ಭಾನುವಾರ, ಮೇ 02, 2010

ಉಡುಪಿ ಕೃಷ್ಣ


ಇದು ಉಡುಪಿಯ ಕೃಷ್ಣನ ಒಂದು ಅಲಂಕಾರದ ಚಿತ್ರ. ಈಗ ಶಿರೂರು ಮಠದ ಪರ್ಯಾಯದ ಅವಧಿ. ಹಾಗಾಗಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಶಿರೂರು ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು. ತಮ್ಮ ಪರ್ಯಾಯವಲ್ಲದ ಸಮಯದಲ್ಲಿ ಇತರ ಮಠದ ಸ್ವಾಮಿಗಳು ಪೂಜೆ ಸಲ್ಲಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಪೂಜೆ ಸಲ್ಲಿಸುವುದು ಅವರವರ ಇಷ್ಟ. ಪೂಜೆಯನ್ನು ಸಲ್ಲಿಸುವಲ್ಲಿ ಹಿರಿಯ ಸ್ವಾಮಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇತರ ಮಠಗಳ ಸ್ವಾಮಿಗಳು ಪೂಜೆ ಸಲ್ಲಿಸಿದ ಬಳಿಕ ನಂತರ ಉಳಿದ ಇತರ ಪೂಜೆಗಳನ್ನು ಪರ್ಯಾಯ ಮಠದ ಸ್ವಾಮಿಯವರು ಸಲ್ಲಿಸುತ್ತಾರೆ. ಒಂದು ವೇಳೆ ಆ ದಿನ ಉಳಿದ ೭ ಮಠಗಳ ಸ್ವಾಮಿಗಳು ಯಾವುದೇ ಪೂಜೆ ಸಲ್ಲಿಸದೇ ಇದ್ದಲ್ಲಿ, ಪರ್ಯಾಯ ಮಠದ ಸ್ವಾಮಿಗಳೇ ದಿನದ ಎಲ್ಲಾ ಪೂಜೆಗಳನ್ನೂ ಸಲ್ಲಿಸಬೇಕು.

ಕೃಷ್ಣನಿಗೆ ಹಲವಾರು ಅಲಂಕಾರಗಳಿವೆ. ೪೦೦ ವರ್ಷಗಳ ಮೊದಲು ವಾದಿರಾಜ ಸ್ವಾಮಿಗಳು ಕೃಷ್ಣನಿಗೆ ೪೦೦ ಅಲಂಕಾರಗಳನ್ನು ಮಾಡಿದ್ದು ಇದುವರೆಗಿನ ದಾಖಲೆ. ಈ ವಾದಿರಾಜ ಸ್ವಾಮಿಗಳೇ ಪರ್ಯಾಯದ ಅವಧಿಯನ್ನು ೨ ತಿಂಗಳಿನಿಂದ ೨ ವರ್ಷಕ್ಕೆ ವಿಸ್ತರಿಸಿದವರು. ಇವರ ಹೆಸರಿನಲ್ಲಿರುವ ೪೦೦ ಅಲಂಕಾರಗಳ ದಾಖಲೆಯನ್ನು ಮುರಿಯಲು ಈಗಿನ ಪರ್ಯಾಯ ಸ್ವಾಮಿಗಳಿಗೆ ಮುಜುಗರ. ತಾನು ವಾದಿರಾಜ ಸ್ವಾಮಿಗಳಷ್ಟು ಪಾಂಡಿತ್ಯ ಗಳಿಸಿಲ್ಲ, ಅವರ ಮಟ್ಟಕ್ಕಿನ್ನೂ ತಾನು ತಲುಪಿಲ್ಲ ಎಂಬ ಭಾವನೆ ಈ ಸ್ವಾಮಿಗಳದ್ದು. ಆದ್ದರಿಂದ ಶಿರೂರು ಸ್ವಾಮಿಗಳು ೩೬೫ ಅಲಂಕಾರಗಳನ್ನು ಮಾಡುವ ನಿರ್ಧಾರ ಮಾಡಿದ್ದಾರೆ. ಅವರ ಅಲಂಕಾರಗಳಿನ್ನೂ ಆರಂಭಗೊಂಡಿಲ್ಲ. ಕೃಷ್ಣನಿಗೆ ಈಗ ಉಳಿದ ಮಠಗಳ ಸ್ವಾಮಿಗಳು ತಾವು ಪೂಜೆ ಸಲ್ಲಿಸುವಾಗ ಅಲಂಕಾರ ಮಾಡುತ್ತಾರೆ.

ಗೆಳೆಯ ಗುರುದತ್ತ ಒಬ್ಬ ಅದ್ಭುತ ಫೋಟೋಗ್ರಾಫರ್. ಪ್ರತಿ ದಿನದ ಅಲಂಕಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಈಗ ಗುರುದತ್ತನ ಕೆಲಸ. ಪ್ರತಿದಿನದ ಕೃಷ್ಣನ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಆಗಿರುತ್ತದೆ.

ಈಗ ಗುರು ತನ್ನನ್ನು ಸಂಪೂರ್ಣವಾಗಿ ಕೃಷ್ಣನ ಸೇವೆಗೆ ಮುಡಿಪಾಗಿಟ್ಟಿದ್ದಾನೆ. ಚಾರಣವಿಲ್ಲ, ಬೇರೆ ಫೋಟೋಗ್ರಾಫಿ ಅಸೈನ್-ಮೆಂಟುಗಳಿಲ್ಲ, ಪ್ರೊಫೆಷನಲ್ ಶೂಟ್-ಗಳಿಲ್ಲ, ಪ್ರಕೃತಿಯ ಜೊತೆ ಒಡನಾಟವಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈಗ ಕೃಷ್ಣನ ಸೇವೆ ಬಿಟ್ಟು ಬೇರೇನೂ ಇಲ್ಲ! ಕೃಷ್ಣನ ಸೇವೆ ದಿನಾಲೂ ಮಾಡುವುದರಿಂದ ಕೆಲವು ಆಚರಣೆಗಳನ್ನು ಗುರು ತನ್ನ ದಿನನಿತ್ಯದ ಜೀವನದಲ್ಲಿ ಈಗ ಅಳವಡಿಸಿಕೊಳ್ಳಬೇಕಾಗಿದೆ. ಮುಂಜಾನೆ ಬಲೂ ಬೇಗ ಸ್ನಾನ, ಮಡಿ ಆಚರಣೆ, ಕೇವಲ ಸಸ್ಯಹಾರಿ ಆಹಾರ ಸೇವನೆ, ಬ್ರಹ್ಮಚಾರಿ ಜೀವನ, ಇತ್ಯಾದಿ. ದಿನಾಲೂ ಚಿತ್ರ ತೆಗೆಯಲು ಇರುವುದರಿಂದ ಮುಂದಿನ ಪರ್ಯಾಯದವರೆಗೆ ಉಡುಪಿ ಬಿಟ್ಟು ಹೋಗುವಂತಿಲ್ಲ! ಗುರುವಿನ ಡೆಡಿಕೇಶನ್ ಮೆಚ್ಚಲೇಬೇಕು. ಆದರೂ ನಮಗೆಲ್ಲ ಸಣ್ಣ ಗಾಬರಿಯೊಂದು ಆರಂಭವಾಗಿದೆ. ಎರಡು ವರ್ಷಗಳ ಕೃಷ್ಣನ ಮತ್ತು ಸ್ವಾಮಿಗಳ ಸಾಮೀಪ್ಯದ ಬಳಿಕ ತಾನು ಇನ್ನು ಸನ್ಯಾಸಿಯಾಗುತ್ತೇನೆ ಎಂದು ಈತ ಹೊರಟರೆ...!

ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರತಿನಿತ್ಯ ಕೃಷ್ಣನ ಹೊಸ ಅಲಂಕಾರದ ಚಿತ್ರಗಳನ್ನು ಕಾಣಬಹುದು. ಅಲ್ಲೇ ಸ್ವಲ್ಪ ಜಾಲಾಡಿದರೆ ಉಡುಪಿ ಕೃಷ್ಣನಿಗೆ ಸಂಬಂಧಿಸಿದಂತೆ ಗುರು ತೆಗೆದ ಇನ್ನೂ ಇತರ ಚಿತ್ರಗಳನ್ನೂ ಕಾಣಬಹುದು.

6 ಕಾಮೆಂಟ್‌ಗಳು:

Srik ಹೇಳಿದರು...

Very nice to know. The youth hostel trek snaps are brilliant and out of the world!

I think Udupi Krishna will get more popularity thru his photos.

Wishes to him!
Srik

PaLa ಹೇಳಿದರು...

ರಾಜೇಶ್,

ಗುರುದತ್ತರನ್ನು ಪರಿಚಯಿಸಿದ್ದಕ್ಕೆ ವಂದನೆಗಳು.. ಅವರದ್ದು ಯಾವುದಾದರೂ ಪಬ್ಲಿಕ್ ಪ್ರೊಫೈಲ್/ವೆಬ್ ಸೈಟ್ ಇದ್ರೆ ಲಿಂಕ್ ಕೊಡ್ತೀರ.. ಇನ್ನಷ್ಟು ಫೋಟೋ ನೋಡುವ ಆಸೆ.. ಧನ್ಯವಾದ

Lakshmipati ಹೇಳಿದರು...

Rajesh,

adhbuthavaada chitragalu. prakatisiddakke dhanyavaadagalu.

Lakshmipati

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್, ಪಾಲಚಂದ್ರ, ಲಕ್ಷ್ಮೀಪತಿ,
ಧನ್ಯವಾದಗಳು.
ಪಾಲಚಂದ್ರ - ಗುರು ಸಿಗ್ತಾನೇ ಇಲ್ಲ. ಅವರ ಅಣ್ಣನಲ್ಲಿ ವಿಚಾರಿಸಿದರೆ, ’ಅವನು ಈಗ ಕೇರ್ ಆಫ್ ಕೃಷ್ಣ ದೇವಾಲಯ, ನನಗೇ ಸಿಗದೆ ೧೦ ದಿನಗಳಾದವು’ ಎಂದುಬಿಟ್ಟರು. ಅವರು ಸಿಕ್ಕಿದ ಕೂಡಲೇ ಅವರ ಆನ್ ಲೈನ್ ಗ್ಯಾಲರಿ ಲಿಂಕ್ ಇಲ್ಲಿ ಕೊಡುವೆನು.

PaLa ಹೇಳಿದರು...

ಸರಿ, ಕಾಯ್ತೀನಿ

ರಾಜೇಶ್ ನಾಯ್ಕ ಹೇಳಿದರು...

ಪಾಲಚಂದ್ರ,

ಈ ಕೆಳಗಿನ ಕೊಂಡಿಯಲ್ಲಿ ಗುರುದತ್ ತಾವು ತೆಗೆದ ಕೆಲವು ಚಿತ್ರಗಳನ್ನು ಹಾಕಿದ್ದಾರೆ.

http://www.fotoflock.com/gallery/main.php?g2_itemId=57367