ಶನಿವಾರ, ಜೂನ್ 26, 2010

ಲಂಬೂ ಜಲಧಾರೆ


ಬೆಟ್ಟದ ತಪ್ಪಲಲ್ಲಿರುವ ಈ ಊರಿಗೆ ಬಸ್ಸಿನಲ್ಲಿ ಬಂದಿಳಿದಾಗ ಮುಂಜಾನೆ ೮.೧೫ರ ಸಮಯ. ಹಳ್ಳಿಗ ಹರೀಶ್ ನಮ್ಮೊಂದಿಗೆ ಮಾರ್ಗದರ್ಶಿಯಾಗಿ ಬಂದರು. ಹಳ್ಳಿಯ ಪರಿಧಿ ದಾಟಿದ ಕೂಡಲೇ ಕಾಡು ಚಾರಣಿಗರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತದೆ. ಸ್ವಲ್ಪ ದೂರ ರಸ್ತೆ ನಂತರ ಕಾಲುದಾರಿ.


ಶ್ರೀಕಾಂತರೊಂದಿಗೆ ಇದು ನನ್ನ ಮೊದಲ ಚಾರಣ. ಕಾಡಿನ ಮೌನದ ಬಗ್ಗೆ ಹರಟುತ್ತಾ ಕಾಡಿನೊಳಗೆ ಸಾಗಿದೆವು. ಕಾಡು ದಟ್ಟವಾಗಿದ್ದು ಬೃಹದಾಕಾರದ ವೃಕ್ಷಗಳು ನಮ್ಮನ್ನು ಆವರಿಸಿಕೊಂಡಂತೆ ಭಾಸವಾಗುತ್ತಿತ್ತು. ಋತುವಿನ ಮೊದಲ ಒಂದೆರಡು ಮಳೆ ಬಿದ್ದಿದ್ದರೂ ಇಂಬಳಗಳು ತಮ್ಮ ಬೇಸಗೆಯ ದೀರ್ಘ ನಿದ್ರೆಯಿಂದ ಇನ್ನೂ ಸಂಪೂರ್ಣವಾಗಿ ಎಚ್ಚರಗೊಂಡಿರಲಿಲ್ಲ. ಚಾರಣದ ಹಾದಿ ಹಳ್ಳಿಯಿಂದ ಕೇವಲ ೫೦-೭೦ ನಿಮಿಷವಷ್ಟೇ. ಒಂದು ಕಠಿಣ ಏರುಹಾದಿ ನನಗೆ ’ಚಾರಣವಾದರೂ ಯಾಕಪ್ಪಾ’ ಎನ್ನುವಷ್ಟು ಬಸವಳಿಯುವಂತೆ ಮಾಡಿತು. ಶ್ರೀಕಾಂತ್ ಸಲೀಸಾಗಿ ಮೇಲೇರುತ್ತಾ ಹೋದರೆ ನಾನು ಮುಗ್ಗರಿಸುತ್ತಿದ್ದೆ. ಅಲ್ಲಲ್ಲಿ ವಿರಮಿಸುತ್ತಾ, ವಿವಿಧ ಕಡೆ ಮಾಡಿದ ಚಾರಣಗಳ ಬಗ್ಗೆ ಒಬ್ಬರಿಗೊಬ್ಬರು ಕೊರೆಯುತ್ತಾ ಹರೀಶನನ್ನು ಹಿಂಬಾಲಿಸಿದೆವು.


ಒಂದೆಡೆ ಕೊರಕಲೊಂದನ್ನು ಇಳಿದ ಕೂಡಲೇ ಜಲಧಾರೆಯ ಶಿರಭಾಗದ ದರ್ಶನ. ಶಿಸ್ತುಬದ್ಧವಾಗಿ ಅಚೀಚೆ ಬೆಳೆದಿರುವ ಕುರುಚಲು ಸಸ್ಯಗಳು ಆ ಕಣಿವೆಯ ಸೌಂದರ್ಯಕ್ಕೆ ಇಂಬು ನೀಡಿದ್ದವು. ಇಲ್ಲಿಂದ ಸ್ವಲ್ಪ ಎಚ್ಚರಿಕೆಯಿಂದ ಮುಂದೆ ಸಾಗಬೇಕಾಗುತ್ತದೆ. ನೀರು ಹರಿದು ಬರುವ ಹಾದಿಯಲ್ಲೇ ಎಲ್ಲಾ ಗಾತ್ರಗಳ ಬಂಡೆಗಳನ್ನು ದಾಟುತ್ತಾ ಮೇಲಕ್ಕೇರಬೇಕಾಗುತ್ತದೆ.


ಜಲಧಾರೆಯ ಬುಡಕ್ಕೆ ತಲುಪಿದಾಗ ಗಮ್ಯ ಸ್ಥಾನಕ್ಕೆ ತಲುಪಿದ ಅನುಭವ. ಜಲಧಾರೆಯ ಮುಂದೆ ಇರುವ ದೊಡ್ಡ ಬಂಡೆಯ ತುದಿಯನ್ನು ಶ್ರೀಕಾಂತ್ ಏರಿ ಕುಳಿತರೆ ನಾನದರ ಬುಡದಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು ಆನಂದಿಸತೊಡಗಿದೆವು. ಎರಡು ಹಂತಗಳಲ್ಲಿ ಸುಮಾರು ೩೫೦ ಅಡಿಗಳಷ್ಟು ಆಳಕ್ಕೆ ಈ ಜಲಧಾರೆ ಧುಮುಕುತ್ತದೆ. ಮೊದಲ ಹಂತ ೫೦ ಅಡಿಗಳಷ್ಟು ಎತ್ತರವಿದ್ದರೆ ಎರಡನೇ ಹಂತ ಸುಮಾರು ೨೭೦-೩೦೦ ಅಡಿಗಳಷ್ಟು ಎತ್ತರವಿದೆ.


ಕತ್ತೆತ್ತಿ ನೋಡಿದರೆ ಕತ್ತು ನೋಯಿಸುವಷ್ಟು ಮೇಲಕ್ಕೆ ನೋಡಬೇಕಾಗುತ್ತದೆ, ಜಲಧಾರೆಯ ಅಷ್ಟು ಸಮೀಪಕ್ಕೆ ಹೋಗಬಹುದು. ಸುಮ್ಮನೆ ಜಲಧಾರೆಯ ಮುಂದೆ ಕೂತರೆ ಮನಕ್ಕೆ ಮುದ ನೀಡುವ ಸುಂದರ ದೃಶ್ಯ. ಅಂಗಾತ ಮಲಗಿದರೆ ಆಗಸದಿಂದ ಮೈಮೇಲೆ ಜಲಧಾರೆ ಬೀಳುತ್ತಿರುವಂತಹ ಮೈನವಿರೇಳಿಸುವ ಅನುಭವ.


ಇಲ್ಲಿ ದುಸ್ಸಾಹಸ ಮಾಡಿ ಪ್ರಾಣ ಕಳಕೊಂಡವರೂ ಇದ್ದಾರೆ. ಅಂಥವರ ಬಗ್ಗೆ ಹರೀಶ ವಟಗುಟ್ಟುತ್ತಾ ಇದ್ದರೆ, ನಾವಿಬ್ಬರು ಬಳುಕುತ್ತಿರುವ ಜಲಧಾರೆಯ ಸೌಂದರ್ಯವನ್ನು ಆಸ್ವಾದಿಸುವುದರಲ್ಲಿ ಮಗ್ನರಾಗಿದ್ದೆವು.

7 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ಚಿತ್ರಗಳು. ’ಲಂಬೂ’ವಿನ ಮೇಲೆ ಒಮ್ಮೆ ಹೋಗಿದ್ದೆ. ನಿಮ್ಮ ಲೇಖನ ನೋಡಿದ ಮೇಲೆ ಕೆಳಗೆ ಹೋಗಬೇಕೆನಿಸುತ್ತಿದೆ.

Unknown ಹೇಳಿದರು...

ತು೦ಬಾ ಚೆನ್ನಾಗಿದೆ ಸಾರ್ ಫೊಟೊಗಳು ನಮಿಗೂ ಹೂಗ್ಬೆಕಿನಿಸ್ತಾ ಇದೆ ಎಲ್ಲಿ ಬರತ್ತೆ ಈ ಜಲಪಾತ ಸರ್?

VENU VINOD ಹೇಳಿದರು...

ಸಿಕ್ಕಾಪಟ್ಟೆ ಚೆನ್ನಾಗಿದೆ..ಹೋಗ್ಲೇ ಬೇಕು ಇಲ್ಲಿಗೆ...ಫೋಟೋಸ್ ಮಸ್ತ್‌...

Srik ಹೇಳಿದರು...

Wooow! Amazing views!! Loved the pics, blessed you are Rajesh sir!!!

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಮುರಳೀಧರ್, ವೇಣು, ಶ್ರೀಕಾಂತ್
ಈ ಜಲಧಾರೆಯಿರುವ ತಾಣವೇ ಅದ್ಭುತವಾಗಿ ಸೃಷ್ಟಿಸಿರುವ ಅರ್ಧಚಂದ್ರಾಕೃತಿಯ ಬೃಹತ್ ಕವಾಟದಂತಿದೆ. ಲಂಬೂ ಬಗ್ಗೆ ಬರೆದಿರುವುದನ್ನು ಮತ್ತು ಚಿತ್ರಗಳನ್ನು ಮೆಚ್ಚಿ ಟಿಪ್ಪಣಿಸಿದ್ದಕ್ಕೆ ಧನ್ಯವಾದ.

Unknown ಹೇಳಿದರು...

ಸಿಕ್ಕಾಪಟ್ಟೆ ಚೆನ್ನಾಗಿದೆ..ರಾಜೇಶ್ ಸರ್

ನಿಮ್ಮ ದೂರವಾಣಿ ಅಥವಾ ಇ ಮೇಲ್ ID
ಸಿಗಬಹುದ --

ಇಂತಿ ನಿಮ್ಮವ,
ನಂದಿ ಜೆ.ಹೂವಿನಹೊಳೆ
ಚಿತ್ತಾರದುರ್ಗ.ಕಾಂ,ಸಂಚಾಲಕ

Prasad ಹೇಳಿದರು...

Its amazing Mr. Rajesh. Please tell us the place where this beautiful falls will come?

Regards,
S. Prasad