ಶುಕ್ರವಾರ, ಸೆಪ್ಟೆಂಬರ್ 26, 2008

ನಗರೇಶ್ವರ ದೇವಸ್ಥಾನ - ಬಂಕಾಪುರ


೨೧-೦೬-೨೦೦೮

ನಗರೇಶ್ವರ ದೇವಸ್ಥಾನ ತಲುಪಿದಾಗ ನನಗೆ ಕಂಡದ್ದು ಒಂದು ಭವ್ಯ ದೇವಸ್ಥಾನದ ಮುಖಮಂಟಪದಲ್ಲಿ ಕೂತು ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ಜತನದಿಂದ ದೇವಾಲಯವನ್ನು ಕಾಯುವ ಕಾಯಕದಡಿ ಸುತ್ತಲೂ ಗುಡಿಸುತ್ತಿದ್ದ ಪುರಾತತ್ವ ಇಲಾಖೆಯ ಉದ್ಯೋಗಿ ಗುರುರಾಜ. ಆ ವಿದ್ಯಾರ್ಥಿಯೇನೋ ನನ್ನನ್ನು ನೋಡಿದ ಆದರೆ ಗುರುರಾಜ ತನ್ನ ಕೆಲಸದಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ ನಾನು ದೇವಾಲಯದ ಒಂದು ಸುತ್ತು ಹಾಕಿ ನಂತರ ದೇವಾಲಯವನ್ನು ಪ್ರವೇಶಿಸುವವರೆಗೂ ಅವರು ನನ್ನನ್ನು ಗಮನಿಸಿಯೇ ಇರಲಿಲ್ಲ.


ಅದೆಷ್ಟೋ ದಿನಗಳ ಬಳಿಕ ದೇವಾಲಯ ನೋಡಲು ಒಬ್ಬ ಪ್ರವಾಸಿಗ ಬಂದ ಎಂದು ನನ್ನನ್ನು ಕಂಡು ಗುರುರಾಜರಿಗೆ ಎಲ್ಲಿಲ್ಲದ ಸಂತೋಷ. ೧೧ನೇ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ವಿಷಯ ಬಿಟ್ಟರೆ ಇವರಿಗೆ ಈ ದೇವಾಲಯದ ಬಗ್ಗೆ ಬೇರೇನೂ ಗೊತ್ತಿಲ್ಲ.


ಭೂ ಮಟ್ಟದಿಂದ ಐದಾರು ಅಡಿ ಕೆಳಗಿರುವ ದೇವಾಲಯ ಶಾಂತ ಮತ್ತು ಸುಂದರ ಪರಿಸರದಲ್ಲಿದೆ. ಮುಖಮಂಟಪದಲ್ಲಿ ೬೬ ಸುಂದರ ಕಲಾತ್ಮಕ ಕಂಬಗಳಿರುವುದರಿಂದ ಇದನ್ನು ೬೬ ಕಂಬಗಳ ದೇವಾಲಯವೆಂದೂ ಕರೆಯುತ್ತಾರೆ. ವಿಶಾಲ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಈ ದೇವಾಲಯ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿಲ್ಲ. ದೇವಾಲಯದಲ್ಲೆಲ್ಲೂ ನಂದಿಯೂ ಕಾಣಬರುವುದಿಲ್ಲ. ಛಾವಣಿಯಲ್ಲಿ ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲೆಲ್ಲಾ ಬೇರೆ ಬೇರೆ ಆಕಾರದಲ್ಲಿ ಸುಂದರವಾಗಿ ಕಮಲಗಳನ್ನು ಕೆತ್ತಲಾಗಿದೆ. ಮುಖಮಂಟಪದ ನಟ್ಟ ನಡುವೆ ಛಾವಣಿಯಲ್ಲಿ ಅತಿ ಸುಂದರ ಕಮಲವನ್ನು ಕೆತ್ತಲಾಗಿದೆ. ಗುರುರಾಜರ ಅನುಮತಿ ಪಡೆದು ಅಲ್ಲೇ ಅಂಗಾತ ಮಲಗಿ ಕಮಲದ ಈ ಅದ್ಭುತ ಕೆತ್ತನೆಯ ಸೌಂದರ್ಯವನ್ನು ಸವಿದೆ. ಮುಖಮಂಟಪಕ್ಕೆ ೩ ಕಡೆಗಳಿಂದ ದ್ವಾರವಿದೆ.


ಮುಖಮಂಟಪದ ಬಳಿಕ ಸಣ್ಣ ಸುಖನಾಸಿ. ಸುಖನಾಸಿಯಲ್ಲಿ ಅದ್ಭುತ ಮತ್ತು ಸೂಕ್ಷ್ಮ ಕೆತ್ತನೆ ಕೆಲಸವಿರುವ ೨ ಆಕರ್ಷಕ ಕಂಬಗಳಿವೆ. ಮುಖಮಂಟಪದ ೬೬ ಕಂಬಗಳೂ ಈ ೨ ಕಂಬಗಳಿಗೆ ಸಾಟಿಯಾಗಲಾರವು. ಸುಖನಾಸಿ ದಾಟಿದರೆ ೩ ದ್ವಾರಗಳುಳ್ಳ ನವರಂಗ. ನವರಂಗದ ಪ್ರಮುಖ ಬಾಗಿಲು ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ. ಮೇಲ್ಗಡೆಯಿದ್ದ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ಇಕ್ಕೆಲಗಳಲ್ಲಿದ್ದ ಸುಂದರ ಜಾಲಂಧ್ರಗಳೂ ಬಿದ್ದುಹೋಗಿವೆ. ದೇವಾಲಯದ ಬಲಭಾಗದಿಂದ ನವರಂಗಕ್ಕಿದ್ದ ದ್ವಾರ ಸಂಪೂರ್ಣವಾಗಿ ಬಿದ್ದುಹೋಗಿದ್ದು, ಪುರಾತತ್ವ ಇಲಾಖೆ ಅಲ್ಲಿ ತೇಪೆ ಸಾರಿಸಿ ಆ ದ್ವಾರವನ್ನು ಮುಚ್ಚಿಬಿಟ್ಟಿದೆ. ಆದರೆ ದೇವಾಲಯದ ಎಡಭಾಗದಿಂದ ನವರಂಗಕ್ಕಿದ್ದ ದ್ವಾರ ಇನ್ನೂ ಗಟ್ಟಿಮುಟ್ಟಾಗಿ ಸುಂದರವಾಗಿದ್ದು ಸಣ್ಣ ಮುಖಮಂಟಪವನ್ನು ಹೊಂದಿದೆ. ಇದೂ ೫ ತೋಳಿನದ್ದಾಗಿದ್ದು, ಎಲ್ಲಾ ತೋಳುಗಳಲ್ಲೂ ಸುಂದರ ಕೆತ್ತನೆಯಿದೆ ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ದ್ವಾರದ ಮುಖಮಂಟಪದ ಸುತ್ತಲೂ ಅಪೂರ್ವ ಕೆತ್ತನೆಯಿದೆ.

ನವರಂಗದಲ್ಲಿ ೪ ಕಂಬಗಳಿವೆ. ಇಲ್ಲಿಯೂ ಛಾವಣಿಯಲ್ಲಿ ಕಮಲಗಳ ಹಾವಳಿ. ಅಂತರಾಳದ ದ್ವಾರ ಜಾಲಂಧ್ರಗಳನ್ನು ಹೊಂದಿದ್ದು, ಮೇಲೆ ಏನೋ ಕೆತ್ತನೆಗಳಿವೆ. ಈ ಜಾಲಂಧ್ರಗಳಿಗೆ ತಾಗಿಕೊಂಡೇ ಶಾಸನಗಳನ್ನು ಕೆತ್ತಲಾಗಿದೆ. ಅಂತರಾಳ ದಾಟಿದರೆ ಖಾಲಿ ಗರ್ಭಗುಡಿ.


ಬಂಕಾಪುರದಲ್ಲಿ ದೇವಾಲಯವಿದೆ ಎಂದು ತಿಳಿದಾಗ ಅದಿಷ್ಟು ಭವ್ಯವಾಗಿರಬಹುದೆಂಬ ಎಳ್ಳಷ್ಟೂ ಕಲ್ಪನೆಯಿರಲಿಲ್ಲ. ಇಲ್ಲಿಗೆ ಪ್ರವಾಸಿಗರು ಬರುವುದು ಬಹಳ ಕಡಿಮೆ. ಆದರೆ ಪಾನಮತ್ತರಾಗಿ ದಾಂಧಲೆಯಿಬ್ಬಿಸುವವರು, ಇಸ್ಪೀಟ್ ಆಡುವವರು, ಕೋಳಿ/ಮಾಂಸ/ಸಾರಾಯಿ ಇತ್ಯಾದಿಗಳನ್ನು ತಂದು ಪಾರ್ಟಿ ಮಾಡುವವರು ಇಲ್ಲಿಗೆ ಬರುತ್ತಲೇ ಇರುತ್ತಾರೆ ಮತ್ತು ತಾನು ಆಕ್ಷೇಪಿಸಿದರೆ, ’ನೀ ಯಾರ ಹೇಳೂವ....ಈ ಜಾಗ ನಿನ್ನಪ್ಪಂದೇನ...’ ಎಂದು ತನಗೇ ಗದರಿಸುತ್ತಾರೆ ಎಂದು ಗುರುರಾಜ ತನ್ನ ಅಳಲು ತೋಡಿಕೊಂಡರು. ’ಆದರೂ ಅಂಥವರೆಲ್ಲಾ ಬಂದಾಗ, ತಾನು ಆಕ್ಷೇಪಿಸಿದಾಗ ಅವರಿಂದ ಏನು ಉತ್ತರ ಬರುತ್ತದೆಂದು ಗೊತ್ತಿದ್ದೂ, ಆಕ್ಷೇಪಿಸುವುದನ್ನು ನಿಲ್ಲಿಸಿಲ್ಲ....ನಿಲ್ಲಿಸುವುದೂ ಇಲ್ಲ’ ಎಂದು ಗುರುರಾಜ್ ಹೇಳಿದಾಗ ಮೆಚ್ಚಿದೆ. ಸ್ವಲ್ಪವೇ ಹೊತ್ತಿನ ಬಳಿಕ ಇಂತಹ ಸನ್ನಿವೇಶಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರತ್ಯಕ್ಷ ಕಂಡೆ.

ಅಲ್ಲಿಗೆ ಬಂದಿದ್ದ ೩ ಸಾಬಿ ಯುವಕರು ಮುಖಮಂಟಪದಲ್ಲಿ ಕೂತು ಬೀಡಿ ಸೇದುತ್ತಿದ್ದರು! ಉತ್ತರ, ಪ್ರತ್ಯುತ್ತರಗಳ ಬಳಿಕ ಗುರುರಾಜರ ಕೊನೆಯ ಮಾತಿಗೆ ಆ ಯುವಕರು ಬಾಲ ಮುದುಡಿದ ನಾಯಿಗಳಂತೆ ತೆಪ್ಪಗೆ ಅಲ್ಲಿಂದ ಹೊರಗೆ ಹೋಗಿ ಬೀಡಿ ಸೇದಲಾರಾಂಭಿಸಿದರು. ’ಎಲ್ಲಿಯ ಗುಡಿ..ದೇವ್ರೇ ಇಲ್ಲ..’ ಎಂಬ ಆ ಯುವಕರ ಮಾತಿಗೆ, ’ಮಸೀದಿಯಲ್ಲೂ ದೇವರ ಮೂರ್ತಿಯಿರೋಲ್ಲ, ಆದರೆ ಅಲ್ಲಿ ದೇವರಿಲ್ಲ ಅನ್ನೋದಿಕ್ಕೆ ಆಗುತ್ಯೇ? ..ಅಲ್ಲಿ ಹೇಗೆ ದೇವರಿದ್ದಾನೆ..ಹಾಗೇನೇ ಇಲ್ಲೂ ದೇವರಿದ್ದಾನೆ. ದೇವರಿರ್ಬೇಕಾದ್ರೆ ಮೂರ್ತಿ ಇರ್ಬೇಕು ಅಂತಾ ಇಲ್ಲ. ಮಸೀದಿಯಲ್ಲಿ ಬೀಡಿ ಸೇದೋ ಧೈರ್ಯ ಇದೆಯಾ ನಿಮ್ಗೆ..’ ಎಂಬ ಗುರುರಾಜರ ಮಾತಿಗೆ ಅವರಲ್ಲಿ ಉತ್ತರವಿರಲಿಲ್ಲ. ಆ ಸನ್ನಿವೇಶವನ್ನು ಗುರುರಾಜ್ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ನನಗಿತ್ತು. ಅವರು ನಿಭಾಯಿಸಿದ ರೀತಿಯನ್ನು ಬಹಳ ಮೆಚ್ಚಿ, ಅವರನ್ನು ಅಭಿನಂದಿಸಿ ಅಲ್ಲಿಂದ ಹೊರಟೆ.

6 ಕಾಮೆಂಟ್‌ಗಳು:

Harisha - ಹರೀಶ ಹೇಳಿದರು...

ಇಷ್ಟು ಕ್ಲೀನ್ ಆಗಿರೋ, ಪರಿಸರ ಹೊಂದಿರೋ ದೇವಸ್ಥಾನ ನೋಡಿದ್ದು ಇದೆ ಫಸ್ಟ್!

sunaath ಹೇಳಿದರು...

ಮಣ್ಣಿನಲ್ಲಿ ಮುಚ್ಚಿಹೋದ ಈ ದೇವಾಲಯವನ್ನು ಊರ ಜನರೇ ಕಾಣುವಂತೆ ಮಾಡಿದರು ಎಂದು ಕೇಳಿದ್ದೇನೆ. ಆಸುಪಾಸಿನಲ್ಲಿ ನೂರಾರು ನವಿಲುಗಳೂ ಇವೆಯಂತೆ.

ರಾಜೇಶ್ ನಾಯ್ಕ ಹೇಳಿದರು...

ಹರೀಶ,
ಅಲ್ಲಿನ ಉದ್ಯೋಗಿ ಗುರುರಾಜ ದಿನಕ್ಕೆರಡು ಬರಿ ದೇವಾಲಯದ ಆವರಣವನ್ನು ಸಂಪೂರ್ಣವಾಗಿ ಗುಡಿಸಿ ಸ್ವಚ್ಚಗೊಳಿಸುತ್ತಾನೆ. ಹಾಗಾಗಿ ಕ್ಲೀನ್ ಇರಲೇಬೇಕು.

ಸುನಾಥ್,
"ಮಣ್ಣಿನಲ್ಲಿ ಮುಚ್ಚಿಹೋದ ಈ ದೇವಾಲಯವನ್ನು ಊರ ಜನರೇ ಕಾಣುವಂತೆ ಮಾಡಿದರು ಎಂದು ಕೇಳಿದ್ದೇನೆ." ಈ ವಿಷಯ ಗೊತ್ತೇ ಇರಲಿಲ್ಲ ನೋಡಿ. ಸುತ್ತಲೂ ಮಣ್ಣಿನ ದಿಬ್ಬ ಏಕೆ ಇದೆ ಎಂದು ಅಲ್ಲಿಗೆ ಭೇಟಿ ನೀಡಿದಾಗ ಯೋಚಿಸುತ್ತಿದ್ದೆ. ದೇವಾಲಯವನ್ನು ಮುಚ್ಚಿದ ಮಣ್ಣನ್ನು ತೆಗೆದು ಬದಿಗೆ ಹಾಕಿರಬೇಕು. ಹೌದು, ನವಿಲುಗಳ ಧಾಮದ ನಡುವೆಯೇ ಈ ದೇವಾಲಯವಿದೆ. ಅವುಗಳ ಕೂಗು ಆಗಾಗ ಕೇಳಿಸುತ್ತಾ ಇರುತ್ತದೆ.

Srik ಹೇಳಿದರು...

ಹಿಂದೆ ಇಸ್ಲಾಮಿಕ್ ಇನ್ವೇಷನ್ ನಡೆದಾಗ ಬಹಳಶ್ಟು ದೇವಾಲಯಗಳನ್ನು ಲೂಟಿ ಮಾಡಲೆಂದೋ ಅಥವ ಕಲ್ಚರಲ್ ಆಕ್ರಮಣ ಎಂದೋ ದೇವಾಲಯಗಳ ಮೇಲೆ ಧಾಳಿ ಮಾಡಲಾಯಿತು. ಆ ಸಮಯದಲ್ಲಿ ಕೆಲವು ಊರುಗಳಲ್ಲಿ ಮುಖಂಡರು ದೇವಾಲಯಗಳನ್ನು ಉಳಿಸುವುದೇ ತಮ್ಮ ಜೀವನದ ಆದ್ಯ ಕರ್ತವ್ಯವೆಂದು ತಿಳಿದು ವಿಗ್ರಹಗಳನ್ನು ಬಚ್ಚಿಡುವುದೋ ಇಲ್ಲಾ ಇಡೀ ದೇಗುಲವನ್ನೇ ಮಣ್ಣಿನಲ್ಲಿ ಮುಚ್ಚಿಬಿಡುವುದನ್ನೋ ಮಾಡಿ ಕೃತಕ ಗುಡ್ಡಗಳನ್ನು ನಿರ್ಮಿಸಿ ಬಿಟ್ಟಿರುವರಂತೆ. ಹೀಗಾಗಿ ನಮ್ಮ ದೇಶದ ಯಾವ ಮೂಲೆಯಲ್ಲಿ ಹೋಗಿ ನೆಲ ವನ್ನು ಸ್ವಲ್ಪ ಅಗೆದರೆ ಅಲ್ಲಿ ನಮಗೆ ಒಂದು ಇತಿಹಾಸದ ಸ್ವರ್ಣ ಪುಟ ತೆರೆದು ಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ದೇವಾಲಯಗಳನ್ನು ಸಂದರ್ಶಿಸಲು ನಾನು ಏಕೆ ಇಷ್ಟ ಪಡುತ್ತೀನಿ ಎಂದರೆ ಒಂದೊಂದರಲ್ಲೂ ನಮಗೆ ವಿಶಿಷ್ಟವಾದಂತಹ ಕಥೆ, ಇತಿಹಾಸ, ವೈಭವ, ಲಾಜಿಕ್ಕಿಗೆ ಸಿಲುಕದ ಅನನ್ಯತೆ ಕಾಣಸಿಗುತ್ತದೆ. ಈ ಎಲ್ಲದರೊಂದಿಗೆ ನಮ್ಮ ಸಂಭಾಷಣೆ ಅಲ್ಲಿ ನಡೆಯುತ್ತಿರುತದೆ! ಇಂತಹ ಒಂದು ವಿಶಿಷ್ಟ ಸ್ಥಳ ಈ ಬಂಕಾಪುರದ ದೇಗುಲ. ಬಹಳ ಉಪಯುಕ್ತಕರ ಮಾಹಿತಿ ದೊರಕಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಕೋಟಿ ವಂದನೆಗಳು.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ನೀವಂದ ಪ್ರತಿಯೊಂದು ಮಾತು ಸರಿ. ದುಷ್ಟ ಮುಸಲ್ಮಾನರಿಂದ ಹಿಂದು ದೇವಾಲಯಗಳಿಗಾದ ಹಾನಿ ಅಪಾರ. ಅಷ್ಟೆಲ್ಲಾ ದೇವಾಲಯಗಳನ್ನು ನಿರ್ನಾಮಗೊಳಿಸಿದರೂ, ಇಷ್ಟು ಉಳಿದುಕೊಂಡಿವೆಯಲ್ಲಾ ಎಂಬುದೇ ಸಂಭ್ರಮಿಸುವ ವಿಷಯ.

"ದೇವಾಲಯಗಳನ್ನು ಸಂದರ್ಶಿಸಲು ನಾನು ಏಕೆ ಇಷ್ಟ ಪಡುತ್ತೀನಿ ಎಂದರೆ ಒಂದೊಂದರಲ್ಲೂ ನಮಗೆ ವಿಶಿಷ್ಟವಾದಂತಹ ಕಥೆ, ಇತಿಹಾಸ, ವೈಭವ, ಲಾಜಿಕ್ಕಿಗೆ ಸಿಲುಕದ ಅನನ್ಯತೆ ಕಾಣಸಿಗುತ್ತದೆ"

ಇದೇ ಕಾರಣಕ್ಕೆ ನಾನೂ ದೇವಾಲಯಗಳ ಹಿಂದೆ ಓಡುವುದು. ಅವುಗಳನ್ನು ಕೆತ್ತಿದವರ ಕೌಶಲ್ಯ ಮತ್ತು ನೈಪುಣ್ಯತೆ ಯಾರನ್ನೂ ಬೆರಗುಗೊಳಿಸದೇ ಇರಲಾರದು. ಆ ಕಂಬಗಳನ್ನು ಮುಟ್ಟಿದರೆ ಶಿಲ್ಪಿಗಳೊಂದಿಗೆ ಮಾತನಾಡಿದಂತೆ ಅನಿಸುವುದು. ಮಹತ್ವ ಗೊತ್ತಿರಬೇಕು. ಆಗಲೇ ದೇವಾಲಯ ಭೇಟಿ ಸಾರ್ಥಕ.

Unknown ಹೇಳಿದರು...

ಧನ್ಯವಾದಗಳು ಅಣ್ಣಾಜೀ ನನ್ನೂರ ಬಗ್ಗೆ ಕರುನಾಡಿಗೆ ತಿಳಿಸಿದ್ದಕ್ಕೆ..
🙏🙏🙏