ಬುಧವಾರ, ಮಾರ್ಚ್ 18, 2009

ಬೆಳದಿಂಗಳ ರಾತ್ರಿಯ ಮಾರ್ಗದರ್ಶಿ

ಈ ಗುಡ್ಡಕ್ಕೊಂದು ಭೇಟಿ ನೀಡೋಣವೆಂದು ಈ ತಿಂಗಳ ಮೊದಲ ಶನಿವಾರದಂದು ಮಾಧವರೊಂದಿಗೆ ಆ ಹಳ್ಳಿಯನ್ನು ತಲುಪಿದಾಗ ರಾತ್ರಿ ೮.೩೦ರ ಸಮಯ. ಈ ಗುಡ್ಡಕ್ಕೆ ಚಾರಣ ಆರಂಭವಾಗುವುದೇ ಎಸ್ಟೇಟೊಂದರ ಒಳಗಿನಿಂದ. ಹಳ್ಳಿಯಿಂದ ಎಸ್ಟೇಟಿಗೆ ೫ ಕಿ.ಮಿ ದೂರ. ಬೆಳದಿಂಗಳಿದ್ದರೂ ಈ ದೂರವನ್ನು ನಾವಿಬ್ಬರೇ ಕ್ರಮಿಸಲು ಧೈರ್ಯ ಸಾಲುತ್ತಿರಲಿಲ್ಲ. ನಾವು ಬಸ್ಸಿನಿಂದಿಳಿದ ಸ್ಥಳದಲ್ಲೊಂದು ಮನೆ/ಅಂಗಡಿ ಬಿಟ್ಟರೆ ಬೇರೇನೂ ಇಲ್ಲ. ಯಾರಾದರೂ ಜೊತೆಯಿದ್ದರೆ ಎಂದು ಯೋಚಿಸುತ್ತಿರುವಾಗಲೇ, ಆಪದ್ಬಾಂಧವನಂತೆ ಆಗಮಿಸಿದವನು ನಾವು ಹೋಗಬೇಕಾಗಿದ್ದ ಎಸ್ಟೇಟಿನಲ್ಲೇ ಕೆಲಸ ಮಾಡುತ್ತಿರುವ ಚಿನ್ನಯ್ಯ. ನಮ್ಮನ್ನು ಎಸ್ಟೇಟಿಗೆ ಕರೆದೊಯ್ಯುವಂತೆ ವಿನಂತಿಸಿದಾಗ, ’ಒಂತೆ ಬೇಲೆ ಉಂಡು. ಅವೆನ್ ಮುಗಿಪಾದ್ ಇತ್ತೆ ಬರ್ಪೆ’ (ಸ್ವಲ್ಪ ಕೆಲಸ ಇದೆ. ಅದನ್ನು ಮುಗಿಸಿ ಈಗ ಬರುವೆ)’ ಎಂದು ಆಚೆ ಹೋದವ ೧೦ ನಿಮಿಷದಲ್ಲಿ ಹಾಜರಾದ.

ಆತನೊಂದಿಗೆ ಹೊರಟ ಕೂಡಲೇ ನಮಗೆ ಅರಿವಾಗತೊಡಗಿತು - ಆತ ಮುಗಿಸಿ ಬಂದ ಕೆಲಸವೆಂದರೆ ಕಂಠಪೂರ್ತಿ ಸಾರಾಯಿ ಕುಡಿದದ್ದು ಎಂದು! ರಸ್ತೆಯ ಮಧ್ಯದಿಂದ ಒಂದು ಬದಿಗೆ, ನಂತರ ಪುನ: ಮಧ್ಯಕ್ಕೆ, ನಂತರ ಮತ್ತೊಂದು ಬದಿಗೆ ಹೀಗೆ ಹಾಸ್ಯಾಸ್ಪದವಾಗಿ ತೂರಾಡುತ್ತ ನಡೆಯುತ್ತಿದ್ದ ಚಿನ್ನಯ್ಯ. ನಡೆಯುತ್ತಾ ಹೋದಂತೆ ಆತನಿಗೆ ಅಮಲು ಏರುತ್ತಾ ಹೋಯಿತು. ಮಾತನಾಡಿದ್ದನ್ನೇ ಮತ್ತೆ ಮತ್ತೆ ಮಾತನಾಡತೊಡಗಿದ. ಅಸಂಬದ್ಧ ಉತ್ತರಗಳನ್ನು ನೀಡತೊಡಗಿದ. ಎಸ್ಟೇಟಿನಲ್ಲಿ ನಮಗೆ ಆ ರಾತ್ರಿ ತಂಗಲು ಅನುಮತಿ ದೊರೆಯಬಹುದೇ ಎಂಬ ಒಂದೇ ಪ್ರಶ್ನೆಗೆ ಆತ ಸುಮಾರು ೧೦-೧೫ ಸಲ ಉತ್ತರ ನೀಡಿದ!

ಪ್ರತಿ ೨-೩ ನಿಮಿಷಕ್ಕೊಮ್ಮೆ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ (ಏನೂ ತಲೆಬಿಸಿ ಮಾಡಿಕೊಳ್ಳಬೇಡಿ) ಎಂದು ಹೇಳುತ್ತಲೇ ಇದ್ದ. ಆತನ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಕೇಳಿಯೇ ನನಗೆ ಮಂಡೆಬೆಚ್ಚ ಶುರುವಾಗತೊಡಗಿತು. ಆದರೂ ಆತ ಹಾಗೆ ಹೇಳುವುದನ್ನು ಎಸ್ಟೇಟಿನ ಮ್ಯಾನೇಜರ್ ಅವರ ಮನೆಯ ತನಕ ನಮ್ಮನ್ನು ಬೀಳ್ಕೊಡುವವರೆಗೂ ನಿಲ್ಲಿಸಲೇ ಇಲ್ಲ. ಆತನೊಂದಿಗಿದ್ದ ಸುಮಾರು ೯೦ ನಿಮಿಷಗಳಲ್ಲಿ ಸರಿಸುಮಾರು ೩೦-೩೫ ಸಲವಾದರೂ ಚಿನ್ನಯ್ಯ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಎಂದು ಉಸುರಿದ್ದ. ಮೊನ್ನೆ ಉಡುಪಿ ಪೇಟೆಯಲ್ಲಿ ಸಿಕ್ಕಿದ್ದ ಮಾಧವರು, ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಎಂದೇ ಮಾತು ಆರಂಭಿಸಿದರೆಂದರೆ, ಚಿನ್ನಯ್ಯ ಯಾವ ಪರಿ ನಮ್ಮಿಬ್ಬರ ಮೇಲೆ ಆ ೩ ಶಬ್ದಗಳ ಪ್ರಹಾರ ಮಾಡಿರಬಹುದೆಂದು ನೀವು ಊಹಿಸಬಹುದು.

ಯಾವಾಗಲೂ ಸ್ವಲ್ಪ ವೇಗವಾಗಿ ನಡೆಯುವ ಮಾಧವ ೧೫-೨೦ ಹೆಜ್ಜೆ ಮುಂದೆ ಇದ್ದರೆ, ನಾನು ಸ್ವಲ್ಪ ಹಿಂದೆ ಮತ್ತು ನಮ್ಮಿಬ್ಬರ ನಡುವೆ ಚಿನ್ನಯ್ಯ. ಈ ಚಿನ್ನಯ್ಯ ಆಗೊಮ್ಮೆ ಈಗೊಮ್ಮೆ ನನ್ನತ್ತ ತಿರುಗಿ ’ದಾಲ ಮಂಡೆಚ್ಚ ಮಲ್ಪೊಡ್ಚಿ’ ಎಂದು ಹೇಳುತ್ತಾ, ತೂರಾಡುತ್ತಾ, ಅಸಂಬದ್ಧ ಹೆಜ್ಜೆಗಳನ್ನು ಇಡುತ್ತಾ, ನಂಬಲಸಾಧ್ಯ ವೇಗದಲ್ಲಿ ನಡೆಯುತ್ತಿದ್ದ. ಈಗ ನಾವು ಎಸ್ಟೇಟಿನೊಳಗೆ ನಡೆಯುತ್ತಿದ್ದೆವು. ಸುಮಾರು ಒಂದು ತಾಸು ನಡೆದ ಬಳಿಕ ’ದನಿ, ಒಂತೆ ಬೇಗ ಬಲೆ’ (ಸ್ವಲ್ಪ ಬೇಗ ಬನ್ನಿ) ಎಂದು ನನಗೆ ಹೇಳಿದಾಗ ಮಾಧವರಿಗೆ ನಗು. ನಶೆಯಲ್ಲಿದ್ದವನೊಬ್ಬ ನನಗೆ ’ವೇಗವಾಗಿ ನಡೆಯಿರಿ’ ಎಂದನೆಂದು ಅವರಿಗೆ ನಗು. ಈಗ ಮಾಧವರ ಹಿಂದೆ ನಾನಿದ್ದರೆ ನನ್ನ ಹಿಂದೆ ಚಿನ್ನಯ್ಯ. ಸ್ವಲ್ಪ ಸಮಯದ ಬಳಿಕ ಹಿಂದೆ ’ಅಯ್ಯಮ್ಮ’ ಎಂಬ ಉದ್ಗಾರ ಬಂದಾಗ ಹಿಂತಿರುಗಿ ನೋಡಿದರೆ ಚಿನ್ನಯ್ಯ ರಸ್ತೆಯಲ್ಲಿರಲಿಲ್ಲ! ರಸ್ತೆ ಬದಿಯಲ್ಲಿದ್ದ ಹೊಂಡದಲ್ಲಿ ಆತ ಕುಳಿತುಕೊಂಡ ಸ್ಥಿತಿಯಲ್ಲಿ ಬಿದ್ದಿದ್ದ! ಆಗ ಆತ ನಮ್ಮಲ್ಲಿ ಏನೆಂದ ಗೊತ್ತೇ? ಆತನಿಂದ ಸುಮಾರು ೧೫ ಹೆಜ್ಜೆಯಷ್ಟು ದೂರದಲ್ಲಿ ನಿಂತಿದ್ದ ನಮಗೆ ಹೊಂಡದಲ್ಲಿ ಕೂಳಿತುಕೊಂಡೇ ತನ್ನ ಮುಖದ ಮುಂದೆ ಬಲಗೈಯ ತೋರುಬೆರಳನ್ನು ನಿಧಾನವಾಗಿ ಅಲ್ಲಾಡಿಸುತ್ತಾ ಆತ ಉಸುರಿದ ೩ ಶಬ್ದಗಳು - ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’!!

ಸ್ವಲ್ಪ ಮುಂದೆ ಹೋದಾಗ ಎಲ್ಲಿಂದಲೋ ನಾಯಿಯೊಂದು ಬೊಗಳುತ್ತಾ ಬಂದಾಗ ಚಿನ್ನಯ್ಯ, ’ಏ ರಾಹುಲ್, ರಾಹುಲ್’ ಎಂದು ಅದನ್ನು ನಿಯಂತ್ರಿಸಿದ. ’ಇವನು ರಾಹುಲ್. ನನ್ನ ಬೆಸ್ಟ್ ದೋಸ್ತಿ. ಅವನಿಗೆ ಗೊತ್ತುಂಟು ನಾನೀಗ ಫುಲ್ ಟೈಟ್ ಎಂದು. ಅದಕ್ಕೆ ಅವನು ರಾತ್ರಿ ನನ್ನತ್ರ ಜಾಸ್ತಿ ಮಾತಾಡುದಿಲ್ಲ’ ಎಂದು ಇನ್ನೊಂದು ಪ್ರಲಾಪ ಆರಂಭಿಸಿದ. ರಾಹುಲ್ ಯಾವಾಗಲೂ ಚಿನ್ನಯ್ಯನ ರೂಮಿನಲ್ಲೇ ಮಲಗುವುದಂತೆ. ಸ್ವಲ್ಪ ಮುಂದೆ ಮ್ಯಾನೇಜರರ ಮನೆ ಕಾಣಿಸಿದಾಗ, ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ, ಬೊಲ್ಪುಗ್ ತಿಕ್ಕಗ’ (ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ಮುಂಜಾನೆ ಸಿಗೋಣ) ಎಂದು ಚಿನ್ನಯ್ಯ ನಮಗೆ ವಿದಾಯ ಹೇಳಿ ರಾಹುಲ್-ನೊಂದಿಗೆ ತನ್ನ ರೂಮಿನೊಳಗೆ ತರಳಿದ. ಇಂತಹ ಮಾರ್ಗದರ್ಶಿ ಸಿಗುವುದು ಬಹಳ ಅಪರೂಪ. ಯಾವಾಗಲೂ ಎಸ್ಟೇಟಿನಿಂದ ಹಳ್ಳಿಯೆಡೆ ತೆರಳಿ, ಟೈಟಾಗಿ ರಾತ್ರಿ ೧೧-೧೨ಕ್ಕೆ ಎಸ್ಟೇಟಿನ ದಾರಿ ತುಳಿಯುವ ಚಿನ್ನಯ್ಯ ಅಂದು ನಮ್ಮ ಸಲುವಾಗಿ ೮.೪೫ಕ್ಕೇ ಹಿಂತಿರುಗಿ ಎಸ್ಟೇಟಿನವರೆಗೆ ನಮ್ಮನ್ನು ಕರೆದೊಯ್ದ. ಈ ಉಪಕಾರಕ್ಕಾಗಿ ಚಿನ್ನಯ್ಯನಿಗೆ ತುಂಬಾ ಥ್ಯಾಂಕ್ಸ್.

6 ಕಾಮೆಂಟ್‌ಗಳು:

ಶರಶ್ಚಂದ್ರ ಕಲ್ಮನೆ ಹೇಳಿದರು...

ರಾಜೇಶ್ ಅವ್ರೆ,

ತುಂಬಾ ದಿನ ಆಯ್ತು ನೀವು ಬರೆದು, ಏನು ಕೆಲಸದಲ್ಲಿ ಬ್ಯುಸಿ ಇದ್ದೀರಿ ಅನ್ಸುತ್ತೆ... ಹೊಸ ಚಾರಣ ಆಗಲಿಲ್ಲವೇ?

ನಿಮ್ಮ ಹಾಗು ಚಿನ್ನಯ್ಯನ ಮಾತುಕತೆ ಕಲ್ಪಿಸಿಕೊಂಡು ನಕ್ಕೆ :)

- ಶರಶ್ಚಂದ್ರ ಕಲ್ಮನೆ

sunaath ಹೇಳಿದರು...

ರಾಜೇಶ,
’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’!

ಬಾಲು ಸಾಯಿಮನೆ ಹೇಳಿದರು...

ಧನ್ಯವಾದಗಳು.
ಕಾಳಿ ಕಣಿವೆಯ ಕತೆಗಳು ಚನ್ನಾಗಿವೆ.
http://kaadinahaadi.blogspot.com/

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಚಾರಣ ಕಡಿಮೆಯಾಗಿದೆ. ಸಮಯ ಸಿಕ್ಕಾಗ ಚಾರಣ ಮಾಡುವುದು ಇದ್ದೆ ಇದೆ.

ಸುನಾಥ,
ಮಂಡೆಬೆಚ್ಚ ಇಲ್ಲಾರೀ...

ಬಾಲು,
ಕಾಡಿನಹಾದಿ ಚೆನ್ನಾಗಿದೆ. ಒಂಟಿ ಸಲಗದ ಚಿತ್ರ ಸೂಪರ್. ಇನ್ನೂ ಹೆಚ್ಚು ಪರಿಸರ ಸಂಬಂಧಿತ ಲೇಖನಗಳು ಬರಲಿ.

ಬೆಂಗಳೂರು ರಘು ಹೇಳಿದರು...

ರಾಜೇಶ್, ನಿಮ್ಮ ಲೇಖನ ಸೂಪರ್ ಆಗಿದೆ. ನಿಮ್ಮ ಲೇಖನ ಓದಿದಾಗಲೆಲ್ಲ ಅಸೂಯೆ ಆಗುತ್ತದೆ(ನನಗೆ ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಇದ್ದು ಹಸಿರು ಮರೆತೇ ಹೋಗಿದೆ, ನನ್ನ ಚಿಕ್ಕಂದಿನ ಬೆಂಗಳೂರು ಮತ್ತೆ ಸಿಗಲಾರದು). ನಿಮ್ಮ ವೃತ್ತಿ ಹಾಗೂ ಪ್ರವೃತ್ತಿಗಳ ಹಿಂದಿನ ಶ್ರಮ ಶ್ಲಾಘನೀಯ. ಚೆನ್ನಾಗಿದೆ. ದಯವಿಟ್ಟು ನಿಮ್ಮ ಲೇಖನದ ಫ್ರೀಕ್ವೆನ್ಸೀ ಜಾಸ್ತಿ ಮಾಡಿ. ಧನ್ಯವಾದಗಳು.

ರಾಜೇಶ್ ನಾಯ್ಕ ಹೇಳಿದರು...

ರಘು,
ಧನ್ಯವಾದ. ಪುರುಸೊತ್ತಾದಾಗಲೆಲ್ಲಾ ಬರೆಯುವುದು ನಡೆಯುತ್ತಿರುತ್ತದೆ.