ಭಾನುವಾರ, ಜೂನ್ 08, 2008

ಎರಡು ಕಡಲತೀರಗಳು


ದಿನಾಂಕ: ಎಪ್ರಿಲ್ ೯, ೨೦೦೬.

ನಾನು ಮತ್ತು ಗೆಳೆಯ ಲಕ್ಷ್ಮೀನಾರಾಯಣ(ಪುತ್ತು) ಮುಂಜಾನೆ ೯ಕ್ಕೆ ಬೇಲೆಕಾನ್ ತಲುಪಿದ್ದೆವು. ನಮ್ಮ ಗುರಿ ಪ್ಯಾರಡೈಸ್ ಕಡಲತೀರಕ್ಕೆ ಹೋಗುವುದಾಗಿತ್ತು. ದಾರಿಯಲ್ಲಿ ಸಿಗುವ ಬೇಲೆಕಾನ್ ಕಡಲತೀರದ ಸೌಂದರ್ಯಕ್ಕೆ ಮಾರುಹೋಗಿ ಅಲ್ಲೊಂದಷ್ಟು ಸಮಯವನ್ನು ಕಳೆದೆವು. ನದಿ ಸಮುದ್ರ ಸೇರುವ ಸ್ವಲ್ಪ ಮೊದಲು ಇರುವ ಬೇಲೆಕಾನ್ ಕಡಲತೀರದ ಕೊನೆಯ ಭಾಗ ಅರ್ಧಚಂದ್ರಾಕೃತಿಯಲ್ಲಿದೆ. ಸಮೀಪದಲ್ಲೇ ನಿರ್ಮಿತಗೊಳ್ಳಲಿರುವ ಉಷ್ಣಸ್ಥಾವರ ಅಸ್ತಿತ್ವಕ್ಕೆ ಬಂದರೆ ಈ ಕಡಲತೀರ ತನ್ನ ಅಂದವನ್ನು ಶಾಶ್ವತವಾಗಿ ಕಳಕೊಳ್ಳಲಿದೆ.


ಬೇಲೆಕಾನ್ ಕಡಲತೀರದ ಕೊನೆಯಲ್ಲಿ ಸಣ್ಣ ಬೆಟ್ಟವನ್ನೇರಿ ಒಂದೈದು ನಿಮಿಷ ನಡೆದು ಬೆಟ್ಟದ ಇನ್ನೊಂದು ತುದಿ ತಲುಪಿದರೆ ಪ್ಯಾರಡೈಸ್ ಕಡಲತೀರದ ಮನಮೋಹಕ ನೋಟ. ಯಾವ ಬೆಟ್ಟ/ಜಲಧಾರೆ ನೋಡಿದರೂ ಯಾವುದೇ ಉದ್ಗಾರ ಹೊರಬರದ ಪುತ್ತುವಿನ ಬಾಯಿಯಿಂದ ಅಂದು ’ವ್ಹಾ...’ ಎಂಬ ಉದ್ಗಾರ ಹೊರಬಂತು. ಆ ದೃಶ್ಯ ನೋಡಿದ ಬಳಿಕ ಕೆಳಗಿಳಿಯುವ ತವಕ. ಬೆಟ್ಟದ ಬದಿಯಲ್ಲೇ ಇರುವ ಕಾಲುದಾರಿಯಲ್ಲಿ ಸರಸರನೆ ನಡೆದು ಕಡಲತೀರ ತಲುಪಿದೆವು. ಅಲ್ಲೇ ’ಓಮ್ ಶಾಂತಿ’ ರೆಸಾರ್ಟ್(!?) ನಡೆಸುವ ಮಹಾದೇವ ನಾಯ್ಕರ ಭೇಟಿಯಾಯಿತು. ಬೀಚನ್ನೆಲ್ಲಾ ಅಡ್ಡಾಡಿ ನಂತರ ಬಂದು ಅವರೊಂದಿಗೆ ಹರಟೆ ಹೊಡೆಯೋಣವೆಂದು ಮುನ್ನಡೆದೆವು. ಕಡಲತೀರದಲ್ಲಿ ಮೂರ್ನಾಲ್ಕು ಹೋಟೇಲುಗಳು ಮತ್ತು ಕುಟೀರಗಳು. ಅಲ್ಲಲ್ಲಿ ಬಂಡೆಗಳು. ಮುಂದಕ್ಕೆ ಹೋದಂತೆ ಮತ್ತೂ ಸುಂದರ ದೃಶ್ಯ. ಬೆಟ್ಟವೊಂದಕ್ಕೆ ಸವರಿಕೊಂಡೇ ಈ ಬೀಚ್ ಇರುವುದರಿಂದ ಅಂದಕ್ಕೆ ಸ್ವಲ್ಪ ಹೆಚ್ಚು ಮಾರ್ಕ್ಸ್.


ಮಹಾದೇವ ನಾಯ್ಕರಲ್ಲಿ ಮರಳಿ ಬಂದೆವು. ನಾಯ್ಕರು ಊಟಕ್ಕೆ ಪರೋಟಾ ಮಾಡುವೆನೆಂದಾಗ ಸಮ್ಮತಿಸಿದೆವು. ಆಗ ಎಲ್ಲಿಂದಲೋ ಸಣ್ಣ ದೋಣಿಯೊಂದು ತೀರಕ್ಕೆ ಬರುತ್ತಿರುವುದು ಕಾಣಿಸಿದಾಗ ನಾವಿಬ್ಬರೂ ತೀರದೆಡೆ ಓಡಿದೆವು. ದೋಣಿಯಲ್ಲಿ ವಿವಿಧ ಜಾತಿಯ ಮೀನುಗಳು. ಪುತ್ತುವಿನ ಬಾಯಲ್ಲಿ ಜೊಲ್ಲುರಸರಾಶಿಭರಿತ ನೊರೆ. ಅಕ್ಕ ಪಕ್ಕದ ಹೋಟೇಲಿನವರೂ ಅಲ್ಲಿ ಕೂಡಿದರು. ಅವರೆಲ್ಲರೂ ಆ ಮೀನುಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು. ಕಡಿಮೆ ದರಕ್ಕೆ ಸಿಗುವುದು ಖಾತ್ರಿ ಎಂದಾದಾಗ ಪುತ್ತು ಖರೀದಿ ಮಾಡಿ ಮನೆಗೊಯ್ಯುವ ವಿಚಾರದಲ್ಲಿದ್ದ. ’ಮೀನು ಇರುವ ಚೀಲವಿದ್ದರೆ ಬಸ್ಸಲ್ಲಿ ಹೋಗು, ನನ್ನ ಬೈಕಲ್ಲಿ ನಿನಗೆ ಜಾಗವಿಲ್ಲ....’ ಎಂದು ನಾನು ಹೇಳಿದಾಗ ಆ ವಿಚಾರ ಕೈಬಿಟ್ಟ. ಅದ್ಯಾವುದೋ ಅಪರೂಪದ ಮೀನಂತೆ...ಬಹಳ ದುಬಾರಿಯಂತೆ...ಬಹಳ ರುಚಿಯಂತೆ...ಬಹಳ ವಿರಳವಾಗಿ ಸಿಗುವುದಂತೆ...ಇಲ್ಲಿ ಅತಿ ಕಡಿಮೆ ದರಕ್ಕೆ ಸಿಗುತ್ತಿರುವುದರಿಂದ ಮನೆಗೊಯ್ದರೆ ರಾತ್ರಿ ಒಳ್ಳೆ ಊಟ ಆಗುತ್ತದಂತೆ... ಎಂದು ಪರಿಪರಿಯಾಗಿ ಬೇಡುತ್ತಾ ಇದ್ದ.


ಮಹಾದೇವ ನಾಯ್ಕರ ಕೈ ರುಚಿಗೆ ಜಯವಾಗಲಿ. ಅದ್ಭುತ ರುಚಿಯ ಪಲ್ಯ ಮತ್ತು ತುಪ್ಪ ಸಾರಿದ ಹಲವಾರು ಪರೋಟಾಗಳನ್ನು ಉದರಕ್ಕಿಳಿಸಿದ ಬಳಿಕ ಅಲ್ಲಿಂದ ಸದ್ಯಕ್ಕೆ ಹೊರಡುವ ವಿಚಾರವನ್ನು ನಾವಿಬ್ಬರೂ ಬದಿಗೆ ಸರಿಸಿದೆವು. ದಟ್ಟ ಕಾಡಿನ ನಡುವೆ ಬೆಟ್ಟವೊಂದರ ಮೇಲಿರುವ ’ನಿಶಾನೆ’ ಎಂಬ ಸುಂದರ ಹಳ್ಳಿಯೊಂದಕ್ಕೆ ಭೇಟಿ ನೀಡುವ ಸ್ಕೆಚ್ ಹಾಕಿದ್ದೆವು. ಆದರೆ ಪ್ಯಾರಡೈಸ್ ಕಡಲತೀರದ ಅಂದ ಮತ್ತು ಅಲ್ಲಿನ ವಾತಾವರಣ ನಮ್ಮನ್ನು ಅದ್ಯಾವ ಮಟ್ಟಕ್ಕೆ ಮೋಡಿಗೊಳಪಡಿಸಿತೆಂದರೆ ಅಲ್ಲೇ ಮರಳಿನಲ್ಲಿ ಚಾಪೆ ಹಾಕಿಕೊಂಡು ತೆಂಗಿನಮರಗಳ ನೆರಳಿನಲ್ಲಿ ಗೊರಕೆ ಹೊಡೆಯಲು ಶುರುಮಾಡಿದೆವು. ಪುತ್ತುವಂತೂ ಮಹಾದೇವ ನಾಯ್ಕರು ಎರಡು ತೆಂಗಿನಮರಗಳಿಗೆ ಕಟ್ಟಿ ತೂಗುಹಾಕಿದ್ದ ’ತೂಗುಚಾಪೆ’ಯಲ್ಲಿ ಮಲಗಿ ಗಾಳಿಗೆ ಓಲಾಡುತ್ತಾ ನಿದ್ರಾವಶನಾದ. ಅಂದು ನಿಶಾನೆಗೆ ಹೋಗದೇ ಅಲ್ಲೇ ಮಲಗಿದ್ದು, ಇಂದಿನವರೆಗೂ ನಿಶಾನೆಗೆ ಹೋಗಲಾಗಿಲ್ಲ. ಯಾವಾಗ ಆ ಕಾಲ ಕೂಡಿಬರುತ್ತೋ?


ಕಡಲ ತೀರಗಳನ್ನು ಅಷ್ಟಾಗಿ ಇಷ್ಟಪಡದ ನಾನು ಕಡಲ ತೀರವೊಂದನ್ನು ತುಂಬಾ ’ಎಂಜಾಯ್’ ಮಾಡಿದ್ದು ಪ್ಯಾರಡೈಸ್ ಕಡಲತೀರದಲ್ಲಿ. ಒಂದು ಸಂಪೂರ್ಣ ದಿನ ಅಲ್ಲೇ ಅಡ್ದಾಡುತ್ತಾ, ಮರಳಿನಲ್ಲಿ ಹೊರಳಾಡುತ್ತಾ, ಮಹಾದೇವ ನಾಯ್ಕರೊಂದಿಗೆ ಹರಟೆ ಹೊಡೆಯುತ್ತಾ ಕಳೆದುಬಿಟ್ಟೆವು. ತುಂಬಾ ಮೆಮೋರೇಬಲ್.

13 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ರಾಜೇಶ್ ಅವರೆ,

ಇಂತಹ ಸುಂದರ ಪ್ರದೇಶಗಳ ಪರಿಚಯ ಹಾಗೂ ಚಿತ್ರಗಳನ್ನು ನೀಡುತ್ತಿರುವ ನಿಮ್ಮನ್ನು ಅಭಿನಂದಿಸಬೇಕೋ ಇಲ್ಲಾ ನಾನು ಹೋಗಲಾಗದುದಕ್ಕೆ ಪರಿತಪಿಸಬೇಕೋ ತಿಳಿಯದಾಗಿದೆ. ಸ್ವಲ್ಪ ಅಸೂಯೆಯೂ ಮೂಡಿತು..;-)ಧನ್ಯವಾದಗಳು.

Aravind GJ ಹೇಳಿದರು...

ನಿಮ್ಮ ಲೇಖನ ಓದುತ್ತಿದ್ದ ಹಾಗೆ ಅಲ್ಲಿಗೆ ಹೋಗಬೇಕು ಅನ್ನಿಸ್ತಾ ಇದೆ!!

ವಿ.ರಾ.ಹೆ. ಹೇಳಿದರು...

ಪುಣ್ಯ ಸಾರ್ ನಿಮ್ದು. ಇಂತಹ ಸುಂದರ ಜಾಗಗಳಿಗೆಲ್ಲಾ ಹೋಗ್ತೀರ. ನಾವು ಹೋಗಬೇಕು ಅಂದ್ರೂ ಆಗೋಲ್ಲ :(

ನಿರ್ಜನ ಬೀಚಿನ ಅನುಭವ.. ಆಹ್ !

ಅಮರ ಹೇಳಿದರು...

ತಡದಿ ಉಷ್ಣ ಸ್ಥಾವರದ ಬಗ್ಗೆ ವರುಷದ ಹಿಂದೆ ಪತ್ರಿಕೆಗಳಲ್ಲಿ ವರದಿಯಾದಾಗ ಬೆಲೆಕಾನಕ್ಕೆ ಭೇಟಿಕೊಡಬೇಕೆಂದು ಅಂದುಕೊಂಡಿದ್ದೆವು...ಇನ್ನೂ ಕಾಲಕೂಡಿ ಬಂದಿಲ್ಲ ನೋಡಿ. ಉಷ್ಣ ಸ್ಥಾವರದ ವಿಚಾರ ಎಲ್ಲಿಗೆ ಬಂದು ಮತ್ತೆ ಅದರ ಬಗ್ಗೆ ವರದಿಗಳಿಲ್ಲ.

"ನಿಸರ್ಗ" ದಲ್ಲಿ ಕಾಳಿನದಿಯ ಬಗೆಗಿನ ನಿಮ್ಮ ಬರಹ ಓದಿದೆ... ಚನ್ನಾಗಿದೆ.
-ಅಮರ

Srikanth - ಶ್ರೀಕಾಂತ ಹೇಳಿದರು...

ನೀವು ಹೇಳಿರುವ ಜಾಗಗಳೆಲ್ಲಾ ನನಗೆ ಹೊಸತು. ಆದಷ್ಟು ಬೇಗ ಒಮ್ಮೆ ಹೋಗಿ ಬರಬೇಕು.

ರಾಧಿಕಾ ವಿಟ್ಲ ಹೇಳಿದರು...

ನಿಮ್ಮ ಬ್ಲಾಗು ತುಂಬ ಚೆನ್ನಾಗಿದೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಬಂದ ನನಗೆ, ಎಲ್ಲಿ ಬರವಣಿಗೆ ಸತ್ತು ಹೋಗುತ್ತದೋ ಅನಿಸಿ ಬ್ಲಾಗು ಬರೆಯಲು ಶುರು ಮಾಡಿದೆ. ಆದರೆ, ಮಾಧ್ಯಮ ಜಗತ್ತಿಗೆ ಬಂದ ಮೇಲೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಮಾತ್ರ ಚಾರಣ ಭಾಗ್ಯ ಸಿಗುತ್ತಿದೆ. ನಿಮ್ಮ ಬ್ಲಾಗು ಈಗ ನನ್ನ ಆ ಕೊರತೆಯನ್ನೂ ನೀಗಿಸುತ್ತಿದೆ. ಒಳ್ಳೆ ಪ್ರಯತ್ನ. ಬರೆಯುತ್ತಿರಿ.
- ರಾಧಿಕಾ

Rakesh Holla ಹೇಳಿದರು...

Tumba chennagide....

VENU VINOD ಹೇಳಿದರು...

ರಾಜೇಶ್,
ಮುಂದೆಂದಾದರೂ ನಿಶಾನೆಗೆ ಹೋಗುವ ನಂಗೂ ಹೇಳಿ :)

ರಾಜೇಶ್ ನಾಯ್ಕ ಹೇಳಿದರು...

ತೇಜಸ್ವಿನಿ,
ಅಭಿನಂದನೆ ತುಂಬಾ ದೊಡ್ಡ ಮಾತು. ಈ ರೀತಿಯ ಸ್ನೇಹಭರಿತ ಅಸೂಯೆಗೆ ನನ್ನಲ್ಲಿ ಸ್ವಾಗತವಿದೆ.

ಅರವಿಂದ್ ಮತ್ತು ವಿಕಾಸ್,
ಸಮಯ ಸಿಕ್ಕಾಗ ಭೇಟಿ ನೀಡುವಿರಂತೆ. ಒಂದು ದಿನದ ಮಟ್ಟಿಗೆ ಸೋಮಾರಿಯಂತೆ ಕಾಲ ಕಳೆಯಲು ಯೋಗ್ಯ ಸ್ಥಳ.

ಅಮರ್,
ಉಷ್ಣ ಸ್ಥಾವರಕ್ಕೆ ಪ್ರಬಲ ಸ್ಥಳೀಯ ವಿರೋಧವಿದೆ. ಪರಿಸರವಾದಿಗಳೂ ವಿರೋಧಕ್ಕೆ ದನಿಗೂಡಿಸಿದ್ದಾರೆ. ಹಿಂದಿನ ಸರಕಾರದ ಪೂರ್ಣ ಪ್ರಯತ್ನದ ಬಳಿಕವೂ ಕೆಲಸ ಮುಂದೆ ಸಾಗಲಿಲ್ಲ. ಸ್ಥಳೀಯ ಸಚಿವರೂ ಯೋಜನೆಯನ್ನು ವಿರೋಧಿಸುತ್ತಾ ಬಂದಿರುವುದರಿಂದ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಆದರೆ ಈಗ ಅಂಕೋಲಾ ಕ್ಷೇತ್ರ ಮಾಯವಾಗಿ ಕಾರವಾರಕ್ಕೆ ಸೇರಿಕೊಂಡಿದೆ. ಅಂಕೋಲಾದ ಮಾಜಿ ಶಾಸಕರು (ಕಾಗೇರಿ) ಶಿರಸಿಗೆ ವಲಸೆ ಹೋಗಿ ಅಲ್ಲಿ ಆರಿಸಿ ಬಂದಿದ್ದಾರೆ. ಇವರು ಈ ಯೋಜನೆಯನ್ನು ಪ್ರಬಲವಾಗಿ ವಿರೋಧಿಸಿ ಸ್ಥಳೀಯರ ವಿಶ್ವಾಸ ಗಳಿಸಿದ್ದರು. ಕಾರವಾರದಲ್ಲಿ ಗೆದ್ದಿರುವ ಅಸ್ನೋಟಿಕರ್ ಕಾರವಾರ ಬಂದರಿನಲ್ಲಿ ಅದಿರು ಹಣ ಗಳಿಸುವುದರಲ್ಲೇ ಮಗ್ನನಾಗಿದ್ದಾನೆಯೇ ಹೊರತು ಕಾರವಾರ ಪಟ್ಟಣದಾಚೆ ಏನಿದೆ ಏನಾಗುತ್ತಿದೆ ಎಂಬ ಪರಿವೆಯೇ ಇಲ್ಲದವನಾಗಿದ್ದಾನೆ. ಈತನಿಂದ ಉಷ್ಣ ಸ್ಥಾವರ ವಿರೋಧಿಗಳಿಗೆ ಬೆಂಬಲ ದೊರಕುವುದು ಸಂಶಯ. ಕಾದು ನೋಡಬೇಕಷ್ಟೆ.

ಶ್ರೀಕಾಂತ್,
ಉಡುಪಿಯಿಂದ ಕದಲುವ ಮುನ್ನ ಭೇಟಿ ನೀಡಲು ಪ್ರಯತ್ನಿಸಿ.

ರಾಧಿಕಾ,
"ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಬಂದ ನನಗೆ, ಎಲ್ಲಿ ಬರವಣಿಗೆ ಸತ್ತು ಹೋಗುತ್ತದೋ ಅನಿಸಿ ಬ್ಲಾಗು ಬರೆಯಲು ಶುರು ಮಾಡಿದೆ" - ಈ ಸಾಲು ಓದಿ ಬಹಳ ಸಂತೋಷವಾಯಿತು. ಬರವಣಿಗೆಯ ಚಟವನ್ನು ಬಿಡಲು ಮನಸಾಗುವುದಿಲ್ಲವಲ್ಲವೇ? ಬರೆಯುತ್ತಾ ಇದ್ದರೆ ಮಾತ್ರ ಬರವಣಿಗೆ ಜೀವಂತವಾಗಿರುವುದು ಎಂಬ ಮಾತು ಸತ್ಯ. ನಿಮ್ಮ ಮೊದಲ ಬರಹ ಬಹಳ ಚೆನ್ನಾಗಿದೆ. ಸಮಯ ಸಿಕ್ಕಾಗ ಬರೆಯುತ್ತಾ ಇರಿ.

ರಾಕೇಶ್,
ಥ್ಯಾಂಕ್ಸ್ ಮಾರಾಯ....

ವೇಣು,
ನಿಶಾನೆ! ಯಾವಾಗ ಹೋಗುವುದೋ ಏನೋ... ನೋಡೋಣ.

raghavendra C.V. ಹೇಳಿದರು...

Hi Rajesh,

Nemma anubhava nangu mathu nanna gelayarigu saha agidye. Nanna obba gelaya santhosh na blog attach madideni. nodi
http://kaaduharate.blogspot.com/

ರಾಜೇಶ್ ನಾಯ್ಕ ಹೇಳಿದರು...

ರಾಘವೇಂದ್ರ,
ಕಾಡುಹರಟೆಯಲ್ಲಿ ಓದಿದೆ. ಚೆನ್ನಾಗಿತ್ತು ಬೀಚ್ ಟ್ರೆಕ್.

Annapoorna Daithota ಹೇಳಿದರು...

Rajesh,
Naanoo hogidde ee jagagalige 2006 ralli. Nijakkoo bahala sundaravaada jaagagalu...
blog nalli ee nenapannilisiddene, neevu bahusha odirutteeri...

ರಾಜೇಶ್ ನಾಯ್ಕ ಹೇಳಿದರು...

ಅನ್ನಪೂರ್ಣ,
ನಿಮ್ಮ ಆ ಬ್ಲಾಗ್ ಲೇಖನವನ್ನು ಎಂದೋ ಓದಿದ್ದೇನೆ. ಅಂತರ್ಜಾಲದಲ್ಲಿ ನಾನು ಓದುವುದೇ ಪ್ರಯಾಣ/ಚಾರಣ ಸಂಬಂಧಿತ ಲೇಖನಗಳು. ಹಾಗಿರುವಾಗ ಆ ಲೇಖನವನ್ನು ಓದದೇ ಇರುಉತೇನೆಯೇ...