ಭಾನುವಾರ, ನವೆಂಬರ್ 15, 2009

ನೇತ್ರಾವತಿ ನದಿ ತಿರುವು ಯೋಜನೆ - ೧

ಗೆಳೆಯ ದಿನೇಶ್ ಹೊಳ್ಳ ಬರೆದಿರುವ ಈ ಲೇಖನವನ್ನು ಯಾವುದೇ ಬದಲಾವಣೆ ಇಲ್ಲದೆ ಇಲ್ಲಿ ಹಾಕಿದ್ದೇನೆ. ಸುಮಾರು ಎರಡು ವರ್ಷಗಳ ಹಿಂದೆ ವಾರಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನವಿದು. ಒಂದು ನದಿಯನ್ನು ಕೋಟಿ ಕೋಟಿ ಖರ್ಚು ಮಾಡಿ ನಿರ್ನಾಮಗೊಳಿಸಲು ತಯಾರಿ ನಡೆದಿದೆ. ಈ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಚಾರ್ಮಾಡಿ ಮತ್ತು ಶಿರಾಡಿ ಘಟ್ಟ ಪ್ರದೇಶದ ಇಂಚಿಂಚೂ ಗೊತ್ತಿರುವ ದಿನೇಶ್ ಹೊಳ್ಳ ಈ ಲೇಖನವನ್ನು, ನೇತ್ರಾವತಿ ನದಿ ತಿರುವು ಯೋಜನೆಯನ್ನು ಸಿದ್ದಪಡಿಸಿರುವವರಂತೆ ಎಲ್ಲೋ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು, ನದಿಯ ಉದ್ದಗಲಕ್ಕೆ ಓಡಾಡದೇ ಬರೆದಿಲ್ಲ. ಬದಲಾಗಿ ಖುದ್ದಾಗಿ ನೇತ್ರಾವತಿಯ ಉಗಮ ಸ್ಥಾನಕ್ಕೆ ಭೇಟಿ ನೀಡಿ (ನಾವಿಬ್ಬರೇ ಈ ಸ್ಥಳಕ್ಕೆ ತೆರಳಿದ್ದೆವು), ನದಿಯ ಉದ್ದಗಲಕ್ಕೆ ಓಡಾಡಿ, ಚಾರ್ಮಾಡಿ ಮತ್ತು ಶಿರಾಡಿ ಘಟ್ಟ ಪ್ರದೇಶಗಳಲ್ಲಿರುವ ನೇತ್ರಾವತಿಯ ಉಪನದಿಗಳ ಹಾದಿಯನ್ನೂ ಹಿಂಬಾಲಿಸಿ, ಈ ಲೇಖನವನ್ನು ಬರೆದಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಈ ಲೇಖನ ಬಂದಿದೆ. ಈಗ ಡಿಸೆಂಬರ್ ೨೦೦೯ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ತುಳು ಸಮ್ಮೇಳನದ ಅಂಗವಾಗಿ ಹೊರಬರಲಿರುವ ಪುಸ್ತಕದಲ್ಲೂ ಈ ಲೇಖನ ಪ್ರಕಟಗೊಳ್ಳಲಿದೆ. ಈ ಲೇಖನವನ್ನು ಓದದೇ ಇರುವವರಿಗೆ ಅನುಕೂಲವಾಗಲೆಂದು ಇಲ್ಲಿ ಹಾಕಿರುವೆ. ಈ ಲೇಖನವನ್ನು ಇಲ್ಲಿ ಪ್ರಕಟಿಸಲು ಅನುಮತಿ ನೀಡಿದ ದಿನೇಶ್ ಹೊಳ್ಳರಿಗೆ ಧನ್ಯವಾದಗಳು.
ನೀರು ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನ. ಪ್ರಕೃತಿಯು ನಮಗೆ ಕೊಟ್ಟಿರುವ ಬೃಹತ್ ಕೊಡುಗೆಗಳಲ್ಲಿ ಈ ನೆಲದ ಜಲವು ಪ್ರಮುಖವಾದುದು. ಬೆಳಿಗ್ಗೆ ಎದ್ದು ಹಲ್ಲುಜ್ಜುವಲ್ಲಿಂದ ರಾತ್ರಿ ಮಲಗುವ ತನಕ ಅತ್ಯಗತ್ಯವಾಗಿರುವ ನೀರು ದಿನಕ್ಕೆ ಒಬ್ಬ ವ್ಯಕ್ತಿಗೆ ೧೦೦ ಲೀಟರಿನಷ್ಟು ಅಗತ್ಯ. ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಆಧುನಿಕ ಜಗತ್ತಿನ ಯಾವುದೇ ಬೃಹತ್ ನಗರದಲ್ಲಿ ಪ್ರತಿ ದಿನ ೧,೦೫,೦೦೦ ಮಿಲಿಯನ್ ಲೀಟರ್ ನೀರು ವ್ಯಯವಾಗುತ್ತಿದೆ. ಮಾನವ ನಿರ್ಮಿತ ಈ ಆಧುನಿಕ ಸಾಮ್ರಾಜ್ಯದಲ್ಲಿ ಇಂದು ಭೂಮಿಯಲ್ಲಿ ಇಂಗುವ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ನಾವು ಬಳಸುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಾ ಬರುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಾಗಬೇಕಾದರೆ ಧರೆಯ ಜೀವಧಾರೆಗಳಾದ ನದಿಗಳು ತುಂಬಿ ಹರಿಯುತ್ತಿರಬೇಕು. ನದಿಗಳೆಂದರೆ ನಾಡಿನ ಭವ್ಯ ಸಂಸ್ಕೃತಿಯನ್ನು ಬೆಳೆಸಿದ ತೊಟ್ಟಿಲುಗಳು. ನದಿಗಳೆಂದರೆ ಸಾರಸ್ಯಕರ ಐತಿಹ್ಯದ ಮೆಟ್ಟಿಲುಗಳು. ನದಿಗಳೆಂದರೆ ನಾಡಿನ ಜಲಸಂಪತ್ತಿನ ನಾಡಿಗಳು.

ಕರಾವಳಿ ಜಿಲ್ಲೆಗಳೆಂದರೆ ಒಂದು ಕಡೆ ವಿಶಾಲವಾಗಿ ಅಬ್ಬರಿಸುವ ಅರಬ್ಬಿ ಶರಧಿ. ಇನ್ನೊಂದು ಕಡೆ ವಿಶಾಲವಾಗಿ ಹರಡಿರುವ ಪಶ್ಚಿಮ ಘಟ್ಟಗಳ ಸರದಿ. ಈ ಶರಧಿಗೂ ಬೆಟ್ಟಗಳ ಸರದಿಗೂ ಒಂದು ಅವಿಚ್ಛಿನ್ನ ನೈಸರ್ಗಿಕ ಸಂಬಂಧವಿದೆ. ಪ್ರಪಂಚದ ೧೮ ಜೀವವೈವಿಧ್ಯ ಸಂರಕ್ಷಣಾ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳು ಮತ್ತು ಅಲ್ಲಿನ ಶೋಲಾ ಕಾಡುಗಳು ಹೊಳೆಗಳ ಹರಿವಿನ ಪಾತ್ರಧಾರಿಯಾಗಿರುತ್ತದೆ.

ಕರಾವಳಿಯ ಪ್ರಮುಖ ನದಿಗಳಲ್ಲಿ ನೇತ್ರಾವತಿ ನದಿಯು ಪ್ರಧಾನವಾಗಿದೆ. ನೇತ್ರಾವತಿ ನದಿಯನ್ನೇ ಆಶ್ರಯಿಸಿ ಬದುಕು ಸಾಗಿಸುವ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಿಗೆ, ಗ್ರಾಮೀಣ ಹಾಗೂ ನಗರವಾಸಿಗಳಿಗೆ ಇದು ಜೀವನದಿ. ಈ ನದಿಯಲ್ಲಿ ಜಿಲ್ಲೆಯ ಜನರ ಉಸಿರಾಟವಿದೆ. ೧೪೮ ಕಿ.ಮಿ. ಉದ್ದ ಹಾಗೂ ೪೨೫೬.೮೦ ಚದರ ಕಿ.ಮಿ. ವ್ಯಾಪ್ತಿಯಷ್ಟು ಜಲಾನಯನ ಪ್ರದೇಶ ಹೊಂದಿರುವ ನೇತ್ರಾವತಿ ನದಿಯು ಸಮುದ್ರ ಮಟ್ಟದಿಂದ ೧೬೮೯ ಮೀಟರ್ ಎತ್ತರದ ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಅರಣ್ಯ ವಲಯದ ಸಂಸೆ ಎಂಬಲ್ಲಿ ಉಗಮವಾಗುತ್ತದೆ. ಇದರ ಪ್ರಮುಖ ಉಪನದಿ ಕುಮಾರಧಾರ ಹೊಳೆ ಸುಬ್ರಹ್ಮಣ್ಯ ಸಮೀಪದ ೧೨೩೦ ಮೀಟರ್ ಎತ್ತರದ ಕುಮಾರ ಪರ್ವತದಲ್ಲಿ ಉಗಮವಾಗಿ ಉಪ್ಪಿನಂಗಡಿಯಲ್ಲಿ ಇವೆರಡು ಸಂಗಮವಾಗಿ ಮಂಗಳೂರಿನಲ್ಲಿ ಸಾಗರ ಸಂಗಮವಾಗುತ್ತದೆ. ಈ ಎರಡು ಪ್ರಮುಖ ನದಿಗಳಿಗೆ ಎಂಟು ಉಪನದಿಗಳಿವೆ. ಈ ಎಲ್ಲಾ ಉಪನದಿಗಳು ಪಶ್ಚಿಮ ಘಟ್ಟದ ಹಲವು ಮೂಲೆಗಳಲ್ಲಿ ಉಗಮಿಸಿ ನೇತ್ರಾವತಿಯನ್ನು ಸೇರುತ್ತದೆ.

ಈ ಎಲ್ಲಾ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ.

೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ.
೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು.
೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ.
೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ.
೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ.
೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ.
೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ.
೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ.
೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ.

ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳುವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ.

ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ.

ಇಂತಹ ಪೂರಕ ವಾತಾವರಣದಲ್ಲಿ ಹರಿಯುತ್ತಿರುವ ನೇತ್ರಾವತಿಗೆ ಇಂದು ನಿಸರ್ಗ ದುರಂತವನ್ನು ಆಹ್ವಾನಿಸುವಂತಹ ಕರಾಳ ಛಾಯೆಯೊಂದು ಆವರಿಸುತ್ತಿದೆ. ನೇತ್ರಾವತಿಯನ್ನು ಅದರ ಮೂಲ ಸ್ಥಾನದಿಂದಲೇ ಪೂರ್ವಾಭಿಮುಖವಾಗಿ ತಿರುಗಿಸಿ ಬಯಲುಸೀಮೆಗೆ ನೀರು ಹರಿಸುವ ಅಸಂಬದ್ಧ ಯೋಜನೆಯೊಂದು ಸರಕಾರದ ಮುಂದೆ ಇದೆ.

ರೈಲ್ವೇ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ೧೨,೫೦೦ ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಯಿಂದಾಗಿ ಅತ್ತ ಬಯಲುಸೀಮೆಗೂ ನೀರು ಹರಿಯದೆ ಇತ್ತ ಕರಾವಳಿ ಪ್ರದೇಶಕ್ಕೂ ನೀರಿಲ್ಲದೆ ನೇತ್ರಾವತಿ ನದಿಯ ಅಸ್ಥಿತ್ವಕ್ಕೆ ಧಕ್ಕೆ ತರುವ ಯೋಜನೆ ಇದಾಗಿದೆ.

ಭೂಮಿಯ ಮೇಲಿನ ಅರಣ್ಯ, ನದಿ, ಪರ್ವತ, ವನ್ಯಜೀವಿಗಳನ್ನು ಅವುಗಳಷ್ಟಕ್ಕೇ ಅವನ್ನು ನೆಮ್ಮದಿಯಾಗಿರುವಂತೆ ಬಿಡಬೇಕೇ ಹೊರತು ಮಾನವ ಹಸ್ತಕ್ಷೇಪದಿಂದ ಅವಿವೇಕ ನಿರ್ಣಯಗಳನ್ನು ಕೈಗೊಂಡು ಅವುಗಳ ಸ್ವೇಚ್ಛಾಚಾರಕ್ಕೆ ಭಂಗ ಬಂದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಬಹುದು. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ.

ಹಿಂದೆ ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ನೇತ್ರಾವತಿ ಈಗ ಮಳೆಗಾಲದ ಕೊನೆಯಲ್ಲೇ ಬಡಕಲಾಗುತ್ತಿದೆ. ಹೂಳು ತುಂಬಿ ಆಳವನ್ನು ಕಳಕೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ಈ ಪರಿಸರ ವಿನಾಶಕ ಯೋಜನೆಯಿಂದ ನೇತ್ರಾವತಿ ನದಿಯೇ ಇಲ್ಲದಂತಾಗಬಹುದು. ಈ ನೆಲದ ಜಲವನ್ನು ಸದುಪಯೋಗ ಪಡೆಯಲು ಸರ್ವರೂ ಅರ್ಹರು ನಿಜ. ಆದರೆ ನದಿಯನ್ನು ತಿರುಗಿಸಿ ನದಿಯೇ ಅಳಿದುಹೋದರೆ ನಾವು ರಾಜ್ಯದ ಒಂದು ನದಿಯನ್ನೇ ಕಳೆದುಕೊಳ್ಳಬೇಕಾಗಬಹುದು. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ.

ಮುಗಿಲೆತ್ತರಕ್ಕೆ ನಿಂತ ಪರ್ವತ, ಅಲ್ಲೊಂದಷ್ಟು ಅರಣ್ಯ, ಅರಣ್ಯದಿಂದ ಉಗಮಿಸುವ ನದಿ, ಈ ನದಿ ವಿಶಾಲವಾಗಿ ಹರಡಿ ಹರಿದು ಸಾಗರ ಸೇರುವುದು ಇದು ನಿಸರ್ಗ ನಿಯಮ. ಇದರ ಹಕ್ಕು ಸ್ವಾಮ್ಯವನ್ನು ಪಡೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಈ ನಿಸರ್ಗ ನಿಯಮವನ್ನು ಮುರಿದು ನಮ್ಮ ಹಕ್ಕು, ಅಧಿಕಾರವನ್ನು ನದಿಯ ಮೇಲೆ ದಬ್ಬಾಳಿಸಿದರೆ ಅದರ ಹಿಂದೆ ಒಂದು ಘೋರ ದುರಂತವಿದೆ ಎಂದೇ ಅರ್ಥ.

ಮುಂದುವರಿದಿದೆ ಭಾಗ ೨ರಲ್ಲಿ

4 ಕಾಮೆಂಟ್‌ಗಳು:

sunaath ಹೇಳಿದರು...

ನೇತ್ರಾವತಿ ನದಿ ತಿರುವಿಸುವಿಕೆಯ ಬಗೆಗೆ ಕೇಳಿದ್ದೆ. ಆದರೆ ವಿವರಗಲು ಗೊತ್ತಿರಲಿಲ್ಲ. ಸವಿವರ ಲೇಖನವನ್ನು ಬರೆದ ಶ್ರೀ ದಿನೇಶ ಹೊಳ್ಳ ಅವರಿಗೂ, ಇಲ್ಲಿ ಪ್ರಕಟಿಸಿದ ನಿಮಗೂ ಧನ್ಯವಾದಗಳು.

Aravind GJ ಹೇಳಿದರು...

ಒಂದು ಅತ್ಯುತ್ತಮ ಲೇಖನ... ಬಯಲು ಸೀಮೆಗೆ ನೀರು ಹರಿಸಲು ಹೋಗಿ ಮಲೆನಾಡೆ ಬಯಲಾಗುವಂತಹ ಯೋಜನೆ.

ಇರುವ ನೀರನ್ನು ಸರಿಯಾಗಿ ಉಪಯೋಗಿಸಿಕೊಂಡು ಕೆರೆ ಜಲಾಶಯಗಳ ಹೂಳೆತ್ತಿದರೆ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತದೆ.

ಸತೀಶ ಹೇಳಿದರು...

ಅತ್ಯುತ್ತಮ ಲೇಖನ
edakkee ಪರಿಹಾರ ? mean to say is this project suspended or dropped..

sudheer kumar ಹೇಳಿದರು...

ನೇತ್ರಾವತಿ ನದಿ ತಿರುವು ಯೋಜನೆಯ ಹೊಳ್ಳರು ರಚಿಸಿದ ಚಿತ್ರ ವನ್ನ ಸಹ ಹಾಕಿ.ಲೇಖನದ ಬಗೆ ೨ ಮಾತಿಲ್ಲ.