ಭಾನುವಾರ, ಜುಲೈ 13, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೧

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಬೇರೆ ಜಿಲ್ಲೆಗೆ ಕಾಲಿಡದೆ, ಅದೇ ಜಿಲ್ಲೆಯಲ್ಲಿ ಸಾಗರ ಸೇರುವ ಅಪೂರ್ವ ಮತ್ತು ವಿಶಿಷ್ಟ ನದಿ ಕಾಳಿ. ಜೋಯಿಡಾ ತಾಲೂಕಿನ ಡಿಗ್ಗಿ ಎಂಬ ಹಳ್ಳಿಯ ಸಮೀಪ ಕುಶಾವಳಿ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು ೨೮೫೦ ಅಡಿಗಳಷ್ಟು ಎತ್ತರದಲ್ಲಿ ಜನ್ಮ ತಾಳುವ ಕಾಳಿ ನಂತರ ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳ ಮೂಲಕ ಹರಿದು ಕಾರವಾರ ತಾಲೂಕಿನಲ್ಲಿ ತನ್ನ ಪ್ರಯಾಣವನ್ನು ಪರ್ಯಾವಸನಗೊಳಿಸುವಷ್ಟರಲ್ಲಿ ೧೮೦ ಕಿ.ಮಿ. ದೂರವನ್ನು ಕ್ರಮಿಸಿರುತ್ತಾಳೆ. ಡಿಗ್ಗಿ ಮತ್ತು ಕಾರವಾರದ ನಡುವೆ ವೈಮಾನಿಕ ಅಂತರ ೫೦ ಕಿ.ಮಿ ನಷ್ಟು ಮಾತ್ರವಿದ್ದರೂ, ಸುತ್ತಿ ಬಳಸಿ ಹರಿಯುವ ಕಾಳಿ ದಾರಿಯುದ್ದಕ್ಕೂ ಅದ್ಭುತ ಕಣಿವೆ ಕಾಡುಗಳ ಮೂಲಕ ಸಾಗುತ್ತಾ, ಅಲ್ಲಿನ ಅಪಾರ ಸಸ್ಯ ಮತ್ತು ಜೀವಸಂಕುಲಕ್ಕೆ ಆಧಾರವಾಗುತ್ತಾ, ಜೋಯಿಡಾ ಹಾಗೂ ಕಾರವಾರ ತಾಲೂಕುಗಳ ಮತ್ತು ದಾಂಡೇಲಿ (ಕುಳಗಿ) ಅಭಯಾರಣ್ಯ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನಗಳ ಜೀವ ನದಿಯಾಗಿ ಹರಿಯುತ್ತಾಳೆ.

ಕಾಳಿ ನದಿಯ ನೀರು ಕಪ್ಪಗಿದ್ದು ಭೀಕರವಾಗಿ ಕಾಣುವುದರಿಂದ ನದಿಗೆ ’ಕಾಳಿ’ ಎಂಬ ಹೆಸರು ಎಂಬ ಮಾತು/ನಂಬಿಕೆ ಚಾಲ್ತಿಯಲ್ಲಿದೆ. ಕಾಳಿ ನದಿಯ ಹರಿವಿನುದ್ದಕ್ಕೂ ಕರಿಕಲ್ಲುಗಳು ಇರುವುದರಿಂದ ಕಾಳಿ ಕರ್ರಗೆ ಕಾಣುತ್ತಾಳೆ ಎಂಬ ಮಾತಲ್ಲಿ ಸ್ವಲ್ಪ ಹುರುಳಿದ್ದರೂ ಇದು ಒಂದೇ ಕಾರಣವಲ್ಲ. ದಾಂಡೇಲಿಯ ಆಸುಪಾಸಿನಲ್ಲಿರುವ ಅಸಂಖ್ಯಾತ ದೊಡ್ಡ ಹಾಗು ಸಣ್ಣ ಕೈಗಾರಿಕಾ ಘಟಕಗಳು ಕಳೆದ ಹಲವಾರು ವರ್ಷಗಳಿಂದ ತ್ಯಾಜ್ಯಗಳನ್ನು ಶುದ್ಧೀಕರಿಸದೆ ನೇರವಾಗಿ ಕಾಳಿಯ ಒಡಲಿಗೆ ಬಿಡುತ್ತಿರುವುದೂ ಕಾಳಿಯ ನೀರು ಕಪ್ಪಗಾಗಿ ಕಾಣಲು ಪ್ರಮುಖ ಕಾರಣ.

ಕೇವಲ ೧೮೦ ಕಿಮಿ ದೂರಕ್ಕೆ ಹರಿಯುವ ನದಿಯಾದರೂ ತನ್ನ ಪಾತ್ರದುದ್ದಕ್ಕೂ ಕಾಳಿ ಅಧಾರವಾಗುವ ಪ್ರಾಣಿ/ಸಸ್ಯ ಸಂಕುಲಗಳೆಡೆಗೆ ಗಮನ ಹರಿಸಿದರೆ ಅಚ್ಚರಿಯಾಗದೇ ಇರದು. ವನ್ಯ ಜೀವನ ಕಾಯ್ದೆಯಡಿ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲ್ಪಟ್ಟಿರುವ ೩೪೫ ಚ.ಕಿಮಿ ಗಳಷ್ಟಿರುವ ಅಣಶಿ ರಾಷ್ಟ್ರೀಯ ಉದ್ಯಾನ ಮತ್ತು ೪೭೫.೧೬ ಚ.ಕಿಮಿ ಗಳಷ್ಟಿರುವ ದಾಂಡೇಲಿ ಅಭಯಾರಣ್ಯಗಳಲ್ಲಿ ನೀರಿನ ಮೂಲವೇ ಕಾಳಿ ಮತ್ತು ಕಾಳಿಯ ಉಪನದಿಗಳು. ಕಾಳಿ ಜಲಾನಯನ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಜೋಯಿಡಾ, ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳ ಪ್ರದೇಶಗಳಲ್ಲಿ ಮಳೆಯೂ ಹೆಚ್ಚಿನ ಪ್ರಮಾಣದಲ್ಲಿ ಬೀಳುವುದರಿಂದ ರಕ್ಷಿತಾರಣ್ಯಕ್ಕೆ ನೀರಿನ ಅಭಾವದ ಸಮಸ್ಯೆ ಕಡಿಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯ ಜೀವಿಗಳು ಸ್ವೇಚ್ಛೆಯಿಂದ ಓಡಾಡಿಕೊಂಡು ಇರುವುದಾದರೆ ಅದು ಈ ೨ ರಕ್ಷಿತಾರಣ್ಯಗಳಲ್ಲಿ. ಆದರೂ ಕಳ್ಳ ಬೇಟೆಗಾರರ ಹಾವಳಿ ಇಲ್ಲಿಯೂ ಇದೆ. ಈಗಿರುವ ಡಿ.ಎಫ್.ಓ ನಿಯತ್ತಿನವರಾಗಿರುವುದರಿಂದ ಕಾಡಿನ ಮತ್ತು ಪ್ರಾಣಿಗಳ ಬೇಟೆ ಹತೋಟಿಯಲ್ಲಿದೆ.

ಡಿಗ್ಗಿಯಿಂದ ಕಾರವಾರದವರೆಗೆ ಕಾಳಿ ಕೊಳ್ಳದ ಪ್ರದೇಶದಲ್ಲಿ ವಾಸವಾಗಿದ್ದ ಜನರು ಎಲ್ಲಾ ರೀತಿಯಲ್ಲೂ ಸಮೃದ್ಧರಾಗಿದ್ದರು ಮತ್ತು ಸ್ಥಿತಿವಂತರಾಗಿದ್ದರು. ಆದರೆ ೭೦ರ ದಶಕದಲ್ಲಿ ಸರಕಾರ ಸೂಪಾ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕಾಳಿ ಕೊಳ್ಳದ ’ನಿಧಾನ ಮರಣ’ಕ್ಕೆ ಅಡಿಪಾಯ ನಿರ್ಮಿಸಿದಂತಾಯಿತು. ಅಂದಿನ ಸರಕಾರದ ತಪ್ಪು ನಿರ್ಧಾರದಿಂದ ಕಾಳಿ ಕೊಳ್ಳ ಇನ್ನೂ ಚೇತರಿಸಿಕೊಂಡಿಲ್ಲ ಮತ್ತು ಅಂದಿನಿಂದ ಕಾಳಿ ಕೊಳ್ಳದ ಕೊಳ್ಳೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.

ಸೂಪಾದ ನಂತರ ೧೫ ವರ್ಷಗಳಲ್ಲಿ ಇನ್ನೂ ೩ ಅಣೆಕಟ್ಟುಗಳನ್ನು ಕಾಳಿ ನದಿಗೆ ನಿರ್ಮಿಸಲಾಯಿತು. ಈ ಅಣೆಕಟ್ಟುಗಳಿಗೆ ಇನ್ನೂ ಹೆಚ್ಚಿನ ನೀರನ್ನು ಉಣಿಸುವ ಇರಾದೆಯಿಂದ ಕಾಳಿಯ ೨ ಪ್ರಮುಖ ಉಪನದಿಗಳಿಗೂ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಇಷ್ಟೇ ಅಲ್ಲದೆ ಬೆಟ್ಟದ ತಪ್ಪಲಲ್ಲಿ ಕಾಳಿ ನದಿಯ ತಟದಲ್ಲಿ, ದಟ್ಟ ಕಾಡಿನ ನಡುವೆ ಇರುವ ’ಕೈಗಾ’ ಎಂಬ ಸುಂದರ(ವಾಗಿದ್ದ) ಹಳ್ಳಿಯಲ್ಲಿ ವ್ಯಾಪಕ ವಿರೋಧದ ನಡುವೆಯೂ ಅಣು ಸ್ಥಾವರವನ್ನು ನಿರ್ಮಿಸಲಾಯಿತು. ಈಗ, ’ಕಾಡಿನ ನಡುವೆ ನಿರ್ಮಿಸಲಾಗಿರುವ ಜಗತ್ತಿನ ಏಕೈಕ ಅಣುಸ್ಥಾವರ’ ಎಂಬ ಹೆಗ್ಗಳಿಕೆ(?) ಕೈಗಾ ಅಣುಸ್ಥಾವರಕ್ಕೆ!

ಕಾಳಿ ನದಿಗೆ ಅಣೆಕಟ್ಟುಗಳನ್ನು ಸೂಪಾ, ಬೊಮ್ಮನಹಳ್ಳಿ, ಕೊಡಸಳ್ಳಿ ಮತ್ತು ಕದ್ರಾಗಳಲ್ಲಿ ನಿರ್ಮಿಸಲಾಗಿದೆ. ಕಾಳಿಯ ಉಪನದಿಯಾಗಿರುವ ಕಾನೇರಿ ನದಿಗೆ ಕುಂಬಾರವಾಡದ ಸಮೀಪ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಸೂಪಾ ಜಲಾಶಯಕ್ಕೆ ಹರಿಸಲಾಗುತ್ತಿದೆ ಮತ್ತು ಇನ್ನೊಂದು ಉಪನದಿ ತಟ್ಟೀಹಳ್ಳಕ್ಕೆ ತತ್ವಾಲ ಹಳ್ಳಿಯ ಸಮೀಪ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಬೊಮ್ಮನಹಳ್ಳಿ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಕದ್ರಾ ಹಿನ್ನೀರಿನ ಎಡ ದಂಡೆಯಲ್ಲೇ ಕೈಗಾ ಅಣುಸ್ಥಾವರ ಇದೆ. ಸೂಪಾ, ನಾಗಝರಿ, ಕೊಡಸಳ್ಳಿ ಮತ್ತು ಕದ್ರಾ ಹೀಗೆ ೪ ಸ್ಥಳಗಳಲ್ಲಿ ೧೪ ವಿದ್ಯುತ್ ಉತ್ಪಾದಕ ಘಟಕಗಳಿವೆ. ಅಂದರೆ ಕಾಳಿ ನದಿಗೆ ಪ್ರತಿ ೪೦ ಕಿ.ಮಿ.ಗೆ ಒಂದು ಅಣೆಕಟ್ಟು ಮತ್ತು ೧೧ ಕಿ.ಮಿ.ಗೆ ಒಂದು ವಿದ್ಯುತ್ ಉತ್ಪಾದನಾ ಘಟಕ! ಇಷ್ಟೆಲ್ಲಾ ಆದ ಮೇಲೂ ದಾಂಡೇಲಿ ಸಮೀಪದ ’ಮಾವ್ಲಿಂಗಿ’ ಎಂಬಲ್ಲಿ ಕಾಳಿ ನದಿಗೆ ೫ನೇ ಅಣೆಕಟ್ಟನ್ನು ನಿರ್ಮಿಸುವ ತಯಾರಿ ನಡೆದಿತ್ತು. ಆದರೆ ’ಕಾಳಿ ಬಚಾವೋ ಆಂದೋಲನ’ದ ವ್ಯಾಪಕ ವಿರೋಧದ ನಡುವೆ ಸರಕಾರ ಈ ಯೋಜನೆಯನ್ನು ಸದ್ಯಕ್ಕೆ ರದ್ದುಗೊಳಿಸಿದೆ.

ಈ ೬ ಅಣೆಕಟ್ಟುಗಳಲ್ಲಿ ಒಂದೇ ಒಂದನ್ನು ನೀರಾವರಿ/ಕೃಷಿ ಸಂಬಂಧಿತ ಯೋಜನೆಗಾಗಿ ನಿರ್ಮಿಸಲಾಗಿಲ್ಲ. ಎಲ್ಲವನ್ನೂ ವಿದ್ಯುತ್ ಉತ್ಪಾದನೆಯ ಸಲುವಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟುಗಳ ನಿರ್ಮಾಣದಿಂದ ಅಗಾಧ ಪ್ರಮಾಣದಲ್ಲಿ ದಟ್ಟ ಕಾಡುಗಳು (೩೬,೦೦೦ ಎಕರೆಗಳಷ್ಟು) ಮತ್ತು ಸಮೃದ್ಧ ಹಳ್ಳಿಗಳು (೨೮,೦೦೦ ಎಕರೆಗಳಷ್ಟು) ಕಾಳಿ ಹಿನ್ನೀರಿನ ಒಡಲನ್ನು ಸೇರಿವೆ. ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಕಾಡು ಮುಳುಗಿ ನಾಶವಾಗಿರುವುದು ಸೂಪಾ ಅಣೆಕಟ್ಟಿನ ಹಿನ್ನೀರಿನಲ್ಲಿ.

6 ಕಾಮೆಂಟ್‌ಗಳು:

ಸಿಂಧು Sindhu ಹೇಳಿದರು...

ರಾಜೇಶ್,

:( ನಮ್ಮ ಗೋರಿಗೆ ನಾವೇ ತೋಡುತ್ತಿರುವ ಹಳ್ಳದ ಕತೆ.. :(
ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ.
ಕ್ರಿಯಾಶೀಲವಾಗಿ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ,ಆಸಕ್ತಿಯಿರುವವರು ಹೇಗೆ ಪಾಲ್ಗೊಳ್ಳಬಹುದು ಎಂಬ ಬಗ್ಗೆಯೂ ಮಾಹಿತಿಯಿದ್ದರೆ ಬರೆಯಿರಿ. ಈ ಕ್ಷಣವೇ ಪರಿಣಾಮ ಕಾಣಿಸದಿದ್ದರೂ ಸೂಕ್ಶ್ಮ ಮನಸ್ಕರಲ್ಲಿ,ಪ್ರಕೃತಿ ಪ್ರಿಯರಲ್ಲಿ ಆಸಕ್ತಿ ಮೂಡಿಸಬಹುದು.

ಪ್ರೀತಿಯಿಂದ
ಸಿಂಧು

Aravind GJ ಹೇಳಿದರು...

ಮನಸ್ಸು ಭಾರವಾಗುವಂತಹ ಲೇಖನ. ನಮ್ಮಂತ ಜನರಿಗೆ ಈ "ವ್ಯಥೆ" ಅರ್ಥವಾಗುತ್ತದೆ. ಆದರೆ KPCL ದುಷ್ಟರಿಗೆ, ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ತಿಳಿಹೇಳುವುದು ಹೇಗೆ? ಎಲ್ಲಾ ಮನೆಹಾಳು ಯೋಜನೆಗಳಿಗೆ ಅವರೇ ಕಾರಣರು.

ಹಳ್ಳಿಕನ್ನಡ ಹೇಳಿದರು...

'ಕಾಳಿ' ಕಥೆ-ವ್ಯಥೆ ಕೇಳಿ 98ರ ನೀನಾಸಂ ತಿರುಗಾಟಕ್ಕಾಗಿ ಅಕ್ಷರ ಕೆ.ವಿ. ಬರೆದು ನಿರ್ದೇಶಿಸಿದ 'ಸಹ್ಯಾದ್ರಿ ಕಾಂಡ' ನಾಟಕ ನೆನಪಾಯಿತು.

Srik ಹೇಳಿದರು...

Ah! Highly informational post, but shocking.

Kaiga reactors had raised questions of safety, and are in news right from when they were installed.

The nature enthusiasts must be against any other 'development'al activity in Kali range, and resort to protests all over the state.

Rajesh, Thanks for this initiative of letting us know the plight of a river in our neighbourhood. Waiting for the next post, and plans to save it from the clutches of develop'mental'ists!

rakesh holla ಹೇಳಿದರು...

Sakhat ide....
very intresting...

ರಾಜೇಶ್ ನಾಯ್ಕ ಹೇಳಿದರು...

ಸಿಂಧು,
ಆ ವಿಷಯವಾಗಿ ಈ ಲೇಖನದ ಕೊನೆಯ ಭಾಗದಲ್ಲಿ ಮಾಹಿತಿಯಿದೆ.

ಅರವಿಂದ್,
ದಾಂಡೇಲಿ-ಹಳಿಯಾಳ-ಜೋಯಿಡಾ ಪ್ರದೇಶಗಳ ನಿಷ್ಪ್ರಯೋಜಕ ರಾಜಕಾರಣಿಗಳೇ ಕಾಳಿ ಕೊಳ್ಳದಲ್ಲಾಗಿರುವ ಅರಣ್ಯ ನಾಶಕ್ಕೆ ನೇರ ಹೊಣೆಗಾರರು. ಒಬ್ಬಳು ದೆಹಲಿಯಲ್ಲಿ ಕೂತು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದರೆ, ಮತ್ತೊಬ್ಬ ಮಹಾರಾಜನಂತೆ ಮೆರೆಯುತ್ತಿದ್ದ. ಈ ಒಬ್ಬಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರೆ, ಈ ಒಬ್ಬ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾನೆ. ಅಷ್ಟಾದರೂ ಸಂತೋಷಪಡುವ ಸುದ್ದಿ.

ಮಂಜುನಾಥ,
ನೀವು ಬರೆದದ್ದು ನನಗೆ ಮಾಹಿತಿ! ಧನ್ಯವಾದ.

ಶ್ರೀಕಾಂತ್,
ಧನ್ಯವಾದಗಳು. ಸದ್ಯಕ್ಕೆ ಕಾಳಿ ಕೊಳ್ಳದಲ್ಲಿ ಯಾವುದೇ ಯೋಜನೆ ನಡೆಯುವಂತಿಲ್ಲ. ಆದರೂ ಯೋಜನೆಗಳನ್ನು ಕೈಗೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಈ ಎಲ್ಲಾ ಯೋಜನೆ ಅಕಾಂಕ್ಷಿಗಳಿಗೆ ’ಕಾಳಿ ಬಚಾವೋ ಆಂದೋಲನ’ ಬಿಸಿ ಮುಟ್ಟಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ’ಕಾಳಿ ಬಚಾವೋ ಆಂದೋಲನ’ವೇ ಕಾಳಿ ನದಿಯ ಬೆಸ್ಟ್ ಹೋಪ್.

ರಾಕೇಶ,
ಫುಲ್ ಆರ್ಟಿಕಲ್ ಓದದೇ ಕಮೆಂಟ್ ಮಾಡ್ಬೇಡಪ್ಪ! ಯಾಕಪ್ಪಾ ಕಾಟಾಚಾರಕ್ಕಾಗಿ ಕಮೆಂಟು??