ಭಾನುವಾರ, ಏಪ್ರಿಲ್ 26, 2009

ಹೀಗೊಂದು ಸೇತುವೆ


ಎಪ್ರಿಲ್ ೨೬, ೨೦೦೪.

ಆ ದಿನ ಲೋಕಸಭೆಯ ಚುನಾವಣೆ ಪ್ರಯುಕ್ತ ರಜಾ ಇತ್ತು. ಮುಂಜಾನೆ ೭.೦೧ಕ್ಕೆ ಮತ ಚಲಾಯಿಸಿ ಯಮಾಹವನ್ನು ಈ ಹಳ್ಳಿಯತ್ತ ಓಡಿಸಿದೆ. ಇಲ್ಲಿರುವ ನದಿಗೆ ಅಣೆಕಟ್ಟು ನಿರ್ಮಿಸುವ ಮೊದಲು ರಸ್ತೆ ಇತ್ತು. ಅಣೆಕಟ್ಟು ನಿರ್ಮಾಣದ ಬಳಿಕ ಈ ರಸ್ತೆ ಮುಳುಗಿತು. ಇಲ್ಲಿ ಒಂದು ಸೇತುವೆ ಇದ್ದು, ಬೇಸಗೆಯಲ್ಲಿ ಹಿನ್ನೀರಿನ ಪ್ರಮಾಣ ಕಡಿಮೆಯಾದಾಗ ಗೋಚರಿಸುತ್ತದೆ. ಹಲವಾರು ವರ್ಷ ನೀರಿನಲ್ಲಿ ಮುಳುಗಿದ್ದರೂ ಇಂದಿಗೂ ಹಾನಿಯಾಗದೇ ನಿಂತಿರುವ ಸುಂದರವಾದ ಸೇತುವೆಯಿದು. ಇದೇ ಸೇತುವೆಯನ್ನು ನೋಡಲೋಸುಗ ೫ ವರ್ಷಗಳ ಹಿಂದೆ ಈ ಹಳ್ಳಿಗೆ ತೆರಳಿದ್ದು.


ಈಗಲೂ ಈ ಹಳೇ ರಸ್ತೆಯನ್ನು ಹಿನ್ನೀರಿನ ಅಂಚಿನವರೆಗೆ ವಾಸಿಸುವ ಹಳ್ಳಿಗರು ಬಳಸುತ್ತಾರೆ. ಆ ಬಳಿಕದ ರಸ್ತೆ ಹಿನ್ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಗೋಚರಿಸುವುದು. ಈ ರಸ್ತೆಯಲ್ಲಿ ಪ್ರಯಾಣಿಸುವುದೇ ರೋಮಾಂಚಕ ಅನುಭವ. ಕೆಲವೊಂದೆಡೆ ರಸ್ತೆಯನ್ನು ಅಡ್ಡಕ್ಕೆ ಅಗೆದು ಹಾಕಲಾಗಿದೆ. ಮರಗಳನ್ನು ಕಡಿದು ಸಾಗಿಸುವುದನ್ನು ತಡೆಯಲು ಈ ಕ್ರಮ! ಇಂತಹ ಗುಣಗಳು (ಮರ ಕಡಿಯುವುದು) ಎಷ್ಟು ಸ್ವಾಭಾವಿಕವಾಗಿ ನಮ್ಮವರಿಗೆ ಬರುತ್ತದಲ್ಲವೇ?! ಅಪ್ಪಿ ತಪ್ಪಿಯೂ ಮರಗಳನ್ನು ರಕ್ಷಿಸುವ ಗುಣ ಬರೋದೇ ಇಲ್ಲ.


ಹಿನ್ನೀರಿನ ಪರಿಧಿಯ ಆರಂಭದಲ್ಲೇ ಹಳೇ ರಸ್ತೆಯ ಸ್ಪಷ್ಟ ಕುರುಹು. ರಸ್ತೆಯ ಇಬ್ಬದಿಯಲ್ಲಿ ಮರಗಳ ಅವಶೇಷಗಳು! ಈ ಮರಗಳ ಸಾಲು ಮುಗಿದ ಬಳಿಕ ನಂತರ ಅಸ್ಪಷ್ಟ ರಸ್ತೆ. ಕೆಲವೊಂದೆಡೆ ಹಿನ್ನೀರು ರಸ್ತೆಯ ಮೇಲೆಯೇ ಇತ್ತು. ಹಾಗಿರುವಲ್ಲಿ ಯಮಾಹವನ್ನು ನೀರಿನ ಅಂಚಿನಲ್ಲೇ ಚಲಿಸಿ ಮತ್ತೆ ಮುಂದೆ ಕಾಣಬರುವ ರಸ್ತೆಯೆಡೆ ಬರಬೇಕಾಗುತ್ತಿತ್ತು. ವಿಶಾಲ ಪ್ರದೇಶ. ಒಬ್ಬ ನರಪಿಳ್ಳೆ ಕಾಣುತ್ತಿರಲಿಲ್ಲ. ಗಾಳಿ ಮತ್ತು ನನ್ನ ಯಮಾಹಾದ ಶಬ್ದ ಮಾತ್ರ. ಮಧ್ಯಾಹ್ನದ ಜೋರು ಬಿಸಿಲು. ಅಲ್ಲಲ್ಲಿ ಬೋಳು ಮರಗಳು ಕಂಬಗಳಂತೆ ನಿಂತಿದ್ದವು. ರಸ್ತೆಯನ್ನು ಒಂದೆರಡು ಕಡೆ ಅಗೆಯಲಾಗಿದ್ದರಿಂದ ಯಮಾಹವನ್ನು ರಸ್ತೆಯಿಂದ ಕೆಳಗಿಳಿಸಿ ಮೇಲೇರಿಸಬೇಕಾಗುತ್ತಿತ್ತು. ವರ್ಷವಿಡೀ ನೀರು ನಿಂತಿರುವ ಸ್ಥಳದಲ್ಲಿ ಬೈಕು ಚಲಾಯಿಸುವುದೇನು, ನಡೆಯುವುದು ಕೂಡಾ ಅಪಾಯ! ಸಡಿಲ ಮಣ್ಣು ಇದ್ದರೆ ಫಜೀತಿ.


ಹಿನ್ನೀರಿನಲ್ಲೇ ರಸ್ತೆಯ ಕುರುಹು ಕಾಣಿಸುತ್ತಿದ್ದರೂ ಅದರಲ್ಲಿ ಬೈಕು ಚಲಾಯಿಸಲು ಧೈರ್ಯ ಸಾಲುತ್ತಿರಲಿಲ್ಲ. ಅದೇ ಸಡಿಲ ಮಣ್ಣಿನ ಹೆದರಿಕೆ. ಸುತ್ತಿ ಬಳಸಿ ಸಾಗಿದರೂ ಪರವಾಗಿಲ್ಲವೆಂದು ನೀರಿನ ಅಂಚಿನಲ್ಲೇ ಸಾಗತೊಡಗಿದೆ. ಒಬ್ಬನೇ ಇದ್ದಿದ್ದರಿಂದ ಆ ಸ್ಥಳದ ಅಧಿಪತಿಯೇ ನಾನು ಎಂಬಂತೆ ಭಾಸವಾಗುತ್ತಿತ್ತು. ಬಟ್ ಐ ವಾಸ್ ರಾಂಗ್! ಒಂದೆಡೆ ಹಿನ್ನೀರಿನ ಅಂಚಿನಲ್ಲಿ ಸಾಗುತ್ತಿರಬೇಕಾದರೆ ಮುಂದೆ ಇದ್ದ ಬೋಳು ಮರದ ಹಿಂದೆ ಯಾರೋ ಚಲಿಸಿದಂತೆ ಭಾಸವಾಯಿತು. ಆ ಮರದ ಸಮಾನಾಂತರಕ್ಕೆ ಬಂದಾಗ ಅಲ್ಲಿ ಕಂಡ ದೃಶ್ಯ ನಂಬಲಸಾಧ್ಯ. ಪ್ರೇಮಿಗಳಿಬ್ಬರು ತಮ್ಮದೇ ಲೋಕದಲ್ಲಿ ಮೈಮರೆತಿದ್ದರು. ಗಾಳಿಯ ಶಬ್ದಕ್ಕೆ ನನ್ನ ಬೈಕಿನ ಸದ್ದೇ ಅವರಿಗೆ ಕೇಳಿರಲಿಕ್ಕಿಲ್ಲ. ನನ್ನ ಕಂಡು ಗಲಿಬಿಲಿಗೊಂಡರು. ರೋಮಾನ್ಸ್ ಮಾಡಲು ಎಂತಹಾ ಸ್ಥಳ. ಆ ರಣಬಿಸಿಲಿನಲ್ಲಿ... ಒಂದೇ ಒಂದು ಮನುಷ್ಯನ ಸುಳಿವಿಲ್ಲ ಎಂಬ ಮಾತನ್ನು ಪರಿಗಣಿಸಿದರೆ ಪ್ರಶಸ್ತ ಸ್ಥಳ ಎನ್ನಬಹುದು.


ಇನ್ನೊಂದೈದು ನಿಮಿಷದ ಬಳಿಕ ಸೇತುವೆಯ ಬಳಿ ತಲುಪಿದೆ. ಅಲ್ಲಿತ್ತು ಒಂದು ’ರಿಂಗ್’ ಬಾವಿ. ಒಳಗೆ ಇಣುಕಿದರೆ ನೀರು ಮತ್ತು ಕಪ್ಪೆಗಳು. ಸಮೀಪದಲ್ಲೆ ಮನೆಯೊಂದಿದ್ದ ಕುರುಹು.


ಇಲ್ಲೀಗ ನೀರನ್ನು ದಾಟಲೇಬೇಕಾಗಿತ್ತು. ನಡೆದೇ ತೆರಳಬಹುದಾಗಿದ್ದರಿಂದ ಬೈಕನ್ನು ಅಲ್ಲೇ ನಿಲ್ಲಿಸಿ ನೀರಿರುವಲ್ಲಿ ತೆರಳಿದೆ. ಅಲ್ಲೇ ಬಿದ್ದಿದ್ದ ಕೋಲಿನಿಂದ ನೆಲ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಿ ನೀರನ್ನು ದಾಟಿ ಸೇತುವೆಯ ಮೇಲೆ ತೆರಳಿದೆ. ಇಲ್ಲೂ ಸೇತುವೆಯ ಆರಂಭಕ್ಕೇ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಎಲ್ಲೆಡೆ ಬೋಳು ಮರಗಳು, ಅಲ್ಲಲ್ಲಿ ಹಿನ್ನೀರಿನ ಕೊಳಗಳು, ಕಡಿದು ಹಾಕಿದ ಮರಗಳ ಅವಶೇಷಗಳು. ಈ ದೃಶ್ಯ ಸ್ವಲ್ಪನೂ ಇಷ್ಟವಾಗಲಿಲ್ಲ. ನೋಡಲು ಯೋಗ್ಯವಾಗಿರುವುದೆಂದರೆ ಸೇತುವೆ ಮಾತ್ರ.


ಬ್ರಿಟಿಷರ ಸಮಯದಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ಈ ಸೇತುವೆಯನ್ನು ನಿರ್ಮಿಸಲಾಗಿದೆ. ೯ ಕಮಾನುಗಳನ್ನು ಸುಂದರವಾಗಿ ರಚಿಸಲಾಗಿದೆ. ಆಗಿನ ಕಾಲದಲ್ಲಿ ಬಳಸುವಂತೆ ಬೆಲ್ಲ ಮತ್ತು ಸುಣ್ಣದ ಮಿಶ್ರಣವನ್ನು ಈ ಸೇತುವೆಯ ನಿರ್ಮಾಣದಲ್ಲಿ ಬಳಸಲಾಗಿದೆ. ಈಗಿನ ಸಿಮೆಂಟಿಗಿಂತ ಈ ಬೆಲ್ಲ ಮತ್ತು ಸುಣ್ಣದ ಮಿಶ್ರಣವೇ ಹೆಚ್ಚು ಸುದೃಢ. ಮಡೆನೂರು ಅಣೆಕಟ್ಟನ್ನೂ ಇದೇ ಮಿಶ್ರಣವನ್ನು ಬಳಸಿ ನಿರ್ಮಿಸಲಾಗಿತ್ತು. ಆದ್ದರಿಂದ ಎಷ್ಟೋ ದಶಕಗಳ ಕಾಲ ನೀರಿನಡಿ ಇದ್ದರೂ ಇವು ಇನ್ನೂ ಸುದೃಢವಾಗಿವೆ. ಕಲ್ಲುಗಳ್ಳರಿಂದ ಈ ಸೇತುವೆಯ ಒಂದು ಕಲ್ಲನ್ನೂ ಅಲುಗಾಡಿಸಲು ಆಗಿಲ್ಲ.


ಆಗಿನ ಮೈಲಿಕಲ್ಲುಗಳನ್ನು ಈಗಲೂ ಕಾಣಬಹುದು. ’೧೯’ ಎಂದು ಬರೆಯಲಾಗಿರುವ ಮೈಲಿಕಲ್ಲೊಂದು ಎದ್ದು ಕಾಣುತ್ತಿತ್ತು. ಅಣೆಕಟ್ಟು ನಿರ್ಮಾಣದ ಮೊದಲು ಈ ನದಿ ಇದೇ ಸೇತುವೆಯ ಅಡಿಯಿಂದ ೯ ಕಮಾನುಗಳ ಮೂಲಕ ಹರಿದು ಸಾಗುತ್ತಿತ್ತು. ಈಗ ನದಿಯ ಹಿನ್ನೀರು ಸೇತುವೆಯನ್ನೇ ಮುಳುಗಿಸಿ ನಿಂತಿರುತ್ತದೆ.

5 ಕಾಮೆಂಟ್‌ಗಳು:

ಪಾಚು-ಪ್ರಪಂಚ ಹೇಳಿದರು...

ರಾಜೇಶ್ ಅವರೇ,

ಹಿನ್ನೀರಿನಲ್ಲಿ ಮಣ್ಣು ಕುಸಿತ ತುಂಬಾ ಅಪಾಯ...ಅದರ ಅನುಭವ ನನಗೂ ಆಗಿದೆ..

೫ ವರ್ಷದ ಹಿಂದಿನ ಅನುಭವವನ್ನೂ ಸೊಗಸಾಗಿ ವಿವರಿಸಿದ್ದೀರಿ...:-)
ಅಷ್ಟೇ ಸುಂದರ ಚಿತ್ರಗಳು..

ಅಭಿನಂದನೆಗಳು
-ಪ್ರಶಾಂತ್ ಭಟ್

meena ಹೇಳಿದರು...

photographs ella thumba chennagide. yaarige gothu ee spot kooda ondu dina mungaru malay yalli jog picturise aada reethi aaga bahudu. then you will really feel happy

ಅನಾಮಧೇಯ ಹೇಳಿದರು...

Aravind GJ said...

ಸರಿಯಾದ ನಮಯಕ್ಕೇ ನಿಮ್ಮ ಲೇಖನ ಬಂದಿದೆ!! ಎಲ್ಲವೂ ನಾನೆಂದುಕೊಂಡಂತೆ ಆದರೆ ಮುಂದಿನ ತಿಂಗಳು ಈ ಕಡೆ ಹೋಗುವ ಯೋಜನೆ ಇದೆ.

ಚಿತ್ರಗಳು ಸೊಗಸಾಗಿದೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ನಿಮ್ಮ ಟಿಪ್ಪಣಿಯಲ್ಲಿ ಸ್ಥಳದ ಬಗ್ಗೆ ಸ್ವಲ್ಪ ’ಹಿಂಟ್’ ಇದ್ದಿದ್ದರಿಂದ, ಸ್ವಲ್ಪ ಬದಲಾಯಿಸಿ ಹಾಕಿದ್ದೇನೆ. ಕ್ಷಮಿಸುವಿರೆಂದು ನಂಬಿದ್ದೇನೆ.

ಪ್ರಶಾಂತ್,
ಥ್ಯಾಂಕ್ಸ್. ಹಿನ್ನೀರಿನಲ್ಲಿ ಆ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮೀನಾ,
"photographs ella thumba chennagide" - ಇಂತಹ ಕಾಟಾಚಾರದ ಹೊಗಳಿಕೆಯ ಅವಶ್ಯಕತೆ ಇಲ್ಲ. ಆದರೂ ಥ್ಯಾಂಕ್ಸ್!

" yaarige gothu ee spot kooda ondu dina mungaru malay yalli jog picturise aada reethi aaga bahudu" - ಆಗಲಿ. ಏನಂತೆ. ರಾಜ್ಯದ ಜನತೆ ಕೂಡಾ ಈ ಸ್ಥಳವನ್ನು ನೋಡಿದಂತೆ ಆಗುತ್ತಲ್ಲವೇ? ಆಷ್ಟಕ್ಕೂ ’ಪಿಕ್ಚರೈಸ್’ ಆದರೂ, ಸ್ಥಳ ಎಲ್ಲಿದೆ ಎಂದು ಗೊತ್ತಾಗುತ್ತೋ? ಅಷ್ಟಕ್ಕೂ ಈ ಲೇಖನ ಓದಿದ ಬಳಿಕ ಈ ಸ್ಥಳ ಎಲ್ಲಿದೆ ಎಂದು ನಿಮಗೆ ಗೊತ್ತಾಯಿತೇ? ಸ್ವಲ್ಪ ತಲೆ ಖರ್ಚು ಮಾಡಿ ಟಿಪ್ಪಣಿ ಬರೆದರೆ ಒಳಿತು.

"then you will really feel happy" - ಇದು ಸ್ವಲ್ಪ ಅತಿಯಾಯಿತು ಅನ್ನಿಸುತ್ತೆ.

ನಾನು ಯಾವಗಲೂ ಹೊಸ ಪೋಸ್ಟ್ ಹಾಕುವಾಗಲೇ ಹಿಂದಿನ ಲೇಖನಕ್ಕೆ ಬಂದಿರುವ ಟಿಪ್ಪಣಿಗಳಿಗೆ ಉತ್ತರ ಬರೆಯುವುದು. ಆದರೆ ಇಲ್ಲಿ ತಮಗೆ ’ಉತ್ತರ’ ನೀಡಬೇಕೆಂದೆನಿಸಿತು. ಇತ್ತೀಚೆಗೆ ’ನಕಲಿ’ ಹೆಸರು ಹಾಕಿ ಟಿಪ್ಪಣಿ ಬರೆಯುವವರು ಹೆಚ್ಚಾಗಿದ್ದಾರೆ. ಹಾಗಿರುವಾಗ ತಾವು ತಮ್ಮ ’ಅಸಲಿ’(?) ಹೆಸರನ್ನು ತಿಳಿಸಿರುವುದು ಅಭಿನಂದನಾರ್ಹ! ಬರ್ತಾ ಇರಿ ಇಲ್ಲಿಗೆ. ಆದರೆ ಸ್ವಲ್ಪ ತಲೆ ಖರ್ಚು ಮಾಡಿ ಟಿಪ್ಪಣಿ ಬರೆಯಿರಿ.

Aravind GJ ಹೇಳಿದರು...

No Problem.
ಕಾಮೆಂಟ್ ಬರೆಯುವಾಗ "ಹಿಂಟ್" ಬಗ್ಗೆ ಯೋಚನೆ ಮಾಡಲೇ ಇಲ್ಲ!!