ಶನಿವಾರ, ಆಗಸ್ಟ್ 01, 2009

’ಕಮಾನು’ ಜಲಧಾರೆ


ಜುಲಾಯಿ ೧೯, ೨೦೦೯.

ಜಲಧಾರೆಯೊಂದನ್ನು ನೋಡುವ ಸಲುವಾಗಿ ಹಳ್ಳಿಯೊಂದನ್ನು ತಲುಪಿದೆವು. ಆದರೆ ಈ ಜಲಧಾರೆಗೆ ದಾರಿ ಗೊತ್ತಿದ್ದ ಒಬ್ಬನೇ ವ್ಯಕ್ತಿಗೆ ನಾವು ಬರುವ ಬಗ್ಗೆ ಮಾಹಿತಿ ತಲುಪಿರದ ಕಾರಣ ಆತ ಬೇರೆ ಊರಿಗೆ ಕೆಲಸದ ಮೇಲೆ ಹೋಗಿಯಾಗಿತ್ತು. ನಮ್ಮ ಮಜಬೂತಾದ ವಾಹನ, ನಮ್ಮ ದಿರಿಸುಗಳು, ಕ್ಯಾಮರಾ ಹಿಡಿದುಕೊಂಡು ಆಚೀಚೆ ಓಡಾಡುವ ಪರಿ ಕಂಡು ಹಳ್ಳಿಗರಲ್ಲಿ ಕೆಲವರು ’ಇಲ್ಲಿ ಡ್ಯಾಮ್ ಕಟ್ಟಲು ಸರ್ವೇ ಮಾಡಲು ಬಂದಿದ್ದೀರಾ?’ ಎಂದು ನೇರವಾಗಿ ಕೇಳಿಯೇಬಿಟ್ಟರು. ಈ ಪ್ರಶ್ನೆಯ ಅನುಭವ ನಮಗೆ ಬೇರೆಡೆಯೂ ಆಗಿತ್ತು ಮತ್ತು ಇಲ್ಲೂ ನಾವದನ್ನು ನಿರೀಕ್ಷಿಸಿದ್ದೆವು. ಸರಿಯಾದ ಉತ್ತರ ನೀಡಿ ನಂತರ ಪ್ರಶ್ನೆ ಕೇಳಿದವರೇ ಮಾರ್ಗದರ್ಶಕರಾಗಿ ಬಂದಿದ್ದೂ ಇದೆ. ನಮ್ಮ ಉತ್ತರದಿಂದ ನಾವು ಕೇವಲ ಚಾರಣಕ್ಕೆಂದೇ ಬಂದವರೆಂದು ಅವರಿಗೆ ಮನದಟ್ಟಾಯಿತು. ಆದರೆ ಇಲ್ಲಿ ಮಾರ್ಗದರ್ಶಕರಾಗಿ ಬರಲು ಅವರಲ್ಲಿ ಯಾರಿಗೂ ಜಲಧಾರೆಯ ಬಗ್ಗೆ ಗೊತ್ತಿರಲಿಲ್ಲ.


ನಂತರ ಇನ್ನೊಂದು ಹಳ್ಳಿಯೆಡೆ ಪ್ರಯಾಣ ಬೆಳೆಸಿದೆವು. ಏಳು ಜನರ ನಮ್ಮ ಗುಂಪಿನಲ್ಲಿ ವಿವೇಕ್ ಮಾತ್ರ ಈ ಜಲಧಾರೆ ನೋಡಿದವರಾಗಿದ್ದರು. ಆದರೂ ಅವರಿಗೆ ದಾರಿ ನೆನಪಿರಲಿಲ್ಲ! ಮೊದಲು ಸಿಗುವ ಒಂದೆರಡು ಹಳ್ಳಿಗಳಲ್ಲಿ ಜಲಧಾರೆಯ ಬಗ್ಗೆ ವಿಚಾರಿಸಿದಾಗ ಅಲ್ಲಿ ಜಲಧಾರೆಯೇ ಇಲ್ಲವೆಂದು ಹಳ್ಳಿಗರು ಮಾತನಾಡತೊಡಗಿದರು. ಹಳ್ಳಿಗರ ಪ್ರಕಾರ ೧೦೦-೨೦೦ ಅಡಿ ಎತ್ತರದಿಂದ ಧರೆಗಪ್ಪಳಿಸಿದರೆ ಮಾತ್ರ ಅದು ಜಲಧಾರೆ! ಆದರೆ ನಮಗೆ ಕನಿಷ್ಟ ೨೫ ಅಡಿ ಇದ್ದರೂ ಸಾಕು, ಅದು ಸುಂದರ ಜಲಧಾರೆನೇ! ಅಲ್ಲಿ ಗೋಪಾಲ ಭಟ್ ಎಂಬವರ ಮನೆಗೆ ತೆರಳಿದೆವು. ಅವರು ಮನೆಯಲ್ಲಿರಲಿಲ್ಲ. ಅವರ ಶ್ರೀಮತಿಯವರು ಆದರದಿಂದ ಬರಮಾಡಿಕೊಂಡು ಕಷಾಯ ಮತ್ತು ಹಲಸಿನ ಚಿಪ್ಸ್ ನೀಡಿದರು. ಕುರು ಕುರು ಸದ್ದು ಮಾಡುತ್ತಾ ಬಟ್ಟಲು ತುಂಬಾ ಇದ್ದ ಚಿಪ್ಸ್ ಖಾಲಿ ಮಾಡಿದೆವು. ಆ ಮಹಿಳೆ ಇನ್ನಷ್ಟು ತಂದು ಸುರಿದರು. ಅದನ್ನೂ ಖಾಲಿ ಮಾಡಿದೆವು! ಚಾರಣದ ಸಮಯದಲ್ಲಿ ಬೇಕಾಗಬಹುದು ಎನ್ನುತ್ತಾ ಇನ್ನಷ್ಟನ್ನು ಕಟ್ಟಿಕೊಟ್ಟರು.

ಗೋಪಾಲ ಭಟ್ಟರ ಮನೆಯಲ್ಲಿ ಅವರು ಮತ್ತವರ ಶ್ರೀಮತಿ ಮಾತ್ರ. ಮಗ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಗಳು ಶಿರಸಿಯಲ್ಲಿ ಓದುತ್ತಿದ್ದಾಳೆ. ಮಲೆನಾಡಿನಲ್ಲಿ ಮನೆಯಲ್ಲಿ ಅಪ್ಪ ಮತ್ತು ಅಮ್ಮ ಮಾತ್ರ ಇದ್ದು, ತೋಟ ಗದ್ದೆ ಇತ್ಯಾದಿಗಳನ್ನು ಅವರೇ ನೋಡಿಕೊಳ್ಳುವುದು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಕೂಲಿಯಾಳುಗಳಿಗೆ ಸರಕಾರದಿಂದ ಉತ್ತಮ ಸವಲತ್ತು ದೊರೆಯುವುದರಿಂದ ಅವರಿಗೆಲ್ಲಾ ಕೋಡು ಬಂದುಬಿಟ್ಟಿದೆ. ತೋಟದ ಕೆಲಸ, ಗದ್ದೆ ಕೆಲಸ ಇತ್ಯಾದಿಗಳಿಗೆ ಅವರು ’ಕೇರ್’ ಮಾಡುದೇ ಇಲ್ಲ! ಇಂತಹದ್ದೇ ಒಬ್ಬ ಮಾಜಿ ಕೂಲಿಯಾಳು (ಈಗ ಸಿಂಪ್ಲಿ ’ಆಳು’) ಗಣಪತಿ ಸಿದ್ಧಿ ಎಂಬವನನ್ನು ಆ ಮಹಿಳೆ ಎಲ್ಲೆಲ್ಲೋ ಫೋನ್ ಮಾಡಿ ನಮಗೆ ಮಾರ್ಗದರ್ಶಕನಾಗಿ ಮಾಡಿಕೊಟ್ಟರು.


ಈ ಗಣಪತಿ ನಮ್ಮ ಕೆಲಸಕ್ಕೆ ಏನೂ ಪ್ರಯೋಜನವಿಲ್ಲದವ ಎಂಬುದು ತಿಳಿಯಲು ನಮಗೆ ಹೆಚ್ಚು ಸಮಯ ಆಗಲಿಲ್ಲ. ಆದರೂ ಸ್ಥಳೀಯನೊಬ್ಬ ಇದ್ದರೆ ಎಲ್ಲಾ ರೀತಿಯಲ್ಲೂ ಒಳಿತು ಎಂದು ಆತನನ್ನು ಕರೆದೊಯ್ದೆವು. ವಾಹನ ನಿಲ್ಲಿಸಿದಲ್ಲೇ ಒಬ್ಬರು ಜಲಧಾರೆಗೆ ತೆರಳುವ ಬಗ್ಗೆ ಈ ಗಣಪತಿಗೆ ದಾರಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಂಕಣಿಯಲ್ಲಿ ನೀಡಿದರು. ಕೊಂಕಣಿ ನನಗೆ ಗೊತ್ತಿರುವ ಭಾಷೆಯಾಗಿರುವುದರಿಂದ ದಾರಿಯ ಬಗ್ಗೆ ಅಲ್ಪ ಸ್ವಲ್ಪ ತಿಳಿಯಿತು. ನಂತರ ಚಾರಣದುದ್ದಕ್ಕೂ ನಾವು ಮುಂದೆ ಮಾರ್ಗದರ್ಶಕ ಗಣಪತಿ ಹಿಂದೆ! ಒಂದೆರಡು ಕಡೆ ಖಾಸಗಿ ಜಾಗದ ಮೂಲಕ ಹಾದುಹೋಗಬೇಕಾದ್ದಲ್ಲಿ ಮನೆಯವರಿಂದ ಅಪ್ಪಣೆ ಪಡೆಯಲು ಗಣಪತಿಯನ್ನು ಮುಂದೆ ಕಳಿಸಿದೆವು. ಆತನಿಗಂತೂ ನಾವು ಯಾಕಾದ್ರೂ ಬಂದೆವೋ, ಈ ಮಳೆಯಲ್ಲಿ ಒದ್ದೆಯಾಗುತ್ತಾ ತನಗೆ ಗೊತ್ತಿರದ ಜಲಧಾರೆಯನ್ನು ಹುಡುಕಿಕೊಂಡು ಈ ಹುಚ್ಚರು ತನ್ನನ್ನು ಸುಮ್ಮನೆ ಅಲೆದಾಡಿಸುತ್ತಿದ್ದಾರೆ ಎಂಬಂತಹ ಮುಖಭಾವವನ್ನು ಪ್ರದರ್ಶಿಸುತ್ತಲೇ ನಮ್ಮೊಂದಿಗೆ ಆತ ಹೆಜ್ಜೆ ಹಾಕುತ್ತಿದ್ದ.


ಉಕ್ಕಿ ಹರಿಯುತ್ತಿದ್ದ ಹಳ್ಳವೊಂದನ್ನು ಸುಮಾರು ೧೨೦ ಅಡಿ ಉದ್ದವಿರುವ ತೂಗುಸೇತುವೆಯ ಮೂಲಕ ದಾಟುವಾಗ ಸ್ವಲ್ಪ ಹೆದರಿಕೆಯಾದರೂ ಎಂಜಾಯ್ ಮಾಡಿದೆ. ಮಳೆ ಒಮ್ಮೆ ಬಿರುಸಾಗಿ ಇನ್ನೊಮ್ಮೆ ಹನಿ ಹನಿಯಾಗಿ ಬೀಳುತ್ತಾ ಇತ್ತು. ನಂತರ ಇನ್ನೆರಡು ಸಣ್ಣ ಸೇತುವೆಗಳ ಮೂಲಕ ಹಳ್ಳಗಳನ್ನು ದಾಟಿ ಜಲಧಾರೆಯಿರುವಲ್ಲಿ ತಲುಪಿದೆವು. ತೋಟವೊಂದರ ಕೊನೆಯಲ್ಲಿ ಸುಮಾರು ೨೫-೩೦ ಅಡಿ ಆಳಕ್ಕೆ ಧುಮುಕುತ್ತಾ ಭೋರ್ಗರೆಯುತ್ತಿತ್ತು ಈ ಜಲಧಾರೆ. ಮಳೆಗಾಲದ ಭೋರ್ಗರೆತ ಬೇಸಿಗೆಯಲ್ಲಿ ಸಣಕಲು ರೂಪ ತಾಳಿರುತ್ತದೆ. ಈ ಜಲಧಾರೆಯ ಪ್ಲಸ್-ಪಾಯಿಂಟ್ ಎಂದರೆ ಒಂದು ಬದಿಯಲ್ಲಿ ಕಮಾನಿನ ಆಕಾರದಲ್ಲಿರುವ ಕಲ್ಲುಬಂಡೆಗಳ ರಚನೆ. ಈ ದ್ವಾರದ ಹಿಂದೆಯೇ ಜಲಧಾರೆ ಧುಮುಕುತ್ತಿತ್ತು. ದ್ವಾರದ ಮೂಲಕ ಒಳ ಪ್ರವೇಶಿಸಿ ಅಲ್ಲಿ ಎಲ್ಲರೂ ಜಳಕ ಮಾಡಿದರು. ನಮ್ಮ ಹರ್ಷ ಸಂತೋಷ ಕಂಡು ಗಣಪತಿಗೆ ಏನೋ ವಿಚಿತ್ರ ಅನುಭವ. ನಮ್ಮಿಂದ ತಪ್ಪಿಸಿಕೊಂಡರೆ ಸಾಕಿತ್ತು ಅವನಿಗೆ.


ವಾಹನವಿದ್ದಲ್ಲಿ ನಾವು ಹಿಂತಿರುಗುವಾಗ, ’ಇಲ್ಲೇ ಸಮೀಪದಲ್ಲಿ ಬೇರೆ ಜಲಧಾರೆಯಿದ್ದರೆ ಸ್ವಲ್ಪ ವಿಚಾರಿಸ್ತಿಯಾ? ಮುಂದಿನ ಬಾರಿ ಬಂದಾಗ ನಮಗೆ ತಿಳಿಸ್ತಿಯಾ?...’ ಎಂದು ವಿವೇಕ್, ಗಣಪತಿಯೊಡನೆ ಕೇಳಿಕೊಂಡಾಗ ಆತ ’ಇನ್ಯಾವ ಫಾಲ್ಸ್ ಇಲ್ಲಾರಿ...’ ಎಂದು ಸೋಮಾರಿತನದ ಉತ್ತರ ನೀಡಿದ. ಆತ ಉತ್ತರ ನೀಡಿದ ಧಾಟಿಗೆ ನನಗೆ ಜೋರಾಗಿ ನಗು ಬಂದುಬಿಟ್ಟಿತು. ಆದರೂ ಬಿಡದೆ ವಿವೇಕ್, ’ಇದ್ರೆ ಸ್ವಲ್ಪ ನೋಡಿಡು..’ ಎಂದಾಗ, ’ಆಯ್ತಾಯ್ತ್...ಆಯ್ತಾಯ್ತ್’ ಎಂದು ಎಲ್ಲೋ ನೋಡುತ್ತಾ ವಟಗುಟ್ಟಿದ. ಮುಂದೆ ಅವನ ಮನೆಯ ಸಮೀಪ ಇಳಿಸಿದಾಗ ವಿವೇಕ್ ಆತನಿಗೆ ಸ್ವಲ್ಪ ಹಣವನ್ನು ನೀಡಿದರು. ಡಾ.ಗುತ್ತಲ್, ’ಏನ್ ಹುಚ್ ಮಂದಿಪ್ಪಾ. ಮಳ್ಯಾಗ ಫಾಲ್ಸ್ ನೋಡಾಕ ನಡ್ಸಿ ನನಗ ಹೊಸ ಫಾಲ್ಸ್ ತೋರ್ಸಿ ಮತ್ತ ರೊಕ್ಕಾನೂ ಕೊಡೋ ಮಂದಿ’ ಎಂದು ಗಣಪತಿ ನಮ್ಮ ಬಗ್ಗೆ ಅಂದುಕೊಂಡಿರಬೇಕು ಎಂದಾಗ ಸ್ಕಾರ್ಪಿಯೋ ತುಂಬಾ ನಗುವಿನಲೆ.

ಕಾಮೆಂಟ್‌ಗಳಿಲ್ಲ: