ಭಾನುವಾರ, ಜುಲೈ 12, 2009

ಕೈಟಭೇಶ್ವರ ದೇವಾಲಯ - ಕೋಟೆಪುರ


೧೭-೦೨-೨೦೦೮.

ಕೋಟೆಪುರ ಅಥವಾ ಕುಪಟೂರು ಅಥವಾ ಕುಬ್ಬತ್ತೂರು ಅಥವಾ ಕೋಟಿಪುರ ಇಷ್ಟು ಹೆಸರುಗಳು ಈ ಊರಿಗೆ. ಕೆಲವು ಲೇಖನಗಳಲ್ಲಿ ಈ ದೇವಾಲಯವನ್ನು ಚಾಳುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದ್ದರೆ ಇನ್ನೂ ಕೆಲವೆಡೆ ಹೊಯ್ಸಳ ಮತ್ತು ಚಾಲುಕ್ಯ ವಾಸ್ತುಶೈಲಿಗಳೆರಡನ್ನೂ ಬಳಸಲಾಗಿದೆ ಎನ್ನಲಾಗಿದೆ. ಈ ದೇವಾಲಯ ನಿರ್ಮಾಣಗೊಂಡದ್ದು ಇಸವಿ ೧೦೭೦ರಲ್ಲಿ ಪಶ್ಚಿಮ ಚಾಲುಕ್ಯ ದೊರೆಗಳ ಕಾಲದಲ್ಲಿ ಈ ಪ್ರದೇಶದ ಸಾಮಂತನಾಗಿದ್ದ ವಿನಯಾದಿತ್ಯನಿಂದ.


ಇಸವಿ ೧೧೮೦ರಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಚಿನ್ನದ ಕಳಶವನ್ನು ಸ್ಥಾಪಿಸಿರುವುದನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಗರ್ಭಗುಡಿ ಮತ್ತು ಅಂತರಾಳದ ನಂತರ ನವರಂಗ, ಸುಖನಾಸಿ ಮತ್ತು ಮುಖಮಂಟಪ. ಕೆಲವು ದೇವಾಲಯಗಳಲ್ಲಿ ನವರಂಗ ಇರುತ್ತದೆ ಅಥವಾ ಸುಖನಾಸಿ ಇರುತ್ತದೆ. ಎರಡೂ ಇರುವುದು ಅಪರೂಪವಲ್ಲವಾದರೂ ವಿರಳ. ಮುಖಮಂಟಪದ ಆಸುಪಾಸಿನಲ್ಲೇ ಹೆಚ್ಚಾಗಿ ನಂದಿಯ ಮೂರ್ತಿ ಇರುತ್ತದೆ. ಇಲ್ಲೂ ಮುಖಮಂಟಪದಲ್ಲೇ ನಂದಿ ಮೂರ್ತಿ ಇದೆ. ಬೇರೆ ದೇವಾಲಯಗಳಿಗೆ ಹೋಲಿಸಿದರೆ ಈ ನಂದಿ ಮೂರ್ತಿ ಬಹಳ ಬಹಳ ಸಣ್ಣದು. ಮೂಲ ಮೂರ್ತಿಯನ್ನು ಬಹಳ ಹಿಂದೆ ನಿಧಿಶೋಧಕರು ಒಡೆದು ಹಾಕಿದ್ದರಿಂದ, ಈಗಿರುವ ಸಣ್ಣ ನಂದಿಯನ್ನು ಹೊಸದಾಗಿ ಪ್ರತಿಷ್ಠಾಪಿಸಲಾಗಿದೆ.


ದೇವಾಲಯದ ಶಿವಲಿಂಗವು ದೇವಾಲಯ ನಿರ್ಮಾಣಗೊಳ್ಳುವುದಕ್ಕಿಂತ ಬಹಳ ಮೊದಲೇ ಪ್ರತಿಷ್ಠಾಪನೆಗೊಂಡಿತ್ತು ಎಂದು ನಂಬಲಾಗಿದೆ. ನವರಂಗ ಮತ್ತು ಸುಖನಾಸಿಗಳ ಉದ್ದಕ್ಕೂ ಉನ್ನತ ಶೈಲಿಯಲ್ಲಿ ಕೆತ್ತಿ ನಿರ್ಮಿಸಲಾಗಿರುವ ಒಂದು ಬದಿಗೆ ೬ರಂತೆ ೧೨ ಕಂಬಗಳು. ನವರಂಗದ ಇಕ್ಕೆಲಗಳಲ್ಲಿ ದ್ವಾರವೊಂದಕ್ಕೆ ೨ರಂತೆ ಇನ್ನೂ ೪ ಕಂಬಗಳಿವೆ. ಒಟ್ಟಾರೆ ೧೬ ಅದ್ಭುತ ಕಲ್ಲಿನ ಕಂಬಗಳು. ಈ ಅದ್ಭುತ ಕಂಬಗಳ ವೈಶಿಷ್ಟ್ಯವೇನೆಂದರೆ ಇವುಗಳಲ್ಲಿ ನಮ್ಮ ಪ್ರತಿಬಿಂಬ ನೇರವಾಗಿಯೂ ಮತ್ತು ತಲೆಕೆಳಗಾಗಿಯೂ ಕಾಣಿಸುತ್ತದೆ.


ಸುಖನಾಸಿಯ ಛಾವಣಿಯಲ್ಲಿ ಸುಮಾರು ೪೦೦ರಷ್ಟು ದಳಗಳಿರುವ ಕಮಲದ ಕೆತ್ತನೆ ಸುಂದರವಾಗಿದೆ. ಈ ತರಹದ ಕಮಲದ ಹೂವಿನ ಕೆತ್ತನೆ ಕೈಟಭೇಶ್ವರ ದೇವಸ್ಥಾನ ಮತ್ತು ಹಾನಗಲ್ಲಿನ ತಾರಕೇಶ್ವರ ದೇವಾಲಯಗಳಲ್ಲಿ ಮಾತ್ರ ಕಂಡುಬರುತ್ತದೆ. ಕಮಲದ ಕೆತ್ತನೆ ಕಂಡುಬಂದರೆ ಅದು ಚಾಲುಕ್ಯ ಶೈಲಿಯ ಸಂಕೇತ ಎನ್ನಲಾಗುತ್ತದೆ ಆದರೆ ನನಗೆ ನೆನಪು ಬಂದದ್ದು ಭಾರತೀಯ ಜನತಾ ಪಕ್ಷ!!


ದೇವಸ್ಥಾನದ ಗೋಪುರ ನೋಡಲು ಆಕರ್ಷಕವಾಗಿದ್ದರೂ, ಶಿಲ್ಪಕಲೆಗೆ ಆದ್ಯತೆ ನೀಡಲಾಗಿಲ್ಲ. ಕೈಟಭೇಶ್ವರ ದೇವಾಲಯದ ಮುಂಭಾಗದಲ್ಲೇ, ಭಾರತೀಯ ಪುರಾತತ್ವ ಇಲಾಖೆ ಉತ್ಖನನ ಮಾಡುತ್ತಿರುವಾಗ ನೆಲ ಮಟ್ಟಕ್ಕಿಂತ ಕೆಳಗಿರುವ ಸಣ್ಣ ಸುಂದರ ದೇವಾಲಯವೊಂದು ಕಂಡುಬಂದಿದ್ದು, ಗಮನ ಸೆಳೆಯದೇ ಇರುವುದಿಲ್ಲ. ಗುಂಡಿಯಲ್ಲಿಳಿದು ಈ ಸಣ್ಣ ಮೂರ್ತಿರಹಿತ ದೇವಾಲಯಕ್ಕೆ ಪ್ರದಕ್ಷಿಣೆ ಹಾಕುವಾಗ ಒಂಥರಾ ಸಂತೋಷ, ವಿಚಿತ್ರ ಅನುಭವ.

ಮಾಹಿತಿ: ಜಯದೇವಪ್ಪ ಜೈನಕೇರಿ ಮತ್ತು ಸಂತೋಷ ಕುಮಾರ ಸಿ.ಎ

4 ಕಾಮೆಂಟ್‌ಗಳು:

Aravind GJ ಹೇಳಿದರು...

ದೇವಾಲಯದ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ... ಹೀಗೆ ಬರುತ್ತಿರಲಿ.

Rakesh Holla ಹೇಳಿದರು...

Chennagide...
Dalagaliruva Kamalada kettane tumba chennagide...

ಶ್ರೀನಿಧಿ.ಡಿ.ಎಸ್ ಹೇಳಿದರು...

ನೀವು ಹೋಗಿ ಬರುವ ತಾಣಗಳ ಟಿಪ್ಪಣಿಯನ್ನು ಬಹು ಚೆನ್ನಾಗಿ ಮಾಡಿಕೊಂಡಿರುತ್ತೀರಿ,ಅಲ್ಲವೇ?:) ಅಥವಾ ನೆನಪಿನ ಶಕ್ತಿಯೋ?:)

ಬರಹಗಳ ವಿಸ್ತಾರ ಸೊಗಸಾಗಿರುತ್ತದೆ. ಬಹಳ ದಿನಗಳಿಂದ ನಿಮ್ಮ ಬ್ಲಾಗಿನ ಕಡೆ ಬಂದಿರಲಿಲ್ಲ, ೩-೪ ಪೋಸ್ಟ್ ಗಳನ್ನ ಒಟ್ಟಿಗೇ ಓದಿದೆ.

ಎಲ್ಲಾದರೂ ಹೋಗಬೇಕು ಮಾರಾಯ್ರೇ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ರಾಕೇಶ್,
ಧನ್ಯವಾದಗಳು.

ಶ್ರೀನಿಧಿ,
ಪಟ್ಟಿ ಮಾಡಿಕೊಂಡಿರುತ್ತೇನೆ. ಆದರೆ ಅದೇ ರೀತಿಯಲ್ಲಿ ಬರೆಯಲು ಆಗುವುದಿಲ್ಲ. ಯಾವಾಗಲೋ ಹೋಗಿದ್ದನ್ನು ಯಾವಾಗಲೋ ಬರೆಯುವುದು!