ಭಾನುವಾರ, ಜುಲೈ 27, 2008

ಜಲಧಾರೆಯನ್ನು ಹುಡುಕುತ್ತಾ ....

ದಿನಾಂಕ: ಜುಲಾಯಿ ೧೭, ೨೦೦೫

ಮುಂಜಾನೆ ೬ಕ್ಕೇ ಹೊರಟ ನಾನು ಮತ್ತು ಅನಿಲ್, ಲಾಲ್ಗುಳಿ ಜಲಧಾರೆಯನ್ನು ನೋಡುವ ಇರಾದೆಯಿಂದ ಈ ಪ್ರಯಾಣವನ್ನು ಶುರುಮಾಡಿದ್ದೆವು. ಮೊದಲೆಲ್ಲಾ ಈ ದಾರಿಯಾಗಿ ಪ್ರಯಾಣಿಸುವಾಗ ಲಾಲ್ಗುಳಿಗೆ ತಿರುವು ಪಡೆಯುವಲ್ಲಿ ’ಸುಂದರ ಲಾಲ್ಗುಳಿ ಜಲಧಾರೆಗೆ ಸ್ವಾಗತ’ ಎಂದು ಹೆದ್ದಾರಿಯ ಪಕ್ಕದಲ್ಲೇ ರಾರಾಜಿಸುತ್ತಿದ್ದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಫಲಕವನ್ನೂ ಪ್ರತಿ ಸಲವೂ ತಪ್ಪದೇ ನೋಡುತ್ತಿದ್ದೆ. ಆದರೆ ಈಗ ಲಾಲ್ಗುಳಿಗೆ ತಿರುವು ಪಡೆಯುವಲ್ಲಿ ಬಂದರೆ ಆ ಫಲಕ ಅಲ್ಲಿರಲಿಲ್ಲ! ಸ್ವಲ್ಪ ಹುಡುಕಾಡಿದಾಗ ಅಲ್ಲೇ ಬದಿಯಲ್ಲಿ ರಸ್ತೆಯಿಂದ ಸ್ವಲ್ಪ ಒಳಗೆ ನುಚ್ಚುನೂರಾಗಿ ಬಿದ್ದಿದ್ದ ಫಲಕ ಕಾಣಿಸಿತು.

ಲಾಲ್ಗುಳಿಗೆ ಇನ್ನೂ ಐದಾರು ಕಿ.ಮಿ. ಇರುವಾಗ ದಾರಿಯಲ್ಲಿ ಸಿಕ್ಕ ಒಬ್ಬರಲ್ಲಿ ಜಲಧಾರೆಯ ಬಗ್ಗೆ ಮಾಹಿತಿ ಕೇಳಿದಾಗ, ’ನಾನು ಈ ಊರಿನವನಲ್ಲ..ಆದರೂ ಲಾಲ್ಗುಳಿಯಲ್ಲಿ ಫಾಲ್ಸ್ ಇರೋ ಹಂಗೆ ಕಾಣುದಿಲ್ಲ...ನಾನಂತೂ ಕಳೆದ ೧೫ ವರ್ಷಗಳಿಂದ ಇಲ್ಲಿಗೆ ಬರ್ತಾ ಇದ್ದೇನೆ, ಫಾಲ್ಸ್ ಇರೋ ಬಗ್ಗೆ ನಂಗಂತೂ ಗೊತ್ತಿಲ್ಲ’ ಎಂದಾಗ ನಾವಿಬ್ಬರು ಇನ್ನೂ ಗೊಂದಲಕ್ಕೊಳಗಾದೆವು. ಆದರೂ ಲಾಲ್ಗುಳಿಗೆ ಪ್ರಯಾಣ ಮುಂದುವರಿಸಿದೆವು. ಲಾಲ್ಗುಳಿಯಲ್ಲಿ ಮನೆಯೊಂದರ ಗೇಟಿನ ಬಳಿ ಇಬ್ಬರು ಹಳ್ಳಿಗರು ಹರಟೆ ಹೊಡೆಯುತ್ತಿದ್ದರು. ಅವರಲ್ಲಿ ವಿಚಾರಿಸಿದಾಗ, ಅವರಿಬ್ಬರು ಮತ್ತು ಅವರ ಜೊತೆಗೆ ಇದ್ದ ಹುಡುಗ ಮೆಲ್ಲನೆ ನಕ್ಕರು. ನಾವು ಎಲ್ಲಿಂದ ಬಂದೆವು ಎಂದು ತಿಳಿದುಕೊಂಡ ಬಳಿಕ, ’ಅಷ್ಟು ದೂರದಿಂದ ಬಂದ್ರಾ...ಇಲ್ಲಿ ಫಾಲ್ಸೇ ಇಲ್ಲ..’ ಎನ್ನಬೇಕೆ.

ಅಂತರ್ಜಾಲದಲ್ಲಿ ಮತ್ತು ಪ್ರಮುಖ ದಿನಪತ್ರಿಕೆಗಳಲ್ಲಿ ಲಾಲ್ಗುಳಿ ಜಲಧಾರೆಯ ಬಗ್ಗೆ ಭಾರೀ ಹೊಗಳಿಕೆಯ ಲೇಖನಗಳನ್ನು ಓದಿ ನೋಡೋಣವೆಂದು ಬಂದರೆ ಜಲಧಾರೆನೇ ಇಲ್ಲ! ಜೋರಾಗಿ ಮಳೆ ಬಂದಾಗ ಒಂದೆರಡು ತಾಸು ನೀರು ಇರಬಹುದು ಎಂದು ಆ ಹಳ್ಳಿಗರು ಊಹಿಸಿದರು. ಲಾಲ್ಗುಳಿಯಲ್ಲಿ ಈಗ ಜಲಧಾರೆಯನ್ನು ನೋಡಿದವರೇ ಇಲ್ಲವಂತೆ! ಈ ಮಾತನ್ನು ನನಗಂತೂ ನಂಬಲಿಕ್ಕೆ ಆಗಲಿಲ್ಲ. ಅವರೊಂದಿಗೆ ಒಂದಷ್ಟು ಹೊತ್ತು ಮಾತನಾಡಿ ಅಲ್ಲಿಂದ ಹೊರಟೆವು.

ಕಾಳಿ ನದಿಗೆ ಬೊಮ್ಮನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಿಸಿದ ಬಳಿಕ ಸುಮಾರು ೧೫ ಕಿ.ಮಿ. ದೂರ ಕಾಳಿ ನದಿ ಭೂಮಿಯ ಮೇಲ್ಮೈಯಿಂದ ಮಾಯ. ಕಾಳಿಯ ಇದೇ ೧೫ ಕಿ.ಮಿ ಹರಿವಿನ ಪಾತ್ರದಲ್ಲಿ ಲಾಲ್ಗುಳಿ ಜಲಧಾರೆ ಇದೆ (ಇತ್ತು). ಈಗ ಜೋರಾಗಿ ಮಳೆ ಬಂದಾಗ ಒಂದೆರಡು ತಾಸು ನೀರು ಬೀಳುತ್ತದಂತೆ. ಹಳ್ಳಿಗರಲ್ಲಿ ಹೆದ್ದಾರಿಯ ಪಕ್ಕದಲ್ಲಿದ್ದ ಆ ಫಲಕದ ಬಗ್ಗೆ ಕೇಳಿದೆವು. ವಿದ್ಯಾರ್ಥಿಗಳ ಗುಂಪೊಂದು ಆ ಫಲಕವನ್ನು ನೋಡಿ ಜಲಧಾರೆಯನ್ನು ನೋಡಲು ಲಾಲ್ಗುಳಿಗೆ ಬಂದಿತ್ತಂತೆ. ಜಲಧಾರೆಯೇ ಇಲ್ಲ ಎಂದು ತಿಳಿಯಲು, ಹಿಂತಿರುಗಿ ಹೋಗುವಾಗ ಆ ಫಲಕವನ್ನು ಕಿತ್ತೊಗೆದು, ಒಡೆದು ಹಾಕಿ ರಸ್ತೆಯಿಂದ ಒಳಗೆಲ್ಲೋ ಒಗೆದು ಹೋಗಿಬಿಟ್ಟರಂತೆ! ಒಳ್ಳೆಯ ಕೆಲಸವೇ ಮಾಡಿದರೆನ್ನಿ. ಹಾಸ್ಯಾಸ್ಪದ ವಿಷಯವೆಂದರೆ, ಆ ಫಲಕವನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳು, ತಮ್ಮ ಇಲಾಖೆಗೇ ಗೊತ್ತಿಲ್ಲದ ಜಲಧಾರೆ ಪ್ರವಾಸೋದ್ಯಮ ಇಲಾಖೆಗೆ ಹೇಗೆ ಗೊತ್ತಾಯಿತು, ನೋಡೇಬಿಡೋಣವೆಂದು ಜಲಧಾರೆಯ ಅಸ್ತಿತ್ವವನ್ನು ಕಂಡುಹುಡುಕಲು ಲಾಲ್ಗುಳಿಗೆ ಆಗಮಿಸಿದ್ದು!

ಬೊಮ್ಮನಹಳ್ಳಿ ಅಣೆಕಟ್ಟನ್ನು ೭೦ರ ದಶಕದ ಕೊನೆಯಲ್ಲೇ ನಿರ್ಮಿಸಿರುವಾಗ ಈ ಜಲಧಾರೆ ಕಣ್ಮರೆಯಾಗಿತ್ತು ಎನ್ನಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಇದರ ಬಗ್ಗೆ ಅರಿವೇ ಇಲ್ಲದಿರುವುದು ಸೋಜಿಗ. ಆ ಫಲಕವನ್ನು ನೋಡಿ ಬಹಳಷ್ಟು ಜನರು ಲಾಲ್ಗುಳಿವರೆಗೆ ತೆರಳಿ ಬೇಸ್ತು ಬಿದ್ದಿದ್ದರು. ಅದಕ್ಕೇ ನಮ್ಮನ್ನು ಕಂಡು ಆ ಹಳ್ಳಿಗರು ಮೆಲ್ಲನೆ ನಕ್ಕಿದ್ದು...ಇನ್ನೊಂದು ಜೋಡಿ ಮಿಕ ಎಂದು!

ಗುರುವಾರ, ಜುಲೈ 24, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೩

ಬೊಮ್ಮನಹಳ್ಳಿ ಅಣೆಕಟ್ಟು: ೨೯ ಮೀಟರ್ ಎತ್ತರ, ೧೦೨೫ ಮೀಟರ್ ಅಗಲ ಮತ್ತು ೬೩೬ ಚ.ಕಿ.ಮಿ ಜಲಾನಯನ ಪ್ರದೇಶ.

ತಟ್ಟೀಹಳ್ಳ ಅಣೆಕಟ್ಟು: ೪೫ ಮೀಟರ್ ಎತ್ತರ, ೧೩೩೭ ಮೀಟರ್ ಅಗಲ ಮತ್ತು ೧೧೦ ಚ.ಕಿ.ಮಿ ಜಲಾನಯನ ಪ್ರದೇಶ.

ಸೂಪಾದ ನಂತರ ಕಾಳಿಯ ಮೇಲೆ ದೌರ್ಜನ್ಯ ನಡೆದದ್ದು ನಾಗಝರಿ ಯೋಜನೆಯ ಸಮಯದಲ್ಲಿ. ಸೂಪಾ ಅಣೆಕಟ್ಟಿನಿಂದ ನದಿ ಪಾತ್ರದಲ್ಲಿ ೩೫ ಕಿ.ಮಿ. ನಂತರ ಬೊಮ್ಮನಹಳ್ಳಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಬೊಮ್ಮನಹಳ್ಳಿಯಿಂದ ಮುಂದೆ ಕಾಳಿಯನ್ನು ಅದರ ಉಪನದಿಗಳಾದ ತಟ್ಟೀಹಳ್ಳ ಮತ್ತು ನಾಗಝರಿಗಳು ಸೇರಿಕೊಳ್ಳುತ್ತವೆ. ಕಾಳಿನದಿ ಪಾತ್ರದ ಭೌಗೋಲಿಕ ರಚನೆ ಹೇಗಿದೆಯೆಂದರೆ ಬೊಮ್ಮನಹಳ್ಳಿಯ ಬಳಿಕ ಕೇವಲ ೧೫ ಕಿ.ಮಿ ಕ್ರಮಿಸುವಷ್ಟರಲ್ಲಿ ಕಾಳಿ ೯೬೦ ಅಡಿಗಳಷ್ಟು ಆಳಕ್ಕೆ ಹರಿಯುತ್ತಾಳೆ. ಈ ಪ್ರಾಕೃತಿಕ ಇಳಿಜಾರಿನ ಲಾಭ ಪಡೆದುಕೊಳ್ಳುವ ಸಲುವಾಗಿ ನಾಗಝರಿ ಯೋಜನೆ ಅಸ್ತಿತ್ವಕ್ಕೆ ಬಂತು. ಈ ಯೋಜನೆಯಡಿ,
೧. ನಾಗಝರಿ ನದಿ ಕಾಳಿಯನ್ನು ಸೇರುವಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವನ್ನು,
೨. ಬೊಮ್ಮನಹಳ್ಳಿಯಲ್ಲಿ ಕಾಳಿಗೆ ಅಣೆಕಟ್ಟನ್ನು,
೩. ತತ್ವಾಲ ಹಳ್ಳಿಯ ಸಮೀಪ ತಟ್ಟೀಹಳ್ಳಕ್ಕೆ ಅಣೆಕಟ್ಟನ್ನು,
೪. ಬೊಮ್ಮನಹಳ್ಳಿ ಅಣೆಕಟ್ಟಿನಿಂದ ನಾಗಝರಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಸುಮಾರು ೯ಕಿಮಿ ಉದ್ದವಿರುವ ಭೂಗತ ಸುರಂಗವನ್ನು ಮತ್ತು
೫. ತಟ್ಟೀಹಳ್ಳ ಅಣೆಕಟ್ಟಿನಿಂದ ಬೊಮ್ಮನಹಳ್ಳಿ ಅಣೆಕಟ್ಟಿಗೆ ನೀರನ್ನು ಸರಬರಾಜು ಮಾಡಲು ಕಾಲುವೆ; ಇವಿಷ್ಟರ ನಿರ್ಮಾಣವನ್ನು ಕೈಗೊಳ್ಳಲಾಯಿತು.

ಅಣೆಕಟ್ಟು ನಿರ್ಮಾಣದ ಮೊದಲು ಬೊಮ್ಮನಹಳ್ಳಿಯಿಂದ ನಾಗಝರಿಯವರೆಗಿನ (ನಾಗಝರಿ ಹಳ್ಳವು ಕಾಳಿಯನ್ನು ಸೇರುವ ಸ್ಥಳಕ್ಕೆ ನಾಗಝರಿ ಎಂದು ಹೆಸರು) ೧೫ ಕಿ.ಮಿ. ದೂರವನ್ನು ಕಾಳಿಯು ಭೂಮಿಯ ಮೇಲೆ ಕ್ರಮಿಸುತ್ತಿದ್ದಳು ಆದರೆ ಈಗ ಭೂಮಿಯ ಕೆಳಗಿನಿಂದ ಕ್ರಮಿಸುತ್ತಾಳೆ! ಈಗ ಬೊಮ್ಮನಹಳ್ಳಿ ಅಣೆಕಟ್ಟಿನಿಂದ ಭೂಗತ ಸುರಂಗದ ಮೂಲಕ ನಾಗಝರಿ ವಿದ್ಯುತ್ ಘಟಕಕ್ಕೆ ಕಾಳಿಯ ನೀರನ್ನು ರಭಸವಾಗಿ ಹರಿಸಲಾಗುತ್ತಿರುವುದರಿಂದ ಸುಮಾರು ೧೫ ಕಿ.ಮಿ. ದೂರದವರೆಗೆ ಕಾಳಿ ನದಿಯು ಭೂಮಿಯ ಮೇಲ್ಮೈಯಿಂದ ಮಾಯ! ಇಷ್ಟೇ ಅಲ್ಲದೆ ತನ್ನ ಪಾಡಿಗೆ ತಾನು ಹರಿದುಕೊಂಡಿದ್ದ ತಟ್ಟೀಹಳ್ಳಕ್ಕೂ ಅಣೆಕಟ್ಟನ್ನು ನಿರ್ಮಿಸಿ, ನೀರನ್ನು ಬೊಮ್ಮನಹಳ್ಳಿ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮವಾಗಿ ಅಣೆಕಟ್ಟಿನ ಬಳಿಕ ಕಾಳಿಯನ್ನು ಸೇರುವವರೆಗಿನ ಏಳೆಂಟು ಕಿ.ಮಿ ದೂರದವರೆಗೆ ತಟ್ಟೀಹಳ್ಳವೂ ಒಣ ಒಣ.

ನಾಗಝರಿ ಯೋಜನೆಯಿಂದ ಕಾಳಿ ಕೊಳ್ಳದಲ್ಲಿನ ಅಪಾರ ಕಾಡುಭೂಮಿ ೨ ಅಣೆಕಟ್ಟುಗಳ ತಳ ಸೇರಿತು. ಇಲ್ಲಿ ಈಗ ಎತ್ತ ಕಡೆ ಹೋದರೂ ಹಿನ್ನೀರು ಸಿಗುವಂತಾಗಿದೆ ಎಂದರೆ ಮುಳುಗಡೆಯಾಗಿರುವ ಪ್ರದೇಶಗಳ ಅಗಾಧತೆಯನ್ನು ಅಂದಾಜಿಸಬಹುದು. ಕಲಘಟಗಿಯಿಂದ ಕಾಡಿನಲ್ಲಿ ಚಾರಣ ಮಾಡಿದರೆ ಧುತ್ತೆಂದು ಎದುರಾಗುತ್ತದೆ ತಟ್ಟೀಹಳ್ಳ ಅಣೆಕಟ್ಟಿನ ಹಿನ್ನೀರು. ಇತ್ತ ಕಡೆ ಯಲ್ಲಾಪರದ ಕಡೆಯಿಂದ ಸ್ವಲ್ಪ ದೂರ ಕ್ರಮಿಸಿದರೆ ಒಂದು ಕಡೆ ಬೊಮ್ಮನಹಳ್ಳಿ ಅಣೆಕಟ್ಟಿನ ಹಿನ್ನೀರಾದರೆ ಮಗದೊಂದು ಕಡೆ ತಟ್ಟೀಹಳ್ಳದ ಹಿನ್ನೀರು. ಅತ್ತ ಹಳಿಯಾಳದಿಂದ ಪ್ರಯಾಣಿಸಿದರೆ ಅಲ್ಲೂ ಹಿನ್ನೀರು. ಈ ಅಣೆಕಟ್ಟುಗಳು ಕಾಳಿ ನದಿಯ ಪಾತ್ರವನ್ನು ಅಗಾಧ ಮಟ್ಟಕ್ಕೆ ಹಿಗ್ಗಿಸಿ, ಇದೊಂದು ಭಲೇ ದೊಡ್ಡ ನದಿ ಎಂಬ ಭ್ರಮೆಯನ್ನು ಹುಟ್ಟುಹಾಕಿವೆ.

ಬೊಮ್ಮನಹಳ್ಳಿಯಿಂದ ೯ ಕಿ.ಮಿ. ದೂರದವರೆಗೆ, ಅಂಬಿಕಾನಗರದ ಸಮೀಪದ ’ಸೈಕ್ಸ್ ಪಾಯಿಂಟ್’ನ ಕೆಳಗೆ ಕಣಿವೆಯಲ್ಲಿರುವ ನಾಗಝರಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕೊರೆಯಲಾಗಿರುವ ಸುರಂಗವನ್ನು ಎಂಜಿನಿಯರಿಂಗ್ ಅದ್ಭುತವೆಂದು ಕೊಂಡಾಡಲಾಗುತ್ತಿದೆಯಾದರೂ, ಆಗಿರುವ ಅರಣ್ಯದ ಸರ್ವನಾಶದ ಬಗ್ಗೆ ಮಾತಿಲ್ಲ. ಆಗ ಕಾಡಿನೊಳಗೆ ಅದೇನು ಆಗುತ್ತಿದೆ ಎಂಬ ಮಾಹಿತಿ ನಾಡಿಗೆ ಬರುತ್ತಿರಲಿಲ್ಲ. ಈಗಲೂ, ಆಗ ಆಗಿರುವ ಕಾಡಿನ ನಾಶದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.

ಬೊಮ್ಮನಹಳ್ಳಿ ಮತ್ತು ತಟ್ಟೀಹಳ್ಳ ಅಣೆಕಟ್ಟುಗಳ ಹಿನ್ನೀರುಗಳಲ್ಲಿ ಮುಳುಗಿದ ಕಾಡುಗಳು ಮತ್ತು ಹಳ್ಳಿಗಳು, ನೆಲೆ ಕಳಕೊಂಡ ಬಡಪಾಯಿ ಜನರು, ೯ಕಿ.ಮಿ. ಉದ್ದದ ಭೂಗತ ಸುರಂಗ ಕೊರೆಯಬೇಕಾದರೆ ಆದ ಅರಣ್ಯದ ಸರ್ವನಾಶ, ಸ್ಥಳಾಂತರಗೊಂಡ ಪ್ರಾಣಿ/ಪಕ್ಷಿ ಸಂಕುಲ ಇವಕ್ಕೆಲ್ಲಾ ಯಾರು ಹೊಣೆ? ಕೇವಲ ೫೦ ವರ್ಷಗಳ ಕಾಲ ವರ್ಷಕ್ಕೆ ೬೦೦-೮೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಲುವಾಗಿ ನಾವು ಏನನ್ನೆಲ್ಲಾ ಮತ್ತು ಎಷ್ಟನ್ನೆಲ್ಲಾ ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು!

ಕಾಳಿ ನದಿ ಮೊದಲ ಹಂತದ ಯೋಜನೆಯಡಿ ನಾಲ್ಕು (ಕಾನೇರಿ, ಸೂಪಾ, ಬೊಮ್ಮನಹಳ್ಳಿ ಹಾಗೂ ತಟ್ಟೀಹಳ್ಳ) ಅಣೆಕಟ್ಟುಗಳನ್ನು ಮತ್ತು ಸೂಪಾದಲ್ಲಿ ೨ ಹಾಗೂ ನಾಗಝರಿಯಲ್ಲಿ ೬ ವಿದ್ಯುತ್ ಘಟಕಗಳನ್ನು ನಿರ್ಮಿಸಿ ೧೯೮೪ರೊಳಗೆ ಹಂತ ಹಂತವಾಗಿ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಅದಾಗಲೇ ಸರಕಾರ ಕಾಳಿ ನದಿ ಎರಡನೇ ಹಂತದ ಯೋಜನೆಯಡಿ ಕೊಡಸಳ್ಳಿ ಮತ್ತು ಕದ್ರಾಗಳಲ್ಲಿ ಅಣೆಕಟ್ಟು ಮತ್ತು ತಲಾ ೩ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಯೋಜನೆಯ ನೀಲಿ ನಕಾಶೆ ತಯಾರಿ ಮಾಡಿಯಾಗಿತ್ತು.

ಮುಂದುವರಿಯುತ್ತದೆ...

ಅಂದ ಹಾಗೆ ಇದು ನನ್ನ ೧೦೦ನೇ ಪೋಸ್ಟ್.

ಬುಧವಾರ, ಜುಲೈ 16, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೨

ಸೂಪಾ ಅಣೆಕಟ್ಟು: ೧೦೧ ಮೀಟರ್ ಎತ್ತರ, ೩೩೨ ಮೀಟರ್ ಉದ್ದ ಮತ್ತು ೧೦೫೭ ಚ.ಕಿ.ಮಿ ಜಲಾನಯನ ಪ್ರದೇಶ.

ಕಾನೇರಿ ಅಣೆಕಟ್ಟು: ೨೭ ಮೀಟರ್ ಎತ್ತರ, ೧೪೬ ಮೀಟರ್ ಅಗಲ ಮತ್ತು ೯೬ ಚ.ಕಿ.ಮಿ ಜಲಾನಯನ ಪ್ರದೇಶ.

ಸೂಪಾ ಅಣೆಕಟ್ಟನ್ನು ಒಂದು ’ಎಂಜಿನಿಯರಿಂಗ್ ಅದ್ಭುತ’ ಎಂದು ಕರ್ನಾಟಕ ವಿದ್ಯುತ್ ನಿಗಮ ಬಣ್ಣಿಸುತ್ತದೆ. ಆದರೆ ಅಸಲಿ ವಿಷಯವೆಂದರೆ ಸೂಪಾ ಅಣೆಕಟ್ಟಿನ ಮೂಲ ವಿನ್ಯಾಸದಲ್ಲೇ ದೋಷವಿದೆ. ಇದೇ ಕಾರಣದಿಂದ ನಿರ್ಮಾಣದ ಮೊದಲ ೨೦ ವರ್ಷಗಳಲ್ಲಿ (೧೯೯೪ ಹೊರತುಪಡಿಸಿ) ಅಣೆಕಟ್ಟು ಗರಿಷ್ಠ ಮಟ್ಟವನ್ನು ತಲುಪುವಲ್ಲಿ ವಿಫಲವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳೇ ಈ ಅಣೆಕಟ್ಟಿನ ವೈಫಲ್ಯದ ಬಗ್ಗೆ ಸಮ್ಮತಿ ಸೂಚಿಸುತ್ತಾರೆ. ನಿರ್ಮಾಣದ ಮೊದಲು ಮಾಡಿದ ಸರ್ವೇ ಪ್ರಕಾರ ದೊಡ್ಡ ಅಣೆಕಟ್ಟನ್ನು ನಿರ್ಮಿಸುವ ನಿರ್ಧಾರ ಮಾಡಲಾಯಿತು. ಆದರೆ ಈ ಸರ್ವೇ ಅನೇಕ ಲೋಪಗಳಿಂದ ಕೂಡಿತ್ತು. ಸೂಪಾ ಅಣೆಕಟ್ಟಿನ ವೈಫಲ್ಯದ ಬಗ್ಗೆ ಕೇಳಿದರೆ ಕ.ವಿ.ನಿ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಲಿಲ್ಲ ಎಂದು ಮುಂಗಾರಿನ ಮೇಲೆ ಗೂಬೆ ಕೂರಿಸುತ್ತಾರೆ.

ಕಾಳಿ ಮತ್ತು ಕಾಳಿಯ ಉಪನದಿ ಪಂಢಾರಿ ನದಿಯ ಪ್ರದೇಶಗಳಲ್ಲಿ ಆಗುವ ಮಳೆಯ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡೇ ಸೂಪಾ ಅಣೆಕಟ್ಟನ್ನು ನಿರ್ಮಿಸಲಾಗಿರುವಾಗ, ಅಣೆಕಟ್ಟು ನಿರ್ಮಾಣದ ಬಳಿಕ ’ಮುಂಗಾರು ವೈಫಲ್ಯ’ ಎಂಬ ಸಬೂಬು ನೀಡುವುದು ಎಷ್ಟು ಸಮಂಜಸ? ಅಥವಾ ಆಗುವ ಮಳೆಯ ಪ್ರಮಾಣವನ್ನು ಸಮರ್ಪಕವಾಗಿ ಅಂದಾಜಿಸದೆ, ಅಧಿಕವೆಂದು ತೋರಿಸಿ, ಅಷ್ಟು ನೀರನ್ನು ತಡೆಹಿಡಿಯಲು ದೊಡ್ಡ ಅಣೆಕಟ್ಟನ್ನು ನಿರ್ಮಿಸಬೇಕೆಂಬ ಲೋಪಭರಿತ ಸರ್ವೇ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತೇ?. ಇದರ ಪರಿಣಾಮ ಅನಾವಶ್ಯಕವಾಗಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚುವರಿ ಕಾಡು ಭೂಮಿ ಸೂಪಾ ಹಿನ್ನೀರಿನಲ್ಲಿ ಮುಳುಗಿಹೋಯಿತು. ಕಾಳಿ ಕೊಳ್ಳದ ಅವ್ಯಾಹತ ಲೂಟಿಗೆ ಸೂಪಾ ಅಣೆಕಟ್ಟು ನಾಂದಿ ಹಾಡಿತು ಎನ್ನಬಹುದು. ಸೂಪಾ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದಷ್ಟು ಅರಣ್ಯ ಭೂಮಿ, ಕೃಷಿ ಭೂಮಿ ಮತ್ತು ಹಳ್ಳಿಗಳು ಕಾಳಿಗೆ ನಿರ್ಮಿಸಲಾದ ಉಳಿದ ಅಣೆಕಟ್ಟುಗಳಲ್ಲಿ ಮುಳುಗಡೆಯಾಗಿಲ್ಲ. ಸೂಪಾದ ಹಿನ್ನೀರಿನ ಅಗಾಧತೆ ನೋಡಿದರೆ ಈ ಬಗ್ಗೆ ಊಹಿಸಬಹುದು. ಕಳೆದ ನಾಲ್ಕಾರು ವರ್ಷಗಳಲ್ಲಿ ಸೂಪಾ ತುಂಬುತ್ತಿದೆ ಅಂದರೆ, ಅಣೆಕಟ್ಟಿನಲ್ಲಿ ಹೂಳು ತುಂಬಿದೆ ಎಂದರ್ಥವೇ ವಿನ: ೨೦ ವರ್ಷಗಳ ಹಿಂದೆ ನಿರೀಕ್ಷಿಸಿದಷ್ಟು ಮಳೆ ಈಗ ಆಗುತ್ತಿದೆ ಎಂದಲ್ಲ.

ಅಗಾಧ ಪ್ರಮಾಣದ ಕಾಡು ಮತ್ತು ನಾಡು ಮುಳುಗಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ತನ್ನಾದರೂ ಉತ್ಪಾದಿಸಲಾಗುತ್ತಿದೆಯೇ? ಅದೂ ಇಲ್ಲ! ಸೂಪಾದಲ್ಲಿರುವ ೨ ವಿದ್ಯುತ್ ಘಟಕಗಳಿಂದ ಕೇವಲ ೧೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಅಗಾಧ ಪ್ರಮಾಣದ ಜಲಾನಯನ ಪ್ರದೇಶ ಮತ್ತು ಅಪಾರ ನೀರಿನ ಸಂಗ್ರಹಣೆ ಇರುವಾಗ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವೇಕೆ ಕಡಿಮೆ? ಈ ಪ್ರಶ್ನೆಗೆ ಕ.ವಿ.ನಿ ಕೊಡುವ ಉತ್ತರವೇನೆಂದರೆ, ’ಸೂಪಾ ಅಣೆಕಟ್ಟಿನ ಉದ್ದೇಶ ನೀರನ್ನು ಸಂಗ್ರಹಿಸಿ, ಬೊಮ್ಮನಹಳ್ಳಿ ಅಣೆಕಟ್ಟಿಗೆ ಅವಶ್ಯವಿದ್ದಾಗ ಪೂರೈಸುವುದೇ ವಿನ: ಅಧಿಕ ಪ್ರಮಾಣದಲ್ಲಿ ಸೂಪಾದಲ್ಲೇ ವಿದ್ಯುತ್ ಉತ್ಪಾದಿಸುವ ಸಲುವಾಗಿ ಅಲ್ಲ’ ಎಂದು! ಪ್ರತಿ ದಿನ ಮುಂಜಾನೆ ಮತ್ತು ಮಧ್ಯಾಹ್ನ ನೀರನ್ನು ಸೂಪಾ ಅಣೆಕಟ್ಟಿನಿಂದ ಬಿಡಲಾಗುತ್ತದೆ. ಮುಂಜಾನೆ ಬಿಡುವ ನೀರಿನಲ್ಲೇ ಅರಣ್ಯ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳು ’ವೈಟ್ ರಿವರ್ ರಾಫ್ಟಿಂಗ್’ ನಡೆಸುತ್ತವೆ.

ಸೂಪಾ ಅಣೆಕಟ್ಟಿನಲ್ಲಿ ೨೫,೦೦೦ ಎಕರೆಗಳಷ್ಟು ಕಾಡು ನಾಶವಾಯಿತು. ಹಿನ್ನೀರಿನಲ್ಲಿ ಮುಳುಗಲಿರುವ ದಟ್ಟಾರಣ್ಯವನ್ನು ಕೊಳ್ಳೆ ಹೊಡೆಯಲು ದಾಂಡೇಲಿ-ಹಳಿಯಾಳ ಪ್ರದೇಶದ ಪ್ರಮುಖ ರಾಜಕಾರಣಿಗಳ ನಡುವೆ ಪೈಪೋಟಿ. ನಾಚಿಕೆಗೇಡು! ಸೂಪಾ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳ ಸಂಖ್ಯೆ ೪೭. ಕಾಳಿ ನದಿಯನ್ನು ಆರಾಧಿಸುತ್ತಾ, ಅದನ್ನೇ ನಂಬಿ ಜೀವನ ನಡೆಸುತ್ತಿದ್ದ ಗೌಳಿ, ಕುಣಬಿ, ಸಿದ್ಧಿ ಮತ್ತು ಮರಾಠಿ ಜನಾಂಗದ ಜನರಿಗೆ ದಿಕ್ಕೇ ತೋಚದಂತಹ ಪರಿಸ್ಥಿತಿ. ಇವರಿಗೆಲ್ಲ ಪರಿಹಾರ ದೊರಕಿದೆಯೋ ಇಲ್ಲವೋ ಎಂಬುವುದು ಊಹೆಗೆ ಬಿಟ್ಟ ವಿಷಯ.

ಸೂಪಾ ಪಟ್ಟಣ ಹಿನ್ನೀರಿನಲ್ಲಿ ಮುಳುಗುವುದರಿಂದ ತಾಲೂಕು ಕೇಂದ್ರವನ್ನು ಜೋಯಿಡಾಗೆ ವರ್ಗಾಯಿಸಲಾಯಿತು. ಸೂಪಾ ಪಟ್ಟಣದ ನಿವಾಸಿಗಳಿಗೆ ಗಣೇಶಗುಡಿಯ ಸಮೀಪ ’ರಾಮನಗರ’ ಎಂಬ ಹೊಸ ಪಟ್ಟಣವನ್ನು ನಿರ್ಮಿಸಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ರಾಮನಗರ ಇದ್ದ ಜಾಗದಲ್ಲಿ ದಟ್ಟ ಅರಣ್ಯವಿತ್ತು. ಸೂಪಾ ಹಿನ್ನೀರಿನಲ್ಲಿ ಮುಳುಗಿಸಿದ ಅರಣ್ಯ ಸಾಲದೆಂಬಂತೆ ಸರಕಾರ ಸುಮಾರು ೮೦೦-೧೦೦೦ ಹೆಕ್ಟೇರುಗಳಷ್ಟು ಅರಣ್ಯವನ್ನು ಕಡಿದು ರಾಮನಗರವನ್ನು ನಿರ್ಮಿಸಿತು! ಆದರೆ ರಾಮನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಆದಿವಾಸಿ ಜನಾಂಗದ ಕೆಲವು ಕುಟುಂಬಗಳಿಗೂ ರಾಮನಗರದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೌಕರ್ಯಗಳ ಕೊರತೆಯಿಂದ ಬೇಸತ್ತ ಇವರು ಆಸುಪಾಸಿನ ಕಾಡುಗಳನ್ನು ಕಡಿದು ಜಮೀನು ಮಾಡಿಕೊಂಡು ಜೀವನ ಸಾಗಿಸುವ ಪ್ರಯತ್ನ ಮಾಡತೊಡಗಿದರು. ಕಾಡಿಗೆ ನಿರಂತರ ಹಾನಿ ಮಾತ್ರ ಮುಂದುವರಿಯಿತು.

ವ್ಯವಸಾಯ ಮಾಡಲು ಸೂಪಾ ಅಣೆಕಟ್ಟಿನ ನೀರನ್ನು ಬಳಸುವ ಅವಕಾಶ ಅದಕ್ಕಾಗಿ ತಮ್ಮ ಜಮೀನು ಕಳಕೊಂಡ ಈ ಜನರಿಗೆ ಇರಲಿಲ್ಲ! ಅಣೆಕಟ್ಟು ನಿರ್ಮಾಣದ ಬಳಿಕ, ನೀರಾವರಿ ಸೌಲಭ್ಯವನ್ನು ನೀಡಲಾಗುವುದು ಎಂಬ ಅಶ್ವಾಸನೆ ಹಾಗೇ ಉಳಿಯಿತು. ನೀರಿನ ಸೌಲಭ್ಯವಿಲ್ಲದೆ ತಮಗೆ ನೀಡಿದ್ದ ಜಮೀನಿನಲ್ಲಿ ಏನನ್ನೂ ಬೆಳೆಯಲಾಗದ ಜನರು ತಮ್ಮ ಜಮೀನನ್ನೆಲ್ಲಾ ಮಾರಿಬಿಟ್ಟಿದ್ದಾರೆ ಹಾಗೂ ಲೀಸ್-ಗೆ ಸಂಸ್ಥೆಯೊಂದಕ್ಕೆ ಬಿಟ್ಟುಕೊಟ್ಟಿದ್ದಾರೆ. ರಾಮನಗರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನ ಇತ್ಯಾದಿಗಳನ್ನು ನಿರ್ಮಿಸಿದ ಸರಕಾರ ಮತ್ತೆ ರಾಮನಗರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಎಲ್ಲಾ ಕಡೆ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಆಗುವುದೇ ಇಲ್ಲೂ ಪುನರಾವರ್ತನೆಯಾಯಿತು. ಅಣೆಕಟ್ಟಿಗಾಗಿ ತಮ್ಮೆಲ್ಲವನ್ನೂ ಕಳಕೊಂಡು ಈಗ ಜೀವನವನ್ನು ಹೊಸದಾಗಿ ಆರಂಭಿಸುವ ದುರಾದೃಷ್ಟ. ಪರಿಹಾರ ವಿತರಣೆ ಸಮಯದಲ್ಲಿ ಸಮರ್ಥ/ಪ್ರಾಮಾಣಿಕ ಅಧಿಕಾರಿಗಳಿದ್ದು, ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯ ಕೈಗೆ ಪರಿಹಾರ ತಲುಪಿಸಿದರೆ ಎಲ್ಲವೂ ಸರಿ. ಇಲ್ಲವಾದಲ್ಲಿ ಈ ಜನರ ಬದುಕು ಯಾರಿಗೂ ಬೇಡ. ಹಿನ್ನೀರಿನ ದೃಶ್ಯ ಕಂಡಾಗ ’ಆಹಾ, ಸುಂದರ ದೃಶ್ಯ’ ಎನ್ನುವ ನಾವು, ಒಂದು ಕ್ಷಣ ಆ ’ಸುಂದರ’ ದೃಶ್ಯದ ಹಿಂದಿರುವ ಕಣ್ಣೀರು, ಬವಣೆ, ದುಗುಡ ಇತ್ಯಾದಿಗಳನ್ನು ನೆನೆಸಿಕೊಂಡರೂ ಸಾಕು. ಬದುಕು, ಭೂಮಿ ಕಳಕೊಂಡವರ ಪಾಡನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ....ನಮ್ಮ ಬದುಕು/ಭೂಮಿ ಹಿನ್ನೀರೊಂದರ ತಳ ಸೇರುವ ತನಕ.

ಭಾನುವಾರ, ಜುಲೈ 13, 2008

ಕಾಳಿ ಕೊಳ್ಳದ ಕಥೆ/ವ್ಯಥೆ - ೧

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ಬೇರೆ ಜಿಲ್ಲೆಗೆ ಕಾಲಿಡದೆ, ಅದೇ ಜಿಲ್ಲೆಯಲ್ಲಿ ಸಾಗರ ಸೇರುವ ಅಪೂರ್ವ ಮತ್ತು ವಿಶಿಷ್ಟ ನದಿ ಕಾಳಿ. ಜೋಯಿಡಾ ತಾಲೂಕಿನ ಡಿಗ್ಗಿ ಎಂಬ ಹಳ್ಳಿಯ ಸಮೀಪ ಕುಶಾವಳಿ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು ೨೮೫೦ ಅಡಿಗಳಷ್ಟು ಎತ್ತರದಲ್ಲಿ ಜನ್ಮ ತಾಳುವ ಕಾಳಿ ನಂತರ ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳ ಮೂಲಕ ಹರಿದು ಕಾರವಾರ ತಾಲೂಕಿನಲ್ಲಿ ತನ್ನ ಪ್ರಯಾಣವನ್ನು ಪರ್ಯಾವಸನಗೊಳಿಸುವಷ್ಟರಲ್ಲಿ ೧೮೦ ಕಿ.ಮಿ. ದೂರವನ್ನು ಕ್ರಮಿಸಿರುತ್ತಾಳೆ. ಡಿಗ್ಗಿ ಮತ್ತು ಕಾರವಾರದ ನಡುವೆ ವೈಮಾನಿಕ ಅಂತರ ೫೦ ಕಿ.ಮಿ ನಷ್ಟು ಮಾತ್ರವಿದ್ದರೂ, ಸುತ್ತಿ ಬಳಸಿ ಹರಿಯುವ ಕಾಳಿ ದಾರಿಯುದ್ದಕ್ಕೂ ಅದ್ಭುತ ಕಣಿವೆ ಕಾಡುಗಳ ಮೂಲಕ ಸಾಗುತ್ತಾ, ಅಲ್ಲಿನ ಅಪಾರ ಸಸ್ಯ ಮತ್ತು ಜೀವಸಂಕುಲಕ್ಕೆ ಆಧಾರವಾಗುತ್ತಾ, ಜೋಯಿಡಾ ಹಾಗೂ ಕಾರವಾರ ತಾಲೂಕುಗಳ ಮತ್ತು ದಾಂಡೇಲಿ (ಕುಳಗಿ) ಅಭಯಾರಣ್ಯ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನಗಳ ಜೀವ ನದಿಯಾಗಿ ಹರಿಯುತ್ತಾಳೆ.

ಕಾಳಿ ನದಿಯ ನೀರು ಕಪ್ಪಗಿದ್ದು ಭೀಕರವಾಗಿ ಕಾಣುವುದರಿಂದ ನದಿಗೆ ’ಕಾಳಿ’ ಎಂಬ ಹೆಸರು ಎಂಬ ಮಾತು/ನಂಬಿಕೆ ಚಾಲ್ತಿಯಲ್ಲಿದೆ. ಕಾಳಿ ನದಿಯ ಹರಿವಿನುದ್ದಕ್ಕೂ ಕರಿಕಲ್ಲುಗಳು ಇರುವುದರಿಂದ ಕಾಳಿ ಕರ್ರಗೆ ಕಾಣುತ್ತಾಳೆ ಎಂಬ ಮಾತಲ್ಲಿ ಸ್ವಲ್ಪ ಹುರುಳಿದ್ದರೂ ಇದು ಒಂದೇ ಕಾರಣವಲ್ಲ. ದಾಂಡೇಲಿಯ ಆಸುಪಾಸಿನಲ್ಲಿರುವ ಅಸಂಖ್ಯಾತ ದೊಡ್ಡ ಹಾಗು ಸಣ್ಣ ಕೈಗಾರಿಕಾ ಘಟಕಗಳು ಕಳೆದ ಹಲವಾರು ವರ್ಷಗಳಿಂದ ತ್ಯಾಜ್ಯಗಳನ್ನು ಶುದ್ಧೀಕರಿಸದೆ ನೇರವಾಗಿ ಕಾಳಿಯ ಒಡಲಿಗೆ ಬಿಡುತ್ತಿರುವುದೂ ಕಾಳಿಯ ನೀರು ಕಪ್ಪಗಾಗಿ ಕಾಣಲು ಪ್ರಮುಖ ಕಾರಣ.

ಕೇವಲ ೧೮೦ ಕಿಮಿ ದೂರಕ್ಕೆ ಹರಿಯುವ ನದಿಯಾದರೂ ತನ್ನ ಪಾತ್ರದುದ್ದಕ್ಕೂ ಕಾಳಿ ಅಧಾರವಾಗುವ ಪ್ರಾಣಿ/ಸಸ್ಯ ಸಂಕುಲಗಳೆಡೆಗೆ ಗಮನ ಹರಿಸಿದರೆ ಅಚ್ಚರಿಯಾಗದೇ ಇರದು. ವನ್ಯ ಜೀವನ ಕಾಯ್ದೆಯಡಿ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲ್ಪಟ್ಟಿರುವ ೩೪೫ ಚ.ಕಿಮಿ ಗಳಷ್ಟಿರುವ ಅಣಶಿ ರಾಷ್ಟ್ರೀಯ ಉದ್ಯಾನ ಮತ್ತು ೪೭೫.೧೬ ಚ.ಕಿಮಿ ಗಳಷ್ಟಿರುವ ದಾಂಡೇಲಿ ಅಭಯಾರಣ್ಯಗಳಲ್ಲಿ ನೀರಿನ ಮೂಲವೇ ಕಾಳಿ ಮತ್ತು ಕಾಳಿಯ ಉಪನದಿಗಳು. ಕಾಳಿ ಜಲಾನಯನ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಜೋಯಿಡಾ, ಹಳಿಯಾಳ ಮತ್ತು ಯಲ್ಲಾಪುರ ತಾಲೂಕುಗಳ ಪ್ರದೇಶಗಳಲ್ಲಿ ಮಳೆಯೂ ಹೆಚ್ಚಿನ ಪ್ರಮಾಣದಲ್ಲಿ ಬೀಳುವುದರಿಂದ ರಕ್ಷಿತಾರಣ್ಯಕ್ಕೆ ನೀರಿನ ಅಭಾವದ ಸಮಸ್ಯೆ ಕಡಿಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯ ಜೀವಿಗಳು ಸ್ವೇಚ್ಛೆಯಿಂದ ಓಡಾಡಿಕೊಂಡು ಇರುವುದಾದರೆ ಅದು ಈ ೨ ರಕ್ಷಿತಾರಣ್ಯಗಳಲ್ಲಿ. ಆದರೂ ಕಳ್ಳ ಬೇಟೆಗಾರರ ಹಾವಳಿ ಇಲ್ಲಿಯೂ ಇದೆ. ಈಗಿರುವ ಡಿ.ಎಫ್.ಓ ನಿಯತ್ತಿನವರಾಗಿರುವುದರಿಂದ ಕಾಡಿನ ಮತ್ತು ಪ್ರಾಣಿಗಳ ಬೇಟೆ ಹತೋಟಿಯಲ್ಲಿದೆ.

ಡಿಗ್ಗಿಯಿಂದ ಕಾರವಾರದವರೆಗೆ ಕಾಳಿ ಕೊಳ್ಳದ ಪ್ರದೇಶದಲ್ಲಿ ವಾಸವಾಗಿದ್ದ ಜನರು ಎಲ್ಲಾ ರೀತಿಯಲ್ಲೂ ಸಮೃದ್ಧರಾಗಿದ್ದರು ಮತ್ತು ಸ್ಥಿತಿವಂತರಾಗಿದ್ದರು. ಆದರೆ ೭೦ರ ದಶಕದಲ್ಲಿ ಸರಕಾರ ಸೂಪಾ ಅಣೆಕಟ್ಟನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕಾಳಿ ಕೊಳ್ಳದ ’ನಿಧಾನ ಮರಣ’ಕ್ಕೆ ಅಡಿಪಾಯ ನಿರ್ಮಿಸಿದಂತಾಯಿತು. ಅಂದಿನ ಸರಕಾರದ ತಪ್ಪು ನಿರ್ಧಾರದಿಂದ ಕಾಳಿ ಕೊಳ್ಳ ಇನ್ನೂ ಚೇತರಿಸಿಕೊಂಡಿಲ್ಲ ಮತ್ತು ಅಂದಿನಿಂದ ಕಾಳಿ ಕೊಳ್ಳದ ಕೊಳ್ಳೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.

ಸೂಪಾದ ನಂತರ ೧೫ ವರ್ಷಗಳಲ್ಲಿ ಇನ್ನೂ ೩ ಅಣೆಕಟ್ಟುಗಳನ್ನು ಕಾಳಿ ನದಿಗೆ ನಿರ್ಮಿಸಲಾಯಿತು. ಈ ಅಣೆಕಟ್ಟುಗಳಿಗೆ ಇನ್ನೂ ಹೆಚ್ಚಿನ ನೀರನ್ನು ಉಣಿಸುವ ಇರಾದೆಯಿಂದ ಕಾಳಿಯ ೨ ಪ್ರಮುಖ ಉಪನದಿಗಳಿಗೂ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು. ಇಷ್ಟೇ ಅಲ್ಲದೆ ಬೆಟ್ಟದ ತಪ್ಪಲಲ್ಲಿ ಕಾಳಿ ನದಿಯ ತಟದಲ್ಲಿ, ದಟ್ಟ ಕಾಡಿನ ನಡುವೆ ಇರುವ ’ಕೈಗಾ’ ಎಂಬ ಸುಂದರ(ವಾಗಿದ್ದ) ಹಳ್ಳಿಯಲ್ಲಿ ವ್ಯಾಪಕ ವಿರೋಧದ ನಡುವೆಯೂ ಅಣು ಸ್ಥಾವರವನ್ನು ನಿರ್ಮಿಸಲಾಯಿತು. ಈಗ, ’ಕಾಡಿನ ನಡುವೆ ನಿರ್ಮಿಸಲಾಗಿರುವ ಜಗತ್ತಿನ ಏಕೈಕ ಅಣುಸ್ಥಾವರ’ ಎಂಬ ಹೆಗ್ಗಳಿಕೆ(?) ಕೈಗಾ ಅಣುಸ್ಥಾವರಕ್ಕೆ!

ಕಾಳಿ ನದಿಗೆ ಅಣೆಕಟ್ಟುಗಳನ್ನು ಸೂಪಾ, ಬೊಮ್ಮನಹಳ್ಳಿ, ಕೊಡಸಳ್ಳಿ ಮತ್ತು ಕದ್ರಾಗಳಲ್ಲಿ ನಿರ್ಮಿಸಲಾಗಿದೆ. ಕಾಳಿಯ ಉಪನದಿಯಾಗಿರುವ ಕಾನೇರಿ ನದಿಗೆ ಕುಂಬಾರವಾಡದ ಸಮೀಪ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಸೂಪಾ ಜಲಾಶಯಕ್ಕೆ ಹರಿಸಲಾಗುತ್ತಿದೆ ಮತ್ತು ಇನ್ನೊಂದು ಉಪನದಿ ತಟ್ಟೀಹಳ್ಳಕ್ಕೆ ತತ್ವಾಲ ಹಳ್ಳಿಯ ಸಮೀಪ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಬೊಮ್ಮನಹಳ್ಳಿ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಕದ್ರಾ ಹಿನ್ನೀರಿನ ಎಡ ದಂಡೆಯಲ್ಲೇ ಕೈಗಾ ಅಣುಸ್ಥಾವರ ಇದೆ. ಸೂಪಾ, ನಾಗಝರಿ, ಕೊಡಸಳ್ಳಿ ಮತ್ತು ಕದ್ರಾ ಹೀಗೆ ೪ ಸ್ಥಳಗಳಲ್ಲಿ ೧೪ ವಿದ್ಯುತ್ ಉತ್ಪಾದಕ ಘಟಕಗಳಿವೆ. ಅಂದರೆ ಕಾಳಿ ನದಿಗೆ ಪ್ರತಿ ೪೦ ಕಿ.ಮಿ.ಗೆ ಒಂದು ಅಣೆಕಟ್ಟು ಮತ್ತು ೧೧ ಕಿ.ಮಿ.ಗೆ ಒಂದು ವಿದ್ಯುತ್ ಉತ್ಪಾದನಾ ಘಟಕ! ಇಷ್ಟೆಲ್ಲಾ ಆದ ಮೇಲೂ ದಾಂಡೇಲಿ ಸಮೀಪದ ’ಮಾವ್ಲಿಂಗಿ’ ಎಂಬಲ್ಲಿ ಕಾಳಿ ನದಿಗೆ ೫ನೇ ಅಣೆಕಟ್ಟನ್ನು ನಿರ್ಮಿಸುವ ತಯಾರಿ ನಡೆದಿತ್ತು. ಆದರೆ ’ಕಾಳಿ ಬಚಾವೋ ಆಂದೋಲನ’ದ ವ್ಯಾಪಕ ವಿರೋಧದ ನಡುವೆ ಸರಕಾರ ಈ ಯೋಜನೆಯನ್ನು ಸದ್ಯಕ್ಕೆ ರದ್ದುಗೊಳಿಸಿದೆ.

ಈ ೬ ಅಣೆಕಟ್ಟುಗಳಲ್ಲಿ ಒಂದೇ ಒಂದನ್ನು ನೀರಾವರಿ/ಕೃಷಿ ಸಂಬಂಧಿತ ಯೋಜನೆಗಾಗಿ ನಿರ್ಮಿಸಲಾಗಿಲ್ಲ. ಎಲ್ಲವನ್ನೂ ವಿದ್ಯುತ್ ಉತ್ಪಾದನೆಯ ಸಲುವಾಗಿ ನಿರ್ಮಿಸಲಾಗಿದೆ. ಈ ಅಣೆಕಟ್ಟುಗಳ ನಿರ್ಮಾಣದಿಂದ ಅಗಾಧ ಪ್ರಮಾಣದಲ್ಲಿ ದಟ್ಟ ಕಾಡುಗಳು (೩೬,೦೦೦ ಎಕರೆಗಳಷ್ಟು) ಮತ್ತು ಸಮೃದ್ಧ ಹಳ್ಳಿಗಳು (೨೮,೦೦೦ ಎಕರೆಗಳಷ್ಟು) ಕಾಳಿ ಹಿನ್ನೀರಿನ ಒಡಲನ್ನು ಸೇರಿವೆ. ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಕಾಡು ಮುಳುಗಿ ನಾಶವಾಗಿರುವುದು ಸೂಪಾ ಅಣೆಕಟ್ಟಿನ ಹಿನ್ನೀರಿನಲ್ಲಿ.

ಬುಧವಾರ, ಜುಲೈ 09, 2008

ಹುಲಿಯ ಬಗ್ಗೆ ಒಂದು ಜಾಹೀರಾತು!


ಈ ಜಾಹೀರಾತನ್ನು ಬಹಳ ಇಷ್ಟಪಟ್ಟು ನನ್ನ ಸಂಗ್ರಹದಲ್ಲಿ ಇರಿಸಿದ್ದೆ. ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಹುಲಿ ಕಾಣದೆ ನಾಲ್ಕೈದು ವರ್ಷಗಳಾಗುತ್ತಾ ಬಂದವು. ಮೊನ್ನೆ ಅಲ್ಲಿಗೆ ರಣಥಂಬೋರ್-ನಿಂದ ಯುವ ಗಂಡು ಹುಲಿಯೊಂದನ್ನು ತಂದು ಬಿಟ್ಟರಂತೆ. ಆಗ ಈ ಜಾಹೀರಾತು ನೆನಪಾಯಿತು. ಕೆಲವು ದಿನಗಳ ಹಿಂದೆ ’ವಕ್ರದಂತ’ದಲ್ಲಿ ಜಾಹೀರಾತುಗಳ ಬಗ್ಗೆ ಲೇಖನ ಬಂದಾಗ ಈ ಜಾಹೀರಾತು ಮತ್ತೊಮ್ಮೆ ನೆನಪಾಯಿತು. ಮೊನ್ನೆ ’ಎಲ್ಲಾ ನೋಟಗಳಾಚೆ ಇನ್ನೊಂದು ಚಿತ್ರವಿದೆ’ಯಲ್ಲಿ ಈ ಲೇಖನ ಓದಿದಾಗ ಮಗದೊಮ್ಮೆ ಈ ಜಾಹೀರಾತು ನೆನಪಾಗಿ, ವನ್ಯ ಪ್ರೇಮಿಗಳು ಯಾರಾದರು ಈ ಜಾಹೀರಾತನ್ನು ನೋಡದೇ ಇದ್ದಲ್ಲಿ, ನೋಡಿದಂತಾಗಲಿ..ಎಂದು ಇಲ್ಲಿ ಹಾಕಿದ್ದೇನೆ.

ಒಂದೇ ಶಬ್ದದ ಜಾಣ್ಮೆಭರಿತ ಪ್ರಯೋಗದಿಂದ ಈ ಜಾಹೀರಾತು ಎಷ್ಟು ಸುಂದರವಾಗಿ ಸದ್ಯದ ಪರಿಸ್ಥಿತಿಯನ್ನು ಎತ್ತಿ ಹೇಳುತ್ತಿದೆಯಲ್ಲವೇ?

ಸೋಮವಾರ, ಜುಲೈ 07, 2008

ಕೆಳದಿಯ ದೇವಾಲಯಗಳು


ನಿರ್ಮಾಣ: ೧೬ನೇ ಶತಮಾನದ ಆರಂಭದಲ್ಲಿ ಮೊದಲ ಕೆಳದಿ ನಾಯಕ ದೊರೆ ಚೌಡಪ್ಪ ನಾಯಕನಿಂದ.

ಸಾಗರದಿಂದ ೭ ಕಿಮಿ ದೂರದಲ್ಲಿರುವ ಕೆಳದಿ, ಕೆಳದಿ ಸಾಮ್ರಾಜ್ಯದ ರಾಜಧಾನಿಯಾಗಿ ೧೭೫ ವರ್ಷಗಳಷ್ಟು ದೀರ್ಘ ಕಾಲ ಉತ್ತುಂಗದಲ್ಲಿದ್ದ ಸ್ಥಳ. ಇಲ್ಲಿರುವ ದೇವಸ್ಥಾನ ಸಮುಚ್ಚಯದಲ್ಲಿ ೩ ದೇವಾಲಯಗಳಿವೆ - ರಾಮೇಶ್ವರ, ವೀರಭದ್ರೇಶ್ವರ ಮತ್ತು ಪಾರ್ವತಿ ದೇವಸ್ಥಾನಗಳು. ರಾಮೇಶ್ವರ ಮತ್ತು ವೀರಭದ್ರೇಶ್ವರ ದೇವಾಲಯಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದರೆ ಪಾರ್ವತಿ ದೇವಾಲಯವನ್ನು ಕಲ್ಲು ಮತ್ತು ಮರದ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ.

ರಾಮೇಶ್ವರ ದೇವಸ್ಥಾನ ಮಧ್ಯದಲ್ಲಿದೆ. ಎಡಕ್ಕೆ ವೀರಭದ್ರೇಶ್ವರ ಮತ್ತು ಬಲಕ್ಕೆ ಪಾರ್ವತಿ ದೇವಸ್ಥಾನಗಳಿವೆ. ರಾಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನಗಳು ಒಂದೇ ಸೂರಿನಡಿಯಲ್ಲಿದ್ದು ಒಂದು ಸಾಮಾನ್ಯ ಅರ್ಧ ಗೋಡೆ ಇವೆರಡೂ ದೇವಾಲಯಗಳನ್ನು ಬೇರ್ಪಡಿಸುತ್ತದೆ. ಆದರೆ ಎರಡೂ ದೇವಸ್ಥಾನಗಳ ಗರ್ಭಗುಡಿ ಪ್ರತ್ಯೇಕವಾಗಿದ್ದು ನಡುವೆ ತೆರೆದ ಅಂತರವಿದೆ. ಈ ಅಂತರ ದೇವಾಲಯದ ಹಿಂದಿನಿಂದ ಮಾತ್ರ ಗೋಚರಿಸುವುದು. ವೀರಭದ್ರೇಶ್ವರ ದೇವಸ್ಥಾನ ಗರ್ಭಗುಡಿ ಮತ್ತು ಸುಖನಾಸಿಯನ್ನು ಹೊಂದಿದೆ. ಗರ್ಭಗುಡಿಯ ದ್ವಾರದ ಹೊರಗೆ ನೆಲದಲ್ಲಿ ೪ ನೃತ್ಯಪಟುಗಳು ಸ್ವಾಗತ ಕೋರುವ ಉಬ್ಬುಶಿಲ್ಪವಿದೆ.

ಸುಖನಾಸಿಯ ಜಗಲಿಯಲ್ಲಿ ೬ ಕಂಬಗಳಿವೆ. ಛಾವಣಿಯಲ್ಲಿ ನಾಗನ ಕೆತ್ತನೆ ಮತ್ತು ಗಂಡಭೇರುಂಡದ ಅದ್ಭುತ ಕೆತ್ತನೆ ಇದೆ. ರಾಮೇಶ್ವರ ದೇವಸ್ಥಾನ ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನಂದಿ ಅಂತರಾಳದಲ್ಲೇ ಆಸೀನನಾಗಿದ್ದಾನೆ. ದೇವಾಲಯದ ಮುಂದಿರುವ ಧ್ವಜಸ್ತಂಭದ ಬುಡದಲ್ಲಿ ಕೆಳದಿಯ ರಾಣಿ ಚೆನ್ನಮ್ಮಾ ಒಂದು ಪಟ್ಟಿಯನ್ನು ಅಳವಡಿಸಿದ್ದಳು. ಇದರಲ್ಲಿ ರಾಣಿ ಚನ್ನಮ್ಮಾ ಮತ್ತು ಶಿವಾಜಿಯ ಮಗ ರಾಜಾರಾಮನ ಕೆತ್ತನೆಯಿದೆ.