ಮಂಗಳವಾರ, ಆಗಸ್ಟ್ 19, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೪

ಕೊಡಸಳ್ಳಿ ಅಣೆಕಟ್ಟು: ೪೯ ಮೀಟರ್ ಎತ್ತರ, ೫೦೨ ಮೀಟರ್ ಉದ್ದ ಮತ್ತು ೧೦೪೩ ಚ.ಕಿ.ಮಿ ಜಲಾನಯನ ಪ್ರದೇಶ.

ಕದ್ರಾ ಅಣೆಕಟ್ಟು: ೪೦ ಮೀಟರ್ ಎತ್ತರ, ೨೩೧೦ ಮೀಟರ್ ಉದ್ದ ಮತ್ತು ೪೩೩ ಚ.ಕಿ.ಮಿ ಜಲಾನಯನ ಪ್ರದೇಶ.

ಕೊಡಸಳ್ಳಿಯಲ್ಲಿ ೧೨೦ ಮೆಗಾವ್ಯಾಟ್ ಮತ್ತು ಕದ್ರಾದಲ್ಲಿ ೧೫೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಕಾಳಿ ೨ನೇ ಹಂತದಲ್ಲಿ ಒಟ್ಟು ೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ. ಈ ಎರಡೂ ಅಣೆಕಟ್ಟುಗಳನ್ನು ಮತ್ತು ೬ ವಿದ್ಯುತ್ ಘಟಕಗಳನ್ನು ೧೯೯೯ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸಿ ಕಾರ್ಯಾಚರಣೆ ಆರಂಭಿಸಲಾಯಿತು.

ಕೊಡಸಳ್ಳಿ ಮತ್ತು ಕದ್ರಾ ಅಣೆಕಟ್ಟುಗಳ ನಿರ್ಮಾಣದಲ್ಲಿ ಮುಳುಗಡೆಯಾದ ಪ್ರದೇಶ ಇನ್ನುಳಿದ ೪ ಆಣೆಕಟ್ಟುಗಳಿಗೆ ಹೋಲಿಸಿದರೆ ಕಡಿಮೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಏಕೈಕ ’ಆನೆಗಳ ದಾರಿ(ಎಲಿಫೆಂಟ್ ಕಾರಿಡಾರ್)’ ಈ ಅಣೆಕಟ್ಟುಗಳ ನಿರ್ಮಾಣದಿಂದ ಕಣ್ಮರೆಯಾಯಿತು. ೧೯೯೮ರವರೆಗೂ ಯಲ್ಲಾಪುರ-ಅಂಕೋಲ ರಸ್ತೆಯಲ್ಲಿರುವ ಅರೆಬೈಲ್ ಘಟ್ಟದಲ್ಲಿ ಆನೆಗಳು ರಸ್ತೆಯನ್ನು ದಾಟುತ್ತಿದ್ದವು. ದಾಂಡೇಲಿ ಅಭಯಾರಣ್ಯದಿಂದ ಬೇಡ್ತಿ ಕಣಿವೆಗೆ ಇದ್ದ ಆನೆದಾರಿ ಇದಾಗಿತ್ತು. ಈ ೨ ಅಣೆಕಟ್ಟುಗಳು ಮತ್ತು ಕೈಗಾ ಅಣುಸ್ಥಾವರದ ನಿರ್ಮಾಣದ ಸಮಯದಲ್ಲುಂಟಾದ ಕಾಡಿನ ನಾಶ ಈ ಆನೆದಾರಿಯನ್ನು ಶಾಶ್ವತವಾಗಿ ಮರೆಮಾಡಿದೆ. ಬೇಡ್ತಿ ಕಣಿವೆಗೆ ಆನೆಗಳ ಭೇಟಿ ಇಲ್ಲದೇ ಹತ್ತು ವರ್ಷಗಳಾಗುತ್ತಾ ಬಂದವು. ಕಾಡೇ ಇಲ್ಲದೆಡೆ ಎಲ್ಲಿಯ ಆನೆ? ಯಲ್ಲಾಪುರ ವಿಭಾಗದಲ್ಲಿ ಕಳೆದ ದಶಕದಲ್ಲಿ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತು ಮಾನವನ ಆಸೆಗೆ ಬಲಿಯಾದ ಕಾಡು ಅಪಾರ.

ಬೇಡ್ತಿ ಕಣಿವೆಗೆ ಇದ್ದ ದಾರಿ ಮರೆಯಾದ ಬಳಿಕ ಗೊಂದಲಕ್ಕೊಳಗಾದ ದಾಂಡೇಲಿಯ ಆನೆಗಳು ಆಹಾರವನ್ನು ಹುಡುಕಿ ಗೋವಾದ ಭಗವಾನ್ ಮಹಾವೀರ್ ಮತ್ತು ಮೊಲ್ಲೆಮ್ ಅಭಯಾರಣ್ಯಗಳೆಡೆಗೆ ಹಾಗೂ ಮಹಾರಾಷ್ಟ್ರದ ಚಾಂದಘಡದಲ್ಲಿರುವ ದಟ್ಟಾರಣ್ಯಗಳಿಗೆ ತೆರಳುತ್ತಿವೆ. ಅಲ್ಲಿ ಗೋವಾ ಮತ್ತು ಮಹಾರಾಷ್ಟ್ರದ ಜನರಿಗೆ ಆನೆಗಳ ಭೇಟಿ ಹೊಸತು. ಈ ಆನೆಗಳನ್ನು ನೋಡಲು ಅವರು ಮುಗಿಬೀಳುತ್ತಿದ್ದಾರೆ. ಒಂದೆಡೆ ಜನರನ್ನು ಮತ್ತು ಇನ್ನೊಂದೆಡೆ ಆನೆಗಳನ್ನು ಎರಡನ್ನೂ ನಿಯಂತ್ರಿಸಲು ಆಗದೆ ಆ ೨ ರಾಜ್ಯಗಳ ಸರಕಾರಗಳು ಕರ್ನಾಟಕ ಸರಕಾರದ ಎರ್ರಾಬಿರ್ರಿ ಯೋಜನೆಗಳೇ ಇದಕ್ಕೆಲ್ಲಾ ಕಾರಣ ಎಂದು ದೂರುತ್ತಿವೆ. ಗೋವಾ ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆಗಳ ಸಿಬ್ಬಂದಿಗಳಿಗೆ ಅನೆಗಳನ್ನು ನಿಯಂತ್ರಿಸುವ ಮತ್ತು ಸಂಭಾಳಿಸುವ ಅನುಭವ/ಪರಿಣಿತಿ ಇಲ್ಲ. ಆ ದಾರಿತಪ್ಪಿದ ಆನೆಗಳನ್ನು ಮರಳಿ ಕರ್ನಾಟಕದ ಕಾಡಿನೊಳಗೆ ಓಡಿಸಲು ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ತೆರಳಬೇಕು!

ಈಗ ಈ ಆನೆಗಳಿಗೆ ಕಾಡಿನ ಸೊಪ್ಪಿಗಿಂತ ನಾಡಿನ ಕಬ್ಬಿನ ರುಚಿ ಹತ್ತಿದೆ. ೨೦೦೮ರ ಆರಂಭದಲ್ಲಿ ಆನೆಗಳ ಹಿಂಡು ದಾಂಡೇಲಿ ಕಾಡಿನಿಂದ ಹೊರಬಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಎಂಬಲ್ಲಿಯ ಕಬ್ಬಿನ ಗದ್ದೆಗಳಿಗೆ ದಾಳಿ ಮಾಡಿ ದಾಂದಲೆ ನಡೆಸಿದ್ದವು ಎಂದರೆ ವಿಸ್ಮಯವಾಗದೇ ಇರಲಾರದು. ಎಲ್ಲಿಯ ದಾಂಡೇಲಿ ಮತ್ತು ಎಲ್ಲಿಯ ಹಾನಗಲ್! ಕಾಡು ಎಂಬುದು ದಾಂಡೇಲಿ ಸಮೀಪದ ಭಗವತಿಯಲ್ಲೇ ಕೊನೆ. ಆದರೆ ಈ ಆನೆಗಳು ಕಲಘಟಗಿ, ಮುಂಡಗೋಡ ದಾಟಿ ಅಕ್ಕಿಆಲೂರು ತಲುಪಿ ರೈತನೊಬ್ಬನನ್ನು ತುಳಿದು ಆತನ ಮರಣಕ್ಕೆ ಕಾರಣರಾದರೆಂದರೆ ಮುಂದಿನ ದಿನಗಳಲ್ಲಿ ಇವುಗಳನ್ನು ನಿಯಂತ್ರಿಸುವವರಾರು? ಸರಿಯಾದ ರೂಪುರೇಷೆ ಇಲ್ಲದ ಯೋಜನೆಗಳು ಎಷ್ಟೆಲ್ಲಾ ರೀತಿಯಲ್ಲಿ ಅನಾಹುತಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಈ ಆನೆಗಳ ಪರದಾಟ/ಹಾವಳಿ ಒಂದು ಉದಾಹರಣೆ. ತಮ್ಮ ಪಾಡಿಗೆ ದಾಂಡೇಲಿ-ಅಣಶಿ-ಬೇಡ್ತಿ ಎಂದು ಅಲೆದಾಡಿಕೊಂಡಿದ್ದ ಆನೆಗಳು ಈಗ ನಾಡಿನೆಡೆಗೆ ಮತ್ತು ನೆರೆ ರಾಜ್ಯಗಳ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವಂತಾಗಲು ಕಾರಣ ಯಾರು?

ಈ ೨ ಅಣೆಕಟ್ಟುಗಳಿಂದ ಅತಂತ್ರ ಸ್ಥಿತಿಗೆ ತಲುಪಿದ ಹಳ್ಳಿಗಳು ಹಲವಾರು. ತಮ್ಮಣಗಿ, ಬಾಳೆಮನೆ, ಶಿವಪುರ, ದೇವಕಾರು ಈ ಎಲ್ಲಾ ಹಳ್ಳಿಗಳು ಮುಳುಗಡೆಯಾಗದೆ ಉಳಿದರೂ ಇದ್ದ ಎಲ್ಲಾ ಸಂಪರ್ಕ ರಸ್ತೆಗಳನ್ನು ಕಳೆದುಕೊಂಡವು. ಮುಳುಗಡೆಯಾಗಿಲ್ಲ ಎಂಬ ಕಾರಣ ಮುಂದಿಟ್ಟು ಪರಿಹಾರ ನೀಡಲು ಸರಕಾರ ನಿರಾಕರಿಸಿತು. ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲೂ ಸರಕಾರ ಆಸಕ್ತಿ ತೋರಿಸಿಲ್ಲ. ಇಂತಹ ಹಲವಾರು ಹಳ್ಳಿಗಳಿವೆ. ಹೊಸಘಟ್ಟ ಹಳ್ಳಿಯ ಅರ್ಧಭಾಗ ಅಂದರೆ ಕೆಳಗಿನ ಹೊಸಘಟ್ಟ ಮಾತ್ರ ಮುಳುಗಿದೆ. ಕೆಲವೊಂದೆಡೆ ಇಡೀ ಹಳ್ಳಿಯೇ ಮುಳುಗಿದರೂ, ಒಂದೆರಡು ಮನೆಗಳು ಮುಳುಗಿಲ್ಲವೆಂದು, ಆ ಮನೆಯವರಿಗೆ ಪರಿಹಾರವಿಲ್ಲ! ಹಿನ್ನೀರು ಎಂಬ ಸಾಗರದ ಮಧ್ಯೆ ಈ ಮನೆಯವರು ವಾಸ ಮಾಡಬೇಕೆ? ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪವಾದರೂ ಮಾನವೀಯತೆಯನ್ನು ಹೊಂದಿರಬೇಕಾಗುತ್ತದೆ. ಆಲಮಟ್ಟಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ತೆಗೆಸಿಕೊಟ್ಟ ಅಧಿಕಾರಿಯೊಬ್ಬರಿದ್ದರು. ಇವರ ಹೆಸರು ನೆನಪಾಗುತ್ತಿಲ್ಲ. ಇಂತಹ ಅಧಿಕಾರಿಗಳನ್ನೇ ಸರಕಾರ ನೇಮಿಸಬೇಕು.

ಕೊಡಸಳ್ಳಿ ಹಿನ್ನೀರಿನಲ್ಲಿ ಮನೆ/ಜಮೀನು ಕಳಕೊಂಡವರಿಗೆ ಸೂಕ್ತ ಪರಿಹಾರ ನೀಡಿ ಮಾಗೋಡಿನಲ್ಲಿ ನೆಲೆಯನ್ನು ಕಲ್ಪಿಸಲಾಯಿತು. ಆದರೆ ಆಗ ಮಾಗೋಡಿನಲ್ಲಿ ಮತ್ತದೇ ಮೂಲಭೂತ ಸೌಕರ್ಯಗಳ ಕೊರತೆ. ಈಗ ಸ್ವಲ್ಪ ಪರವಾಗಿಲ್ಲ. ಇಲ್ಲಿನ ಅವ್ಯವಸ್ಥೆ ಕಂಡು ಮಾನಸಿಕವಾಗಿ ಗಟ್ಟಿಯಾಗಿದ್ದ ಕೆಲವು ನಿರಾಶ್ರಿತರು ಸಿಕ್ಕ ಪರಿಹಾರದ ಹಣದಿಂದ ಬೇರೆ ಕಡೆ ವಲಸೆ ಹೋಗಿ ಬದುಕು ಕಂಡುಕೊಂಡರು. ಇದ್ದ ನೆಲ, ಮನೆ ಮತ್ತು ಸಮೃದ್ಧ ಬದುಕು ಕಳಕೊಂಡು ಮಾನಸಿಕವಾಗಿ ಕುಗ್ಗಿ ಹೋದವರು ಮಾಗೋಡಿನಲ್ಲೇ ನೆಲೆ ನಿಂತರು. ಮಾಗೋಡು ಜಲಧಾರೆಗಿಂತ ೫ ಕಿ.ಮಿ ಮೊದಲು ಮಾಗೋಡು ಹಳ್ಳಿ ಸಿಗುತ್ತದೆ. ಹಳ್ಳಿಯಲ್ಲಿ ರಸ್ತೆಯ ಎಡಬದಿಯಲ್ಲಿ ನಿರಾಶ್ರಿತರಿಗೆಂದು ಕಟ್ಟಿಸಲಾಗಿದ್ದು, ಈಗ ಪಾಳುಬೀಳುತ್ತಿರುವ ಮನೆಗಳನ್ನು ಕಾಣಬಹುದು. ಕುಮಾರಪರ್ವತದ ಚಾರಣ ಹಾದಿಯಲ್ಲಿ ಸಿಗುವ ಗಿರಿಗದ್ದೆಯ ಒಂಟಿ ಮನೆಯಲ್ಲಿ ನೆಲೆನಿಂತಿರುವ ಭಟ್ಟರು ಕೂಡಾ ಕೊಡಸಳ್ಳಿ ನಿರಾಶ್ರಿತರು. ೨೦೦೪ ಜನವರಿಯಲ್ಲಿ ಇವರ ಮನೆಯಲ್ಲಿ ತಂಗಿದಾಗ ಅವರಲ್ಲಿ ಆ ವಿಷಯದ ಬಗ್ಗೆ ಚರ್ಚಿಸುವ ತವಕ ತೋರಿದೆನಾದರೂ ಅವರು ಆಸಕ್ತಿ ತೋರದ ಕಾರಣ ಸುಮ್ಮನಾಗಿದ್ದೆ. ಆ ದುಖ: ಇನ್ನೂ ಅವರನ್ನು ಕಾಡುತ್ತಿತ್ತೇನೋ.

ಕದ್ರಾ ನಿರಾಶ್ರಿತರಿಗೆ ’ಹೊಸ ಕದ್ರಾ’ ಎಂಬ ಸ್ಥಳದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು. ಈ ಸ್ಥಳವಂತೂ ಯಾವುದೇ ಕೊಂಪೆಗೆ ಕಡಿಮೆಯಿಲ್ಲ. ಅಲ್ಲೇ ಸಮೀಪದಲ್ಲಿ ಕ.ವಿ.ನಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಾಸ್ತವ್ಯ ಕಲ್ಪಿಸಿರುವ ಕದ್ರಾ ಕಾಲೋನಿ ಚೆನ್ನಾಗಿದೆ. ಕದ್ರಾ ಹಿನ್ನೀರನ್ನು ಬಳಸುವ ಕೈಗಾ ಅಣುಸಂಸ್ಥೆಯ ನೌಕರರಿಗೆ ಕದ್ರಾದ ಸಮೀಪದಲ್ಲೇ ಮಲ್ಲಾಪುರ ಎಂಬಲ್ಲಿ ಉತ್ತಮ ಸ್ಥಳದಲ್ಲಿ ವಾಸ್ತವ್ಯ. ಆದರೆ ಮನೆ ಜಮೀನು ಕಳಕೊಂಡವರಿಗೆ ಮಾತ್ರ ಕೊಂಪೆಯಂತಹ ಸ್ಥಳ. ಕದ್ರಾ ಅಣೆಕಟ್ಟಿನ ಹಿಂಭಾಗದಲ್ಲೇ ತಗ್ಗು ಪ್ರದೇಶದಲ್ಲಿದ್ದ ಹಳೆ ಕದ್ರಾ ಸಂಪೂರ್ಣವಾಗಿ ಮುಳುಗಿಹೋದಾಗ ನಿರಾಶ್ರಿತರಲ್ಲಿ ಹೆಚ್ಚಿನವರು ಬೇರೆಡೆ ವಲಸೆ ಹೋದರು. ಆದರೆ ಕಡು ಬಡವರು ಮಾತ್ರ ಕದ್ರಾ ಅಣೆಕಟ್ಟಿನ ಮುಂಭಾಗದಲ್ಲೇ ಇರುವ ಹೊಸ ಕದ್ರಾದಲ್ಲಿ ಉಳಿದರು. ಈವತ್ತಿಗೂ ಇಲ್ಲಿ ಒಂದು ಸರಿಯಾದ ಆಸ್ಪತ್ರೆ, ಬಸ್ಸು ನಿಲ್ದಾಣ ಇಲ್ಲ.

ಕದ್ರಾ ಎಡದಂಡೆಯಲ್ಲಿ ಕೈಗಾ ಅಣುಸ್ಥಾವರವನ್ನು ನಿರ್ಮಿಸಲಾಗಿದೆ. ೭೩೨ ಹೆಕ್ಟೇರುಗಳಷ್ಟು ಕಾಡನ್ನು ಅಣುಸಂಸ್ಥೆ ನಿರ್ಮಾಣಕ್ಕಾಗಿ ಕಡಿದು ಹಾಕಲಾಯಿತು. ಇಷ್ಟೇ ಅಲ್ಲದೆ ಉತ್ಪಾದಿಸಿದ ವಿದ್ಯುತ್ತನ್ನು ಸಾಗಿಸಲು ೬೭೭ ಎಕ್ಟೇರುಗಳಷ್ಟು ಕಾಡನ್ನು ಮತ್ತೆ ಕಡಿಯಲಾಯಿತು. ಅದಾಗಲೇ ಕೆಲವು ಅಣೆಕಟ್ಟುಗಳು ಮತ್ತು ವಿದ್ಯುತ್ ಉತ್ಪಾದನಾ ಕೆಂದ್ರಗಳಿಂದ ನಲುಗುತ್ತಿದ್ದ ಕಾಳಿ ಕೊಳ್ಳಕ್ಕೆ ಈ ಅಣುಸ್ಥಾವರ ಒಂದು ಮಾರಕ ಹೊಡೆತ. ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ಮತ್ತು ವಿರೋಧದ ನಡುವೆಯೂ ಪರಿಸರ ಸಂರಕ್ಷಣೆ ಎಂಬ ಮಾತಿಗೆ ಅಪವಾದ ಎಂಬಂತೆ ಕೈಗಾ ಅಣುಸ್ಥಾವರವನ್ನು ದಟ್ಟ ಕಾಡಿನ ನಡುವೆ ನಿರ್ಮಿಸಲಾಯಿತು. ಅಣುಸ್ಥಾವರ ನಿರ್ಮಾಣದ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಅದಾಗಲೇ ಬಹಳಷ್ಟು ಹಣವನ್ನು ವ್ಯಯಿಸಲಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಕಡೆಗಣಿಸಲಾಯಿತು. ವಿನ್ಯಾಸ ದೋಷದ ಕಾರಣದಿಂದ ನಿರ್ಮಾಣಗೊಳ್ಳುತ್ತಿದ್ದ ಒಂದು ಗೋಪುರ ಕುಸಿದುಬಿದ್ದಿತ್ತು. ಕಾರ್ಯಾಚರಣೆಯಲ್ಲಿದ್ದಾಗ ಕುಸಿದು ಬಿದ್ದಿದ್ದರೆ ಆಗುತ್ತಿದ್ದ ಅನಾಹುತವನ್ನು ಊಹಿಸಲಸಾಧ್ಯ.

ಅನಾಹುತದ ಸಮಯದಲ್ಲಿ ಸ್ಥಾವರದ ಸಮೀಪವಿರುವ ಹಳ್ಳಿಗಳಲ್ಲಿ ವಾಸವಿರುವ ಜನರನ್ನು ಕ್ಷಿಪ್ರವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಈಗಲೂ ಯಾವುದೇ ವ್ಯವಸ್ಥೆಯಿಲ್ಲ. ಅಣುಸ್ಥಾವರಕ್ಕೆ ಹತ್ತಿರದಲ್ಲಿರುವುದೆಂದರೆ ೩ ಕಿ.ಮಿ ದೂರದಲ್ಲಿರುವ ಬಾಳೆಮನೆ ಎಂಬ ಹಳ್ಳಿ. ಪ್ರಜಾವಾಣಿಯಲ್ಲಿ ಅದೊಮ್ಮೆ ಬಾಳೆಮನೆ ಬಗ್ಗೆ ’ಬಾಳೇ ಇಲ್ಲದ ಮನೆ’ ಎಂಬ ಸೂಕ್ತ ಶೀರ್ಷಿಕೆ ಇದ್ದ ಲೇಖನ ಬಂದಿತ್ತು. ಅಣುಸ್ಥಾವರದ ಸಿಬ್ಬಂದಿಗಳು ಆಗಾಗ ಕೈಯಲ್ಲೊಂದು ಮಾಪನ ಹಿಡಿದುಕೊಂಡು ಬಾಳೆಮನೆಯ ಸುತ್ತ ಅಡ್ಡಾಡುತ್ತಾರೆಯೇ ವಿನ: ಹಳ್ಳಿಗರಲ್ಲಿ ಏನೂ ಮಾತನಾಡುವುದಿಲ್ಲ. ಹನ್ನೆರಡು ವರ್ಷಗಳ ಕಾಲ ಅಣುಸ್ಥಾವರವನ್ನು ವಿರೋಧಿಸಿ ಪ್ರಬಲ ಜನಾಂದೋಲನವಿದ್ದರೂ ಸರಕಾರ ಎಲ್ಲವನ್ನೂ ಕಡೆಗಣಿಸಿತು/ಹಿಮ್ಮೆಟ್ಟಿಸಿತು.

ಅಣುಸ್ಥಾವರದ ಅಪಾಯದ ಬಗ್ಗೆ ಕೈಗಾ ಮತ್ತು ಸುತ್ತಮುತ್ತಲಿನ ಹಳ್ಳಿಗರಿಗೆ ಯಾವುದೇ ಮಾಹಿತಿಯಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪರಿಸರವಾದಿಗಳು ಒಂದಾಗಿ ಜನರಿಗೆ ಅಣುಸ್ಥಾವರದ ಅಪಾಯಗಳನ್ನು ಮನವರಿಕೆ ಮಾಡಿ ಕೈಗಾ ಅಣುಸ್ಥಾವರದ ವಿರುದ್ಧ ಪ್ರಬಲ ಜನಾಂದೋಲನವನ್ನು ರಚಿಸಿದರು. ಸಾಹಿತಿ ಶಿವರಾಮ ಕಾರಂತರೂ ಈ ಹೋರಾಟಕ್ಕೆ ಸೇರಿಕೊಂಡು ಆಗ ನಡೆದಿದ್ದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತರು.

ಕದ್ರಾ ಜಲಾಶಯದ ನೀರನ್ನೇ ಅಣುಸ್ಥಾವರದಲ್ಲಿ ಬಳಸಿ ಮತ್ತದೇ ನೀರನ್ನು ಜಲಾಶಯಕ್ಕೇ ಬಿಡಲಾಗುತ್ತಿದೆ. ಹಾಗಿರುವಾಗ ಕಾಳಿ ನದಿ ನೀರಿನಲ್ಲಿ ಅಣು ವಿಕಿರಣಕ್ಕೆ ಸಂಬಂಧಿಸಿದ ಅಂಶಗಳಿಲ್ಲ ಎಂದು ಯಾವ ಆಧಾರದ ಮೇಲೆ ಎನ್.ಟಿ.ಪಿ.ಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್) ಹೇಳಿಕೆ ನೀಡುತ್ತಿದೆ ಅರ್ಥವಾಗುತ್ತಿಲ್ಲ. ಅತ್ತ ದಾಂಡೇಲಿಯಲ್ಲಿ ಕಾಳಿಯನ್ನು ಕುಲಗೆಡಿಸಿ ಗಬ್ಬು ನಾರುವಂತೆ ಮಾಡಿಯೂ ಕಾಳಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿಕೆ ನೀಡುವ ವೆಸ್ಟ್-ಕೋಸ್ಟ್ ಪೇಪರ್ ಕಾರ್ಖಾನೆ. ಇತ್ತ ಅಣು ವಿಕಿರಣ ಅಂಶಗಳನ್ನು ಕಾಳಿ ನದಿಗೆ ವಿಸರ್ಜಿಸಿಯೂ ಕಾಳಿ ನದಿಯ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಎನ್.ಟಿ.ಪಿ.ಸಿ. ಇವರೆಲ್ಲಾ ಯಾರಿಗೆ ಮಂಕುಬೂದಿ ಎರಚಲು ನೋಡುವುದೇನೋ? ಕಾಳಿ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಅಣುಸಂಸ್ಥೆ, ತನ್ನ ನೌಕರರು ವಾಸವಿರುವ ಮಲ್ಲಾಪುರ ಕಾಲೊನಿಯಲ್ಲಿ ಮತ್ತು ಸ್ವತ: ತನ್ನ ಪ್ರಾಂಗಣದೊಳಗೆ ಬಳಸುವುದು ಯಲ್ಲಾಪುರ ತಾಲೂಕಿನ ಬಾರೆಯಿಂದ ಹರಿದುಬರುವ ನೀರನ್ನು!

ಕೈಗಾ ಅಣುಸ್ಥಾವರ ನಿರ್ಮಾಣದ ಹತ್ತು ವರ್ಷಗಳ ಬಳಿಕ ಕೈಗಾ ಸಮೀಪದ ಹಳ್ಳಿಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ! ಅಣುಸ್ಥಾವರಕ್ಕೆ ಜಮೀನನ್ನು ಯಾವುದೇ ಪರಿಹಾರ ನೀಡದೇ ಕಸಿದುಕೊಳ್ಳಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ. ಇಷ್ಟೆಲ್ಲಾ ಆದರೂ ಒಂದು ಅಣುಸ್ಥಾವರ ಆಯುಷ್ಯ ಎಷ್ಟು? ೩೦-೩೫ ವರ್ಷ ಆಷ್ಟೇ! ಅಲ್ಲಿ ನಾಗಝರಿಯಲ್ಲಿ ೫೦ ವರ್ಷ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಸಲುವಾಗಿ ಅಪಾರ ಪ್ರಮಾಣದಲ್ಲಿ ಕಾಡು ಮತ್ತು ನಾಡು ನಾಶವಾದರೆ ಇಲ್ಲಿ ಕೈಗಾದಲ್ಲಿ ೩೫ ವರ್ಷ ಅಣು ವಿದ್ಯುತ್ ಉತ್ಪಾದನೆ ಸಲುವಾಗಿ ಕಾಳಿ ವಿಕಿರಣದ ಅಂಶಗಳಿಂದ ನಲುಗಿಹೋಗುತ್ತಿದ್ದಾಳೆ.

ಮುಂದುವರಿಯುತ್ತದೆ...

12 ಕಾಮೆಂಟ್‌ಗಳು:

ಶರಶ್ಚಂದ್ರ ಕಲ್ಮನೆ ಹೇಳಿದರು...

ನಿಮ್ಮ ಲೇಖನ ಓದಿ ನಿಜವಾಗಲೂ ಭಯಗೊಂಡಿದ್ದೇನೆ. ಒಂದು ದಿನ ನಾವೆಲ್ಲ ಕತ್ತಿ, ಕೊಡಲಿ ಹಿಡಿದುಕೊಂಡು ಪರಿಸರಕ್ಕಾಗಿ ಯುದ್ಧ ಮಾಡುವ ಪರಿಸ್ಥಿತಿ ಬರುವ ಸಾಧ್ಯತೆಗಳು ಹೆಚ್ಚಾಗಿ ಕಾಣತೊಡಗಿದೆ. ಅಣುಸ್ಥಾವರಕ್ಕೆ ಬಳಸಿದ ನೀರನ್ನು ಪರೀಕ್ಷಿಸದೆ ಮತ್ತೆ ನದಿಗೆ ಬಿಟ್ಟು ಅದನ್ನು ಉಪಯೋಗಕ್ಕೆ ಯೋಗ್ಯ ಎಂದು ಕನಿಷ್ಟ ಸಾಮಾಜಿಕ ಜವಾಬ್ದಾರಿಯನ್ನೂ ಮರೆತಿರುವ ಎನ್.ಟಿ.ಪಿ.ಸಿ ಏನು ಸಾದಿಸಲು ಹೊರಟಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಇವೆಲ್ಲ ಆತಂಕಕಾರಿ ವಿಷಯಗಳಾಗಿ ಕಾಣುತ್ತಿವೆ.

Aravind GJ ಹೇಳಿದರು...

ಕಾಳಿ ಕೊಳ್ಳದ ನಾಶಕ್ಕೆ ಉತ್ತರ ಕನ್ನಡ ಜಿಲ್ಲೆಯ ಜನರೂ ಒಂದು ರೀತಿಯಲ್ಲಿ ಹೊಣೆಗಾರರು. ಚುನಾವಣೆ ಜಿಲ್ಲೆಯ ಪರಿಸರಕ್ಕಾಗಿ ಹೋರಾಡುತ್ತಿದ್ದ ಶಿವರಾಮ ಕಾರಂತರಂತವರನ್ನು ಸೋಲಿಸಿ ಬರೀ "ತಿನ್ನುವುದನ್ನೇ" ಕಾಯಕವನ್ನಾಗಿರಿಸಿದ ವ್ಯಕ್ತಿಯನ್ನು ಆರಿಸಿದರು!!

ಸಾತೋಡ್ಡಿ ಜಲಪಾತಕ್ಕೆ ಹೋಗುವಾಗ ಕೈಗಾದಿಂದ ಬರುವ "Hi Tension" ತಂತಿಗಳು ಕಾಡನ್ನು ಕತ್ತರಿಸಿರುವುದು ಕಾಣುತ್ತದೆ.

ಅನಾಮಧೇಯ ಹೇಳಿದರು...

೩-೮-೨೦೦೮ ರ ಉದಯವಾಣಿಯಲ್ಲಿ "ಅಣು" ಎಂಬ ಲೇಖನದಲ್ಲಿ ಕೈಗಾ ಅಣುಸ್ಥಾವರದ ಹಾಗು ಕಾಳಿ ನದಿ ನೀರಿನ ಬಗ್ಗೆ ವಿಸ್ತಾರವಾಗಿ ಬರೆದಿದ್ದರು. ಒದುತ್ತಾ ನಿಮ್ಮ ಕಾಳಿ ಕೊಳ್ಳದ ಕಥೆ/ವ್ಯಥೆ ಲೇಖನದ ನೆನಪು ಅಯಿತು. ಕಾಳಿ ನದಿಯ ನೀರನ್ನು ಉಪಯೋಗಿಸಲು ಕಾರವಾರದ ನಗರಸಭೆ ಸಹ ರೆಡಿ ಇಲ್ಲ ಎಂದು ಬರೆದಿದ್ದರು ,ನಮ್ಮ ರಾಜಕಾರಣಿ ಗಳಿಗೆ ಅಣುವಿನ ಬಗ್ಗೆ ಯಾಕೆ ವ್ಯಾಮೋಹ ಅಂಥ ಗೊತ್ತಾಗುವುದಿಲ್ಲ.
ಈಗ ನಮ್ಮ ಕಾರ್ಕಳ ದ ಅಜೆಕಾರ್ ನ ವಾಲಿಕುಂಜದಲ್ಲಿ ಯುರೆನಿಯಮ್ ಉಂಟು ಅಂಥ ೧೯೭೮-೧೯೮೮ ರ ಮದ್ಯೆ ಸರ್ವೆ ಮಾಡಿದ್ದಾರೆ ಎಂದು ಮೊನ್ನೆಯ ಪೇಪರಲ್ಲಿ ಒದಿದ್ದೆ.
ಮುಂದೆ ನಮಗೆ ಚಾರಣಕ್ಕೆ ಒಂದು ಜಾಗ ಕಡಮೆ ಅಗಬಹುದು
ಅಂಥ ಅನಿಸುತ್ತದೆ,
ಅಲ್ಲದೆ ಕರ್ನಾಟಕದಲ್ಲಿ ಇತರ ೩ ಕಡೆ ಯುರೆನಿಯಮ್ ಉಂಟು ಎಂದು ಹೇಳಿದ್ದಾರೆ,ಇದೆಲ್ಲ ಕಾರ್ಯಗತ ವಾದರೆ ????.

ಮಿಥುನ ಕೊಡೆತ್ತೂರು ಹೇಳಿದರು...

ಅಬ್ಬಾ ಎಷ್ಟೆಲ್ಲ ಮಾಹಿತಿಗಳಿವೆ ನಿಮ್ಮಲ್ಲಿ!!

Vanita Hegde ಹೇಳಿದರು...

Hi,

I know you, amn't I? I was trying to get some good kannada stuff and ended up in your blog. I was amazed to see this, undoubtedly one of the best

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,

ಬೇಸರದ ಸಂಗತಿಗಳನ್ನ ಉದ್ವೇಗರಹಿತವಾಗಿ ಬರೆಯುವ ಶಕ್ತಿ ನಿಮ್ಮದು. ಓದಿ ಕಳವಳ ಎನಿಸುತ್ತಿದೆ. ನಾವೆಲ್ಲ ಒಂದು ಪುಟ್ಟ ಭದ್ರ ಕೋಶದಲ್ಲಿ ಯಾವ ಯೋಚನೆಯೂ ಇಲ್ಲದೆ ಹಾಯಾಗಿರುವುದರ ಬಗ್ಗೆ ತುಂಬ ಬೇಸರವಾಗಿದೆ. :(

ಪ್ರೀತಿಯಿಂದ
ಸಿಂಧು

Parisarapremi ಹೇಳಿದರು...

ಇನ್ನೊಬ್ಬರ ಬ್ಲಾಗಿನಲ್ಲಿ ಇದೇ ರೀತಿ ಕಮೆಂಟಿಸಿದ್ದೆ.. ನಾವು ಎಷ್ಟು ನಿಸ್ಸಹಾಯಕರಾಗಿಬಿಟ್ಟಿದ್ದೇವಲ್ಲವೇ? ಏನೂ ಮಾಡಲಾಗದೇ??? :-( :-(

Srik ಹೇಳಿದರು...

Very startling series. ಸತ್ಯದ ವಿರಾಟ್ ದರ್ಶನ!

ಮುಂದೆ ನಾವೇನು ಮಾಡಿದರೆ ಇರುವುದನ್ನಾದರೂ ಉಳಿಸಿಕೊಳ್ಳಬಹುದು ತಿಳಿಸಿ.

ನಾನು ಇಲ್ಲಿಯ ವರೆಗೂ nuclear reactors ನಮ್ಮದೇಶದ power crisisಅನ್ನು ನೀಗಿಸುವ ಏಕೈಕ ಮಾರ್ಗ ಎಂದು ತಿಳಿದಿದ್ದೆ. ಆದರೆ, ನಮ್ಮ ಕಾಡು, ನಾಡು, ನೀರನ್ನು ನುಂಗಿ ನೀರು ಕುಡಿವ ಈ ಅಣು ಶಕ್ತಿ ನಮಗೆ ಅಷ್ಟು ಅವಶ್ಯಕವೇ ಎನ್ನಿಸ ತೊಡಗಿದೆ!

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಎನ್.ಟಿ.ಪಿ.ಸಿ ಬರೀ ಕೈಗಾದಲ್ಲೇ ಅಲ್ಲ, ಎಲ್ಲೆಲ್ಲಿ ತನ್ನ ಅಣುಸ್ಥಾವರಗಳಿವೆಯೋ ಎಲ್ಲೆಡೆಯೂ ಉದ್ಧಟತನದ ನಡತೆಯನ್ನೇ ತೋರುತ್ತಿದೆ. ತಮಗೂ ಮತ್ತು ಸ್ಥಾವರದ ಆಸುಪಾಸಿನಲ್ಲಿ ವಾಸಿಸುವ ಜನರಿಗೆ ಯಾವ ಸಂಬಂಧವೂ ಇಲ್ಲದಂತೆ ವರ್ತಿಸುತ್ತಾ ಇದೆ ಎನ್.ಟಿ.ಪಿ.ಸಿ.

ಅರವಿಂದ್,
ಉತ್ತರ ಕನ್ನಡದ ಜನರು! ಹ್ಮ್. ಈಗ ನೀರು ಮೂಗಿನ ಮಟ್ಟಕ್ಕಿಂತ ಮೇಲೇರುತ್ತಿರುವಾಗ ನಿಧಾನವಾಗಿ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಸುಧೀರ್ ಕುಮಾರ್,
ರಾಜಶೇಖರ್ ಹೆಗಡೆ ಬರೆದ ಲೇಖನವದು. ಚೆನ್ನಾಗಿತ್ತು. ಯುರೇನಿಯಮ್ ನಿಕ್ಷೇಪ ಇದ್ದದ್ದು ಪತ್ತೆಯಾದರೆ ಅಲ್ಲಿ ಎನ್.ಟಿ.ಪಿ.ಸಿ ಹಾಜರ್.

ಮಿಥುನ್,
ಧನ್ಯವಾದಗಳು.

ಹೆಗ್ಡೆ,
ಪರಿಚಯವಿದೇಯೆ? ತಮ್ಮ ಪೂರ್ತಿ ಹೆಸರು ತಿಳಿಸಿದರೆ ಸಹಾಯವಾಗಬಹುದು. ಧನ್ಯವಾದಗಳು.

ಸಿಂಧು,
ನಮ್ಮ ನಮ್ಮ ಪುಟ್ಟ ಕೋಶಗಳಲ್ಲಿ ನಾವು ಭದ್ರವಾಗಿದ್ದೇವೆ. ಅಥವಾ ಭದ್ರವಾಗಿದ್ದೇವೆ ಎಂಬ ಭ್ರಮೆಯಲ್ಲೆದ್ದೇವೆಯೋ... ತಿಳಿಯದಾಗಿದೆ.

ಅರುಣ್,
ಹೌದು. ಆದರೆ ಕಾಳಿ ಬಚಾವೋ ಆಂದೋಲನದ ಬಗ್ಗೆ ಓದಿದರೆ ಸ್ವಲ್ಪ ಸಮಾಧಾನವಾದರೂ ಆಗುತ್ತದೆ.

ಶ್ರೀಕಾಂತ್,
ಧನ್ಯವಾದಗಳು. ಅಣುಶಕ್ತಿ ಬೇಕೋ ಬೇಡವೋ ನಾನರಿಯೆ. ಆದರೆ ಕಾಡನ್ನು ನಾಶ ಮಾಡಿ, ನೀರನ್ನು ಕಲುಷಿತಗೊಳಿಸಿ ಅಣುಶಕ್ತಿ ಉತ್ಪಾದಿಸುವುದಾದರೆ ಅದು ನಮಗೆಲ್ಲರಿಗೂ ದುಬಾರಿ ಬೀಳುತ್ತದೆ.

Shree ಹೇಳಿದರು...

ರಾಜೇಶ್,

ಯುರೇನಿಯಮ್ ವಿಕಿರಣ ನೀರಿನ ಮೂಲಕ ಪ್ರಸರಣವಾಗುವುದು ಸ್ಥಾವರದಲ್ಲಿ ಲೀಕೆಜ್ ಇದ್ದಾಗ ಮಾತ್ರ ಅಂತ ನನ್ನ ತಿಳುವಳಿಕೆ. ಸ್ಥಾವರ ಸರಿಯಾಗಿದ್ದಲ್ಲಿ ಈ ಹೆದರಿಕೆಗೆ ಕಾರಣ ಇಲ್ಲ. ಯಾಕೆಂದರೆ, ಅಣುಸ್ಥಾವರದಲ್ಲಿ ನೀರು ಒಂದು coolant ಆಗಿ ಮಾತ್ರ ಉಪಯೋಗವಾಗ್ತದೆ.. ಇದು ತಾಂತ್ರಿಕವಾಗಿ ಹೀಗೆ, ಆದ್ರೆ ನಿಜವಾಗಿ ಏನು ನಡೀತಿದೆ ಅಂತ ಗೊತ್ತಾಗುವುದಿಲ್ಲ ಬಿಡಿ, ಯಾಕೆಂದರೆ ಅಣುಸ್ಥಾವರಗಳ ಬಗ್ಗೆ ಮಾಹಿತಿ ನೀಡುವುದು official secret actನ violation.

ಹಾಗೆಯೇ, ಬಿಸಿನೀರು ನದಿ ಸೇರಿದಾಗ ಆಗುವ ಎಲ್ಲಾ ಅಪಾಯಗಳು ಇದರಲ್ಲಿವೆ. ಮತ್ತು, ಯಾವತ್ತಿದ್ದರೂ ನ್ಯೂಕ್ಲಿಯರ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಅನ್ನುವುದು ಮರೀಚಿಕೆಯೇ. ಅದರಲ್ಲಿರುವ ಹಾನಿಗಳ ಬಗ್ಗೆ ಅಮೇರಿಕಾ ಯೋಚನೆ ಮಾಡಿದೆ, ಇತರ ಎಲ್ಲಾ ರಾಷ್ಟ್ರಗಳು ಯೋಚನೆ ಮಾಡಿವೆ. ಆದ್ರೆ ಭಾರತಕ್ಕಿನ್ನು ಜ್ಞಾನೋದಯ ಆಗಿಲ್ಲ.

ನ್ಯೂಕ್ಲಿಯರ್ ಡೀಲಿನ ಒಪ್ಪಂದಗಳು, ಮತ್ತು ಈಗ ನಮ್ ದೇಶ ಹೋಗ್ತಾ ಇರೋ ದಿಕ್ಕು ನೋಡಿದ್ರೆ, ಕಾರ್ಕಳ ದ ಅಜೆಕಾರ್ ನ ವಾಲಿಕುಂಜದಲ್ಲಿ, ಮತ್ತು ಇಂತಹದೇ ಯುರೇನಿಯಮ್ ಗಣಿ ಇರುವ ಜಾಗಗಳಲ್ಲಿ ಯುರೇನಿಯಮ್ ಅಗೆತ ಆರಂಭವಾಗುವ ದಿನಗಳು ದೂರವಿಲ್ಲ ಅನ್ಸ್ತಾ ಇದೆ.

ರಾಜೇಶ್ ನಾಯ್ಕ ಹೇಳಿದರು...

ಶ್ರೀ,
"ಯುರೇನಿಯಮ್ ವಿಕಿರಣ ನೀರಿನ ಮೂಲಕ ಪ್ರಸರಣವಾಗುವುದು ಸ್ಥಾವರದಲ್ಲಿ ಲೀಕೆಜ್ ಇದ್ದಾಗ ಮಾತ್ರ ಅಂತ ನನ್ನ ತಿಳುವಳಿಕೆ. ಸ್ಥಾವರ ಸರಿಯಾಗಿದ್ದಲ್ಲಿ ಈ ಹೆದರಿಕೆಗೆ ಕಾರಣ ಇಲ್ಲ. ಯಾಕೆಂದರೆ, ಅಣುಸ್ಥಾವರದಲ್ಲಿ ನೀರು ಒಂದು coolant ಆಗಿ ಮಾತ್ರ ಉಪಯೋಗವಾಗ್ತದೆ.." ನೀವಂದದ್ದು ಸರಿಯಾಗಿದೆ. ಆದರೂ ಅಣುಸ್ಥಾವರದಿಂದ ಹೊರಬರುವ ನೀರು ವಿಕಿರಣರಹಿತ ಎಂದು ನಂಬುವುದು ನನ್ನಂತಹ ಸಾಮಾನ್ಯರಿಗೆ ಬಹಳ ಕಷ್ಟ.

ನ್ಯುಕ್ಲಿಯರ್ ಡೀಲಿನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಿದೆ. ಆದರೆ ಒಬ್ಬೊಬ್ಬ ಎಕ್ಸ್-ಪರ್ಟ್ ಒಂದೊಂದು ರೀತಿಯಲ್ಲಿ ಹೇಳುತ್ತಾರೆ. ಏನೂ ಅರ್ಥಾನೇ ಆಗಿಲ್ಲ. ಅರ್ಥ ಆಗುವುದೂ ಇಲ್ಲ ಎಂದೆನಿಸುತ್ತಿದೆ. ಭಾರತಕ್ಕೆ ಜ್ಞಾನೋದಯ ಆಗುವಷ್ಟರಲ್ಲಿ ಕಾಲ ಮಿಂಚದಿದ್ದರೆ ಸಾಕು!

Shree ಹೇಳಿದರು...

ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನ್ಯೂಕ್ಲಿಯರ್ ಡೀಲ್ ವಿವರಿಸಲು ಯತ್ನಿಸುತ್ತೇನೆ, ನಾಗರಿಕದಲ್ಲಿ, ಆದಷ್ಟು ಬೇಗ.