ಭಾನುವಾರ, ಫೆಬ್ರವರಿ 07, 2010

ತ್ರಿಕೂಟೇಶ್ವರ ದೇವಾಲಯ ಮತ್ತು ಸರಸ್ವತಿ ದೇವಾಲಯ - ಗದಗ


ಗದಗದಲ್ಲಿರುವ ತ್ರಿಕೂಟೇಶ್ವರ ದೇವಾಲಯವನ್ನು ನೋಡಲು ಬಂದರೆ ದೇವಸ್ಥಾನಕ್ಕೆ ಬೀಗ ಜಡಿಯಲಾಗಿತ್ತು. ಮಧ್ಯಾಹ್ನ ೧೨ರಿಂದ ಸಂಜೆ ೫ರವರೆಗೆ ದೇವರಿಗೂ ವಿಶ್ರಾಂತಿ! ಅಲ್ಲೇ ಇರುವ ಸರಸ್ವತಿ ದೇವಾಲಯಕ್ಕೆ ಬಾಗಿಲೇ ಇಲ್ಲದಿರುವುದರಿಂದ ಬೀಗ ಹಾಕುವ ಅವಕಾಶ ಇಲ್ಲ. ನಂತರ ವೀರ ನಾರಾಯಣ ದೇಗುಲಕ್ಕೆ ತೆರಳಿದರೆ ಅಲ್ಲೂ ಬೀಗ. ಕುಮಾರವ್ಯಾಸ ಸ್ನಾನ ಮಾಡುತ್ತಿದ್ದ ಕೆರೆಯನ್ನು ನೋಡೋಣವೆಂದರೆ ಅಲ್ಲಿಯೂ ಬೀಗ.


ತ್ರಿಕೂಟೇಶ್ವರ ಮತ್ತು ಸರಸ್ವತಿ ದೇವಾಲಯಗಳು ಒಂದೇ ಪ್ರಾಂಗಣದೊಳಗಿವೆ. ಎಂಟನೇ ಶತಮಾನದಲ್ಲಿ ನಿರ್ಮಿಸಲಾಗಿರುವ ತ್ರಿಕೂಟೇಶ್ವರ ದೇವಾಲಯದಲ್ಲಿ ೩ ಸುಂದರ ಶಿವಲಿಂಗಗಳು ಒಂದೇ ಪೀಠದ ಮೇಲಿವೆ ಎಂದು ಓದಿದ್ದೆ. ಬೀಗ ಹಾಕಿದ್ದರಿಂದ ನೋಡಲು ಆಗಲಿಲ್ಲ. ದೇವಾಲಯ ದೊಡ್ಡದಾಗಿದ್ದು ಸುತ್ತಲೂ ಹೊರಗೋಡೆಯಲ್ಲಿ ಅಪಾರ ಸಂಖ್ಯೆಯ ಕೆತ್ತನೆಗಳನ್ನು ಹೊಂದಿದೆ. ಭೇಟಿ ನೀಡಲೇಬೇಕಾದ ದೇವಸ್ಥಾನ. ಸಮೀಪದಲ್ಲೇ ಬಾವಿಯೊಂದಿದೆ.


ಸರಸ್ವತಿ ದೇವಾಲಯ ಬಹಳ ಸಾಧಾರಣವಾಗಿರುವ ದೇವಾಲಯ. ಆದರೆ ಇಲ್ಲಿರುವ ೬ ಕಂಬಗಳ ಮೇಲಿನ ಕೆತ್ತನೆ ಮಾತ್ರ ಅದ್ಭುತ. ಈ ಕೆತ್ತನೆಗಳನ್ನು ನೋಡಲು ಮಾತ್ರ ಗದಗಕ್ಕೆ ತೆರಳಬೇಕು ಎಂದರೆ ಅತಿಶಯೋಕ್ತಿಯಲ್ಲ. ದ್ವಾರದ ಬಳಿ ಇಕ್ಕೆಲಗಳಲ್ಲಿ ಸುಖನಾಸಿಗೆ ಆಧಾರವಾಗಿರುವ ೨ ಕಂಬಗಳ ಕೆತ್ತನೆ ಮನಸೂರೆಗೊಳ್ಳುತ್ತದೆ. ಈ ಕಂಬಗಳಿಗೆ ಈ ಕೆತ್ತನೆಗಳೇ ಒಂದು ಆಕಾರವನ್ನು ನೀಡಿವೆ.


ನಂತರ ನವರಂಗದ ನಾಲ್ಕು ಕಂಬಗಳು. ಇವುಗಳಲ್ಲಿ ಮೊದಲೆರಡು ಕಂಬಗಳಿಗೆ ಕೆಳಗಡೆಯ ಪ್ರಭಾವಳಿ ಕೆತ್ತನೆಯೊಂದಿಗೆ ಮೇಲಿನಿಂದ ಕೆಳಗಿನವರೆಗೆ ಕೆತ್ತನೆಯ ಭಾಗ್ಯ. ಉಳಿದೆರಡು ಕಂಬಗಳಲ್ಲಿ ಪ್ರಭಾವಳಿ ಕೆತ್ತನೆ ಮಾತ್ರ. ಸುಮಾರು ಅರ್ಧ ತಾಸು ಈ ೬ ಕಂಬಗಳ ಸುತ್ತ ಅಲ್ಲೇ ಗಿರಕಿ ಹೊಡೆಯುತ್ತಾ ಕಾಲ ಕಳೆದೆ. ಮನಮೋಹಕ.


ಸರಸ್ವತಿ ದೇವಾಲಯದ ನವರಂಗ ಮತ್ತು ಸುಖನಾಸಿಗಳ ಹೊರಗೋಡೆಯಲ್ಲೂ ಅಪ್ರತಿಮ ಕೆತ್ತನೆಯ ಕೆಲಸಗಳು. ಇವುಗಳೆಲ್ಲವನ್ನು ನೋಡುತ್ತ ಇನ್ನಷ್ಟು ಸಮಯ ಕಳೆದೆ. ಈ ಕೆತ್ತನೆಗಳು ಆ ಕಂಬಗಳಲ್ಲಿದ್ದ ಕೆತ್ತನೆಗಳಷ್ಟೇ ಸುಂದರವಾಗಿದ್ದು, ಅವುಗಳನ್ನು ಆಯಾ ಜಾಗಗಳಲ್ಲಿ ಅಚ್ಚುಕಟ್ಟಾಗಿ ಕೆತ್ತಿರುವ ಪರಿ ಗಮನ ಸೆಳೆಯುತ್ತದೆ. ೭ ತೋಳುಗಳ ಬಾಗಿಲಿರುವ ಗರ್ಭಗೃಹದಲ್ಲಿ ಸರಸ್ವತಿಯ ಮೂರ್ತಿ ಎತ್ತರದ ಪೀಠದ ಮೇಲೆ ಇದೆ. ಪೀಠ ಮತ್ತು ಮೂರ್ತಿ ಎರಡರ ಒಟ್ಟಾರೆ ಎತ್ತರ ಸುಮಾರು ೫ ಅಡಿಯಷ್ಟು ಇರಬಹುದು. ಸರಸ್ವತಿಯ ಎರಡೂ ಕೈಗಳು ಭಗ್ನಗೊಂಡಿವೆ.


ವೀರನಾರಾಯಣ ದೇವಾಲಯದಲ್ಲಿ ಏನೂ ವಿಶೇಷವಿಲ್ಲ. ಕುಮಾರವ್ಯಾಸ ಇಲ್ಲಿಯೇ ಕುಳಿತು ’ಕುಮಾರಭಾರತ’ ಬರೆದ ಎಂಬುದಕ್ಕಷ್ಟೇ ಇಲ್ಲಿಗೆ ಬರಬೇಕು. ೧೧ನೇ ಶತಮಾನದಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ಈ ದೇವಾಲಯವನ್ನು ನಿರ್ಮಿಸಿದ ಎನ್ನಲಾಗುತ್ತಿದೆ. ನಾರಣಪ್ಪನ ಹುಟ್ಟೂರು ಗದಗ ಸಮೀಪದ ಕೋಳಿವಾಡ. ಇದೇ ನಾರಣಪ್ಪ ನಂತರ ಕುಮಾರವ್ಯಾಸನಾಗಿ ಖ್ಯಾತಿ ಗಳಿಸಿದವ. ’ಗದುಗಿನ ಭಾರತ’ ಅಥವಾ ’ಕುಮಾರಭಾರತ’ವನ್ನು ವೀರ ನಾರಾಯಣ ದೇವಾಲಯದಲ್ಲಿರುವ ’ಕುಮಾರವ್ಯಾಸನ ಸ್ತಂಭ’ ಎಂದು ಕರೆಯಲ್ಪಡುವ ಸ್ತಂಭದ ಕೆಳಗೆ ಕುಳಿತು ಬರೆದವನು. ಈ ದೇವಾಲಯದಲ್ಲಿರುವ ಕೆರೆಯಲ್ಲಿ ಮಿಂದು ಬರುತ್ತಿದ್ದ ಕುಮಾರವ್ಯಾಸ, ಒದ್ದೆಯಾಗಿರುವ ತನ್ನ ಬಟ್ಟೆಗಳು ಒಣಗುವವರೆಗೆ ಮಾತ್ರ ’ಕುಮಾರಭಾರತ’ವನ್ನು ಬರೆಯುತ್ತಿದ್ದ. ತನ್ನ ಬಟ್ಟೆಗಳು ಒಣಗಿದ ಕೂಡಲೇ ಬರೆಯುವುದನ್ನೂ ನಿಲ್ಲಿಸುತ್ತಿದ್ದ. ’ಒದ್ದೆ ಬಟ್ಟೆಯೇ ತನಗೆ ಕುಮಾರಭಾರತ ಬರೆಯಲು ಸ್ಫೂರ್ತಿ’ ಎಂದು ನಾರಣಪ್ಪ ಅಲಿಯಾಸ್ ಕುಮಾರವ್ಯಾಸನ ಮಾತು. ಇಂತಹ ಮಹಾನ್ ವ್ಯಕ್ತಿ ದಿನಾ ಮಿಂದು ಬರುತ್ತಿದ್ದ ಸ್ಥಳ ನೋಡೋಣವೆಂದು ವೀರನಾರಾಯಣ ದೇವಾಲಯದ ಹಿಂಭಾಗಕ್ಕೆ ತೆರಳಿದರೆ ಅಲ್ಲಿ ಬೀಗ ಜಡಿಯಲಾಗಿತ್ತು. ಮೊದಲೇ ದೇವಾಲಯಕ್ಕೆ ಬೀಗ ಹಾಕಿದ್ದು ನೋಡಿ ಆ ಟ್ರಸ್ಟಿನವರಿಗೆ ಉಪದೇಶ ಮಾಡಿದ್ದೆ. ಈಗ ಹಿಂತಿರುಗುವಾಗ ಇನ್ನಷ್ಟು ಖಾರವಾದ ಮಾತುಗಳನ್ನು ಆಡಬೇಕಾಯಿತು. ’ಏ... ಮತ್ತೊಂದ್ಸಲ ಬರ್ರೀ ಸರ...’ ಎನ್ನುವ ಉದಾಸೀನದ ಉತ್ತರ ಮಾತ್ರ ಅವರಿಂದ.

7 ಕಾಮೆಂಟ್‌ಗಳು:

Manjunatha Kollegala ಹೇಳಿದರು...

ಗದುಗಿನಲ್ಲಿ ಇಷ್ಟೊಂದು ವಿಶೇಷಗಳಿವೆ ಎಂದು ತಿಳಿದೇ ಇರಲಿಲ್ಲ. ನಾನು ಹೋದವನು ಕೇವಲ ವೀರನಾರಾಯಣನ ಗುಡಿಗೆ ಮಾತ್ರ ಹೋಗಿ ಬಂದೆ (ಕಳೆದ ಬಾರಿ ನಾನು ಹೋಗಿದ್ದು ಕೂಡ ಕೇವಲ ಅದೆ ಉದ್ದೇಶಕ್ಕಾಗಿ ಅನ್ನಿ). ಮತ್ತೊಮ್ಮೆ ಪ್ರವಾಸೀ ದೃಷ್ಟಿಯಿಂದ ಹೋಗಿಬರಬೇಕು.

ಉತ್ತಮ ಲೇಖನ

Rakesh Holla ಹೇಳಿದರು...

Tumba chennagide Rajesh Sir...

Ashok Uchangi ಹೇಳಿದರು...

ವಿವರಣೆ ಅಮೋಘವಾಗಿದೆ.ತುಂಬಾ ಚೆನ್ನಾಗಿ ಬರೆದಿದ್ದೀರಿ.ಚಿತ್ರಗಳೂ ಉತ್ತಮ
ಅಶೋಕ ಉಚ್ಚಂಗಿ
ಮೈಸೂರು
http://www.mysoremallige01.blogspot.com/

ಸಾಗರದಾಚೆಯ ಇಂಚರ ಹೇಳಿದರು...

ಗದಗ ದಲ್ಲಿ ಇಷ್ಟೊಂದು ಸುಂದರ್ ದೇವಾಲಯ ಇದೆಯಾ
ನೋಡಲೇಬೇಕು
ಸುಂದರ ಫೋಟೋಗಳು ಆಸಕ್ತಿ ಹೆಚ್ಚಿಸಿವೆ
ಧನ್ಯವಾದಗಳು ತಿಳಿಸಿದ್ದಕ್ಕೆ

ರಾಜೇಶ್ ನಾಯ್ಕ ಹೇಳಿದರು...

ಮಂಜುನಾಥ್, ರಾಕೇಶ್, ಗುರು, ಅಶೋಕ್,
ಧನ್ಯವಾದಗಳು. ಗದಗ ಜಿಲ್ಲೆಯಲ್ಲೇ ನೋಡಲು ಬೇಕಾದಷ್ಟು ಪ್ರಾಚೀನ ದೇವಾಲಯಗಳಿವೆ. ಊರಿನ ನಡುವೆ ಇರುವ ಈ ಎರಡು ದೇವಾಲಯಗಳಿಗೆ ಪ್ರವಾಸಿಗರು ಬರುವುದು ಬಹಳ ಕಡಿಮೆ. ಹೆಚ್ಚಿನವರು ವೀರ ನಾರಾಯಣ ದೇಗುಲಕ್ಕೆ ಭೇಟಿ ನೀಡಿ ಹಿಂತಿರುಗುತ್ತಾರೆ.

ಮಿಥುನ ಕೊಡೆತ್ತೂರು ಹೇಳಿದರು...

chennagide

nagaraj dalabhanjan ಹೇಳಿದರು...

ಮೈ ನವಿರೇಳಿಸುವ ಕಲೆ ನಮ್ಮ ಗದಗ ಜಿಲ್ಲೆಯದು.