ಮಂಗಳವಾರ, ಜನವರಿ 26, 2010

ಸಂಗೊಳ್ಳಿ ರಾಯಣ್ಣನ ಸ್ಮರಣೆಯಲ್ಲಿ...


ಸಂಗೊಳ್ಳಿ ರಾಯಣ್ಣ ಅಮರನಾಗಿ ಇಂದಿಗೆ ಸರಿಯಾಗಿ ೧೭೯ ವರ್ಷಗಳಾದವು. ಕಿತ್ತೂರು ಚೆನ್ನಮ್ಮನ ನೆಚ್ಚಿನ ಬಂಟನಾಗಿದ್ದ ರಾಯಣ್ಣ ತೋರಿದ ಧೈರ್ಯ ಮತ್ತು ಶೌರ್ಯ ಬ್ರಿಟಿಷರ ನಿದ್ದೆಗೆಡಿಸಿತ್ತು. ಆತನನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕೆಂದು ಬ್ರಿಟಿಷರು ಹರಸಾಹಸ ಪಡುತ್ತಿದ್ದರು. ಆದರೆ ಚಾಣಾಕ್ಷ ರಾಯಣ್ಣ ಅವರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಕಡೆಗೂ ತನ್ನ ಜೊತೆಗಾರರ ಮೋಸದಿಂದ ರಾಯಣ್ಣ ಬ್ರಿಟಿಷರಿಗೆ ಸೆರೆಸಿಕ್ಕ. ದಿನಾಂಕ ೨೬-೦೧-೧೮೩೧ರಂದು ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ಸಂಗೊಳ್ಳಿ ರಾಯಣ್ಣನ ಬಗ್ಗೆ ನಾನು ಏನು ಬರೆಯುವುದು? ರಾಯಣ್ಣನ ಬಗ್ಗೆ ಎಲ್ಲವನ್ನೂ ರಾಜ್ಯದ ಉತ್ತಮ ಬರಹಗಾರರು ಕಥೆಗಾರರು ಬರೆದಾಗಿದೆ. ನನ್ನದೇನಿದ್ದರೂ ಕನ್ನಡ ನಾಡಿನ ಹೆಮ್ಮೆಯ ಧೀರ ಪುತ್ರನಿಗೆ ಒಂದು ಸಣ್ಣ ನಮನ.

ಉತ್ತರ ಕರ್ನಾಟಕದಲ್ಲಿ ರಾಯಣ್ಣನಿಗೆ ಒಂದು ’ಕಲ್ಟ್’ ಇಮೇಜ್ ಇದೆ. ರಾಯಣ್ಣನ ಬಗ್ಗೆ ಕಥೆಗಳನ್ನು ಓದಿದ್ದೆ. ರಾಯಣ್ಣನ ಬಗ್ಗೆ ನಾಟಕಗಳನ್ನೂ ನೋಡಿದ್ದೆ(ರಾಯಣ್ಣನ ಬಗ್ಗೆ ಕಾದಂಬರಿಯೂ ಇದೆ). ಇಷ್ಟೆಲ್ಲಾ ಆದ ಬಳಿಕ ಬಾಕಿ ಉಳಿದದ್ದು ಆತನ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸುವುದು.


ನಂದಗಡದ ಮೂಲಕ ಈ ಮೊದಲು ೩ ಬಾರಿ ಹಾದುಹೋಗಿದ್ದರೂ ರಾಯಣ್ಣನ ಸಮಾಧಿ ವೀಕ್ಷಿಸಲು ಸಮಯವಿರಲಿಲ್ಲ. ಈ ಬಾರಿ ಅಲ್ಲಿಗೇ ತೆರಳಬೇಕೆಂದು ಪ್ಲ್ಯಾನ್ ಮಾಡಿ ನಂದಗಡ ತಲುಪಿದಾಗ ಸರಿಯಾಗಿ ೧೨ ಗಂಟೆ. ಊರೊಳಗಿನ ರಸ್ತೆಯಲ್ಲಿ ಸ್ವಲ್ಪ ದೂರ ಕ್ರಮಿಸಿದ ಕೂಡಲೇ ರಾಯಣ್ಣನ ಸಮಾಧಿ ಇರುವ ಪ್ರಾಂಗಣ ಸಿಗುತ್ತದೆ. ಪ್ರಾಂಗಣದ ಒಂದು ತುದಿಯಲ್ಲಿ ರಾಯಣ್ಣನ ಸಮಾಧಿ ಇರುವ ಕಟ್ಟೆ ಇದೆ. ಇದರ ಮಗ್ಗುಲಲ್ಲೇ ಒಂದು ದೇವಸ್ಥಾನ. ಸಮಾಧಿಯ ಎದುರೇ ಒಂದು ಸ್ತಂಭವನ್ನು ನಿರ್ಮಿಸಲಾಗಿದೆ. ನಂದಗಡದ (ಅ)ನಾಗರೀಕರಿಗೆ ಈ ಸ್ಥಳದ ಮಹತ್ವದ ಬಗ್ಗೆ ಅಷ್ಟಾಗಿ ಗೊತ್ತಿಲ್ಲವೇನೋ. ಆಡೊಂದನ್ನು ಅಲ್ಲೇ ಕಟ್ಟಿ ಹಾಕಲಾಗಿತ್ತು. ಮಕ್ಕಳು ಸಮೀಪದಲ್ಲೇ ’ಗಿಲ್ಲಿ ದಂಡಾ’ ಆಡುತ್ತಿದ್ದರು. ಸಮಾಧಿಯ ಕಟ್ಟೆ ಮೇಲೆ ಕುಳಿತೇ ಇಸ್ಪೀಟ್ ಆಡುತ್ತಾರೆ ಎಂದು ಇಲ್ಲಿಗೆ ಮೊದಲೇ ಭೇಟಿ ನೀಡಿದ್ದ ಗೆಳೆಯ ವಿವೇಕ್ ಯೇರಿ ತಿಳಿಸಿದ್ದರು.


ನಂದಗಡದಂತಹ ಊರಿನಲ್ಲಿ ನಮಗೆ ನೋಡಲು ಏನಿದೆ ಎಂದು ನಮ್ಮ ವಾಹನ ಚಾಲಕ ಪ್ರವೀಣನ ಪ್ರಶ್ನೆ. ’ರಾಯಣ್ಣನ ಸಮಾಧಿ’ ಎಂದ ಕೂಡಲೇ ಅತ ಪುಳಕಿತನಾದ. ರಾಯಣ್ಣನ ಮಹಾಭಕ್ತನಾದ ಪ್ರವೀಣನಿಗೆ ಈಗ ಸಮಾಧಿ ನೋಡಲು ನನಗಿಂತ ಹೆಚ್ಚು ಆಸಕ್ತಿ! ಪ್ರಾಂಗಣದಲ್ಲಿ ೩ ಆಲದಮರಗಳಿವೆ. ಇವುಗಳಲ್ಲಿ ಒಂದು ರಾಯಣ್ಣನ ಸಮಾಧಿ ಇರುವ ಕಟ್ಟೆಯ ಮೇಲೇ ಇದ್ದರೆ, ಉಳಿದೆರಡು ಪ್ರಾಂಗಣದ ಇನ್ನೆರಡು ಮೂಲೆಗಳಲ್ಲಿದ್ದವು. ಕಟ್ಟೆಯ ಮೇಲೆ ಇರುವ ಆಲದಮರಕ್ಕೇ ರಾಯಣ್ಣನನ್ನು ನೇಣಿಗೆ ಹಾಕಿರಬೇಕು ಎಂದು ನಾನು ಊಹಿಸಿದಾಗ, ’ಯಾವ ಗೆಲ್ಲಿಗೆ’ ಎಂಬ ಪ್ರಶ್ನೆ ಪ್ರವೀಣನಿಂದ.


ಅಲ್ಲೇ ಆಡುತ್ತಿದ್ದ ಮಕ್ಕಳಲ್ಲಿ ಪ್ರವೀಣ, ’ಯಾವ ಗೆಲ್ಲಿಗೆ ರಾಯಣ್ಣನನ್ನು ನೇಣು ಹಾಕಿದ್ದರು’ ಎಂದು ಕೇಳಿದಾಗಲೇ ನಮಗೆ ತಿಳಿದುಬಂದದ್ದು - ಊರಿನ ಹೊರಗೆ ಇರುವ ಆಲದಮರವೊಂದಕ್ಕೆ ರಾಯಣ್ಣನನ್ನು ನೇಣು ಹಾಕಿದ ಬಳಿಕ ದೇಹವನ್ನು ಇಲ್ಲಿ ಹೂಳಲಾಗಿದ್ದು ಮತ್ತು ಕಟ್ಟೆಯ ಮೇಲಿರುವ ಆಲದಮರವನ್ನು ನಂತರ ನೆಡಲಾಗಿತ್ತು ಎಂದು. ಅಲ್ಲೇ ಇರುವ ಮಾಹಿತಿ ಫಲಕದಲ್ಲಿ ರಾಯಣ್ಣನ ಬಗ್ಗೆ ಸಂಕ್ಷಿಪ್ತವಾಗಿ ವಿವರ ನೀಡಲಾಗಿದೆ. ಇಲ್ಲಿ ಬರೆಯಲಾಗಿರುವ ಪ್ರಕಾರ ರಾಯಣ್ಣನ ಆತ್ಮೀಯ ಗೆಳೆಯನಾಗಿದ್ದ ’ಬಿಚ್ಚುಗತ್ತಿ ಚನ್ನಬಸಪ್ಪ’ ಎಂಬವನು ಮಾರುವೇಷದಲ್ಲಿ ಬಂದು ರಾಯಣ್ಣನ ಸಮಾಧಿಯ ಮೇಲೆ ಒಂದು ಅಲದ ಸಸಿಯನ್ನು ನೆಟ್ಟ. ಆ ಸಸಿಯೇ ಇಂದು ಬೃಹತ್ ಆಲದ ಮರವಾಗಿ ಬೆಳೆದು ರಾಯಣ್ಣನ ಸಮಾಧಿಗೆ ನೆರಳು ನೀಡುತ್ತಿದೆ. ಈ ಆಲದ ಮರಕ್ಕೆ ಈಗ ೧೭೯ ವರ್ಷ ವಯಸ್ಸು.


ಊರ ಹೊರಗಿರುವ ಆಲದಮರದೆಡೆ ತೆರಳಿದೆವು. ಮೂಲ ಆಲದಮರ ಎಂದೋ ಅವಸಾನ ಕಂಡಿದೆ. ಈಗ ಇರುವುದು ಅದರ ಮಕ್ಕಳು ಮತ್ತು ಮೊಮ್ಮಕ್ಕಳು. ಇಲ್ಲೂ ಪ್ರವೀಣನಿಗೆ ರಾಯಣ್ಣನನ್ನು ನೇಣು ಹಾಕಿದ ಗೆಲ್ಲು ಯಾವುದು ಎಂದು ಹುಡುಕುವ ತವಕ! ಸಮಾಧಿಯ ಬಳಿ ಇರುವ ಫಲಕವನ್ನೂ ಇಲ್ಲೂ ಹಾಕಲಾಗಿದೆ. ತುಂಬಾ ಶಾಂತ ಪರಿಸರ. ಆಲದಮರವೊಂದನ್ನು ಬಿಟ್ಟು ಬೇರೆ ಯಾವ ಮರವೂ ಸನಿಹದಲ್ಲಿಲ್ಲ. ಆಲದಮರದ ಬುಡಕ್ಕೇ ಒಂದು ಅತಿ ಸಣ್ಣ ಗುಡಿಯಿದೆ. ಊರಿನವರು ಪ್ರತಿ ದಿನ ಇಲ್ಲೊಂದು ದೀಪ ಹಚ್ಚುತ್ತಾರೆ. ನಾವು ತೆರಳಿದಾಗ ಯುವಕನೊಬ್ಬ ದೀಪ ಹಚ್ಚಲು ಬಂದಿದ್ದ. ದೀಪ ಹಚ್ಚಿ, ತೆಂಗಿನಕಾಯಿ ಒಡೆದು, ಅರ್ಧ ತೆಂಗಿನಕಾಯಿ ನಮಗೆ ನೀಡಿದ. ಆ ಶಾಂತ ಪರಿಸರದಲ್ಲಿ ಸ್ವಲ್ಪ ಹೊತ್ತು ಕಳೆದೆವು. ಪ್ರವೀಣನಂತೂ ರಾಯಣ್ಣನ ಗುಣಗಾನ ಮಾಡುವುದರಲ್ಲೇ ಮಗ್ನನಾಗಿದ್ದ.


೧೯೬೯ರಲ್ಲಿ ರಾಯಣ್ಣನ ಬಗ್ಗೆ ಚಲನಚಿತ್ರವೊಂದನ್ನು ನಿರ್ಮಿಸಲಾಗಿತ್ತು. ಈ ವರ್ಷದ ಕೊನೆಯಲ್ಲಿ ತೆರೆ ಕಾಣುವಂತೆ ಇನ್ನೊಂದು ಚಲನಚಿತ್ರವನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕ ಸರಕಾರ ರಾಯಣ್ಣನ ಸಮಾಧಿ, ನೇಣಿಗೇರಿಸಿದ ಆಲದಮರ, ಆತನನ್ನು ಸೆರೆ ಹಿಡಿದ ಸ್ಥಳವಾದ ಡೋರಿಹಳ್ಳ (ಅಳ್ನಾವರ ಸಮೀಪದಲ್ಲಿದೆ) ಮತ್ತು ಸಂಗೊಳ್ಳಿಯಲ್ಲಿರುವ (ಕಿತ್ತೂರಿನಿಂದ ೧೮ ಕಿ.ಮಿ. ದೂರದಲ್ಲಿದೆ) ರಾಯಣ್ಣನ ಸ್ಮಾರಕ ಉದ್ಯಾನಗಳನ್ನು ಉತ್ತಮ ಪ್ರವಾಸ ತಾಣಗಳನ್ನಾಗಿ ಮಾಡುವುದರಲ್ಲಿ ಯಾವುದೇ ಆಸಕ್ತಿಯನ್ನು ತೋರಿಸಿಲ್ಲ. ರಾಯಣ್ಣನ ಬಗ್ಗೆ ರಾಜ್ಯದ ಎಷ್ಟು ಜನರಿಗೆ ಗೊತ್ತಿದೆ? ಪಠ್ಯ ಪುಸ್ತಕಗಳಲ್ಲಿ ಆತನ ಬಗ್ಗೆ ಪಾಠಗಳಿವೆಯೇ? ಬೆಂಗಳೂರಿನಲ್ಲಿ ರಾಯಣ್ಣನ ಪ್ರತಿಮೆಯೊಂದನ್ನು ನಿರ್ಮಿಸಬೇಕೆಂಬ ಉತ್ತರ ಕರ್ನಾಟಕದ ಜನರ ಆಸೆ ಇನ್ನೂ ಈಡೇರಿಲ್ಲ. ನಂದಗಡದಲ್ಲಿ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಮಿ ಒಳಗೆ ರಾಯಣ್ಣನ ಸಮಾಧಿ ಇದೆ. ಇಲ್ಲಿ ಯಾವುದೇ ಫಲಕಗಳಿಲ್ಲ. ನಂದಗಡದಲ್ಲಿ ಇತ್ತೀಚೆಗೆ ರಾಯಣ್ಣನ ಸುಂದರ ಪ್ರತಿಮೆಯೊಂದನ್ನು ಅನಾವರಣ ಮಾಡಲಾಗಿದೆ. ರಾಯಣ್ಣನನ್ನು ನೇಣಿಗೇರಿಸಿದ ಆಲದಮರದೆಡೆ ತೆರಳಲು ಇರುವ ರಸ್ತೆಯಲ್ಲಿರುವ ಕಮಾನಿಗೆ ತುಕ್ಕು ಹಿಡಿದು ಅದರಲ್ಲಿ ಬರೆಯಲಾಗಿರುವುದನ್ನು ಓದಲು ಸಾಧ್ಯವಿಲ್ಲ.


ಸಂಗೊಳ್ಳಿ ರಾಯಣ್ಣ ೩೫ರ ಯುವ ಹರೆಯದಲ್ಲೇ ಅಮರನಾದ. ಕನ್ನಡ ನಾಡು ಕಂಡ ಅಪ್ರತಿಮ ಧೀರರಲ್ಲಿ ರಾಯಣ್ಣನೂ ಒಬ್ಬ. ರಾಯಣ್ಣ ಹುಟ್ಟಿದ ದಿನ ಮತ್ತು ಅಮರನಾದ ದಿನ ನಮಗೆ ರಜೆ ಸಿಗಬೇಕೆಂದು ಅದಾಗಲೇ ವಿಧಿಯು ನಿರ್ಧರಿಸಿಯಾಗಿತ್ತೇನೋ. ಬ್ರಿಟಿಷರು ರಾಯಣ್ಣನನ್ನು ಜನವರಿ ೨೬ರಂದು ನೇಣಿಗೇರಿಸಿದರು. ೧೧೯ ವರ್ಷಗಳ ಬಳಿಕ ಅದೇ ದಿನದಂದು ಭಾರತ ಗಣರಾಜ್ಯವಾಯಿತು. ರಾಯಣ್ಣನನ್ನು ನೇಣು ಹಾಕಿದ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದು ಅಗೋಸ್ಟ್ ೧೫ ರಂದು. ರಾಯಣ್ಣ ಹುಟ್ಟಿದ್ದೂ ಅದೇ ದಿನದಂದು, ೧೫೧ ವರ್ಷಗಳ ಮೊದಲು! ಯಾರೂ ನೀಡದ ಗೌರವವನ್ನು ಕೆಲವೊಮ್ಮೆ ವಿಧಿ ನೀಡುತ್ತದೆಯಂತೆ.

ರಾಯಣ್ಣನ ಬಗ್ಗೆ ಲೇಖನವನ್ನು ಇಲ್ಲಿ ಓದಬಹುದು.

16 ಕಾಮೆಂಟ್‌ಗಳು:

sunaath ಹೇಳಿದರು...

ರಾಜೇಶ,
ಉತ್ತಮವಾದ ಲೇಖನ.
ಒಂದು ಸ್ವಾರಸ್ಯಕರ ವಿಚಾರ:
ರಾಯಣ್ಣನ ಜನನ: ಅಗಸ್ಟ ೧೫ರಂದು.
ರಾಯಣ್ಣನ ಮರಣ: ಜನೆವರಿ ೨೬ರಂದು.
Co-incidence ಎನ್ನಬಹುದೆ?

ಸಾಗರದಾಚೆಯ ಇಂಚರ ಹೇಳಿದರು...

ರಾಯಣ್ಣನ ಬಗ್ಗೆ ಉಪಯುಕ್ತ ಮಾಹಿತಿ ತಿಳಿಸಿದ್ದಿರಿ
ಫೋಟೋ ಗಳಂತೂ ಸೂಪರ್

ರಾಜೇಶ್ ನಾಯ್ಕ ಹೇಳಿದರು...

ಸುನಾಥ್, ಗುರು,
ಧನ್ಯವಾದ.

Srik ಹೇಳಿದರು...

wow! Amazing piece of information. Sangolli Rayanna is an unsung hero of our golden past, Thanks a lot to you for fetching his story from a lost page and brilliantly portraying it to us.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ಧನ್ಯವಾದಗಳು. ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಚಾರ ಕಡಿಮೆ. ಕರ್ನಾಟಕ ಸರಕಾರ ಅತೀವ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದೆ. ಧೈರ್ಯ ಶೌರ್ಯ ತೋರಿದ ಸಂಗೊಳ್ಳಿಯನ್ನು ಬದಿಗಿಟ್ಟು ಮತಾಂಧರನ್ನು ’ಹುಲಿ’ ಎಂದು ಪ್ರಚಾರ ನೀಡಿ ಪ್ರಮೋಟ್ ಮಾಡಲಾಗುತ್ತಿದೆ.

santhosh devananda ಹೇಳಿದರು...

thanx for writing the article about an unsung hero...

harish ಹೇಳಿದರು...

very good article on sangolli rayanna but what about his decendants i think they are still living in penury do you have any idea

vijay ಹೇಳಿದರು...

ಸಂಗೊಳ್ಳಿ ರಾಯಣ್ಣ ಒಬ್ಬ ವೀರಸೇನಾನಿ, ತಾಯ್ನಾಡಿಗಾಗಿ ಪ್ರಬಲ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯಶಾಲಿ ಇಂಥಹ ರಾಯಣ್ಣನನ್ನು ಈ ದಿನಗಳಲ್ಲಿ ನಿರ್ಲಕ್ಷಿಸಲಾಗಿದೆ. ಹಾಗೂ ಹೆಚ್ಚಿನ ಪ್ರಬಲರಲ್ಲದವರನ್ನು ಪ್ರಬಲರೆಂಬಂತೆ ಬಿಂಬಿಸಲಾಗುತ್ತದೆ.

ravi ಹೇಳಿದರು...

awsome article sir wer we find images of rayanna

ravi ಹೇಳಿದರು...

good artical

beerappa ಹೇಳಿದರು...

what a great man. I don't have any words to tell about this note. I just want to see that place.

ರಾಜೇಶ್ ನಾಯ್ಕ ಹೇಳಿದರು...

ಸಂತೋಷ್,
ಧನ್ಯವಾದ.

ಹರೀಶ್,
ಧನ್ಯವಾದ. ರಾಯಣ್ಣನ ವಂಶಸ್ಥರ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ.

ವಿಜಯ್, ರವಿ, ಬೀರಪ್ಪ,
ಧನ್ಯವಾದ.

ravi ಹೇಳಿದರು...

GvÀÛªÀĪÁzÀ «ZÁgÀUÀ¼ÀÄ ¥Àæ¸ÁÛ¥ÀªÁVªÉ

ಅನಾಮಧೇಯ ಹೇಳಿದರು...

ರಾಯಣ್ಣನ ದೇಶಭಕ್ತಿ ಸ್ವಾಮಿನಿಷ್ಠ ತ್ಯಾಗ ಇಂದಿನ ಯುವ ಜನಾಂಗಕ್ಕೆ ಮಾದರಿ. ಆನಂದ ಕುಮಾರ್

shivu s ಹೇಳಿದರು...

ರಾಯಣ್ಣನ ಬಗ್ಗೆ ಲೇಖನವನ್ನು ಬರೆದು ಓದುಗರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಹೃದಯ ಪೂರ್ವಕ ಧನ್ಯವಾದಗಳು

ರಾಜೇಶ್ ನಾಯ್ಕ ಹೇಳಿದರು...

ರವಿ, ಆನಂದ, ಶಿವು
ಧನ್ಯವಾದ.