ಭಾನುವಾರ, ಜೂನ್ 07, 2009

ಚಂದ್ರಮೌಳೇಶ್ವರ ದೇವಾಲಯ - ಉಣಕಲ್


೨೨-೦೬-೨೦೦೮. ಹುಬ್ಬಳ್ಳಿಯಲ್ಲಿ ಗೆಳೆಯ ಗಿರೀಶ ಭಟ್ಟನೊಂದಿಗೆ ಉಣಕಲ್ ಗ್ರಾಮ ತಲುಪಿ ಚಂದ್ರಮೌಳೇಶ್ವರ ದೇವಾಲಯ ಹುಡುಕಾಡತೊಡಗಿದೆ. ಸಂದಿಗೊಂದಿಯಲ್ಲೆಲ್ಲಾ ನುಗ್ಗಿದರೂ ದೇವಾಲಯದ ಸುಳಿವಿಲ್ಲ. ಸ್ಥಳೀಯರಲ್ಲಿ ಕೇಳಿದರೆ ’ಇಲ್ಲೇ ಐತಲ್ರೀ....’ ಎನ್ನುತ್ತಾ ಕೈ ತೋರಿಸುತ್ತಿದ್ದರೇ ವಿನ: ನಮಗೆ ದೇವಾಲಯ ಕಾಣಿಸುತ್ತಿರಲಿಲ್ಲ. ಆ ಮಟ್ಟಕ್ಕೆ ಈ ದೇವಾಲಯನ್ನು ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ನಾಲ್ಕು ದ್ವಾರಗಳ ಈ ದೇವಾಲಯಕ್ಕೆ ನಾಲ್ಕು ಕಡೆಯಿಂದಲೂ ರಸ್ತೆಗಳಿದ್ದವಂತೆ. ಆದರೆ ಈಗ ಒಂದು ಮಾತ್ರ ಉಳಿದಿದ್ದು ಉಳಿದ ೩ ರಸ್ತೆಗಳು ಮಾಯ. ಈ ಮಟ್ಟದ ಒತ್ತುವರಿ ಮತ್ತು ಸ್ಥಳೀಯರಿಗೆ ದೇವಾಲಯದ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಭಾರತೀಯ ಪುರಾತತ್ವ ಇಲಾಖೆ ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದೇ ಸೋಜಿಗದ ವಿಷಯ.


ದ್ರಾವಿಡ ವಿಮಾನ ಶಿಖರದ ವಾಸ್ತುಶಿಲ್ಪ ಶೈಲಿಯಲ್ಲಿರುವ ದೇವಾಲಯ ಸೂಪರ್ ಆಗಿದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ೧೨ನೇ ಶತಮಾನದಲ್ಲಿ ನಿರ್ಮಿತವಾಗಿರುವ ನಾಲ್ಕೂ ದಿಕ್ಕುಗಳಿಂದಲೂ ಪ್ರವೇಶ ದ್ವಾರವನ್ನು ಹೊಂದಿರುವ ದೇವಾಲಯ. ಇಲ್ಲಿ ಅಪರೂಪದ ಚತುರ್ಮುಖ ಶಿವಲಿಂಗವಿರುವುದರಿಂದ ಈ ದೇವಾಲಯವನ್ನು ’ಚತುರ್ಲಿಂಗೇಶ್ವರ ದೇವಾಲಯ’ವೆಂದೂ ಕರೆಯುತ್ತಾರೆ. ದೇವಾಲಯದ ಪಶ್ಚಿಮ ದ್ವಾರದ ಮುಖಮಂಟಪದಲ್ಲಿ ಚತುರ್ಮುಖವುಳ್ಳ ವಿಶಿಷ್ಟ ಶಿವಲಿಂಗವಿದೆ. ಗರ್ಭಗುಡಿಯಲ್ಲೇ ಈ ಚತುರ್ಮುಖ ಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತೆಂದು, ಹಾನಿಗೊಳಗಾದ ಬಳಿಕ ಅದನ್ನೀಗ ಇಲ್ಲಿರಿಸಲಾಗಿದೆ ಎನ್ನಲಾಗುತ್ತದೆ. ಈಗ ಗರ್ಭಗುಡಿಯಲ್ಲಿ ನವ್ಯ ಸುಂದರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.


ಪೂರ್ವದಲ್ಲಿರುವ ಪ್ರಮುಖ ದ್ವಾರವನ್ನು ಹೊರತುಪಡಿಸಿ ದೇವಾಲಯದ ಉಳಿದ ೩ ದ್ವಾರಗಳನ್ನು ಈಗ ಮುಚ್ಚಲಾಗಿದೆ. ಪ್ರಮುಖ ದ್ವಾರದ ಮೇಲೆ ಗಜಲಕ್ಷ್ಮೀಯ ಕೆತ್ತನೆಯಿದೆ. ನಾಲ್ಕೂ ದ್ವಾರಗಳು ಮುಖಮಂಟಪವನ್ನು ಹೊಂದಿವೆ. ದೇವಾಲಯದಲ್ಲಿ ೨ ನಂದಿಯ ಮೂರ್ತಿಗಳಿವೆ. ದೇವಾಲಯದ ನಡುವೆ ಗರ್ಭಗುಡಿಯಿದೆ. ಈ ಗರ್ಭಗುಡಿಗೆ ನಾಲ್ಕೂ ಕಡೆ ದ್ವಾರಗಳು. ಪ್ರತಿ ದ್ವಾರದ ಮೇಲೆ ಮತ್ತು ಕೆಳಗೆ ಗಜಲಕ್ಷ್ಮೀಯ ಕೆತ್ತನೆಯಿದೆ ಮತ್ತು ಪ್ರತಿ ದ್ವಾರವೂ ೫ ತೋಳಿನದ್ದಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ಪ್ರಾಚೀನ ದೇವಾಲಯಗಳಲ್ಲಿ ಪ್ರದಕ್ಷಿಣಾಪಥವಿರುವುದು ವಿರಳ.


ಎಲ್ಲಾ ದ್ವಾರಗಳಲ್ಲಿ ಸುಂದರ ಜಾಲಂಧ್ರಗಳಿವೆ. ಪ್ರಮುಖ ದ್ವಾರವನ್ನು ಹೊರತುಪಡಿಸಿ ಇತರ ದ್ವಾರಗಳ ಜಾಲಂಧ್ರಗಳು ಏಕಪ್ರಕಾರವಾಗಿವೆ. ಪ್ರಮುಖ ದ್ವಾರದ ಜಾಲಂಧ್ರದಲ್ಲಿ ಶಿಲಾಬಾಲಿಕೆಯರ ವಿವಿಧ ನಾಟ್ಯ ಭಂಗಿಗಳಲ್ಲಿ ಮತ್ತು ವಿವಿಧ ಸಂಗೀತ ಉಪಕರಣಗಳನ್ನು ನುಡಿಸುವ ಭಂಗಿಗಳಲ್ಲಿರುವ ಕೆತ್ತನೆ ಮಾತ್ರ ಬಲೂ ಸುಂದರ.


ಪ್ರಮುಖ ದ್ವಾರದ ಇಕ್ಕೆಲಗಳಲ್ಲಿ ಖಾಲಿ ಕವಾಟಗಳಿವೆ ಮತ್ತು ಮೇಲೆ ೩ ಸಣ್ಣ ಕಮಾನುಗಳ ರಚನೆಯಿದೆ. ಈ ಕಮಾನುಗಳ ಇಕ್ಕೆಲಗಳಲ್ಲಿ ಘೇಂಡಾಮೃಗದಂತೆ ಕಾಣುವ ಪ್ರಾಣಿಯೊಂದರ ಮೇಲೆ ಸವಾರಿ ಮಾಡುವ ಕೆತ್ತನೆಯಿದೆ.


ದೇವಾಲಯಕ್ಕೊಂದು ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿವೆ. ಗಣೇಶನ ನಾಟ್ಯ ಭಂಗಿಯಲ್ಲಿದ್ದ ಕೆತ್ತನೆಯೊಂದನ್ನು ಹೊರತುಪಡಿಸಿ ಉಳಿದವುಗಳು ಯಾವ ದೇವ/ದೇವಿಯರದ್ದು ಎಂದು ತಿಳಿಯುವಷ್ಟು ಅರಿವು ನನಗಿಲ್ಲ. ಆ ಅರಿವನ್ನು ನೀಡಲು ಅಲ್ಲಿನ ಸಿಬ್ಬಂದಿಯೂ ಇರಲಿಲ್ಲ.


ದೇವಾಲಯದಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ಇಲ್ಲಿ ದೇವರಿಗೆ ಪೂಜೆ ಮಾಡುವವರು ಒಬ್ಬ ಮಹಿಳೆ. ’ನನ್ ಪೂಜಿ ಮುಗೀವರ್ಗೂ ಫೊಟೋ ತೆಗೀಬ್ಯಾಡ್ರೀ.....’ ಎಂದು ನಮ್ಮನ್ನು ಎಚ್ಚರಿಸಿಯೇ ಪೂಜಾ ಕಾರ್ಯಗಳನ್ನು ಆರಂಭಿಸಿದ ಆಕೆ ಎರಡೂ ಶಿವಲಿಂಗಗಳಿಗೆ ಮತ್ತು ನಂದಿಯ ೨ ಮೂರ್ತಿಗಳಿಗೆ ಪೂಜೆ ಮುಗಿಸುವಷ್ಟರಲ್ಲಿ ಸರಿಯಾಗಿ ೬೦ ನಿಮಿಷಗಳು ಕಳೆದಿದ್ದವು.

ಮಾಹಿತಿ: ವಿನಾಯಕ ಭಟ್

5 ಕಾಮೆಂಟ್‌ಗಳು:

Aravind GJ ಹೇಳಿದರು...

ಜಾಲಂಧ್ರದ ಕೆತ್ತನೆ ಸೊಗಸಾಗಿದೆ. ಉಣಕಲ್ ಕೆರೆಯ ಬಗ್ಗೆ ಕೇಳಿದ್ದೆ... ದೇವಾಲಯದ ವಿಷಯ ತಿಳಿದಿರಲಿಲ್ಲ.

ಶ್ರೀನಿಧಿ.ಡಿ.ಎಸ್ ಹೇಳಿದರು...

nice info!:)chennagide,endinante.

ಪ್ರಮೋದ ನಾಯಕ ಹೇಳಿದರು...

ಒಳ್ಳೆಯ ಲೇಖನ. . ಚಿತ್ರಗಳು ಸೊಗಸಾಗಿವೆ... ದೇವಸ್ಥಾನಕ್ಕೆ ಹೋಗಿಬಂದಂತೆಯೇ ಅನಿಸುತ್ತಿದೆ.

Rakesh Holla ಹೇಳಿದರು...

Nice photos...

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಹೆಚ್ಚಿನವರಿಗೆ ಈ ದೇವಾಲಯದ ಬಗ್ಗೆ ತಿಳಿದಿಲ್ಲ. ಹುಬ್ಬಳ್ಳಿಯಲ್ಲೇ ಗೊತ್ತಿಲ್ಲದವರು ಬಹಳಷ್ಟು ಮಂದಿ ಇದ್ದಾರೆ. ಉಣಕಲ್ ಕೆರೆಯಿಂದ ೧೦ ನಿಮಿಷಕ್ಕೂ ಕಡಿಮೆ ನಡೆದರೆ ದೇವಾಲಯ ಸಿಗುತ್ತದೆ.

ಶ್ರೀನಿಧಿ, ಪ್ರಮೋದ್, ರಾಕೇಶ್,
ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು.