ಭಾನುವಾರ, ಸೆಪ್ಟೆಂಬರ್ 07, 2008

ಜಲಧಾರೆಯನ್ನು ಹುಡುಕಿದ್ದು ...


ದಿನಾಂಕ: ಜುಲಾಯಿ ೧೭, ೨೦೦೫

ಲಾಲ್ಗುಳಿ ಮಿಶನ್ ವೈಫಲ್ಯದ ಬಳಿಕ ಹಿಂತಿರುಗುವಾಗ ಈ ಜಲಧಾರೆಯ ಬಗ್ಗೆ ಮಾಹಿತಿಯನ್ನು ಉತ್ತರ ಕನ್ನಡದ ಜಲಧಾರೆಗಳ ಬಗ್ಗೆ ಬಂದಿದ್ದ ಲೇಖನವೊಂದರಲ್ಲಿ ಓದಿದ್ದ ನೆನಪಾಯಿತು. ಅನಿಲನಲ್ಲಿ ಹೇಳಿದಾಗ ಹುಡುಕೋಣವೆಂದು ಉತ್ಸಾಹದಿಂದಲೇ ಒಪ್ಪಿದ.

ಮಾಹಿತಿ ಪಡೆಯಲು ಮನೆಯೊಂದಕ್ಕೆ ತೆರಳಿದೆವು. ಅಲ್ಲೊಬ್ಬ ನಾಲ್ಕನೇ ತರಗತಿ ಓದುವ ಪೋರ, ಬಲಕ್ಕೆ ಹೋಗಿ ಎಡಕ್ಕೆ ಹೋಗಿ ನೇರಕ್ಕೆ ಹೋಗಿ ಎಡಕ್ಕೆ ಹೋಗಿ ಎಂದು ಕನ್ಫ್ಯೂಸ್ ಮಾಡಿಬಿಟ್ಟ. ನಂತರ ಆತನ ಅಜ್ಜ, ದಾರಿ ಸರಿಯಾಗಿ ಹೇಳಲು ಆಗುದಿಲ್ಲವೆಂದೂ, ಬಹಳ ಕಡೆ ಅಲ್ಲಲ್ಲಿ ಎಡಕ್ಕೆ ಬಲಕ್ಕೆ ತಿರುಗಬೇಕೆಂದು ಹೇಳಿ ಪ್ರಮುಖ ರಸ್ತೆಯಿಂದ ಎಲ್ಲಿ ತಿರುವು ಪಡೆಯಬೇಕೆಂಬ ಮಾಹಿತಿ ನೀಡಿದರು.


ಆ ಹಿರಿಯರು ಹೇಳಿದಲ್ಲಿ ತಿರುವು ತಗೊಂಡು ನೇರವಾಗಿ ಮುನ್ನಡೆದೆವು. ಒಂದು ಕಿ.ಮಿ. ಬಳಿಕ ಅಲ್ಲೊಂದಷ್ಟು ಮನೆಗಳು. ವಿಚಾರಿಸಿದಾಗ, ಸ್ವಲ್ಪ ಮೊದಲೇ ಸಿಗುವ ನಾವು ನಿರ್ಲಕ್ಷಿಸಿ ಬಂದಿದ್ದ ಕವಲು ದಾರಿಯಲ್ಲಿ ತೆರಳಬೇಕೆಂದು ತಿಳಿಯಿತು. ಹಾಗೆ ಹಿಂದೆ ಬಂದರೆ ಅಲ್ಲಿ ಒಂದೇ ಪಾರ್ಶ್ವದಲ್ಲಿ ೩ ದಾರಿಗಳು. ಆದದ್ದಾಗಲಿ ಎಂದು ಒಂದು ರಸ್ತೆಯಲ್ಲಿ ತೆರಳಿದೆವು. ಸ್ವಲ್ಪ ಮುಂದೆ ಮತ್ತೆ ೪ ಕವಲುಗಳು! ಇಲ್ಲೊಂದು ರಸ್ತೆಯನ್ನು ಆಯ್ಕೆ ಮಾಡಿ ಅದರಲ್ಲಿ ತೆರಳಿದೆವು. ಮುಂದೆ ಮತ್ತೆರಡು ಕಡೆ ದಾರಿಗಳು ಕವಲೊಡೆದಿದ್ದವು. ಆದರೂ ನೇರ ರಸ್ತೆಯಲ್ಲೇ ಮುಂದೆ ಸಾಗಿದಾಗ, ರಸ್ತೆ ಕೊನೆಗೊಂಡು ಕಾಲುದಾರಿ ಆರಂಭವಾಯಿತು.

ಸುಮಾರು ೨೦ ನಿಮಿಷ ನಡೆದ ಬಳಿಕ ಇಳಿಜಾರಿನಲ್ಲಿ ಮನೆಯೊಂದು ಕಾಣಿಸಿತು. ನಾವಿನ್ನೂ ಪೊದೆಗಳ ಮರೆಯಲ್ಲಿದ್ದೆವು ಮತ್ತು ಮನೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ’ಯಾರು..ಯಾರು..ಅಲ್ಲೇ ನಿಲ್ಲಿ...ಏನು ಬೇಕು?’ ಎಂಬ ಹೆಣ್ಣು ಧ್ವನಿ ಕೇಳಿಸಿದಾಗ ಅಲ್ಲೇ ನಿಂತೆವು. ಜಲಧಾರೆಯ ಬಗ್ಗೆ ಕೇಳಿದಾಗ, ’ಇಲ್ಯಾಕೆ ಬಂದ್ರಿ..ಹೋಗಿ ಹೋಗಿ..ನಾಯಿ ಬಿಡ್ತೆ..ಶಿರ್ಲು ಇಲ್ಲಿಲ್ಲ..ಬೇರೆ ದಾರಿ..ಹೋಗಿ ಹೋಗಿ... ಮುಂದೆ ಬಂದ್ರೆ ನಾಯಿ ಬಿಡ್ತೆ’ ಎಂದು ಮನೆಯ ಅಂಗಳದಿಂದ ಸಿದ್ಧಿ ಹೆಂಗಸೊಬ್ಬಳ ಅಸ್ಪಷ್ಟ ಆಕೃತಿ ಅರಚಾಡುವುದು ಕಾಣಿಸಿತು. ಆಕೆಯ ೨ ನಾಯಿಗಳು ನಮ್ಮ ಬಳಿ ಬಾಲ ಅಲ್ಲಾಡಿಸುತ್ತಾ ಬಿಸ್ಕಿಟ್ ತಿನ್ನುತ್ತಿರುವುದನ್ನು ಆಕೆ ಗಮನಿಸಿರಲಿಲ್ಲ! ಆಕೆಯ ವರ್ತನೆಯ ಬಗ್ಗೆ ಗುಮಾನಿ ಬಂದರೂ ಇನ್ನು ಅಲ್ಲಿರುವುದು ವ್ಯರ್ಥ ಎಂದೆನೆಸಿ ಹಿಂತಿರುಗಿದೆವು.

ನಂತರ ಕವಲೊಡೆದ ಹಲವಾರು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದರಲ್ಲಿ ಸುಮಾರು ೧೦ ನಿಮಿಷ ನಡೆದರೂ ಯಾವುದೇ ಮನೆಯ ಅಥವಾ ಜನರ ಸುಳಿವಿಲ್ಲ. ಇನ್ನೊಂದು ಕವಲೊಡೆದಿದ್ದ ರಸ್ತೆಯಲ್ಲಿ ತೆರಳಿದರೆ ಅದೂ ವ್ಯರ್ಥ. ಇಷ್ಟೆಲ್ಲಾ ಅಡ್ಡಾಡಿದ ಬಳಿಕ ಏನೇ ಆಗಲಿ ಈ ಜಲಧಾರೆಯನ್ನು ಹುಡುಕಿಯೇ ಸಿದ್ಧ ಎಂದು ಅನಿಲ ಪಣತೊಟ್ಟೇಬಿಟ್ಟ. ಈಗ ಮಗದೊಂದು ಕವಲೊಡೆದ ದಾರಿಯಲ್ಲಿ ಅನಿಲ ಬೈಕನ್ನು ಓಡಿಸಿದ. ಇಲ್ಲಿಯೂ ಮನೆಯೊಂದಿತ್ತು. ಆದರೆ ಮನೆಗೆ ಬೀಗ ಜಡಿಯಲಾಗಿತ್ತು. ಅಲ್ಲಿಂದ ಹಿಂತಿರುಗಿ ಎಲ್ಲಿ ಹೋಗಬೇಕೆಂದು ತಿಳಿಯದೇ ಸಿಕ್ಕಿದ ಇನ್ನೊಂದು ದಾರಿಯಲ್ಲಿ ತೆರಳಿದೆವು.

ಸ್ವಲ್ಪ ದೂರ ಬೈಕು ಓಡಿಸಿ ದೂರದಲ್ಲಿ ತೋಟವೊಂದು ಕಾಣಿಸಿದಾಗ ನಡೆಯಲಾರಂಭಿಸಿದೆವು. ಇಲ್ಲಿ ೨ ಮನೆಗಳಿದ್ದವು. ಸಮೀಪವಿದ್ದ ಮನೆಯ ಬಳಿ ತೆರಳಿದೆವು. ಈ ಮನೆಯಲ್ಲಿ ನಾಲ್ಕಾರು ಮಕ್ಕಳು ಮತ್ತು ಒಬ್ಬ ಯುವ ಸಿದ್ಧಿ ಹೆಂಗಸು. ಈಕೆ ಕೂಡಾ ನಮ್ಮನ್ನು ನೋಡಿ ವ್ಯಾಘ್ರಿಣಿಯಂತೆ ಘರ್ಜಿಸತೊಡಗಿದಳು. ’ಶಿರ್ಲುಗೆ ಹೋಗ್ಬೇಕು..ದಾರಿ ಯಾವುದು’ ಎಂದು ಕೇಳಿದಾಗ, ’ಇದು ದಾರಿ ಅಂತ ಯಾರು ಹೇಳೀರು ನಿಮ್ಗೆ, ಹೋಗಿ ಹೋಗಿ...ಆ ಕಡೆ ಹೋಗ್ಬೇಕು’ ಎಂದು ಕೈಯನ್ನು ಆಗಸದೆಡೆ ತೋರಿಸಿದಳು! ಕುಡಿಯಲು ನೀರು ಕೇಳಿದಾಗ ಆಕೆ ನೀಡಿದ ನೀರನ್ನು ನೋಡಿ ಅನಿಲ್, ’ನಾವು ನೀರು ಕೇಳಿದ್ದು ಕುಡೀಲಿಕ್ಕೆ...ಕಾಲು ತೊಳೀಲಿಕ್ಕಲ್ಲ’ ಎಂದಾಗ, ಮತ್ತಷ್ಟು ಸಿಟ್ಟುಗೊಂಡ ಆಕೆ, ’ಅದೇಯ ನೀರು..ಕಾಲು, ಮುಖ ಎಲ್ಲಾ ತೊಳೀಲಿಕ್ಕೆ ...ಕುಡೀಲಿಕ್ಕೆ...ಎಲ್ಲಾ ಅದೇ ನೀರೇಯ...ನೀರಂತೆ ನೀರು...ಬೇಡಾದ್ರೆ ನಿಮ್ಗ್ಯಾರು ಕುಡೀಲಿಕ್ಕೆ ಹೇಳೀರು...’ ಎಂದು ಗೊಣಗತೊಡಗಿದಾಗ ನನಗಂತೂ ನಗು ಬರತೊಡಗಿತ್ತು. ಇವರೆಲ್ಲಾ ಈ ರೀತಿ ಯಾಕೆ ವರ್ತಿಸುತ್ತಿದ್ದರು ಎಂಬುದು ನಿಗೂಢ.

ನಂತರ ಇನ್ನೊಂದು ಮನೆಯ ದಾರಿಯಲ್ಲಿ ಸಾಗಿದೆವು. ನಮ್ಮ ಅದೃಷ್ಟಕ್ಕೆ ಇದು ಸಿದ್ಧಿ ಮನೆಯಾಗಿರಲಿಲ್ಲ! ಇಲ್ಲಿ ದಾರಿ ಕೇಳಿದಾಗ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಮೋರಿಯಲ್ಲೇ ಹೋಗಲು ಹೇಳಲಾಯಿತು.


ಈ ಸಣ್ಣ ಕಾಲುವೆಯಲ್ಲಿ ಒಂದೈದು ನಿಮಿಷ ನಡೆದ ಬಳಿಕ ಅಂತೂ ಕೊನೆಗೆ ಜಲಧಾರೆಯ ದರ್ಶನವಾಯಿತು. ಎರಡು ತಾಸು ಮತ್ತು ೧೫ ನಿಮಿಷದ ಹುಡುಕಾಟದ ಬಳಿಕ ಸಿಕ್ಕಿದ ಜಲಧಾರೆ ನಿರಾಸೆ ಮಾಡಲಿಲ್ಲ. ನೀರಿನ ಹರಿವು ಕಡಿಮೆ ಇದ್ದರೂ ಸೌಂದರ್ಯಕ್ಕೆ ಈ ಜಲಧಾರೆಗೆ ತನ್ನದೇ ಸ್ಥಾನ ಇದೆ. ಕರಿಕಲ್ಲಿನ ಅಡ್ಡಗೋಡೆಗೆ ಸವರಿಕೊಂಡೇ ಸುಮಾರು ೭೦-೮೦ ಅಡಿಯಷ್ಟು ಎತ್ತರದಿಂದ ಬಳಿಕುತ್ತಾ ಇಳಿಯುವ ಜಲಧಾರೆಯ ತಂಪು ನೋಟ. ಅನಿಲನಂತೂ ಅದಾಗಲೇ ಸ್ನಾನ ಮಾಡತೊಡಗಿದ್ದ. ಮುಖ್ಯ ರಸ್ತೆಯಿಂದ ಜಲಧಾರೆ ಹುಡುಕಲು ನಮಗೆ ೧೩೫ ನಿಮಿಷಗಳು ಬೇಕಾದರೆ ಹಿಂತಿರುಗುವಾಗ ಕೇವಲ ೨೨ ನಿಮಿಷದಲ್ಲಿ ಮುಖ್ಯ ರಸ್ತೆಗೆ ಬಂದಿದ್ದೆವು!


ಒಂದೇ ತಿಂಗಳ ಬಳಿಕ ಅಗೋಸ್ಟ್-ನಲ್ಲಿ ಮತ್ತೊಮ್ಮೆ ಇಲ್ಲಿಗೆ ಬಂದಿದ್ದೆ. ಜಲಧಾರೆಯ ಕರಿಕಲ್ಲಿನ ಗೋಡೆಯೇ ಕಾಣಿಸುತ್ತಿರಲಿಲ್ಲ. ನೀರಿನ ಅಗಾಧ ಹರಿವು ಜಲಧಾರೆಯ ಇನ್ನೊಂದು ರೂಪವನ್ನು ಕಣ್ಣ ಮುಂದೆ ಇಟ್ಟಿತ್ತು. ಅಷ್ಟೆಲ್ಲಾ ನೀರು ಬೀಳುತ್ತಿದ್ದರೂ ಜಲಧಾರೆಯ ಅತ್ಯಂತ ಸಮೀಪ ಅಂದರೆ ನೀರು ಬೀಳುವಲ್ಲಿಂದ ಕೇವಲ ನಾಲ್ಕೈದು ಅಡಿ ದೂರದವರೆಗೂ ಯಾವುದೇ ಅಪಾಯವಿಲ್ಲದೆ ಸಾಗಬಹುದು.

9 ಕಾಮೆಂಟ್‌ಗಳು:

ಹಳ್ಳಿಕನ್ನಡ ಹೇಳಿದರು...

ಚೆನ್ನಾಗಿದೆ ನಿಮ್ಮ ಜಲಧಾರೆ ಹುಡುಕಾಟ. ಅದೆಷ್ಟು ಸುತ್ತುತೀರಿ ರಾಜೇಶ್ ನೀವು!
-ಮಂಜುನಾಥ ಸ್ವಾಮಿ

rakesh holla ಹೇಳಿದರು...

Tumba Chennagide....
istu chennagiruvadakke innu Nanu hoglillvalla anta bejaru....
Adroo idanna Odida mele allige hogi bandage aytu bidi...

ಸುಶ್ರುತ ದೊಡ್ಡೇರಿ ಹೇಳಿದರು...

ಚನಾಗಿರೋ ಹಾಗಿದೆ. ಯಾಡೆಡ್ ಟುದ ಲಿಸ್ಟ್. ಹೋಗೋದೇ!

ಸುಧೀರ್ ಕುಮಾರ್ ಹೇಳಿದರು...

ನಮ್ಮನ್ನು ನೀವು ಜಲಪಾತದ ಹತ್ತಿರ ಕರಕ್ಕೊಂಡು ಹೋದರು ಜಲಪಾತದ ಚೆಲುವನ್ನು ಕತ್ತಲೆಯಾದ ಕಾರಣ ಸರಿಯಾಗಿ ನೋಡಲು ಅಗಿಲ್ಲ ಎಂದು ಬೇಸರ

Aravind GJ ಹೇಳಿದರು...

ಈ ಜಲಪಾತ ನನ್ನ ಲಿಸ್ಟ್ ನಲ್ಲಿ ಇದೆ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಇದರ ಬಗ್ಗೆ ಪುಟ್ಟ ಲೇಖನ ಬಂದಿತ್ತು.

ಒಂದು ಜಲಪಾತವನ್ನು ಒಮ್ಮೆ ನೋಡುವುದೇ ಕಸ್ಟವಾಗಿರುವಾಗ ನೀವು ಅದನ್ನೆಲ್ಲ ಬಹಳ ಸಲ ನೋಡಿದ್ದೀರ!!

Sathish Shanbhogue K ಹೇಳಿದರು...

Fine article but one thing i want to know why they were behaving like that?

ರಾಜೇಶ್ ನಾಯ್ಕ ಹೇಳಿದರು...

ಮಂಜುನಾಥ್,
ಧನ್ಯವಾದ.

ರಾಕೇಶ್,
ಸಮಯ ಸಿಕ್ಕಾಗ ನೋಡಿ ಬರುವಿರಂತೆ. ಬೇಜಾರು ಯಾಕೆ? ಕುಳಿ ಮಾಗೋಡು ಜಲಧಾರೆ ಇನ್ನೂ ಬದುಕಿದೆ.

ಸುಶ್ರುತ,
ನೋಡಲೇಬೇಕಾದ ಸ್ಥಳ. ಸದ್ದು ಗದ್ದಲವಿಲ್ಲ ಅದ್ಭುತ ಜಾಗ.

ಸುಧೀರ್,
ನಿಮ್ಮ ಬ್ಯಾಡ್ ಲಕ್. ಅಷ್ಟು ಸಮೀಪ ಬಂದಿದ್ದರೂ ಜಲಧಾರೆ ನೋಡದೇ ಹಿಂತಿರುಗಿದ್ದಕ್ಕೆ ಏನು ಹೇಳಲಿ?

ಅರವಿಂದ್,
ಪ್ರಜಾವಾಣಿಯ ಲೇಖನದಲ್ಲಿ ’ಹುಳಿ’ ಮಾಗೋಡು ಎಂದಾಗಿತ್ತು!!!

ಸತೀಶ್,
ಗೊತ್ತಿಲ್ಲ. ಮನೆಯಲ್ಲಿ ಗಂಡಸರು ಯಾರೂ ಇಲ್ಲದೇ ಇದ್ದದ್ದು ಒಂದು ಕಾರಣವಿದ್ದಿರಬಹುದು.

Harish - ಹರೀಶ ಹೇಳಿದರು...

ನಿಮ್ಮ ಪ್ರವಾಸಕಥನ ಸೇರಿಸಿ ಒಂದು ಪುಸ್ತಕ ಬರೆದುಬಿಡಿ!!

ರಾಜೇಶ್ ನಾಯ್ಕ ಹೇಳಿದರು...

ಹರೀಶ,
ಪುಸ್ತಕ?! ಪ್ರೀತಿಯ ಸಲಹೆಗೆ ಥ್ಯಾಂಕ್ಸ್. ಆದರೆ ನನ್ನ ಕನ್ನಡ ಅಷ್ಟು ಚೆನ್ನಾಗಿಲ್ಲವಲ್ಲ.