ಬುಧವಾರ, ಏಪ್ರಿಲ್ 01, 2009

ಉಮಾಮಹೇಶ್ವರ ದೇವಾಲಯ - ಹೊಸಗುಂದ


೦೪-೦೧-೨೦೦೯. ಹೊಸಗುಂದದ ಉಮಾಮಹೇಶ್ವರ ದೇವಸ್ಥಾನ ೧೯೯೫ರವರೆಗೂ ಕಾಡಿನಲ್ಲಿ ಮರೆಯಾಗಿತ್ತು. ದೊಡ್ಡ ಆಲದಮರವೊಂದು ದೇವಾಲಯದ ಮೇಲೆಯೇ ಬೆಳೆದು ಹಗಲಲ್ಲೂ ಒಳಗೆ ಬೆಳಕು ಪ್ರವೇಶಿಸುವುದನ್ನು ತಡೆಯುತ್ತಿತ್ತು. ಬಾವಲಿಗಳು ಮತ್ತು ಗೂಬೆಗಳು ಈ ದೇವಾಲಯವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು. ದೇವಾಲಯಕ್ಕೆ ಯಾರೂ ಬರುತ್ತಿರಲಿಲ್ಲ. ಚಾರಣಿಗರು ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಇರುವವರು ಆಗೊಮ್ಮೆ ಈಗೊಮ್ಮೆ ಭೇಟಿ ನೀಡುತ್ತಿದ್ದರು.


ಕಡೆಗೂ ಸಾಗರ ಯೂತ್ ಹಾಸ್ಟೆಲಿನ ಸದಸ್ಯರು ೧೯೯೫ರ ಸುಮಾರಿಗೆ ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಮಾಡಲಾರಂಭಿಸಿದರು. ಸ್ಥಳೀಯರೂ ಕೈಗೂಡಿಸಿದರು. ಈಗ ನೋಡಿದರೆ ಅವಶ್ಯಕ್ಕಿಂತ ಸ್ವಲ್ಪ ಹೆಚ್ಚೇ ಕಾಡನ್ನು ಕಡಿದಂತೆ ತೋರುತ್ತದೆ. ಉತ್ಖನನದ ಬಳಿಕ ಪ್ರವಾಸಿಗರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೊಸಗುಂದಕ್ಕೆ ಆಗಮಿಸಲಾರಂಭಿಸಿದರು. ಈಗ ಪುರಾತತ್ವ ಇಲಾಖೆ, ಧರ್ಮಸ್ಥಳ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಸಹಯೋಗದಲ್ಲಿ ಈ ದೇವಾಲಯದ ಪುನ: ನಿರ್ಮಾಣದ ಪ್ರಾಜೆಕ್ಟ್-ನ್ನು ಕೈಗೆತ್ತಿಕೊಂಡಿದೆ. ಸ್ಥಳೀಯರೂ ಇದರಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಒಂದು ವಿಶಾಲ ಪ್ರಾಂಗಣವನ್ನು ರಚಿಸಿ, ಪ್ರಾಂಗಣದೊಳಗೆ ಸಮೀಪದ ಕಾಡಿನಲ್ಲಿ ದೊರಕಿರುವ ೧೧ನೇ ಶತಮಾನದ ವೀರಭದ್ರ, ವಿನಾಯಕ ಮತ್ತು ಕಂಚಿಕಾಲಮ್ಮ ವಿಗ್ರಹಗಳನ್ನು, ಉಮಾ ಮಹೇಶ್ವರ ಲಿಂಗದೊಂದಿಗೆ ಪ್ರತಿಷ್ಠಾಪಿಸುವ ದೊಡ್ಡ ಯೋಜನೆ ಇದೆ.


ಇಷ್ಟನ್ನು ಓದಿದ ಬಳಿಕ ಅಲ್ಲಿಗೆ ತೆರಳಿದರೆ ಮುಖ್ಯ ರಸ್ತೆಯಿಂದ ದೇವಾಲಯಕ್ಕಿರುವ ೨ ಕಿ.ಮಿ. ಮಣ್ಣಿನ ರಸ್ತೆಯ ಉದ್ದಕ್ಕೂ ದೀಪಾಲಂಕಾರ ಮಾಡಲಾಗಿತ್ತು. ನಾವು ಹೊಸಗುಂದ ತಲುಪಿದಾಗಲೆ ಸಂಜೆ ೬.೧೫ರ ಸಮಯ. ಕತ್ತಲಾಗುತ್ತಿತ್ತು. ದೇವಾಲಯದ ಸಮೀಪವೆಲ್ಲಾ ಜನಜಂಗುಳಿ. ಎಲ್ಲರೂ ಅದೇನೋ ಉತ್ಸಾಹದಿಂದ ಅಚೀಚೆ ಓಡಾಡುತ್ತಿದ್ದರು. ಅಂದು ಉಮಾ ಮಹೇಶ್ವರ ದೇವಾಲಯದ ವಾರ್ಷಿಕೋತ್ಸವ. ಸ್ವಲ್ಪ ದೂರದಲ್ಲಿತ್ತು ತಲೆ ಬೋಳಿಸಿದಂತೆ ಕಾಣುತ್ತಿದ್ದ ಉಮಾಮಹೇಶ್ವರ ದೇವಾಲಯ! ದೇವಾಲಯದ ಛಾವಣಿಯನ್ನು ಸಂಪೂರ್ಣವಾಗಿ ಬಿಚ್ಚಲಾಗಿತ್ತು. ಪುರಾತತ್ವ ಇಲಾಖೆ ಪುನ: ನಿರ್ಮಾಣದ ಕಾರ್ಯವನ್ನು ಶುರುಮಾಡಿಯಾಗಿತ್ತು.

ನಾನು ಬಾಡಿಗೆ ಕಾರಿನಿಂದ ನನ್ನ ಸ್ವಂತ ಕಾರೆಂಬಂತೆ ಇಳಿದ ಪರಿ ನೋಡಿ ಇಬ್ಬರು ಸ್ವಯಂಸೇವಕರು, ಯಾರೋ ಗಣ್ಯ ವ್ಯಕ್ತಿ ಬಂದಿರಬೇಕೆಂದು ತಿಳಿದು ನನ್ನ ಬಳಿ ಬಂದು ಸ್ವಾಗತಿಸಿದರು. ದೇವಾಲಯ ನೋಡಲು ಬಂದಿರುವೆನೆಂದು ಹೇಳಿದ ಬಳಿಕ, ಉಮಾಮಹೇಶ್ವರ ದೇವಾಲಯದ ಬಳಿ ಕರೆದೊಯ್ದು, ನಾನು ಅದಾಗಲೇ ಓದಿ ತಿಳಿದಿಕೊಂಡಿದ್ದ ಎಲ್ಲಾ ವಿಷಯಗಳೊಂದಿಗೆ ಇನ್ನು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ನೀಡತೊಡಗಿದರು.


ಅವಶ್ಯವಿರುವುದಕ್ಕಿಂತ ಸ್ವಲ್ಪ ಹೆಚ್ಚೇ ಕಾಡು ಕಡಿದಿರುವಂತೆ ತೋರುತ್ತದೆ ಎಂದು ನಾನು ಕೇಳಿದಾಗ ಉತ್ತರಕ್ಕೆ ತಡವರಿಸತೊಡಗಿದರು. ವಿಶಾಲ ಟೆಂಪಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಇರಾದೆಯಿರುವುದರಿಂದ ಅಷ್ಟು ಕಾಡು ಕಡಿಯಬೇಕಾಯಿತು ಎಂಬ ಸಮರ್ಥನೆ. ಅದಾಗಲೇ ವೀರಭದ್ರ, ವಿನಾಯಕ, ಕಂಚಿಕಾಲಮ್ಮ ವಿಗ್ರಹಗಳನ್ನು ಮತ್ತು ಉಮಾ ಮಹೇಶ್ವರ ಲಿಂಗವನ್ನು ಅಲ್ಲೇ ಸಮೀಪದಲ್ಲಿ ನೂತನವಾಗಿ (ತಾತ್ಕಾಲಿಕವಾಗಿಯೂ) ನಿರ್ಮಿಸಲಾಗಿರುವ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವುದಾಗಿಯೂ, ಉಮಾ ಮಹೇಶ್ವರ ದೇವಾಲಯದ ಪುನ: ನಿರ್ಮಾಣದ ಬಳಿಕ ಲಿಂಗವನ್ನು ಇಲ್ಲಿಯೂ ಮತ್ತು ಉಳಿದ ೩ ವಿಗ್ರಹಗಳನ್ನು ಸೂಕ್ತ ಸ್ಥಳಗಳಲ್ಲಿ ಪುನ:ಪ್ರತಿಷ್ಠಾಪನಗೊಳಿಸುವುದಾಗಿಯೂ ಹೇಳಿ ಸ್ವಲ್ಪ ಕನ್ಫ್ಯೂಷನ್ ಉಂಟುಮಾಡಿದ. ಹೆಚ್ಚಿನ ಪ್ರಶ್ನೆ ಕೇಳಿದರೆ ನನಗೆ ಇನ್ನಷ್ಟು ಗೊಂದಲವುಂಟಾಗಬಹುದು ಎಂದು ನಂತರ ಸುಮ್ಮನುಳಿದೆ. ದೇವಾಲಯ ನೋಡಿ ಬನ್ನಿ, ಕಾಯುತ್ತಿರುತ್ತೇವೆ ಎಂದು ಅವರಿಬ್ಬರು ಹೋಮ ಹವನ ನಡೆಯುತ್ತಿದ್ದ ಸ್ಥಳದೆಡೆ ತೆರಳಿದರು.


೧೧ನೇ ಶತಮಾನದಲ್ಲಿ ಹುಂಚದಲ್ಲಿ ನೆಲೆಗೊಂಡಿದ್ದ ಸಂತರ ಸಾಮ್ರಾಜ್ಯದ ರಾಜರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈ ದೇವಾಲಯ ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾಪಥಗಳನ್ನು ಹೊಂದಿದೆ. ಮುಖಮಂಟಪದಲ್ಲಿ ೨೦ ಕಂಬಗಳಿದ್ದು, ೩ ಕಡೆಯಿಂದ ದ್ವಾರಗಳಿವೆ. ನವರಂಗದ ದ್ವಾರಕ್ಕೆ ಜಾಲಂಧ್ರಗಳಿದ್ದು, ಬದಿಯಲ್ಲಿ ಕಿಟಕಿಯಂತಹ ರಚನೆಯಿದೆ. ಗರ್ಭಗುಡಿಯಲ್ಲಿ ಮೊದಲಿನಿಂದಲೂ ಶಿವಲಿಂಗವಿರಲಿಲ್ಲವಂತೆ. ಈಗ ಪುನ: ನಿರ್ಮಾಣದ ಬಳಿಕ ನೂತನವಾಗಿ ಪ್ರತಿಷ್ಠಾಪಿಸಲಿದ್ದಾರಂತೆ. ಹಳೇ ದೇವಾಲಯದ ಆಧುನೀಕರಣದ ಪ್ರಕ್ರಿಯೆ ಆರಂಭವಾಗಿದೆ ಎನ್ನಬಹುದು. ಮೂಲ ದೇವಾಲಯದ ರೂಪಕ್ಕೆ ಧಕ್ಕೆಯುಂಟಾಗದಂತೆ ನೋಡಿಕೊಂಡರೆ ಸಾಕು. ಇನ್ನು ಐದಾರು ವರ್ಷಗಳ ಬಳಿಕ ಇಲ್ಲಿ ಹೇಗೆ ಕಾಣಬಹುದೇನೋ. ಸುತ್ತಮುತ್ತಲಿನ ಸುಮಾರು ೫೦೦ ಎಕರೆಯಷ್ಟು ಜಾಗದಲ್ಲಿರುವ ಕಾಡನ್ನು ದೇವರಕಾಡು ಎಂದು ಅಧಿಕೃತವಾಗಿ ಘೋಷಿಸಲು ಸರಕಾರಕ್ಕೆ ಹೊಸಗುಂದದ ನಾಗರಿಕರು ಮನವಿ ಸಲ್ಲಿಸಿದ್ದಾರೆ.


ಇನ್ನೊಂದು ವಿಷಯವೆಂದರೆ ಉಮಾಮಹೇಶ್ವರ ದೇವಾಲಯವನ್ನು ಮಲೆನಾಡಿನ ಖಜುರಾಹೋ ಎನ್ನುತ್ತಾರೆ. ನಾಡಕಲಸಿಯ ರಾಮೇಶ್ವರ ದೇವಾಲಯದಲ್ಲಿ ಕೆಲವೊಂದು ಮಿಥುನ ಶಿಲ್ಪಗಳಿದ್ದವು. ಆದರೆ ಹೊಸಗುಂದದ ಉಮಾಮಹೇಶ್ವರ ದೇವಾಲಯದಲ್ಲಿ ಅದ್ಭುತ ಮಿಥುನ ಶಿಲ್ಪಗಳಿವೆ. ದೇವಾಲಯದ ಮುಖಮಂಟಪದ ೩ ಸುತ್ತಲ್ಲೂ ಸಣ್ಣ ಜಾಗದಲ್ಲಿ ಸುಂದರವಾಗಿ ದೇವ ದೇವಿಯರ, ಸಮುದ್ರ ಮಂಥನದ, ಆನೆ ಕುದುರೆಗಳ ಮತ್ತು ಮಿಥುನ ಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ. ಕತ್ತಲಾವರಿಸುತ್ತಿದ್ದರಿಂದ ಹೆಚ್ಚು ಚಿತ್ರಗಳನ್ನು ತೆಗೆಯಲಾಗಲಿಲ್ಲ. ಪುನ: ನಿರ್ಮಾಣ ಪ್ರಕ್ರಿಯೆಗೆ ಇನ್ನೊಂದೆರಡು ವರ್ಷ ತಗಲಬಹುದು. ನಂತರ ಮತ್ತೊಮ್ಮೆ ಹೊಸಗುಂದಕ್ಕೆ ಭೇಟಿ ನೀಡಬೇಕು: ದೇವಾಲಯದ ಅಂದವನ್ನು ವೃದ್ಧಿಸಿದ್ದಾರೋ ಅಥವಾ ಕ್ಷೀಣಿಸಿದ್ದಾರೋ ಎಂದು ತಿಳಿದುಕೊಳ್ಳಲು!

ಮಾಹಿತಿ: ವೀರೇಂದ್ರ ಪಿ.ಎಮ್

6 ಕಾಮೆಂಟ್‌ಗಳು:

Govinda Nelyaru ಹೇಳಿದರು...

ದೇವಾಲಯದ ಬಗೆಗೆ ವಿವರಗಳು ಕುಷಿ ಕೊಟ್ಟವು. ನಾವೇ ನಿಮ್ಮ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದಂತಾಯಿತು. ಕೃತಜ್ನತೆಗಳು.

ಅಲ್ಲಿಗೆ ತಲಪುವ ಬಗೆಗೆ ಸ್ವಲ್ಪ ವಿವರಗಳಿದ್ದರೆ ಚೆನ್ನ. ಪರ ಊರ ಪ್ರವಾಸಿಗಳಿಗೆ ಸಹಾಯಕ. ಕೆಲವೊಮ್ಮೆ ಹತ್ತಿರ ಹೋದರೂ ಸ್ಪಷ್ಟ ಕಲ್ಪನೆ ಇರದೆ ಬೇಟಿ ಸಾದ್ಯವಾಗುವುದಿಲ್ಲ.

Aravind GJ ಹೇಳಿದರು...

ಅರೇ!! ಈ ದೇವಸ್ಠಾನದ ಬಗ್ಗೆ ಗೊತ್ತೆ ಇರಲಿಲ್ಲ. ಈ ಸಲ ಊರಿಗೆ ಹೋದಾಗ ಹೋಗಬೇಕು.

ಮಿಥುನ ಕೊಡೆತ್ತೂರು ಹೇಳಿದರು...

ಯಾವಾಗ ಸುತ್ತುತ್ತೀರಾ ಈ ಎಲ್ಲ ಊರೂರೂಗಳಿಗೆ?
ಅಚ್ಚರಿ.

Rakesh Holla ಹೇಳಿದರು...

Ha ha nice narration>>>

ರಾಜೇಶ್ ನಾಯ್ಕ ಹೇಳಿದರು...

ಗೋವಿಂದ,
ಧನ್ಯವಾದಗಳು. ಲೇಖನದ ಕೊನೆಯಲ್ಲಿ ಲೇಬಲ್ ವಿಭಾಗವನ್ನು ಗಮನಿಸಿದರೆ ದೇವಾಲಯ ಎಲ್ಲಿದೆ ಎಂಬುದನ್ನು ಸುಲಭದಲ್ಲಿ ಊಹಿಸಬಹುದು. ಅಲ್ಲಿಂದ ಮುಂದೆ ದೇವಾಲಯಕ್ಕೆ ದಾರಿ ಕಂಡುಕೊಳ್ಳುವುದನ್ನು ತಾವೇ ಮಾಡಬೇಕು!

ಅರವಿಂದ,
ದೇವಾಲಯವನ್ನು ಸಂಪೂರ್ಣವಾಗಿ ಬಿಚ್ಚಿ ಇಟ್ಟ ದೃಶ್ಯ ನಿಮಗೆ ಕಾಣಸಿಗುವ ಸಾಧ್ಯತೆಗಳಿರಬಹುದು.

ಮಿಥುನ್ ಮತ್ತು ರಾಕೇಶ್,
ಥ್ಯಾಂಕ್ಸ್.

prashasti ಹೇಳಿದರು...

ಉತ್ತಮ ಮಾಹಿತಿ ಮತ್ತು ಚಿತ್ರಗಳೊಂದಿಗೆ ಒಳ್ಳೆಯ ಬರಹ.. ಇದೇ ವಿಷಯದ ಬಗ್ಗೆ ಬರೆದ ನನ್ನ ಬರಹವೊಂದು ನೆನಪಾಯಿತು :-)
http://prashasti-prashantavanam.blogspot.in/2011/11/blog-post_21.html