ಶನಿವಾರ, ಮೇ 10, 2008

ವೆಂಕಟಗಿರಿಯ ತುದಿಗೆ...


ಮಾರ್ಚ್ ೨೦೦೮ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಶಿರಾಡಿ ಶ್ರೇಣಿಯಲ್ಲಿರುವ ವೆಂಕಟಗಿರಿ ಬೆಟ್ಟಕ್ಕೆ. ದಿನೇಶ್ ಹೊಳ್ಳರ ನೇತೃತ್ವದಲ್ಲಿ ಬೆಟ್ಟದ ತಪ್ಪಲಲ್ಲಿರುವ ಹಳ್ಳಿ ತಲುಪಿ ಅಲ್ಲಿನ ನಿವಾಸಿ ರಾಜಣ್ಣರ ಮಾರ್ಗದರ್ಶನದಲ್ಲಿ ಚಾರಣ ಆರಂಭಿಸಿದಾಗ ಸಮಯ ೧೧ ಆಗಿತ್ತು. ಹಳ್ಳಿಯ ಪರಿಧಿ ದಾಟಿದ ಕೂಡಲೇ ಪ್ರಕೃತಿಯ ಸಿರಿ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ.

ಸಕಲೇಶಪುರ - ಮಂಗಳೂರು ರೈಲು ಮಾರ್ಗವನ್ನು ನಿರ್ಮಿಸುವ ಸಮಯದಲ್ಲಿ ಕಾಡಿನ ನಡುವೆ ಮಾಡಿದ್ದ ರಸ್ತೆಯಲ್ಲಿ ೪೫ ನಿಮಿಷ ಕ್ರಮಿಸಿದ ಬಳಿಕ ರೈಲು ಹಳಿಯನ್ನು ತಲುಪಿದೆವು. ಸುರಂಗವೊಂದರಿಂದ ಹೊರಬಂದ ರೈಲು ಹಳಿ ಕೂಡಲೇ ಸೇತುವೆಯೊಂದರ ಮೂಲಕ ಹಾದುಹೋಗುವ ಸ್ಥಳ. ಸ್ವಲ್ಪ ಹೊತ್ತಿನ ಬಳಿಕ ಗೂಡ್ಸ್ ರೈಲೊಂದು ಹಾದುಹೋಯಿತು. ಸುರಂಗದ ಬಳಿಯೇ ಎಡಕ್ಕಿರುವ ರಸ್ತೆಯಲ್ಲಿ ೧೫ ನಿಮಿಷ ನಡೆದ ಬಳಿಕ ವೆಂಕಟಗಿರಿಯನ್ನೇರಲು ಆರಂಭಿಸಿದೆವು. ನಂತರ ಮುಂದಿನ ೧೦೦ ನಿಮಿಷಗಳ ಕಾಲ ಬೆಟ್ಟ ಏರಿದ್ದೇ. ಆರಂಭದ ೨೦ ನಿಮಿಷಗಳಷ್ಟು ಸಮಯ ಕಾಡಿನ ನೆರಳಿತ್ತು. ನಂತರ ಬಿಸಿಲಿನಲ್ಲೇ ಚಾರಣ. ಆದರೆ ಮಳೆ ಬೀಳುವ ವಾತಾವರಣವಿದ್ದಿದ್ದರಿಂದ ತಂಪಾದ ಗಾಳಿ ಬೀಸುತ್ತಿತ್ತು.


ಸ್ವಲ್ಪ ಮೇಲಕ್ಕೇರಿದ ಬಳಿಕ ಎಡ ಪಾರ್ಶ್ವದಲ್ಲಿ ಮುಗಿಲಗಿರಿ ಪರ್ವತದ ಅದ್ಭುತ ನೋಟ. ಮುಗಿಲೆತ್ತರಕ್ಕೆ ಎದ್ದು ನಿಂತಿರುವ ಅಭೇದ್ಯ ಗೋಡೆಯಂತೆ ಕಾಣುವುದರಿಂದ ಮುಗಿಲಗಿರಿ ಎಂಬ ಹೆಸರು. ಮುಗಿಲಗಿರಿಯ ಎದುರುಗೆ ಯಾವಾಗಲು ಮೇಘಗಳ ಸಾಲೊಂದು ಮುಂದಕ್ಕೆ ಹೋಗಲಾಗದೆ ಎತ್ತ ಹೋಗುವುದೆಂದು ತೋಚದೆ ನಿಲ್ಲುವ ದೃಶ್ಯ ಸಾಮಾನ್ಯ. ಎಲ್ಲಾ ಬೆಟ್ಟಗಳು ಸ್ವಲ್ಪವಾದರೂ ಇಳಿಜಾರಾದ ಮೇಲ್ಮೈಯನ್ನು ಹೊಂದಿರುವುದರಿಂದ ಮೋಡಗಳು ನಿಧಾನವಾಗಿಯಾದರೂ ಸರಿ ಬೆಟ್ಟಗಳ ಮೇಲ್ಮೈಯನ್ನು ಸವರಿ ದಾಟಿ ಹೋಗುತ್ತವೆ. ಆದರೆ ಮುಗಿಲಗಿರಿಯ ಮೇಲ್ಮೈ ಇಳಿಜಾರಾಗಿರದೆ ನೇರವಾಗಿದೆ. ಹಾಗಾಗಿ ಇಲ್ಲಿ ಮೋಡಗಳ ಸಾಲೊಂದು ಅಡ್ಡಕ್ಕೆ ನಿಂತಿರುವ ದೃಶ್ಯ ಪ್ರಕೃತಿ ಪ್ರಿಯರಿಗೆ ಯಾವಾಗಲೂ ಲಭ್ಯ.


ವೆಂಕಟಗಿರಿಯನ್ನು ಏರುತ್ತಾ ಹೋದಂತೆ ಕೆಳಗಡೆ ಒಂದು ಬದಿಯಲ್ಲಿ ಶಿರಾಡಿ ಘಟ್ಟದ ರಸ್ತೆ ಹಾಗೂ ಕೆಂಪು ಹೊಳೆಯ ಹರಿವಿನ ಪಾತ್ರ ಮತ್ತು ಇನ್ನೊಂದು ಬದಿಯಲ್ಲಿ ದಟ್ಟ ಕಾಡಿನ ನಡುವೆ ಅಲ್ಲಲ್ಲಿ ದರ್ಶನ ನೀಡುವ ರೈಲು ಹಳಿ. ದೂರದಲ್ಲಿ ಅಮೇದಿಕಲ್ಲು ಮತ್ತು ಎತ್ತಿನಭುಜ ಶಿಖರಗಳ ನೋಟ. ಕೆಳಗಡೆ ದೂರದವರೆಗೂ ಕೆಂಪುಹೊಳೆಯ ಹರಿವು ಕಾಣಿಸುತ್ತಿತ್ತು. ಈ ಎಲ್ಲಾ ದೃಶ್ಯಗಳನ್ನು ಆಸ್ವಾದಿಸುತ್ತಾ ವೆಂಕಟಗಿರಿ ಶಿಖರದ ಸನಿಹಕ್ಕೆ ಬಂದಿದ್ದೆವು. ಇನ್ನೇನು ಶಿಖರ ತುದಿ ಸಮೀಪದಲ್ಲೇ ಇದೆ ಎಂದೆನಿಸುತ್ತಿದ್ದರೂ, ಆದಷ್ಟು ದೂರವಿದ್ದಂತೆ ಮಾಡುತ್ತಿತ್ತು ಈ ಕೊನೆಯ ಏರುಹಾದಿ. ಅಲ್ಲಿವರೆಗೂ ನಿರಾಯಾಸವಾಗಿ ಬಂದಿದ್ದ ನಮಗೆ ಈ ಕೊನೆಯ ಏರುಹಾದಿ ಬಹಳ ಬೆವರನ್ನಿಳಿಸಿತು.

ಕಾಡಿನ ದಾರಿಯಂಚಿನಲ್ಲಿ ಸಿಕ್ಕಿದ್ದ ನೆಲ್ಲಿಕಾಯಿ ಮರವನ್ನು ಸಂಪೂರ್ಣವಾಗಿ ಬೋಳಿಸಿದ್ದರು ನಮ್ಮವರು. ಈ ನೆಲ್ಲಿಕಾಯಿಗಳು ಈ ಕೊನೆಯ ಏರುಹಾದಿಯಲ್ಲಿ ನನಗಂತೂ ಬಹಳ ಪ್ರಯೋಜನಕಾರಿಯಾದವು. ನೆಲ್ಲಿಯನ್ನು ತಿನ್ನುತ್ತಾ, ನೀರು ಕುಡಿದು ಸವಿಯನ್ನು ಅನುಭವಿಸುತ್ತಾ, ಫ್ರೆಶ್ ಆಗುತ್ತಾ ನಿಧಾನವಾಗಿ ಶಿಖರದ ತುದಿಯನ್ನು ಸಮೀಪಿಸತೊಡಗಿದೆ. ಕಾಡಿನ ಅಂಚನ್ನು ದಾಟಿದ ಸಮಯದಿಂದಲೇ ಸುಂದರವಾಗಿ ಕಾಣುತ್ತಿದ್ದ ವೆಂಕಟಗಿರಿಯ ತುದಿಯನ್ನು ತಲುಪಿದಾಗ ಸಮಯ ೧.೩೦ ಆಗಿತ್ತು.


ವೆಂಕಟಗಿರಿಯ ತುದಿಯಲ್ಲಿ ವಿಶಾಲ ಜಾಗವಿದೆ. ಅಗಲ ಕಡಿಮೆಯಾದರೂ ಉದ್ದಕ್ಕೆ ಬಹಳಷ್ಟು ಮುಂದಿನವರೆಗೆ ಸ್ಥಳವಿದೆ. ಈಗ ನಾವು ತಲುಪಿದ್ದು ಶಿಖರದ ಒಂದು ತುದಿಗೆ. ಮತ್ತೊಂದು ತುದಿಯಿಂದ ಕಾಣುವ ದೃಶ್ಯವನ್ನು ನೋಡೋಣವೆಂದು ಅತ್ತ ತೆರಳಿದೆ. ಕಣ್ಣಿಗೆ ಕಾಣುವಷ್ಟು ದೂರದಿಂದ ಕಣಿವೆಯ ನಡುವಿನಿಂದ ಬಳುಕುತ್ತಾ ಹರಿದು ಬರುವ ಕೆಂಪುಹೊಳೆಯ ದೃಶ್ಯ ವೈಭವ ಈ ಚಾರಣವನ್ನು ಸಾರ್ಥಕ ಮಾಡಿತ್ತು.

ಇದೇ ಚಾರಣದ ಇನ್ನೊಂದು ಲೇಖನವನ್ನು ಇಲ್ಲಿ ಓದಬಹುದು.

8 ಕಾಮೆಂಟ್‌ಗಳು:

Aravind GJ ಹೇಳಿದರು...

ನಿಮಗೆ ಹೇಗೆ ಹೊಸ ಜಾಗಗಳು ಗೊತ್ತಾಗುತ್ತದೆಯೋ ಎಂಬ ಕುತೂಹಲ ನನಗೆ!!!!

ಚಿತ್ರಗಳು ಚೆನ್ನಾಗಿ ಮೂಡಿಬಂದಿದೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,

ಹೊಸ ಜಾಗಗಳು ಗೊತ್ತಗುವುದೇ?.. ಎಲ್ಲಾ ಮಂಗಳೂರು ಯೂತ್ ಹಾಸ್ಟೆಲ್ ಆರ್ಗನೈಸಿಂಗ್ ಸೆಕ್ರೆಟರಿ ದಿನೇಶ್ ಹೊಳ್ಳರ ಕೃಪೆ.

arathi ಹೇಳಿದರು...

very nice trek and good peak.thanks to holla sir.

....Here I Am ಹೇಳಿದರು...

Dear Rajesh,

I think you are covered almost all tourist spots of karnataka with specialisation goes into falls. Hats-off for your trekking.

While going through one blog i came across description of 'Kunchikal Falls', which is the highest waterfalls in India and second highest waterfalls in Asia.

Blog URL is http://baala-doni.blogspot.com/

If possible visit this spot also and put a photo of falls in http://en.wikipedia.org/wiki/Kunchikal_Falls.

This will give a credit of introducing a rarely known falls to the world through you, like many others, you already did.

Thanks & Regards

Vishwanath K

ರಾಜೇಶ್ ನಾಯ್ಕ ಹೇಳಿದರು...

ಆರತಿ,
ಟಿಪ್ಪಣಿಗಾಗಿ ಧನ್ಯವಾದಗಳು

ವಿಶ್ವನಾಥ್,
ಕುಂಚಿಕಲ್ ಜಲಧಾರೆ ೩-೪ ಹಂತಗಳಲ್ಲಿದ್ದು, ಸುಧಾದಲ್ಲಿ ಬಂದಿದ್ದ ಲೇಖನದ ಬಳಿಕ ಈ ಜಲಧಾರೆ ನೋಡೋಣವೆಂದು ೨ ಬಾರಿ ಮಾಸ್ತಿಕಟ್ಟೆಗೆ ತೆರಳಿ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳಲ್ಲಿ ಕಾಡಿ ಬೇಡಿದರೂ ಅನುಮತಿ ಸಿಗಲಿಲ್ಲ. ವರಾಹಿ ಯೋಜನೆಯ ಬಳಿಯಿಂದ ಜಲಧಾರೆಯ ಕೊನೆಯ ಹಂತ ಕಾಣುತ್ತದೆ ಎಂದು ಆ ಲೇಖನದಲ್ಲಿ ತಿಳಿಸಲಾಗಿತ್ತು. ಅಲ್ಲಿಗೆ ತೆರಳಿದರೆ, ನದಿಯಾಚೆ ದೂರದಲ್ಲಿ ಬೆಟ್ಟದ ತುದಿಯಿಂದ ಧುಮುಕುತ್ತಿದ್ದ ಜಲಧಾರೆ! ಆದರೆ ಸ್ವಲ್ಪವೇ ಎತ್ತರದಿಂದ ಧುಮುಕಿ ನಂತರ ಕಾಡಿನ ಮರೆಯಲ್ಲಿ ಬೆಟ್ಟದ ಮೇಲ್ಮೈಯನ್ನು ಸವರಿ ಕೆಳಗೆ ಹರಿಯುತ್ತಿತ್ತು.

ಆ ಲೇಖನ ಬರೆದವರ ಪ್ರಕಾರ ಇದೊಂದು ’ಸಣ್ಣದಾದರೂ ಭೇಟಿ ನೀಡಲು ಯೋಗ್ಯವಾದ ಜಲಧಾರೆ’. ಗೂಗಲ್-ನಲ್ಲಿ ಸರ್ಚ್ ಮಾಡಿದಾಗ ೧೪೦೦ ಅಡಿಗಿಂತಲೂ ಎತ್ತರವಿರುವ ಜಲಧಾರೆ ಎಂಬ ಸರ್ಚ್ ರಿಸಲ್ಟ್ ಬರುತ್ತದೆ. ಆದರೆ ಈ ಜಲಧಾರೆಯ ೩ನೇ ಹಂತವನ್ನು ಕಂಡ ಬಳಿಕ ಈ ಮಾತನ್ನು ನಂಬುವುದು ನನಗಂತೂ ಸಾಧ್ಯವಿಲ್ಲ.

Annapoorna Daithota ಹೇಳಿದರು...

Rajesh,
Punyavantharu neevu. Nimma jothe ondaadroo trek madlebeku anno aase dinadinda dinakke hecchagtha ide :)
Srikanthangoo helde monne heegantha :)

ರಾಜೇಶ್ ನಾಯ್ಕ ಹೇಳಿದರು...

ಅನ್ನಪೂರ್ಣ,
ಧಾರಾಳವಾಗಿ. ಯಾವಾಗ ಬೇಕಾದರೂ.

....Here I Am ಹೇಳಿದರು...

Dear Rajesh,

Thanks for reply. I think sometimes ‘Government’ puts a lot of problem for enthusiasts like you.

Anyhow keep blogging about your 'Discovery of Karnataka'.


Thanks and Regards,

Vishwanath K