ಭಾನುವಾರ, ಆಗಸ್ಟ್ 10, 2008

ಕಣ್ಣಿಗೆ ಹಬ್ಬ - ಹೆಬ್ಬೆ


ಅಗಾಧತೆಯಿದ್ದರೂ ಭೀಕರತೆಯಿಲ್ಲದ, ಎಸ್ಟೇಟ್ ಒಂದರಲ್ಲಿದ್ದೂ ಕಾಡಿನಲ್ಲೆಲ್ಲೋ ಇರುವಂತೆ, ಅಷ್ಟೆತ್ತರದಿಂದ ಧುಮುಕುತ್ತಿದ್ದರೂ ಸನಿಹಕ್ಕೆ ಬರುವ ತನಕ ತನ್ನ ಇರುವಿಕೆಯನ್ನು ಬಹಿರಂಗಪಡಿಸದ ನಾಚಿಕೆಯ ಜಲಧಾರೆ ಹೆಬ್ಬೆ. ಚಿಕ್ಕ ಹೆಬ್ಬೆ ಮತ್ತು ದೊಡ್ಡ ಹೆಬ್ಬೆ ಎಂಬ ಹೆಸರಿರುವ ಎರಡು ಹಂತಗಳಲ್ಲಿ ಹೆಬ್ಬೆ ಜಲಧಾರೆ ಧುಮುಕುತ್ತದೆ. ಪ್ರವಾಸಿಗರು/ಚಾರಣಿಗರ ಕಣ್ಣಿಗೆ ಸಂಪೂರ್ಣವಾಗಿ ಕಾಣಿಸುವುದು ದೊಡ್ಡ ಹೆಬ್ಬೆ. ಇದರ ಮೇಲೆ ಇರುವುದು ಮೊದಲ ಹಂತ ಸಣ್ಣ ಹೆಬ್ಬೆ.

ಗೆಳೆಯ ದಿನೇಶ್ ಹೊಳ್ಳರಲ್ಲಿ ದಾರಿಯ ಮಾಹಿತಿ ಪಡೆದು, ಅಕ್ಟೋಬರ್ ೨೦೦೩ರ ಅದೊಂದು ರವಿವಾರ ಮುಂಜಾನೆ ೫ಕ್ಕೆ ಮಂಗಳೂರಿನಿಂದ ಹೊರಟೆ. ನನ್ನ ಪ್ಯಾಶನ್ ಬೈಕಿಗೆ ಇದು ಮೊದಲ ದೂರದ ಪ್ರಯಾಣ. ಕೈಮರದ ಬಳಿಕ ಎಸ್ಟೇಟುಗಳ ನಡುವೆ ಸಾಗುವ ಸಿಂಗಲ್ ರಸ್ತೆ. ಅದುವರೆಗೆ ಮಹಾರಾಜನಂತೆ ಬಂದ ನನ್ನ ಬೈಕು, ಈಗ ಬೆಟ್ಟವನ್ನೇರುವಾಗ ಏದುಸಿರು ಬಿಡುತ್ತಿದ್ದ ಪರಿ ನೋಡಿ, ’ಛೆ, ಯಮಾಹ ತರಬೇಕಿತ್ತು’ ಎಂದೆನಿಸತೊಡಗಿತ್ತು.

ಬೆಟ್ಟದ ಮೇಲೆ ತಲುಪಿದ ನಂತರ ಕೆಮ್ಮಣ್ಣುಗುಂಡಿಯವರೆಗಿನ ಹಾದಿಯ ಬಗ್ಗೆ ವರ್ಣಿಸಲು ಶಬ್ದಗಳು ಸಾಲವು. ಒಂದೆಡೆ ನಿಂತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸೋಣವೆಂದರೆ ನನ್ನಲ್ಲಿ ಸಮಯವಿರಲಿಲ್ಲ ಮತ್ತು ಆದಷ್ಟು ಬೇಗ ಹೆಬ್ಬೆ ಫಾಲ್ಸ್ ಮುಟ್ಟುವ ತವಕ. ಹಿಂತಿರುಗುವಾಗ ಆರಾಮವಾಗಿ ಅಲ್ಲಲ್ಲಿ ನಿಲ್ಲುತ್ತಾ ಹಸಿರಿನ ಸಿರಿಯನ್ನು ಆನಂದಿಸುತ್ತಾ ಬಂದರಾಯಿತು ಎಂದು ಎಲ್ಲೂ ನಿಲ್ಲಿಸದೇ ಕೆಮ್ಮಣ್ಣುಗುಂಡಿಯತ್ತ ಮುಂದುವರಿದೆ. ದತ್ತಪೀಠಕ್ಕೆ ತೆರಳುವ ತಿರುವು ಬಂದಾಗಲೂ ’ಹಿಂತಿರುಗುವಾಗ ನೋಡಿದರಾಯಿತು’ ಎಂದು ಮುಂದುವರಿಸಿದೆ. ಬೈಕು ಚಲಾಯಿಸುವಾಗ ಗಿರಿ ಕಂದರಗಳ ಚೆಲುವನ್ನು ಎಂಜಾಯ್ ಮಾಡಲು ಆಸ್ಪದವೇ ಇರಲಿಲ್ಲ. ಯಾಕೆಂದರೆ ರಸ್ತೆಯ ಬದಿಯಲ್ಲಿ ತಡೆಗೋಡೆಯೇ ಇರಲಿಲ್ಲ. ರಸ್ತೆ ಅಂಚಿಗೆ ಬಂದರೆ ಕೆಳಗೆ ಪ್ರಪಾತ. ಹಾಗಾಗಿ ಕಣ್ಣುಗಳು ರಸ್ತೆಯ ಮೇಲೆ. ಕೆಮ್ಮಣ್ಣುಗುಂಡಿ ತಲುಪಿ, ಶಾಂತಿ ಜಲಧಾರೆಗಾಗಿ ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಇಲ್ಲಿ ’ಝೆಡ್ ಪಾಯಿಂಟ್’ಗೆ ಹೋಗೋಣವೆಂದಾದರೂ ಸಮಯದ ಕೊರತೆಯಿತ್ತು. ಮತ್ತಷ್ಟು ಸಮಯ ವ್ಯರ್ಥ ಮಾಡದೇ ಹೆಬ್ಬೆ ಜಲಧಾರೆಯತ್ತ ಹೊರಟೆ.

ಆರೇಳು ಕಿಮಿ ಹದಗೆಟ್ಟಿದ ಮಣ್ಣಿನ ರಸ್ತೆಯಲ್ಲಿ ಸಾಗಿ ಎಸ್ಟೇಟ್-ವೊಂದರ ಬಳಿ ಬಂದೆ. ಇಲ್ಲಿ ಬೈಕು ನಿಲ್ಲಿಸಿ ಹತ್ತು ನಿಮಿಷ ನಡೆದರೆ ಹೆಬ್ಬೆ ಜಲಧಾರೆ. ನೋಡಿದೊಡನೆಯೇ ’ಆಂ..’ ಎಂದು ಬಾಯಿ ತೆಗೆದವ ಸ್ವಲ್ಪ ಹೊತ್ತು ಹಾಗೇ ಇದ್ದೆ. ಜಲಧಾರೆಯೊಂದರ ಸೌಂದರ್ಯ ಕೇವಲ ನೀರಿನ ಹರಿವೊಂದರ ಮೇಲಷ್ಟೆ ನಿರ್ಭರವಾಗಿರುವುದಿಲ್ಲ. ಜಲಧಾರೆಯ ಆಕಾರ, ಅಚೀಚೆ ಬೆಳೆದಿರುವ ಕಾಡು, ಅಕಾಶ, ನೀರಿನ ಹರಿವಿನ ಅಗಲ, ತಳಕ್ಕೆ ಅಪ್ಪಳಿಸುವ ಪರಿ, ತಳದಲ್ಲಿರುವ ನೀರಿನ ರಾಶಿ, ಜಲಧಾರೆಯ ಹಿಂದಿರುವ ಕಲ್ಲಿನ ಗೋಡೆ ಇವೆಲ್ಲವೂ ಜಲಧಾರೆಯ ಸೌಂದರ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆಬ್ಬೆಯಲ್ಲಿದ್ದವು ಇವೆಲ್ಲವೂ. ತಳದಲ್ಲಿ ನೀರಿನ ಶೇಖರಣೆ ಸ್ವಲ್ಪ ಕಡಿಮೆ ಎಂಬುದನ್ನು ಕಡೆಗಣಿಸಿದರೆ, ಹೆಬ್ಬೆಯ ಚೆಲುವು ಅಪ್ರತಿಮ.

ಮರಳಿ ಕೆಮ್ಮಣ್ಣುಗುಂಡಿ ರಸ್ತೆಗೆ ಬಂದಾಗ ಸಮಯ ೩.೩೦ ಆಗಿತ್ತು. ಅತ್ತಿಗುಂಡಿ ದಾರಿಯಲ್ಲಿರುವ ಆ ತಿರುವುಗಳನ್ನು ಮತ್ತು ತಡೆಗೋಡೆ ಇರದ ರಸ್ತೆಯನ್ನು ನೆನೆಸಿ ಆ ದಾರಿ ಬೇಡವೆಂದು ಲಿಂಗದಹಳ್ಳಿ ದಾರಿ ಹಿಡಿದೆ. ಆದ್ದರಿಂದ ದತ್ತಪೀಠ ಮತ್ತು ಅತ್ತಿಗುಂಡಿ ದಾರಿಯ ಚೆಲುವನ್ನು ನೋಡಲಾಗಲಿಲ್ಲ. ಈ ಪ್ರಯಾಣದ ಬಳಿಕ ಇನ್ನೂ ಆ ಕಡೆ ನಾನು ತೆರಳಿಲ್ಲ. ಕೈಮರ-ಅತ್ತಿಗುಂಡಿ-ಕೆಮ್ಮಣ್ಣುಗುಂಡಿ ದಾರಿಯ ಚೆಲುವನ್ನು ಸಂಪೂರ್ಣವಾಗಿ ಅಸ್ವಾದಿಸುವ ಆಸೆ, ಹಾಗೇ ಉಳಿದಿದೆ.

ಮಾಹಿತಿ: ಚೇತನಾ ದಿನೇಶ್ ಮತ್ತು ದಿನೇಶ್ ಹೊಳ್ಳ

7 ಕಾಮೆಂಟ್‌ಗಳು:

ಸುಧೀರ್ ಕುಮಾರ್ ಹೇಳಿದರು...

ಕೈಮರ- ದತ್ತಪೀಠ ಮತ್ತು ಅತ್ತಿಗುಂಡಿ-ಕೆಮ್ಮಣ್ಣುಗುಂಡಿ ದಾರಿಯಲ್ಲಿ ಕಾಣಸಿಗುವ ಗಿರಿ ಕಂದರಗಳ ಚೆಲುವು ನಿಜವಾಗಿ ಸುಪರ್.ನಾವು ಈ ರೂಟಲ್ಲಿ ೨೦೦೭ ಅಕ್ಟೋಬರ್ ತಿಂಗಳಲ್ಲಿ ನಮ್ಮ ಮೋಹನನ ಶಕ್ತಿ ಯಲ್ಲಿ ಹೋದ ಕಾರಣ ಹಸಿರಿನಿಂದ ಕೂಡಿದ ಗಿರಿ ಕಂದರಗಳ ಚೆಲುವು ಸ್ವಲ್ಪ ಮಟ್ಟಿಗೆ ಎಂಜಾಯ್ ಮಾಡಲು ಸಾದ್ಯವಾಯಿತು.ನಾವು ಹೋದಾಗ ರಸ್ತೆ ಅಗಲ ಹಾಗು ಸರಿ ಮಾಡುತಿದ್ದರು.
ಇನ್ನೊಮ್ಮೆ ನನಗೆ ಈ ರೂಟಲ್ಲಿ ನಿಮ್ಮ ಹಾಗೆ ಬೈಕಿನಲ್ಲಿ ಹೋಗುವ ಆಸೆ ಉಂಟು.
ಅಲ್ಲಿಗೆ ಹೋದವರು ಕಲ್ಲತ್ತಗಿರಿ ಜಲಪಾತ ನೋಡದೆ ಬಂದಿರಾ.

Aravind GJ ಹೇಳಿದರು...

ದತ್ತಪೀಠದಿಂದ ಕೆಮ್ಮಣ್ಣುಗುಂಡಿಗೆ ಹೋಗುವ ದಾರಿ ತುಂಬ ಚೆನ್ನಾಗಿ ಇದೆ ಎಂದು ಕೇಳಿದ್ದೇನೆ. ’ಝೆಡ್ ಪಾಯಿಂಟ್' ಗೆ ಹೋಗುವ ದಾರಿಯಲ್ಲಿ ಶಾಂತಿ ಫಾಲ್ಸ್ ಸಿಗುತ್ತದೆ. ದಾರಿಯ ಪಕ್ಕದಲ್ಲೇ ಇದೆ.

Mahantesh ಹೇಳಿದರು...

naaanu koda hebbe fallsge kaLeda Decnalli bheti niDidde..navella KemmannaguMdiyinda kaDanalli charaNa maaDutta e fallsge bheti kottide...neevu heLida haage tumba chennagide i jaga...

Srik ಹೇಳಿದರು...

Nanu collegenalli iddaga hebbe falls ge hogidde, class trip. A jeep route was newly built over there intersecting the lush coffee estates.

But we were made to walk all the way thru there. That was a fantastic walk, and the waterfalls.... awesome.

I could see a lot of people there then, since it was early Feb, some indulging in dangerous acts, and some others alcohol. A girl fainted after sometime, and the whole atmosphere was changed. She got back to senses after an hour or so, but she had already spoilt our fun then!

ಸಿಂಧು Sindhu ಹೇಳಿದರು...

ಪ್ರೀತಿಯ ರಾಜೇಶ್,

ನಿಮ್ಮ ನೆನಪಿನ ಖನಿಯಿಂದ ಒಳ್ಳೆ ಮುತ್ತೆ ಹೆಕ್ಕಿದ್ದೀರಿ. ಹೆಬ್ಬೆ ನಂಗೂ ತುಂಬ ಇಷ್ಟವಾದ ಜಲಪಾತ. ನಾವು ಅಲ್ಲಿಗೆ ಹೋದಾಗೆಲ್ಲ ಕೆಮ್ಮಣ್ಣುಗುಂಡಿಯಿಂದಲೂ ನಡಕೊಂಡೆ ಹೋಗಿದ್ವಿ. ವಾಪಸ್ ಬರುವಾಗ ಒಂದೆರಡು ಸಲ ಸೂಪರ್ ಡಕೋಟಾ ಜೀಪಲ್ಲಿ ಬಂದಿದ್ದಿದೆ ಆದ್ರೂ ಅಲ್ಲಿಂದ ಹತ್ತಿಕೊಂಡು ಬಂದ ಹಲವು ಅನುಭವಗಳು ಮರೆಯಲು ಅಸಾಧ್ಯ. ದೊಡ್ಡ ಹೆಬ್ಬೆಯ ಬಗ್ಗೆ ಕೇಳಿ,ಓದಿದ್ದೀನಿ ನೋಡಲಾಗಿಲ್ಲ. ಎಂದಾದರೂ ನೋಡಬೇಕೆಂದಿದೆ.

ಶಾಂತಿಫಾಲ್ಸ್ ನಿಮಗೆ ಕೆಮ್ಮಣ್ಣುಗುಂಡಿಗೆ ಬರುವ ದಾರಿಯಲ್ಲಿ ಸಿಗುವುದಿಲ್ಲ. ಅದು ಕೆಮ್ಮಣ್ಣುಗುಂಡಿಯ ಕಾಟೇಜುಗಳ ಬದಿಯಿಂದ ಝೆಡ್ ಪಾಯಿಂಟಿಗೆ ಹೋಗುವ ದಾರಿಯಲ್ಲಿದೆ. ಹೆಚ್ಚುಪಾಲು ಅದು ಮಳೆಗಾಲದ ಫಾಲ್ಸ್.

z ಪಾಯಿಂಟ್ ಕೂಡಾ ತುಂಬ ಸುಂದರ ಜಾಗ. ಆದರದನ್ನ ನೀವು ಬೆಳಿಗ್ಗೆ ಮುಂಚೆ ಎಳೆಬಿಸಿಲನ್ನು ಕುಡಿಯುತ್ತಾ ಆನಂದಿಸಬೇಕು. ಮತ್ತೆ ಯಾವಾಗಾದರೂ ಚಳಿಗಾಲದ ಆರಂಭದಲ್ಲಿ ಹೋಗಿ. ನೋಡಿ ಅಲೆಮಾಲೆಯಲ್ಲಿ ಬರೆಯಿರಿ.

ಗಿರಿಯಿಂದ - ಕೆಮ್ಮಣ್ಣುಗುಂಡಿಯವರೆಗಿನ ದಾರಿಯ ಬಗ್ಗೆ ಮರುಮಾತಿಲ್ಲ. ಅದನ್ನ ನೋಡಿಯೇ ಅನುಭವಿಸಬೇಕು.

ಪ್ರೀತಿಯಿಂದ
ಸಿಂಧು

prasca ಹೇಳಿದರು...

ರಾಜೇಶ್ ಸಾರ್,
ಹೆಬ್ಬೆ ಈಗ ಬಹುಶಃ ನಿಮಗೆ ನಿರಾಸೆ ಉಂಟು ಮಾಡಬಹುದು. ೨ ದಿನ ರಜೆ ಇದ್ರೆ ಸಾಕು ಬೆಂಗಳೂರಿನ ಮಾಹಿತಿತಂತ್ರಜ್ಞಾನ ಕ್ಷೇತ್ರದ ಜನ ಅಲ್ಲಿಗೆ ಲಗ್ಗೆ ಇಡುತ್ತಾರೆ(ಇವರ್ಯಾರು ಕನ್ನಡಿಗರಲ್ಲದಿರುವುದು ಗಮನಾರ್ಹ). ಅದೂ ತಮ್ಮ ಗೆಳತಿಯೊಂದಿಗೆ ಬರುವ ಅವರ ನಡವಳಿಕೆಗಳು ಅಸಹ್ಯ ಹುಟ್ಟಿಸುತ್ತವೆ.ಆದರೆ, ಈಗಂತೂ ಕೆಮ್ಮಣ್ಣುಗುಂಡಿಯ ಹಸಿರು ಕಣ್ಣಿಗೆ ರಾಚುವಂತಿರುತ್ತದೆ. ಮುತ್ತೋಡಿಯ ಮುಖಾಂತರ ಮುಳ್ಳಯನ ಗಿರಿಗೆ ಕಚ್ಛಾರಸ್ತೆಯಲ್ಲಿ ಸಾಗಿದರೆ ನಿಮಗೆ ಅತ್ಯಂತ ಸುಂದರ ಸ್ಥಳಗಳು ಸಿಗುತ್ತವೆ.

ರಾಜೇಶ್ ನಾಯ್ಕ ಹೇಳಿದರು...

ಸ್ಪಂದಿಸಿದ ಮಿತ್ರರೆಲ್ಲರಿಗೂ,

ಟಿಪ್ಪಣಿ ಬರೆದು ನನ್ನನ್ನು ಪ್ರೋತ್ಸಾಹಿಸುವ ನಿಮಗೆಲ್ಲರಿಗೂ ಧನ್ಯವಾದಗಳು. ಕೈಮರ-ಮುಳ್ಳಯ್ಯನಗಿರಿ-ಕೆಮ್ಮಣ್ಣುಗುಂಡಿ ದಾರಿ ಅದ್ಭುತವೆಂಬುವುದು ನೀವೆಲ್ಲರೂ ಒಕ್ಕೊರಲ್ಲಿ ಒಪ್ಪಿರುವಾಗ ಆ ದಾರಿಯಾಗಿ ಮತ್ತೊಮ್ಮೆ ತೆರಳುವ ಆಸೆ ಈಗ ದ್ವಿಗುಣವಾಗಿದೆ.