ಶುಕ್ರವಾರ, ಫೆಬ್ರವರಿ 06, 2009

ಮುಕ್ತೇಶ್ವರ ದೇವಾಲಯ - ಚೌಡಯ್ಯದಾನಪುರ


೦೪-೦೧-೨೦೦೯.

ಚೌಡಯ್ಯದಾನಪುರ. ಹಣ್ಣಿನ ಸಸಿಗಳಿಗೆ ಪ್ರಸಿದ್ಧವಾಗಿರುವ ಹಳ್ಳಿ. ಇಲ್ಲಿ ಬೆಳೆಯಲಾಗುವ ಮಾವು, ಚಿಕ್ಕು ಮತ್ತು ಪೇರಲಹಣ್ಣುಗಳು ರಾಜ್ಯಾದ್ಯಂತ ಹೆಸರುವಾಸಿ. ದಾರಿಯುದ್ದಕ್ಕೂ ಕಬ್ಬಿನ ಗದ್ದೆಗಳ ಮೂಲಕ ಹಾದುಹೋಗಿದ್ದ ನಮಗೆ ಒಂದೆಡೆ ಹೊಲದ ಬದಿಯಲ್ಲಿ ನಮ್ಮ ಕಾರನ್ನು ನಿಲ್ಲಿಸಿ, ಕಬ್ಬು ನೀಡಲಾಯಿತು! ಅನಿರೀಕ್ಷಿತ ಆತಿಥ್ಯ. ಹಳ್ಳಿಯಲ್ಲಿ ರಸ್ತೆಯಲ್ಲೇ ಮೆಕ್ಕೆಜೋಳವನ್ನು ರಾಶಿ ಹಾಕಿಡಲಾಗಿತ್ತು. ’ತಗೋರ್ರೀ ಸರ...’ ಎನ್ನುತ್ತಾ ಅವನ್ನೂ ನೀಡಿದರು ಹಳ್ಳಿಯ ಜನ. ಮತ್ತೊಮ್ಮೆ ಅನಿರೀಕ್ಷಿತ ಆತಿಥ್ಯ.


ಹಣ್ಣುಗಳಿಗೆ ಪ್ರಸಿದ್ಧಿ ಪಡೆದಿರುವ ಚೌಡಯ್ಯದಾನಪುರದಲ್ಲಿ ಸುಂದರವಾಗಿರುವ ಮುಕ್ತೇಶ್ವರ ದೇವಾಲಯವಿರುವುದು ಹೆಚ್ಚಿನವರಿಗೆ ತಿಳಿಯದ ವಿಷಯ. ಈ ದೇವಾಲಯ ಭವ್ಯ ಧಾರ್ಮಿಕ ಕೇಂದ್ರವಾಗಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿತ್ತು. ತುಂಗಭದ್ರಾ ನದಿಯ ತಟದಲ್ಲಿರುವ ಮುಕ್ತೇಶ್ವರ ದೇವಾಲಯ ಪೂರ್ವಾಭಿಮುಖವಾಗಿದ್ದು ಏಕಕೂಟ ದೇವಾಲಯವಾಗಿದೆ. ಚಾಳುಕ್ಯ ಶಿಲ್ಪಕಲೆಯಿಂದ ಕಂಗೊಳಿಸುತ್ತಿರುವ ಮುಕ್ತೇಶ್ವರ ದೇವಾಲಯ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದೆ.


ಮುಖಮಂಟಪವಿದ್ದರೂ ನಂದಿ ನವರಂಗದಲ್ಲೇ ಆಸೀನನಾಗಿದ್ದಾನೆ. ನವರಂಗದಲ್ಲಿರುವ ನಾಲ್ಕು ಕಂಬಗಳು ಸಾಧಾರಣವಾಗಿದ್ದು ಬೇರೆ ದೇವಾಲಯಗಳಲ್ಲಿರುವಂತೆ ಯಾವುದೇ ರೀತಿಯ ಕೆತ್ತನೆಯನ್ನು ಹೊಂದಿಲ್ಲ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳಿವೆ ಮತ್ತು ಗರ್ಭಗುಡಿಯಲ್ಲಿರುವ ಶಿವಲಿಂಗವೂ ಸಣ್ಣದಾಗಿದೆ. ಒಟ್ಟಾರೆ ದೇವಾಲಯದ ಆಂತರಿಕ ಸೌಂದರ್ಯಕ್ಕಿಂತ ಬಾಹ್ಯ ಸಂದರ್ಯವೇ ಮೇಲು. ದೇವಾಲಯದ ಹೊರಗೋಡೆಯಲ್ಲಿರುವ ಶಿಲ್ಪಕಲೆ ಬೆರಗುಗೊಳಿಸುವಂತದ್ದು.


ನವರಂಗಕ್ಕೆ ೨ ದ್ವಾರಗಳಿವೆ. ನಂದಿಯಿರುವ ಪ್ರಮುಖ ದ್ವಾರ ಮತ್ತು ಪಾರ್ಶ್ವದಲ್ಲಿ ಇನ್ನೊಂದು ದ್ವಾರ. ಎರಡೂ ದ್ವಾರಗಳನ್ನು ಕಲಾತ್ಮಕವಾಗಿ ರಚಿಸಲಾಗಿದ್ದು ಏಳು ತೋಳುಗಳನ್ನು ಹೊಂದಿವೆ. ಇಷ್ಟೇ ಅಲ್ಲದೆ ಈ ಎರಡೂ ದ್ವಾರಗಳ ಮುಖಮಂಟಪಗಳ ಛಾವಣಿಯಲ್ಲಿ ತಲಾ ೯ ಕಮಲಗಳ ಸುಂದರ ಕೆತ್ತನೆಯಿದೆ. ಮುಖಮಂಟಪಗಳಲ್ಲಿ ಕುಳಿತುಕೊಳ್ಳಲು ಇಕ್ಕೆಲಗಳಲ್ಲಿ ಸ್ಥಳಾವಕಾಶವಿದೆ. ಮುಖಮಂಟಪಗಳ ಹೊರಗೋಡೆಯಲ್ಲಿ ಉನ್ನತ ಕೆತ್ತನೆ ಕೆಲಸವನ್ನು ಮಾಡಲಾಗಿದೆ.


ಅಂದಾಜು ೧೧ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಮುಕ್ತೇಶ್ವರ ದೇವಾಲಯದ ಗೋಪುರ ಮತ್ತು ಹೊರಗೋಡೆಯ ಕೆತ್ತನೆಗಳು ಈಗಲೂ ಯಾವುದೇ ರೀತಿಯಲ್ಲಿ ಭಗ್ನಗೊಳ್ಳದೆ ಕಣ್ಣಿಗೆ ಹಬ್ಬವನ್ನೇ ನೀಡುತ್ತವೆ. ಅಲ್ಲಲ್ಲಿರುವ ಮಂಟಪಗಳ ಕೆತ್ತನೆ, ಈ ಮಂಟಪದೊಳಗಿನ ದೇವರ ಮೂರ್ತಿಗಳು, ಆನೆಗಳು, ಸಿಂಹಗಳು ಹೀಗೆ ಎಲ್ಲೆಡೆ ಅತ್ಯುತ್ತಮವಾಗಿ ಕೆತ್ತನೆಗಳನ್ನು ಮಾಡಲಾಗಿದೆ. ದೇವಾಲಯಕ್ಕೆ ಒಂದು ಸುತ್ತು ಹಾಕಿದರೆ ಸಿಗುವ ಪರಮಾನಂದ ವರ್ಣಿಸಲಾಗದು: ಆದರೆ ಕೆತ್ತನೆಗಳಲ್ಲಿ ಆಸಕ್ತಿ ಮತ್ತು ಶಿಲ್ಪಿಯ ನೈಪುಣ್ಯತೆಯನ್ನು ಮೆಚ್ಚುವ ಗುಣವಿರಬೇಕು. ಇಲ್ಲವಾದಲ್ಲಿ ಆ ಕಡೆ ಸುಳಿಯದಿರುವುದೇ ಲೇಸು.


ಮೊದಲು ಈ ಗ್ರಾಮಕ್ಕೆ ಶಿವಪುರವೆಂಬ ಹೆಸರಿತ್ತು. ಬಸವಣ್ಣನವರು ತಮ್ಮ ಅನುಯಾಯಿಯಾಗಿದ್ದ ಅಂಬಿಗರ ಚೌಡಯ್ಯನಿಗೆ ಈ ಗ್ರಾಮವನ್ನು ದಾನವಾಗಿ ನೀಡಿದ ಬಳಿಕ ’ಚೌಡಯ್ಯದಾನಪುರ’ವೆಂಬ ಹೆಸರು. ದೇವಾಲಯದ ಬದಿಯಲ್ಲೇ ಹರಿಯುತ್ತಿರುವ ತುಂಗಭದ್ರಾದ ನೋಟ ಸುಂದರ. ದೇವಾಲಯದ ಮುಖಮಂಟಪದಲ್ಲಿ ವಿಶ್ರಮಿಸುತ್ತಾ ತುಂಗಭದ್ರೆಯ ಹರಿವು ನೋಡುತ್ತಾ ಕುಳಿತರೆ ಇನ್ನೇನೂ ಬೇಡ.

ಮಾಹಿತಿ: ಪ್ರದೀಪ ಸಾಲಗೇರಿ