ಗುರುವಾರ, ಜುಲೈ 24, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೩

ಬೊಮ್ಮನಹಳ್ಳಿ ಅಣೆಕಟ್ಟು: ೨೯ ಮೀಟರ್ ಎತ್ತರ, ೧೦೨೫ ಮೀಟರ್ ಅಗಲ ಮತ್ತು ೬೩೬ ಚ.ಕಿ.ಮಿ ಜಲಾನಯನ ಪ್ರದೇಶ.

ತಟ್ಟೀಹಳ್ಳ ಅಣೆಕಟ್ಟು: ೪೫ ಮೀಟರ್ ಎತ್ತರ, ೧೩೩೭ ಮೀಟರ್ ಅಗಲ ಮತ್ತು ೧೧೦ ಚ.ಕಿ.ಮಿ ಜಲಾನಯನ ಪ್ರದೇಶ.

ಸೂಪಾದ ನಂತರ ಕಾಳಿಯ ಮೇಲೆ ದೌರ್ಜನ್ಯ ನಡೆದದ್ದು ನಾಗಝರಿ ಯೋಜನೆಯ ಸಮಯದಲ್ಲಿ. ಸೂಪಾ ಅಣೆಕಟ್ಟಿನಿಂದ ನದಿ ಪಾತ್ರದಲ್ಲಿ ೩೫ ಕಿ.ಮಿ. ನಂತರ ಬೊಮ್ಮನಹಳ್ಳಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಬೊಮ್ಮನಹಳ್ಳಿಯಿಂದ ಮುಂದೆ ಕಾಳಿಯನ್ನು ಅದರ ಉಪನದಿಗಳಾದ ತಟ್ಟೀಹಳ್ಳ ಮತ್ತು ನಾಗಝರಿಗಳು ಸೇರಿಕೊಳ್ಳುತ್ತವೆ. ಕಾಳಿನದಿ ಪಾತ್ರದ ಭೌಗೋಲಿಕ ರಚನೆ ಹೇಗಿದೆಯೆಂದರೆ ಬೊಮ್ಮನಹಳ್ಳಿಯ ಬಳಿಕ ಕೇವಲ ೧೫ ಕಿ.ಮಿ ಕ್ರಮಿಸುವಷ್ಟರಲ್ಲಿ ಕಾಳಿ ೯೬೦ ಅಡಿಗಳಷ್ಟು ಆಳಕ್ಕೆ ಹರಿಯುತ್ತಾಳೆ. ಈ ಪ್ರಾಕೃತಿಕ ಇಳಿಜಾರಿನ ಲಾಭ ಪಡೆದುಕೊಳ್ಳುವ ಸಲುವಾಗಿ ನಾಗಝರಿ ಯೋಜನೆ ಅಸ್ತಿತ್ವಕ್ಕೆ ಬಂತು. ಈ ಯೋಜನೆಯಡಿ,
೧. ನಾಗಝರಿ ನದಿ ಕಾಳಿಯನ್ನು ಸೇರುವಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವನ್ನು,
೨. ಬೊಮ್ಮನಹಳ್ಳಿಯಲ್ಲಿ ಕಾಳಿಗೆ ಅಣೆಕಟ್ಟನ್ನು,
೩. ತತ್ವಾಲ ಹಳ್ಳಿಯ ಸಮೀಪ ತಟ್ಟೀಹಳ್ಳಕ್ಕೆ ಅಣೆಕಟ್ಟನ್ನು,
೪. ಬೊಮ್ಮನಹಳ್ಳಿ ಅಣೆಕಟ್ಟಿನಿಂದ ನಾಗಝರಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಸುಮಾರು ೯ಕಿಮಿ ಉದ್ದವಿರುವ ಭೂಗತ ಸುರಂಗವನ್ನು ಮತ್ತು
೫. ತಟ್ಟೀಹಳ್ಳ ಅಣೆಕಟ್ಟಿನಿಂದ ಬೊಮ್ಮನಹಳ್ಳಿ ಅಣೆಕಟ್ಟಿಗೆ ನೀರನ್ನು ಸರಬರಾಜು ಮಾಡಲು ಕಾಲುವೆ; ಇವಿಷ್ಟರ ನಿರ್ಮಾಣವನ್ನು ಕೈಗೊಳ್ಳಲಾಯಿತು.

ಅಣೆಕಟ್ಟು ನಿರ್ಮಾಣದ ಮೊದಲು ಬೊಮ್ಮನಹಳ್ಳಿಯಿಂದ ನಾಗಝರಿಯವರೆಗಿನ (ನಾಗಝರಿ ಹಳ್ಳವು ಕಾಳಿಯನ್ನು ಸೇರುವ ಸ್ಥಳಕ್ಕೆ ನಾಗಝರಿ ಎಂದು ಹೆಸರು) ೧೫ ಕಿ.ಮಿ. ದೂರವನ್ನು ಕಾಳಿಯು ಭೂಮಿಯ ಮೇಲೆ ಕ್ರಮಿಸುತ್ತಿದ್ದಳು ಆದರೆ ಈಗ ಭೂಮಿಯ ಕೆಳಗಿನಿಂದ ಕ್ರಮಿಸುತ್ತಾಳೆ! ಈಗ ಬೊಮ್ಮನಹಳ್ಳಿ ಅಣೆಕಟ್ಟಿನಿಂದ ಭೂಗತ ಸುರಂಗದ ಮೂಲಕ ನಾಗಝರಿ ವಿದ್ಯುತ್ ಘಟಕಕ್ಕೆ ಕಾಳಿಯ ನೀರನ್ನು ರಭಸವಾಗಿ ಹರಿಸಲಾಗುತ್ತಿರುವುದರಿಂದ ಸುಮಾರು ೧೫ ಕಿ.ಮಿ. ದೂರದವರೆಗೆ ಕಾಳಿ ನದಿಯು ಭೂಮಿಯ ಮೇಲ್ಮೈಯಿಂದ ಮಾಯ! ಇಷ್ಟೇ ಅಲ್ಲದೆ ತನ್ನ ಪಾಡಿಗೆ ತಾನು ಹರಿದುಕೊಂಡಿದ್ದ ತಟ್ಟೀಹಳ್ಳಕ್ಕೂ ಅಣೆಕಟ್ಟನ್ನು ನಿರ್ಮಿಸಿ, ನೀರನ್ನು ಬೊಮ್ಮನಹಳ್ಳಿ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಅಣೆಕಟ್ಟಿನ ಬಳಿಕ ಕಾಳಿಯನ್ನು ಸೇರುವವರೆಗಿನ ಏಳೆಂಟು ಕಿ.ಮಿ ದೂರದವರೆಗೆ ತಟ್ಟೀಹಳ್ಳವೂ ಒಣ ಒಣ.

ನಾಗಝರಿ ಯೋಜನೆಯಿಂದ ಕಾಳಿ ಕೊಳ್ಳದಲ್ಲಿನ ಅಪಾರ ಕಾಡುಭೂಮಿ ೨ ಅಣೆಕಟ್ಟುಗಳ ತಳ ಸೇರಿತು. ಇಲ್ಲಿ ಈಗ ಎತ್ತ ಕಡೆ ಹೋದರೂ ಹಿನ್ನೀರು ಸಿಗುವಂತಾಗಿದೆ ಎಂದರೆ ಮುಳುಗಡೆಯಾಗಿರುವ ಪ್ರದೇಶಗಳ ಅಗಾಧತೆಯನ್ನು ಅಂದಾಜಿಸಬಹುದು. ಕಲಘಟಗಿಯಿಂದ ಕಾಡಿನಲ್ಲಿ ಚಾರಣ ಮಾಡಿದರೆ ಧುತ್ತೆಂದು ಎದುರಾಗುತ್ತದೆ ತಟ್ಟೀಹಳ್ಳ ಅಣೆಕಟ್ಟಿನ ಹಿನ್ನೀರು. ಇತ್ತ ಕಡೆ ಯಲ್ಲಾಪರದ ಕಡೆಯಿಂದ ಸ್ವಲ್ಪ ದೂರ ಕ್ರಮಿಸಿದರೆ ಒಂದು ಕಡೆ ಬೊಮ್ಮನಹಳ್ಳಿ ಅಣೆಕಟ್ಟಿನ ಹಿನ್ನೀರಾದರೆ ಮಗದೊಂದು ಕಡೆ ತಟ್ಟೀಹಳ್ಳದ ಹಿನ್ನೀರು. ಅತ್ತ ಹಳಿಯಾಳದಿಂದ ಪ್ರಯಾಣಿಸಿದರೆ ಅಲ್ಲೂ ಹಿನ್ನೀರು. ಈ ಅಣೆಕಟ್ಟುಗಳು ಕಾಳಿ ನದಿಯ ಪಾತ್ರವನ್ನು ಅಗಾಧ ಮಟ್ಟಕ್ಕೆ ಹಿಗ್ಗಿಸಿ, ಇದೊಂದು ಭಲೇ ದೊಡ್ಡ ನದಿ ಎಂಬ ಭ್ರಮೆಯನ್ನು ಹುಟ್ಟುಹಾಕಿವೆ.

ಬೊಮ್ಮನಹಳ್ಳಿಯಿಂದ ೯ ಕಿ.ಮಿ. ದೂರದವರೆಗೆ, ಅಂಬಿಕಾನಗರದ ಸಮೀಪದ ’ಸೈಕ್ಸ್ ಪಾಯಿಂಟ್’ನ ಕೆಳಗೆ ಕಣಿವೆಯಲ್ಲಿರುವ ನಾಗಝರಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೊರೆಯಲಾಗಿರುವ ಸುರಂಗವನ್ನು ಎಂಜಿನಿಯರಿಂಗ್ ಅದ್ಭುತವೆಂದು ಕೊಂಡಾಡಲಾಗುತ್ತಿದೆಯಾದರೂ, ಆಗಿರುವ ಅರಣ್ಯದ ಸರ್ವನಾಶದ ಬಗ್ಗೆ ಮಾತಿಲ್ಲ. ಆಗ ಕಾಡಿನೊಳಗೆ ಅದೇನು ಆಗುತ್ತಿದೆ ಎಂಬ ಮಾಹಿತಿ ನಾಡಿಗೆ ಬರುತ್ತಿರಲಿಲ್ಲ. ಈಗಲೂ, ಆಗ ಆಗಿರುವ ಕಾಡಿನ ನಾಶದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.

ಬೊಮ್ಮನಹಳ್ಳಿ ಮತ್ತು ತಟ್ಟೀಹಳ್ಳ ಅಣೆಕಟ್ಟುಗಳ ಹಿನ್ನೀರುಗಳಲ್ಲಿ ಮುಳುಗಿದ ಕಾಡುಗಳು ಮತ್ತು ಹಳ್ಳಿಗಳು, ನೆಲೆ ಕಳಕೊಂಡ ಬಡಪಾಯಿ ಜನರು, ೯ಕಿ.ಮಿ. ಉದ್ದದ ಭೂಗತ ಸುರಂಗ ಕೊರೆಯಬೇಕಾದರೆ ಆದ ಅರಣ್ಯದ ಸರ್ವನಾಶ, ಸ್ಥಳಾಂತರಗೊಂಡ ಪ್ರಾಣಿ/ಪಕ್ಷಿ ಸಂಕುಲ ಇವಕ್ಕೆಲ್ಲಾ ಯಾರು ಹೊಣೆ? ಕೇವಲ ೫೦ ವರ್ಷಗಳ ಕಾಲ ವರ್ಷಕ್ಕೆ ೬೦೦-೮೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಲುವಾಗಿ ನಾವು ಏನನ್ನೆಲ್ಲಾ ಮತ್ತು ಎಷ್ಟನ್ನೆಲ್ಲಾ ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು!

ಕಾಳಿ ನದಿ ಮೊದಲ ಹಂತದ ಯೋಜನೆಯಡಿ ನಾಲ್ಕು (ಕಾನೇರಿ, ಸೂಪಾ, ಬೊಮ್ಮನಹಳ್ಳಿ ಹಾಗೂ ತಟ್ಟೀಹಳ್ಳ) ಅಣೆಕಟ್ಟುಗಳನ್ನು ಮತ್ತು ಸೂಪಾದಲ್ಲಿ ೨ ಹಾಗೂ ನಾಗಝರಿಯಲ್ಲಿ ೬ ವಿದ್ಯುತ್ ಘಟಕಗಳನ್ನು ನಿರ್ಮಿಸಿ ೧೯೮೪ರೊಳಗೆ ಹಂತ ಹಂತವಾಗಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಅದಾಗಲೇ ಸರಕಾರ ಕಾಳಿ ನದಿ ಎರಡನೇ ಹಂತದ ಯೋಜನೆಯಡಿ ಕೊಡಸಳ್ಳಿ ಮತ್ತು ಕದ್ರಾಗಳಲ್ಲಿ ಅಣೆಕಟ್ಟು ಮತ್ತು ತಲಾ ೩ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಯೋಜನೆಯ ನೀಲಿ ನಕಾಶೆ ತಯಾರಿ ಮಾಡಿಯಾಗಿತ್ತು.

ಮುಂದುವರಿಯುತ್ತದೆ...

ಅಂದ ಹಾಗೆ ಇದು ನನ್ನ ೧೦೦ನೇ ಪೋಸ್ಟ್.

9 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ರಾಜೇಶ್ ೧೦೦ನೇ ಪೋಸ್ಟ್ ಗಾಗಿ ಧನ್ಯವಾದಗಳು. ಎಲ್ಲಿ ನಿಮ್ಮ ೧೦೦ನೇ ಪೋಸ್ಟ್ ನ ಅಚರಣೆ. ನಮ್ಮನ್ನು ಕರೆಯಿರಿ.

ಕಾಳಿ ಕೊಳ್ಳದ ಕಥೆ/ವ್ಯಥೆ ಕಾಳಿ ನದಿ ಸಮುದ್ರ ಸೇರುವ ತನಕ ಇರಬಹುದು ಎಂದು ಅನಿಸುತೆ.

ಈ ವಾರದ ತರಂಗದ (ಜುಲೈ -೩೧) ಪುಟ ಸಂಖ್ಯೆ ೪೩ರಲ್ಲಿ ದಿನೇಶ್ ಹೊಳ್ಳರು "ಹರಿಯುವ ನದಿಗಳು" ಎಂಬ ಕವನದಲ್ಲಿ
ಈ ನದಿಗಳ ,ಯೋಜನೆಗಳ,ಅಣೆಕಟ್ಟುಗಳ ಬಗೆ ನಮ್ಮ ಮನಸ್ಸಿನ ಅಬಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ೧೦೦ನೇ ಪೋಸ್ಟ್ ಗಾಗಿ ಧನ್ಯವಾದಗಳು.

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,

ತಲೆ ತಿರುಗುತ್ತಿದೆ. ದೂರದೃಷ್ಟಿ ಇಲ್ಲದ ನಮ್ಮ ತಂತ್ರಜ್ಞರ ಪ್ರಗತಿ ನಮ್ಮನ್ನ ಎಲ್ಲಿ ಕರೆದುಕೊಂಡು ಹೋಗುತ್ತದೋ ಗೊತ್ತಿಲ್ಲ. ಇವರ ಗಾಡಿಗೆ ತಕ್ಕ ಹುಚ್ಚು ಕುದುರೆಗಳಂತಾ ರಾಜಕಾರಣಿಗಳು ಬೇರೆ.
ನಾವು ಅವರ ಗಾಡಿಗೆ ಪುಡಿಯಾಗುವ ದಾರಿಯಾಗಷ್ಟೇ ಉಳ್ದಿದೀವಿ.
ನೀವು ಸಮಾನಮನಸ್ಕರು ಮತ್ತು ಪ್ರಯೋಗಶೀಲರು ಏನಾದರೂ ಯೋಚನೆ ಸೂಚಿಸಿ. ಎಲ್ಲರೂ ಸೇರಿ ಪುಟ್ಟ ಪುಟ್ಟ ಹೆಜ್ಜೆ ಹಾಕಲಾಗುತ್ತಾ ನೋಡೋಣ.

ನಿಮ್ಮ ನೂರನೇ ಪೋಸ್ಟಿಗೆ ಅಭಿನಂದನೆಗಳು.
ಸುಧೀರ್, ತರಂಗದ ಕವಿತೆಯ ಬಗ್ಗೆ ಗಮನ ಸೆಳೆದದ್ದಕ್ಕಾಗಿ ಧನ್ಯವಾದಗಳು.

ಪ್ರೀತಿಯಿಂದ
ಸಿಂಧು

Shree ಹೇಳಿದರು...

ಭೂಗತ ಸುರಂಗದ ಮೂಲಕ ನಾಗಝರಿ ವಿದ್ಯುತ್ ಘಟಕಕ್ಕೆ ಕಾಳಿಯ ನೀರನ್ನು ರಭಸವಾಗಿ ಹರಿಸಲಾಗುತ್ತಿರುವುದರಿಂದ ಸುಮಾರು ೧೫ ಕಿ.ಮಿ. ದೂರದವರೆಗೆ ಕಾಳಿ ನದಿಯು ಭೂಮಿಯ ಮೇಲ್ಮೈಯಿಂದ ಮಾಯ!-

ಈ ರೀತಿ ಭೂಗತ ಸುರಂಗ ನಿರ್ಮಿಸುವುದಕ್ಕೆ ನೀರಾವರಿ ವಿಭಾಗದ ತಂತ್ರಜ್ಞರು ನೀಡುವ ಸಮರ್ಥನೆಯೆಂದರೆ, ಅದರಿಂದ ಅಷ್ಟು ಭಾಗದಲ್ಲಿ ನಾಶವಾಗಬಹುದಾದ ಅರಣ್ಯಪ್ರದೇಶವನ್ನು ಉಳಿಸಿದಂತಾಗುತ್ತದೆ... ಬಹುಷ ಬೇಡ್ತಿ ಯೋಜನೆಯಲ್ಲೂ ಹೀಗೇ ಮಾಡುವ ಯೋಜನೆ ಇಟ್ಟುಕೊಂಡಿದ್ದಾರೆ... ಇದು ಒಂದು ರೀತಿಯಿಂದ ಸರಿಯೆನಿಸುತ್ತದೆ, ಆದರೆ ಹಾನಿಯೂ ಇದೆ. ನಾನು ಆ ಜಾಗಕ್ಕೆ ಹೋಗಿ ನೋಡಿಲ್ಲದ ಕಾರಣ ಏನೂ conclusionಗೆ ಬರಲಾಗುತ್ತಿಲ್ಲ...

ಏನೇ ಇರಲಿ, ನಿಮ್ಮ ಈ ಸರಣಿ ಚೆನ್ನಾಗಿದೆ ರಾಜೇಶ್.

ಅನಾಮಧೇಯ ಹೇಳಿದರು...

ರಾಜೇಶ್,

ಉ.ಕ. ಮುಳುಗಡೆ ಜಿಲ್ಲೆಯಾಗಲು ಜನರ ಮನೋಭಾವವೂ ಕಾರಣ ಎನ್ನುವುದು ಕಹಿಯಾದರೂ ಸತ್ಯವಾದ ಮಾತು. ಇದಲ್ಲದೆ, ಸುಮಾರಷ್ಟು ಕಿರು ಯೋಜನೆಗಳಿಗೆ ಸರ್ವೆಯೊ ಸುಡುಗಾಡೊ ಮಾಡಿ ಈ ಬಗ್ಗೆ ಒಂದಿಷ್ಟು ಪ್ರಗತಿಯಾಗಿದೆ ಎಂದು ಕೇಳಿದೆ. ಈ ಪೈಕಿ NWDA ವೆಬ್ ಸೈಟಿನಲ್ಲಿ ಬೇಡ್ತಿ-ವರದಾ ಜೋಡಣೆಯ ಬಗ್ಗೆಯೂ ಉಲ್ಲೇಖ ಸಿಕ್ಕಿತು. ಈ ಯೋಜನೆಯ ಸಾಧ್ಯಾಸಾಧ್ಯತೆ ವರದಿ (Feasibility report) ಇನ್ನೂ ಬಂದಿಲ್ಲವೇನೊ. ಆದರೆ ಇಂಥವು ಅದಿನ್ನೆಷ್ಟು ಕಾದಿವೆಯೊ ಎಂಬ ಆತಂಕ ಆರಂಭವಾಗಿದೆ ಮಾರಾಯ.

ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.

-ಶ್ರೀಪ್ರಿಯೆ

ಹಳ್ಳಿಕನ್ನಡ ಹೇಳಿದರು...

ಕರಾವಳಿ ಪ್ರದೇಶದ ಮಲೆನಾಡಿಗರಾದ ನಿಮ್ಮಗಳದ್ದು ಒಂದು ಸಮಸ್ಯೆಯಾದರೆ, ಬಯಲು ಸೀಮೆಯ ನಮ್ಮ ಸಮಸ್ಯೆಗಳೇ ಬೇರೆ. ಕುಡಿಯಲು ಹನಿ ಹನಿ ನೀರಿಗಾಗಿ ಪರಿತಪಿಸುವ ಚಿತ್ರದುರ್ಗ ಜಿಲ್ಲೆ, ತುಮಕೂರು ಮತ್ತು ದಾವಣಗೆರೆಯ ಕೆಲವು ತಾಲೂಕುಗಳ ಜನರ ಬವಣೆ ಹೇಳತೀರದು. ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರಿನ ಅಪಾರ ಸಸ್ಯರಾಶಿ ನಾಶವಾಗುತ್ತದೆ ಎಂಬುದು ಸತ್ಯವಾದರೂ, ಸದಾ ಬರದಲ್ಲಿ ಬೇಯುವ ನಮ್ಮಗಳಿಗೆ ಒಂದು ಶಾಶ್ವತ ಪರಿಹಾರ ಒದಗಿಸುವ ಯೋಜನೆ ಇದೊಂದೇ.
ವಿಪರ್ಯಾಸ ವೆಂದರೆ 'ಪ್ರಗತಿ' ಮತ್ತು 'ನಾಶ' ಎರಡೂ ಒಂದೇ ನಾಣ್ಯದ ಎರಡು ಮುಖಗಳು.
- ಮಂಜುನಾಥ ಸ್ವಾಮಿ

VENU VINOD ಹೇಳಿದರು...

ಬ್ಲಾಗ್ ಆರಂಭಿಸಿದ ಬಳಿಕ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದೀರಿ, ಎಷ್ಟೋ ಮಂದಿಗೆ ಚಾರಣದ ಹುಚ್ಚು ಹಿಡಿಸಿದ್ದೀರಿ, ಪ್ರಕೃತಿ ಮೇಲಾಗುವ ಶೋಷಣೆಗೆ ನಿಮ್ಮ ಪುಟಗಳನ್ನು ಕನ್ನಡಿಯಾಗಿಸಿದ್ದೀರಿ...ಶತಕದ ಸಾಧನೆಗೆ ಅಭಿನಂದನೆಗಳು

Srik ಹೇಳಿದರು...

Great to see you scoring an unbeaten century in blogworld.

Your posts have been informative, inspiring, motivating and eye-openers!

Way to go Rajesh. It's been a nice journey with you here!

Aravind GJ ಹೇಳಿದರು...

೧೦೦ನೇ ಪೋಸ್ಟಿಗೆ ಅಭಿನಂದನೆಗಳು.

ದೊಡ್ಡ ಯೋಜನೆಗಳಿಗೆ ಹೆಚ್ಚಿನ ವಿರೋದ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ "ಕಿರು ವಿದ್ಯುತ್ ಯೋಜನೆ" ಎಂಬ ಹೊಸ ಬಗೆಯ ದರೋಡೆ ಶುರು ಮಾಡಿದೆ. ಬಹುತೇಕ ಎಲ್ಲಾ ನದಿ, ತೊರೆಗಳಿಗೂ ಡ್ಯಾಮ್ ಕಟ್ಟುವ ಹುನ್ನಾರ ನಡೆಯುತ್ತಿದೆ. ವಿವರಗಳು ಇಲ್ಲಿವೆ: http://kredl.kar.nic.in/Small%20Hydro%20Applications.xls

ರಾಜೇಶ್ ನಾಯ್ಕ ಹೇಳಿದರು...

ಸುಧೀರ್,
ಥ್ಯಾಂಕ್ಸ್. ಹೊಳ್ಳರ ಕವಿತೆಯ ಬಗ್ಗೆ ಗಮನ ಸೆಳೆದದ್ದಾಕ್ಕಾಗಿಯೂ ಮತ್ತೊಮ್ಮೆ ಥ್ಯಾಂಕ್ಸ್.

ಸಿಂಧು,
ಕಾಳಿಯ ಹಣೆಬರಹ ಅಷ್ಟೆ. ಏನೂ ಮಾಡಲಾಗದು. ಜನರ ಸಂಘಟಿತ ಹೋರಾಟ ನಡೆಯುತ್ತಿದೆ. ಹಾಗಾಗಿ ಕಾಳಿಸ ದ್ಯಕ್ಕೆ ಸುರಕ್ಷಿತ. ಆದರೆ ನಿರೀಕ್ಷೆಗೂ ಮೀರಿ ಹಾನಿ ನಡೆದುಹೋಗಿದೆ.

ಶ್ರೀ,
ಹ್ಮ್.. ಇದು ಸ್ವಲ್ಪ ಯೋಚಿಸಬೇಕಾದ ವಿಷಯ. ಭೂಗತ ಸುರಂಗ ಎಷ್ಟರ ಮಟ್ಟಿಗೆ ಅರಣ್ಯವನ್ನು ಉಳಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಷ್ಟೆ. ಆದರೆ ಎಲ್ಲಾ ಕಡೆ ಭೌಗೋಲಿಕ ರಚನೆ ಸುರಂಗಗಳನ್ನು ನಿರ್ಮಿಸಲು ಆಸ್ಪದ ನೀಡುವುದಿಲ್ಲ. ನಿಮ್ಮ ಟಿಪ್ಪಣಿ ಆ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳುವೆಡೆ ನನ್ನನ್ನು ಪ್ರೇರೆಪಿಸಿದೆ ಎಂದು ನಾನು ಹೇಳಲೇಬೇಕು. ಯೋಜನೆಗಳಿಗೆ ಪರಿಸರ ಪ್ರೇಮಿಗಳಿಂದ ಉಂಟಾಗುವ ವಿರೋಧವನ್ನು ಕಡಿಮೆಗೊಳಿಸಲು ನೀರಾವರಿ ತಂತ್ರಜ್ಞರು ಇಂತಹ ಹೇಳಿಕೆಗಳನ್ನು ನೀಡುವ ಸಾಧ್ಯತೆಗಳೂ ಇವೆ. ಈ ವಿಷಯವಾಗಿ ನಿಮ್ಮಂತೆ ನನಗೂ ಒಂದು ’ಕನ್-ಕ್ಲೂಷನ್’ಗೆ ಬರಲಾಗುತ್ತಿಲ್ಲ.

ಅಲಕಾ,
ಉತ್ತರ ಕನ್ನಡದ ಎಲ್ಲಾ ನದಿ, ಹಳ್ಳ, ತೊರೆಗಳ ಮೇಲೆ ವಿದ್ಯುತ್ ಯೋಜನೆಯ ಕತ್ತಿ ತೂಗಾಡುತ್ತಿದೆ. ಅರವಿಂದ್ ಅವರು ತಮ್ಮ ಟಿಪ್ಪಣಿಯಲ್ಲಿ ನೀಡಿರುವ ಲಿಂಕ್ ನೋಡಿಯೇ ಬೆಚ್ಚಿಬಿದ್ದೆ. ನೀವೂ ಬೆಚ್ಚಿಬೀಳುತ್ತೀರಾ. ಬೇಡ್ತಿ - ವರದಾ ನದಿ ಜೋಡಣೆ ಯೋಜನೆ ಇನ್ನೊಂದು ಮಹಾಭಾರತ. ಪ್ರಬಲ ವಿರೋಧವಿರುವುದರಿಂದ ಸದ್ಯಕ್ಕೆ ಏನೂ ಸದ್ದಿಲ್ಲ. ನಿಮ್ಮ ಕೊನೆಯ ವಾಕ್ಯ ನನ್ನದೂ ಹೌದು.

ಮಂಜುನಾಥ್,
ಪ್ರಗತಿ ಮತ್ತು ನಾಶ ಒಂದೇ ನಾಣ್ಯದ ೨ ಮುಖಗಳಾಗಿರುವುದಕ್ಕೆ ಸರಕಾರಗಳು ಮತ್ತು ಜನರೇ ಕಾರಣ. ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಕೆರೆಗಳಿದ್ದವು ಮತ್ತು ನದಿಗಳೂ ಇವೆ. ಆದರೆ ಕೆರೆಗಳೆಲ್ಲಾ ಎಲ್ಲಿ ಹೋದವು? ನದಿಗಳೆಲ್ಲಾ ಬತ್ತುತ್ತಿವೆ ಯಾಕೆ? ಕೆರೆಗಳನ್ನು ಜನರೇ ಕಟ್ಟಡ ಬಡಾವಣೆಗಳನ್ನು ಕಟ್ಟಿಸಿಕೊಂಡು ಮಾಯ ಮಾಡಿದರೆ, ಅವ್ಯಾಹತ ಬೋರ್-ವೆಲ್ ಕೊರೆತದಿಂದ ಅಂತರ್ಜಲ ಕ್ಷೀಣಿಸಿ ಮತ್ತು ಮರಳು ಮಾಫಿಯಾದಿಂದ ನದಿಗಳಲ್ಲಿ ನೀರನ್ನು ಇಂಗಿಸಿ ಇಡುವ ಮರಳು ಕಣ್ಮರೆಯಾಗಿ ನದಿಗಳು ಬತ್ತುತ್ತಿವೆ. ಇದ್ದ ಕೆರೆಗಳ ಹೂಳು ತೆಗೆದು ಸ್ವಚ್ಛ ಮಾಡಿ, ಬೀಳುವ ಮಳೆಯ ನೀರನ್ನು ಸ್ವಲ್ಪವೂ ಪೋಲು ಆಗದಂತೆ ಇಂಗುಗುಂಡಿ ಮತ್ತು ಇತರ ಮಳೆನೀರು ಸಂಗ್ರಹ ವಿಧಾನಗಳಿಂದ ಸಂಗ್ರಹಿಸಿಟ್ಟರೆ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಇದ್ದ ಬರವೆಲ್ಲಾ ಓಡಿಹೋಗಬೇಕು. ಆದರೆ ಇದಕ್ಕೆ ದೊಡ್ಡ ಮಟ್ಟದಲ್ಲಿ ಹಣ ವೆಚ್ಚವಾಗುವುದಿಲ್ಲವಲ್ಲ ರಾಜಕಾರಣಿಗಳಿಗೆ ನುಂಗಲು. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಸರಕಾರದ ಸಪೋರ್ಟ್. ಇನ್ನಷ್ಟು ಕಾಡು ಮುಳುಗುವಷ್ಟು ಅಪಾರ ಪ್ರಮಾಣದಲ್ಲಿ ಕಾಡು ಕರ್ನಾಟಕದಲ್ಲಿಲ್ಲ.

ವೇಣು,
ಥ್ಯಾಂಕ್ಸ್. ಎಲ್ಲಾ ನಿಮ್ಮ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ. ಈ ಬ್ಲಾಗಿಗೆ ಕಾರಣಕರ್ತರು ನೀವೇ ಅಲ್ಲವೆ.

ಶ್ರೀಕಾಂತ್,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ, ಪ್ರೀತಿ ಹೀಗೆ ಮುಂದುವರಿಯಲಿ ಎಂಬ ಆಶಯ.

ಅರವಿಂದ್,
ಎಷ್ಟೊಂದು ಕರಾರುವಾಕ್ಕಾದ ಮಾತು. ನೀವು ನೀಡಿದ ಕೊಂಡಿಯಲ್ಲಿದ್ದ ’ಲಿಸ್ಟ್’ ನೋಡಿ ದಂಗಾದೆ. ಆಗುವ ನಾಶವನ್ನು ಊಹಿಸಿಯೇ ಕಂಗಾಲಾಗಿದ್ದೇನೆ.