸುವಾಗ ಗದ್ದೆಗಳಾಚೆ ಹಸಿರನ್ನು ಹೊತ್ತು ನಿಂತಿರುವ ಬೆಟ್ಟದ ನಡುವೆ ಜಲಧಾರೆಯೊಂದು ಧುಮುಕುವುದನ್ನು ನೋಡಲು ಯಾವಾಗಲೂ ಕಾತುರದಿಂದ ಕಾಯುತ್ತಿದ್ದೆ. ಒಂದೆರಡು ಬಾರಿ ಬೈಕಿನಲ್ಲಿ ಈ ದಾರಿಯಾಗಿ ತೆರಳುವಾಗ ಈ ಜಲಧಾರೆಯ ಚಿತ್ರ ತೆಗೆದು ಪ್ರಯಾಣ ಮುಂದುವರಿಸಿದ್ದಿದೆ. ಆದರೆ ಜಲಧಾರೆಯ ಸನಿಹ ತೆರಳಿರಲಿಲ್ಲ.


ಅಗೋಸ್ಟ್ ೧೫, ೨೦೦೭. ಎಂದಿನಂತೆ ರಜಾದಿನ. ರಾಕೇಶ್ ಹೊಳ್ಳನೊಂದಿಗೆ ಈ ಜಲಧಾರೆಯತ್ತ ಹೊರಟೆ. ಇನ್ನೇನು ಹಳ್ಳಿ ಸುಮಾರು ೨೦ಕಿಮಿ ದೂರವಿರುವಾಗ ಅದೇನೋ ದೊಡ್ಡ ಸದ್ದು. ಡ್ರೈವರ್ ಬಸ್ಸನ್ನು ನಿಧಾನಗೊಳಿಸಿ ರಸ್ತೆಯ ಬದಿಗೆ ತಂದು ನಿಲ್ಲಿಸಿದ. ಹಿಂದಿನ ಗಾಲಿಯೊಂದು ಪಂಕ್ಚರ್. ೧೫ ನಿಮಿಷದಲ್ಲಿ ಬಂದ ಮತ್ತೊಂದು ಬಸ್ಸಲ್ಲಿ ಹಳ್ಳಿ ತಲುಪಿದಾಗ ೨.೩೦ ಆಗಿತ್ತು. ಅಲ್ಲಿನ ಹೋಟೇಲೊಂದರಲ್ಲಿ ಊಟ ಮುಗಿಸಿ ಹೋಟೇಲ್ ಮಾಲೀಕಳಲ್ಲಿ ಆ ಜಲಧಾರೆಗೆ ದಾರಿ ಕೇಳಿದಾಗ, ’ಜ್ವಾಗ್ ಫಾಲ್ಸಾ, ಹೋಗ್ಲಿಕ್ಕೆ ಕಷ್ಟಾತು, ಯಾರಾದ್ರು ಜೊತೆಗಿದ್ರೆ ಚಲೋದು’ ಅಂದಳು. ಪ್ರತಿ ಊರಿನವರಿಗೆ ತಮ್ಮ ತಮ್ಮ ಊರಿನ ಫಾಲ್ಸು, ಜೋಗ್ ಫಾಲ್ಸೇ! ಅಲ್ಲೊಬ್ಬರು ಸಿಕ್ಕಿದರು ರೋಹಿದಾಸ್ ಎಂದು. ನಮ್ಮಿಬ್ಬರನ್ನು ಜಲಧಾರೆಗೆ ಕರೆದೊಯ್ಯಲು ಒಪ್ಪಿದರು. ಅವರ ಮಗ ಅವಿನಾಶನೂ ಜೊತೆಗೆ ಬಂದ.


ಹಳ್ಳಿಯಲ್ಲೇ ೧೫ ನಿಮಿಷ ನಡೆದ ಬಳಿಕ ಕಾಡನ್ನು ಹೊಕ್ಕೆವು. ಕೇವಲ ೨೫ ನಿಮಿಷದಲ್ಲಿ, ಸುಮಾರು ೭೦ ಅಡಿ ಮೇಲಿನಿಂದ ನೀರು ಹಂತಹಂತವಾಗಿ ಬೀಳುವ ಸ್ಥಳವನ್ನು ತಲುಪಿದೆವು. ಸಾಧಾರಣವಾದ ನೋಟ. ಇದೇ ಜಲಧಾರೆ ಎಂದು ರೋಹಿದಾಸ್ ಎಂದಾಗ ನಂಬಲಾಗಲಿಲ್ಲ. ಹಳ್ಳಿಯಿಂದ ಅಷ್ಟು ಆಕರ್ಷಕವಾಗಿ ಜಲಧಾರೆ ಕಾಣಿಸುತ್ತಿದ್ದರೆ, ಇಲ್ಲಿ ಸಾಧಾರಣ ನೋಟ! ’ಇದೇನಾ ರಸ್ತೆಯಿಂದ ಕಾಣೋದು’ ಎಂದು ರೋಹಿದಾಸನಲ್ಲಿ ಕೇಳಿದರೆ, ’ಹ್ಹೆ ಹ್ಹೆ ಇದಲ್ಲ. ಅದಿನ್ನೂ ಮೇಲಿದೆ. ಅಲ್ಲಿಗೆ ಹೋಗೋದು ನಿಮ್ಗಾಕ್ಲಿಕ್ಕಿಲ್ಲ. ಕಷ್ಟ. ಹತ್ಬೇಕು’ ಎಂದ. ನನ್ನ ದಢೂತಿ ಆಕಾರ ನೋಡಿ ಅವರಿಗೆ ಡೌಟು.


ಕಡಿದಾದ ಕಣಿವೆಯಲ್ಲಿ ಹುಲ್ಲು ಗಿಡಗಳ ಮಧ್ಯೆ ದಾರಿ ಮಾಡಿಕೊಂಡು ಮೇಲೇರಿದೆವು. ಮುಂಜಾನೆ ಮಳೆಯಾಗಿದ್ದರಿಂದ ನೆಲವೆಲ್ಲಾ ಒದ್ದೆ ಮತ್ತು ಜಾರುತ್ತಿತ್ತು. ಜಾರಿ ಬಿದ್ದರೆ ಹಿಡಿದುಕೊಳ್ಳಲು ಬೇಕಾದಷ್ಟು ಗಿಡಗಳಿವೆ ಎಂಬ ಧೈರ್ಯದಲ್ಲಿ ನಿಧಾನವಾಗಿ ಮೇಲೇರತೊಡಗಿದೆ. ಒಂದೆರಡು ಕಡೆ ಜಾರಿದರೂ ಬಳ್ಳಿಗಳನ್ನು ಆಧಾರವಾಗಿ ಹಿಡಿದಿದ್ದರಿಂದ ಬಚಾವಾದೆ.


ಚಾರಣದ ಹಾದಿ ೪೫ ನಿಮಿಷದ್ದೇ ಆಗಿದ್ದರೂ ಕೊನೆಯ ೨೦-೨೫ ನಿಮಿಷದ ಏರುಹಾದಿ ರೋಮಾಂಚನಕಾರಿಯಾಗಿತ್ತು.ಜಲಧಾರೆಯ ಬದಿಗೆ ಬಂದು ತಲುಪಿದಾಗ ಕಂಡ ದೃಶ್ಯ ಅಮೋಘ. ಜಲಧಾರೆ ಎಣಿಸಿದ್ದಕ್ಕಿಂತ ಅದೆಷ್ಟೋ ಪಟ್ಟು ಚೆನ್ನಾಗಿತ್ತು. ಒಂದೇ ನೆಗೆತಕ್ಕೆ ಸುಮಾರು ೧೦೦ಅಡಿಯಷ್ಟು ಎತ್ತರದಿಂದ ಧುಮುಕುತ್ತಿದ್ದ ದೃಶ್ಯವನ್ನು ಅತಿ ಹತ್ತಿರದಿಂದ ಕಂಡು ಮನಸ್ಸು ಹಾರಾಡತೊಡಗಿತು. ತನ್ನ ಇಕ್ಕೆಲಗಳಲ್ಲಿ ಕಾಡಿನ ಹಸಿರನ್ನು ಕಾವಲುಗಾರರನ್ನಾಗಿರಿಸಿ ರಾಜಗಾಂಭೀರ್ಯದಿಂದ ಧುಮುಕುತ್ತಿದ್ದ ಜಲಧಾರೆಯನ್ನು ಬಹಳ ಇಷ್ಟಪಟ್ಟೆ.


ರಾಕೇಶ, ಅವಿನಾಶನೊಂದಿಗೆ ಜಲಧಾರೆಯ ತಳದ ಸಮೀಪದಲ್ಲಿದ್ದರು. ಅಲ್ಲಿ ಆಚೀಚೆ ಓಡಾಡಿ ಒಂದೆರಡು ಉತ್ತಮ ಚಿತ್ರಗಳನ್ನು ತೆಗೆದರು. ಇಲ್ಲಿ ಹಾಕಿರುವ ಚಿತ್ರ ಅವರ ಮೊಬೈಲಿನಿಂದ ತೆಗೆದದ್ದು. ಕೆಳಗಿಳಿದು ಜಲಧಾರೆಯ ಮುಂದೆ ನಿಂತರೆ ಈ ದೃಶ್ಯ ಕಾಣಬರುವುದು. ಬಂಡೆಗಳೆಲ್ಲಾ ಜಾರುತ್ತಿದ್ದರಿಂದ ಕೆಳಗಿಳಿಯುವ ಸಾಹಸ ನಾನು ಮಾಡಲಿಲ್ಲ. ಅಲ್ಲೇ ಬದಿಯಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದೆ.


ನಂತರ ಹಳ್ಳಿಯಲ್ಲಿ ರೋಹಿದಾಸ ಮತ್ತು ಅವಿನಾಶನಿಗೆ ವಿದಾಯ ಹೇಳಿ ಬಸ್ಸು ನಿಲ್ದಾಣದಲ್ಲಿ ನಿಂತೆವು. ವೇಗವಾಗಿ ಬಸ್ಸೊಂದು ಬಂತು. ರಾಕೇಶ ರಸ್ತೆ ಬದಿಗೆ ಹೋಗಿ ನಿಂತರು. ಬಸ್ಸು ನಿಲ್ಲಲಿಲ್ಲ. ’ನಿಲ್ಲಿಸ್ಲೇ ಇಲ್ಲ’ ಎಂದಾಗ, ’ಕೈ ತೋರಿಸಿದ್ರಾ?’ ಎಂದು ನಾನು ಕೇಳಿದಾಗ, ’ಇಲ್ಲ. ಉಡುಪಿಯಲ್ಲಿ ನಾನು ಕೈ ತೋರಿಸುವುದೇ ಇಲ್ಲಕ್ಕು, ಬಸ್ಸು ನಿಲ್ಲಕ್ಕು (ಉಡುಪಿಯಲ್ಲಿ ನಾನು ಕೈ ಮಾಡೊದೇ ಇಲ್ಲ, ಬಸ್ಸು ನಿಲ್ಲಿಸುತ್ತಾರೆ)’ ಎಂದು ತಮ್ಮದೇ ಕುಂದಾಪ್ರ ತರಹದ ಕನ್ನಡದಲ್ಲಿ ಅಂದಾಗ ನಗಲಾರದೇ ಇರಲು ನನ್ನಿಂದ ಆಗಲಿಲ್ಲ. ನಂತರ ಇವರು ಕೈ ಮಾಡ್ಲಕ್ಕು ಟೆಂಪೋವೊಂದು ನಿಲ್ಲಕ್ಕು, ಅದರಲ್ಲಿ ರಿಟರ್ನ್ ಪ್ರಯಾಣ ಶುರು ಮಾಡಿದೆವು.

12 ಕಾಮೆಂಟ್‌ಗಳು:

Lakshmipati ಹೇಳಿದರು...

Rajesh,

naanu kooda 2 baari aa daariyalli prayaanisuvaaga jaladhaareyannu nodidde. rasteyinda nodidare talupuvudu bahu sulabha endu kaanuttade. aadare nimma baraha odida mele nanna anisike sullayitu.

aa jaladhaareyinda eda bhaagakke nodidare mattondu jaladhaareyide. adu rasteyinda spastavaagi gamanisidare maatra kanisuttade. adara photovannu nimma e-mail ID ge kalisuttene.

Lakshmipati
Sharjah

ಪಾಚು-ಪ್ರಪಂಚ ಹೇಳಿದರು...

Hi Rajesh..

Very Nice photos. Falls is beautiful.

Thanks for sharing.

Regards
Prashanth Bhat

Varun ಹೇಳಿದರು...

ಸ್ಥಳ ತುಂಬಾ ಚೆನ್ನಾಗಿದ್ದೆ
ಇಲ್ಲಿಗೆ ತಲುಪುವುದು ಹೇಗೆ? ಮಾರ್ಗ ತಿಳಿಸಿದರೆ ನಾವುನು ಯಾವುದಾದರೂ weekend ಹೋಗಿ ಬರ್ತೀವಿ

ಸಾಗರದಾಚೆಯ ಇಂಚರ ಹೇಳಿದರು...

Rajesh sir

amazing place

nodalebeku omme

PaLa ಹೇಳಿದರು...

ಎಷ್ಟು ಜಲಪಾತ ನೋಡಿ ಕಣ್ತಂಪ್ ಮಾಡ್ಕೊತೀರಪ್ಪ..

Shiv ಹೇಳಿದರು...

ರಾಜೇಶ್,
ತುಂಬಾ ಸೊಗಸಾಗಿ ಬಂದಿದೆ ಜಲಪಾತ ಪ್ರವಾಸಗಥೆ.
ನಿಮ್ಮ ಜಲಪಾತದ ಪ್ರೀತಿಗೊಂದು ವಂದನೆ !

ರಾಜೇಶ್ ನಾಯ್ಕ ಹೇಳಿದರು...

ಲಕ್ಷ್ಮೀಪತಿ,
ಆ ಮತ್ತೊಂದು ಜಲಧಾರೆಯ ಚಿತ್ರಗಳಿಗಾಗಿ ಧನ್ಯವಾದ.

ಪ್ರಶಾಂತ್, ವರುಣ್, ಗುರು,
ಧನ್ಯವಾದ.

ಪಾಲಚಂದ್ರ,
ಜಲಧಾರೆಯ ಅಂದ, ನೋಡಲು ಚಂದ, ಮನಸ್ಸು ಸ್ವಚ್ಛಂದ.

ಶಿವ್,
ಧನ್ಯವಾದ.

Shrinidhi Hande ಹೇಳಿದರು...

nice post. ಇದು ಎಲ್ಲಿದೆ ಅಂತ ಗೊತ್ತಾಗಲಿಲ್ಲ

ರಾಜೇಶ್ ನಾಯ್ಕ ಹೇಳಿದರು...

ಶ್ರೀನಿಧಿ,
ಟಿಪ್ಪಣಿಗಾಗಿ ಧನ್ಯವಾದ. ದಾರಿ, ದಿಕ್ಕು, ದೂರ, ಹೆಸರು ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನಾನು ಎಂದಿಗೂ ನೀಡುವುದಿಲ್ಲ. ಕ್ಷಮೆ ಇರಲಿ.

krishna ಹೇಳಿದರು...

hi rajesh,nanu bengaluru huduganadaru,malenadanu ista paduva,preetisuva huduga,nanu kelavondu jalapatagalige charana madidene,burude joga,barkana,benne falls etc etc,adare nimma char anada jalapatagalu yelli barutade endu namagu tilisabahudallave,tilidukollalu navu henu madabeku,nimma uttarkagi kadiruva nimma hosa abhimani krishna

Soms ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Soms ಹೇಳಿದರು...

Naikre

Naavu mundhina vaara allige hogbeku antha yochisidheevi....nimindha any tips?....

regards
somayaji