ಭಾನುವಾರ, ಮಾರ್ಚ್ 22, 2009

ಸರ್ವೇಶ್ವರ ದೇವಾಲಯ - ನರೇಗಲ್


೦೪-೦೧-೨೦೦೯. ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯವನ್ನು ಈ ಮಟ್ಟಕ್ಕೆ ಪುನ: ರಚಿಸಿರುವ ಪುರಾತತ್ವ ಇಲಾಖೆಯನ್ನು ಅಭಿನಂದಿಸಬೇಕು. ದೇವಾಲಯ ನೋಡಲು ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ದ್ವಾರ ತುಂಬಾ ಸಣ್ಣದಾಗಿದ್ದು, ಛಾವಣಿ ತುಂಬಾ ಕೆಳಮಟ್ಟದಲ್ಲಿದೆ. ದೇವಾಲಯದ ಸುತ್ತಮುತ್ತ ಭಗ್ನಗೊಂಡಿರುವ ಕೆಲವು ಮೂರ್ತಿಗಳನ್ನು ಮತ್ತು ದೊರಕಿರುವ ಶಾಸನಗಳನ್ನು ಇರಿಸಲಾಗಿದೆ.


ಈ ಏಕಕೂಟ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಸಣ್ಣ ಶಿವಲಿಂಗ. ನವರಂಗ ಬಹಳ ವಿಶಾಲವಾಗಿದ್ದು ೨೪ ಕಂಬಗಳನ್ನು ಹೊಂದಿದೆ. ದೇವಾಲಯದ ಪ್ರಮುಖ ದ್ವಾರವನ್ನು ಹೊರತುಪಡಿಸಿ ನವರಂಗಕ್ಕೆ ಇನ್ನೆರಡು ದ್ವಾರಗಳಿವೆ. ಛಾವಣಿ ಬಹಳ ಕೆಳಮಟ್ಟದಲ್ಲಿದ್ದು, ಮೊದಲಿಂದಲೂ ಹಾಗೇ ಇತ್ತೋ ಅಥವಾ ನಂತರ ಪುರಾತತ್ವ ಇಲಾಖೆ, ’ಹಾಗಿದ್ದಿರಬಹುದು’ ಎಂದು ಊಹಿಸಿ ರಚಿಸಿದೆಯೋ ಎಂದು ಗೊತ್ತಾಗಲಿಲ್ಲ. ಈ ದೇವಾಲಯದ ಬಗ್ಗೆ ಯಾವ ಮಾಹಿತಿಯೂ ನನಗೆ ಲಭ್ಯವಾಗಲಿಲ್ಲ. ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿಯೇ ಮಾಹಿತಿ ಪಡಕೊಳ್ಳಬೇಕು.


ನಂದಿಯ ಮೂರ್ತಿ ಎಲ್ಲೂ ಕಾಣಬರಲಿಲ್ಲ. ನವರಂಗದ ಇಕ್ಕೆಲಗಳಲ್ಲೂ ಕುಳಿತುಕೊಳ್ಳಲು ಕಲ್ಲಿನ ಆಸನವಿದೆ. ಅಂತರಾಳದ ದ್ವಾರಕ್ಕೆ ಸುಂದರ ಜಾಲಂಧ್ರಗಳಿವೆ. ಪ್ರಮುಖ ದ್ವಾರಕ್ಕೂ ಜಾಲಂಧ್ರಗಳಿವೆ. ಹೊಯ್ಸಳ ಕಾಲದಲ್ಲಿ ಈ ದೇವಾಲಯದ ನಿರ್ಮಾಣವಾಗಿರಬಹುದು ಎಂದು ನವರಂಗದ ಒಂದು ಮೂಲೆಯಲ್ಲಿರಿಸಲಾಗಿರುವ ಕಲ್ಲಿನ ಮೂರ್ತಿಯೊಂದನ್ನು ನೋಡಿ ಊಹಿಸಬಹುದು. ದೇವಾಲಯವೊಂದು ಈ ಮಟ್ಟಕ್ಕೂ ನಶಿಸಿಹೋಗಬಹುದೇ ಎಂದು ಆಶ್ಚರ್ಯವಾಯಿತು. ಪುರಾತತ್ವ ಇಲಾಖೆಯ ಸುಪರ್ದಿಗೆ ಬರುವ ಮೊದಲೇ ಸಂಪೂರ್ಣ ನಿರ್ನಾಮಗೊಂಡಿದ್ದ ದೇವಾಲಯವಿದು. ಅಲ್ಲಲ್ಲಿ ತೇಪೆ ಸಾರಿಸಿ, ಸಿಮೆಂಟ್ ಹಚ್ಚಿ ಮೂಲ ರೂಪಕ್ಕೆ ತರುವ ಹರಸಾಹಸವನ್ನು ಮಾಡಲಾಗಿದೆ.


ಪ್ರಮುಖ ದ್ವಾರದ ದುರವಸ್ಥೆಯನ್ನು ನೋಡಿ ಬೇಜಾರಾಯಿತು. ಪ್ರಾಚೀನ ಕಾಲದ ದೇವಾಲಯಗಳ ಮುಖ್ಯ ಅಂಗವೇ ಪ್ರಮುಖ ದ್ವಾರ. ಆದರೆ ಸರ್ವೇಶ್ವರನ ಪ್ರಮುಖ ದ್ವಾರ ಎಲ್ಲಿಂದಲೋ ತಂದಿಟ್ಟ ಬದಲಿ ದ್ವಾರದಂತೆ ಕಾಣುತ್ತದೆ. ಪುರಾತತ್ವ ಇಲಾಖೆಯನ್ನು ದೂರಲಾಗದು. ಅಷ್ಟಾದರೂ ಮಾಡಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬೇಕು. ಇಲ್ಲಿರುವ ಸಿಬ್ಬಂದಿಗೆ ದೇವಾಲಯದ ಬಗ್ಗೆ ಏನೂ ಗೊತ್ತಿಲ್ಲ. ನಾವು ಅಷ್ಟು ಚಿತ್ರಗಳನ್ನು ಯಾಕೆ ತೆಗೆಯುತ್ತಿದ್ದೇವೆ ಎಂಬುದೇ ಆತನ ದೊಡ್ಡ ಚಿಂತೆಯಾಗಿತ್ತು.

5 ಕಾಮೆಂಟ್‌ಗಳು:

sunaath ಹೇಳಿದರು...

ಸುಂದರವಾದ ಚಿತ್ರಗಳಿಗಾಗಿ ಹಾಗೂ ವಿವರಣೆಗಾಗಿ ಅಭಿನಂದನೆಗಳು.

Aravind GJ ಹೇಳಿದರು...

ಸೊಗಸಾದ ಲೇಖನ. ಉತ್ತರ ಕರ್ನಾಟಕದ ಕಡೆ ಹೋಗದೆ ತುಂಬಾ ಕಾಲವಾಯಿತು. ಒಮ್ಮೆ ಹೋಗಬೇಕು.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದಗಳು.

ಅರವಿಂದ್,
ಉತ್ತರ ಕರ್ನಾಟಕದಲ್ಲಿ ತುಂಬಾ ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ ಪ್ರಚಾರ ಅಷ್ಟೇ ಕಡಿಮೆ. ನೋಡಲು ಆರಂಭಿಸಿದರೆ ಒಂದರ ನಂತರ ಒಂದರಂತೆ ಸುಂದರ ಸ್ಥಳಗಳು.

Chamaraj Savadi ಹೇಳಿದರು...

ರಾಜೇಶ್‌,

ನರೇಗಲ್‌ ಅಂದರೆ ಯಾವ ಜಿಲ್ಲೆಯದು? ಇದು ಗದಗ ಜಿಲ್ಲೆ ರೋಣ ತಾಲ್ಲೂಕಿನ ನರೇಗಲ್ಲಾ? ಹೌದಾದರೆ, ಊರಿನ ಯಾವ ಭಾಗದಲ್ಲಿ ಈ ದೇವಸ್ಥಾನವಿದೆ? ಈ ಕುರಿತು ಮಾಹಿತಿ ಇದ್ದರೆ ನೀಡುತ್ತೀರಾ?

ರಾಜೇಶ್ ನಾಯ್ಕ ಹೇಳಿದರು...

ಚಾಮರಾಜ,
ನೀವು ಹೇಳಿರುವ ನರೇಗಲ್ಲಿನಲ್ಲೂ ಒಂದು ಪ್ರಾಚೀನ ದೇವಾಲಯವಿದೆ. ನಾನಿನ್ನೂ ಅಲ್ಲಿಗೆ ಭೇಟಿ ನೀಡಿಲ್ಲವಾದ್ದರಿಂದ ಊರಿನ ಯಾವ ಭಾಗದಲ್ಲಿದೆ ಎಂದು ಹೇಳಲಾರೆ.