ಶನಿವಾರ, ಅಕ್ಟೋಬರ್ 04, 2008

’ಸಿಂಕ್ ದ ಬಿಸ್ಮಾರ್ಕ್’!


ಎರಡನೇ ಮಹಾಯುದ್ಧ ಆರಂಭವಾಗಿ 2 ವರ್ಷಗಳಾಗಿದ್ದವು. ನಾಝಿ(ಜರ್ಮನಿ) ನೌಕಾಪಡೆಗಳಿಂದ ಇಂಗ್ಲಂಡಿನ ಹಡಗುಗಳ ಮುಳುಗಡೆ ಅತಿರೇಕಕ್ಕೆ ತಲುಪಿತ್ತು. ಜರ್ಮನಿಯ ನೌಕಾಪಡೆ(ಕ್ರೀಗ್ಸ್-ಮರೀನ್) ಅವ್ಯಾಹತ ದಾಳಿಗಳನ್ನು ನಡೆಸಿ ರಾಯಲ್ ನೇವಿಯ (ಇಂಗ್ಲಂಡಿನ ನೌಕಾಪಡೆ) ಅದೆಷ್ಟೋ ಯುದ್ಧನೌಕೆಗಳನ್ನು ಮುಳುಗಿಸಿತ್ತು. ಕ್ರೀಗ್ಸ್-ಮರೀನ್, ಒಂದು ಅತ್ಯಾಧುನಿಕವಾದ ಅಗಾಧ ಗಾತ್ರದ, ಬಲಿಷ್ಠ ಯುದ್ಧನೌಕೆಯನ್ನು ನಿರ್ಮಿಸಿತ್ತು. ಈ ಹಡಗು ಇಂಗ್ಲಂಡಿನ ಯಾವುದೇ ಯುದ್ಧನೌಕೆಗಿಂತ ದೊಡ್ಡದಾಗಿತ್ತು. ಇಂಗ್ಲಂಡಿನ ಅತಿ ವೇಗದ ಹಡಗಿಗಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಈ ಹಡಗು ಹೊಂದಿತ್ತು. ಜರ್ಮನಿಯ ಈ ಹೊಸ ಯುದ್ಧನೌಕೆಯೇ ಬಿಸ್ಮಾರ್ಕ್!

ಇಂಗ್ಲಂಡ್ ಬಿಸ್ಮಾರ್ಕ್-ಗೆ ಹೆದರಲು ಕಾರಣಗಳಿದ್ದವು. ಇಂಗ್ಲಂಡಿಗೆ ಆಗುತ್ತಿದ್ದ ಆಹಾರ ಮತ್ತು ಧಾನ್ಯಗಳ ಸರಬರಾಜನ್ನು ವ್ಯಾಪಾರಿ ಹಡಗುಗಳನ್ನು ಮುಳುಗಿಸುವ ಮೂಲಕ ತಡೆಹಿಡಿಯುವ ಕಾರ್ಯದಲ್ಲಿ ಪೂರ್ಣ ಯಶಸ್ಸನ್ನು ಬಿಸ್ಮಾರ್ಕ್ ಮೂಲಕ ಸಾಧಿಸುವ ಇರಾದೆ ಕ್ರೀಗ್ಸ್-ಮರೀನ್-ಗೆ ಇತ್ತು.

ಬಿಸ್ಮಾರ್ಕನ್ನು ಎದುರಿಸಲು ರಾಯಲ್ ನೇವಿಯ ’ಹೋಮ್ ಫ್ಲೀಟ್’ ಎಂಬ ಹೆಸರಿನ ಯುದ್ಧನೌಕೆಗಳ ಗುಂಪು ಸನ್ನದ್ಧವಾಗಿತ್ತು. ಈ ಗುಂಪಿನಲ್ಲಿ ೫ ಪ್ರಮುಖ ಯುದ್ಧನೌಕೆಗಳಿದ್ದವು - ಕಿಂಗ್ ಜಾರ್ಜ್ 5, ಪ್ರಿನ್ಸ್ ಆಫ್ ವೇಲ್ಸ್, ದಿ ಹುಡ್, ರಿಪಲ್ಸ್ ಮತ್ತು ವಿಕ್ಟೋರಿಯಸ್. ಹೋಮ್ ಫ್ಲೀಟ್-ನ ಉಸ್ತುವಾರಿಯನ್ನು ಅಡ್ಮಿರಲ್ ಸರ್ ಜಾನ್ ಟೋವಿ ಎಂಬ ಅಧಿಕಾರಿಗೆ ವಹಿಸಿಕೊಡಲಾಗಿತ್ತು.


ಮೇ 17, 1941: ಡೆನ್ಮಾರ್ಕ್ ಮತ್ತು ಸ್ವೀಡನ್ ನಡುವೆ ಇರುವ ಕಟಿಗಾಟ್ ಸಮುದ್ರ ಹಾದಿಯಲ್ಲಿ ಎರಡು ದೊಡ್ಡ ಹಡಗುಗಳು ನಾರ್ವೇಯೆಡೆ ತೆರಳುತ್ತಿರುವ ವರದಿ ಇಂಗ್ಲಂಡ್ ನೌಕಾಪಡೆಗೆ ದೊರಕಿತು. ಇವುಗಳಲ್ಲೊಂದು ಬಿಸ್ಮಾರ್ಕ್ ಆಗಿರಬಹುದು ಎಂದು ಊಹಿಸಲಾಯಿತು.


ಮೇ 18: ನಾರ್ವೇ ಮತ್ತು ಡೆನ್ಮಾರ್ಕ್ ನಡುವಿನ ಸ್ಕಗೆರಾಕ್ ಸಮುದ್ರ ಹಾದಿಯಲ್ಲಿ ಬಿಸ್ಮಾರ್ಕ್ ಸಾಗುತ್ತಿರುವುದನ್ನು ತಟಸ್ಥ ರಾಷ್ಟ್ರವಾಗಿದ್ದ ಸ್ವೀಡನ್ ದೇಶದ ಹಡಗೊಂದು ಕಂಡಿತ್ತು. ಈ ಮಾಹಿತಿಯನ್ನು ನಂತರ ಬ್ರಿಟೀಷರಿಗೆ ನೀಡಲಾಯಿತು.

ಮೇ 20: ಜರ್ಮನಿಯ ಬೇಹುಗಾರಿಕಾ ಯುದ್ಧವಿಮಾನವೊಂದು ಇಂಗ್ಲಂಡಿನ ನೌಕಾನೆಲೆಯ ಮೇಲೆಲ್ಲಾ ಹಾರಾಡಿ ಮಾಹಿತಿ ಸಂಗ್ರಹಿಸಿ, ’ಹೋಮ್ ಫ್ಲೀಟ್’ನ ಎಲ್ಲಾ ಯುದ್ಧನೌಕೆಗಳು ’ಸ್ಕಾಪಾ ಫ್ಲೋ’ (ಉಚ್ಚಾರ ತಪ್ಪು ಇರಬಹುದು) ಬಂದರಿನಲ್ಲೇ ಇರುವ ಮಾಹಿತಿಯನ್ನು ಬಿಸ್ಮಾರ್ಕಿನ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್ ಅವರಿಗೆ ರವಾನಿಸಿತು.

ಮೇ 21: ಬ್ರಿಟಿಷ್ ವಾಯುಪಡೆಯ ಯುದ್ಧವಿಮಾನವೊಂದು ನಾರ್ವೇಯ ಕರಾವಳಿ ಪ್ರದೇಶದುದ್ದಕ್ಕೂ ಮಾಹಿತಿ ಮತ್ತು ಚಿತ್ರಗಳನ್ನು ಕಲೆಹಾಕುತ್ತಾ ಬೇಹುಗಾರಿಕಾ ಕೆಲಸ ಮಾಡುತ್ತಿರುವಾಗ ಬರ್ಗನ್ ಎಂಬ ನಿರ್ಜನ ಬಂದರಿನಲ್ಲಿ 2 ಯುದ್ಧನೌಕೆಗಳಿರುವುದನ್ನು ಕಂಡು ಅವುಗಳ ಚಿತ್ರಗಳನ್ನು ತೆಗೆದು ಹಿಂತಿರುಗಿತು. ಆ ಚಿತ್ರಗಳ ಮೂಲಕ ಒಂದನ್ನು ಬಿಸ್ಮಾರ್ಕ್ ಎಂದು ಗುರುತಿಸಲಾಯಿತು. ಇನ್ನೊಂದು, ಬಿಸ್ಮಾರ್ಕ್-ನ ಬೆಂಗಾವಲಾಗಿ ಇದ್ದ ಯುದ್ಧನೌಕೆ ’ಪ್ರಿನ್ಸ್ ಒಯ್ಗೀನ್’.

ಈ ಸುದ್ದಿ ಬಂದ ಕೂಡಲೇ, ನಾರ್ವೇಯಿಂದ ಅಟ್ಲಾಂಟಿಕ್ ಮಹಾಸಾಗರಕ್ಕಿರುವ ನಿರ್ಗಮನ ದಾರಿಗಳ ಮೇಲೆ ನಿಗಾ ಇಡಲು ಜಾನ್ ಟೋವಿ, ತನ್ನ ಸುಪರ್ದಿಯಲ್ಲಿದ್ದ 5 ಹಡಗುಗಳಲ್ಲಿ ಎರಡನ್ನು - ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ - ಮಧ್ಯರಾತ್ರಿಯ ವೇಳೆಗೆ ಗ್ರೀನ್-ಲ್ಯಾಂಡ್ ಮತ್ತು ಐಸ್-ಲ್ಯಾಂಡ್ ನಡುವೆ ಇರುವ ಡೆನ್ಮಾರ್ಕ್ ಕೊಲ್ಲಿಗೆ ಕಳಿಸಿದರು. ಇಲ್ಲಿಂದಲೇ ಬಿಸ್ಮಾರ್ಕ್-ಗಾಗಿ ಶೋಧ ಆರಂಭವಾಯಿತು ಎನ್ನಬಹುದು. ಜಗತ್ತಿನ ನೌಕಾಪಡೆಗಳ ಇತಿಹಾಸದಲ್ಲಿ ಇಷ್ಟು ರೋಚಕ ಮತ್ತು ಸಾಹಸಭರಿತ ’ಚೇಸ್’ ಎಂದೂ ನಡೆದಿಲ್ಲ.


ಮೇ 22: ಇನ್ನೊಮ್ಮೆ ಇಂಗ್ಲಂಡಿನ ಬಂದರುಗಳತ್ತ ಸಾಗಿಬಂದ ಜರ್ಮನಿಯ ಬೇಹುಗಾರಿಕಾ ವಿಮಾನವು, ಹೋಮ್ ಫ್ಲೀಟ್-ನ ಎಲ್ಲಾ ಯುದ್ಧನೌಕೆಗಳು ಬಂದರಿನಲ್ಲೇ ಇವೆ ಎಂಬ ತಪ್ಪು ಮಾಹಿತಿಯನ್ನು ಬಿಸ್ಮಾರ್ಕಿನ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್-ಗೆ ರವಾನಿಸಿತು. ಆದರೆ ಈ ಬೇಹುಗಾರಿಕಾ ವಿಮಾನ, ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್ ತಮ್ಮ ಜಾಗದಲ್ಲಿ ಇಲ್ಲದಿರುವುದನ್ನು ಗಮನಿಸಿರಲಿಲ್ಲ! ತಪ್ಪು ಮಾಹಿತಿ ಪಡಕೊಂಡ ಅಡ್ಮಿರಲ್ ಲೂಯನ್ಸ್, ಇನ್ನು ಬಿಸ್ಮಾರ್ಕ್ ಸುರಕ್ಷಿತ ಎಂದು ಬರ್ಗನ್-ನಿಂದ ಹೊರಟರು.


ಇತ್ತ ಇಂಗ್ಲಂಡಿನ ಬೇಹುಗಾರಿಕಾ ವಿಮಾನದ ಮೂಲಕ ಸಂಜೆ 7.45ಕ್ಕೆ ಬಂದ ಮಾಹಿತಿಯ ಪ್ರಕಾರ ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಎರಡೂ ಕೂಡಾ ಬರ್ಗನ್ ಬಂದರಿನಲ್ಲಿರಲಿಲ್ಲ! ಕೂಡಲೇ ಉಳಿದ 3 ಯುದ್ಧನೌಕೆಗಳೊಂದಿಗೆ - ಕಿಂಗ್ ಜಾರ್ಜ್ 5, ರಿಪಲ್ಸ್ ಮತ್ತು ವಿಕ್ಟೋರಿಯಸ್ - ಜಾನ್ ಟೋವಿ ಇನ್ನೊಂದು ನಿರ್ಧರಿತ ಸ್ಥಳಕ್ಕೆ ತೆರಳಿದರು. ನೊರ್ಫೋಕ್ ಎಂಬ ಹೆಸರಿನ ನೌಕೆ ಡೆನ್ಮಾರ್ಕ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿತ್ತು. ಇದರ ಸಹಾಯಕ್ಕಾಗಿ ಸಫೋಕ್ ಎಂಬ ಇನ್ನೊಂದು ನೌಕೆಯನ್ನೂ ಅಲ್ಲಿಗೆ ತೆರಳುವಂತೆ ಸೂಚಿಸಲಾಯಿತು. ಬಿಸ್ಮಾರ್ಕ್ ಶೋಧ ಕಾರ್ಯದಲ್ಲಿ ಈ 2 ನೌಕೆಗಳು ಬಹಳ ಪ್ರಮುಖ ಕಾರ್ಯ ನಿರ್ವಹಿಸಿದವು.

ಮೇ 23: ಸಂಜೆ 7ರ ಸಮಯ. ಡೆನ್ಮಾರ್ಕ್ ಕೊಲ್ಲಿಯಲ್ಲಿ ಆವರಿಸಿದ್ದ ಮಂಜಿನಲ್ಲಿ ಅಡಗಿ ಕುಳಿತು ಸಫೋಕ್ ಗಸ್ತು ತಿರುಗುತ್ತಾ ಇತ್ತು. 7.22ಕ್ಕೆ ಅಕಸ್ಮಾತ್ತಾಗಿ ಮಂಜು ಸರಿದುಬಿಟ್ಟಿತು. ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೇವಲ 14 ಕಿ.ಮಿ ದೂರದಲ್ಲಿ ಸಫೋಕ್-ನತ್ತವೇ ಬರುತ್ತಿದ್ದವು. 40 ಕಿಮಿ ದೂರ ಬಂದೂಕು ಸಾಮರ್ಥ್ಯವುಳ್ಳ ಬಿಸ್ಮಾರ್ಕ್-ಗೆ ಸಫೋಕ್ ಸುಲಭದಲ್ಲಿ ತುತ್ತಾಗುತ್ತಿತ್ತು. ಅಪಾಯವನ್ನರಿತು ಕೂಡಲೇ ಸಫೋಕ್ ಮಂಜಿನ ಪರದೆಯೆಡೆ ಪಲಾಯನಗೈದು ಅಲ್ಲೇ ಅವಿತು, ವೈರಿ ನೌಕೆಗಳೆರಡೂ ತನ್ನನ್ನು ದಾಟಿದ ಬಳಿಕ ಅವುಗಳನ್ನು ಹಿಂಬಾಲಿಸುತ್ತಾ, ಅವುಗಳ ಇರುವಿಕೆಯ ಸರಿಯಾದ ಸ್ಥಳದ ಬಗ್ಗೆ ಸಂದೇಶಗಳನ್ನು ಕಳಿಸಿತು.

ಸಫೋಕ್-ನಿಂದ ಬಂದ ಮಾಹಿತಿಯ ಪ್ರಕಾರ ವೈರಿ ಇರಬಹುದಾದ ಸ್ಥಳದೆಡೆ ಮಂಜಿನಲ್ಲಿ ಅವಿತುಕೊಂಡೇ ನೊರ್ಫೋಕ್ ಚಲಿಸಲಾರಂಭಿಸಿತು. ಸುಮಾರು ಒಂದು ತಾಸು ವೇಗವಾಗಿ ಚಲಿಸಿದ ಬಳಿಕ ರಾತ್ರಿ 8.30ಕ್ಕೆ ನೊರ್ಫೋಕ್ ಒಮ್ಮೇಲೆ ಮಂಜಿನಿಂದ ಹೊರಬಂದುಬಿಟ್ಟಾಗ, ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೇವಲ 9 ಕಿಮಿ ದೂರದಲ್ಲಿ ಧಾವಿಸಿ ಬರುತ್ತಿದ್ದವು. ಕಂಗಾಲಾದ ನೊರ್ಫೋಕ್, ಕೂಡಲೆ ಕೃತಕ ಮಂಜು ಮತ್ತು ಹೊಗೆಯನ್ನು ಸೃಷ್ಟಿಸಿ ಮಂಜಿನೆಡೆ ಪಲಾಯನಗೈಯಲಾರಂಭಿಸಿತು.

ಹೀಗೆ ಆ ರಾತ್ರಿಯಿಡೀ ವೈರಿ ಹಡಗುಗಳನ್ನು ಎಡಬದಿಯಿಂದ ಸಫೋಕ್ ಮತ್ತು ಬಲಬದಿಯಿಂದ ನೊರ್ಫೋಕ್ ಮಂಜಿನ ಪರದೆಯಲ್ಲಿ ಅವಿತುಕೊಂಡೇ ಹಿಂಬಾಲಿಸಲಾರಂಭಿಸಿದವು. ನಾಲ್ಕೂ ಹಡಗುಗಳು ಡೆನ್ಮಾರ್ಕ್ ಕೊಲ್ಲಿಯ ಮೈಕೊರೆಯುವ ಚಳಿಯಲ್ಲಿ ಮಳೆ, ಮಂಜು ಮತ್ತು ಮಂಜುಗಡ್ಡೆಗಳ ನಡುವೆ ಗರಿಷ್ಠ ವೇಗದಲ್ಲಿ ಸಾಗುತ್ತಿದ್ದವು.


ಮೇ 24: ಸಫೋಕ್ ಮತ್ತು ನೊರ್ಫೋಕ್ ಕಳಿಸುತ್ತಿದ್ದ ಸಂದೇಶಗಳನ್ನು ಹಿಂಬಾಲಿಸುತ್ತಾ ದಿ ಹುಡ್ ಮತ್ತು ಪ್ರಿನ್ಸ್ ಆಫ್ ವೇಲ್ಸ್, ಮುಂಜಾನೆ 5.35ಕ್ಕೆ ವೈರಿ ಯುದ್ಧನೌಕೆಗಳ ದಾರಿಗಡ್ಡವಾಗಿ ಬಂದು ಬಿಸ್ಮಾರ್ಕ್ ಮೇಲೆ ದಾಳಿ ಮಾಡಲಾರಂಭಿಸಿದವು. ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್ ಕೂಡಲೇ ಪ್ರತ್ಯುತ್ತರ ನೀಡಿದವು. ದಿ ಹುಡ್, ರಾಯಲ್ ನೇವಿಯ ಪ್ರತಿಷ್ಠಿತ ಯುದ್ಧನೌಕೆಯಾಗಿತ್ತು. ನೌಕಾಪಡೆಯ ಪ್ರತಿಯೊಬ್ಬ ನಾವಿಕ ಮತ್ತು ಅಧಿಕಾರಿ, ದಿ ಹುಡ್-ನಲ್ಲಿ ಸೇವೆ ಸಲ್ಲಿಸಲು ಸಿಕ್ಕಿದರೆ ಅದಕ್ಕಿಂತ ದೊಡ್ಡ ಗೌರವ ಬೇರೆ ಇಲ್ಲ ಎಂದೇ ಭಾವಿಸಿದ್ದರು. ಆ ರೀತಿಯ ಗೌರವ ಮತ್ತು ಹೆಮ್ಮೆ ಇತ್ತು ಬ್ರಿಟೀಷರಿಗೆ ದಿ ಹುಡ್-ನ ಮೇಲೆ. ಬಿಸ್ಮಾರ್ಕ್-ನ ಕ್ಷಿಪಣಿ ದಾಳಿ ಅದೆಷ್ಟು ಕರಾರುವಕ್ಕಾಗಿತ್ತೆಂದರೆ ಕೇವಲ ಎಂಟು ನಿಮಿಷಗಳ ಕಾದಾಟದ ಬಳಿಕ ’ದಿ ಹುಡ್’ ಮಧ್ಯಭಾಗದಲ್ಲೇ ತುಂಡಾಗಿ ತನ್ನ 1417 ನಾವಿಕರೊಂದಿಗೆ ಸಾಗರದ ತಳದತ್ತ ಕಣ್ಮರೆಯಾಯಿತು. ಕೇವಲ 3 ನಾವಿಕರು ಮಾತ್ರ ಬದುಕುಳಿದರು.

ನಂತರ ಬಿಸ್ಮಾರ್ಕ್ ಮತ್ತು ಪ್ರಿನ್ಸ್ ಒಯ್ಗೀನ್, ಪ್ರಿನ್ಸ್ ಆಫ್ ವೇಲ್ಸ್ ಮೇಲೆ ದಾಳಿ ಮಾಡಲಾರಂಭಿಸಿದವು. ಕಡೆಗೂ ಕೃತಕ ಹೊಗೆ ಮತ್ತು ಮಂಜನ್ನು ಸೃಷ್ಟಿಸಿ ಪ್ರಿನ್ಸ್ ಆಫ್ ವೇಲ್ಸ್ ಕುಂಟುತ್ತಾ ಅಲ್ಲಿಂದ ಪಲಾಯನಗೈದಿತು. ಅದನ್ನು ಹಿಂಬಾಲಿಸಲು ಬಿಸ್ಮಾರ್ಕ್ ಯಾವುದೇ ಆಸಕ್ತಿಯನ್ನು ತೋರಲಿಲ್ಲ. ಏಕೆಂದರೆ ’ಅನಾವಶ್ಯಕವಾಗಿ ಎಲ್ಲೂ ದಾಳಿ ಅಥವಾ ಯುದ್ಧದಲ್ಲಿ ತೊಡಗಿಕೊಳ್ಳಬಾರದು’ ಎಂಬ ಕಟ್ಟುನಿಟ್ಟಿನ ಆದೇಶವನ್ನು ಬಿಸ್ಮಾರ್ಕಿಗೆ ನೀಡಲಾಗಿತ್ತು.

ಪ್ರಿನ್ಸ್ ಆಫ್ ವೇಲ್ಸ್-ನ ಎರಡು ಕ್ಷಿಪಣಿಗಳು ಬಿಸ್ಮಾರ್ಕಿನ ಇಂಧನ ಪೈಪುಗಳನ್ನು ಹಾನಿಗೊಳಿಸಿದ್ದರಿಂದ ಗರಿಷ್ಠ ವೇಗದಲ್ಲಿ ಚಲಿಸುವುದು ಅಸಾಧ್ಯವಾಗಿತ್ತು. ಈ ಹಾನಿಯನ್ನು ಸರಿಪಡಿಸಲು, ಪ್ರಿನ್ಸ್ ಒಯ್ಗೀನ್-ನನ್ನು ಗಸ್ತು ತಿರುಗುವ ಕಾರ್ಯಕ್ಕೆ ಬಿಟ್ಟು ಬಿಸ್ಮಾರ್ಕ್ ಮಾತ್ರ ಅತಿಕ್ರಮಿತ ಫ್ರಾನ್ಸ್-ಗೆ ತೆರಳುವುದೆಂದು ಅಡ್ಮಿರಲ್ ಗೂಂತರ್ ಲೂಯನ್ಸ್ ನಿರ್ಧರಿಸಿದರು. ದಿ ಹುಡ್ ಮುಳುಗಡೆಯಾದದ್ದು ರಾಯಲ್ ನೇವಿಗೆ ದೊಡ್ಡ ಹೊಡೆತ ಬಿದ್ದಂತಾಗಿತ್ತು.

ದಿ ಹುಡ್ ಸಾಗರದ ತಳ ಸೇರಿದ ಸುದ್ದಿ ತಿಳಿದು ರೊಚ್ಚಿಗೆದ್ದ ಆಗಿನ ಬ್ರಿಟನ್ ಪ್ರಧಾನಿ ವಿನಸ್ಟನ್ ಚರ್ಚಿಲ್, ’ಸಿಂಕ್ ದ ಬಿಸ್ಮಾರ್ಕ್ ಎಟ್ ಎನಿ ಕಾಸ್ಟ್’ ಎಂದು ಅದೇಶ ನೀಡಿದರು.

ಅತ್ತ ಯುರೋಪ್ ಮತ್ತು ಆಫ್ರಿಕಾ ಖಂಡಗಳ ನಡುವಿನ ಮೆಡಿಟರೇನಿಯನ್ ಸಾಗರದಲ್ಲಿ ವೈಸ್ ಅಡ್ಮಿರಲ್ ಸರ್ ಜೇಮ್ಸ್ ಸೋಮರ್ವಿಲ್ ನಾಯಕತ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಾ 2000 ಕಿ.ಮಿ ದೂರವಿರುವ ಜಿಬ್ರಾಲ್ಟರ್-ನಲ್ಲಿ ನೆಲೆಗೊಂಡಿದ್ದ ಫೋರ್ಸ್-ಎಚ್ ನೌಕಾಪಡೆಯನ್ನು ’ಸಿಂಕ್ ದ ಬಿಸ್ಮಾರ್ಕ್’ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆದೇಶಿಸಲಾಯಿತು. ’ಫೋರ್ಸ್-ಎಚ್’ನ 3 ಪ್ರಮುಖ ಯುದ್ಧನೌಕೆಗಳು - ರಿನೌನ್, ಆರ್ಕ್ ರಾಯಲ್, ಶೆಫೀಲ್ಡ್ - ಮತ್ತು ಇತರ ೬ ಸಣ್ಣ ಯುದ್ಧನೌಕೆಗಳು ಕೂಡಲೇ ಬಿಸ್ಮಾರ್ಕ್-ನತ್ತ ಧಾವಿಸತೊಡಗಿದವು. ಸುಮಾರು 300 ಕಿ.ಮಿ ದೂರ ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ’ರಾಮಿಲ್ಲೀಸ್’ ಎಂಬ ಯುದ್ಧನೌಕೆಯನ್ನು ತನ್ನ ಗುಂಪನ್ನು ಬಿಟ್ಟು ಬಿಸ್ಮಾರ್ಕಿನೆಡೆ ಧಾವಿಸಲು ಆದೇಶಿಸಲಾಯಿತು. ಹಾಗೇನೇ ಸುಮಾರು 650 ಕಿ.ಮಿ. ದೂರದಲ್ಲಿ ಐರ್ಲಂಡ್ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುದ್ಧನೌಕೆ ’ರಾಡ್ನಿ’ಯನ್ನು ಕೂಡಾ ಬಿಸ್ಮಾರ್ಕಿನೆಡೆ ಧಾವಿಸಲು ಆದೇಶಿಸಲಾಯಿತು. ’ದಿ ಹುಡ್’ ಮುಳುಗಿದ ೬ ತಾಸುಗಳ ಒಳಗೆ 25 ಹಡಗುಗಳು - 11 ದೊಡ್ಡ ಯುದ್ಧನೌಕೆಗಳು ಮತ್ತು 14 ಇತರ ಹಡಗುಗಳು - ಎಲ್ಲಾ ದಿಕ್ಕಿನಿಂದ ಬಿಸ್ಮಾರ್ಕನ್ನು ಬೆಂಬತ್ತತೊಡಗಿದವು.

ದಿ ಹುಡ್ ಮುಳುಗಿದ ನಂತರ ಸಫೋಕ್ ಮತ್ತು ನೊರ್ಫೋಕ್ ಬಿಸ್ಮಾರ್ಕನ್ನು ಹಿಂಬಾಲಿಸುವ ಕಾರ್ಯವನ್ನು ಮತ್ತೆ ಶುರುಮಾಡಿದವು. ಪ್ರಿನ್ಸ್ ಆಫ್ ವೇಲ್ಸ್ ಕೂಡಾ ಇವೆರಡು ಹಡಗುಗಳ ಜೊತೆಯಲ್ಲಿತ್ತು. ಸರ್ ಜಾನ್ ಟೋವಿಯವರನ್ನು ಚಿಂತೆಗೀಡುಮಾಡುತ್ತಿದ್ದ ವಿಷಯವೆಂದರೆ ಬಿಸ್ಮಾರ್ಕಿನ ವೇಗ. ಬಿಸ್ಮಾರ್ಕಿನ ವೇಗವನ್ನು ಕುಂಠಿತಗೊಳಿಸಲು ಏರ್-ಕ್ರಾಫ್ಟ್ ಕ್ಯಾರಿಯರ್ ಯುದ್ಧನೌಕೆಯಾಗಿರುವ ವಿಕ್ಟೋರಿಯಸ್-ನ ವಿಮಾನಗಳಿಂದ ದಾಳಿ ಮಾಡಿಸಲಾಯಿತು. ಮುಸ್ಸಂಜೆಯ ವೇಳೆಗೆ ಸುಮಾರು 75 ಕಿ.ಮಿ. ದೂರದಲ್ಲಿ ಮುಂದೆ ಸಾಗುತ್ತಿದ್ದ ಬಿಸ್ಮಾರ್ಕಿನಿಡೆ, ವಿಕ್ಟೋರಿಯಸ್-ನ 9 ಯುದ್ಧವಿಮಾನಗಳು ಹಾರಿ ಕ್ಷಿಪಣಿಗಳನ್ನು ಬೀಳಿಸಿ ಹಿಂತಿರುಗಿದರೂ, ಯವುದೂ ಬಿಸ್ಮಾರ್ಕಿಗೆ ಹಾನಿಯುಂಟುಮಾಡಲಿಲ್ಲ. ಇಂಧನ ಕಡಿಮೆಯಾದ ಕಾರಣ ರಿಪಲ್ಸ್ ಮತ್ತು 3 ಸಣ್ಣ ಹಡಗುಗಳು ಇಗ್ಲಂಡಿಗೆ ಮರಳಬೇಕಾಯಿತು. ಈ 4 ಹಡಗುಗಳ ಮರಳುವಿಕೆ, ವಿಮಾನಗಳ ಕ್ಷಿಪಣಿ ದಾಳಿಯ ವೈಫಲ್ಯ ಮತ್ತು ವೇಗವಾಗಿ ಫ್ರಾನ್ಸಿನೆಡೆ ಸಾಗುತ್ತಿರುವ ಬಿಸ್ಮಾರ್ಕ್, ಈ ಅಂಶಗಳು ಸರ್ ಜಾನ್ ಟೋವಿಗೆ ನಿರಾಸೆಯನ್ನುಂಟುಮಾಡಿದವು.


ಮೇ ೨೫: ಮುಂಜಾನೆ 3 ಗಂಟೆಗೆ ಬಿಸ್ಮಾರ್ಕನ್ನು ಹಿಂಬಾಲಿಸುತ್ತಿದ್ದ ಸಫೋಕ್, ಅದರೊಂದಿಗೆ ಸಂಪರ್ಕವನ್ನು ಕಳಕೊಂಡುಬಿಟ್ಟಿತು. ಈಗ ಬಿಸ್ಮಾರ್ಕ್ ಎಲ್ಲಿದೆ, ಯಾವ ಕಡೆ ಚಲಿಸುತ್ತಿದೆ ಎಂಬ ಬಗ್ಗೆ ಸರ್ ಜಾನ್ ಟೋವಿಗೆ ಸ್ವಲ್ಪನೂ ಮಾಹಿತಿ ಸಿಗುತ್ತಿರಲಿಲ್ಲ! ಗೊತ್ತುಗುರಿಯಿಲ್ಲದೆ ಸಫೋಕ್, ನೊರ್ಫೋಕ್, ಪ್ರಿನ್ಸ್ ಆಫ್ ವೇಲ್ಸ್ ಮತ್ತು ಇತರ ಹಡಗುಗಳು ಎಲ್ಲೆಡೆ ಹುಡುಕಾಡತೊಡಗಿದವು. ರಾಯಲ್ ಏರ್-ಫೋರ್ಸಿನ ಸ್ವೋರ್ಡ್-ಫಿಶ್ ಯುದ್ಧವಿಮಾನಗಳು ವೈಮಾನಿಕ ಹುಡುಕಾಟವನ್ನು ನಡೆಸಿದವು. ಆದರೂ ಎಲ್ಲಿ ಕೂಡಾ ಬಿಸ್ಮಾರ್ಕಿನ ಸುಳಿವೇ ಸಿಗಲಿಲ್ಲ. 31 ತಾಸು ಮತ್ತು 30 ನಿಮಿಷಗಳವರೆಗೆ ರಾಯಲ್ ನೇವಿಗೆ ಬಿಸ್ಮಾರ್ಕನ್ನು ಪತ್ತೆಮಾಡಲು ಸಾಧ್ಯವಾಗಲಿಲ್ಲ. ಕಡೆಗೂ ಬಿಸ್ಮಾರ್ಕಿನ ಸುಳಿವು ಮತ್ತೆ ಸರ್ ಜಾನ್ ಟೋವಿಗೆ ದೊರಕಿದ್ದು ಅದರ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್ ಮಾಡಿದ ಪ್ರಮಾದದಿಂದ.

ಮೇ ೨೬: ಬೆಂಬತ್ತಲ್ಪಡುತ್ತಿದ್ದ ಬಿಸ್ಮಾರ್ಕಿನಲ್ಲಿ ಪರಿಸ್ಥಿತಿ ಬೆರೇನೇ ಇತ್ತು. ರಾಯಲ್ ನೇವಿಯ ’ಹೋಮ್ ಫ್ಲೀಟ್’ನ ಎಲ್ಲಾ ಯುದ್ಧನೌಕೆಗಳು ಬಂದರಿನಲ್ಲೇ ಇವೆ ಎಂಬ ತಪ್ಪು ಮಾಹಿತಿಯನ್ನು ನಂಬಿ ಬರ್ಗನ್-ನಿಂದ ಹೊರಟಿದ್ದ ಫ್ಲೀಟ್ ಕಮಾಂಡರ್ ಅಡ್ಮಿರಲ್ ಗೂಂತರ್ ಲೂಯನ್ಸ್-ಗೆ ನಂತರ ವಿಶ್ರಾಂತಿಯೇ ಇರಲಿಲ್ಲ. ಸತತವಾಗಿ ಹಿಂಬಾಲಿಸುತ್ತಾ ಕಾಡುತ್ತಿದ್ದ ರಾಯಲ್ ನೇವಿಯ ಯುದ್ಧನೌಕೆಗಳು. ಪ್ರಿನ್ಸ್ ಆಫ್ ವೇಲ್ಸ್-ನ 2 ಕ್ಷಿಪಣಿಗಳಿಂದ ಆದ ಹಾನಿಯ ಕಾರಣ ಕುಗ್ಗಿದ ವೇಗ. ಜೊತೆಯಿಲ್ಲದ ಪ್ರಿನ್ಸ್ ಒಯ್ಗೀನ್. ಈ ಎಲ್ಲಾ ಅಂಶಗಳು ಗೂಂತರ್ ಲೂಯನ್ಸ್-ರನ್ನು ಖಿನ್ನರನ್ನಾಗಿ ಮಾಡಿತ್ತು. ಈಗ ಸದ್ಯಕ್ಕೆ ಬಿಸ್ಮಾರ್ಕ್ ಎಲ್ಲಿದೆ ಎಂದು ತಿಳಿಯದೇ ರಾಯಲ್ ನೇವಿ ಪರದಾಡುತ್ತಿದೆ ಎಂಬ ಬಗ್ಗೆಯೂ ಗೂಂತರ್ ಲೂಯನ್ಸ್-ಗೆ ಗೊತ್ತಿರಲಿಲ್ಲ!

ಖಿನ್ನರಾಗಿದ್ದ ಗೂಂತರ್ ಲೂಯನ್ಸ್, ಬಿಸ್ಮಾರ್ಕಿನ ಕ್ಯಾಪ್ಟನ್ ಆಗಿದ್ದ ಅರ್ನ್ಸ್ಟ್ ಲಿಂಡ್ಮನ್-ರ ವಿರೋಧದ ನಡುವೆಯೂ ಅರ್ಧ ಗಂಟೆ ಕಾಲ ಒಂದು ದೊಡ್ಡ ಸಂದೇಶವನ್ನು ಜರ್ಮನಿಗೆ ರೇಡಿಯೋ ಮೂಲಕ ರವಾನಿಸಿದರು. ಈ ರೇಡಿಯೋ ಸಂದೇಶವನ್ನು ಲಂಡನ್-ನಲ್ಲಿದ್ದ ರಾಯಲ್ ನೇವಿಯ ’ಕೋಡ್-ಬ್ರೇಕರ್ಸ್’ ತಂಡ ಆಲಿಸತೊಡಗಿತು. ಆದರೆ ’ಕೋಡ್-ಬ್ರೇಕರ್ಸ್’ ಸಂದೇಶವನ್ನು ಡಿಕೋಡ್ ಮಾಡಿತೇ ಹೊರತು, ಆ ಸಂದೇಶ ಎಲ್ಲಿಂದ ಹೊರಹೊಮ್ಮುತ್ತಿದೆ ಎಂದು ಪತ್ತೆ ಮಾಡುವುದು ಅಸಾಧ್ಯವಾಗಿತ್ತು. ಅಷ್ಟರಲ್ಲಿ ಇಟಲಿಯಲ್ಲಿ ನೆಲೆಗೊಂಡಿದ್ದ ನಾಝಿ ಅಧಿಕಾರಿಯೊಬ್ಬನಿಗೆ ಬಿಸ್ಮಾರ್ಕ್ ಯಾವ ಕಡೆ ತೆರಳುತ್ತಿದೆ ಎಂಬ ಬಗ್ಗೆ ಮಾಹಿತಿ ಬೇಕಿತ್ತು. ಯಾಕೆಂದರೆ ಆತನ ತಂಗಿಯ ಮಗ ಬಿಸ್ಮಾರ್ಕಿನಲ್ಲಿದ್ದ! ಆತನಿಗೆ ಬೇಕಿದ್ದ ಮಾಹಿತಿಯನ್ನು ಗೂಂತರ್ ಲೂಯನ್ಸ್ ನೀಡಿದರು!! ಈ ಸಂದೇಶವನ್ನೂ ’ಕೋಡ್-ಬ್ರೇಕರ್ಸ್’ ಆಲಿಸಿ ರಾಯಲ್ ನೇವಿಗೆ ಸುದ್ದಿ ಮುಟ್ಟಿಸಿದರು.

ಬಿಸ್ಮಾರ್ಕ್ ಈಗ ಎಲ್ಲಿದೆ ಎಂಬ ಬಗ್ಗೆ ತಿಳಿಯದಾದರೂ ಫ್ರಾನ್ಸಿನ ಯಾವ ಬಂದರಿನೆಡೆ ತೆರಳುತ್ತಿದೆ ಎಂಬ ಮಾಹಿತಿ ರಾಯಲ್ ನೇವಿಗೆ ದೊರಕಿತ್ತು. ಕೂಡಲೇ ಬೇಹುಗಾರಿಕಾ ವಿಮಾನವೊಂದು ಆ ಭಾಗದಲ್ಲಿ ಹಾರಾಟ ನಡೆಸಿ ಬಿಸ್ಮಾರ್ಕನ್ನು ಪತ್ತೆ ಹಚ್ಚಿ, ಅದರ ಇರುವಿಕೆಯ ಸ್ಥಳದ ಮಾಹಿತಿಯನ್ನು ಸರ್ ಜಾನ್ ಟೋವಿಗೆ ತಿಳಿಸಲಾಯಿತು. ಸಮಯ ಮುಂಜಾನೆ 10.30.


ಆದರೆ ಕಳೆದ 31 ತಾಸುಗಳ ಗೊತ್ತುಗುರಿಯಿಲ್ಲದ ಹುಡುಕಾಟದಿಂದ ರಾಯಲ್ ನೇವಿಯ ಎಲ್ಲಾ ಯುದ್ಧನೌಕೆಗಳು ಬಿಸ್ಮಾರ್ಕಿನಿಂದ ಬಹಳ ದೂರದಲ್ಲಿದ್ದವು ಮತ್ತು ಇಂಧನದ ಕೊರತೆಯಿಂದ ವೇಗವಾಗಿ ಚಲಿಸುವಂತೆಯೂ ಇರಲಿಲ್ಲ. ಸರ್ ಜಾನ್ ಟೋವಿಯ ಕಿಂಗ್ ಜಾರ್ಜ್ ೫ ಈಗ ಬಿಸ್ಮಾರ್ಕಿನಿಂದ 70 ಕಿ.ಮಿ ದೂರದಲ್ಲಿತ್ತು. ತನ್ನ ಈಗಿನ ವೇಗವಾದ 20 ಕಿ.ಮಿ ವೇಗದಲ್ಲಿ ಚಲಿಸಿದರೂ ಮರುದಿನ ಮುಂಜಾನೆಯ ಸಮಯದಲ್ಲಿ ಬಿಸ್ಮಾರ್ಕ್, ಲುಫ್ತ್-ವಾಫದ(ನಾಝಿ ವಾಯುಪಡೆ) ಪರಿಧಿಯೊಳಗೆ ಬಂದಾಗುತ್ತಿತ್ತು. ಹಾಗೆ ಆದರೆ ಸರ್ ಜಾನ್ ಟೋವಿ ಏನೂ ಮಾಡುವಂತಿರಲಿಲ್ಲ. ಆದ್ದರಿಂದ ಬಿಸ್ಮಾರ್ಕನ್ನು ಯುದ್ಧದಲ್ಲಿ ತೊಡಗಿಸಬೇಕಾದರೆ ಆಕೆಯ ವೇಗವನ್ನು ಬಹಳ ಕಡಿಮೆಗೊಳಿಸಬೇಕು ಮತ್ತು ಆ ಕಾರ್ಯ ಇಂದೇ 26ರಂದೇ ಆಗಬೇಕು. ಆ ಪರಿಯ ಹಾನಿ ವೈಮಾನಿಕ ಕ್ಷಿಪಣಿ ದಾಳಿಯಿಂದ ಮಾತ್ರ ಸಾಧ್ಯ. ಒಂದೇ ಆಶಾಕಿರಣವೆಂದರೆ ಜಿಬ್ರಾಲ್ಟರ್-ನಿಂದ ಧಾವಿಸಿ ಬರುತ್ತಿದ್ದ ’ಫೋರ್ಸ್-ಎಚ್’ನ ಏರ್-ಕ್ರಾಫ್ಟ್ ಕ್ಯಾರಿಯರ್ ’ಆರ್ಕ್ ರಾಯಲ್’. 24 ತಾಸುಗಳ ಮೊದಲು ಜಿಬ್ರಾಲ್ಟರಿನಿಂದ ಹೊರಟಿದ್ದ ಆರ್ಕ್ ರಾಯಲ್ ಈಗ ಅಟ್ಲಾಂಟಿಕ್ ಸಾಗರದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ಕರಾವಳಿಗಳನ್ನು ದಾಟಿ ಫ್ರಾನ್ಸ್ ಕರಾವಳಿಗೆ ಸಮಾನಾಂತರವಾಗಿ ಸಾಗುತ್ತಿತ್ತು.

ಬಿಸ್ಮಾರ್ಕ್ ಪತ್ತೆಯಾದ ಸ್ವಲ್ಪ ಸಮಯದ ಬಳಿಕ ಸರ್ ಜಾನ್ ಟೋವಿ, ಬಿಸ್ಮಾರ್ಕ್ ಇರುವ ಸ್ಥಳದ ಮಾಹಿತಿಯೊಂದಿಗೆ ಒಂದು ಪ್ರಮುಖ ಸಂದೇಶವನ್ನು ’ಫೋರ್ಸ್-ಎಚ್’ನ ವೈಸ್ ಅಡ್ಮಿರಲ್ ಸರ್ ಜೇಮ್ಸ್ ಸೋಮರ್ವಿಲ್-ಗೆ ಕಳಿಸಿದರು: ’ಜೇಮ್ಸ್, ಪ್ರಿಪೇರ್ ಯುವರ್ ಏರ್ಕ್ರಾಫ್ಟ್ಸ್ ಫಾರ್ ಎನ್ ಇಮ್ಮಿಡಿಯಟ್ ಸ್ಟ್ರೈಕ್ ಆನ್ ಬಿಸ್ಮಾರ್ಕ್’. ಅತ್ತ ಆರ್ಕ್ ರಾಯಲ್-ನಲ್ಲಿ ದಾಳಿ ನಡೆಸಲು ಯುದ್ಧವಿಮಾನಗಳು ತಯಾರಿ ಆಗುತ್ತಿದ್ದಂತೆಯೇ, ಇತ್ತ ಜೇಮ್ಸ್ ಸೋಮರ್ವಿಲ್ ತನ್ನ ಸುಪರ್ದಿಯಲ್ಲಿದ್ದ ನೌಕೆಗಳ ಪೈಕಿ ವೇಗವಾಗಿ ಚಲಿಸುವ ಶೆಫೀಲ್ದ್ ಎಂಬ ಹಡಗನ್ನು ಬಿಸ್ಮಾರ್ಕನ್ನು ಸಮೀಪಿಸಿ ಅದರ ಬಗ್ಗೆ ಮಾಹಿತಿ ನೀಡುವಂತೆ ಆದೇಶಿಸಿದ್ದರು. ಈ ಸಂದೇಶವನ್ನು ರೇಡಿಯೋದ ಬದಲು ದೀಪ ಮಿಣುಕಿಸುವ ಮೂಲಕ ತಿಳಿಸಲಾಗಿದ್ದರಿಂದ ಶೆಫೀಲ್ಡ್ ವೇಗವಾಗಿ ಮುಂದೆ ಹೊರಟಿದ್ದನ್ನು ಆರ್ಕ್ ರಾಯಲ್ ಗಮನಿಸಿರಲಿಲ್ಲ.


ಮಧ್ಯಾಹ್ನ 2.30ಕ್ಕೆ ಸರಿಯಾಗಿ ಆರ್ಕ್ ರಾಯಲ್-ನಿಂದ 15 ವಿಮಾನಗಳು ಕ್ಷಿಪಣಿಗಳಿಂದ ಅಲಂಕೃತಗೊಂಡು ಗಗನಕ್ಕೆ ಹಾರಿದವು. ಎಲ್ಲಾ 15 ವಿಮಾನಗಳ ಪೈಲಟ್ ಮತ್ತು ಗನ್ನರ್-ಗಳಿಗೆ ನೀಡಿದ ಮಾಹಿತಿಯ ಪ್ರಕಾರ ಬಿಸ್ಮಾರ್ಕ್ ಸುಮಾರು 50-55 ಕಿ.ಮಿ. ದೂರದಲ್ಲಿದೆ ಮತ್ತು ಸಮೀಪದಲ್ಲಿ ಇನ್ಯಾವುದೇ ಹಡಗುಗಳಿಲ್ಲ ಎಂದು! ಮೋಡ ಕವಿದ ವಾತಾವರಣದಲ್ಲಿ ವೈರಿಯ ಹಡಗನ್ನು ಮಾತ್ರ ಕಂಡು ದಾಳಿ ಮಾಡುವ ಇರಾದೆಯಿಂದ ಹೊರಟ ಆರ್ಕ್ ರಾಯಲ್-ನ ವಿಮಾನಗಳಿಗೆ ಸುಮಾರು ದೂರ ಹಾರಿದ ಬಳಿಕ ಕಾಣಿಸಿದ್ದು ಮುಂದಕ್ಕೆ ತೆರಳಿದ್ದ ಶೆಫೀಲ್ಡ್! ಬಿಸ್ಮಾರ್ಕ್ ಸಿಕ್ಕೇಬಿಟ್ಟಿತು ಎಂದು ವಿಮಾನಗಳು ದಾಳಿ ಮಾಡಲು ಮುಂದಾದವು. ಈ ವಿಮಾನಗಳು ದಾಳಿ ಮಾಡಲು ತನ್ನೆಡೆ ’ಡೈವ್’ ಮಾಡುತ್ತಿರುವುದನ್ನು ಗಮನಿಸಿ ಭಯಭೀತನಾದ ಶೆಫೀಲ್ಡಿನ ಕ್ಯಾಪ್ಟನ್ ಖುದ್ದಾಗಿ ಸ್ಟೀರಿಂಗ್ ವೀಲ್-ಬಳಿ ನಿಂತು ಹಡಗನ್ನು ಅಂಕು ಡೊಂಕಾಗಿ ಚಲಿಸತೊಡಗಿದನು. ೧೨ ವಿಮಾನಗಳು ಕ್ಷಿಪಣಿಗಳನ್ನು ’ಡ್ರಾಪ್’ ಮಾಡಿದರೆ, ಕೊನೆಯ 3 ವಿಮಾನಗಳು ತಪ್ಪನ್ನರಿತು ಕ್ಷಿಪಣಿಗಳನ್ನು ಬೀಳಿಸಲಿಲ್ಲ. ಯಾವುದೇ ಕ್ಷಿಪಣಿ ಶೆಫೀಲ್ಡ್-ಗೆ ತಾಗಲಿಲ್ಲ ಎಂಬುದು ದೊಡ್ಡ ಅದೃಷ್ಟ.

ಮತ್ತೊಮ್ಮೆ ಆರ್ಕ್ ರಾಯಲ್-ನಲ್ಲಿ ಎಲ್ಲಾ 15 ವಿಮಾನಗಳನ್ನು ಹಾರಾಟಕ್ಕೆ ಸಜ್ಜುಗೊಳಿಸಲಾಯಿತು. ಮಳೆ ಬಿರುಸಾಗಿ ಬೀಳುತ್ತಿತ್ತು ಮತ್ತು ಗಾಳಿ ರಭಸವಾಗಿ ಬೀಸುತ್ತಿತ್ತು. ಎಲ್ಲೆಲ್ಲೂ ಮೋಡಗಳ ರಾಶಿ. ಆದರೆ ಈಗ ದಾಳಿ ಮಾಡದೆ ಬೇರೆ ದಾರಿಯಿರಲಿಲ್ಲ. ಸಂಜೆ 7ಕ್ಕೆ ಸರಿಯಾಗಿ ಮತ್ತೊಮ್ಮೆ 15 ವಿಮಾನಗಳು ಕ್ಷಿಪಣಿಗಳೊಂದಿಗೆ ಬಿಸ್ಮಾರ್ಕಿನೆಡೆ ಹಾರಿದವು. 40 ನಿಮಿಷಗಳ ಬಳಿಕ ದಾರಿಯಲ್ಲಿ ಶೆಫೀಲ್ಡ್ ಕಾಣಸಿಕ್ಕಿತು. ಶೆಫೀಲ್ಡ್-ನ್ನು ಕಂಡು ಸ್ವಲ್ಪ ಕೆಳಮಟ್ಟಕ್ಕೆ ಬಂದ ವಿಮಾನಗಳಿಗೆ ಶೆಫೀಲ್ಡ್-ನ ಕ್ಯಾಪ್ಟನ್, ’ಎನಿಮಿ- 16 ಕಿ.ಮಿ. ಡೆಡ್ ಅಹೆಡ್’ ಎಂಬ ಸಂದೇಶ ನೀಡಿದ ಬಳಿಕ, 15 ವಿಮಾನಗಳೂ ಮತ್ತೆ ಮೇಲಕ್ಕೇರಿ ಮೋಡಗಳ ನಡುವೆ ಮರೆಯಾದವು.


ಸ್ವಲ್ಪ ಸಮಯದ ಬಳಿಕ ಕದನದ ಸದ್ದುಗಳು ಶೆಫೀಲ್ಡ್-ಗೆ ಕೇಳಲಾರಂಭಿಸಿದವು. ಬಿಸ್ಮಾರ್ಕಿನಿಂದ ಹೊರಬರುತ್ತಿದ್ದ ಗುಂಡಿನ ದಾಳಿ ಮತ್ತು ವಿಮಾನಗಳು ನಡೆಸುತ್ತಿದ್ದ ಕ್ಷಿಪಣಿ ದಾಳಿ. ನಂತರ ಎಲ್ಲವೂ ಶಾಂತ. ಸ್ವಲ್ಪ ಹೊತ್ತಿನ ಬಳಿಕ ವಿಮಾನಗಳು ಶೆಫೀಲ್ಡನ್ನು ದಾಟಿ ಆರ್ಕ್ ರಾಯಲಿನೆಡೆ ಹಿಂದಿರುಗತೊಡಗಿದವು. 3ನೇ ವಿಮಾನ ಶೆಫೀಲ್ಡಿನ ಸಮಾನಾಂತರಕ್ಕೆ ಬಂದು ಬಹಳ ಸಮೀಪದಿಂದ ಮತ್ತು ಕೆಳಮಟ್ಟದಲ್ಲಿ ಹಾರತೊಡಗಿತು. ಈ ವಿಮಾನದ ಪೈಲಟ್ ಮತ್ತು ಗನ್ನರ್ ನಗುವಿನೊಂದಿಗೆ ’ಥಂಬ್ಸ್ ಅಪ್’ ಚಿಹ್ನೆಯನ್ನು ತೋರಿಸುತ್ತಾ ಆರ್ಕ್ ರಾಯಲ್-ನೆಡೆ ಮುಂದುವರಿದರು. ಶೆಫೀಲ್ಡಿನ ಮೇಲೆ ನಿಂತಿದ್ದ ಎಲ್ಲಾ ನಾವಿಕರು ತಮ್ಮ ತಮ್ಮ ಟೊಪ್ಪಿಗಳನ್ನು ತೆಗೆದು ಗೌರವ ಸೂಚಿಸಿದರು. 15 ವಿಮಾನಗಳ ಪೈಕಿ 14 ಹಿಂತಿರುಗಿದವು. ಆದರೆ ಕೇವಲ 2 ಕ್ಷಿಪಣಿಗಳು ಮಾತ್ರ ಬಿಸ್ಮಾರ್ಕಿಗೆ ತಗುಲಿದ್ದವು. ಆದರೆ ಮಾಡಬೇಕಾದ ಹಾನಿಯನ್ನು ಒಂದೇ ಕ್ಷಿಪಣಿ ಮಾಡಿತ್ತು.

ಈ ಒಂದು ಕ್ಷಿಪಣಿ ಬಿಸ್ಮಾರ್ಕಿನ ಸ್ಟೀರಿಂಗ್-ನ್ನು ಸಂಪೂರ್ಣವಾಗಿ ನಾಶಮಾಡಿತು. ಕ್ಷಿಪಣಿ ದಾಳಿಯಿಂದ ಆದ ಹಾನಿಯನ್ನು ಕಂಡು ವಿವರ ಕಲೆ ಹಾಕಲು ತೆರಳಿದ್ದ ವಿಮಾನ ಆರ್ಕ್ ರಾಯಲ್-ಗೆ ಹಿಂತಿರುಗಿದ ಬಳಿಕವೇ ಬಿಸ್ಮಾರ್ಕಿನ ಸ್ಟೀರಿಂಗ್ ಜಾಮ್ ಆಗಿರುವ ವಿಷಯ ತಿಳಿದದ್ದು. ಈ ವಿಮಾನದ ಪೈಲಟ್ ಪ್ರಕಾರ, ಕ್ಷಿಪಣಿ ದಾಳಿಯ ಬಳಿಕ ಬಿಸ್ಮಾರ್ಕ್ ಎರಡು ದೊಡ್ಡ ವೃತ್ತಾಕಾರದ ಸುತ್ತುಗಳನ್ನು ಹಾಕಿ ಉತ್ತರ ದಿಕ್ಕಿಗೆ (ಅಂದರೆ ಸರ್ ಜಾನ್ ಟೋವಿಯ ಹಡಗುಗಳು ಬರುವ ದಿಕ್ಕಿನೆಡೆ) ಮುಖ ಮಾಡಿ ಸ್ತಬ್ಧವಾಗಿ ನಿಂತುಬಿಟ್ಟಿತ್ತು. ಈಗ ಕೇವಲ ವೃತ್ತಾಕಾರದಲ್ಲಿ ಮಾತ್ರ ಬಿಸ್ಮಾರ್ಕ್ ಚಲಿಸಬಲ್ಲದಾಗಿತ್ತು. ರಾಯಲ್ ನೇವಿಯಿಂದ ಸತತವಾಗಿ ಪೀಡನೆ ಮತ್ತು ದಾಳಿಗೊಳಗಾದ ಬಿಸ್ಮಾರ್ಕ್ ಈಗ ಅಸಹಾಯಕ ಸ್ಥಿತಿಯಲ್ಲಿ ನಿಂತಿತ್ತು.

ಮೇ ೨೭: ಮುಂಜಾನೆ 08.15ರ ಸಮಯ. ನೊರ್ಫೊಕ್ ಬಿಸ್ಮಾರ್ಕನ್ನು 12 ಕಿ.ಮಿ ಮುಂದೆ ಕಂಡು ಸರ್ ಜಾನ್ ಟೋವಿಗೆ ಮಾಹಿತಿ ರವಾನಿಸಿತು. ಬಿಸ್ಮಾರ್ಕ್ ಚಲಿಸುತ್ತಿರಲಿಲ್ಲ ಆದರೆ ಆಕೆಯ ಶಕ್ತಿಶಾಲಿ ಬಂದೂಕುಗಳು ಇನ್ನೂ ಜೀವಂತವಾಗಿದ್ದವು ಮತ್ತು ಇವು ಅಪಾರ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವುಳ್ಳ ಬಂದೂಕುಗಳಾಗಿದ್ದವು. ಇದರ ಅರಿವಿದ್ದ ಸರ್ ಜಾನ್ ಟೋವಿ ತನ್ನ 2 ಬಲಿಷ್ಠ ಯುದ್ಧನೌಕೆಗಳನ್ನು - ಕಿಂಗ್ ಜಾರ್ಜ್ 5 ಮತ್ತು ರಾಡ್ನಿ- ಬಿಸ್ಮಾರ್ಕಿನ ಮೇಲೆ ದಾಳಿ ಮಾಡಲು ಆಯ್ಕೆ ಮಾಡಿದರು.


08.47ಕ್ಕೆ ರಾಡ್ನಿಯ 16 ಇಂಚು ಬಂದೂಕುಗಳು ಬಿಸ್ಮಾರ್ಕಿನೆಡೆ ದಾಳಿ ಮಾಡಲು ಆರಂಭಿಸಿದವು. ಕೂಡಲೇ ಕಿಂಗ್ ಜಾರ್ಜ್ 5 ದಾಳಿಯನ್ನಾರಂಭಿಸಿತು. 2 ನಿಮಿಷ ಸುಮ್ಮನಿದ್ದ ಬಿಸ್ಮಾರ್ಕ್ ನಂತರ ದಾಳಿಗೆ ಪ್ರತ್ಯುತ್ತರ ನೀಡಲಾರಾಂಭಿಸಿತು. ಆಕೆಯ 3ನೇ ಗುಂಡೇ ರಾಡ್ನಿಯನ್ನು ಸವರಿಕೊಂಡು ಹೋಯಿತು. ಇಷ್ಟು ಬೇಗನೇ ಅಷ್ಟು ಕರಾರುವಕ್ಕಾದ ದಾಳಿಯನ್ನು ಆಗಿನ ಕಾಲದಲ್ಲಿ ಬೇರೆ ಯಾವ ಯುದ್ಧನೌಕೆಗೂ ಮಾಡಲು ಸಾಧ್ಯವಿರಲಿಲ್ಲ. ತನ್ನ ಹಡಗನ್ನು ಸವರಿಕೊಂಡು ಹೋದ ಗುಂಡಿನ ಮಹತ್ವವನ್ನರಿದ ರಾಡ್ನಿಯ ಕ್ಯಾಪ್ಟನ್ ಡಾಲ್ರಿಂಪಲ್ ಹ್ಯಾಮಿಲ್ಟನ್, ಕೂಡಲೇ ರಾಡ್ನಿಯ ಕೋನವನ್ನು ಬದಲಾಯಿಸಿ ಹೆಚ್ಚು ಬಂದೂಕುಗಳೊಂದಿಗೆ ದಾಳಿ ಮಾಡಲು ಅನುವಾಗುವಂತೆ ನೋಡಿಕೊಂಡು ದಾಳಿಯ ತೀವ್ರತೆಯನ್ನು ಹೆಚ್ಚಿಸಿದರು. 08.54ಕ್ಕೆ ನೊರ್ಫೋಕ್ ತನ್ನ 8 ಇಂಚಿನ ಬಂದೂಕುಗಳೊಂದಿಗೆ ಸ್ವಲ್ಪ ದೂರದಿಂದಲೇ ದಾಳಿಯನ್ನಾರಂಭಿಸಿತು. ಅದಾಗಲೇ ಬಿಸ್ಮಾರ್ಕಿನ ಇನ್ನಷ್ಟು ಸಮೀಪಕ್ಕೆ ಬಂದಿದ್ದ ಕಿಂಗ್ ಜಾರ್ಜ್ 5 ಮತ್ತು ರಾಡ್ನಿ ತಮ್ಮ ರಿಸರ್ವ್ ಬಂದೂಕುಗಳಿಂದಲೂ ದಾಳಿ ಮಾಡಲಾರಂಭಿಸಿದವು. 09.04ಕ್ಕೆ ಜಿಬ್ರಾಲ್ಟರಿನಿಂದ ಬಂದಿದ್ದ ’ಫೋರ್ಸ್-ಎಚ್’ನ ಹಡಗು ಡೊರ್ಸೆಟ್-ಷಯರ್ ಕೂಡಾ ಬಿಸ್ಮಾರ್ಕಿನ ಮೆಲೆ ದಾಳಿಯನ್ನಾರಂಭಿಸಿತು.

10.00 ಗಂಟೆಯ ಹೊತ್ತಿಗೆ ಬಿಸ್ಮಾರ್ಕ್ ಒಂದು ಮೌನ ಅವಶೇಷದಂತೆ ಉರಿಯುತ್ತಾ, ಹೊಗೆ ಉಗುಳುತ್ತಾ ನಿಂತಿತ್ತು. ಆಕೆಯ ಕೊಳವೆಗಳು ಕಣ್ಮರೆಯಾಗಿದ್ದವು. ಬಂದೂಕುಗಳು ಎಲ್ಲಾ ದಿಕ್ಕಿಗೆ ಮುಖ ಮಾಡಿ ಮೌನವಾಗಿ ನಿಂತಿದ್ದವು. ಬಿಸ್ಮಾರ್ಕಿನ ಮಧ್ಯಭಾಗದಿಂದ ಕಪ್ಪು ಮೋಡದಂತೆ ಹೊಗೆ ಮೇಲೇಳುತ್ತಿತ್ತು. ಒಳಗಡೆಯಿಂದ ಬಿಸ್ಮಾರ್ಕ್ ಹೊತ್ತಿ ಉರಿಯುವ ಬೆಂಕಿಯ ಉಂಡೆಯಾಗಿತ್ತು. ಒಳಗಡೆ ಉರಿಯುತ್ತಿರುವ ಈ ಬೆಂಕಿಯ ಪ್ರಖರ ಜ್ವಾಲೆ ಬಿಸ್ಮಾರ್ಕಿನ ಬದಿಯಲ್ಲಿ ಗುಂಡಿನ ದಾಳಿಯಿಂದ ಉಂಟಾದ ರಂಧ್ರಗಳ ಮೂಲಕ ಸ್ಪಷ್ಟವಾಗಿ ಕಾಣುತ್ತಿತ್ತು. ಆಕೆಯ ನಾವಿಕರು ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟು ಆಚೀಚೆ ಓಡಾಡುತ್ತಾ ಹಾರಿ ಬರುತ್ತಿದ್ದ ಗುಂಡುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರುತ್ತಿದ್ದರು. ಇಷ್ಟೆಲ್ಲಾ ಹಾನಿಗೊಳಗಾದರೂ ಬಿಸ್ಮಾರ್ಕಿನ ಧ್ವಜ ಇನ್ನೂ ಹಾರಾಡುತ್ತಿತ್ತು. ಫ್ಲೀಟ್ ಕಮಾಂಡರ್ ಗೂಂತರ್ ಲೂಯನ್ಸ್ ಅದಾಗಲೇ ರಾಡ್ನಿಯ ಬಂದೂಕಿನ ದಾಳಿಗೆ ಬಲಿಯಾಗಿದ್ದರು. ವೈರಿಗಳಿಂದ ಸುತ್ತುವರಿದು, ಯಾವ ಶಕ್ತಿಯೂ ಇಲ್ಲದೆ ನಿಸ್ತೇಜವಾಗಿ ನಿಂತರೂ ಬಿಸ್ಮಾರ್ಕ್ ಇನ್ನೂ ಶರಣಾಗಿರಲಿಲ್ಲ.


ಆದರೆ ರಾಯಲ್ ನೇವಿ ಬಿಸ್ಮಾರ್ಕನ್ನು ಮುಳುಗಿಸಲೇಬೇಕೆಂಬ ಹಟದಲ್ಲಿತ್ತು ಮತ್ತು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ. ಅದಾಗಲೇ ಕಾಡುತ್ತಿದ್ದ ಇಂಧನ ಕೊರತೆಯ ಮತ್ತು ಅಷ್ಟು ಹೊತ್ತಿಗಾಗಲೇ ಅಲ್ಲಿಗಾಗಮಿಸಬೇಕಾಗಿದ್ದ ಜರ್ಮನಿಯ ಯು-ಬೋಟ್-ಗಳು(ಸಬ್-ಮರೀನ್). ಸರ್ ಜಾನ್ ಟೋವಿ, ಇನ್ನಷ್ಟು ಸಮೀಪಕ್ಕೆ ತೆರಳಿ ದಾಳಿ ಮಾಡುವಂತೆ ಸೂಚಿಸಿದರು. ಆದರೆ ಈಗ ಒಂದು ಮಾತಂತೂ ನಿಶ್ಚಯ. ಈ ಸ್ಥಿತಿಯಲ್ಲಿ ಬಿಸ್ಮಾರ್ಕ್ ಯಾವುದೇ ಬಂದರಿಗೆ ಹೋಗಲು ಸಾಧ್ಯವಿರಲಿಲ್ಲ. 10.15ಕ್ಕೆ ಸರ್ ಜಾನ್ ಟೋವಿ ರಾಡ್ನಿಗೆ ದಾಳಿಯನ್ನು ನಿಲ್ಲಿಸಿ ಹಿಂದಿರುಗಲು ಸೂಚಿಸಿದರು.

ಹಿಂತಿರುಗಲು ಸಜ್ಜಾಗುವಂತೆ, ಡಾರ್ಸೆಟ್-ಷಯರ್ 2 ಕ್ಷಿಪಣಿಗಳನ್ನು ಬಿಸ್ಮಾರ್ಕಿನ ಬಲಭಾಗದೆಡೆ ಹಾರಿಸಿತು. ನಂತರ ಬಿಸ್ಮಾರ್ಕಿನ ಎಡಭಾಗಕ್ಕೆ ಬಂದು ಇನ್ನೊಂದು ಕ್ಷಿಪಣಿಯನ್ನು ಹಾರಿಸಿತು. ಈ ಕ್ಷಿಪಣಿಯ ಹೊಡೆತ ಬಿಸ್ಮಾರ್ಕಿಗೆ ಮುಕ್ತಿಯನ್ನು ನೀಡಿತು. ಬಿಸ್ಮಾರ್ಕಿನ ಕ್ಯಾಪ್ಟನ್ ಅರ್ನ್ಸ್ಟ್ ಲಿಂಡ್ಮನ್, ಹಡಗು ಎಡಕ್ಕೆ ವಾಲುತ್ತಿದ್ದಂತೆಯೇ ಏನೋ ಕಸರತ್ತು ಮಾಡಿ ಹಡಗಿನ ಬಲ ಭಾಗದ ಮೇಲೇರಿ ಸಲ್ಯೂಟ್ ಮಾಡುತ್ತಾ ತಟಸ್ಥವಾಗಿ ನಿಂತುಬಿಟ್ಟರು. ಈಗ ಬಿಸ್ಮಾರ್ಕ್ 90 ಡಿಗ್ರಿ ವಾಲಿ ಸಂಪೂರ್ಣವಾಗಿ ತನ್ನ ಎಡಪಾರ್ಶ್ವದ ಮೇಲೆ ನಿಂತಿತ್ತು. ಬಳಿಕ ಎಲ್ಲರೂ ನೋಡುತ್ತಿರುವಂತೆಯೇ ಬಿಸ್ಮಾರ್ಕ್ ಮತ್ತು ಲಿಂಡ್ಮನ್ ನಿಧಾನವಾಗಿ ಅಲೆಗಳ ಕೆಳಗೆ ಕಣ್ಮರೆಯಾದರು. 2000ಕ್ಕೂ ಅಧಿಕ ನಾವಿಕರು ಬಿಸ್ಮಾರ್ಕಿನೊಂದಿಗೆ ಸಾಗರದ ತಳ ಸೇರಿದರು. ಸಮಯ ಮುಂಜಾನೆ 10.39.


ನೀರಿಗೆ ಹಾರಿದ ಬಿಸ್ಮಾರ್ಕಿನ ನಾವಿಕರಲ್ಲಿ 110 ಮಂದಿಯನ್ನು ಡಾರ್ಸೆಟ್-ಷಯರ್ ಮತ್ತು ಮಾವೋರಿ ಎಂಬ ಹಡಗು ಮೇಲೆಳೆದುಕೊಂಡವು. ಆದರೆ ಆಗ ಬಂದ ಯು-ಬೋಟ್-ನ ಎಚ್ಚರಿಕೆ ಈ ಎರಡು ಹಡಗುಗಳನ್ನು ಉಳಿದ 300 ನಾವಿಕರನ್ನು ನೀರಲ್ಲೇ ಬಿಟ್ಟು ಹೋಗುವಂತೆ ಮಾಡಿತು.

ಅದೇ ಸಮಯಕ್ಕೆ ಅಲ್ಲಿ ಇಂಗ್ಲಂಡಿನಲ್ಲಿ ವಿನಸ್ಟನ್ ಚರ್ಚಿಲ್ ಹೌಸ್ ಆಫ್ ಕಾಮನ್ಸ್-ನಲ್ಲಿ ದಿ ಹುಡ್ ಗೆ ಆದ ಸೋಲಿಗೆ ಸೇಡು ತೀರಿಸಲಾಗಿದೆ ಎಂದು ಘೋಷಿಸಿದರು. ಎಲ್ಲಾ ಸದಸ್ಯರು ಕರತಾಡನದೊಂದಿಗೆ ಮೇಜನ್ನು ಕುಟ್ಟಿ ಹರ್ಷೋದ್ಗಾರವನ್ನು ಮಾಡಿದರು. ಬಿಸ್ಮಾರ್ಕನ್ನು ಶೋಧ ಮಾಡಿ ಅದನ್ನು ಮುಳುಗಿಸಿದ್ದು ಜಗತ್ತಿನ ಸಮುದ್ರ ಸಮರಗಳ ಉನ್ನತ ಕಾದಾಟಗಳಲ್ಲೊಂದು. ಅಷ್ಟು ವಿಶಾಲ ಸ್ಥಳದಲ್ಲಿ ಅಷ್ಟೊಂದು ಹಡಗುಗಳನ್ನು ಒಂದೇ ಹಡಗಿನೆಡೆ ದಾಳಿ ಮಾಡಲು ಆಯೋಜಿಸಿ ಅದನ್ನು ಸಾಧಿಸಿದ್ದು ಈ ಅಪೂರ್ವ ಚೇಸ್-ನ ವೈಶಿಷ್ಟ್ಯ.

ಜೂನ್ 8 , 1989ರಂದು ಡಾ.ರಾಬರ್ಟ್ ಬಲ್ಲಾರ್ಡ್, 48 ವರ್ಷಗಳಿಂದ 15700 ಅಡಿ ಸಾಗರದ ತಳದಲ್ಲಿ ಮಲಗಿದ್ದ ಬಿಸ್ಮಾರ್ಕಿನ ಅವಶೇಷಗಳನ್ನು ಪತ್ತೆ ಮಾಡಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಬಹುದು. ಆವಶೇಷಗಳ ಎಲ್ಲಾ ಚಿತ್ರಗಳನ್ನು ಇಲ್ಲಿ ಕಾಣಬಹುದು.

ಬಿಸ್ಮಾರ್ಕ್ ಪೋಲಂಡನಿಂದ ಹೊರಟು ನಾರ್ವೇಯ ಬರ್ಗನ್ ಬಂದರಿನಲ್ಲಿ ತಂಗಿ ನಂತರ ಮುಂದೆ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಡೆಯಾಗುವ ತನಕದ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಬಹುದು. ಬಿಸ್ಮಾರ್ಕ್ ಬಗ್ಗೆ ಇರುವ ಅಂತರ್ಜಾಲ ತಾಣದಲ್ಲಿ ಬೇಕಾದಷ್ಟು ಮಾಹಿತಿಗಳಿವೆ.

6 ಕಾಮೆಂಟ್‌ಗಳು:

sunaath ಹೇಳಿದರು...

ಮೈ ನವಿರೇಳಿಸುವ ಬರಹ!

ರಾಜೇಶ್ ನಾಯ್ಕ ಹೇಳಿದರು...

ಸುನಾಥ,

ಧನ್ಯವಾದ. ಬಿಸ್ಮಾರ್ಕನ್ನು ಮುಳುಗಿಸಿದ್ದು ಒಂದು ದಂತಕತೆ. ಚಲನಚಿತ್ರವನ್ನೂ ನಿರ್ಮಿಸಲಾಗಿದೆ.

Harish - ಹರೀಶ ಹೇಳಿದರು...

ಒಂದು ಹಡಗನ್ನು ಮುಳುಗಿಸುವುದು ಇಷ್ಟೊಂದು ಕಷ್ಟ ಎಂದು ತಿಳಿದಿರಲಿಲ್ಲ.. especially ಟೈಟಾನಿಕ್ ನೋಡಿದ ಮೇಲೆ! ಕುತೂಹಲಕಾರಿ ಬರಹ

ರಾಜೇಶ್ ನಾಯ್ಕ ಹೇಳಿದರು...

ಹರೀಶ್,
ಟೈಟಾನಿಕ್ ಕೂಡಾ ಮಂಜುಗಡ್ಡೆಗೆ ಧಿಕ್ಕಿ ಹೊಡೆದ ೩-೪ ತಾಸುಗಳ ಬಳಿಕ ಮುಳುಗಡೆಯಾಗಿತ್ತು. ಬಿಸ್ಮಾರ್ಕ್ ದಾಳಿ ಆರಂಭವಾದ ೨ ತಾಸುಗಳ ಬಳಿಕ ಮುಳುಗಿತು. ಬಿಸ್ಮಾರ್ಕ್ ಒಂದು ಅಸಾಮಾನ್ಯ ಯುದ್ಧನೌಕೆಯಾಗಿತ್ತು. ಹಾಗಾಗಿ ಅದನ್ನು ಮುಳುಗಿಸಲು ರಾಯಲ್ ನೇವಿ ಹರಸಾಹಸಪಟ್ಟಿತು.

ಶ್ರೀನಿಧಿ.ಡಿ.ಎಸ್ ಹೇಳಿದರು...

superb write up!!!

ರಾಜೇಶ್ ನಾಯ್ಕ ಹೇಳಿದರು...

ಶ್ರೀನಿಧಿ,
ಥ್ಯಾಂಕ್ಸ್.