ಭಾನುವಾರ, ಜೂನ್ 01, 2008

ಮೆಟ್ಕಲ್ ಗುಡ್ಡ


ಮೆಟ್ಕಲ್ ಗುಡ್ಡ ಒಂದು ಸಣ್ಣ ಬೆಟ್ಟವಾಗಿದ್ದರಿಂದ ಇದನ್ನು ನಾನು ನಿರ್ಲಕ್ಷಿಸಿದ್ದೆ. ಈ ಬೆಟ್ಟದ ಮೇಲಿಂದ ಕಾಣುವ ದೃಶ್ಯ ಬಹಳ ಚೆನ್ನಾಗಿದೆ ಎಂದು ಅಲ್ಲಿಗೆ ನಾಲ್ಕಾರು ಬಾರಿ ಭೇಟಿ ನೀಡಿದ್ದ ರಾಕೇಶ ಹೊಳ್ಳ ತನ್ನ ಅಭಿಪ್ರಾಯ ತಿಳಿಸಿದಾಗ, ಎಲ್ಲಾದರೂ ತೆರಳಲು ’ಶಾರ್ಟ್ ನೋಟೀಸ್’ನಲ್ಲೇ ತಯಾರಾಗುವ ಮಾಧವರಿಗೆ ಫೋನಾಯಿಸಿ, ಅವರೊಂದಿಗೆ ಯಮಾಹವನ್ನು ಮೆಟ್ಕಲ್ ಗುಡ್ಡದೆಡೆ ದೌಡಾಯಿಸಿದೆ.


ಬೆಟ್ಟವನ್ನೇರಲು ಮೆಟ್ಟಿಲುಗಳಿವೆ, ರಸ್ತೆಯೂ ಇದೆ. ಮೆಟ್ಟಿಲುಗಳಿರುವ ದಾರಿ ನಮಗೆ ಸಿಗಲಿಲ್ಲವಾದ್ದರಿಂದ ರಸ್ತೆಯ ದಾರಿಯಲ್ಲೇ ತೆರಳಿದೆವು. ಮಣ್ಣಿನ ರಸ್ತೆಯ ಈ ದಾರಿಯಲ್ಲಿ ಒಂದು ಕಿ.ಮಿ. ದೂರದವರೆಗೆ ಬೈಕನ್ನು ಚಲಾಯಿಸಿ ನಂತರ ನಡೆಯಲು ಆರಂಭಿಸಿದೆವು. ಮೆಟ್ಕಲ್ ಗುಡ್ಡದ ತುದಿವೆರೆಗೂ ಜೀಪ್ ರಸ್ತೆಯಿದ್ದರೂ ಕೆಲವೊಂದೆಡೆ ರಸ್ತೆ ಬಹಳ ಕಡಿದಾಗಿದೆ. ಆದ್ದರಿಂದ ನಾನು ಮತ್ತು ಮಾಧವ ನಡೆಯುವುದೇ ಸೂಕ್ತ ಎಂದು ನಿರ್ಧರಿಸಿದೆವು.


ಬೆಟ್ಟದ ತುದಿಯವರೆಗೂ ಚೆನ್ನಾದ ಕಾಡಿದೆ. ಒಂದೆರಡು ’ಯು’ ತಿರುವುಗಳು. ರಸ್ತೆಯ ಏರು ನೋಡಿದಾಗ, ಬೈಕನ್ನು ಹಿಂದೆಯೇ ನಿಲ್ಲಿಸಿದ್ದು ಒಳ್ಳೆಯ ನಿರ್ಧಾರವೆಂದೆನಿಸತೊಡಗಿತು. ಬೇಗನೇ ಸುಸ್ತಾಗುತ್ತಿದ್ದ ನಾನು ಅಲ್ಲಲ್ಲಿ ಕಿತ್ತಳೆ ಹಣ್ಣುಗಳನ್ನು ಕಬಳಿಸುತ್ತಾ ೫೦ ನಿಮಿಷದಲ್ಲಿ ತುದಿ ತಲುಪಿದೆವು. ಮೆಟ್ಕಲ್ ಗುಡ್ಡದ ತುದಿಗಿಂತ ಸುಮಾರು ೩೦೦ ಮೀಟರ್ ಮೊದಲು ಕಾಲುದಾರಿಯೊಂದು ಕೆಳಗೆ ಕವಲೊಡೆಯುತ್ತದೆ. ಅದೇ ಮೆಟ್ಟಿಲುಗಳ ದಾರಿ. ಆ ದಾರಿಯಾಗಿ ಕೆಲವು ಹುಡುಗರು ಬರುತ್ತಾ ಇದ್ದರು.


ಮೆಟ್ಕಲ್ ಗುಡ್ಡದ ತುದಿಯಲ್ಲಿ ಗಣಪತಿ ದೇವಾಲಯವಿದೆ. ೩ ದಿಕ್ಕುಗಳಲ್ಲಿ ಕಡಿದಾದ ಪ್ರಪಾತ ಹೊಂದಿರುವ ಈ ಬೆಟ್ಟದ ಮೇಲೂ ಶಿವಪ್ಪ ನಾಯಕ ಸಣ್ಣ ಕೋಟೆಯೊಂದನ್ನು ನಿರ್ಮಿಸಿದ ಕುರುಹುಗಳಿವೆ.


ಭಾರತದಲ್ಲೇ ಎತ್ತರದ ಜಲಧಾರೆ ಎಂದು ಹವಾ ಮಾಡಿರುವ ಕುಂಚಿಕಲ್ ಜಲಧಾರೆಯ ೩ನೇ ಹಂತ ದೂರದಲ್ಲಿ ಕಾಣುತ್ತಿತ್ತು. ಮಳೆಗಾಲದಲ್ಲಿ ಬಂದರೆ ಈ ಜಲಧಾರೆಯ ಅಕ್ಕ ಪಕ್ಕಗಳಲ್ಲಿ ಇನ್ನೆರಡು ಜಲಧಾರೆಗಳು! ಸುಗ್ಗಿ!! ಆ ಅದ್ಭುತ ದೃಶ್ಯಾವಳಿಯನ್ನು ಕಾಣಲು ಮಳೆಗಾಲದಲ್ಲಿ ಇಲ್ಲಿಗೆ ಇನ್ನೊಂದು ಭೇಟಿ ನಿಶ್ಚಿತ. ಆಗ ಮೆಟ್ಟಿಲುಗಳ ದಾರಿಯಲ್ಲಿ ಬರಬೇಕು.


ಇನ್ನೊಂದೆಡೆ ವಾರಾಹಿ ನದಿ ಹರಿಯುವ ದೃಶ್ಯ ಮತ್ತು ಅಗಾಧ ಗಾತ್ರದ ಬೆಟ್ಟಗಳು ಗೋಡೆಯಂತೆ ನಿಂತಿರುವ, ಎಷ್ಟು ನೋಡಿದರೂ ಸಾಲದೆನಿಸುವ ಇನ್ನೂ ಸುಂದರ ದೃಶ್ಯ. ದೇವಸ್ಥಾನದ ಬದಿಯಲ್ಲಿ ಎಚ್ಚರದಿಂದ ಸ್ವಲ್ಪ ಕೆಳಗಿಳಿದರೆ ವಿಶಾಲ ಸ್ಥಳ. ಇಲ್ಲಿ ವಿಶ್ರಮಿಸುತ್ತಾ ಕಣ್ಣುಗಳಿಗೆ ಲಭ್ಯವಿದ್ದ ಪ್ರಕೃತಿಯ ರಸದೌತಣವನ್ನು ಸವಿಯುತ್ತಾ ಉಳಿದ ಕಿತ್ತಳೆಗಳನ್ನು ಮುಗಿಸಿದೆವು.

ಮಾಹಿತಿ: ರಘುನಂದನ ಭಟ್ಟ ಹಾಗೂ ರಾಕೇಶ್ ಹೊಳ್ಳ

9 ಕಾಮೆಂಟ್‌ಗಳು:

Aravind GJ ಹೇಳಿದರು...

ಮತ್ತೊಂದು ಹೊಸ ಜಾಗದ ಪರಿಚಯ ಮಾಡಿಸಿದ್ದೀರ. ಮಳೆಗಾಲದಲ್ಲಿ ಹೋಗಬೇಕು. ಕುಂಚಿಕಲ್ ಕೂಡ ನೋಡಿದ ಹಾಗೆ ಆಗುತ್ತದೆ.

ಸಿಂಧು sindhu ಹೇಳಿದರು...

ರಾಜೇಶ್,

ತುಂಬ ದಿನಗಳಿಂದ ಎಲ್ಲೂ ಹೋಗದ ನನಗೆ ನಿಮ್ಮ ಲೇಖನಗಳು ತಂಪೆರೆಯುತ್ತಿದೆ. ವರ್ಣನೆಗೆ ಮೀರಿದ ಸರಳತೆ ಮತ್ತು ನೇರವಾದ ಬರಹಗಳ ನಿಮ್ಮ ಈ ಪರಿಸರಪ್ರೀತಿ ನನಗೆ ತುಂಬ ಇಷ್ಟ.

ಇನ್ನೂ ತುಂಬ ಕಡೆ ಹೋಗಿ ಬಂದು ಬರೆಯಿರಿ.

ಪ್ರೀತಿಯಿಂದ
ಸಿಂಧು

Harisha - ಹರೀಶ ಹೇಳಿದರು...

ಇದಕ್ಕೆ ಹೋಗುವ ದಾರಿಯನ್ನು ಸ್ವಲ್ಪ ವಿವರವಾಗಿ ತಿಳಿಸುತ್ತೀರಾ?

Harisha - ಹರೀಶ ಹೇಳಿದರು...

ರಾಜೇಶ್, ನೀವು ಕಳುಹಿಸಿರುವ ಈಮೇಲ್ ಇದ್ ಸರಿಯಾಗಿದೆ. ಆದರೆ ದಯವಿಟ್ಟು ಆದಷ್ಟು ಬೇಗ ಆ ಕಮೆಂಟ್ ಅನ್ನು ಡಿಲೀಟ್ ಮಾಡಿರಿ. ನನ್ನ ಈಮೇಲ್ ಐಡಿ ಸ್ಪ್ಯಾಮ್ ಗೆ ಒಳಗಾಗುವ ಸಾಧ್ಯತೆಯಿದೆ.

ಮಾಹಿತಿಗಾಗಿ ಧನ್ಯವಾದಗಳು.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ನಾನೂ ಮಳೆಗಾಲದ ಭೇಟಿಗಾಗಿ ಕಾಯುತ್ತಿದ್ದೇನೆ.

ಸಿಂಧು,
ಲೇಖನಗಳು ಓದುವವರಿಗೆ ಮಾಹಿತಿ ನೀಡಿದರೆ ನನಗೆ ಸಂತೋಷ. ಇನ್ನು ನಿಮಗೆ ಖುಷಿ ನೀಡಿದರೆ ಇನ್ನೂ ಸಂತೋಷ. ಹೋದ ಎಲ್ಲಾ ಜಾಗಗಳ ಬಗ್ಗೆಯೂ ಬರೆಯೋದಂತೂ ಇದ್ದೇ ಇದೆ.

ಹರೀಶ,
ನೀವು ಕೇಳಿದ ಮಾಹಿತಿಯನ್ನು ನಿಮ್ಮ ವಿ-ಅಂಚೆ ವಿಳಾಸಕ್ಕೆ ಕಳಿಸಿದ್ದೇನೆ.

ಸತೀಶ್ ಕುಮಾರ್ ಜಿ ಹೇಳಿದರು...

Margasoochi ille neediddare aasaktharige upayogavaguthe

Srikanth - ಶ್ರೀಕಾಂತ ಹೇಳಿದರು...

"ಮಳೆಗಾಲದಲ್ಲಿ ಬಂದರೆ ಈ ಜಲಧಾರೆಯ ಅಕ್ಕ ಪಕ್ಕಗಳಲ್ಲಿ ಇನ್ನೆರಡು ಜಲಧಾರೆಗಳು! ಸುಗ್ಗಿ!! ಆ ಅದ್ಭುತ ದೃಶ್ಯಾವಳಿಯನ್ನು ಕಾಣಲು ಮಳೆಗಾಲದಲ್ಲಿ ಇಲ್ಲಿಗೆ ಇನ್ನೊಂದು ಭೇಟಿ ನಿಶ್ಚಿತ."

ಮೆಟ್ಕಲ್ ಗುಡ್ಡಕ್ಕೆ ಹೋಗೋ ಆಸೆ ಹುಟ್ಟಿಸಿದ್ದೀರ! ಮಳೆಗಾಲದ ಭೇಟಿ ಯಾವಾಗ? ಸಾಧ್ಯವಾದರೆ ನಾನೂ ಬರ್ತೀನಿ.

Keshav Murthy ಹೇಳಿದರು...

Hello Rajesh
Kunchikal falls ge hoguva daari yavudu? hosangadi inda hogbahuda?ega october alli hoglike agtada?

dayavittu nanna email id ge reply madi
nanna id: mkmurthy007@gmail.com

Knp web ಹೇಳಿದರು...

Super narration.Due to this busy schedule not able to visit these type of places...... having 3,4 days leave... going to home... relatives home... I'm scared..... life will end like this.......!!!!!!!!